ಎಐ ಯುಗದಲ್ಲಿ ಪ್ರವಾಸೋದ್ಯಮದ ಹೊಸ ದಿಕ್ಕು
ಪ್ರವಾಸೋದ್ಯಮವೆಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಲ್ಲ. ಅದು ಉದ್ಯೋಗ, ಆದಾಯ, ಸ್ಥಳೀಯ ಆರ್ಥಿಕತೆ, ಸಂಸ್ಕೃತಿ, ಪರಿಸರ ಮತ್ತು ಮಾನವ ಸಂಪರ್ಕಗಳನ್ನು ಒಟ್ಟುಗೂಡಿಸುವ ಬಹು ಆಯಾಮದ ಆರ್ಥಿಕ ಚಟುವಟಿಕೆಯಾಗಿದೆ. ಪ್ರವಾಸೋದ್ಯಮದ ಮೂಲಕ ಒಂದು ಪ್ರದೇಶದ ಹೋಟೆಲ್‌ಗಳು, ಸಾರಿಗೆ ವ್ಯವಸ್ಥೆ, ರೆಸ್ಟೋರೆಂಟ್‌ಗಳು, ಕರಕುಶಲ ವಸ್ತುಗಳ ಮಾರುಕಟ್ಟೆ, ಸಣ್ಣ ವ್ಯಾಪಾರಿಗಳು ಹಾಗೂ ಸ್ಥಳೀಯ ಸೇವಾ ವಲಯಗಳು ಚಟುವಟಿಕೆ ಪಡೆಯುತ್ತವೆ. ಹೀಗಾಗಿ ಪ್ರವಾಸೋದ್ಯಮವು ಇಂದು ಜಾಗತಿಕ ಆರ್ಥಿಕತೆಯ ಪ್ರಮುಖ ಬೆಳವಣಿಗೆಯ ವಲಯವಾಗಿ ರೂಪುಗೊಂಡಿದೆ.
ಪ್ರವಾಸೋದ್ಯಮವನ್ನು ಮರುರೂಪಿಸಲು ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ ಎಂಬ ಆಶಯದೊಂದಿಗೆ 2026ರ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗಿದ್ದು, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಪ್ರವಾಸೋದ್ಯಮದ ಅನುಭವ, ನಿರ್ವಹಣೆ ಮತ್ತು ಆರ್ಥಿಕತೆಯನ್ನು ಹೇಗೆ ಪರಿವರ್ತಿಸುತ್ತಿವೆ ಎಂಬುದರತ್ತ ಗಮನ ಸೆಳೆಯುತ್ತದೆ. ಜಾಗತಿಕವಾಗಿ ಪ್ರವಾಸೋದ್ಯಮದ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ. 2025ರಲ್ಲಿ ವಿಶ್ವದಲ್ಲಿ ಸುಮಾರು 153.4 ಕೋಟಿ ಅಂತರ್‌ರಾಷ್ಟ್ರೀಯ ಪ್ರವಾಸಿಗರ ಆಗಮನ ದಾಖಲಾಗಿದ್ದು, ಹಿಂದಿನ ವರ್ಷಕ್ಕಿಂತ ಸುಮಾರು ಶೇ.4.9ರಷ್ಟು ಹೆಚ್ಚಳವಾಗಿದೆ. ಪ್ರವಾಸೋದ್ಯಮದ ಮಹತ್ವವನ್ನು ಕೇವಲ ಪ್ರವಾಸಿಗರ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಪ್ರವಾಸಿಗರು ಖರ್ಚು ಮಾಡುವ ಹಣವು