ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಂಸ್ಥೆಯೂ ತನ್ನ ಮಿತಿಯೊಳಗೆ ಕೆಲಸ ಮಾಡುತ್ತದೆ. ಸರಕಾರ ಆಡಳಿತ ನಡೆಸುತ್ತದೆ. ಸಂಸತ್ತು ಕಾನೂನು ಮಾಡುತ್ತದೆ. ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ. ಆದರೆ ಇವೆಲ್ಲದರ ಮೇಲೆ ಕೊನೆಯ ಕಾವಲುಗಾರ ಸುಪ್ರೀಂ ಕೋರ್ಟ್. ಅದರ ಧ್ವನಿಯೇ ನಾಗರಿಕನ ಕೊನೆಯ ಆಶ್ರಯ. ಅದರ ಕಾರಣಕ್ಕೇ ನ್ಯಾಯಾಲಯದ ಪ್ರತಿಯೊಂದು ಕ್ರಮವೂ ಹೆಚ್ಚಿನ ಪರಿಶೀಲನೆಗೆ ಒಳಗಾಗುತ್ತದೆ. ಅದು ಸಹಜ. ಅದು ಅಗತ್ಯ. ಅದು ಪ್ರಜಾಪ್ರಭುತ್ವದ ಆರೋಗ್ಯ. ವಿಶ್ವಾಸದ ಅಡಿಪಾಯ. ನ್ಯಾಯಾಂಗದ ಸ್ವಾತಂತ್ರ್ಯ ಎಂದರೆ ಪ್ರಶ್ನೆಗಳಿಂದ ಮುಕ್ತವಾಗಿರುವುದಲ್ಲ. ಪ್ರಶ್ನೆಗಳಿಗೆ ಉತ್ತರಿಸುವ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು.

ಒಂದು ನ್ಯಾಯಾಲಯದ ಘನತೆ ಅದರ ಕಟ್ಟಡದಲ್ಲಲ್ಲ, ಅದರ ಧ್ವನಿಯಲ್ಲಿದೆ. ಅದರ ಪಾರದರ್ಶಕತೆಯಲ್ಲಿದೆ. ಅದರ ಮುಂದೆ ಸಾಮಾನ್ಯ ನಾಗರಿಕನಿಗೂ, ಶ್ರೀಮಂತರಿಗೂ, ಅಧಿಕಾರಿ ವರ್ಗಕ್ಕೂ ಒಂದೇ ಕಾನೂನು ಅನ್ವಯಿಸುತ್ತದೆ ಎಂಬ ನಂಬಿಕೆಯಲ್ಲಿದೆ.

ಆದರೆ ಕಳೆದ ವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಒಂದು ವಿಚಾರಣೆ ಈ ಮೂಲಭೂತ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿದೆ. ನ್ಯಾಯಾಲಯದ ಧ್ವನಿ ಯಾರಿಗಾಗಿ ಕೇಳಿಸುತ್ತದೆ? ಯಾರಿಗಾಗಿ ಮ್ಯೂಟ್ ಆಗುತ್ತದೆ?

ಮೇಧಾ ರೂಪಂ ಪ್ರಕರಣ: ಪ್ರಶ್ನಾರ್ಥಕವಾದ ವಿಚಾರಣೆಯ ವಿಧಾನ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಸುತ್ತುವರಿದಿರುವ ಚುನಾವಣಾ ವಿವಾದ ತೀವ್ರಗೊಳ್ಳುತ್ತಿರುವ ನಡುವೆಯೇ, ಅವರ ಪುತ್ರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಂ ಅವರ ಪ್ರಕರಣವೂ ಹೊಸ ವಿವಾದಕ್ಕೆ ಕಾರಣವಾಗಿದೆ.

ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೇಧಾ ರೂಪಂ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ಯಾವ ರೀತಿಯಲ್ಲಿ ಲಿಸ್ಟ್ ಮಾಡಲಾಯಿತು ಎಂಬುದರ ಕುರಿತು ವಕೀಲರ ಸಂಘವೊಂದು ನೇರವಾಗಿ ಮುಖ್ಯ ನ್ಯಾಯಮೂರ್ತಿಯವರಿಗೆ ಆಕ್ಷೇಪ ದಾಖಲಿಸಿದೆ.

