×
Ad

ಹಣಕುಣಿ ಸರ್ಕಾರಿ ಶಾಲೆಯ ದುಸ್ಥಿತಿ: ಜೀವ ಕೈಯಲ್ಲಿ ಹಿಡಿದು 200 ಮಕ್ಕಳ ಕಲಿಕೆ

Update: 2026-06-24 13:11 IST

ಹುಮನಾಬಾದ್: ‘ಇದು ವಿದ್ಯಾ ದೇಗುಲ ಕೈ ಮುಗಿದು ಒಳಗೆ ಬಾ’ ಎನ್ನುವುದು ಹಳೆಯ ಮಾತಾಯಿತು. ಆದರೆ, ಇದೀಗ ತಾಲೂಕಿನ ಹಣಕುಣಿ ಸರಕಾರಿ ಶಾಲೆಯ ಪರಿಸ್ಥಿತಿ ನೋಡಿದರೆ, ‘ಜೀವ ಕೈಯಲ್ಲಿ ಹಿಡಿದು ಒಳಗೆ ಬಾ’ ಎನ್ನುವಂತಹ ಆತಂಕಕಾರಿ ವಾತಾವರಣವಿದೆ.

ಹಣಕುಣಿ ಗ್ರಾಮದ ಸರಕಾರಿ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಯು ಅನಾಥವಾದಂತಿದೆ. ಶಾಲೆಯ ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿಯಬಹುದಾಗಿದೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಇಂದೋ ನಾಳೆಯೋ ಬೀಳುವ ಹಂತ ತಲುಪಿದೆ.

ಇತ್ತೀಚೆಗಷ್ಟೇ ಕಲಬುರ್ಗಿಯ ಮಹಿಳಾ ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಟ್ಟಡದ ಮೇಲ್ಬಾವಣಿ ಕುಸಿದು ಬಿದ್ದ ದುರ್ಘಟನೆ ಇನ್ನೂ ಹಸಿರಾಗಿಯೇ ಇದೆ. ಇಂತಹದೇ ಭೀಕರ ಘಟನೆ ಹಣಕುಣಿಯ ಶಾಲೆಯಲ್ಲೂ ಮರುಕಳಿಸುವ ಮುನ್ನ ಸಂಬಂಧಪಟ್ಟ ಆಡಳಿತ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಅಂಥಹದ್ದೇ ಘಟನೆ ಸಂಭವಿಸಿದರು ಆಶ್ಚರ್ಯಪಡಬೇಕಿಲ್ಲ.

ಮರೀಚಿಕೆಯಾದ ಸ್ವಚ್ಛತೆ, ಬಯಲೇ ಶೌಚಾಲಯ!

ಶಾಲೆಯ ಕಟ್ಟಡದ ಪರಿಸ್ಥಿತಿ ಒಂದು ಕಡೆಯಾದರೆ, ಇನ್ನೊಂದೆಡೆ ಶಾಲೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಶೌಚಾಲಯದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಪಾಠ ಹೇಳಿಕೊಡಬೇಕಾದ ಶಾಲೆಯೇ ಇಂದು ತೀವ್ರ ಅಸ್ವಚ್ಛತೆಯಿಂದ ನರಳುತ್ತಿದೆ.

ಶಾಲೆಯ ಶೌಚಾಲಯದ ಬಾಗಿಲು ಮತ್ತು ಗೋಡೆಗಳು ಕುಸಿದು ಬಿದ್ದಿವೆ. ಇದರಿಂದಾಗಿ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲಲ್ಲಿಯೇ ಶೌಚಕ್ಕೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ಶಾಲೆಯ ಸುತ್ತಮುತ್ತಲಿನ ಅಸ್ವಚ್ಛತೆಯಿಂದಾಗಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ.

