ಪ್ರಸ್ತುತ ಯೋಜನೆ ಕೇವಲ ಪಾನೀಯಕ್ಕೆ ಸೀಮಿತವಾಗಿಲ್ಲ. ವಿಸ್ಕಿಯ ಎಥೆನಾಲ್ ಎನ್ನುವ ಬಹಳಷ್ಟು ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುವ ಆಲ್ಕೋಹಾಲ್ ಅನ್ನು ಒಳಗೊಂಡಿದೆ. ಎಥೆನಾಲನ್ನು ಬಾಹ್ಯಾಕಾಶದಲ್ಲಿ ಹೇಗೆ ತಯಾರಿಸಬಹುದು ಅಥವಾ ಪ್ರತ್ಯೇಕಿಸಬಹುದು ಎನ್ನುವುದನ್ನು ಈ ಯೋಜನೆ ಅಧ್ಯಯನ ಮಾಡಲಿದೆ.

ಜೆಫ್ ನಿಸ್‌ಬೆಟ್ ತನ್ನ ಸಂಪೂರ್ಣ ವೃತ್ತಿ ಜೀವನವನ್ನು ವಿಸ್ಕಿ ಎಲ್ಲಿ ತಯಾರಾಗುತ್ತದೆ ಎನ್ನುವುದನ್ನು ರೂಪಿಸುತ್ತಲೇ ಕಳೆದಿದ್ದಾರೆ. ಆಲನ್ ಅಸೋಸಿಯೇಟ್ಸ್ ಎನ್ನುವ ಡಿಸ್ಟಿಲರಿಗಳನ್ನು ವಿನ್ಯಾಸಗೊಳಿಸಲು ನೆರವಾಗುವ ಸಂಸ್ಥೆಯಲ್ಲಿ ಅವರು ಮುಖ್ಯ ಪ್ರೊಸೆಸ್ ಇಂಜಿನಿಯರ್ ಆಗಿ ಕಾರ್ಯಾಚರಿಸುತ್ತಿದ್ದಾರೆ. ತಮ್ಮ ತಂಡ ಸ್ಕಾಟ್ಲೆಂಡ್ ಆದ್ಯಂತ ವಿಸ್ಕಿ ತಯಾರಿಕೆಯಲ್ಲಿ ತನ್ನ ಗುರುತು ಮೂಡಿಸಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ತಮ್ಮ ಮುಂದಿನ ಕೊಡುಗೆ ಬಾಹ್ಯಾಕಾಶಕ್ಕೆ ತಲುಪಬಹುದು ಎಂದು ಮಾತ್ರ ಅವರೆಂದೂ ನಿರೀಕ್ಷಿಸಿರಲಿಲ್ಲ! ಸ್ಕಾಟ್ಲೆಂಡ್‌ನ ಜಗತ್ ಪ್ರಸಿದ್ಧ ವಿಸ್ಕಿ ಉದ್ಯಮ, ನೂತನ ಇಂಜಿನಿಯರಿಂಗ್ ಆಲೋಚನೆಗಳು ಮತ್ತು ಭವಿಷ್ಯದ ಇಂಜಿನಿಯರಿಂಗ್ ಅನ್ನು ಜೊತೆಯಾಗಿಸುವ ಯೋಜನೆಯನ್ನು ಬೆಂಬಲಿಸಲು ತಮ್ಮ ಸಂಸ್ಥೆ ಸಂತೋಷಪಡುತ್ತದೆ ಎಂದು ನಿಸ್‌ಬೆಟ್ ಹೇಳಿದ್ದಾರೆ. ಆಲೆನ್ ಅಸೋಸಿಯೇಟ್ಸ್ ಜಪಾನ್‌ನಲ್ಲಿ ತಂಡದ ಆರಂಭಿಕ ಕಾರ್ಯಗಳನ್ನು ಬೆಂಬಲಿಸಿತ್ತು. ಡಿಸ್ಟಿಲಿಂಗ್ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಸ್ಕಾಟ್ಲೆಂಡ್ ಮತ್ತು ಜಪಾನ್ ನಡುವೆ ವಿಸ್ಕಿ ಸಂಪರ್ಕ ಏರ್ಪಡಿಸುತ್ತಿರುವುದು ವಿಶೇಷ ಎಂದು ನಿಸ್‌ಬೆಟ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಯೋಜನೆಗೆ ‘ಸ್ಪೇಸ್ ಪಫಿನ್’ ಎಂದು ಆಕರ್ಷಕ ಹೆಸರಿಡಲಾಗಿದೆ. ಒಂದು ವಿಜ್ಞಾನ ಪ್ರಯೋಗಾಲಯವನ್ನೇ ಕಿರಿದಾಗಿಸಿ, ಒಂದು ಸಣ್ಣ ಬಾಕ್ಸ್ ಒಳಗೆ ಹಿಡಿಸುವುದನ್ನು ಒಂದು ಉಪಗ್ರಹ ಎಂದುಕೊಳ್ಳಿ. ಇಂಜಿನಿಯರ್‌ಗಳು ಇಂತಹ ಪೆಟ್ಟಿಗೆಯನ್ನು ಕ್ಯೂಬ್‌ಸ್ಯಾಟ್ ಎಂದು ಕರೆಯುತ್ತಾರೆ. ಗ್ಲಾಸ್ಗೋ ವಿಶ್ವವಿದ್ಯಾನಿಲಯದ ಡಾ. ಜೈಲ್ಸ್ ಬೈಲೆಟ್ ಸೇರಿದಂತೆ, ವಿವಿಧ ಸಂಶೋಧಕರು ಉಭಯ ದೇಶಗಳ ಇಂಜಿನಿಯರ್‌ಗಳು ಮತ್ತು ಯುವ ಆಸಕ್ತರನ್ನು ಒಳಗೊಂಡು ಇದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಪೆಟ್ಟಿಗೆಯೊಳಗೆ ವಿಸ್ಕಿಯ ಸಣ್ಣ ಮಾದರಿಗಳು ಮತ್ತು ಅವುಗಳನ್ನು ತಯಾರಿಸಲು ಬಳಸಿದ ಮೂಲ ವಸ್ತುಗಳನ್ನು ಇಡಲಾಗುತ್ತದೆ.

