ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತ ದೇಶವನ್ನಾಗಿ ಮಾಡುವುದು ಸುಳ್ಳು. ಅದು ಹಗಲು ಕನಸು. ಉದಾಹರಣೆಗೆ ಸ್ವಚ್ಛ ಭಾರತದ ಸಫಲತೆಯ ಕಥೆ ನಮಗೆಲ್ಲ ತಿಳಿದೇ ಇದೆ. ಪ್ಲಾಸ್ಟಿಕ್ ಮೇಲೆ ಅವಲಂಬನೆ ಮತ್ತು ಅದರ ಅಡ್ಡ ಪರಿಣಾಮಗಳು ಒಂದು ವಿಷ ವರ್ತುಲ. ಮನುಷ್ಯನ ಬುದ್ಧಿ, ವಿವೇಕದಿಂದ ಮಾತ್ರ ಪ್ಲಾಸ್ಟಿಕ್ ಶಾಪದಿಂದ ಮುಕ್ತಿಯನ್ನು ಪಡೆಯಬಹುದೇ ಹೊರತು, ಅದರ ಉತ್ಪಾದನೆಯನ್ನು ನಿಲ್ಲಿಸಲು ಮತ್ತು ಪರಿಣಾಮವನ್ನು ನಾಶ ಮಾಡಲು ಎಂದಿಗೂ ಸಾಧ್ಯವಿಲ್ಲ.

ಪ್ಲಾಸ್ಟಿಕ್ ಎಂಬ ಪೆಡಂಭೂತ ಇಂದು ಎಲ್ಲಾ ಜೀವಿಗಳ ದೇಹದಲ್ಲಿಯೂ ಅಂತರ್ಭೂತವಾಗಿದೆ. ಸುಖಕರ ಜೀವನದ ಅಗತ್ಯಗಳನ್ನು ಪೂರೈಸುವುದಕ್ಕೆ ಆಧುನಿಕ ತಂತ್ರಜ್ಞಾನ ಪೆಟ್ರೋ ಕೆಮಿಕಲ್ ಜನಿತ ಪ್ಲಾಸ್ಟಿಕ್‌ಗೆ ಜನ್ಮವಿಟ್ಟಿತು.

ಪ್ಲಾಸ್ಟಿಕ್ ಇಂದು ಇದು ಪ್ರಪಂಚದ ಅಣು ಕಣಗಳನ್ನು ಒಳ ಹೊಕ್ಕಿರುವ ಮನುಷ್ಯ ಸೃಷ್ಟಿತ ವಿಷ ಎಂದರೆ ತಪ್ಪಾಗಲಾರದು. ಆಕಾಶ, ಭೂಗರ್ಭ, ಸಾಗರ, ಸರೋವರ, ನದಿ, ಶಿಖರ, ಹಳ್ಳ-ಕೊಳ್ಳಗಳ ತಳವನ್ನು ಸ್ಪರ್ಷಿಸಿರುವ ರಾಸಾಯನಿಕ ವಿಷ ಪ್ಲಾಸ್ಟಿಕ್. ಸಕಲ ಜೀವಿಗಳ ಕೋಶಗಳನ್ನು ಪ್ರವೇಶಿಸಿ ರಾಜ್ಯಭಾರ ಮಾಡುತ್ತಿದೆ, ನಾವು ಸೇವಿಸುವ ಆಹಾರದಲ್ಲಿಯೂ ಸಂಪೂರ್ಣವಾಗಿ ಅಂತರ್ ಭೂತವಾಗಿ ರಕ್ತದ ಕಣಕಣಗಳನ್ನು ಸೇರಿಕೊಂಡಿದೆ. ಗ್ರಾಹಕ ಸರಕುಗಳ ಉತ್ಪಾದನಾ ಕ್ರಾಂತಿಗೆ ಪ್ಲಾಸ್ಟಿಕ್ ನಾಂದಿ ಹಾಡಿತು. ಸೈಕಲ್‌ನಿಂದ ವಿಮಾನ ತಯಾರಿಕೆಯವರೆಗೂ ಬಳಕೆಯಾಯಿತು. ವಸ್ತುಗಳ ಸಂಗ್ರಹಣೆ, ಶೇಖರಣೆ ಮತ್ತು ಪ್ಯಾಕಿಂಗ್ ವಸ್ತು ತಯಾರಿಕೆಯಲ್ಲಿ ಮೂಲಸ್ಥಾಯಿ ಆಯಿತು. ಮ್ಯಾಕ್ರೋ ಜೀವನದಿಂದ ಮೈಕ್ರೋ ಜೀವನವನ್ನು ಪ್ಲಾಸ್ಟಿಕ್ ಪ್ರವೇಶಿಸಿದ್ದು, ಆಹಾರ, ತಿನಿಸು, ನೀರು, ತಂಪು ಪಾನೀಯ, ಹಾಲು ಮುಂತಾದವುಗಳ ಬಳಕೆಯಲ್ಲಿ ಮತ್ತು ಶೇಖರಣೆಯಲ್ಲಿ ಅನಿವಾರ್ಯವಾಯಿತು.

