ಒಂದು ಪುರಾಣ/ಪರಂಪರೆ ಇದ್ದರೆ ಅದನ್ನು ‘ಜನರ ನಂಬಿಕೆಯ ಕುರಿತು’ ಎಂದು ಚರ್ಚೆ ನಡೆಸಬೇಕೇ ಹೊರತು ಯಾವುದೇ ಕಾರಣಕ್ಕೂ ‘ನಿಜವಾಗಿ ನಡೆದ ಘಟನೆ’ ಎಂದು ಪಠ್ಯಕ್ರಮ ರೂಪಿಸಬಾರದು. ಇತಿಹಾಸ ಅಧ್ಯಯನವು ವರ್ತಮಾನದಲ್ಲಿ ಪುನರ್‌ಸೃಷ್ಟಿಸುವ ಪ್ರಕ್ರಿಯೆಯಾಗಬಾರದು, ಬದಲಿಗೆ ದಾಖಲೆ, ತರ್ಕ ಮತ್ತು ವಿಮರ್ಶಾತ್ಮಕ ಅಧ್ಯಯನದ ನೆಲೆಯಲ್ಲಿ ನಿರಂತರವಾಗಿ ಚರ್ಚೆ, ಸಂವಾದ ನಡೆಸಬೇಕು. ಇದು ಪ್ರಾಥಮಿಕ ಅಗತ್ಯವಾಗಿದೆ.

ಮೋದಿ ನೇತೃತ್ವ ಸರಕಾರದ ಮೂರನೇ ಅವಧಿಯಲ್ಲಿ 2026-27 ಶೈಕ್ಷಣಿಕ ವರ್ಷಕ್ಕೆ ಬಿಡುಗಡೆಯಾಗಿರುವ ಎನ್‌ಸಿಇಆರ್‌ಟಿ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ. ಇತಿಹಾಸ, ಭೂಗೋಳ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳ ನಾಲ್ಕು ಪ್ರತ್ಯೇಕ ಪುಸ್ತಕಗಳನ್ನು ಸಂಯೋಜಿಸಿ ಹೊಸ ಪುಸ್ತಕ Understanding Society: India and Beyond - Part 1& 2 ಎಂಬ ಎರಡು ಭಾಗಗಳ ಸಮಗ್ರ ಪಠ್ಯಪುಸ್ತಕಗಳನ್ನು ರಚಿಸಲು ಮುಂದಾಗಿದ್ದಾರೆ. ಈ ಪಠ್ಯಪುಸ್ತಕದಲ್ಲಿ ಕ್ರಿ.ಶ. 1000-1700ರ ಅವಧಿಯನ್ನು ‘ಪ್ರತಿರೋಧ ಮತ್ತು ಪುನಶ್ಚೇತನ’(Resistance and Resilience) ಎಂಬ ಚೌಕಟ್ಟಿನಲ್ಲಿ ರೂಪಿಸಲಾಗಿದೆ. ಈ 700 ವರ್ಷಗಳ ಅವಧಿಯಲ್ಲಿ ಭಾರತದ ಸಮಾಜವು ಬಾಹ್ಯ ಬೆದರಿಕೆಗಳನ್ನು ಎದುರಿಸಿತು ಮತ್ತು ತನ್ನ ಪರಂಪರೆಗಳನ್ನು ಉಳಿಸಿಕೊಂಡಿತು ಎಂಬ ಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕೂ ಮುಂಚಿನ ಪಠ್ಯಕ್ರಮದಲ್ಲಿ ಸಂಘರ್ಷದ ಜೊತೆಗೆ ಸಹಬಾಳ್ವೆ, ಸಾಂಸ್ಕೃತಿಕ ವೈವಿಧ್ಯ, ಆಡಳಿತಾತ್ಮಕ ಸುಧಾರಣೆ ಮತ್ತು ಬಹುಸಂಸ್ಕೃತಿ ಕುರಿತು ಪ್ರಾಧಾನ್ಯ ನೀಡಲಾಗಿತ್ತು. ಈಗ ಆ ಕಥನವನ್ನು ತೆಗೆದುಹಾಕಿ ‘ವಿದೇಶಿ ವರ್ಸಸ್ ಸ್ವದೇಶಿ’ ಎನ್ನುವ ಆರೆಸ್ಸೆಸ್ ಕಾರ್ಯಸೂಚಿಯನ್ನು ಸೇರಿಸಲಾಗಿದೆ. ವಿದೇಶಿ ಆಕ್ರಮಣಗಳಿಗೆ ವಿರುದ್ಧವಾಗಿ ಭಾರತೀಯ ರಾಜರುಗಳು/ಸಮುದಾಯಗಳ ಹೋರಾಟವನ್ನು ಆಧುನಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಬರೆದಿದ್ದಾರೆ. ಈ ಮೂಲಕ ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ತಿಲಾಂಜಲಿ ಕೊಟ್ಟು ಆರೆಸ್ಸೆಸ್‌ನ ‘ವಿಚಾರ ಮತ್ತು ಸಿದ್ಧಾಂತ’ವನ್ನು ಆಧರಿಸಿ ಪಠ್ಯಪುಸ್ತಕ ರಚಿಸಲು ಮುಂದಾಗಿದ್ದಾರೆ.

