ನೇಹಾ ಬೋರಾ ಎಂಬ ದಿಟ್ಟತನದ ಮಾದರಿ
ದಿಲ್ಲಿ ಪ್ರತಿಭಟನೆ ಹೊತ್ತಲ್ಲಿ ಎಷ್ಟೇ ಸಲ ಪೊಲೀಸರು ವಶಕ್ಕೆ ಪಡೆದರೂ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಪ್ರತಿಭಟನೆಗೆ ಬಂದು ನಿಲ್ಲುತ್ತಲೇ ಇರುವ, ಛಲ ಬಿಡದ ಯುವ ಹೋರಾಟಗಾರ್ತಿ ನೇಹಾ ಬೋರಾ.
ಅಕ್ಟೋಬರ್ 10ರಿಂದ ಶುರುವಾದ ಪ್ರತಿಭಟನೆ ವೇಳೆಯೂ ಅವರನ್ನು ವಶಕ್ಕೆ ಪಡೆಯಲಾಯಿತು. ಅದಕ್ಕೂ ಮೊದಲು ಅಕ್ಟೋಬರ್ 6ರಂದು ನಡೆದ ಪ್ರತಿಭಟನೆ ವೇಳೆಯೂ ಒಂದೇ ದಿನ ಮೂರು ಬಾರಿ ಅವರನ್ನು ವಶಕ್ಕೆ ಪಡೆದದ್ದು ಸುದ್ದಿಯಾಗಿತ್ತು.
ರವಿವಾರ, ಅಕ್ಟೋಬರ್ 11ರಂದು ಪ್ರತಿಭಟನೆ ಮುಂದುವರಿದಾಗ ಮತ್ತೆ ಅವರು ಅಲ್ಲಿದ್ದರು. ರವಿವಾರವೂ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಹೇಗೆ ಪೊಲೀಸ್ ಬಸ್ ಒಳಗೆ ಸೆಲ್ ರೀತಿ ಮಾಡಿ ಕೂಡಿಹಾಕಲಾಗಿದೆ ಎಂಬುದನ್ನು ಅವರು ಅಲ್ಲಿಂದಲೇ ವಿವರಿಸಿದ್ದರು.ಬಸ್ ಒಳಗೆ ಗಾಳಿಯೂ ಆಡದೆ, ಉಸಿರಾಡಲಾಗದ ಸ್ಥಿತಿಯಿದೆ ಎಂಬುದನ್ನು ವಿವರಿಸಿರುವ ವೀಡಿಯೊ ಹೊರಬಂದಿತ್ತು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಒತ್ತಾಯಿಸಿ ಜೆನ್ ಝಿಗಳ ಪ್ರತಿಭಟನೆ ನಡೆದಾಗಿನಿಂದ ಮುನ್ನೆಲೆಗೆ ಬಂದ ಹೆಸರು ನೇಹಾ ಬೋರಾ. ಈಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ನಡೆದಿರುವ ಹೋರಾಟದಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ. ಯುವಜನರ ಪ್ರತಿಭಟನೆಯ ಅಲೆಯೊಂದಿಗೆ ಮುನ್ನೆಲೆಗೆ ಬಂದಿರುವ ವಿದ್ಯಾರ್ಥಿ ಹೋರಾಟಗಾರ್ತಿ ನೇಹಾ ದಿಟ್ಟತನದ ಮಾದರಿಯಂತಿದ್ದಾರೆ.
ಇವತ್ತು ದೇಶದ ಯುವಜನರಿಗೆ, ಎಲ್ಲ ಪ್ರಜ್ಞಾವಂತರಿಗೆ ಭರವಸೆ ಮೂಡಿಸುವ ವಿದ್ಯಾರ್ಥಿ ನಾಯಕಿ ನೇಹಾ ಬೋರಾ. ಪ್ರತಿಭಟನೆಯ ಶಕ್ತಿ ಎಂತಹದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಎಂತಹ ಪ್ರಭುತ್ವವೂ ಅವರ ಮಾತನ್ನು ಕೇಳಬೇಕಾಗುತ್ತದೆ ಎಂದು ಇತ್ತೀಚಿನ ವರ್ಷಗಳಲ್ಲಿ ತೋರಿಸಿಕೊಟ್ಟು ಹತಾಶ ಜನರಲ್ಲಿ ಭರವಸೆ ಮೂಡಿಸಿದವರು ನೇಹಾ ಬೋರಾ.
ಒಂದು ಕಡೆ ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ಇಡೀ ವಿಪಕ್ಷ ಒಕ್ಕೂಟವನ್ನು ಒಂದಾಗಿ ಮುನ್ನಡೆಸುತ್ತಿರುವಾಗ ಇನ್ನೊಂದೆಡೆ ವಿದ್ಯಾರ್ಥಿ ನಾಯಕಿಯಾಗಿ ಇಡೀ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವ ದಿಟ್ಟತನ ತೋರಿಸಿದವರು ನೇಹಾ ಬೋರಾ.
ಪೇಪರ್ ಸೋರಿಕೆ ಮತ್ತು ಉದ್ಯೋಗ ಸಮಸ್ಯೆಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ನೇಹಾ ಬೋರಾ ಗುರುತಿಸಿಕೊಂಡರು.
ರಾಯ್ಟರ್ಸ್‌ನಲ್ಲಿ ಅಫ್ತಾಬ್ ಅಹಮದ್ ಬರೆದಿರುವಂತೆ, ರಂಗಭೂಮಿಯ ಹಿನ್ನೆಲೆ ಬೋರಾ ಅವರ ರಾಜಕೀಯ ದನಿಯನ್ನು ರೂಪಿಸುವಲ್ಲಿ ಪಾತ್ರ ವಹಿಸಿದೆ.
ವರ್ಷಗಳ ಕಾಲದ ಅಸಮಾಧಾನವೇ ಈಗಿನ ಪ್ರತಿಭಟನೆಗಳಿಗೆ ಶಕ್ತಿಯೊದಗಿಸಿರುವುದಾಗಿ ನೇಹಾ ಹೇಳುತ್ತಾರೆ ಎಂದು ಅಫ್ತಾಬ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮೋದಿ ಸರಕಾರಕ್ಕೆ ಕಳೆದ ಕೆಲ ವರ್ಷಗಳಲ್ಲಿಯೇ ಅತ್ಯಂತ ಗಂಭೀರ ಸವಾಲೊಡ್ಡಿರುವ ಚಳವಳಿಯ ಪ್ರಮುಖ ಮುಖಗಳಲ್ಲಿ ನೇಹಾ ಒಬ್ಬರು. ಪಿಎಚ್.ಡಿ. ಅಧ್ಯಯನದಲ್ಲಿರುವ 29 ವರ್ಷದ ನೇಹಾ ಬೋರಾ ಅವರ ಮಾತುಗಳು ಅವರ ಹೋರಾಟದ ಹಿಂದಿನ ಖಚಿತ ನಿಲುವನ್ನು ವ್ಯಕ್ತಪಡಿಸುತ್ತವೆ. ಅವರು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಅಂದರೆ ಐಸಾದ ಅಧ್ಯಕ್ಷೆಯೂ ಹೌದು.
ಮೋದಿ ಅವರ ಬಿಜೆಪಿಗೆ ಅನುಕೂಲವಾಗುವಂತೆ ಬೃಹತ್ ಪ್ರಮಾಣದಲ್ಲಿ ಮತ ಅಕ್ರಮ ನಡೆದಿದೆ ಎಂದು ಆರೋಪಿಸಿ, ಸಿಜೆಪಿ ಜೊತೆಗೇ ನೇಹಾ ಬೋರಾ ಕೂಡ ಹೋರಾಟಕ್ಕಿಳಿದಿದ್ದಾರೆ.
ಪೊಲೀಸರು ಅವರನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ.
ಇವತ್ತು ಬೀದಿಗಳಲ್ಲಿ ಹೋರಾಟದ ಪ್ರಮುಖ ದನಿಯಾಗಿರುವ ನೇಹಾ, ನಿಜವಾಗಿಯೂ ಆರಂಭದಲ್ಲಿ ಹೋರಾಟಗಾರ್ತಿಯಾಗುವ ಉದ್ದೇಶ ಹೊಂದಿರಲಿಲ್ಲ.