ಎಸೆಯುವ ಪ್ಲಾಸ್ಟಿಕ್‌ಗಳ ಮಾಲಿನ್ಯದ ಕಂಟಕದ ವಿರುದ್ಧ ಅಮೆರಿಕದಲ್ಲಿ ಜನರು 1970ರಲ್ಲಿ ಚಳವಳಿ ಪ್ರಾರಂಭಿಸಿದರು. ಈ ಜನಜಾಗೃತಿ ಆಂದೋಲನ ಮತ್ತು ಚಳವಳಿಯ ವಿರುದ್ಧ, ವಿಶೇಷವಾಗಿ ಕೋಕೋ ಕೋಲಾದಂತಹ ಕಂಪೆನಿಗಳು ಪ್ಲಾಸ್ಟಿಕ್ ಸೃಷ್ಟಿಸಿದ ಮಲಿನದ ಅನಾಹುತವನ್ನು ಮರೆಮಾಚುವುದಕ್ಕೆ ‘ಅಮೆರಿಕವನ್ನು ಸುಂದರವನ್ನಾಗಿಡು’ (keep America beautiful) ‘ರೋದಿಸುತ್ತಿರುವ(ರೆಡ್)ಇಂಡಿಯನ್’ (crying Indian)ನಂತಹ ಜಾಹೀರಾತುಗಳನ್ನು ಪ್ರಾಯೋಜಿಸಿದವು. ಏನು ಈ ಜಾಹೀರಾತುಗಳ ಸಂಚು? ಪರಿಸರ ಮಾಲಿನ್ಯದ ಅತಿ ದೊಡ್ಡ ಖಳನಾಯಕರಾದ ಕೋಕಾ ಕೋಲಾ, ನೆಸ್ಲೇ, ಯುನಿ ಲೀವರ್, ಪ್ರಾಕ್ಟರ್ ಆಂಡ್ ಗ್ಯಾಂಬಲ್ ಪರಿಸರ ಮಾಲಿನ್ಯದ ಹೊಣೆಗಾರಿಕೆಯನ್ನು ಸಾಮಾನ್ಯ ಗ್ರಾಹಕರ, ಸಾರ್ವಜನಿಕರ ಮೇಲೆ ಹೊತ್ತು ಹಾಕುವುದು! ಪ್ಲಾಸ್ಟಿಕ್ ಕಸದ ಪರಿಸರ ಮಾಲಿನ್ಯಕ್ಕೆ ಸಾರ್ವಜನಿಕರ ಬೇಜವಾಬ್ದಾರಿಯೇ ಮೂಲ ಕಾರಣವೆಂಬ ಮನಸ್ಸನ್ನು ಸೃಷ್ಟಿಸುವ ಒಂದು ಪ್ರಾಪಗಾಂಡ, ಪ್ಲಾಸ್ಟಿಕ್ ಬಳಕೆಯನ್ನು ಸಾರ್ವಜನಿಕರೇ ಮಾಡುತ್ತಿರುವುದರಿಂದ ಅದರ ನಿವಾರಣೆಯನ್ನು ಅವರೇ ಮತ್ತು ಅವರಿಂದ ರಚನೆಯಾದ (ಸ್ಥಳೀಯ) ಸರಕಾರದ್ದೇ ಜವಾಬ್ದಾರಿ ಎಂದು ಜನಾಭಿಪ್ರಾಯ ಮೂಡಿಸುವ ಹುನ್ನಾರ. ಈ ಅಭಿಪ್ರಾಯ ನಮ್ಮಲ್ಲಿ ಈಗ ಬಲವಾಗಿ ಬೇರೂರಿದೆ. ಪ್ಲಾಸ್ಟಿಕ್ ತಯಾರಿಕೆಯ ಮೂಲಗಳು, ಉದ್ದೇಶಗಳು ಮತ್ತು ಹರಡುವಿಕೆಯ ರೂಪರೇಷೆಗಳನ್ನು ನಾವು ಪ್ರಶ್ನೆ ಮಾಡುವುದೇ ಇಲ್ಲ. ಅಲ್ಲದೆ ಪ್ಲಾಸ್ಟಿಕ್ ಮಾಲಿನ್ಯದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಈ ಕಾರ್ಪೊರೇಟ್ ‘green washing’ ‘recycle’ ‘down cycle’ ಎಂಬ ಮರೆ ಮಾಚಿಸುವ, ದಾರಿತಪ್ಪಿಸುವ ಹೊಸ ‘ತಂತ್ರಜ್ಞಾನ’ (ತಂತ್ರಗಾರಿಕೆ) ‘ಸಂಜೀವಿನಿ’ಯನ್ನೇ ಸೃಷ್ಟಿ ಮಾಡಿದವು. ಮರು ಸಂಸ್ಕರಣಾ ಪದ್ಧತಿಯು ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಯಥಾ ಸ್ಥಿತಿಯನ್ನು (ಕಾಪಾಡಿಕೊಳ್ಳುವ ಹುನ್ನಾರವೇ ಹೊರತು, ಪ್ಲಾಸ್ಟಿಕ್ ಉತ್ಪಾದನೆಯ ಮೂಲವನ್ನೇ ಪ್ರಶ್ನಿಸುವುದಿಲ್ಲ. ಕೇವಲ ಶೇ.9 ಪ್ಲಾಸ್ಟಿಕ್ ಮರು ಸಂಸ್ಕರಣೆಗೆ ಒಳಗಾದರೆ, ಶೇ.12ರಿಂದ 19 ಸುಡಲಾಗುತ್ತದೆ ಮತ್ತು ಶೇ.79 ರಾಶಿತಿಪ್ಪೆಯಾಗುತ್ತದೆ.

ಪ್ಲಾಸ್ಟಿಕ್ ಮರು ಸಂಸ್ಕರಣೆ ಎಂಬ ಮರೀಚಿಕೆ

ಪ್ಲಾಸ್ಟಿಕ್ ಮರು ಸಂಸ್ಕರಣೆ ಎಂಬ ಮಿಥ್ಯ ಕಲ್ಪನೆಯನ್ನು ಹೆಣೆದಿದ್ದೇ ಕಾರ್ಪೊರೇಟ್ ಜಗತ್ತು. ಮರು ಸಂಸ್ಕರಣೆಯ ಸವಾಲುಗಳು: (1) ವಿಪರೀತ ಬಂಡವಾಳ ಖಾಸಗಿ ಅಥವಾ ಸರಕಾರಿ ವಲಯದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. (2) ಅತ್ಯಾಧುನಿಕ ಸಂಶೋಧನೆ ಮತ್ತು ಯಂತ್ರಗಳ ಅಗತ್ಯತೆ ಹೊಸ ಪ್ಲಾಸ್ಟಿಕ್ ತಯಾರಿಕಾ ವೆಚ್ಚ ಸಂಸ್ಕರಣ ಪ್ಲಾಸ್ಟಿಕ್ ತಯಾರಿಕ ವೆಚ್ಚಕ್ಕಿಂತ ಕಡಿಮೆ. (3) ಗ್ರೀನ್ ಪೀಸ್ ಸಂಸ್ಥೆಯ ಪ್ರಕಾರ ಮರು ಸಂಸ್ಕರಣೆ ಇನ್ನೂ ವಿಷಪೂರಿತವಾಗಿರುತ್ತದೆ. (4) ಸಂಗ್ರಹಣೆ ಆಯಾಸಕರ, ದುಬಾರಿ ಮತ್ತು ಸಂಕೀರ್ಣ ಪ್ರಕ್ರಿಯೆ. ಬೃಹತ್ ಪ್ರಮಾಣದ ತ್ಯಾಜ್ಯ ಸಂಗ್ರಹಕರು, ಸಾಗಣೆ ಮತ್ತು ವಿಂಗಡಣಾ ವ್ಯವಸ್ಥೆ ಬೇಕಾಗುತ್ತದೆ (5) ಸಂಗ್ರಹಣೆ ಮತ್ತು ಸಂಸ್ಕರಣಕ್ಕೆ ಬೇಕಾದ ಅಪಾರ ಸ್ಥಳಾವಕಾಶದ ಕೊರತೆ. (6) ಪ್ಲಾಸ್ಟಿಕ್ ಕಸದ ಮಾರಕತೆಯ ಬಗ್ಗೆ ಜನ ಜಾಗೃತಿಯ ಕೊರತೆ ಇದೆ (7) ಕಸ ವಿಂಗಡಣಾ ಶೋಷಣೆಯ ಕೂಪ - ಈ ಪ್ರಕ್ರಿಯೆಯಲ್ಲಿ ಬಾಲಕಾರ್ಮಿಕರು, ಅಗ್ಗದ ಮತ್ತು ವಲಸೆ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಭಾರತದಲ್ಲಿ ಪೌರಕಾರ್ಮಿಕರ ಬವಣೆ, ಅದಕ್ಕೆ ಅಂಟಿಕೊಂಡಿರುವ ಅಪಕೀರ್ತಿ ನಮಗೆಲ್ಲ ತಿಳಿದೇ ಇದೆ. ಚಿಂದಿ ಆಯುವವರಿಂದ ಕೇವಲ ಮರು ಬಳಕೆಗೆ ಬರುವ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತ ದೇಶವನ್ನಾಗಿ ಮಾಡುವುದು ಸುಳ್ಳು. ಅದು ಹಗಲು ಕನಸು. ಉದಾಹರಣೆಗೆ ಸ್ವಚ್ಛ ಭಾರತದ ಸಫಲತೆಯ ಕಥೆ ನಮಗೆಲ್ಲ ತಿಳಿದೇ ಇದೆ. ಪ್ಲಾಸ್ಟಿಕ್ ಮೇಲೆ ಅವಲಂಬನೆ ಮತ್ತು ಅದರ ಅಡ್ಡ ಪರಿಣಾಮಗಳು ಒಂದು ವಿಷ ವರ್ತುಲ. ಮನುಷ್ಯನ ಬುದ್ಧಿ, ವಿವೇಕದಿಂದ ಮಾತ್ರ ಪ್ಲಾಸ್ಟಿಕ್ ಶಾಪದಿಂದ ಮುಕ್ತಿಯನ್ನು ಪಡೆಯಬಹುದೇ ಹೊರತು, ಅದರ ಉತ್ಪಾದನೆಯನ್ನು ನಿಲ್ಲಿಸಲು ಮತ್ತು ಪರಿಣಾಮವನ್ನು ನಾಶ ಮಾಡಲು ಸಾಧ್ಯವಿಲ್ಲ.

ಈ ಸವಾಲುಗಳ ಪರಿಣಾಮವಾಗಿಯೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಂದು ನದಿ, ಕೆರೆ, ಹಳ್ಳಕೊಳ್ಳ, ಸರೋವರ, ರಸ್ತೆ ಬದಿ, ರೈಲ್ವೆ ಮಾರ್ಗ, ಸಮುದ್ರ ತೀರಗಳನ್ನು ಸೇರಿ ಕೊಂಡಿದೆ. ಈಗ ನಮಗೆ ಕಣ್ಣೆದುರೇ ಮೊದಲು ಕಾಣುವುದು ಪ್ಲಾಸ್ಟಿಕ್ ತ್ಯಾಜ್ಯ. ಖಗೋಳ -ಭೂಗೋಳದಲ್ಲಿ ಪ್ಲಾಸ್ಟಿಕ್ ಸರ್ವಾಂತರ್ಯಾಮಿಯಾಗಿದೆ.