ಈ ಪ್ರಕರಣದ ಕೇಂದ್ರಬಿಂದು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಹಾಗೂ ಕಾರ್ಯಕರ್ತೆ ಆಕೃತಿ ಚೌಧರಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಿದ್ದ ಪ್ರಕರಣ. ನೊಯ್ಡಾದಲ್ಲಿ ಕಾರ್ಮಿಕರು ಹೆಚ್ಚಿನ ವೇತನಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಎಪ್ರಿಲ್‌ನಲ್ಲಿ ಆಕೃತಿ ಚೌಧರಿಯನ್ನು ಬಂಧಿಸಲಾಗಿತ್ತು. ಅವರನ್ನು ಓSಂ ಅಡಿಯಲ್ಲಿ ತಡೆಬಂಧನದಲ್ಲಿಡುವ ಆದೇಶಕ್ಕೆ ನೊಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಂ ಸಹಿ ಮಾಡಿದ್ದರು. ಸುಮಾರು ಐದು ತಿಂಗಳ ಕಾಲ ಅವರು ತಡೆಬಂಧನದಲ್ಲಿದ್ದರು.

ಅಲಹಾಬಾದ್ ಹೈಕೋರ್ಟ್‌ನಿಂದ ಕಠಿಣ ಟೀಕೆ

ಸೆಪ್ಟಂಬರ್ 2ರಂದು ಅಲಹಾಬಾದ್ ಹೈಕೋರ್ಟ್ ಈ ಪ್ರಕರಣವನ್ನು ಪರಿಶೀಲಿಸಿ ಆ ಬಂಧನವನ್ನು ರದ್ದುಪಡಿಸಿತು ಮತ್ತು ಅತ್ಯಂತ ಕಠಿಣ ಭಾಷೆಯಲ್ಲಿ ಉತ್ತರ ಪ್ರದೇಶ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿತು. ನೊಯ್ಡಾ ಆಡಳಿತದ ಕ್ರಮಗಳ ಕುರಿತು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಾಲಯ ಹೇಳಿದ್ದೇನೆಂದರೆ ಬಂಧನಕ್ಕೆ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳಿಲ್ಲ. ಬಂಧನ ಕಾನೂನುಬಾಹಿರವಾಗಿದ್ದು, ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿ ಸಂವಿಧಾನಕ್ಕೆ ವಿಧೇಯರಾಗಿರಬೇಕಾದ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಿಷ್ಠೆ ಸರಕಾರಕ್ಕಲ್ಲ, ಸಂವಿಧಾನಕ್ಕಿರಬೇಕು. ಅಧಿಕಾರಿಗಳ ಇಂತಹ ವರ್ತನೆ ಮುಂದುವರಿದರೆ ರಾಜ್ಯ ‘Orwellian Dystopia’ ಆಗುವ ಅಪಾಯವಿದೆ. ಅಷ್ಟೇ ಅಲ್ಲ, ಆಕೃತಿ ಚೌಧರಿಗೆ ರೂ. 5 ಲಕ್ಷ ಪರಿಹಾರವನ್ನು ಜಿಲ್ಲಾಧಿಕಾರಿಯ ವೇತನದಿಂದಲೇ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿತು. ಇದು ಸಾಮಾನ್ಯ ಟೀಕೆಯಲ್ಲ. ನ್ಯಾಯಾಲಯದ ದೃಷ್ಟಿಯಲ್ಲಿ ಅಧಿಕಾರ ದುರುಪಯೋಗದ ವಿರುದ್ಧದ ಗಂಭೀರ ಎಚ್ಚರಿಕೆ. ಆದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆದದ್ದೇ ಬೇರೆ.