ಸಾರಿಗೆ, ಹೋಟೆಲ್, ಆಹಾರ, ಮನರಂಜನೆ, ಚಿಲ್ಲರೆ ವ್ಯಾಪಾರ, ಕರಕುಶಲ ಮತ್ತು ಸ್ಥಳೀಯ ಸೇವಾ ವಲಯಗಳಲ್ಲಿ ಅನೇಕ ಪಟ್ಟು ಆರ್ಥಿಕ ಚಟುವಟಿಕೆಯನ್ನು ಸೃಷ್ಟಿಸುತ್ತದೆ. ಭಾರತದಲ್ಲಿಯೂ ಪ್ರವಾಸೋದ್ಯಮದ ಆರ್ಥಿಕ ಪಾತ್ರ ಗಮನಾರ್ಹವಾಗಿ ಹೆಚ್ಚುತ್ತಿದೆ. 2025ರಲ್ಲಿ ಸುಮಾರು 428.7 ಕೋಟಿ ದೇಶೀಯ ಪ್ರವಾಸಿಗರ ಭೇಟಿಗಳು ದಾಖಲಾಗಿದ್ದು, ಸುಮಾರು 91.5 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಇದರಿಂದ ಭಾರತದ ಪ್ರವಾಸೋದ್ಯಮದ ಪ್ರಮುಖ ಆಧಾರ ಕೇವಲ ವಿದೇಶಿ ಪ್ರವಾಸಿಗರಲ್ಲ; ದೇಶೀಯ ಪ್ರವಾಸೋದ್ಯಮವೂ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂಬುದು ಸ್ಪಷ್ಟ.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ 2025ರ ವರದಿಯ ಪ್ರಕಾರ, ಪ್ರವಾಸೋದ್ಯಮ ಕ್ಷೇತ್ರವು ಭಾರತದ ಒಟ್ಟು ಜಿಡಿಪಿಗೆ ಶೇ.5.22ರಷ್ಟು ಕೊಡುಗೆ ನೀಡುತ್ತಿದ್ದು, ನೇರ ಕೊಡುಗೆ ಶೇ.2.72ರಷ್ಟಿದೆ. ದೇಶದ ಒಟ್ಟು ಉದ್ಯೋಗದಲ್ಲಿ ಪ್ರವಾಸೋದ್ಯಮದ ಪಾಲು ಶೇ.13.34, ನೇರ ಉದ್ಯೋಗದ ಪಾಲು ಶೇ.5.82ರಷ್ಟಿದೆ. ಪ್ರವಾಸೋದ್ಯಮವು ಆತಿಥ್ಯ, ಸಾರಿಗೆ, ಕರಕುಶಲ ವಸ್ತುಗಳು ಮತ್ತು ಸಂಬಂಧಿತ ಸೇವಾ ವಲಯಗಳಲ್ಲಿ ಬಲವಾದ ಗುಣಕ ಪರಿಣಾಮವನ್ನು (ಮಲ್ಟಿಪ್ಲೈಯರ್ ಎಫೆಕ್ಟ್) ಸೃಷ್ಟಿಸುವುದರಿಂದ, ಕೇಂದ್ರ ಬಜೆಟ್ 2026-27ರಲ್ಲಿಯೂ ಇದನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಕಾರ್ಯತಂತ್ರದ ಚಾಲಕವಾಗಿ ಗುರುತಿಸಲಾಗಿದೆ. ಹೀಗಾಗಿ ಪ್ರವಾಸೋದ್ಯಮವು ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಲ್ಲದೆ, ವ್ಯಾಪಕ ಜೀವನೋಪಾಯ ಸೃಷ್ಟಿ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ.