ಈ ಹಿಂದೆ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರಕಾರದಿಂದ ಪ್ರಾರಂಭವಾಗಿ ನಂತರ 1999-2004ರ ವಾಜಪೇಯಿ ನೇತೃತ್ವದ ಸರಕಾರ ಮತ್ತು 2014ರಿಂದ ಮೋದಿ ನೇತೃತ್ವದ ಸರಕಾರದಲ್ಲಿ ಈ ಪಠ್ಯಕ್ರಮ ತಿರುಚುವಿಕೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಡೀಪ್ ನೇಶನ್ ಆಗಿರುವ ಆರೆಸ್ಸೆಸ್‌ನ ಈಗಿನ ದಿನಗಳಲ್ಲಿ ಈ ಇತಿಹಾಸ ತಿರುಚುವಿಕೆ ನಿರೀಕ್ಷಿತವಾಗಿತ್ತು. ಆದರೂ ಸಹ ಭಾರತೀಯ ನಾಗರಿಕತೆಯ ಬ್ರಾಹ್ಮಣೀಕರಣ, ವೈದಿಕ ಸಂಪ್ರದಾಯಗಳ ಸಂರಕ್ಷಣೆ ಹೆಸರಿನಲ್ಲಿ ಇತಿಹಾಸದ ವ್ಯಾಸಂಗ ಕ್ರಮವನ್ನು(ಪೆಡಗಾಜಿ) ತಿರುಚುವುದು ಆತಂಕದ ಬೆಳವಣಿಗೆಯಾಗಿದೆ. ಪ್ರಾಚೀನ ಭಾರತೀಯ ಜ್ಞಾನಪರಂಪರೆಯನ್ನು ವೈಭವೀಕರಿಸಿ ಅದನ್ನು ಆಧುನಿಕ ರಾಜ್ಯ ಸಂಸ್ಥೆಗಳೊಂದಿಗೆ ಜೋಡಿಸುವ ಈ ಪ್ರಯತ್ನ ಕಳವಳಕಾರಿಯಾಗಿದೆ. ಹೊಸ ಪುಸ್ತಕದ ಸಂವಿಧಾನ ಸಂಬಂಧಿತ ನಿರೂಪಣೆಯಲ್ಲಿ ಪ್ರಸ್ತಾವನೆಯನ್ನು(Preamble) ತೆಗೆದುಹಾಕಲಾಗಿದೆ. ಮುಖ್ಯ ಪಠ್ಯದಿಂದ ‘ಸೆಕ್ಯುಲರ್’ ಮತ್ತು ‘ಸೆಕ್ಯುಲರಿಸಂ’ ಉಲ್ಲೇಖಗಳನ್ನು ತೆಗೆದುಹಾಕಲಾಗಿದೆ ಎಂದು ‘ಇಂಡಿಯಾ ಟುಡೇ’ ಪತ್ರಿಕೆಯಲ್ಲಿ ವರದಿಯಾಗಿದೆ. ಇದು ಅಘಾತಕಾರಿ ವಿದ್ಯಮಾನವಾಗಿದೆ. ಎನ್‌ಸಿಇಆರ್‌ಟಿ ಇದನ್ನು ನಿರಾಕರಿಸಿ ಮುಂದೆ ಪ್ರಕಟವಾಗುವ ಹೊಸ ಪಠ್ಯಕ್ರಮದಲ್ಲಿ ವಿವಿಧ ತರಗತಿಗಳಿಗೆ ಮರುವಿಂಗಡಣೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಯಾಕೆ ತೆಗೆದು ಹಾಕಲಾಗಿದೆ ಎನ್ನುವ ಮೂಲಪ್ರಶ್ನೆಗೆ ಉತ್ತರವಿಲ್ಲ.