ಮೇಧಾ ರೂಪಂ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್.ಕೆ. ಸಿಂಗ್ ಅವರ ಪೀಠವು ಹೈಕೋರ್ಟ್‌ನ ಕಠಿಣ ಟೀಕೆಗಳು ಮತ್ತು ಪರಿಹಾರ ಮೊತ್ತ ವಸೂಲಿ ಮಾಡುವ ನಿರ್ದೇಶನದ ಜಾರಿಗೆ ತಡೆ ನೀಡಿತು. ಆದರೆ ಮೊದಲು ಹೊರಬಂದ ಆದೇಶದಿಂದ ಸಂಪೂರ್ಣ ಹೈಕೋರ್ಟ್ ತೀರ್ಪು ಸ್ಥಗಿತಗೊಂಡಂತೆ ಗೊಂದಲ ಉಂಟಾಯಿತು. ನಂತರ ಸುಪ್ರೀಂ ಕೋರ್ಟ್ ‘ವಿದ್ಯಾರ್ಥಿನಿಯ NSA ಬಂಧನ ರದ್ದುಪಡಿಸಿದ ಭಾಗಕ್ಕೆ ತಡೆ ಇಲ್ಲ. ಜಿಲ್ಲಾಧಿಕಾರಿಯ ವಿರುದ್ಧದ ಕಠಿಣ ಟೀಕೆಗಳು ಹಾಗೂ ರೂ. 5 ಲಕ್ಷ ವಸೂಲಾತಿ ನಿರ್ದೇಶನಕ್ಕೆ ಮಾತ್ರ ತಾತ್ಕಾಲಿಕ ತಡೆ ಇದೆ’ ಎಂದು ಸ್ಪಷ್ಟಪಡಿಸಿತು.

ಅಂದರೆ ಮೂಲ ಬಂಧನ ರದ್ದಾಗಿಯೇ ಉಳಿದಿದೆ. ಆದರೆ ಪ್ರಶ್ನೆಗಳನ್ನು ಎಬ್ಬಿಸಿದ್ದು ಆದೇಶವಲ್ಲ, ವಿಚಾರಣೆಯ ವಿಧಾನ. ಈ ಪ್ರಕರಣದಲ್ಲಿ ಎರಡು ಸಂಗತಿಗಳು ಕಾನೂನು ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾದವು. ಮೊದಲನೆಯದಾಗಿ ಪ್ರಕರಣ ಯಾವ ಪೀಠಕ್ಕೆ ಹೋಯಿತು? ಕೆಲವು ಹಿರಿಯ ವಕೀಲರು ಹಾಗೂ ಕಾನೂನು ವಿಶ್ಲೇಷಕರು ಈ ಪ್ರಕರಣವನ್ನು ತಡೆಬಂಧನ ಸಂಬಂಧಿತ ವಿಷಯಗಳನ್ನು ಸಾಮಾನ್ಯವಾಗಿ ವಿಚಾರಿಸುವ ಪೀಠಕ್ಕೆ ಬದಲಾಗಿ ಬೇರೆ ಪೀಠಕ್ಕೆ ಪಟ್ಟಿ ಮಾಡಲಾಗಿದೆ ಎಂದು ಪ್ರಶ್ನೆ ಎತ್ತಿದ್ದಾರೆ. ಇಂತಹ ವಿಶೇಷ ಬದಲಾವಣೆ ಹೇಗೆ ನಡೆಯಿತು ಎಂಬ ಕುರಿತು ಸ್ಪಷ್ಟತೆ ಬೇಕೆಂದು ಅವರು ಒತ್ತಾಯಿಸಿದ್ದಾರೆ.

Lawyers’ Association for Constitution (LAFC), ಮೇಧಾ ರೂಪಂ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಈ ಪೀಠವೇ ವಿಚಾರಣೆಗೆ ತೆಗೆದುಕೊಂಡಿರುವ ವಿಧಾನವನ್ನು ಪ್ರಶ್ನಿಸಿದೆ. LiveLaw ವರದಿಯ ಪ್ರಕಾರ, ನೊಯ್ಡಾ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಇತರ ತಡೆಬಂಧನ ಪ್ರಕರಣಗಳು ಈಗಾಗಲೇ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠದ ಮುಂದೆ ಬಾಕಿ ಇದ್ದವು. ಜುಲೈ 13ರ ಅಧಿಕೃತ ಪಟ್ಟಿಯಲ್ಲಿಯೂ ಈ ಪ್ರಕರಣಗಳು ಆ ಪೀಠದ ಮುಂದೆ ಇರುವುದಾಗಿ ವರದಿಯಾಗಿದೆ. ಹೀಗಿರುವಾಗ ಮೇಧಾ ರೂಪಂ ಅವರ ಅರ್ಜಿ ಬೇರೆ ಪೀಠದ ಮುಂದೆ ಹೇಗೆ ಪಟ್ಟಿಯಾಯಿತು ಎಂಬುದೇ ಈಗ ಪ್ರಶ್ನೆಯಾಗಿದೆ.