2026ರ ಪ್ರವಾಸೋದ್ಯಮದ ಪ್ರಮುಖ ಬದಲಾವಣೆ ಕೃತಕ ಬುದ್ಧಿಮತ್ತೆಯ ವೇಗದ ಪ್ರವೇಶ. ಪ್ರವಾಸಿಗರು ಪ್ರವಾಸದ ಸ್ಥಳ ಆಯ್ಕೆ ಮಾಡುವುದರಿಂದ ಹಿಡಿದು ಟಿಕೆಟ್ ಕಾಯ್ದಿರಿಸುವುದು, ಹೋಟೆಲ್ ಆಯ್ಕೆ, ಸ್ಥಳೀಯ ಸಾರಿಗೆ, ಆಹಾರ, ಮಾರ್ಗದರ್ಶನ ಮತ್ತು ಪ್ರವಾಸದ ಅನುಭವದವರೆಗೆ ಎಐ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ. ಪ್ರವಾಸಿಗರ ಆಸಕ್ತಿ, ಬಜೆಟ್, ಸಮಯ ಮತ್ತು ಹಿಂದಿನ ಪ್ರವಾಸದ ಮಾಹಿತಿಯನ್ನು ಆಧರಿಸಿ ಎಐ ವೈಯಕ್ತಿಕ ಪ್ರವಾಸ ಯೋಜನೆ ರೂಪಿಸಬಲ್ಲದು. ಭಾಷಾ ಅನುವಾದ, ಧ್ವನಿ ಆಧಾರಿತ ಮಾರ್ಗದರ್ಶನ, ಡಿಜಿಟಲ್ ನಕ್ಷೆಗಳು, ವರ್ಚುವಲ್ ಪ್ರವಾಸಗಳು ಮತ್ತು ಎಐ ಆಧಾರಿತ ಡಿಜಿಟಲ್ ಸಹಾಯಕರನ್ನು ಬಳಸುವುದು ಪ್ರವಾಸವನ್ನು ಹೆಚ್ಚು ಸುಲಭಗೊಳಿಸುತ್ತಿವೆ. ಆದರೆ ತಂತ್ರಜ್ಞಾನವು ಪರಿಹಾರಗಳ ಜೊತೆಗೆ ಸವಾಲುಗಳನ್ನೂ ತರುತ್ತದೆ. ಎಐ ಆಧಾರಿತ ಶಿಫಾರಸುಗಳು ಪ್ರವಾಸಿಗರನ್ನು ಕೆಲವೇ ಜನಪ್ರಿಯ ಸ್ಥಳಗಳತ್ತ ಕೇಂದ್ರೀಕರಿಸಿದರೆ, ಈಗಾಗಲೇ ಜನದಟ್ಟಣೆ ಇರುವ ತಾಣಗಳ ಮೇಲೆ ಮತ್ತಷ್ಟು ಒತ್ತಡ ಉಂಟಾಗಬಹುದು. ತಪ್ಪು ಮಾಹಿತಿ, ಡೇಟಾ ಗೌಪ್ಯತೆ ಮತ್ತು ಡಿಜಿಟಲ್ ಅಸಮಾನತೆಯ ಪ್ರಶ್ನೆಗಳೂ ಎದುರಾಗುತ್ತವೆ. ಆದ್ದರಿಂದ ಎಐ ಮಾನವನ ಪರ್ಯಾಯವಾಗುವುದಕ್ಕಿಂತ ಮಾನವ ಸಾಮರ್ಥ್ಯವನ್ನು ವಿಸ್ತರಿಸುವ ಸಾಧನವಾಗಬೇಕು.
