ಬ್ರಿಟನ್ ರಾಜಕೀಯದ ಆಳವಾದ ಬಿಕ್ಕಟ್ಟನ್ನು ತೆರೆದಿಟ್ಟ ಕೀರ್ ಸ್ಟಾರ್ಮರ್ ರಾಜೀನಾಮೆ
ಕೀರ್ ಸ್ಟಾರ್ಮರ್ ಅವರ ದಿಢೀರ್ ರಾಜೀನಾಮೆಯು ಬ್ರಿಟನ್ ರಾಜಕೀಯದ ಆಳವಾದ ಬಿಕ್ಕಟ್ಟನ್ನು ಮತ್ತು ಲೇಬರ್ ಪಕ್ಷದ ಆಂತರಿಕ ಕಚ್ಚಾಟವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ.
ಬ್ರಿಟನ್ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಮತ್ತು ಲೇಬರ್ ಪಕ್ಷವು ಈ ಬಿಕ್ಕಟ್ಟಿನಿಂದ ಹೇಗೆ ಹೊರಬರಲಿದೆ ಎಂಬ ಗಂಭೀರ ಪ್ರಶ್ನೆಗಳು ಈಗ ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ವಿದ್ಯಮಾನವು ಕೇವಲ ವ್ಯಕ್ತಿಗತ ರಾಜೀನಾಮೆಯಾಗಿರದೆ ಬ್ರಿಟನ್‌ನ ಆಡಳಿತ ವ್ಯವಸ್ಥೆ ಮತ್ತು ನೀತಿಗಳ ಮೇಲಿನ ಸಾರ್ವಜನಿಕರ ಅಪನಂಬಿಕೆಯ ಸಂಕೇತವಾಗಿದೆ.
ಕೀರ್ ಸ್ಟಾರ್ಮರ್ ರಾಜೀನಾಮೆ ಬಳಿಕ ಅವರ ಆಡಳಿತಾವಧಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕಾರ್ಬಿನ್ ಮತ್ತು ಸಂಸದರಾದ ಝರಾ ಸುಲ್ತಾನಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೀರ್ ಸ್ಟಾರ್ಮರ್ ಅವರ ನಾಯಕತ್ವ ಮತ್ತು ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಜೆರೆಮಿ ಕಾರ್ಬಿನ್ ಅವರು, ‘‘ಕೀರ್ ಸ್ಟಾರ್ಮರ್ ಅವರು ಈ ದೇಶದಲ್ಲಿ ಮಕ್ಕಳ ಬಡತನ, ವಸತಿ ರಹಿತ ಸ್ಥಿತಿ ಮತ್ತು ಅಸಮಾನತೆಯ ವಿಕೃತ ಮಟ್ಟವನ್ನು ಕೊನೆಗೊಳಿಸಬಹುದಿತ್ತು. ಬದಲಿಗೆ, ಅವರು ಅಗತ್ಯವಿರುವವರನ್ನು ಕೈಬಿಟ್ಟರು, ನಮ್ಮ ನಾಗರಿಕ ಸ್ವಾತಂತ್ರ್ಯವನ್ನು ಧ್ವಂಸಗೊಳಿಸಿದರು ಮತ್ತು ಗಾಝಾದಲ್ಲಿ ನರಮೇಧಕ್ಕೆ ಅನುಕೂಲ ಮಾಡಿಕೊಟ್ಟರು’’ ಎಂದು ಕಟುವಾಗಿ ಟೀಕಿಸಿದ್ದಾರೆ.
ಅಷ್ಟೇ ಅಲ್ಲದೆ, ಪ್ರಧಾನಿ ಸ್ಟಾರ್ಮರ್ ಅವರು ನೈತಿಕ ಮತ್ತು ರಾಜಕೀಯ ದಿವಾಳಿತನದ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಕಾರ್ಬಿನ್ ದೂರಿದ್ದಾರೆ.