ಹಿಂದಿನ ಇತಿಹಾಸದ ಪಠ್ಯಪುಸ್ತಕವು ‘ಫ್ರೆಂಚ್ ಕ್ರಾಂತಿ’ ಅಧ್ಯಾಯದಿಂದ ಆರಂಭವಾಗಿದ್ದರೆ ಈ ಬಾರಿ ಅದನ್ನು ತೆಗೆದುಹಾಕಿ ‘ಮಾನವ ನಾಗರಿಕತೆ ಮತ್ತು ಭಾರತದ ಪ್ರಾಚೀನ ಇತಿಹಾಸ’ ಎಂಬ ಕಪೋಲಕಲ್ಪಿತ ಪಠ್ಯವನ್ನು ಸೇರಿಸಿದ್ದಾರೆ. ಯುರೋಪಿಯನ್ ಕ್ರಾಂತಿಯ ಅಧ್ಯಾಯವನ್ನು ಕೈಬಿಡಲಾಗಿದೆ. ಸಮಾಜವಾದ ಮತ್ತು ರಶ್ಯ ಕ್ರಾಂತಿಯಂತಹ ಆಧುನಿಕ ರಾಜಕೀಯ-ಆರ್ಥಿಕ ಇತಿಹಾಸದ ಪಠ್ಯವನ್ನು ಕೈಬಿಡಲಾಗಿದೆ. ಫ್ಯಾಶಿಸಂ, ನಾಝಿಸಂ ಮತ್ತು ದ್ವಿತೀಯ ಮಹಾಯುದ್ಧದ ಹಿನ್ನೆಲೆಯ ಪಠ್ಯವನ್ನು ತೆಗೆದು ಹಾಕಿದ್ದಾರೆ. ವಸಾಹತುಶಾಹಿ, ಅರಣ್ಯ ನೀತಿ ಮತ್ತು ಸ್ಥಳೀಯ ಸಮುದಾಯಗಳ ಕುರಿತ ಹಿಂದಿನ ಪ್ರತ್ಯೇಕ ಅಧ್ಯಾಯವನ್ನು ಕೈಬಿಟ್ಟಿದ್ದಾರೆ.

ಇದರ ಬದಲಿಗೆ ಪ್ರಾಚೀನ ಭಾರತೀಯ ನಾಗರಿಕತೆ ಹೊಸ ಇತಿಹಾಸವನ್ನು ಪ್ರಮುಖ ಅಧ್ಯಾಯವಾಗಿ ಪರಿಗಣಿಸಿದ್ದಾರೆ. ಕ್ರಿ.ಶ. 1000ರವರೆಗಿನ ಭಾರತದ ಪ್ರಭುತ್ವ, ಸಮಾಜ ಮತ್ತು ನಾಗರಿಕತೆಯ ಬೆಳವಣಿಗೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

ರಾಜಪೂತರು, ನೈಕಿದೇವಿ, ಅಹೋಮ್‌ಗಳು, ಮರಾಠರು, ಜಾಟ್, ಸಿಖ್ಖರ ಪ್ರತಿರೋಧದ ಕತೆಗಳನ್ನು ಅರಬ್, ತುರ್ಕ್ ಮತ್ತು ಮೊಗಲ್ ಆಳ್ವಿಕೆಗೆ ವಿರೋಧದ ಇತಿಹಾಸ ಎಂದು ಕರೆದಿದ್ದಾರೆ. ಈ ಮೂಲಕ ಪೌರಾಣಿಕ ಕತೆಗಳು ಇತಿಹಾಸದ ನಡುವಿನ ಗೆರೆಯನ್ನೇ ಅಳಿಸಿಹಾಕಲಾಗಿದೆ. ಉದಾಹರಣೆಗೆ ಶಿವಾಜಿ, ಬಸ್ತರ್‌ನ ರಾಜ ಮತ್ತು ಇತರ ಐತಿಹಾಸಿಕ ವ್ಯಕ್ತಿಗಳು ದೇವಿಯರಿಂದ ಖಡ್ಗ ಪಡೆದರು ಎಂಬ ಪರಂಪರೆಯ ಕತೆಗಳನ್ನು ಉಲ್ಲೇಖಿಸಲಾಗಿದೆ. ಜನರ ನಂಬಿಕೆ ಮತ್ತು ಮಿಥ್‌ಗಳನ್ನು ‘ನಡೆದ ಘಟನೆ’ ಎಂದು ಪರಿಚಯಿಸಲಾಗುತ್ತಿದೆ. ಹೊಸ ಪಠ್ಯದಲ್ಲಿ ಸೆಂಗೋಲನ್ನು ಚೋಳ ಪರಂಪರೆ, ಆಡಳಿತಾತ್ಮಕ ಸಂಕೇತವಾಗಿ ಪರಿಚಯಿಸಿರುವುದು ಇದಕ್ಕೆ ಉದಾಹರಣೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಸೆಂಗೋಲನ್ನು ಅಧಿಕಾರ ಹಸ್ತಾಂತರದ ಸಂಕೇತವಾಗಿ ಬಳಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. 