200 ಬಡ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ: ಈ ಶಾಲೆ ಯಲ್ಲಿ ಸುಮಾರು 200 ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಕಳುಹಿಸಲು ಆರ್ಥಿಕ ಶಕ್ತಿ ಇಲ್ಲದ ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ನಂಬಿರುವುದು ಈ ಸರಕಾರಿ ಶಾಲೆಯನ್ನೇ. ಆದರೆ, ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಟ್ಟಡದ ಜೀವಭಯದ ನಡುವೆ ಮಕ್ಕಳು ನೆಮ್ಮದಿಯಾಗಿ ಶಿಕ್ಷಣ ಪಡೆಯಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸರಕಾರ, ಸ್ಥಳೀಯ ಆಡಳಿತ ಮತ್ತು ಕ್ಷೇತ್ರದ ಶಾಸಕರು ಕೇವಲ ದುರಂತಗಳು ಸಂಭವಿಸಿದಾಗ ಮಾತ್ರ ಸ್ಥಳಕ್ಕೆ ದೌಡಾಯಿಸುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಶಿಥಿಲಗೊಂಡ ಶಾಲೆಗಳತ್ತ ಗಮನ ಹರಿಸಬೇಕಿದೆ.

ನಮ್ಮ ಗ್ರಾಮದ ಸರಕಾರಿ ಶಾಲೆ ಕುಡುಕರ ತಾಣವಾಗಿದೆ. ಶಾಲೆಯಲ್ಲಿ ಕುಡಿದು ಶಾಲೆಯ ಫ್ಯಾನ್, ಲೈಟ್, ಬಾಗಿಲು ಒಡೆಯುವ ಕಿಡಗೇಡಿಗಳಿದ್ದಾರೆ. ಅಂತವರ ಮೇಲು ಕ್ರಮ ಕೈಗೊಳ್ಳಬೇಕು. ಮೇಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಈ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಮಕ್ಕಳ ಸುರಕ್ಷತೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು.

-ಪ್ರಜ್ವಲ್, ಗ್ರಾಮಸ್ಥ

ಸಂಬಂಧಪಟ್ಟ ಸಿಂಧನಕೇರಾ ಗ್ರಾಮ ಪಂಚಾಯತಿಗೆ ಶಾಲೆಯ ಮುಖ್ಯಗುರು ಪತ್ರ ನೀಡಿದ್ದಾರೆ. ಪ್ಲಾನಿಂಗ್ ಆಫೀಸರ್ ಬಳಿ ನಾನು ಮಾತನಾಡಿದ್ದೇನೆ. ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳಲು ಶಾಲೆಯ ಮುಖ್ಯಗುರುಗಳಿಗೆ ಹೇಳಿದ್ದೇನೆ. ಇಲ್ಲದಿದ್ದರೆ ನೋಟಿಸ್ ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದೇನೆ. ಕುಡಿಯುವ ನೀರು ಶಾಲೆಗೂ ಕನೆಕ್ಷನ್ ಕೊಡಬೇಕು. ಸಣ್ಣಪುಟ್ಟದಾಗಿ ಬಿಲ್ಡಿಂಗ್ ಬಿರುಕು ಬಿಟ್ಟಿದ್ದರೆ ಮುಖ್ಯ ಗುರುಗಳೇ ಸರಿಪಡಿಸಬೇಕು. ಆ ಶಾಲೆಯಲ್ಲಿ ಎಷ್ಟು ಕೊಠಡಿಗಳಿವೆ, ಹೊಸದಾಗಿ ಎಷ್ಟು ಕೊಠಡಿ ಕಟ್ಟಬೇಕು ಎನ್ನುವ ಕುರಿತು ಮಾಹಿತಿ ಪಡೆಯುತ್ತೇವೆ.

-ವೆಂಕಟೇಶ್ ಗುಡಾಳ್

ಕ್ಷೇತ್ರ ಶಿಕ್ಷಣಾಧಿಕಾರಿ, ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ, ಹುಮನಾಬಾದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಯ್ಯದ್ ಮುಹ್‌ಸಿನ್ ಅಲಿ

contributor

Similar News