ಇದೇ ಧಾಟಿಯಲ್ಲಿ ವಾಗ್ದಾಳಿ ನಡೆಸಿರುವ ಝರಾ ಸುಲ್ತಾನಾ ಅವರು, ‘‘ಲೇಬರ್ ಪಕ್ಷದ ಉನ್ನತ ಸ್ಥಾನಕ್ಕೆ ಸುಳ್ಳು ಹೇಳುತ್ತಾ ಬಂದ ಮತ್ತು ನಂತರ ಆ ಅಧಿಕಾರವನ್ನು ಬಳಸಿಕೊಂಡು ಮಕ್ಕಳನ್ನು ಬಡತನದಲ್ಲಿಟ್ಟ, ವಿಕಲಾಂಗ ಜನರ ಮೇಲೆ ಆಕ್ರಮಣ ಮಾಡಿದ, ನಿರಾಶ್ರಿತರನ್ನು ಬಲಿಪಶು ಮಾಡಿದ ಮತ್ತು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಂಡ ವ್ಯಕ್ತಿ ಎಂದು ಇತಿಹಾಸವು ಕೀರ್ ಸ್ಟಾರ್ಮರ್ ಅವರನ್ನು ನಿರ್ಣಯಿಸುತ್ತದೆ’’ ಎಂದು ಬರೆದಿದ್ದಾರೆ.
ಅಲ್ಲದೆ, ‘‘ಅಪರಾಧ ಸಾಬೀತಾದ ಶಿಶುಕಾಮಿಯ ಆಪ್ತ ಸ್ನೇಹಿತನಿಗೆ ಉನ್ನತ ರಾಜತಾಂತ್ರಿಕ ಹುದ್ದೆ ನೀಡಿದ ಮತ್ತು ಗಾಝಾಕ್ಕೆ ನೀರು-ವಿದ್ಯುತ್ ಕಡಿತಗೊಳಿಸಲು ಇಸ್ರೇಲ್‌ಗೆ ಹಕ್ಕಿದೆ ಎಂದು ಬೆಂಬಲಿಸಿದ ಸ್ಟಾರ್ಮರ್ ಅವರ ನಿರ್ಗಮನ ಒಳ್ಳೆಯದೇ ಆಯಿತು’’ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 2024ರ ಜುಲೈನಲ್ಲಿ ಬ್ರಿಟನ್ ಮಹಾಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿತ್ತು. ಸತತವಾಗಿ ಅಧಿಕಾರದಿಂದ ಹೊರಗುಳಿದಿದ್ದ ಪಕ್ಷಕ್ಕೆ ಸ್ಟಾರ್ಮರ್ ಹೊಸ ಚೈತನ್ಯ ತುಂಬಿದ್ದರು.
2019ರ ಚುನಾವಣೆಯಲ್ಲಿ ಕೇವಲ 202 ಸ್ಥಾನಗಳನ್ನು ಹೊಂದಿದ್ದ ಪಕ್ಷವನ್ನು ನಾಲ್ಕು ವರ್ಷಗಳ ಕಾಲ ಮುನ್ನಡೆಸಿ, ಅಭ್ಯರ್ಥಿಗಳನ್ನು ಬದಲಾಯಿಸಿ, ಹೊಸ ಕಾರ್ಯತಂತ್ರ ರೂಪಿಸಿ ಅಧಿಕಾರಕ್ಕೆ ತಂದಿದ್ದರು.
ಆದರೆ ಅಧಿಕಾರ ವಹಿಸಿಕೊಂಡ ಮೊದಲ ತಿಂಗಳಿನಲ್ಲೇ ಅಂದರೆ 2024ರ ಜುಲೈನಲ್ಲಿ ಹೊಸ ಸರಕಾರಕ್ಕೆ ಮೊದಲ ಆಂತರಿಕ ಸವಾಲು ಎದುರಾಯಿತು. 2017ರಲ್ಲಿ ಹಿಂದಿನ ಕನ್ಸರ್ವೇಟಿವ್ ಸರಕಾರವು ಜಾರಿಗೆ ತಂದಿದ್ದ ‘ಟು ಚೈಲ್ಡ್ ಬೆನಿಫಿಟ್ ಕ್ಯಾಪ್’ ಎಂಬ ನಿಯಮವನ್ನು ರದ್ದುಗೊಳಿಸುವ ಪ್ರಸ್ತಾವ ಸಂಸತ್ತಿನಲ್ಲಿ ಬಂದಾಗ ಬಿಕ್ಕಟ್ಟು ತೀವ್ರವಾಯಿತು. ಈ ನಿಯಮದ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಬಡ ಕುಟುಂಬಗಳಿಗೆ ಸರಕಾರದ ವತಿಯಿಂದ ಹೆಚ್ಚುವರಿ ಆರ್ಥಿಕ ನೆರವು ಅಥವಾ ಟ್ಯಾಕ್ಸ್ ಕ್ರೆಡಿಟ್ ಸಿಗುತ್ತಿರಲಿಲ್ಲ.