1 ಅಕ್ಟೋಬರ್ 2026ರ ‘ದ ಹಿಂದೂ’ ಪತ್ರಿಕೆಯಲ್ಲಿ ‘ಸಂಸ್ಕೃತಿಯ ಭಾಗವಾಗಿರುವ ಸೆಂಗೋಲನ್ನು 2023ರಲ್ಲಿ ಹೊಸ ಸಂಸತ್ ಭವನದಲ್ಲಿ ಇಡಲಾಗಿದೆ, ಇದು ಸಾವಿರ ವರ್ಷಗಳ ಹಿಂದಿನ ಚೋಳ ರಾಜಪ್ರಭುತ್ವದ ಆಡಳಿತವನ್ನು ನೆನಪಿಸುತ್ತದೆ. ಸ್ವಾತಂತ್ರ್ಯಾ ನಂತರ 1947ರಲ್ಲಿ ಆಗಿನ ಪ್ರಧಾನಿ ನೆಹರೂ ಅವರು ಶೈವ ಪರಂಪರೆಯ ಆಧೀನಂ ಸಂತರಿಂದ ಸ್ವೀಕರಿಸಿದರು ಎಂದು ಪಠ್ಯದಲ್ಲಿ ಬರೆಯಲಾಗಿದೆ. ಸಿ. ರಾಜಗೋಪಾಲಾಚಾರಿಯವರ ಜೀವನಚರಿತ್ರೆ ಬರೆದ ರಾಜಮೋಹನ ಗಾಂಧಿಯವರು ಅಧಿಕಾರದ ಹಸ್ತಾಂತರದ ಭಾಗವಾಗಿ ಸೆಂಗೋಲನ್ನು ಕೊಟ್ಟಿದ್ದರು ಎನ್ನುವ ಹೇಳಿಕೆಗೆ ರಾಜಗೋಪಾಲಾಚಾರಿ, ನೆಹರೂ ಅವರ ಸ್ವಯಂ ಬರಹಗಳು ಮತ್ತು ಜೀವನಚರಿತ್ರೆಯಲ್ಲಿ ಎಲ್ಲಿಯೂ ದಾಖಲೆಗಳಿಲ್ಲವೆಂದು ಹೇಳಿದ್ದರು’ ಎಂದು ವರದಿಯಾಗಿದೆ. 2023ರಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಲ್ಲಿ ಸೆಂಗೋಲನ್ನು ಪ್ರಧಾನವಾಗಿ ಬಳಸುವುದರ ಮೂಲಕ ಪುರೋಹಿತಶಾಹಿ ಆಚರಣೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ವೈಜ್ಞಾನಿಕ ಮನೋಧರ್ಮ ಹಾಗೂ ಪ್ರಶ್ನಿಸುವ ಸ್ಫೂರ್ತಿಯನ್ನು ವಿವರಿಸುವ ಸಂವಿಧಾನದ ವಿಧಿ 51ಎ(ಎಚ್) ಅಪ್ರಸ್ತುತಗೊಳಿಸಲಾಗಿದೆ

ಮತ್ತೊಂದು ಅಧ್ಯಾಯದಲ್ಲಿ ‘ಸತ್ಯಮೇವ ಜಯತೇ’ ಸ್ಲೋಗನನ್ನು ಮುಂಡಕ ಉಪನಿಷತ್ ಜೊತೆಗೆ ಹೋಲಿಸುತ್ತಾ ಇದನ್ನು ಗಾಂಧೀಜಿಯವರ ರಾಮರಾಜ್ಯ ಪರಿಕಲ್ಪನೆ ಮತ್ತು 16ನೇ ಶತಮಾನದ ‘ರಾಮಚರಿತಮಾನಸ’ ಕಾವ್ಯದ ಜೊತೆಗೆ ಜೋಡಿಸುತ್ತಾ ‘ಉತ್ತಮ ಆಡಳಿತಕ್ಕೆ ಉದಾಹರಣೆ’ ಎಂದು ವ್ಯಾಖ್ಯಾನಿಸಿದ್ದಾರೆ. ವೇದಕಾಲದಿಂದ ರಾಮಾಯಣ ಹಾಗೂ ಮಹಾಭಾರತದವರೆಗೆ ಆಡಳಿತ ವಿಷಯದಲ್ಲಿ ಭಾರತ ಪರಂಪರೆಯ ವೈಭವವನ್ನು ಬರೆಯಲಾಗಿದೆ. ಇದು ನೇರವಾಗಿ ಪುರಾಣ ಕಾವ್ಯಗಳನ್ನು ಚರಿತ್ರೆಯಾಗಿ ನಿರೂಪಿಸುವ ಅಪಾಯಕಾರಿ ಮಾರ್ಗವಾಗಿದೆ.