ಆದರೆ, ಬಾಹ್ಯಾಕಾಶಕ್ಕೆ ಯಾವುದೇ ಓಕ್ ಬ್ಯಾರಲ್‌ಗಳು ತೆರಳುವುದಿಲ್ಲ. ಭೂಮಿಯಲ್ಲಿ ಸಾಮಾನ್ಯವಾಗಿ ವಿಸ್ಕಿಯನ್ನು ದೊಡ್ಡದಾದ, ಓಕ್ ಮರದಿಂದ ನಿರ್ಮಿಸಿದ ತೂಕದ ಬ್ಯಾರಲ್‌ಗಳಲ್ಲಿ ಇಡಲಾಗುತ್ತದೆ. ಓಕ್ ಅತ್ಯಂತ ಗಟ್ಟಿಮುಟ್ಟಾದ ಮರವಾಗಿದೆ. ವಿಸ್ಕಿ ಆ ಬ್ಯಾರಲ್ ಒಳಗೆ 3, 12 ಅಥವಾ 18, ಹೀಗೆ ಹಲವಾರು ವರ್ಷಗಳ ಕಾಲ ಇಡಲ್ಪಡುತ್ತದೆ. ನಿಧಾನವಾಗಿ, ಆ ಮರದ ಬ್ಯಾರಲ್ ಪಾನೀಯಕ್ಕೆ ಅದರ ಬಣ್ಣ, ಪರಿಮಳ ಮತ್ತು ರುಚಿಯನ್ನು ನೀಡುತ್ತದೆ. ಇಂತಹ ಬ್ಯಾರಲ್ ಬಾಹ್ಯಾಕಾಶಕ್ಕೆ ಉಡಾವಣೆ ನಡೆಸಲು ಅತಿಯಾದ ತೂಕ ಹೊಂದಿರುತ್ತದೆ. ಆದ್ದರಿಂದ, ಸ್ಪಿರಿಟ್‌ನ ಸಣ್ಣ ಪ್ರಮಾಣಗಳನ್ನು ಉಪಗ್ರಹದೊಳಗೆ ಮರದ ತುಣುಕುಗಳನ್ನು ಸ್ಪರ್ಶಿಸುವಂತೆ ಇಡಲಾಗುತ್ತದೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ. ಇದು ಸಹಜವಾಗಿ ಹಳೆಯದಾಗುವ ಪ್ರಕ್ರಿಯೆಯನ್ನು ಸಣ್ಣ ಗಾತ್ರದಲ್ಲಿ ಮರು ರೂಪಿಸುತ್ತದೆ.