ಲೇಬರ್ ಪಕ್ಷದ ಅನೇಕ ಸಂಸದರು ಇದನ್ನು ಬಡವರ ವಿರೋಧಿ ನಿಯಮ ಎಂದು ಭಾವಿಸಿ, ತಮ್ಮದೇ ಸರಕಾರ ಇದನ್ನು ರದ್ದುಗೊಳಿಸಲು ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ ಪ್ರಧಾನಿ ಸ್ಟಾರ್ಮರ್ ಸರಕಾರದ ಬಳಿ ಸದ್ಯಕ್ಕೆ ಹಣದ ಕೊರತೆಯಿದೆ ಎಂಬ ಕಾರಣ ನೀಡಿ, ಈ ನಿಯಮ ರದ್ದತಿಯ ವಿರುದ್ಧ ಮತ ಚಲಾಯಿಸಲು ತಮ್ಮ ಸಂಸದರಿಗೆ ಆದೇಶ ನೀಡಿದರು.
ಸರಕಾರದ ಅಧಿಕೃತ ಆದೇಶವನ್ನು ಉಲ್ಲಂಘಿಸಿ ಈ ಪ್ರಸ್ತಾವದ ಪರವಾಗಿ ಮತ ಹಾಕಿದ ಪಕ್ಷದ ಏಳು ಸಂಸದರನ್ನು ಸ್ಟಾರ್ಮರ್ ತಕ್ಷಣವೇ ಪಕ್ಷದಿಂದ ಅಮಾನತುಗೊಳಿಸಿದರು. ಈ ನಿರ್ಧಾರವನ್ನು ಸ್ಟಾರ್ಮರ್ ಅವರ ಅಪಕ್ವ ರಾಜಕೀಯ ನಡೆ ಎಂದು ಬ್ರಿಟಿಷ್ ಮಾಧ್ಯಮಗಳು ಟೀಕಿಸಿದವು ಮತ್ತು ಇದು ಪಕ್ಷದ ಒಳಗಿನ ತೀವ್ರ ಅಸಮಾಧಾನಕ್ಕೆ ಮೊದಲ ನಾಂದಿಯಾಯಿತು.
ಇದೇ ಅವಧಿಯಲ್ಲಿ ಅಂದರೆ 2024ರ ಜುಲೈ ಕೊನೆಯ ವಾರದಲ್ಲಿ ಸೌತ್‌ಪೋರ್ಟ್ ನಗರದಲ್ಲಿ ಸಂಭವಿಸಿದ ಭೀಕರ ಹಿಂಸಾಚಾರ ಸ್ಟಾರ್ಮರ್ ಸರಕಾರಕ್ಕೆ ರಾಜಕೀಯವಾಗಿ ದೊಡ್ಡ ಹೊಡೆತ ನೀಡಿತು. ಅಲ್ಲಿ ಮೂವರು ಮಕ್ಕಳ ಕೊಲೆಯಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ಕೊಲೆಗಾರನು ಹೊರದೇಶದಿಂದ ಬಂದ ವಲಸಿಗ ಎಂಬ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡಿತು.
ಇದರಿಂದಾಗಿ ಬ್ರಿಟನ್‌ನ ಹಲವು ಪ್ರಮುಖ ನಗರಗಳಲ್ಲಿ ನಿರಾಶ್ರಿತರ ವಸತಿಗೃಹಗಳ ಮೇಲೆ ಮತ್ತು ಪೊಲೀಸರ ಮೇಲೆ ಬಲಪಂಥೀಯ ಗುಂಪುಗಳಿಂದ ಭೀಕರ ದಾಳಿಗಳು ನಡೆದವು.