ಪ್ರವಾಸೋದ್ಯಮದ ಯಶಸ್ಸನ್ನು ಪ್ರವಾಸಿಗರ ಸಂಖ್ಯೆಯಿಂದ ಮಾತ್ರ ಅಳೆಯಬಾರದು. ಪ್ರವಾಸಿಗರು ಖರ್ಚು ಮಾಡುವ ಹಣದಲ್ಲಿ ಸ್ಥಳೀಯ ಸಮುದಾಯದ ಪಾಲು ಎಷ್ಟು ಎಂಬುದೂ ಮುಖ್ಯ. ಸ್ಥಳೀಯ ಮಾರ್ಗದರ್ಶಕರು, ಸಣ್ಣಪುಟ್ಟ ರೆಸ್ಟೋರೆಂಟ್‌ಗಳು, ಆಟೋ ಚಾಲಕರು, ಕರಕುಶಲಕಾರರು, ಮಹಿಳಾ ಸ್ವಸಹಾಯ ಗುಂಪುಗಳು, ರೈತರು ಮತ್ತು ಸಣ್ಣ ಉದ್ಯಮಿಗಳು ಪ್ರವಾಸೋದ್ಯಮದ ಆರ್ಥಿಕ ಸರಪಳಿಯ ಭಾಗವಾಗಬೇಕು. ಈ ಹಿನ್ನೆಲೆಯಲ್ಲಿ ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಾಮೀಣ ಜೀವನಶೈಲಿ, ಸ್ಥಳೀಯ ಆಹಾರ, ಜಾನಪದ ಕಲೆ, ಹಸ್ತಶಿಲ್ಪ, ಬುಡಕಟ್ಟು ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿದರೆ ಪ್ರವಾಸಿಗರಿಗೆ ವಿಭಿನ್ನ ಅನುಭವ ದೊರೆಯುತ್ತದೆ. ಅದೇ ಸಂದರ್ಭದಲ್ಲಿ ಸ್ಥಳೀಯರಿಗೆ ಪರ್ಯಾಯ ಉದ್ಯೋಗ ಮತ್ತು ಆದಾಯದ ಅವಕಾಶಗಳು ಸೃಷ್ಟಿಯಾಗುತ್ತವೆ. ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯದ ಹೋಮ್‌ಸ್ಟೇ ಮಾದರಿಯು ಪ್ರವಾಸೋದ್ಯಮ ಮತ್ತು ಜೀವನೋಪಾಯವನ್ನು ಸಂಪರ್ಕಿಸುವ ಪರಿಣಾಮಕಾರಿ ಮಾರ್ಗವಾಗಬಹುದು. ಸ್ಥಳೀಯ ಕುಟುಂಬಗಳೇ ಪ್ರವಾಸಿಗರಿಗೆ ವಸತಿ, ಆಹಾರ ಮತ್ತು ಸಾಂಸ್ಕೃತಿಕ ಅನುಭವ ಒದಗಿಸುವ ಮೂಲಕ ಪ್ರವಾಸೋದ್ಯಮದ ಆದಾಯವನ್ನು ನೇರವಾಗಿ ಸಮುದಾಯಕ್ಕೆ ಕೊಂಡೊಯ್ಯಬಹುದು. ಇದರಿಂದ ಪ್ರವಾಸೋದ್ಯಮವು ಕೇವಲ ಪ್ರವಾಸಿಗರ ಆರ್ಥಿಕತೆಯಾಗದೆ ಸಮುದಾಯದ ಆರ್ಥಿಕತೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಸ್ವದೇಶ್ ದರ್ಶನ ಮತ್ತು ಸ್ವದೇಶ್ ದರ್ಶನ 2.0 ಪ್ರಮುಖ ಯೋಜನೆಗಳಾಗಿವೆ. ವಿವಿಧ ವಿಷಯಾಧಾರಿತ ಪ್ರವಾಸೋದ್ಯಮ ವಲಯಗಳ ಅಭಿವೃದ್ಧಿಯ ಜೊತೆಗೆ ಈಗ ಪ್ರವಾಸಿ ತಾಣಾ ಕೇಂದ್ರಿತ, ಸುಸ್ಥಿರ ಮತ್ತು ಅನುಭವಾಧಾರಿತ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತಿದೆ. ಇದೇ ರೀತಿ ಪ್ರಸಾದ ಯೋಜನೆಯು ತೀರ್ಥಕ್ಷೇತ್ರಗಳಲ್ಲಿ ಮೂಲಸೌಕರ್ಯ, ಸ್ವಚ್ಛತೆ, ಸಂಪರ್ಕ, ಭದ್ರತೆ ಮತ್ತು ಪ್ರವಾಸಿಗರ ಅನುಕೂಲತೆಗಳನ್ನು ಸುಧಾರಿಸುವ ಗುರಿ ಹೊಂದಿದೆ. ಗ್ರಾಮೀಣ ಮತ್ತು ಗಡಿ ಪ್ರದೇಶಗಳ ಅಭಿವೃದ್ಧಿಯಲ್ಲೂ ಪ್ರವಾಸೋದ್ಯಮವನ್ನು ಜೀವನೋಪಾಯದೊಂದಿಗೆ ಜೋಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರವಾಸೋದ್ಯಮದ ವಿಸ್ತರಣೆಗೆ ಪರಿಸರದ ಬೆಲೆ ಕಟ್ಟಬಾರದು. ಪರ್ವತ ಪ್ರದೇಶಗಳ ತ್ಯಾಜ್ಯ, ಕರಾವಳಿಯ ಪ್ಲಾಸ್ಟಿಕ್ ಮಾಲಿನ್ಯ, ಅರಣ್ಯ ಪ್ರದೇಶಗಳ ಮೇಲಿನ ಒತ್ತಡ ಮತ್ತು ಪ್ರವಾಸಿ ತಾಣಗಳಲ್ಲಿ ನೀರಿನ ಕೊರತೆಗಳು ಎಚ್ಚರಿಕೆಯ ಸಂಕೇತಗಳಾಗಿವೆ. ಆದ್ದರಿಂದ ಹೆಚ್ಚು ಪ್ರವಾಸಿಗರಿಗಿಂತ ಉತ್ತಮ ಪ್ರವಾಸೋದ್ಯಮ ಎಂಬ ಪರಿಕಲ್ಪನೆಗೆ ಆದ್ಯತೆ ನೀಡಬೇಕಾಗಿದೆ. ಪರಿಸರ ಸಂರಕ್ಷಣೆ, ನೀರಿನ ಬಳಕೆಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಮತ್ತು ಸ್ಥಳೀಯ ಸಂಪನ್ಮೂಲಗಳ ಸಂರಕ್ಷಣೆಯನ್ನು ಪ್ರವಾಸೋದ್ಯಮದ ಯೋಜನೆಯ ಅವಿಭಾಜ್ಯ ಭಾಗವನ್ನಾಗಿ ಮಾಡಬೇಕಾಗಿದೆ.
ಕರ್ನಾಟಕವು ಪ್ರವಾಸೋದ್ಯಮದ ದೃಷ್ಟಿಯಿಂದ ಅಪಾರ ವೈವಿಧ್ಯ ಹೊಂದಿರುವ ರಾಜ್ಯ. ಮೈಸೂರು ಅರಮನೆ, ಹಂಪಿ, ಪಟ್ಟದಕಲ್ಲು, ಬಾದಾಮಿ, ಬೇಲೂರು-ಹಳೇಬೀಡು, ಕೊಡಗು, ಪಶ್ಚಿಮ ಘಟ್ಟ, ಕರಾವಳಿ, ಜೋಗ ಜಲಪಾತ, ವನ್ಯಜೀವಿ ತಾಣಗಳು ಹಾಗೂ ಗ್ರಾಮೀಣ ಮತ್ತು ಬುಡಕಟ್ಟು ಸಂಸ್ಕೃತಿಗಳು ರಾಜ್ಯದ ಪ್ರವಾಸೋದ್ಯಮದ ವಿಶಿಷ್ಟ ಸಂಪತ್ತಾಗಿವೆ. ಆದರೆ ಪ್ರವಾಸೋದ್ಯಮವನ್ನು ಕೆಲವೇ ಪ್ರಸಿದ್ಧ ತಾಣಗಳಿಗೆ ಸೀಮಿತಗೊಳಿಸದೆ, ಕಡಿಮೆ ಪರಿಚಿತ ಸ್ಥಳಗಳತ್ತ ಪ್ರವಾಸಿಗರನ್ನು ಹರಿಸುವ ವಿಕೇಂದ್ರೀಕೃತ ಪ್ರವಾಸೋದ್ಯಮ ಮಾದರಿಯನ್ನು ಬೆಳೆಸಬೇಕಾಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳ ಜೊತೆಗೆ ಸಮೀಪದ ಗ್ರಾಮೀಣ ಪ್ರವಾಸೋದ್ಯಮ, ಸ್ಥಳೀಯ ಆಹಾರ, ಕರಕುಶಲ, ಪ್ರಕೃತಿ ಪ್ರವಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪರ್ಕಿಸಿದರೆ ಪ್ರವಾಸಿಗರ ವಾಸ್ತವ್ಯದ ಅವಧಿಯೂ ಹೆಚ್ಚಬಹುದು; ಸ್ಥಳೀಯ ಆದಾಯವೂ ವಿಸ್ತರಿಸಬಹುದು.