ವಿಸ್ಕಿ ನಿರ್ಮಾಣಕ್ಕೆ ಶತಮಾನಗಳ ಇತಿಹಾಸವಿದ್ದರೂ, ಸ್ಪಿರಿಟ್ ಮತ್ತು ಮರದ ನಡುವಿನ ರಾಸಾಯನಿಕ ಬದಲಾವಣೆಗಳನ್ನು ವಿಜ್ಞಾನಿಗಳು ಇನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ. ದ ಟೆಲಿಗ್ರಾಫ್ ವರದಿಯ ಪ್ರಕಾರ, ವಿಸ್ಕಿ ಹಳೆಯದಾಗುತ್ತಾ, ಮರ ಮತ್ತು ಗಾಳಿಯೊಡನೆ ಹೇಗೆ ವರ್ತಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳ ತಂಡ ಪ್ರಯತ್ನಿಸಲಿದೆ. ಡಿಸ್ಟಿಲರಿಗಳು ಈ ಪ್ರಕ್ರಿಯೆಯನ್ನು ‘ಉಸಿರಾಟ’ (ಬ್ರೀದಿಂಗ್) ಎಂದು ಕರೆಯುತ್ತವೆ.

ಇದರ ಅಧ್ಯಯನ ನಡೆಸಲು ಬಾಹ್ಯಾಕಾಶ ಒಂದು ಅಸಹಜವಾದ ಸ್ಥಳ. ಈ ಉಪಗ್ರಹ ಪ್ರತೀ 90 ನಿಮಿಷಗಳಿಗೆ ಭೂಮಿಯ ಸುತ್ತಲೂ ಒಂದು ಪರಿಭ್ರಮಣೆ ಪೂರ್ಣಗೊಳಿಸುತ್ತದೆ. ಅಂದರೆ, ಪ್ರತಿದಿನವೂ ಇದು ಬಹುತೇಕ 16 ಬಾರಿ ಭೂಮಿಯ ಸುತ್ತ ಸಾಗಲಿದೆ. ಪ್ರತಿಯೊಂದು ಬಾರಿ ಸಾಗುವಾಗಲೂ ಉಪಗ್ರಹಕ್ಕೆ ಪ್ರಕಾಶಮಾನವಾದ ಸೂರ್ಯನ ಬೆಳಕು ಮತ್ತು ಭೂಮಿಯ ನೆರಳು ಎದುರಾಗುತ್ತವೆ. ಇನ್ನು ಬಾಹ್ಯಾಕಾಶದ ತಾಪಮಾನ -150 ಡಿಗ್ರಿ ಸೆಲ್ಸಿಯಸ್‌ನಿಂದ 200 ಡಿಗ್ರಿ ಸೆಲ್ಸಿಯಸ್ ತನಕ ಬದಲಾಗುತ್ತಿರುತ್ತದೆ ಎಂದು ಬೈಲೆಟ್ ಹೇಳಿದ್ದಾರೆ. ಈ ತಾಪಮಾನಗಳು ಭೂಮಿಯ ಯಾವುದೇ ಚಳಿಗಾಲಕ್ಕಿಂತಲೂ ಅತ್ಯಂತ ಹೆಚ್ಚು ತಣ್ಣಗೆ ಮತ್ತು ಕುದಿಯುವ ನೀರಿನ ದುಪ್ಪಟ್ಟು ಬಿಸಿಯಾಗಿವೆ! ಆದರೆ, ಬಾಹ್ಯಾಕಾಶ ನೌಕೆಯೊಳಗೆ ಒಯ್ದಿರುವ ಮಾದರಿಗಳಿಗೆ ಸಮಾಧಾನಕರ ತಾಪಮಾನ ಲಭಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಷ್ಟಾದರೂ, ಭೂಮಿಗೆ ಹೋಲಿಸಿದರೆ ಇಲ್ಲಿ ಮರ ಕ್ಷಿಪ್ರವಾಗಿ ಬಿಸಿಗೆ ಹಿಗ್ಗಿ, ತಂಪಿಗೆ ಸಂಕೋಚಿಸಬಹುದು. ಇನ್ನು ಕಕ್ಷೆಯಲ್ಲಿರುವ ವಸ್ತುಗಳು ಬಹುತೇಕ ತೂಕರಹಿತವಾಗಿ ತೇಲುತ್ತಿರುತ್ತವೆ. ವಿಜ್ಞಾನಿಗಳು ಇದನ್ನು ಸೂಕ್ಷ್ಮ ಗುರುತ್ವಾಕರ್ಷಣೆ ಎಂದು ಕರೆಯುತ್ತಾರೆ.