ಆನಂತರ ಪೊಲೀಸರು ತನಿಖೆ ನಡೆಸಿ ಆರೋಪಿ ಬ್ರಿಟನ್‌ನಲ್ಲೇ ಜನಿಸಿದ ಪ್ರಜೆಯಾಗಿದ್ದಾನೆ ಎಂದು ಸ್ಪಷ್ಟಪಡಿಸಿದರಾದರೂ, ಅಷ್ಟರಲ್ಲಾಗಲೇ ದೇಶಾದ್ಯಂತ ಸುಳ್ಳು ನಿರೂಪಣೆ ಹರಡಿತ್ತು.
ಬಲಪಂಥೀಯ ಗುಂಪುಗಳು ಮತ್ತು ನೈಜಲ್ ಫರಾಜ್ ನೇತೃತ್ವದ ‘ರಿಫಾರ್ಮ್ ಯುಕೆ’ ಪಕ್ಷವು ಸ್ಟಾರ್ಮರ್ ಸರಕಾರದ ವಿರುದ್ಧ ವಲಸೆ ನೀತಿಯನ್ನು ಮುಂದಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದವು.
ಸರಕಾರವು ಹಿಂಸಾಚಾರವನ್ನು ಹತ್ತಿಕ್ಕಲು ನೂರಾರು ಜನರನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡಿತಾದರೂ, ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ವಲಸೆಯ ಬಗೆಗಿನ ಕಳಕಳಿಯನ್ನು ಮತ್ತು ಆತಂಕವನ್ನು ಸರಕಾರವು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬ ಆರೋಪ ಕೇಳಿಬಂತು.
ವಲಸೆ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಸ್ಟಾರ್ಮರ್ ಅವರ ಜನಪ್ರಿಯತೆ ಸಾರ್ವಜನಿಕರಲ್ಲಿ ಮತ್ತು ಲೇಬರ್ ಪಕ್ಷದ ಒಳಗೂ ವೇಗವಾಗಿ ಕುಸಿಯತೊಡಗಿತು.
2024ರ ಸೆಪ್ಟಂಬರ್ ತಿಂಗಳಿನಲ್ಲಿ ಸ್ಟಾರ್ಮರ್ ಮತ್ತು ಅವರ ಕೆಲವು ಮಂತ್ರಿಗಳು ಉದ್ಯಮಿಗಳಿಂದ ಅತ್ಯಂತ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬ ಹೊಸ ಹಗರಣ ಮುನ್ನೆಲೆಗೆ ಬಂದಿತು. ಇದರಲ್ಲಿ ದುಬಾರಿ ಉಡುಪುಗಳು, ಡಿಸೈನರ್ ಕನ್ನಡಕಗಳು ಮತ್ತು ಫುಟ್ಬಾಲ್ ಪಂದ್ಯಗಳ ವಿಐಪಿ ಟಿಕೆಟ್‌ಗಳನ್ನು ಪಕ್ಷದ ದೊಡ್ಡ ದೇಣಿಗೆದಾರರಾದ ವಹೀದ್ ಅಲಿ ಎಂಬವರಿಂದ ಪಡೆದಿರುವುದು ಬಹಿರಂಗವಾಯಿತು.
ಸ್ಟಾರ್ಮರ್ ಅವರ ಪತ್ನಿಗೂ ಬಹಳ ದುಬಾರಿ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು. ಬ್ರಿಟನ್ ಕಾನೂನಿನ ಪ್ರಕಾರ ಇದು ಅಪರಾಧವಲ್ಲದಿದ್ದರೂ, ಸಾಮಾನ್ಯ ಜನರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇಂತಹ ಐಷಾರಾಮಿ ಉಡುಗೊರೆಗಳನ್ನು ಸ್ವೀಕರಿಸಿದ್ದು ಪ್ರಧಾನಿಯ ನೈತಿಕತೆಗೆ ದೊಡ್ಡ ಧಕ್ಕೆ ತಂದಿತು.