ರಂಗಭೂಮಿ ಮತ್ತು ನಂತರ 2019 ಹಾಗೂ 2020ರಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳು ತಮ್ಮನ್ನು ರಾಜಕೀಯದತ್ತ ಸೆಳೆದವು ಎಂದು ಅವರು ಹೇಳಿದ್ದಾರೆ.
ಶನಿವಾರ, ಹೊಸದಿಲ್ಲಿಯ ನಿಗದಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಪ್ರತಿಭಟನಾಕಾರರು ತಲುಪದಂತೆ ಪೊಲೀಸರು ತಡೆದಾಗ, ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ಕರಕುಶಲ ವಸ್ತುಗಳ ಮಾರುಕಟ್ಟೆಯಾದ ದಿಲ್ಲಿ ಹಾಟ್‌ನಲ್ಲಿ ಪ್ರತಿಭಟನೆಗೆ ಸೇರುವಂತೆ ನೇಹಾ ಕರೆ ನೀಡಿದ್ದರು. ದಿಲ್ಲಿ ಹಾಟ್ ಜಂತರ್ ಮಂತರ್ ಆಗಲಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದರು ಮತ್ತು ಘೋಷಣೆಗಳನ್ನು ಕೂಗುತ್ತಾ ಆ ಸ್ಥಳದತ್ತ ಹೊರಟರು. ಇತರರು ಕೂಡ ಅವರೊಡನೆ ಸೇರಿಕೊಂಡರು.
ಪೊಲೀಸರು ನೇಹಾ ಬೋರಾ ಹಾಗೂ ಇತರ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಪೊಲೀಸ್ ವಶದಲ್ಲೂ ಪ್ರತಿಭಟನೆ ಮುಂದುವರಿಸಲು ನೇಹಾ ಕರೆ ನೀಡಿದರು. ‘‘ನಾನು ಬಂಧನದಲ್ಲಿದ್ದೇನೆ, ಆದರೆ ಚಳವಳಿ ನಿಲ್ಲಲ್ಲ’’ ಎಂದು ಅವರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದರು. ಪೊಲೀಸರು ತಡೆದರೂ, ಇರುವ ಜಾಗದಲ್ಲೇ ಪ್ರತಿಭಟನೆ ನಡೆಸುವಂತೆ ಅವರು ಬೆಂಬಲಿಗರಿಗೆ ಒತ್ತಾಯಿಸಿದರು.
ಶನಿವಾರ ಅವರನ್ನು ಬಿಡುಗಡೆ ಮಾಡಿದ ಬಳಿಕ ರವಿವಾರ ಪ್ರತಿಭಟನೆ ಮುಂದುವರಿದಾಗಲೂ ಮತ್ತೆ ನೇಹಾ ಪ್ರತಿಭಟನೆಯಲ್ಲಿದ್ದರು. ಮತ್ತೆ ಅವರನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿ ಬಂತು.
ಪರೀಕ್ಷೆಗಳಿಗೆ ಸಂಬಂಧಿಸಿದ ಹಗರಣಗಳು, ನಿರುದ್ಯೋಗ ಮತ್ತು ಪೊಲೀಸ್ ಕ್ರಮಗಳಂತಹ ವಿಷಯಗಳನ್ನೂ ನೇಹಾ ಬೋರಾ ಪ್ರಮುಖವಾಗಿ ಎತ್ತಿದ್ದಾರೆ. ಮಾತು, ಸ್ವಭಾವ ಮೃದುವಾದರೂ, ಮೈಕ್ ಮುಂದೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ದೃಢವಾಗಿ, ಅಷ್ಟೇ ಸ್ಪಷ್ಟವಾಗಿ, ದಿಟ್ಟವಾಗಿ ಮಾತಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಅಪಾರ ಬೆಂಬಲವೂ ಅವರಿಗಿದೆ.