ಬಾಹ್ಯಾಕಾಶದಲ್ಲಿ ವಿಸ್ಕಿ ಭೂಮಿಗಿಂತ ಬೇಗನೆ ಹಳೆಯದಾಗುವಂತೆ ಮಾಡಲು ಸಾಧ್ಯವೇ? ವಿಜ್ಞಾನಿಗಳ ತಂಡ ಹೇಗೆ ಅದರ ರುಚಿ ಮತ್ತು ಗುಣಮಟ್ಟ ಬದಲಾಗುತ್ತದೆ ಎನ್ನುವುದನ್ನೂ ಅಧ್ಯಯನ ಮಾಡಲಿದ್ದಾರೆ. ಬೈಲೆಟ್ ಅವರು ವಿಸ್ಕಿ ಬೇಗ ಹಳೆಯದಾಗುವ ಮತ್ತು ಆಸಕ್ತಿಕರ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಮುಂದೊಂದು ದಿನ ಇದು ಬಾಹ್ಯಾಕಾಶದಲ್ಲಿ ಹಳೆಯದಾದ ವಿಸ್ಕಿ ಎನ್ನುವ ಹೊಸ ವಿಧಕ್ಕೂ ಚಾಲನೆ ನೀಡಬಹುದು! ಇದು ಬಲವಾದ, ಉತ್ತಮ ಸ್ವಾದ ಹೊಂದಿರಬಹುದು ಮತ್ತು ಹಲವು ಪದರಗಳ ರುಚಿ ಹೊಂದಿರಬಹುದು ಎಂದು ಬೈಲೆಟ್ ನಿರೀಕ್ಷಿಸಿದ್ದಾರೆ. ಶತಮಾನಗಳ ಅನುಭವ ಹೊಂದಿರುವ ಸ್ಕಾಟ್ಲೆಂಡ್ ವಿಸ್ಕಿ ತಜ್ಞರು ಈ ಸಂಶೋಧನೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.

ಕಕ್ಷೆಯಲ್ಲಿರುವ ಪಾನೀಯದ ರುಚಿಯನ್ನು ಯಾರಾದರೂ ಹೇಗೆ ನೋಡಲು ಸಾಧ್ಯ? ಉದ್ಯಮ ವರದಿಗಳ ಪ್ರಕಾರ, ಈ ತಂಡ ಗ್ಲಾಸ್ಗೋದಲ್ಲಿ ನಿರ್ಮಿಸಿರುವ ಒಂದು ಕೃತಕ ನಾಲಿಗೆಯನ್ನು ಬಳಸಲಿದೆ. ಈ ನಾಲಿಗೆ ನ್ಯಾನೋಫೋಟೋನಿಕ್ಸ್ ಮೂಲಕ ಕಾರ್ಯಾಚರಿಸುತ್ತದೆ. ಇದು ಬೆಳಕು ಮತ್ತು ಅತ್ಯಂತ ಸೂಕ್ಷ್ಮವಾದ ರಚನೆಗಳನ್ನು ಬಳಸಿಕೊಂಡು, ವಿಸ್ಕಿ ಮಾದರಿಯಲ್ಲಿನ ರಾಸಾಯನಿಕ ಬದಲಾವಣೆಗಳನ್ನು ಗುರುತಿಸಲಿದೆ.