ಇದರ ಬೆನ್ನಲ್ಲೇ ಅಕ್ಟೋಬರ್ ತಿಂಗಳಿನಲ್ಲಿ ಮಂಡಿಸಲಾದ ಸರಕಾರದ ಬಜೆಟ್‌ನಲ್ಲಿ ಜನರಿಗೆ ನೀಡಿದ್ದ ತೆರಿಗೆ ಕಡಿತದ ಭರವಸೆಯನ್ನು ಉಲ್ಲಂಘಿಸಿ 40 ಬಿಲಿಯನ್ ಪೌಂಡ್ ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈ ಬಜೆಟ್‌ನಲ್ಲಿ ಕೃಷಿ ಭೂಮಿಯ ಉತ್ತರಾಧಿಕಾರ ತೆರಿಗೆಯಲ್ಲಿ ತಂದ ಬದಲಾವಣೆಗಳನ್ನು ವಿರೋಧಿಸಿ ಬ್ರಿಟನ್‌ನ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಲಂಡನ್ ನಗರಕ್ಕೆ ಬಂದು ಬೃಹತ್ ಪ್ರತಿಭಟನೆ ನಡೆಸಿದರು.
ಈ ಎಲ್ಲಾ ಆರ್ಥಿಕ ನಿರ್ಧಾರಗಳಿಗೆ ದೇಶದ ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಕೆಟ್ಟದಾಗಿದೆ ಎಂದು ಸಮರ್ಥಿಸಿಕೊಳ್ಳಲು ಸ್ಟಾರ್ಮರ್ ಪ್ರಯತ್ನಿಸಿದರಾದರೂ ಜನಸಾಮಾನ್ಯರ ಆಕ್ರೋಶ ತಣ್ಣಗಾಗಲಿಲ್ಲ.
ಆನಂತರ 2025ರಲ್ಲಿ ಸರಕಾರವು ತಾನು ಈ ಹಿಂದೆ ರಕ್ಷಿಸಲು ಹಠ ಹಿಡಿದಿದ್ದ ‘ಟು ಚೈಲ್ಡ್ ಬೆನಿಫಿಟ್ ಕ್ಯಾಪ್’ ನಿಯಮವನ್ನು ತಾನೇ ರದ್ದುಗೊಳಿಸುವ ಮೂಲಕ ಮತ್ತೊಂದು ಯು-ಟರ್ನ್ ತೆಗೆದುಕೊಂಡಿತು. ಇದು ಸರಕಾರದ ಧೋರಣೆಗಳಲ್ಲಿನ ಅಸ್ಥಿರತೆಯನ್ನು ಸಾಬೀತುಪಡಿಸಿತು ಮತ್ತು ವಿರೋಧಿಗಳಿಗೆ ರಾಜಕೀಯ ಅಸ್ತ್ರವಾಯಿತು.
2026ರ ಆರಂಭದಲ್ಲಿ ಸ್ಟಾರ್ಮರ್ ಸರಕಾರಕ್ಕೆ ಅತಿ ದೊಡ್ಡ ಹೊಡೆತ ನೀಡಿದ್ದು ಎಪ್‌ಸ್ಟೀನ್ ಫೈಲ್ಸ್ ವಿವಾದ.
ಸ್ಟಾರ್ಮರ್ ಅವರು ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯನ್ನಾಗಿ ನೇಮಿಸಿದ್ದ ಲೇಬರ್ ಪಕ್ಷದ ಹಿರಿಯ ನಾಯಕ ಪೀಟರ್ ಮೆಂಡಲ್ಸನ್ ಅವರ ಹೆಸರು ಜೆಫ್ರಿ ಎಪ್‌ಸ್ಟೀನ್ ಅವರ ವಿವಾದಾತ್ಮಕ ಕಡತಗಳಲ್ಲಿ ಕಾಣಿಸಿಕೊಂಡಿತು.
ಮೆಂಡಲ್ಸನ್ ಅವರ ಈ ಸಂಬಂಧಗಳ ಬಗ್ಗೆ ಸ್ಟಾರ್ಮರ್ ಅವರಿಗೆ ಮೊದಲೇ ಮಾಹಿತಿ ಇತ್ತು ಮತ್ತು ಅವರ ನೇಮಕಾತಿಗೂ ಮುನ್ನ ನಡೆದ ಅಧಿಕೃತ ತನಿಖೆಯಲ್ಲಿ ಹಲವು ಆಕ್ಷೇಪಣೆಗಳು ವ್ಯಕ್ತವಾಗಿದ್ದರೂ ಸಹ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಬಹಿರಂಗವಾಯಿತು.
ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾದ ಬೆನ್ನಲ್ಲೇ ಸ್ಟಾರ್ಮರ್ ಅವರ ಮುಖ್ಯ ಕಾರ್ಯತಂತ್ರಜ್ಞ ಮತ್ತು ಲೇಬರ್ ಪಕ್ಷದ 2024ರ ಚುನಾವಣಾ ವಿಜಯದ ಪ್ರಮುಖ ರೂವಾರಿ ಮಾರ್ಗನ್ ಮೆಕ್ಸ್ವಿನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈ ರಾಜೀನಾಮೆಯು ಲೇಬರ್ ಪಕ್ಷದ ಒಳಗಿನ ಗಂಭೀರ ಬಿಕ್ಕಟ್ಟನ್ನು ಸ್ಪಷ್ಟಪಡಿಸಿತು ಮತ್ತು ಸ್ಟಾರ್ಮರ್ ಅವರ ನಾಯಕತ್ವಕ್ಕೆ ಪಕ್ಷದ ಒಳಗಡೆಯೇ ಕೌಂಟ್ ಡೌನ್ ಆರಂಭವಾಗುವಂತೆ ಮಾಡಿತು. ಪಕ್ಷದ ಒಳಗಿನ ಸಂಸದರು ನಾಯಕತ್ವ ಬದಲಾವಣೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದರು.
ಇದರ ನೇರ ಪ್ರಭಾವ 2026ರ ಮೇ ತಿಂಗಳಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂದಿತು.
ಈ ಚುನಾವಣೆಯಲ್ಲಿ ಲೇಬರ್ ಪಕ್ಷವು ಸುಮಾರು ಹದಿನೈದು ಸಾವಿರ ಸ್ಥಾನಗಳನ್ನು ಮತ್ತು 38 ಕೌನ್ಸಿಲ್ ಸ್ಥಾನಗಳನ್ನು ಕಳೆದುಕೊಂಡು ಅತ್ಯಂತ ಹೀನಾಯ ಸೋಲನ್ನು ಅನುಭವಿಸಿತು.
ವೇಲ್ಸ್ ಪ್ರಾಂತದಲ್ಲೂ ಪಕ್ಷದ ಪ್ರದರ್ಶನ ತೀರಾ ಕಳಪೆಯಾಗಿತ್ತು ಮತ್ತು ಈ ಎಲ್ಲಾ ಸ್ಥಾನಗಳನ್ನು ನೈಜಲ್ ಫರಾಜ್ ಅವರ ರಿಫಾರ್ಮ್ ಯುಕೆ ಪಕ್ಷವು ವಶಪಡಿಸಿಕೊಂಡಿತು.
ಈ ರಾಜಕೀಯ ಹಿನ್ನಡೆಯಿಂದಾಗಿ ಲೇಬರ್ ಪಕ್ಷದ ಸಂಸದರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಸಂಪೂರ್ಣವಾಗಿ ಸೋಲಬಹುದು ಎಂಬ ಭೀತಿ ಆವರಿಸಿತು.
ಇದರ ಬೆನ್ನಲ್ಲೇ ಮೇ 14ರಂದು ಆರೋಗ್ಯ ಮಂತ್ರಿ ವೆಸ್ಟ್ ಸ್ಟ್ರೀಟಿಂಗ್ ರಾಜೀನಾಮೆ ನೀಡಿದರು.
ಜೂನ್ ತಿಂಗಳಿನಲ್ಲಿ ರಕ್ಷಣಾ ಮಂತ್ರಿ ಜಾನ್ ಹೀಲಿ ಮತ್ತು ಸಶಸ್ತ್ರ ಪಡೆಗಳ ಮಂತ್ರಿ ಲ್ಯೂಕ್ ಪೋಲಾರ್ಡ್ ಕೂಡ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಕ್ಷಣಾ ಬಜೆಟ್ ಅನ್ನು ಸ್ಟಾರ್ಮರ್ ಕಡಿತಗೊಳಿಸಿದ್ದನ್ನು ವಿರೋಧಿಸಿ ಈ ರಕ್ಷಣಾ ಮಂತ್ರಿಗಳು ಹೊರನಡೆದಿದ್ದರು.
