×
Ad

ಬೀದರ್: ಸಮಸ್ಯೆ, ಆತಂಕಗಳ ಸುಳಿಯಲ್ಲಿ ರೈತಾಪಿ ವರ್ಗ

Update: 2026-06-24 08:09 IST

ಬೀದರ್: ಬೇಸಿಗೆ ಕಾಲದಲ್ಲಿಯೇ ಕೆಲ ದಿನಗಳು ಗುಡುಗು ಸಹಿತ ಮಳೆಯಾಗಿ, ಸಿಡಿಲಿನಿಂದ ಕೆಲ ಮನುಷ್ಯರ ಹಾಗೂ ಪ್ರಣಿಗಳ ಜೀವ ತೆಗೆದುಕೊಂಡ ಮಳೆಯು, ಇದೀಗ ರೈತರು ಬಿತ್ತಣಿಕೆ ಪ್ರಾರಂಭ ಮಾಡಬೇಕು ಎನ್ನುವ ಸಮಯದಲ್ಲಿಯೇ ಧರೆಗಿಳಿಯದೆ ಮಾಯವಾಗಿಬಿಟ್ಟಿದೆ. ಇದರಿಂದಾಗಿ ಬಿತ್ತಬೇಕಿರುವ ರೈತರು ಮುಗಿಲತ್ತ ನೋಡುತ್ತಾ ಮಳೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜೂನ್ ತಿಂಗಳು ಮುಗಿಯುತ್ತಲೇ ಬಂತು. ಬಿತ್ತಣಿಕೆಯ ದಿನಗಳು ಉರುಳುತ್ತಿವೆ. ಆದರೆ, ಮಳೆ ಮಾತ್ರ ಭೂಮಿಗೆ ಬೀಳದೆ ರೈತರಿಗೆ ಸತಾಯಿಸುತ್ತಿದೆ. ಬಿತ್ತಬೇಕಿರುವ ಭೂಮಿ ಒಣಗುತ್ತಿದೆ. ಜಿಲ್ಲೆಯ ಕೆಲವು ಕಡೆಗೆ ಮಳೆಯಾದರೂ ಕೂಡ ಸ್ವಲ್ಪ ಮಾತ್ರ ಮಳೆಯಾಗಿದೆ. ಸ್ವಲ್ಪ ಮಳೆ ಬಿದ್ದಿದ್ದರಿಂದ ಹಾಗೆಯೇ ಮುಂದೆಯೂ ಮಳೆ ಬರಬಹುದು ಎನ್ನುವ ಭರವಸೆಯಿಂದ ಭಾಲ್ಕಿ, ಹುಮನಾಬಾದ್ ಹಾಗೂ ಔರಾದ್ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ರೈತರು ಬಿತ್ತಿದ್ದಾರೆ. ಆದರೆ, ಮಳೆ ಬಾರದ ಕಾರಣ ಬಿತ್ತಿದ ಬೀಜ ಮೊಳಕೆ ಒಡೆಯದೇ ಮಣ್ಣು ಪಾಲಾಗಿದೆ. ಕೆಲವು ಕಡೆಗೆ ಒಂಚೂರು ಭೂಮಿ ಮೇಲೆ ಮೊಳಕೆ ಕಾಣಿದರೂ ಕೂಡ ಮಳೆ ಇಲ್ಲದೇ ಬತ್ತಿ ಸೊರಗುತ್ತಿದೆ.

ಇಗಾಗಲೇ ಕೃಷಿ ಇಲಾಖೆಯಿಂದ ಬಿತ್ತಣಿಕೆಗಾಗಿ ಎಲ್ಲ ತಯಾರಿ ನಡೆದಿದ್ದು, 30 ರೈತ ಸಂಪರ್ಕ ಕೇಂದ್ರ ಹಾಗೂ 127 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ರೈತರಿಗೆ ಬೀಜ ವಿತರಣೆ ಮಡಲಾಗುತ್ತಿದೆ. ಬಹುತೇಕ ಜಿಲ್ಲೆಯ ಎಲ್ಲ ರೈತರು ರಸಗೊಬ್ಬರ ಹಾಗೂ ಬೀಜದ ಖರೀದಿಸಿದ್ದು, ಮಳೆಗಾಗಿ ದಾರಿ ಕಾಯುತ್ತಿದ್ದಾರೆ.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಇಡೀ ಜಿಲ್ಲಾದ್ಯಂತ ಒಟ್ಟು 4,12,194 ಹೇಕ್ಟರ್ ಭೂಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 12,811 ಹೇಕ್ಟರ್ ಗಿಂತಲೂ ಹೆಚ್ಚಿನ ಪ್ರಮಾಣದ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಇನ್ನುಳಿದ ಭೂಮಿ ಬಿತ್ತುವುದಕ್ಕೆ ರೈತರು ಮಳೆಗಾಗಿ ಕಾಯುತ್ತಿದ್ದಾರೆ.