ಪ್ರವಾಸೋದ್ಯಮವು ಯುವಜನರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲ ಕ್ಷೇತ್ರವಾಗಿದೆ. ಪ್ರವಾಸಿ ಮಾರ್ಗದರ್ಶನ, ಹೋಟೆಲ್ ನಿರ್ವಹಣೆ, ಆಹಾರ ಸೇವೆ, ಡಿಜಿಟಲ್ ಮಾರ್ಕೆಟಿಂಗ್, ಛಾಯಾಗ್ರಹಣ, ವೀಡಿಯೊಗ್ರಫಿ, ಪ್ರವಾಸ ಯೋಜನೆ, ಸಾಹಸ ಪ್ರವಾಸೋದ್ಯಮ ಮತ್ತು ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ಮುಂತಾದ ಕ್ಷೇತ್ರಗಳು ವಿಸ್ತರಿಸುತ್ತಿವೆ. ಎಐ ಕೆಲವು ಸಾಂಪ್ರದಾಯಿಕ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಬಹುದು. ಆದ್ದರಿಂದ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಗಿಂತ ತಂತ್ರಜ್ಞಾನವನ್ನು ಬಳಸುವ ಕೌಶಲ್ಯಗಳನ್ನು ಬೆಳೆಸುವುದು ಮುಖ್ಯ. ಪ್ರವಾಸೋದ್ಯಮ ಕ್ಷೇತ್ರದ ಕಾರ್ಮಿಕರಿಗೆ ಡಿಜಿಟಲ್ ಕೌಶಲ್ಯ, ಭಾಷಾ ಜ್ಞಾನ, ಗ್ರಾಹಕ ಸೇವೆ ಮತ್ತು ಎಐ ಉಪಕರಣಗಳ ಬಳಕೆಯಲ್ಲಿ ತರಬೇತಿ ನೀಡಬೇಕು. ಇದೇ ಸಂದರ್ಭದಲ್ಲಿ ವೈದ್ಯಕೀಯ, ಆರೋಗ್ಯ ಮತ್ತು ಕ್ಷೇಮ, ಸಮುದ್ರ ಪ್ರವಾಸ, ವಿವಾಹ, ಸಾಹಸ ಹಾಗೂ ಸಭೆ, ಸಮಾವೇಶ ಮತ್ತು ಪ್ರದರ್ಶನ ಆಧಾರಿತ ಪ್ರವಾಸೋದ್ಯಮದಂತಹ ಹೊಸ ವಿಭಾಗಗಳೂ ವೇಗವಾಗಿ ಬೆಳೆಯುತ್ತಿವೆ. ವಿಶೇಷವಾಗಿ ವೈದ್ಯಕೀಯ ಪ್ರವಾಸೋದ್ಯಮವು ಭಾರತದ ಸೇವಾ ವಲಯಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ. ಪ್ರವಾಸೋದ್ಯಮದ ವ್ಯಾಪ್ತಿಯು ಈಗ ಐತಿಹಾಸಿಕ ಸ್ಮಾರಕಗಳು ಮತ್ತು ನೈಸರ್ಗಿಕ ತಾಣಗಳನ್ನು ಮೀರಿ, ಆರೋಗ್ಯ, ವ್ಯಾಪಾರ, ಸಂಸ್ಕೃತಿ, ಅನುಭವ ಮತ್ತು ಜೀವನಶೈಲಿಯಂತಹ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ.
