ಮಸ್ಕಿ | ಅಕ್ರಮ ಮರಳುಗಾರಿಕೆಗೆ ಬೀಳದ ಕಡಿವಾಣ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಸಂಬಂಧಿತ ಇಲಾಖೆಗಳ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಹಲವು ಬಾರಿ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದರೂ ಹಾಗೂ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದರೂ ಅಕ್ರಮ ಚಟುವಟಿಕೆಗಳು ಮುಂದುವರಿದಿವೆ. ತಹಶೀಲ್ದಾರರು, ಗಣಿ ಮತ್ತುಭೂ ವಿಜ್ಞಾನ ಇಲಾಖೆ, ಪೋಲಿಸ್ ಖಇಲಾಖೆಯ ಅಧಿಕಾರಿಗಳು ನಾಮಕಾವಾಸ್ತೆ ಎಫ್‌ಐಆರ್ ಮಾಡಿ ದಂಡ ವಿಧಿಸಿ ಕೈ ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜಾಲವಾಡಗಿ, ಗಿದ್ದಿಗಿ ಹಾಗೂ ಮಸ್ಕಿ ಹೋಬಳಿಯ ಸರ್ವೇ ನಂ.198/4ಮತ್ತು 198/5 ಪ್ರದೇಶಗಳಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ, ಟಿಪ್ಪರ್ ವಾಹನಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಾಗಿಸುವ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಗೂ ಧಕ್ಕೆ ಉಂಟಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ಸಾಗಾಟ ತಡೆಗಟ್ಟಲು ಚೆಕ್‌ಪೋಸ್ಟ್‌ಗಳ ಸ್ಥಾಪನೆ, ವಾಹನಗಳ ವಶಪಡಿಕೆ ಹಾಗೂ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ. ಆದರೆ ಈ ನಿಟ್ಟಿನಲ್ಲಿ ಸಮರ್ಪಕ ಕ್ರಮಗಳು ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ನಿತೀಶ್ ಕೆ. ಅವರು ಜಿಲ್ಲಾ ಮಟ್ಟದ ಸಭೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಹಾಗೂ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ನಿಗಾ ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದರು. ಆದರೆ ಆ ಸೂಚನೆಗಳು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಈ ಮಾಫಿಯಾದಲ್ಲಿ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಕೂಡದು. ಅಕ್ರಮ ಮರಳು ದಂಧೆಯಲ್ಲಿ ಭಾಯಾಗಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ನೋಡಿಯೂ ನೋಡದಂತೆ ಇದ್ದರೆ, ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಮತ್ತು ಪ್ರಕರಣವು ಗಂಭೀರವಾಗಿದ್ದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಇದರ ಬಳಿಕ ನಿತೀಶ್ ಅವರನ್ನೇ ಬೇರೆಡೆಗೆ ವರ್ಗಾಯಿಸಲಾಗಿದೆ. ಹಾಗೂ ಮರಳು ದಂಧೆ ಎಗ್ಗಿಲ್ಲದೆ ಮುಂದುವರೆಯುತ್ತಿದೆ.
ಸರ್ವೆ ನಂ. 198/4 ಹಾಗೂ 198/5 ರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸರ್ಕಾರಕ್ಕೆ ಉಂಟಾದ ನಷ್ಟವನ್ನು ಅಂದಾಜಿಸಿ ದಂಡ ಹಾಗೂ ಪರಿಹಾರ ವಸೂಲಿ ಮಾಡಬೇಕು. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
-ಬಾಲಸ್ವಾಮಿ ಜೀನಾಪುರ ದಲಿತ ಸಂರಕ್ಷ ಸಮಿತಿ ಜಿಲ್ಲಾ ಅಧ್ಯಕ್ಷ
ತಹಶೀಲ್ದಾರ್ ಸ್ಪಷ್ಟನೆ
ಅಕ್ರಮವಾಗಿ ಮರಳು ಸಾಗಾಟ ನಡೆಸುವವರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಿ ದಂಡ ವಿಧಿಸಲಾಗಿದೆ. ಚೆಕ್ಪೋಸ್ಟ್ ಸ್ಥಾಪನೆ ಕುರಿತು ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಮಸ್ಕಿ ತಹಶೀಲ್ದಾರ್ ಮಂಜುನಾಥ ಭೋಗವತಿ ತಿಳಿಸಿದ್ದಾರೆ.
ಸಂಘಟನೆಗಳ ಆಗ್ರಹ
ದಲಿತ ಸಂರಕ್ಷ ಸಂಘದ ಕಲಬುರಗಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಬಿ.ಮೊನೇಶ್ ಅವರು, ಅಕ್ರಮ ಮರಳು ಸಾಗಾಟದಲ್ಲಿ ಬಳಸುತ್ತಿರುವ ಜೆಸಿಬಿ ಮತ್ತು ಟಿಪ್ಪರ್ ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದರೆ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.