ಎರಡನೆಯದಾಗಿ ವಿಚಾರಣೆ ನಡೆಯುತ್ತಿದ್ದಾಗ ವೀಡಿಯೊ ಕಾನ್ಫರೆನ್ಸ್ ಪ್ರಸಾರದ ಆಡಿಯೊವನ್ನು ನ್ಯಾಯಾಲಯದ ನಿರ್ದೇಶನದಂತೆ ಮ್ಯೂಟ್ ಮಾಡಲಾಯಿತು. ಮಾಧ್ಯಮ ಪ್ರತಿನಿಧಿಗಳಿಗೆ ವಿಚಾರಣೆಯನ್ನು ಕೇಳುವ ಅವಕಾಶ ಇರಲಿಲ್ಲ. ಈ ಕುರಿತು ಹಲವಾರು ಕಾನೂನು ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳು ಪ್ರಶ್ನೆ ಎತ್ತಿವೆ. ತೆರೆದ ನ್ಯಾಯಾಲಯ ಎಂಬ ತತ್ವದಲ್ಲಿ ಪಾರದರ್ಶಕತೆ ಅತ್ಯಂತ ಪ್ರಮುಖ. ಆಡಿಯೊ ಮ್ಯೂಟ್ ಮಾಡುವುದು ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯಲ್ಲಿರಬಹುದು. ಆದರೆ ಅದು ಸಾರ್ವಜನಿಕ ವಿಶ್ವಾಸದ ಪರೀಕ್ಷೆಯನ್ನೂ ಎದುರಿಸಬೇಕು.

ಈ ಘಟನೆ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಗಂಭೀರವಾದ ಪ್ರಶ್ನೆಯನ್ನು ಮೂಡಿಸುತ್ತದೆ. ಮ್ಯೂಟ್ ಆದದ್ದು ಕೇವಲ ಮೈಕ್ರೋಫೋನ್ ಆಗಿತ್ತೇ? ಅಥವಾ ಪ್ರಜಾಪ್ರಭುತ್ವದ ಕೆಲವು ಪ್ರಮುಖ ಪ್ರಶ್ನೆಗಳ ಎದುರು ನ್ಯಾಯಾಂಗದ ಧ್ವನಿಯೇ ಅಡಗಿಹೋಯಿತೆ? ಇದು ಅನೇಕ ನಾಗರಿಕರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಏಕೆಂದರೆ ಇದು ಕೇವಲ ನೊಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಂ ಅವರ ಪ್ರಕರಣ ಕುರಿತು ಮಾತ್ರವಲ್ಲ. ಇದು ನ್ಯಾಯಾಂಗದ ಪಾರದರ್ಶಕತೆ, ಅಧಿಕಾರದ ಜವಾಬ್ದಾರಿ ಮತ್ತು ಸಂವಿಧಾನದ ರಕ್ಷಣೆಯ ಬಗ್ಗೆ ಕೇಳಬೇಕಾದ ಪ್ರಶ್ನೆಯಾಗಿದೆ.

ಅಲ್ಲದೆ ಇದು ಕೇವಲ ತಾಂತ್ರಿಕ ದೋಷದ ಪ್ರಶ್ನೆಯಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಗಳನ್ನು ಯಾವ ಪೀಠಕ್ಕೆ ಹಂಚಲಾಗುತ್ತದೆ, ಯಾವ ಪ್ರಕರಣಕ್ಕೆ ಎಷ್ಟು ತುರ್ತು ನೀಡಲಾಗುತ್ತದೆ ಮತ್ತು ಯಾವ ಅರ್ಜಿ ಯಾವ ಸಮಯದಲ್ಲಿ ವಿಚಾರಣೆಗೆ ಬರುತ್ತದೆ ಎಂಬುದು ನ್ಯಾಯಾಂಗದ ಪಾರದರ್ಶಕತೆಯ ಪ್ರಮುಖ ಭಾಗ.

