×
Ad

‘ಕಂಜರಭಾಟ’ರನ್ನು ಕೀಳುಕುಲ ಅನ್ನಬಹುದೆ?

Update: 2026-06-24 10:29 IST

ಶಿಕ್ಷಣವೇ ಇಲ್ಲದ ಕಂಜರಭಾಟರಿಗೆ ಜಾತಿ ಪ್ರಮಾಣಪತ್ರ ಸಿಗದಿರುವುದು, ಜಾತಿ ಕಾರಣಕ್ಕೆ ಮಕ್ಕಳಿಗೆ ಶಾಲೆಯಲ್ಲಿ ತಾರತಮ್ಯ ಆಚರಣೆ, ಅಮಾಯಕರ ಮೇಲೆ ಪೊಲೀಸ್ ಕಿರುಕುಳಗಳು ಇನ್ನೂ ಚಾಲ್ತಿಯಲ್ಲಿ ಇವೆ. ‘ಕಳ್ಳ ಜಾತಿ’ ಎಂಬ ಹಣೆಪಟ್ಟಿ ಇವರಿಗೆ ಶಾಶ್ವತವಾಗಿ ಅಂಟಿಕೊಂಡಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಳಗಾವಿಯ ರಾಯಭಾಗ ತಾಲೂಕಿನ ನಿಪ್ನಾಳ, ಗೋಕಾಕ ತಾಲೂಕಿನ ಅಜ್ಜನಕಟ್ಟೆ, ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಮುಂತಾದೆಡೆ ಸುತ್ತಾಡಿದಾಗ ಕಂಜರಭಾಟ ಸಮುದಾಯ ನೆಲೆಸಿರುವ ‘ಸೆಟಲ್ಮೆಂಟ್’ಗಳನ್ನು ನೋಡಿದ ನೆನಪು. ಇದಕ್ಕೂ ಮುಂಚೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಕೆಲಸ ಮಾಡುತಿದ್ದಾಗ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪುರ, ಕೃಷ್ಣಾನಗರ, ರಾಮನಕೊಪ್ಪದಲ್ಲಿ ಕಂಜರಭಾಟ ಸಮುದಾಯವನ್ನು ನೋಡಿದ್ದೆ. ಆಗ ನನಗೆ ಈ ಹೆಸರೇ ವಿಚಿತ್ರವೆನಿಸುತ್ತಿತ್ತು. ಈ ಸಮುದಾಯದ ಕುರಿತು ತಿಳಿಯಬೇಕೆಂಬ ಕುತೂಹಲವಿತ್ತು.

‘ಕಂಜರಭಾಟ’ ಅನ್ನುವುದು ರಾಜಸ್ಥಾನದ ಸ್ಥಳೀಯ ಭಾಷೆಯಲ್ಲಿನ ಎರಡು ಪದಗಳ ಜೋಡುನುಡಿ. ‘ಕಂಜರ’ ಎಂದರೆ ಕಬ್ಬಿಣದ ಕತ್ತಿ, ಚಾಕು ಎಂದರ್ಥ. ‘ಭಾಟ್’ ಅಂದರೆ ಕೀಳು ಕುಲ ಎಂದರ್ಥ ಎಂಬುದನ್ನು ಕಂಜರಭಾಟ ಸಮುದಾಯದ ಕುರಿತು ಅಧ್ಯಯನ ಮಾಡಿರುವ ಅವರ ಕುಲದವರೇ ಆದ ಜೆ.ವಿ. ಬಾಗಡೆ ಎನ್ನುವವರು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬರೆದುಕೊಟ್ಟ ‘ಅಲೆಮಾರಿ ಸಮುದಾಯಗಳ ಅಧ್ಯಯನಮಾಲೆ’ಯಲ್ಲಿ ದಾಖಲಿಸಿದ್ದಾರೆ. ಭಾರತದಾದ್ಯಂತ ವಿವಿಧ ಕಡೆ ನೆಲೆಸಿರುವ ಕಂಜರಭಾಟ ಸಮುದಾಯವು ತನ್ನದೇ ಆದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಅಂತೆಯೇ ಉಳಿದ ಸಮುದಾಯಗಳೊಂದಿಗೆ ಪ್ರತ್ಯೇಕತೆಯನ್ನೂ ಕಾಪಾಡಿಕೊಂಡು ಬಂದಿದೆ. ಕರ್ನಾಟಕದಲ್ಲಿ ಕಂಜರಭಾಟ ಸಮುದಾಯವನ್ನು ಕೆಲವು ಕಡೆ ‘ಭಾಟ’ ಅಂತಲೂ ಮತ್ತೆ ಕೆಲವು ಕಡೆ ‘ಲೋಲ್ಯಾರ’ ಅಂತಲೂ ಕರೆಯುತ್ತಾರೆ. ಇವರನ್ನು 21 ರಾಜ್ಯಗಳಲ್ಲಿ 21 ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಬೇರೆ ಬೇರೆ ಏನೇ ಹೆಸರುಗಳಿದ್ದರೂ ಒಬ್ಬ ಕಂಜರಭಾಟ ವ್ಯಕ್ತಿ ಮತ್ತೊಬ್ಬ ಅಪರಿಚಿತ ಕಂಜರಭಾಟ ವ್ಯಕ್ತಿಗೆ ಪರಿಚಯಿಸಿಕೊಳ್ಳಲು ‘ಸೈಂಸಮಲ್ ಭಾಂತು’ ಅಂದರೆ ಅಪರಿಚಿತ ವ್ಯಕ್ತಿ ‘ಹೌದು ನಾನು ಸೈಂಸಮಲ್ ಭಾಂತು’ ಅಂದರೆ ತಮ್ಮ ಜಾತಿಯವನು ಎಂದು ಗುರುತಿಸಿಕೊಳ್ಳುವ ಮರಗುಭಾಷೆ ಇದೆ.

ಕರ್ನಾಟಕದಲ್ಲಿ ಕಂಜರಭಾಟರು ಅಲೆಮಾರಿಗಳಾಗಿ ಸಂಚರಿಸುತ್ತಾ ಕತ್ತೆ ಮತ್ತು ಕುದುರೆಗಳ ಮೇಲೆ ತಮ್ಮ ಜೀವನೋಪಾಯದ ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಮಳೆ, ಗಾಳಿ, ಬಿಸಿಲೆನ್ನದೆ ಬರಿಗಾಲಲ್ಲಿ ಸಂಚರಿಸುತ್ತಿದ್ದರು. ತಮ್ಮ ಮಕ್ಕಳು, ಮಹಿಳೆಯರು, ಮುದುಕರೊಂದಿಗೆ ತಮ್ಮ ಸಾಕು ಪ್ರಾಣಿಗಳಾದ ಕುರಿ, ನಾಯಿ, ಬೆಕ್ಕುಗಳನ್ನೂ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು.

ಜೆ.ವಿ. ಬಾಗಡೆ ಹೇಳುವಂತೆ ಕಂಜರಭಾಟರ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ, ಬೆಂಗಳೂರಿನ ವಿನಾಯಕನಗರದಲ್ಲಿ, ಬೆಳೆಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ರಾಯಭಾಗದಲ್ಲಿ, ಬಿಜಾಪುರ ನಗರದ ಜೇಲದರ್ಗಾ ಮತ್ತು ರಂಗಮಸೀದಿಗಳಲ್ಲಿ, ಮುದ್ದೇಬಿಹಾಳ, ಹರಿಹರದ ರೈಲ್ವೆ ಗೃಹಗಳಲ್ಲಿ, ಹುಬ್ಬಳ್ಳಿಯ ಸೆಟಲ್ಮೆಂಟ್, ಗದಗ, ನರಗುಂದ, ಗಜೇಂದ್ರಗಡ, ಹಳಿಯಾಳ, ದಾಂಡೇಲಿ, ಬಂಗಾರಪೇಟೆ ಮೈಸೂರು ಮುಂತಾದ ಕಡೆ ನೆಲೆಸಿದ್ದಾರೆ.

ಇವರು ಬಹುತೇಕ ಕಡೆ ಹುಲ್ಲಿನಿಂದ ತಯಾರಿಸಿದ ಜೋಪಡಿಗಳಲ್ಲಿ, ಕೆಲವು ಕಡೆ ಕಲ್ಲು ಮಣ್ಣಿನಿಂದ ಕಟ್ಟಿದ ಕಚ್ಚಾ ಮನೆಗಳಲ್ಲಿ ವಾಸವಾಗಿದ್ದು ಆ ಮನೆಗಳಿಗೆ ಕಿಟಕಿಗಳು ಇರುವುದಿಲ್ಲ! ಬಾಗಿಲು ಬಹಳ ಸಣ್ಣದಾಗಿದ್ದು ತೀರಾ ಬಾಗಿ ಮನೆಯೊಳಕ್ಕೆ ಹೋಗಬೇಕಾಗುತ್ತದೆ. ಇಂತಹ ಮನೆಗಳಿಗೆ ಅವರ ಭಾಷೆಯಲ್ಲಿ ‘ಪೇಡಾ’ ಎಂದು ಕರೆದುಕೊಳ್ಳುತ್ತಾರೆ. ಸರಕಾರದ ಯಾವುದೇ ಇಲಾಖೆಗಳಿಗೆ ಕಂಜರಭಾಟ ಎನ್ನುವ ಜಾತಿಯೊಂದಿದೆ ಎಂಬ ಅರಿವೇ ಇದ್ದಂತಿಲ್ಲ. ಈ ಕಾರಣಕ್ಕೆ ಈ ಸಮುದಾಯಕ್ಕೆ ಈವರೆಗೂ ಒಂದೇ ಒಂದು ಮನೆ ಸಿಕ್ಕಿದ ಉದಾಹರಣೆ ಇಲ್ಲ!

ಇವರಲ್ಲಿ ‘ಮಾಲ್ಡಾ’ ಮತ್ತು ‘ಬಿಡ್ಡು’ಗಳೆಂಬ ಖಾಂದಾನ್‌ಗಳಿವೆ, ಮತ್ತೆ ಈ ಖಾಂದಾನ್‌ಗಳಲ್ಲಿ ಒಂಭತ್ತು ಬೆಡಗುಗಳಿವೆ. ಇವುಗಳ ಮೇಲೆ ವೈವಾಹಿಕ ಸಂಬಂಧಗಳು ಏರ್ಪಟ್ಟಿರುತ್ತವೆ. ಇವರ ಮೂಲ ಕಸುಬು ಭಿಕ್ಷಾಟನೆ. ಸಾರಾಯಿ ತಯಾರಿಸುವುದು, ಕೂಲಿ, ಸೈಕಲ್ ರಿಕ್ಷಾ ತುಳಿಯುವುದು, ಹಳೇ ಸಾಮಾನು ಸಂಗ್ರಹ ಮುಂತಾದ ಕಾಯಕಗಳನ್ನು ಮಾಡುತ್ತಾರೆ. ಮೊದಮೊದಲಿಗೆ ತಮ್ಮ ಉಪಯೋಗಕ್ಕೆ ಸಾರಾಯಿ ತಯಾರಿಸುತ್ತಿದ್ದವರು ಕ್ರಮೇಣ ಸಾರಾಯಿಯನ್ನು ಮಾರಲು ತಯಾರಿಸತೊಡಗಿದರು. ಇವರು ಸಾರಾಯಿ ತಯಾರಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಜಾತಿಯ ಜನರೂ ಕಂಜರಭಾಟರೊಂದಿಗೆ ಸ್ನೇಹದಿಂದ ಇರುತ್ತಾರೆ ಎಂದು ಈ ಸಮುದಾಯದವರೇ ಹೇಳುತ್ತಾರೆ. ಬೆಲ್ಲ, ನವಸಾಗರ, ಬ್ಯಾಲದ ಮರದ ತೊಗಟೆ ಹಾಕಿ ಇವರು ಸಾರಾಯಿ ತಯಾರಿಸುತ್ತಾರೆ.

ವಾಸಕ್ಕೆ ಮನೆಯಿಲ್ಲದವರು, ದುಡಿಯಲು ಉದ್ಯೋಗ ಇಲ್ಲದವರು, ಉಳಲು ಭೂಮಿ ಇಲ್ಲದವರು ಕಂಜರಭಾಟರು. ಈ ಕಾರಣಕ್ಕೆ ಇವರ ಬಳಿ ರೇಶನ್ ಕಾರ್ಡ್, ಆಧಾರ್ ಕಾರ್ಡ್‌ನಂತಹ ಯಾವುದೇ ದಾಖಲೆಗಳಿಲ್ಲ. ಇನ್ನು ಇವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಳಗೊಳ್ಳಲು ಸಾಧ್ಯವೆ?

ಸಾಮಾಜಿಕ ಸ್ಥಾನಮಾನದ ಪ್ರಕಾರ ಕರ್ನಾಟಕದಲ್ಲಿ ಹಿಂದುಳಿದ ವರ್ಗದ ಪ್ರವರ್ಗ ಒಂದರಲ್ಲಿ ಇವರ ಹೆಸರಿದೆ. ಬ್ರಿಟಿಷರ ಕಾಲದಲ್ಲಿ ಅಪರಾಧಿ ಬುಡಕಟ್ಟು ಕಾಯ್ದೆ 1871 ಅಡಿ ಈ ಸಮುದಾಯಕ್ಕೆ ಅಪರಾಧಿ ಬುಡಕಟ್ಟು ಎಂಬ ಹಣೆಪಟ್ಟಿಯಿತ್ತು, 1952ರಲ್ಲಿ ವಿಮುಕ್ತ ಬುಡಕಟ್ಟು ಎಂದೇನೋ ಆಯಿತು. ಆದರೆ ಅಪರಾಧಿ ಬುಡಕಟ್ಟು ಎಂಬ ಕಳಂಕ ಮಾತ್ರ ತಪ್ಪಲಿಲ್ಲ! ಇವರಲ್ಲಿ ‘ಭಾಟ್‌ಗಿರಿ’ ಇದೆ, ಅಂದರೆ ಹಳ್ಳಿಗೆ ಹೋಗಿ ರಾಜ ಮನೆತನಗಳ ವಂಶಾವಳಿ, ಕಥೆ, ಹಾಡು ಹೇಳುವುದನ್ನು ಇವರ ಭಾಷೆಯಲ್ಲಿ ಭಾಟ್ ಗಿರಿ ಎನ್ನುತ್ತಾರೆ.

ಇವರು ಬಿದಿರು ಮತ್ತು ಹುಲ್ಲಿನಿಂದ ಬುಟ್ಟಿ, ಚಾಪೆ, ಪೊರಕೆ ಮಾಡುತ್ತಾರೆ. ಅಂತೆಯೇ ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡಿ ಹಿಡಿಯುವುದನ್ನೂ ಮಾಡುತ್ತಾರೆ

ಮನರಂಜನೆಗಾಗಿ ಕೋತಿ ಆಟ, ಡೊಳ್ಳು ಕುಣಿತ, ಹಗ್ಗದ ಮೇಲೆ ನಡಿಗೆ ಮುಂತಾದುವನ್ನು ಕೂಡ ಮಾಡುತ್ತಾರೆ. ಈಗೀಗ ಕೂಲಿ, ಕಟ್ಟಡ ಕೆಲಸ, ಕಬಾಬ್ ಮತ್ತು ಚಾಟ್ ಗಾಡಿ ನಡೆಸುವುದು, ಆಟೊ ಡ್ರೈವರ್ ಕೆಲಸ ಮಾಡುತ್ತಾರೆ.

ಕರ್ನಾಟಕದಲ್ಲಿ ಕಂಜರಭಾಟರ ಜನಸಂಖ್ಯೆಯನ್ನು ಗಮನಿಸಿದಾಗ 2011 ಜನಗಣತಿಯಲ್ಲಿ ಈ ಸಮುದಾಯದ ಕುರಿತು ಪ್ರತ್ಯೇಕ ಡೇಟಾ ಇಲ್ಲ. ವಿಮುಕ್ತ ಅಪರಾಧಿ ಬುಡಕಟ್ಟು(ಡಿಎನ್‌ಟಿ) ವರ್ಗದಲ್ಲಿ ಅಂದಾಜು 30,000ದಿಂದ 50,000 ಇರುವ ಸಾಧ್ಯತೆ ಇದೆ.

ಶಿಕ್ಷಣವೇ ಇಲ್ಲದ ಕಂಜರಭಾಟರಿಗೆ ಜಾತಿ ಪ್ರಮಾಣಪತ್ರ ಸಿಗದಿರುವುದು, ಜಾತಿ ಕಾರಣಕ್ಕೆ ಮಕ್ಕಳಿಗೆ ಶಾಲೆಯಲ್ಲಿ ತಾರತಮ್ಯ ಆಚರಣೆ, ಅಮಾಯಕರ ಮೇಲೆ ಪೊಲೀಸ್ ಕಿರುಕುಳಗಳು ಇನ್ನೂ ಚಾಲ್ತಿಯಲ್ಲಿ ಇವೆ. ‘ಕಳ್ಳ ಜಾತಿ’ ಎಂಬ ಹಣೆಪಟ್ಟಿ ಇವರಿಗೆ ಶಾಶ್ವತವಾಗಿ ಅಂಟಿಕೊಂಡಿದೆ.

ಈ ಸಮುದಾಯಕ್ಕಿರುವ ಮುಖ್ಯ ಸವಾಲು ಏನೆಂದರೆ Criminal Tribe ಎಂಬ ಕಳಂಕದಿಂದ ಹೊರಬರುವುದು, ಇವರಿರುವ ಪರಿಸರದಲ್ಲಿ ಏನೇ ಅಪರಾಧ ನಡೆದರೂ ಈಗಲೂ ಪೊಲೀಸರು ಮೊದಲು ಇವರನ್ನೇ ಅನುಮಾನಿಸುತ್ತಾರೆ.

ಸ್ವಂತ ಭೂಮಿ ಇಲ್ಲ, ಅಲೆಮಾರಿಗಳಾದ್ದರಿಂದ ಸ್ವಂತ ಜಾಗ, ನೆಲೆ, ಮನೆ, ವಿಳಾಸ ಏನೂ ಇಲ್ಲ. ಈ ಕಾರಣಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಮಸ್ಯೆಗಳು ಸದಾ ಬಾಧಿಸುತ್ತಿರುತ್ತವೆ. ಶಿಕ್ಷಣವಂತೂ ಇಲ್ಲವೇ ಇಲ್ಲ.

ಸರಕಾರ ಎನ್ನುವುದು ಇದೆ ಎಂಬುದು ಇವರಿಗೂ ಗೊತ್ತಿಲ್ಲ, ಕಂಜರಭಾಟ ಸಮುದಾಯ ಇದೆ ಎಂಬುದು ಸರಕಾರಕ್ಕೂ ಗೊತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor

Similar News