ಬೆಳೆಗಳಿಗೆ ಕೀಟ ಹಾಗೂ ರೋಗದ ಭೀತಿ: ಮಳೆ ಇಲ್ಲದ ಪರಿಣಾಮ ಈಗಾಗಲೇ ಬಿತ್ತಿದ ಬೆಳೆಯ ಮೊಳಕೆಗಳಿಗೆ ಕೀಟ ಹಾಗೂ ರೋಗದ ಭೀತಿ ಎದುರಾಗಿದೆ. ಬಿಸಿಲಿನಿಂದಾಗಿ ಮೊಳಕೆಗಳು ಸುಡುತ್ತಿವೆ. ಹಾಗಾಗಿ ಬಿತ್ತದೆ ಇರುವ ರೈತರು ಮಳೆಗಾಗಿ ಕಾಯುತ್ತಿದ್ದರೆ, ಬಿತ್ತಿದ ತಮ್ಮ ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗದ ಭೀತಿಯಲ್ಲಿದ್ದಾರೆ. ಹಾಗೆಯೇ ಮಳೆ ಬಾರದಿದ್ದರೆ ಸಾಲ ಮಾಡಿ ಬಿತ್ತಿದ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಸಂಭವವಿದೆ.

ಒಂದು ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಸೋಯಾ

ಬಿನ್ ಹಾಗೂ ತೊಗರಿ ಬೆಳೆಗಳಿಗೆ ಯಾವುದೇ ರೀತಿಯಿಂದ ಸಮಸ್ಯೆಯಾಗುವುದಿಲ್ಲ. ಇವಾಗ ಮಳೆ ಕೊರತೆಯಿಂದ ಉದ್ದು ಮತ್ತು ಹೆಸರು ಬೆಳೆಗಳಿಗೆ ಸಮಸ್ಯೆಯಾಗಬಹುದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅತಿವೃಷ್ಟಿಯಿಂದಾಗಿ ಬೆಳೆ ನಾಶ ಭೀತಿ: ಇವಾಗ ಮಳೆ ಇಲ್ಲದ ಕಾರಣ ಉದ್ದು ಮತ್ತು ಹೆಸರು ಬೆಳೆ ಬಿತ್ತುವುದಕ್ಕೆ ತೊಂದರೆಯಾಗುತ್ತಿದೆ. ಆದರೆ, ಬಿತ್ತಿದರು ಕೂಡ ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಬಂದು ಅತಿವೃಷ್ಟಿಯಾಗುವ ಸಂಭವವಿದೆ. ಕಾರಣ ಕಳೆದ ವರ್ಷ ಕೂಡ ಮೊದಲಿಗೆ ಮಳೆ ಪ್ರಮಾಣ ಕಡಿಮೆ ಇತ್ತು.

ನಂತರದಲ್ಲಿ ಅತಿವೃಷ್ಟಿಯಾಗಿ ಹೆಚ್ಚಾಗಿ ಉದ್ದು ಮತ್ತು ಹೆಸರು ಬೆಳೆಗಳು ನಾಶವಾಗಿದ್ದವು. ಆದ್ದರಿಂದ ಈ ವರ್ಷವೂ ಕೂಡ ಇವಾಗ ಮಳೆ ಇಲ್ಲ. ಆದರೆ ಬರುವ ದಿನಗಳಲ್ಲಿ ಮಳೆ ಹೆಚ್ಚಾಗಿ ಬೆಳೆ ನಾಶವಾಗುವ ಸಂಭವವಿದೆ ಎಂಬ ಆತಂಕವೂ ರೈತರಲ್ಲಿದೆ.

ಮಳೆ ಬಂದರೆ ಜೂ. 30ರವರೆಗೆ ಉದ್ದು ಮತ್ತು ಹೆಸರು ಬಿತ್ತನೆ ಮಾಡಬಹುದು. ಆದರೆ, ಸೋಯಾಬಿನ್ ಮತ್ತು ತೊಗರಿ ಬಿತ್ತುವವರಿಗೆ ಯಾವುದೇ ರೀತಿಯಿಂದ ತೊಂದರೆ ಇಲ್ಲ. ಅದನ್ನು ಬೆಳೆಯುವವರು ಜುಲೈ 30ರ ವರೆಗೆ ಬಿತ್ತನೆ ಮಾಡಬಹುದು.

-ದೇವಿಕಾ.ಆರ್

ಕೃಷಿ ಜಂಟಿ ನಿರ್ದೇಶಕಿ, ಬೀದರ್

ಬರಗಾಲ ಹಾಗೂ ಅತಿವೃಷ್ಟಿಯಿಂದ ವರ್ಷ ವರ್ಷಕ್ಕೆ ರೈತರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಈ ವರ್ಷ ಬಹುತೇಕ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನು 8 ದಿವಸ ಮಳೆ ಬಾರದಿದ್ದರೆ ಉದ್ದು, ಹೆಸರು ಬಿತ್ತಬೇಕಿರುವ ಹಾಗೂ ಈಗಾಗಲೇ ಬಿತ್ತಿದ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಸರಕಾರ 8 ದಿವಸದ ಒಳಗಡೆ ಕೃತಕ ಮಳೆಯ ವ್ಯವಸ್ಥೆ ಮಾಡಬೇಕು. ಬೆಳೆ ಹಾನಿಯಾದ ನಂತರ 2-3 ಸಾವಿರ ರೂ. ಪರಿಹಾರ ನೀಡಿದರೆ ಉಪಯೋಗವಿಲ್ಲ.

-ಮಲ್ಲಿಕಾರ್ಜುನ್ ಸ್ವಾಮಿ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News