ಜ್ಞಾನೇಶ್ ಕುಮಾರ್ ಅವರ ಪುತ್ರಿಯಾಗಿರುವುದರಿಂದ ವಿಶೇಷ ಸೌಲಭ್ಯವೇ?

LAFC ಮಾಡಿರುವ ಪ್ರಮುಖ ಆರೋಪವೇನೆಂದರೆ, ಮೇಧಾ ರೂಪಂ ಅವರು ದೇಶದ ಅತ್ಯಂತ ಪ್ರಭಾವಶಾಲಿ ಅಧಿಕಾರಿಗಳಲ್ಲೊಬ್ಬರಾದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪುತ್ರಿಯಾಗಿರುವುದರಿಂದ ಈ ಪ್ರಕರಣಕ್ಕೆ ವಿಶೇಷ ಆದ್ಯತೆ ಅಥವಾ ವಿಶೇಷ ಪರಿಗಣನೆ ದೊರೆತಿರಬಹುದು ಎಂಬುದು.

ಈ ಆರೋಪವನ್ನು LAFCಯೇ ಮಾಡಿದೆ, ಇದನ್ನು ಸ್ವತಂತ್ರವಾಗಿ ಸಾಬೀತಾದ ಸಂಗತಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಇಂತಹ ಪ್ರಶ್ನೆಗಳು ಸಾರ್ವಜನಿಕವಾಗಿ ಏಕೆ ಮೂಡುತ್ತಿವೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಂಗದ ಮೇಲೆ ಸಾರ್ವಜನಿಕ ನಂಬಿಕೆ ಇರುವ ವ್ಯವಸ್ಥೆಯಲ್ಲಿ ನ್ಯಾಯ ದೊರಕುವುದಷ್ಟೇ ಅಲ್ಲ, ನ್ಯಾಯ ದೊರಕುವ ಪ್ರಕ್ರಿಯೆಯೂ ಪಾರದರ್ಶಕವಾಗಿ ಕಾಣಬೇಕು.

ಒಬ್ಬ ಸಾಮಾನ್ಯ ನಾಗರಿಕನ ಪ್ರಕರಣ ಮತ್ತು ಅತ್ಯಂತ ಪ್ರಭಾವಶಾಲಿ ಅಧಿಕಾರಿಯ ಕುಟುಂಬಕ್ಕೆ ಸೇರಿದ ವ್ಯಕ್ತಿಯ ಪ್ರಕರಣ ಒಂದೇ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆಯೇ ಎಂಬ ಅನುಮಾನವೇ ಮೂಡದಂತೆ ವ್ಯವಸ್ಥೆ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲೇ ನ್ಯಾಯಾಂಗದ ವಿಶ್ವಾಸಾರ್ಹತೆ ಅಡಗಿದೆ. ಇಲ್ಲಿ ಮುಖ್ಯ ಅಂಶವೇನೆಂದರೆ ಈ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಸಾರ್ವಜನಿಕ ವಿವರಣೆ ನೀಡಿಲ್ಲ. ಪಾರದರ್ಶಕತೆಯ ಕೊರತೆಯೇ ಪ್ರಶ್ನೆಗಳಿಗೆ ಕಾರಣವಾಗಿದೆ. ಅಲ್ಲದೆ ಈ ರೀತಿ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಪಾರದರ್ಶಕತೆ ಕುರಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಹಲವು ಗುಮಾನಿಗೆ ಕಾರಣವೂ ಆಗಿದೆ.