ಇದು ಗಮನಿಸುವ ಒಂದು ಗುಂಪಿನ ರಾಸಾಯನಿಕಗಳನ್ನು ಟರ್ಪೆಂಟ್ಸ್ ಎಂದು ಕರೆಯಲಾಗುತ್ತದೆ. ಇವು ಸಸ್ಯಗಳು ಮತ್ತು ಮರಗಳಲ್ಲಿ ಸಾಮಾನ್ಯವಾಗಿ ಉಂಟಾಗುತ್ತವೆ. ಇವು ಪೈನ್‌ಗೆ ಅದರ ಶುದ್ಧ ಪರಿಮಳ ಮತ್ತು ನಿಂಬೆಯ ಸಿಪ್ಪೆಗೆ ಅದರ ಸಿಟ್ರಸ್ ಪರಿಮಳವನ್ನು ನೀಡುತ್ತವೆ. ಇನ್ನು ವಿಸ್ಕಿಯಲ್ಲಿ ಅವು ಪರಿಮಳ ಮತ್ತು ರುಚಿಯನ್ನು ಬೆರೆಸುತ್ತವೆ.

ವಾಸ್ತವವಾಗಿ ವಿಸ್ಕಿ ಎನ್ನುವುದು ಬಾಟಲಿಯಲ್ಲಿ ರಸಾಯನಶಾಸ್ತ್ರವನ್ನು ತುಂಬಿಸಿದಂತೆ. ಆದ್ದರಿಂದಲೇ, ಪ್ರಸ್ತುತ ಯೋಜನೆ ಕೇವಲ ಪಾನೀಯಕ್ಕೆ ಸೀಮಿತವಾಗಿಲ್ಲ. ವಿಸ್ಕಿಯು ಎಥೆನಾಲ್ ಎನ್ನುವ ಬಹಳಷ್ಟು ಔಷಧಗಳ ತಯಾರಿಕೆಯಲ್ಲಿ ಬಳಕೆಯಾಗುವ ಆಲ್ಕೋಹಾಲ್ ಅನ್ನು ಒಳಗೊಂಡಿದೆ. ಎಥೆನಾಲನ್ನು ಬಾಹ್ಯಾಕಾಶದಲ್ಲಿ ಹೇಗೆ ತಯಾರಿಸಬಹುದು ಅಥವಾ ಪ್ರತ್ಯೇಕಿಸಬಹುದು ಎನ್ನುವುದನ್ನು ಈ ಯೋಜನೆ ಅಧ್ಯಯನ ಮಾಡಲಿದೆ. ಹಿಂದಿನ ಸಂಶೋಧನೆಗಳ ಪ್ರಕಾರ, ಸೂಕ್ಷ್ಮ ಗುರುತ್ವಾಕರ್ಷಣೆ ಕಡಿಮೆ ಅಶುದ್ಧತೆಗಳನ್ನು ಹೊಂದಿರುವ ದೊಡ್ಡ ರಾಸಾಯನಿಕ ಹರಳುಗಳನ್ನು ಬೆಳೆಯಲು ಸೂಕ್ತವಾಗಿದೆ ಎಂದು ಬೈಲೆಟ್ ಹೇಳಿದ್ದಾರೆ. ಜೀವಿಗಳ ದೇಹದೊಳಗಿರುವ ಘಟಕಗಳಾದ ಪ್ರೊಟೀನ್‌ಗಳು ಸಹ ವಿವಿಧ ಆಕಾರಗಳನ್ನು ತಳೆಯಬಲ್ಲವು. ಬಾಹ್ಯಾಕಾಶದಲ್ಲಿ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ. ವಿಸ್ಕಿ ಒಂದು ಪರಿಚಿತವಾದ ಮತ್ತು ಚೆನ್ನಾಗಿ ಅರ್ಥ ಮಾಡಿಕೊಳ್ಳಲಾದ ವಸ್ತುವಾಗಿರುವುದರಿಂದ, ಬಾಹ್ಯಾಕಾಶದ ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಇದು ಸೂಕ್ತ ಉದಾಹರಣೆಯಾಗಿದೆ. ದೀರ್ಘಾವಧಿಯಲ್ಲಿ ಭೂಮಿಯಲ್ಲಿ ತಯಾರಿಸಲು ಕಷ್ಟಕರವಾಗುವ, ಹೆಚ್ಚಿನ ಮೌಲ್ಯದ ಔಷಧಗಳು ಮತ್ತು ಇತರ ವಸ್ತುಗಳನ್ನು ಬಾಹ್ಯಾಕಾಶದಲ್ಲೇ ತಯಾರಿಸಲು ಕಕ್ಷೆಯಲ್ಲಿ ಕಾರ್ಖಾನೆ ನಿರ್ಮಿಸುವುದು ಭವಿಷ್ಯದ ಗುರಿಯಾಗಿದೆ.