ನೇಟೊ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ರಶ್ಯದೊಂದಿಗೆ ಯುದ್ಧ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದರೂ ರಕ್ಷಣಾ ವೆಚ್ಚ ತಗ್ಗಿಸಿದ್ದು ಪಕ್ಷದ ಒಳಗೆ ದೇಶದ ಭದ್ರತೆಯ ಕುರಿತು ತೀವ್ರ ಆತಂಕವನ್ನು ಸೃಷ್ಟಿಸಿತು.
ಈ ಎಲ್ಲಾ ಬಿಕ್ಕಟ್ಟುಗಳ ನಡುವೆ ಲೇಬರ್ ಪಕ್ಷದಲ್ಲಿ ಸ್ಟಾರ್ಮರ್ ಬದಲಿಗೆ ಪರ್ಯಾಯ ನಾಯಕನ ಹುಡುಕಾಟ ತೀವ್ರಗೊಂಡಿತು.
ಗ್ರೇಟರ್ ಮ್ಯಾಂಚೆಸ್ಟರ್‌ನ ಮೇಯರ್ ಆಗಿದ್ದ ಆಂಡಿ ಬರ್ನ್ ಹ್ಯಾಮ್ ಅವರನ್ನು ಸಂಸತ್ತಿಗೆ ತರಲು ಗಾರ್ಟನ್ ಮತ್ತು ಡೆಂಟನ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಯಿತು.
ಆರಂಭದಲ್ಲಿ ಸ್ಟಾರ್ಮರ್ ಅವರ ಬಣ ಬರ್ನ್‌ಹ್ಯಾಮ್ ಅವರ ಸ್ಪರ್ಧೆಯನ್ನು ತಡೆಯಲು ಪ್ರಯತ್ನಿಸಿತ್ತಾದರೂ, ಹೆಚ್ಚಿದ ಒತ್ತಡದಿಂದಾಗಿ ಅವರಿಗೆ ಟಿಕೆಟ್ ನೀಡಬೇಕಾಯಿತು.
ಜೂನ್ 19ರಂದು ಪ್ರಕಟವಾದ ಫಲಿತಾಂಶದಲ್ಲಿ ಬರ್ನ್‌ಹ್ಯಾಮ್ ಅವರು ರಿಫಾರ್ಮ್ ಯುಕೆ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿದರು. ಈ ಜಯವು ಸ್ಟಾರ್ಮರ್ ಅವರಿಗೆ ಅಧಿಕಾರದಿಂದ ನಿರ್ಗಮಿಸಲು ಅಂತಿಮ ಮುದ್ರೆ ಒತ್ತಿದಂತಾಯಿತು.
ಜೂನ್ 21ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಟಾರ್ಮರ್ ರಾಜೀನಾಮೆ ನೀಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು. ಆದರೆ ವಾಶಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಟ್ರಂಪ್ ಅವರಿಗೆ ಯಾವುದೇ ರಹಸ್ಯ ಮಾಹಿತಿ ಇರಲಿಲ್ಲ, ಬದಲಿಗೆ ಬ್ರಿಟನ್ ರಾಜಕೀಯದ ಬಹಿರಂಗ ಬಿಕ್ಕಟ್ಟನ್ನು ನೋಡಿ ಅವರು ಕೇವಲ ಊಹೆ ಮಾಡಿದ್ದರು ಅಷ್ಟೇ.
ಕೀರ್ ಸ್ಟಾರ್ಮರ್ ಜಿ-7 ಶೃಂಗಸಭೆಯಲ್ಲಿ ಟ್ರಂಪ್ ಅವರೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸಿರಲಿಲ್ಲ ಮತ್ತು ಟ್ರಂಪ್ ಬಣದ ಎಲಾನ್ ಮಸ್ಕ್ ಸೇರಿದಂತೆ ಹಲವರು ಸ್ಟಾರ್ಮರ್ ಅವರ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸುತ್ತಿದ್ದರು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ವಾದಿಸುತ್ತಿದ್ದರು.