ಚುನಾವಣಾ ಆಯೋಗ ನೇಮಕಾತಿ

2023ರಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ನೇಮಕಾತಿಗೆ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿ ಇರಬೇಕು ಎಂದು ಮಹತ್ವದ ತೀರ್ಪು ನೀಡಿತ್ತು. ನಂತರ ಸಂಸತ್ತು ಹೊಸ ಕಾನೂನು ತಂದು ಮುಖ್ಯ ನ್ಯಾಯಮೂರ್ತಿಯ ಬದಲಿಗೆ ಕೇಂದ್ರ ಸಚಿವರನ್ನು ಸಮಿತಿಯಲ್ಲಿ ಸೇರಿಸಿತು. ಈ ಕಾನೂನಿನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಇನ್ನೂ ಅಂತಿಮವಾಗಿ ಇತ್ಯರ್ಥವಾಗಿಲ್ಲ. ಈ ನಡುವೆ ನೇಮಕಾತಿಗಳು ಮುಂದುವರಿದಿವೆ. ಸಾಂವಿಧಾನಿಕ ಪ್ರಶ್ನೆ ಬಾಕಿಯೇ ಉಳಿದಿದೆ.

ಸಂವಿಧಾನದ ಆತ್ಮವನ್ನು ಕಾಪಾಡುವ ತೀರ್ಪಿನ ಭವಿಷ್ಯವನ್ನು ಇಷ್ಟು ಕಾಲ ಅನಿಶ್ಚಿತತೆಯಲ್ಲಿ ಬಿಡಬೇಕೇ?

ಚುನಾವಣಾ ಪಾರದರ್ಶಕತೆ ಕುರಿತ ಪ್ರಕರಣಗಳು ಮತದಾನದ ಪಾರದರ್ಶಕತೆ ಕುರಿತು ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇವೆ. ಅವುಗಳಲ್ಲಿ ಚುನಾವಣಾ ದಾಖಲೆಗಳಿಗೆ ಪ್ರವೇಶ, ಫಾರ್ಮ್-17 ಸಂಬಂಧಿತ ಮಾಹಿತಿ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಎದ್ದಿರುವ ಪ್ರಶ್ನೆಗಳು ಸೇರಿವೆ. ಈ ಪ್ರಕರಣಗಳ ಬಗ್ಗೆ ನಾಗರಿಕ ಸಮಾಜದಲ್ಲಿ ತ್ವರಿತ ಸ್ಪಷ್ಟತೆಗಾಗಿ ಬೇಡಿಕೆ ಕೇಳಿಬರುತ್ತಿದೆ.

ಸಿಸಿಟಿವಿ ಮತ್ತು ಚುನಾವಣಾ ದಾಖಲೆಗಳು

ಚುನಾವಣಾ ಆಯೋಗವು ಕೆಲವು ಸಂದರ್ಭಗಳಲ್ಲಿ ಸಿಸಿಟಿವಿ ದೃಶ್ಯಾವಳಿ ಹಾಗೂ ಕೆಲವು ದಾಖಲೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಯಂತ್ರಿಸುವ ನಿಯಮಗಳಲ್ಲಿ ಬದಲಾವಣೆ ತಂದಿದೆ. ಈ ವಿಷಯಗಳೂ ನ್ಯಾಯಾಲಯದ ಗಮನಕ್ಕೆ ಬಂದಿವೆ. ಇಲ್ಲಿಯೂ ಸಾರ್ವಜನಿಕರ ನಿರೀಕ್ಷೆ ಒಂದೇ. ಅದೆಂದರೆ ಪಾರದರ್ಶಕತೆ ಕುರಿತು ನ್ಯಾಯಾಂಗದ ಸ್ಪಷ್ಟ ಧ್ವನಿ ಕೇಳಿಸಬೇಕು.

ನ್ಯಾಯಾಲಯ ಮೌನವಾಗಿದ್ದರೆ ಯಾರು ಮಾತನಾಡುತ್ತಾರೆ?