ಸ್ಪೇಸ್‌ಎಕ್ಸ್ ಸಂಸ್ಥೆಯ ಪೂರೈಕೆ ಹಾರಾಟದ ಮೂಲಕ ಕ್ಯೂಬ್‌ಸ್ಯಾಟ್ 2028ರಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ಅದನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಅಳವಡಿಸಿರುವ ಜಪಾನ್‌ನ ಪ್ರಯೋಗಾಲಯವಾದ ಕಿಬೋದಿಂದ ಬಿಡುಗಡೆಗೊಳಿಸಲಾಗುತ್ತದೆ. ಇದು ಬಳಿಕ ಐದು ವರ್ಷಗಳ ಕಾಲ ಭೂಮಿಯ ಪರಿಭ್ರಮಣೆ ನಡೆಸುತ್ತದೆ. ವಿಸ್ಕಿ ಸ್ಕಾಟ್ಲೆಂಡ್‌ಗೆ ಬಹುಮುಖ್ಯವಾಗಿದ್ದು, ಜಪಾನ್ ಮಾದರಿಗಳನ್ನು ಪೂರೈಸುವ ನಿರೀಕ್ಷೆಯಿದೆ. ಆದರೆ, ಇದಕ್ಕೆ ಬೇಕಾದ ಕಂಪೆನಿಗಳನ್ನು ಇನ್ನೂ ಆರಿಸಲಾಗಿಲ್ಲ.

ಮೊದಲ ಉಪಗ್ರಹ ಭೂಮಿಗೆ ಮರಳುವುದಿಲ್ಲ. ಆದರೆ, ಹೂಡಿಕೆದಾರರು ಅಥವಾ ಬೇರೆ ಸಹಯೋಗಿಗಳು ಲಭಿಸಿದರೆ, ತಮ್ಮ ತಂಡ ಪೂರ್ಣ ಗಾತ್ರದ ಬ್ಯಾರೆಲ್ ಸೇರಿದಂತೆ, ಸಂಪೂರ್ಣ ವಿಸ್ಕಿ ತಯಾರಿಕಾ ವ್ಯವಸ್ಥೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಉತ್ಸುಕವಾಗಿದೆ ಎಂದು ಬೈಲೆಟ್ ಸ್ಕೈನ್ಯೂಸ್‌ಗೆ ಹೇಳಿದ್ದಾರೆ. ಆಗ, ಅಂದಾಜು ಒಂದು ಲೀಟರ್ ಪ್ರಮಾಣದ ವಿಸ್ಕಿ ಮೂರರಿಂದ ಐದು ವರ್ಷಗಳಲ್ಲಿ ಭೂಮಿಗೆ ಮರಳಬಹುದು ಎಂದು ಅವರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಿರೀಶ್ ಲಿಂಗಣ್ಣ

contributor

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