ತಂತ್ರಜ್ಞಾನವು ಪ್ರವಾಸೋದ್ಯಮದ ಭವಿಷ್ಯವನ್ನು ಬದಲಾಯಿಸಬಹುದು; ಆದರೆ ಆ ಭವಿಷ್ಯವನ್ನು ಮಾನವೀಯ ಮೌಲ್ಯಗಳು ನಿರ್ದೇಶಿಸಬೇಕು. ಎಐ ಪ್ರವಾಸವನ್ನು ವೇಗವಾಗಿ, ಸುಲಭವಾಗಿ ಮತ್ತು ವೈಯಕ್ತಿಕವಾಗಿ ಮಾಡಬಹುದು. ಆದರೆ ಒಂದು ಸ್ಥಳದ ನಿಜವಾದ ಅನುಭವ ಅದರ ಜನರು, ಸಂಸ್ಕೃತಿ, ಆಹಾರ, ಪ್ರಕೃತಿ ಮತ್ತು ಜೀವನಶೈಲಿಯೊಂದಿಗೆ ಬೆರೆಯುವುದರಿಂದ ದೊರೆಯುತ್ತದೆ. ಆದ್ದರಿಂದ ಪ್ರವಾಸದ ನೈಜ ಅನುಭವಕ್ಕೆ ಮಾನವೀಯ ಸ್ಪರ್ಶವೇ ಮುಖ್ಯ; ಅದನ್ನು ತಂತ್ರಜ್ಞಾನ ಸಂಪೂರ್ಣವಾಗಿ ಬದಲಾಯಿಸಲಾರದು. ಹೀಗಾಗಿ ಭವಿಷ್ಯದ ಪ್ರವಾಸೋದ್ಯಮವು ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ-ಪರಿಸರ ಸುಸ್ಥಿರತೆಗಳ ನಡುವೆ ಸಮತೋಲನ ಸಾಧಿಸಬೇಕು. ಪ್ರವಾಸೋದ್ಯಮದಿಂದ ಸೃಷ್ಟಿಯಾಗುವ ಆದಾಯ ಸ್ಥಳೀಯ ಸಮುದಾಯಗಳಿಗೆ ತಲುಪಬೇಕು. ಪ್ರವಾಸಿ ತಾಣಗಳ ಪರಿಸರ ಸಂರಕ್ಷಿತವಾಗಬೇಕು. ಡಿಜಿಟಲ್ ಅವಕಾಶಗಳು ಎಲ್ಲರಿಗೂ ಲಭ್ಯವಾಗಬೇಕು.
ಪ್ರವಾಸೋದ್ಯಮದ ಮುಂದಿನ ಹಂತವು ಕೇವಲ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಪರ್ಧೆಯಾಗಬಾರದು. ಅದು ಹೆಚ್ಚು ಉದ್ಯೋಗ, ಹೆಚ್ಚು ಸ್ಥಳೀಯ ಆದಾಯ, ಹೆಚ್ಚು ಸಾಮಾಜಿಕ ಒಳಗೊಳ್ಳುವಿಕೆ, ಹೆಚ್ಚು ಪರಿಸರ ಸಂರಕ್ಷಣೆ ಮತ್ತು ಉತ್ತಮ ಪ್ರವಾಸಿ ಅನುಭವವನ್ನು ನಿರ್ಮಿಸುವ ಪ್ರಯತ್ನವಾಗಬೇಕು. ತಂತ್ರಜ್ಞಾನವು ಪ್ರವಾಸೋದ್ಯಮದ ಸ್ವರೂಪವನ್ನು ಬದಲಾಯಿಸುವ ಸಾಧನವಾಗುವುದರ ಜೊತೆಗೆ, ಪ್ರವಾಸೋದ್ಯಮದ ಮೂಲಕ ಜನರ ಬದುಕನ್ನು ಉತ್ತಮಗೊಳಿಸುವ ಶಕ್ತಿಯಾಗಬೇಕು, ಇದು ಸಕಾರಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.