ಮುಗಿಯದ ಟಿಪ್ಪಣಿಗಳು

1000-1700ರ ಅವಧಿಯನ್ನು ಮುಖ್ಯವಾಗಿ ವಿದೇಶಿ ಆಕ್ರಮಣಕ್ಕೆ ಭಾರತದ ಪ್ರತಿಕ್ರಿಯೆ ಮತ್ತು ಪ್ರತಿರೋಧ ಎನ್ನುವ ಸರಣಿಯನ್ನು ಸೃಷ್ಟಿಸುವುದರ ಉದ್ದೇಶವೇ ಭಾರತದ ರಾಜಕೀಯ ವಾಸ್ತವಿಕತೆ ಮತ್ತು ಚಾರಿತ್ರಿಕತೆಯನ್ನು ಹಿನ್ನೆಲೆಗೆ ತಳ್ಳುವುದಾಗಿದೆ. ಇದು ‘ಭಾರತೀಯರು ವರ್ಸಸ್ ವಿದೇಶೀಯರು’ ಎನ್ನುವ ನೆರೇಶನ್ ಕಟ್ಟುತ್ತದೆ. ಪ್ರತಿರೋಧವು ಭಾರತದ ಇತಿಹಾಸದ ಭಾಗವಾಗಿದ್ದರೂ ಸಹ ಇದನ್ನೇ ಮುಖ್ಯವಾಗಿಸಿ ಮಧ್ಯಕಾಲೀನ ಭಾರತದ ರಾಜಕೀಯ ಸಂಕೀರ್ಣತೆಯನ್ನು ನಿರ್ಲಕ್ಷಿಸುವುದು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ. ಅಲಿಗಡದ ಇತಿಹಾಸಕಾರ ಸಯ್ಯದ್ ಅಲಿ ನದೀಮ್ ರೆಜವಿ ‘ಚರಿತ್ರೆಯಲ್ಲಿ ರಜಪೂತರು ಪರಸ್ಪರ ಯುದ್ಧ ಮಾಡಿದರು, ಮುಸ್ಲಿಮರೂ ಪರಸ್ಪರ ಯುದ್ಧ ಮಾಡಿದರು, ವಿಜಯನಗರ ಮತ್ತು ದಕ್ಕನ್ ಸುಲ್ತಾನತೆಗಳ ನಡುವೆ ಸಂಘರ್ಷವೂ ಇತ್ತು, ಮೈತ್ರಿಯೂ ಇತ್ತು. ರಾಜಪೂತರು ಮೊಗಲರ ವಿರುದ್ಧ ಬಂಡಾಯ ಮಾಡಿದ ಸಂದರ್ಭಗಳಿದ್ದವು, ಅದೇ ಸಮಯದಲ್ಲಿ ಮೊಗಲ್ ಆಡಳಿತದಲ್ಲೂ ಸೇವೆ ಸಲ್ಲಿಸಿದರು. ಮರಾಠಾ ನಾಯಕರು ಮೊಗಲರು ಮತ್ತು ದಖ್ಖನ್ ಸುಲ್ತಾನತೆಗಳ ಪರವಾಗಿಯೂ, ವಿರುದ್ಧವಾಗಿಯೂ ವಿವಿಧ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಿದರು. ಮೊಗಲ್ ಸೇನೆಯಲ್ಲಿ ಮುಸ್ಲಿಮರ ಜೊತೆಗೆ ಮುಸ್ಲಿಮೇತರ ಸೇನಾನಾಯಕರೂ ಇದ್ದರು’ ಎಂದು ಬರೆಯುತ್ತಾರೆ. ಹಾಗೆಯೇ ಚೋಳರು ಮತ್ತು ಚಾಲುಕ್ಯರು, ಗಂಗರು ಮತ್ತು ಕದಂಬರು, ರಾಷ್ಟ್ರಕೂಟರು ಮತ್ತು ಚಾಲುಕ್ಯರು ಮುಂತಾದ ರಾಜಮನೆತನಗಳು ಅಧಿಕಾರ ಮತ್ತು ಸಾಮ್ರಾಜ್ಯಕ್ಕಾಗಿ ಪರಸ್ಪರ ಯುದ್ಧ ಮಾಡಿವೆ. ಈ ಚರಿತ್ರೆಯನ್ನು ಸಂಪೂರ್ಣವಾಗಿ ಹಿನ್ನೆಲೆಗೆ ತಳ್ಳುವ ಅಥವಾ ನಗಣ್ಯಗೊಳಿಸುವ ಎನ್‌ಸಿಇಆರ್‌ಟಿ ದೇಶೀಯರು ವರ್ಸಸ್ ವಿದೇಶೀಯರು ಎನ್ನುವ ಹಾದಿ ತಪ್ಪಿಸುವ ಕಥನವನ್ನು ಸೃಷ್ಟಿಸುತ್ತಿದೆ.

ಸಿಖ್ ಮತ್ತು ಮೊಗಲರ ನಡುವಿನ ಸಂಘರ್ಷವನ್ನು ಧಾರ್ಮಿಕವಾಗಿ ನೋಡದೆ ರಾಜಕೀಯ ಕಥನವಾಗಿ ನಿರ್ವಚಿಸಬೇಕು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ರುಚಿಕಾ ಶರ್ಮಾ ‘ಉದಾಹರಣೆಗೆ ಗುರು ಅರ್ಜನ್ ದೇವರು ಖುಸ್ರೌಗೆ ಬೆಂಬಲ ನೀಡಿದ್ದು ಜಹಾಂಗೀರ್‌ನ ರಾಜಕೀಯ ಅಧಿಕಾರಕ್ಕೆ ಸವಾಲಾಗಿತ್ತು. ನಂತರ ಅಕಾಲ್ ತಕ್ತ್ ಸ್ಥಾಪನೆ ಮತ್ತು ಸಿಖ್ ಸಮುದಾಯದ ಸೈನಿಕ ಸಂಘಟನೆಗಳು ಮೊಗಲ್ ಅಧಿಕಾರದೊಂದಿಗೆ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದವು’ ಎಂದು ಹೇಳುತ್ತಾರೆ. ಸಾರಾಂಶದಲ್ಲಿ ಚರಿತ್ರೆಯ ಪಠ್ಯಕ್ರಮ ರಚಿಸುವಾಗ ರಾಜಕೀಯ ಅಧಿಕಾರ ಮತ್ತು ಪ್ರತಿರೋಧ ಕಥನವನ್ನು ಮರೆಮಾಚಿ ಕೇವಲ ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತ ಮತಧರ್ಮವನ್ನು ವೈಭವೀಕರಿಸುವುದು ಒಪ್ಪಿತವಲ್ಲ. ಇದು ವಿದ್ಯಾರ್ಥಿಗಳಲ್ಲಿ ಮತ ಧ್ರುವೀಕರಣಕ್ಕೆ ಕಾರಣವಾಗುತ್ತದೆ. ಮೊಗಲರ ಆಡಳಿತವನ್ನು ಪಠ್ಯದಿಂದ ತೆಗೆದು ಹಾಕಿರುವುದನ್ನು ಆಕ್ಷೇಪಿಸಿರುವ ರೊಮಿಲಾ ಥಾಪರ್ ‘ಒಂದು ಕಾಲಘಟ್ಟದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಮುಂದಿನ ಕಾಲಘಟ್ಟವನ್ನು ಹೇಗೆ ರೂಪಿಸಿದವು ಎಂಬುದರ ನಿರಂತರ ಪ್ರಕ್ರಿಯೆ. ಒಂದು ಅವಧಿಯನ್ನು ಕಡಿಮೆ ಮಾಡುವುದು ಅಥವಾ ತುಂಡರಿಸುವುದು ವಿದ್ಯಾರ್ಥಿಗಳಲ್ಲಿ ‘ಕಾರಣ ಮತ್ತು ಪರಿಣಾಮ(cause and effect) ಮತ್ತು ಇತಿಹಾಸದ ನಿರಂತರತೆಯನ್ನು(historical continuity) ಅರ್ಥೈಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳುತ್ತಾರೆ

ಇತಿಹಾಸಕಾರರ ಮತ್ತೊಂದು ಆಕ್ಷೇಪಣೆಯೆಂದರೆ 11-17ನೇ ಶತಮಾನದ ಕಾಲದಲ್ಲಿ ‘ಭಾರತೀಯ’ ಎಂಬುದು ಇಂದಿನಂತೆ ರಾಷ್ಟ್ರೀಯ ರಾಜಕೀಯ ಗುರುತಾಗಿರಲಿಲ್ಲ. ಆಗ ರಾಜವಂಶ, ಸಾಮಂತರು, ಆರ್ಥಿಕ ಹಾಗೂ ಸಾಮ್ರಾಜ್ಯ ಹಿತಾಸಕ್ತಿ, ಧಾರ್ಮಿಕತೆ ಸುತ್ತ ಕೇಂದ್ರೀಕೃತವಾಗಿದ್ದವು. ಆದರೆ ಈ ಚರಿತ್ರೆಯನ್ನು ಬದಲಿಸಿ ಭಾರತೀಯತೆ ಎನ್ನುವ ರಾಷ್ಟ್ರೀಯತೆಯನ್ನು ಸೇರಿಸುವುದು ಇತಿಹಾಸವನ್ನು ತಿರುಚಿದಂತಾಗುತ್ತದೆ. ಆಧುನಿಕತೆಯ ರಾಷ್ಟ್ರ-ಪ್ರಭುತ್ವ-ರಾಜ್ಯ ಪರಿಕಲ್ಪನೆಯನ್ನು ಮಧ್ಯಕಾಲೀನ ರಾಜಕೀಯಕ್ಕೆ ಜೋಡಿಸುವುದು ಅಪಾಯಕಾರಿ ಧೋರಣೆಯಾಗಿದೆ. ಇಲ್ಲಿ ವಸ್ತುನಿಷ್ಠತೆ ನಿರಾಕರಣೆಗೊಂಡು ವಿಚಾರನಿಷ್ಠತೆ ಮುನ್ನೆಲೆಗೆ ಬರುತ್ತದೆ. ಆಗ ಇದು ಇತಿಹಾಸ ಎನಿಸಿಕೊಳ್ಳುವುದಿಲ್ಲ, ಭಾರತದ ಸಂದರ್ಭದಲ್ಲಿ ಆರೆಸ್ಸೆಸ್ ಸಿದ್ಧಾಂತದ ಪ್ರಣಾಳಿಕೆಯಾಗುತ್ತದೆ.

ಅಂಬೇಡ್ಕರ್ ಅವರು ಇತಿಹಾಸವನ್ನು ಕೇವಲ ಆಗಿಹೋದ ಘಟನೆಗಳ ದಾಖಲೆಯಾಗಿ ನೋಡಲಿಲ್ಲ. ಅದು ಸಮಾಜದ ಅಧಿಕಾರ ಸಂಬಂಧಗಳು, ಜಾತಿ, ಧರ್ಮ, ಅಸಮಾನತೆ ಮತ್ತು ಸಾಮಾಜಿಕ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವ ಸಾಧನ ಎಂದು ನಿರ್ವಚಿಸಿದರು. ಇತಿಹಾಸ ಯಾರ ದೃಷ್ಟಿಯಿಂದ ಬರೆಯಲ್ಪಡುತ್ತದೆ? ಇತಿಹಾಸದಲ್ಲಿ ಯಾರ ಧ್ವನಿ ದಾಖಲಾಗುತ್ತದೆ? ಯಾರ ಅನುಭವ ಮರೆಮಾಚಲ್ಪಡುತ್ತದೆ? ಎನ್ನುವ ಪ್ರಶ್ನೆಗಳು ಅಂಬೇಡ್ಕರ್ ಅವರಿಗೆ ಮುಖ್ಯವಾಗಿದ್ದವು. ಯಾವುದೇ ಪರಂಪರೆಯ ಕಥೆಯನ್ನು ಇತಿಹಾಸವಾಗಿ ಸ್ವೀಕರಿಸುವ ಮೊದಲು ಅದರ ಮೂಲ, ದೇಶಕಾಲ, ಆಂತರಿಕ ಸಂಘರ್ಷ ಮತ್ತು ಇತರ ಸಾಕ್ಷ್ಯಗಳೊಂದಿಗೆ ತೌಲನಿಕವಾಗಿ ಪರಿಶೀಲಿಸಬೇಕು ಎಂದು ಹೇಳಿದ ಅಂಬೇಡ್ಕರ್ ಇತಿಹಾಸವನ್ನು ಕೇವಲ ರಾಜರು, ಯುದ್ಧಗಳು, ಸಾಮ್ರಾಜ್ಯಗಳು ಎಂಬ ಒಂದೇ ಸರಣಿಯಲ್ಲಿ ನೋಡಿದರೆ ಅಪೂರ್ಣವಾಗುತ್ತದೆ. ಅದರ ಜೊತೆಗೆ ಜಾತಿ, ವರ್ಗ, ಸಾಮಾಜಿಕ ಸ್ಥಾನ, ಶಿಕ್ಷಣ ಮತ್ತು ಪ್ರಾತಿನಿಧ್ಯ, ಅಧಿಕಾರ, ಮಹಿಳೆಯರ ಸ್ಥಿತಿ ಮುಂತಾದವುಗಳ ಇತಿಹಾಸವನ್ನೂ ನೋಡಬೇಕು ಎಂದು ವಿವರಿಸುತ್ತಾರೆ. ‘ಯಾವ ಕಥೆಯನ್ನು ಸೇರಿಸಲಾಗಿದೆ?’ ಎನ್ನುವುದಕ್ಕಿಂತ ‘ಯಾರ ಇತಿಹಾಸವನ್ನು ಕೇಂದ್ರಕ್ಕೆ ತರಲಾಗಿದೆ, ಯಾರ ಅನುಭವವನ್ನು ಅಂಚಿಗೆ ಸರಿಸಲಾಗಿದೆ’ ಎನ್ನುವುದು ಅಂಬೇಡ್ಕರ್ ಅವರ ಇತಿಹಾಸ ಅಧ್ಯಯನದ ಕ್ರಮವಾಗಿತ್ತು. ಆದರೆ ಎನ್‌ಸಿಇಆರ್‌ಟಿಯ ಪಠ್ಯಕ್ರಮ ಬದಲಾವಣೆಯು ಬಾಬಾಸಾಹೇಬರ ಚಿಂತನೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ವಿರುದ್ಧ ದಿಕ್ಕಿನಲ್ಲಿದೆ.

ಅಂತಿಮವಾಗಿ ಒಂದು ಪುರಾಣ/ಪರಂಪರೆ ಇದ್ದರೆ ಅದನ್ನು ‘ಜನರ ನಂಬಿಕೆಯ ಕುರಿತು’ ಎಂದು ಚರ್ಚೆ ನಡೆಸಬೇಕೇ ಹೊರತು ಯಾವುದೇ ಕಾರಣಕ್ಕೂ ‘ನಿಜವಾಗಿ ನಡೆದ ಘಟನೆ’ ಎಂದು ಪಠ್ಯಕ್ರಮ ರೂಪಿಸಬಾರದು. ಇತಿಹಾಸ ಅಧ್ಯಯನವು ವರ್ತಮಾನದಲ್ಲಿ ಪುನರ್‌ಸೃಷ್ಟಿಸುವ ಪ್ರಕ್ರಿಯೆಯಾಗಬಾರದು, ಬದಲಿಗೆ ದಾಖಲೆ, ತರ್ಕ ಮತ್ತು ವಿಮರ್ಶಾತ್ಮಕ ಅಧ್ಯಯನದ ನೆಲೆಯಲ್ಲಿ ನಿರಂತರವಾಗಿ ಚರ್ಚೆ, ಸಂವಾದ ನಡೆಸಬೇಕು. ಇದು ಪ್ರಾಥಮಿಕ ಅಗತ್ಯವಾಗಿದೆ.

(ಲೇಖಕರು: ಹಿರಿಯ ಬರಹಗಾರರು, ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ. ಶ್ರೀಪಾದ ಭಟ್

contributor