ಬ್ರಿಟನ್ ರಾಜಕೀಯದ ಪ್ರಸಕ್ತ ಸ್ಥಿತಿಯನ್ನು ವಿಶ್ಲೇಷಿಸಿದರೆ, ಕೀರ್ ಸ್ಟಾರ್ಮರ್ ಅವರ ಪತನಕ್ಕೆ ಕೇವಲ ಒಂದೇ ಒಂದು ಕಾರಣವಲ್ಲ, ಬದಲಿಗೆ ಆರ್ಥಿಕ ನೀತಿಗಳ ವೈಫಲ್ಯ, ತೆರಿಗೆ ಹೆಚ್ಚಳ, ವಲಸೆ ಸಮಸ್ಯೆಯ ಕಡೆಗಣನೆ ಮತ್ತು ಸರಣಿ ಹಗರಣಗಳು ಒಟ್ಟಾಗಿ ಈ ಪರಿಸ್ಥಿತಿಯನ್ನು ಸೃಷ್ಟಿಸಿವೆ.
ಜನಸಾಮಾನ್ಯರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದಾಗ ಎಷ್ಟೇ ದೊಡ್ಡ ಬಹುಮತವಿದ್ದರೂ ಸರಕಾರಗಳು ಅಸ್ಥಿರಗೊಳ್ಳುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
ನೈಜಲ್ ಫರಾಜ್ ಅವರ ರಿಫಾರ್ಮ್ ಯುಕೆ ಪಕ್ಷವು ಬ್ರಿಟನ್‌ನ ಸಾಂಪ್ರದಾಯಿಕ ರಾಜಕೀಯ ಸಮೀಕರಣವನ್ನು ಬದಲಾಯಿಸುತ್ತಿದ್ದು, ಬಲಪಂಥೀಯ ಧ್ರುವೀಕರಣ ಹೆಚ್ಚುತ್ತಿರುವುದನ್ನು ಈ ವಿದ್ಯಮಾನಗಳು ತೋರಿಸುತ್ತವೆ.
ಕೀರ್ ಸ್ಟಾರ್ಮರ್ ತಮ್ಮ ರಾಜೀನಾಮೆ ಭಾಷಣದಲ್ಲಿ ತಾವು ಪಕ್ಷವನ್ನು ಆರ್ಥಿಕ ಮತ್ತು ನೈತಿಕ ದಿವಾಳಿತನದಿಂದ ಮುನ್ನಡೆಸಿ ಜಯ ತಂದುಕೊಟ್ಟಿರುವುದಾಗಿ, ಯಹೂದಿಗಳ ವಿರುದ್ಧದ ದ್ವೇಷದಿಂದ ಮುಕ್ತಗೊಳಿಸಿರುವುದಾಗಿ ಸಮರ್ಥಿಸಿಕೊಂಡಿದ್ದರೂ, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲು ಪಕ್ಷಕ್ಕೆ ಹೊಸ ನಾಯಕತ್ವದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಸಂಸತ್ತು ಆರಂಭವಾಗುವ ಮುನ್ನವೇ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದು, ಪ್ರಸ್ತುತ ‘ಕಿಂಗ್ ಆಫ್ ದಿ ನಾರ್ತ್’ ಎಂದೇ ಹೆಸರಾಗಿರುವ ಆಂಡಿ ಬರ್ನ್‌ಹ್ಯಾಮ್ ಮುಂದಿನ ಪ್ರಧಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ರಾಜಕೀಯ ಬದಲಾವಣೆಯು ಬ್ರಿಟನ್ ದೇಶವನ್ನು ಆರ್ಥಿಕ ಸ್ಥಿರತೆ ಮತ್ತು ಬಲವಾದ ರಾಷ್ಟ್ರೀಯ ಭದ್ರತೆಯತ್ತ ಮುನ್ನಡೆಸುತ್ತದೆಯೋ ಅಥವಾ ಮತ್ತಷ್ಟು ರಾಜಕೀಯ ಅಸ್ಥಿರತೆಗೆ ತಳ್ಳುತ್ತದೆಯೋ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸಬೇಕಾಗಿದೆ.