ಕೊಡಗು ಜಿಪಂ ಮೀಸಲಾತಿ: ಕಾಂಗ್ರೆಸ್ನಲ್ಲಿ ಅಸಮಾಧಾನ
ಮುಸ್ಲಿಮ್ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮಹಿಳಾ ಮೀಸಲು
ಮಡಿಕೇರಿ : 2016ರ ನಂತರ ಇದೀಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.ಆದರೆ ಕ್ಷೇತ್ರವಾರು ಮೀಸಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಅಚ್ಚರಿ ನೀಡಿದೆ. ಮತ್ತೊಂದೆಡೆ ಅಲ್ಪಸಂಖ್ಯಾತ ಮುಸ್ಲಿಮರು ಅತೀ ಹೆಚ್ಚು ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಅಂದುಕೊಂಡ ಹಾಗೆ ಮೀಸಲು ಪ್ರಕಟವಾಗದೆ ಮಹಿಳಾ ಮೀಸಲು ಬಂದಿದೆ.
ಇದೀಗ ಮೀಸಲಾತಿ ಬಗ್ಗೆ ವಿಶೇಷವಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದ್ದು, ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಅಸಮಾಧಾನಗೊಂಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಚರ್ಚೆ ನಡೆಸಲು ಸಭೆ ನಿಗದಿಪಡಿಸಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಕೂಡಿಗೆ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಅವರಿಗೆ ಮೀಸಲು ಶಾಕ್ ಕೊಟ್ಟಿದೆ. ಈ ಹಿಂದೆ ಕಾಂಗ್ರೆಸ್ ನಾಯಕರು ಶಾಸಕರೊಂದಿಗೆ ಮೀಸಲು ನಿಗದಿ ಬಗ್ಗೆ ಚರ್ಚೆ ನಡೆಸಿ ಕ್ಷೇತ್ರವಾರು ಮೀಸಲು ಪಟ್ಟಿ ಕೂಡ ನೀಡಿದ್ದರು. ಕುಶಾಲನಗರ ತಾಲೂಕಿನ ಐದು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ಪಟ್ಟಿಯಂತೇ ಮೀಸಲು ನಿಗದಿಯಾಗಿದೆ. ಆದರೆ ಕೂಡಿಗೆ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಪಟ್ಟಿಯನ್ನು ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಉಂಟಾಗಿದೆ. ಕೂಡಿಗೆ ಕ್ಷೇತ್ರವು ಸಾಮಾನ್ಯ ಮಹಿಳಾ ಮೀಸಲು ನಿಗದಿಯಾಗಿದೆ. ಇದರಿಂದ ಅಸಮಾಧಾನಗೊಂಡ ವಿ.ಪಿ. ಶಶಿಧರ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಮತ್ತು ಮಾದಾಪುರ ಜಿಪಂ ಕ್ಷೇತ್ರವನ್ನು ಸಾಮಾನ್ಯ ಮೀಸಲು ನಿಗದಿಪಡಿಸಲಾಗಿದೆ. ಆದರೆ ಕುಶಾಲನಗರ ತಾಲೂಕಿನ ಐದು ಜಿಪಂ ಕ್ಷೇತ್ರಗಳಲ್ಲಿ ಒಂದೇ ಒಂದು ಸಾಮಾನ್ಯ ಕ್ಷೇತ್ರವಿಲ್ಲ. ಸಾಮಾನ್ಯ ಕ್ಷೇತ್ರ ಮಹಿಳೆಗೆ ಮೀಸಲಿಡಲಾಗಿದೆ.
ಕುಶಾಲನಗರ ತಾಲೂಕಿನ ಐದು ಕ್ಷೇತ್ರಗಳಲ್ಲಿ ಮೂರು ಬಿಸಿಎಂ ಎ ಮೀಸಲು ನಿಗದಿಯಾಗಿದ್ದು,ಒಂದರಲ್ಲಿ ಮಹಿಳೆಗೆ ಮೀಸಲಾಗಿದೆ.
ವಿರಾಜಪೇಟೆ ಕ್ಷೇತ್ರಕ್ಕೆ ಹೆಚ್ಚು ಸಾಮಾನ್ಯ ಮೀಸಲು:
ವರ್ಗವಾರು ಮೀಸಲು ಪ್ರಕಾರ ಕೊಡಗು ಜಿಲ್ಲೆಯ 29 ಜಿಪಂ ಕ್ಷೇತ್ರಗಳಲ್ಲಿ 15 ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ನಿಗದಿಪಡಿಸಬೇಕು.ಅದರಲ್ಲಿ 7 ಕ್ಷೇತ್ರವನ್ನು ಮಹಿಳೆಯರಿಗೆ ನಿಗದಿಪಡಿಸಬೇಕು.ಮಡಿಕೇರಿ ಕ್ಷೇತ್ರಕ್ಕೆ ಕೇವಲ ಎರಡು ಸಾಮಾನ್ಯ ಮೀಸಲು ಮಾತ್ರ ನೀಡಲಾಗಿದ್ದು,ಉಳಿದ ಆರು ಸಾಮಾನ್ಯ ಮೀಸಲು ವಿರಾಜಪೇಟೆ ಕ್ಷೇತ್ರದ ಜಿಪಂ ಕ್ಷೇತ್ರಗಳಿಗೆ ನಿಗದಿಪಡಿಸಿರುವುದು ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿರಾಜಪೇಟೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಿಪಂ ಕ್ಷೇತ್ರಗಳಾದ ಸಂಪಾಜೆ, ಚೆಯ್ಯಂಡಾಣೆ, ಹಾಲುಗುಂದ, ಗೋಣಿಕೊಪ್ಪಲು, ತಿತಿಮತಿ ಹಾಗೂ ಹುದಿಕೇರಿ ಸೇರಿ ಆರು ಸಾಮಾನ್ಯ ಕ್ಷೇತ್ರವನ್ನು ವಿರಾಜಪೇಟೆ ಕ್ಷೇತ್ರಕ್ಕೆ ನೀಡಲಾಗಿದೆ. ತಾಲೂಕುವಾರು ನೋಡುವಾಗಲೂ ಕನಿಷ್ಠ ಒಂದು ಸಾಮಾನ್ಯ ಮೀಸಲು ಕುಶಾಲನಗರ ತಾಲೂಕಿನ ಕ್ಷೇತ್ರದಲ್ಲಿ ನಿಗದಿಪಡಿಸಬೇಕಿತ್ತು.
ಮಕ್ಕಂದೂರು, ಬೆಟ್ಟಗೇರಿ, ಗೋಪಾಲಪುರ, ಬೇಳೂರು ಬಸವನಹಳ್ಳಿ, ಕೂಡಿಗೆ, ಸಿದ್ದಾಪುರ ಹಾಗೂ ಬಾಳೆಲೆ ಕ್ಷೇತ್ರದಲ್ಲಿ ಸಾಮಾನ್ಯ ಮಹಿಳಾ ಮೀಸಲು ಪ್ರಕಟವಾಗಿದೆ.
ವರ್ಗವಾರು ಮೀಸಲು ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ಆರು ಬಿಸಿಎಂ(ಎ) ಮೀಸಲು ಕ್ಷೇತ್ರ ಇದೆ. ಆರು ಕ್ಷೇತ್ರಗಳ ಪೈಕಿ ಮೂರು ಬಿಸಿಎಂ ಮೀಸಲು ಕುಶಾಲನಗರ ತಾಲೂಕಿನ ಕ್ಷೇತ್ರದಲ್ಲೇ ನಿಗದಿಪಡಿಸಲಾಗಿದೆ. ಹೆಬ್ಬಾಲೆ,ಗುಡ್ಡೆಹೊಸೂರು ಕ್ಷೇತ್ರದಲ್ಲಿ ಬಿಸಿಎಂ (ಎ) ಹಾಗೂ ವಾಲ್ನೂರು-ತ್ಯಾಗತ್ತೂರಿನಲ್ಲಿ ಬಿಸಿಎಂ(ಎ) ಮಹಿಳಾ ಮೀಸಲು ಪ್ರಕಟವಾಗಿದೆ.
ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರಿಗೆ ಕ್ಷೇತ್ರವೇ ಇಲ್ಲ: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರವಾರು ಮೀಸಲು ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡರಲ್ಲಿ ಅಸ
ಮಾಧಾನಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಮಹಿಳಾ ಮೀಸಲು ನಿಗದಿಯಾಗಿದೆ. ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಕಾಂಗ್ರೆಸ್ ಮುಸ್ಲಿಮ್ ನಾಯಕರಿಗೆ ಮೀಸಲು ಸಿಡಿಲು ಬಡಿದಂತಾಗಿದೆ.
ಸುಂಟಿಕೊಪ್ಪಜಿಪಂ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರು ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಸುಂಟಿಕೊಪ್ಪ ಕ್ಷೇತ್ರವು ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದೆ.ಮತ್ತೊಂದೆಡೆ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ವಾಲ್ನೂರು-ತ್ಯಾಗತ್ತೂರು ಕ್ಷೇತ್ರದಲ್ಲಿ ಬಿಸಿಎಂ ಎ(ಮಹಿಳಾ) ಮೀಸಲು ನಿಗದಿಯಾಗಿದೆ.ಈ ಕ್ಷೇತ್ರದಲ್ಲಿ 2016ರಲ್ಲಿ ಕೂಡ ಬಿಸಿಎಂ ಎ(ಮಹಿಳಾ) ಮೀಸಲು ಕ್ಷೇತ್ರವಾಗಿತ್ತು.ಇಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂಬ ಕೂಗು ಇದ್ದು, ತಾಪಂ ಮಾಜಿ ಸದಸ್ಯೆ ಸುಹದಾ ಅಶ್ರಫ್ ಆಕಾಂಕ್ಷಿಯಾಗಿದ್ದಾರೆ.
ಮತ್ತೊಂದೆಡೆ ಇದೇ ಕ್ಷೇತ್ರದ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಅವರು ಕೂಡ ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇಡೀ ಜಿಲ್ಲೆಯಲ್ಲಿ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗಮನಸೆಳೆದಿದ್ದ ಮುಸ್ಲಿಮ್ ಮತದಾರರು ಅತೀ ಹೆಚ್ಚು ಇರುವ ನಾಪೊಕ್ಲು ಕ್ಷೇತ್ರದಲ್ಲಿ ಈ ಬಾರಿ ಬಿಸಿಎಂ (ಎ) ಮಹಿಳಾ ಮೀಸಲು ನಿಗದಿಯಾಗಿದೆ.ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಹಂಸ ಕೊಟ್ಟಮುಡಿ ಅವರಿಗೆ ನಿರಾಸೆಯಂಟಾಗಿದೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿ ಬಂಡಾಯವಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು.
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಕೆ.ಎ. ಇಸ್ಮಾಯಿಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಈ ಬಾರಿ ಕೂಡ ಕೆ.ಎ. ಇಸ್ಮಾಯಿಲ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.ಆದರೆ ಇಬ್ಬರು ಮುಸ್ಲಿಮ್ ಮುಖಂಡರಿಗೆ ಕ್ಷೇತ್ರದಲ್ಲಿ ಮೀಸಲು ಶಾಕ್ ಕೊಟ್ಟಿದೆ. ಮುಸ್ಲಿಮ್ ಮತದಾರರು ಹೆಚ್ಚಿನ ಸಂಖ್ಯೆ
ಯಲ್ಲಿರುವ ಸಿದ್ದಾಪುರದಲ್ಲಿ ಸಾಮಾನ್ಯ ಮಹಿಳೆ ಹಾಗೂ ಚೆನ್ನಯ್ಯನಕೋಟೆ ಕ್ಷೇತ್ರದಲ್ಲಿ ಅನುಸೂಚಿತ ಪಂಗಡ (ಮಹಿಳೆಗೆ) ಮೀಸಲಾತಿ ನಿಗದಿಯಾಗಿದೆ.ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆಯಾಗಿರುವ ಬಗ್ಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆಕ್ಷೇಪ ಸಲ್ಲಿಸಲು ಅ.19 ಕೊನೆಯ ದಿನವಾಗಿದೆ. ಅಂತಿಮ ಮೀಸಲು ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ವಿರಳ. ಒಂದು ವೇಳೆ ಬದಲಾವಣೆ ಮಾಡುವುದಾದರೆ ಸಾಮಾನ್ಯ ಮಹಿಳಾ ಅಥವಾ ಬಿಸಿಎಂ ಎ ಕ್ಷೇತ್ರವನ್ನು ಮಾತ್ರ ಬದಲಾವಣೆ ಮಾಡಲು ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲು ನಿಗದಿಪಡಿಸಿದ್ದಾರೆ. ಕೆಲವೊಂದು ಭಾಗಗಳಲ್ಲಿ ಕಳೆದ ಬಾರಿ ಚುನಾವಣೆಯಲ್ಲಿದ್ದ ಮೀಸಲಾತಿ ಮತ್ತೊಮ್ಮೆ ಪ್ರಕಟವಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಾವ ಮೀಸಲಾತಿ ಇದ್ದರೂ ಬಿಜೆಪಿ ಪಕ್ಷಕ್ಕೆ ಯಾವ ಸಮಸ್ಯೆಯೂ ಆಗಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ಮತ್ತೊಮ್ಮೆ ಕೊಡಗು ಜಿಲ್ಲಾ ಪಂಚಾಯತ್ ಚುಕ್ಕಾಣಿ ಬಿಜೆಪಿ ಹಿಡಿಯಲಿದೆ.
-ನಾಪಂಡ ರವಿ ಕಾಳಪ್ಪ,
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ
ನಾಪೊಕ್ಲು ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆ.ಆದರೆ ಇದೀಗ ಕ್ಷೇತ್ರದಲ್ಲಿ ಬಿಸಿಎಂಎ(ಮಹಿಳೆ) ಮೀಸಲು ಬಂದಿದೆ.ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶವೇ ಇಲ್ಲದಂತಾಗಿದೆ. ಕುಶಾಲನಗರ ತಾಲೂಕಿನಲ್ಲೇ ಮೂರು ಬಿಸಿಎಂ ಎ ಮೀಸಲು ಮಾಡಿದ್ದಾರೆ. ನಾಪೊಕ್ಲುವಿನಲ್ಲಿ ಸಾಮಾನ್ಯ ಅಥವಾ ಬಿಸಿಎಂ ಎ ಓಪನ್ ಮಾಡುವ ಅವಕಾಶ ಇತ್ತು. ಇದೀಗ ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಮ್ ನಾಯಕರು ಜಿಪಂ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶವೇ ಇಲ್ಲದಂತಾಗಿದೆ.
-ಎಚ್.ಎ. ಹಂಸ ಕೊಟ್ಟಮುಡಿ,
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕುಶಾಲನಗರ ತಾಲೂಕಿನ 5 ಕ್ಷೇತ್ರಗಳ ಪೈಕಿ ಕನಿಷ್ಠ ಒಂದು ಸಾಮಾನ್ಯ ಕ್ಷೇತ್ರವಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗೆ ವಿರುದ್ಧವಾಗಿ ಮೀಸಲಾತಿ ನಿಗದಿಯಾಗಿರುವುದು ನೂತನ ಕುಶಾಲನಗರ ತಾಲೂಕಿಗೆ ಅನ್ಯಾಯವಾಗಿದೆ. ಈ ವಿಚಾರವಾಗಿ ವೈಯಕ್ತಿಕವಾಗಿಯೂ ಹಾಗೂ ಕೆಪಿಸಿಸಿ ಸದಸ್ಯನಾಗಿಯೂ ವಿರೋಧ ವ್ಯಕ್ತಪಡಿಸುತ್ತೇನೆ. ನಮ್ಮಲ್ಲಿ ಇಬ್ಬರು ಶಾಸಕರಿದ್ದು, ಅವರಲ್ಲಿ ಒಬ್ಬರು ಕಾನೂನು ತಜ್ಞರಾಗಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈಗಾಗಲೇ ಬೆಂಗಳೂರಿನಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚಿಸುತ್ತಿದ್ದಾರೆ. ಮೀಸಲಾತಿ ಪಟ್ಟಿಗೆ ಆಕ್ಷೇಪ ಸಲ್ಲಿಸಲು ಅವಕಾಶವಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
-ಮಂಜುನಾಥ್ ಗುಂಡೂರಾವ್,
ಕೆಪಿಸಿಸಿ ಸದಸ್ಯ
ಜಿಪಂ ಹಾಗೂ ತಾಪಂ ಚುನಾವಣೆಯ ಮೀಸಲಾತಿ ಪಟ್ಟಿ ಹೊರಬಂದು ಮುಸ್ಲಿಮ್ ಪ್ರಾಬಲ್ಯ ಕ್ಷೇತ್ರದಲ್ಲಿಯೂ ಮುಸ್ಲಿಮ್ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲದ ರೀತಿಯಲ್ಲಿ ಮೀಸಲಾತಿ ತಂದಿರುವುದು ತೀವ್ರ ಖಂಡನೀಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ ಮುಸ್ಲಿಮ್ ಸಮುದಾಯಕ್ಕೆ ಈ ಸರಕಾರ ಬಂದು ಯಾವುದೇ ಪ್ರಬಲ ಹುದ್ದೆ ನೀಡಲಿಲ್ಲ. ಜಿಪಂನಲ್ಲಿ 4-6 ಸೀಟು ಸಿಗಬಹುದೆಂಬ ನಿರೀಕ್ಷೆಗೆ ಕೊಳ್ಳಿ ಇಡಲಾಗಿದೆ.
-ಉನೈಸ್ ಹುಂಡಿ, ಚೇರ್ಮನ್ ಎಸ್ಕೆಎಸ್ಸೆಸ್ಸೆಫ್ ಮೀಡಿಯಾ ವಿಂಗ್, ಕೊಡಗು ಜಿಲ್ಲೆ