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಸಂಸ್ಥೆಯೂ ತನ್ನ ಮಿತಿಯೊಳಗೆ ಕೆಲಸ ಮಾಡುತ್ತದೆ. ಸರಕಾರ ಆಡಳಿತ ನಡೆಸುತ್ತದೆ. ಸಂಸತ್ತು ಕಾನೂನು ಮಾಡುತ್ತದೆ. ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ. ಆದರೆ ಇವೆಲ್ಲದರ ಮೇಲೆ ಕೊನೆಯ ಕಾವಲುಗಾರ ಸುಪ್ರೀಂ ಕೋರ್ಟ್. ಅದರ ಧ್ವನಿಯೇ ನಾಗರಿಕನ ಕೊನೆಯ ಆಶ್ರಯ. ಅದರ ಕಾರಣಕ್ಕೇ ನ್ಯಾಯಾಲಯದ ಪ್ರತಿಯೊಂದು ಕ್ರಮವೂ ಹೆಚ್ಚಿನ ಪರಿಶೀಲನೆಗೆ ಒಳಗಾಗುತ್ತದೆ. ಅದು ಸಹಜ. ಅದು ಅಗತ್ಯ. ಅದು ಪ್ರಜಾಪ್ರಭುತ್ವದ ಆರೋಗ್ಯ. ವಿಶ್ವಾಸದ ಅಡಿಪಾಯ. ನ್ಯಾಯಾಂಗದ ಸ್ವಾತಂತ್ರ್ಯ ಎಂದರೆ ಪ್ರಶ್ನೆಗಳಿಂದ ಮುಕ್ತವಾಗಿರುವುದಲ್ಲ. ಪ್ರಶ್ನೆಗಳಿಗೆ ಉತ್ತರಿಸುವ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು.

ಒಂದು ವಿಚಾರಣೆ ಏಕೆ ನಿರ್ದಿಷ್ಟ ಪೀಠಕ್ಕೆ ಹೋಯಿತು? ಆಡಿಯೊ ಏಕೆ ಮ್ಯೂಟ್ ಆಯಿತು? ಇಂತಹ ಕ್ರಮಗಳ ಹಿಂದೆ ಕಾರಣವೇನು ? ಈ ಪ್ರಶ್ನೆಗಳಿಗೆ ಸ್ಪಷ್ಟತೆ ನೀಡುವುದರಿಂದ ನ್ಯಾಯಾಂಗ ದುರ್ಬಲವಾಗುವುದಿಲ್ಲ. ಬದಲಾಗಿ ಅದರ ಮೇಲೆ ಇರುವ ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಸುಪ್ರೀಂ ಕೋರ್ಟ್‌ಗೆ ಈ ದೇಶದ ನಾಗರಿಕರಿಂದ ಇರುವ ನಿರೀಕ್ಷೆ ಒಂದು ಮಾತ್ರ. ನೀವು ಕೇವಲ ಕಾನೂ ನಿನ ವ್ಯಾಖ್ಯಾನಕಾರರಲ್ಲ. ನೀವು ಸಂವಿಧಾನದ ಕಾವಲುಗಾರರು. ಸರಕಾರ ಮೌನವಾಗಬಹುದು. ಅಧಿಕಾರಿಗಳು ಮೌನವಾಗಬಹುದು. ಸಂಸ್ಥೆಗಳು ಮೌನ ವಾಗಬಹುದು. ಆದರೆ ನ್ಯಾಯದ ಕೊನೆಯ ಬಾಗಿಲು ಮೌನವಾದರೆ ಸಾಮಾನ್ಯ ನಾಗರಿಕನು ಯಾರನ್ನು ಆಶ್ರಯಿಸಬೇಕು? ಆದ್ದರಿಂದ ಇದು ಆರೋಪವಲ್ಲ. ಇದು ಒಂದು ಪ್ರಜಾಪ್ರಭುತ್ವದ ಮನವಿ. ಸುಪ್ರೀಂ ಕೋರ್ಟ್... ಮತ್ತೆ ಮ್ಯೂಟ್ ಆಗಬೇಡಿ. ಮೈಕ್ರೋಫೋನ್ ಮಾತ್ರವಲ್ಲ, ನ್ಯಾಯದ ಧ್ವನಿಯೂ ತೆರೆದಿರಲಿ. ಸಂವಿಧಾನದ ಧ್ವನಿ ಕೇಳಿಸಲಿ.

(ಲೇಖಕಿ ಪತ್ರಕರ್ತೆ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಶ್ಮಿ ಕೋಟಿ

contributor