ಸಾಂವಿಧಾನಿಕ ಹಕ್ಕುಗಳನ್ನು ಪ್ರಸ್ತಾಪಿಸುವ ಅವರು, ಶಾಂತಿಯುತ ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು, ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂಬ ದಿಟ್ಟ ನಿಲುವಿನವರಾಗಿದ್ದಾರೆ.
ಉತ್ತರಾಖಂಡದಲ್ಲಿ ಬೆಳೆದ ಬೋರಾ, ತಮ್ಮ ತಂದೆ ಸೇನೆಯಲ್ಲಿದ್ದ ಕಾರಣ ಬಾಲ್ಯದಲ್ಲಿ ಮತ್ತೆ ಮತ್ತೆ ಬೇರೆ ಬೇರೆ ಊರುಗಳನ್ನು ನೋಡಬೇಕಾಯಿತು. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ ನಂತರ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್‌ಆರ್ಟ್ಸ್ ಆಂಡ್ ಎಸ್ಥೆಟಿಕ್ಸ್‌ನಲ್ಲಿ ಡಾಕ್ಟರೇಟ್ ಅಧ್ಯಯನ ಪ್ರಾರಂಭಿಸಿದರು.
ರಾಯ್ಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದಂತೆ, ಪದವಿ ಓದುತ್ತಿದ್ದಾಗ ಅವರು ರಂಗಭೂಮಿ ತಂಡವೊಂದರಲ್ಲಿದ್ದರು. ಅಲ್ಲಿ ಅವರು ತಮಗಿಂತ ಭಿನ್ನವಾದ ವ್ಯಕ್ತಿಗಳ ಜೀವನಶೈಲಿ ಮತ್ತು ಮನಸ್ಥಿತಿಯನ್ನು ಅರಿತುಕೊಳ್ಳಲು ಕಲಿತರು.
‘‘ನಿಜ ಜೀವನದಲ್ಲಿ ಭೇಟಿಯಾದರೆ ನೀವು ಒಪ್ಪದ ಅಥವಾ ಇಷ್ಟಪಡದ ಪಾತ್ರವೊಂದು ಎದುರಾಗಬಹುದು. ಆದರೆ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸುವುದೆಂದರೆ, ಆ ವ್ಯಕ್ತಿಯ ಹಿನ್ನೆಲೆ ಮತ್ತು ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದಾಗಿದೆ’’ ಎಂದು ಅವರು ತಮ್ಮ ರಂಗಭೂಮಿ ಪರಿಣತಿಯಿಂದ ಹೇಳಿದ್ದಾರೆ.
ಪೌರತ್ವ ಕಾಯ್ದೆ ಅವರ ಹೋರಾಟದ ಹಾದಿಯಲ್ಲಿ ಒಂದು ಮಹತ್ವದ ತಿರುವು ನೀಡಿತು. ಈ ಕಾಯ್ದೆ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ ಎಂಬ ಗಂಭೀರ ಆರೋಪದ ಬಳಿಕ ಅದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು.
ಪುಸ್ತಕಗಳು, ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿ ಕಂಡುಕೊಂಡಿದ್ದ ಆಲೋಚನೆಗಳನ್ನು ರಾಜಕೀಯ ಕ್ರಿಯೆಯಾಗಿ ಪರಿವರ್ತಿಸುವುದನ್ನು ನೇಹಾ ಬೋರಾ ತಮ್ಮ ಹೋರಾಟಗಳ ಮೂಲಕ ಮಾಡುತ್ತಿದ್ದಾರೆ.
ತಮ್ಮ ತಲೆಮಾರಿನ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳನ್ನು ಕ್ಲಾಸ್ ರೂಂಗಳಿಂದ ಹೊರಗೆ ಕರೆತಂದು ಸಂವಿಧಾನಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ ಬೀದಿಗಿಳಿಯುವಂತೆ ಮಾಡುತ್ತಿದ್ದಾರೆ.
ಪೇಪರ್ ಸೋರಿಕೆ ಆರೋಪದ ವಿರುದ್ಧ ಜುಲೈನಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನೇಹಾ ಬೋರಾ ಹೆಚ್ಚು ಗಮನ ಸೆಳೆದರು. ಆಗ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದ ಇತರ ಪ್ರತಿಭಟನಾಕಾರರೊಂದಿಗೆ ನೇಹಾ ಕೂಡ ಕೈಜೋಡಿಸಿದ್ದರು.
ಪ್ರತಿಭಟನಾಕಾರರ ವಿರುದ್ಧ ಸರಕಾರ ಮತ್ತು ಪೊಲೀಸರ ದಮನಕಾರಿ ನಡೆಯನ್ನು ಅತ್ಯಂತ ಕಟುವಾಗಿ ಟೀಕಿಸಿದವರಲ್ಲಿ ನೇಹಾ ಕೂಡ ಒಬ್ಬರು. ಪೊಲೀಸ್ ಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ಅವರು ಮಾಡಿದ ಭಾಷಣಗಳು ಆನ್‌ಲೈನ್‌ನಲ್ಲಿ ವೈರಲ್ ಆದವು. ಆಗಿನಿಂದ ದಿಲ್ಲಿಯಲ್ಲಿ ನಡೆಯುವ ಹೋರಾಟಗಳಲ್ಲಿ ನೇಹಾ ಬೋರಾ ಇದ್ದೇ ಇರುತ್ತಾರೆ.
ಈಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ನಡೆದಿರುವ ಪ್ರತಿಭಟನೆಗಳ ಸಂದರ್ಭದಲ್ಲಿ ನೇಹಾ ಅವರನ್ನು ಪದೇ ಪದೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಬಿಡುಗಡೆಯಾದ ನಂತರ ನೇಹಾ ಪುನಃ ಹೋರಾಟದ ಸ್ಥಳದಲ್ಲಿ ಇರುತ್ತಾರೆ.
ಸಿದ್ಧಾಂತ ಮಾತ್ರದಿಂಲೇ ಜನರನ್ನು ಒಗ್ಗೂಡಿಸುವಿಕೆ ಈಗ ಸಾಧ್ಯವಿಲ್ಲ ಎಂದು ನೇಹಾ ಹೇಳುತ್ತಾರೆ. ಭರವಸೆ ಇರಬೇಕು. ಅದು ಮಾತ್ರವೇ ಹೆಚ್ಚು ಶಕ್ತಿ ನೀಡಬಲ್ಲದು ಎಂಬುದು ನೇಹಾ ಅವರ ನಿಲುವು.
ಭಯ ಬಹುಬೇಗ ಹಬ್ಬುತ್ತದೆ ಎಂಬುದು ನಿಜ. ಆದರೆ, ಭರವಸೆ ಕೂಡ ಬಹಳ ಬೇಗ ಪ್ರಭಾವ ಬೀರಬಲ್ಲದು ಎಂಬುದು ಅವರ ದೃಢ ನಂಬಿಕೆ. ‘‘ಜನರ ಈಗಿನ ಪ್ರತಿಭಟನೆಗಳ ಹಿಂದೆ ವರ್ಷಗಳಷ್ಟು ಸಮಯದಿಂದ ಧುಮುಗುಡುತ್ತಿರುವ ಆಕ್ರೋಶವಿದೆ, ಅನುಭವಿಸಿದ ಕಷ್ಟಗಳಿವೆ’’ ಎಂದು ನೇಹಾ ಬೋರಾ ಹೇಳುತ್ತಾರೆ.
‘‘ಜನರಲ್ಲಿ ಅಂಥ ಅಸಮಾಧಾನವಿದೆ. ತಮಗೆ ದ್ರೋಹವಾಗಿರುವ ಬಗ್ಗೆ ಅವರಲ್ಲಿ ಆಕ್ರೋಶವಿದೆ ಮತ್ತು ಹತಾಶೆಯಿದೆ. ಅದೇ ಈಗ ಬೀದಿಗಳಲ್ಲಿನ ಇಂಥ ಆಕ್ರೋಶಕ್ಕೆ ಕಾರಣ’’ ಎಂದು ನೇಹಾ ಹೇಳುತ್ತಾರೆ.