ಹೀಗೆ ಪರಿಸರದಲ್ಲಿ ಕಂಡ ಕಂಡ ಕಡೆ ವಿಲೇವಾರಿಗೊಂಡ ಪ್ಲಾಸ್ಟಿಕ್ ತ್ಯಾಜ್ಯ ಸಂಪೂರ್ಣವಾಗಿ ಮೊದಲು ಮೈಕ್ರೋ ಪ್ಲಾಸ್ಟಿಕಾಗಿ, ಆನಂತರ ವಿಷಪೂರಿತ ಕೆಮಿಕಲ್‌ಗಳಾದ ಮೀಥೇನ್, ಎಥೆಲಿನ್, ಸೀಸ, ಪಾದರಸ, ಆರ್ಸೆನಿಕ್, ತ್ಯಾಲಾಟ್ಸ್, ಡೈಯೋಕ್ಸಿನ್, ಫುಮೆನ್ಸ್‌ಗಳಾಗಿ ನದಿ, ಹಳ್ಳ ಕೊಳ್ಳ, ಕೆರೆ, ಸರೋವರ, ಕೃಷಿ ಭೂಮಿಯನ್ನು ಸೇರಿಕೊಂಡು ಆಹಾರ ಸರಪಣಿಯ ಮೂಲಕ ಮನುಷ್ಯ, ಪ್ರಾಣಿಗಳ ದೇಹವನ್ನು ಸೇರಿಕೊಂಡು ಕ್ಯಾನ್ಸರ್, ಕಿಡ್ನಿ ವೈಫಲ್ಯ ಮತ್ತು ಮಾನಸಿಕ ಕಾಯಿಲೆಗಳಿಗೆ ಮೂಲ ಕಾರಣವಾಗುತ್ತದೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ವಿಘಟನೆ ಗೊಳ್ಳಲು ಸುಮಾರು 400 ವರ್ಷಗಳು ಬೇಕು. ಒಟ್ಟು ಪ್ಲಾಸ್ಟಿಕ್ ತ್ಯಾಜ್ಯದ ಶೇ.25ರಷ್ಟು ಗುಡ್ಡೆಯಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡಲಾಗುವುದು. ಸುಟ್ಟಾಗ ಅದರಿಂದ ಕಾರ್ಬನ್ ಡೈಆಕ್ಸೆಡ್, ಕಾರ್ಬನ್ ಮೋನಾಕೈಡ್, ಸಲ್ಫರ್ ಡೈಯಾಕ್ಸೆಡ್ ಮುಂತಾದ ವಿಷಕಾರಿ ಪುಭಾವದಿಂದ, ಉಸಿರಾಟದ ತೊಂದರೆ ಸ್ತ್ರೀಯರಲ್ಲಿ ಮುಟ್ಟಿನ ಏರುಪೇರು ಉಂಟಾಗುತ್ತದೆ. ಅದಕ್ಕೆ ಇಂಥ ಗುಡ್ಡೆಗಳನ್ನು ಕ್ಯಾನ್ಸರ್ ಸೃಷ್ಟಿ ಕೇಂದ್ರಗಳೆಂದೇ ಕರೆಯುತ್ತಾರೆ. ಈ ಪ್ಲಾಸ್ಟಿಕ್ ಗುಡ್ಡೆಗಳಿಗೆ ಬೆಂಕಿ ಹಚ್ಚುವುದೆಂದರೆ, ದೀರ್ಘಕಾಲದಲ್ಲಿ ಇವು ಮಿನಿ ವೀಕೆಂದ್ರಿಕೃತ ಭೋಪಾಲ್ ಗ್ಯಾಸ್ (ಯೂನಿಯನ್ ಕಾರ್ಬೈಡ್) ದುರಂತ ಕೇಂದ್ರಗಳಾಗುತ್ತವೆ! ಕಸದಿಂದ ವಿದ್ಯುತ್ ಉತ್ಪಾದನಾ ಕಲ್ಪನೆಯಂತೂ ಭಯಾನಕ ಮಾರಕ. ಪ್ಲಾಸ್ಟಿಕ್ ಅನ್ನು ಸುಟ್ಟು ವಿದ್ಯುತ್ ತಯಾರಿಕೆಯಲ್ಲಿ ಅತಿ ಹೆಚ್ಚು ಕಾರ್ಬನ್ ಬಿಡುಗಡೆಯಾಗುವುದಲ್ಲದೆ, ಅತ್ಯಂತ ವಿಷಕಾರಿ ತ್ಯಾಜ್ಯ (ಬೂದಿ) ಕೂಡ ಉಳಿಕೆಯಾಗುತ್ತದೆ. ಇದು ನೀರಿನ ಮೂಲವನ್ನು ಸೇರಿಕೊಂಡರೆ ಜೀವಿಗಳಿಗೆ ಮೃತ್ಯು ಕಂಟಕವಾಗುತ್ತದೆ.

ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್‌ನಂತಹ ರಾಷ್ಟ್ರಗಳು ತಮ್ಮ ಕೈಗಾರಿಕಾ, ವಾಣಿಜ್ಯ ಮತ್ತು ಗೃಹ ತ್ಯಾಜ್ಯಗಳನ್ನು ಸಂಸ್ಕರಣ ಮಾಡುವ ಸೋಗಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ/ ಕಡಿಮೆ ಆದಾಯವುಳ್ಳ ಫಿಲಿಪ್ಪೀನ್ಸ್, ವಿಯೆಟ್ನಾಂ, ಥಾಯ್ಲೆಂಡ್, ಘಾನಾ, ಶ್ರೀಲಂಕಾ, ಸೆನೆಗಲ್, ಕಿನ್ಯಾ, ನೈಜೀರಿಯಾದಂತಹ ರಾಷ್ಟ್ರಗಳಿಗೆ ಕುತಂತ್ರ, ವಾಮ ಮಾರ್ಗದಲ್ಲಿ ರವಾನಿಸಿ ಕಸದ ವಿಷವನ್ನು ಈ ರಾಷ್ಟ್ರಗಳಿಗೆ ಉಣಿಸಿ ಈ ರಾಷ್ಟ್ರಗಳನ್ನು ಕಸ ವಸಹಾತುಗಳಾಗಿ ಪರಿವರ್ತಿಸಿವೆ. ಶ್ರೀಮಂತರ ರಾಷ್ಟ್ರಗಳ ಕಸವನ್ನು ಬಡ/ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ರವಾನಿಸುವ ಬೃಹತ್ ಅಂತರ್‌ರಾಷ್ಟ್ರೀಯ ಜಾಲವಿದೆ. ಈ ರಾಕ್ಷಸಿ ಜಾಲವನ್ನು ಅಂತರ್‌ರಾಷ್ಟ್ರೀಯ ಸಂಸ್ಥೆಗಳಾಗಲೀ, ಸ್ಥಳೀಯ ಸರಕಾರಗಳಾಗಲೀ ತಡೆಯಲು ಸಂಪೂರ್ಣವಾಗಿ ವಿಫಲವಾಗಿವೆ. ಕಸ ಸ್ವೀಕರಿಸುವ ದೇಶದಲ್ಲಿರುವ ಭ್ರಷ್ಟ ರಾಜಕೀಯ ವ್ಯವಸ್ಥೆಯು ಈ ಜಾಲಕ್ಕೆ ಕೈಜೋಡಿಸುತ್ತದೆ. 2021ರ ಪರಿಸರ ಆಡಿಟ್ ಪ್ರಕಾರ ಜಗತ್ತಿನಲ್ಲಿ ಅತ್ಯಂತ ಪ್ಲಾಸ್ಟಿಕ್ ಮಾಲಿನ್ಯ ಮಾಡುವ ವಿಲನ್‌ಗಳು - ಕೋಕೋ ಕೋಲಾ, ಪೆಪ್ಸಿಕೋ, ಯೂನಿ ಲಿವರ್, ನೆಸ್ಲೆ ಮತ್ತು ಪ್ರಾಕ್ಟರ್ ಆಂಡ್ ಗ್ಯಾಂಬಲ್. ಈ ಸಂಸ್ಥೆಗಳ ವ್ಯವಸ್ಥಾಪಕ ಜಾಲ ಕಸವನ್ನು ಬಡ ರಾಷ್ಟ್ರಗಳಿಗೆ ರವಾನಿಸುವ ಬಲಿಷ್ಠ ರಾಷ್ಟ್ರಗಳ ಆಡಳಿತ ವ್ಯವಸ್ಥೆಯಲ್ಲಿ ಪಾಲುದಾರರಾಗಿ ಲಾಬಿಗಳಾಗಿವೆ. ಚೀನಾ (National sword policy 2018) ಮತ್ತು ತುರ್ಕಿಯ ಮಾತ್ರ ‘ಕಸ ವ್ಯಾಪಾರ / ರಫ್ತನ್ನು ಸಂಪೂರ್ಣವಾಗಿ ತಡೆಯಲು ಸಫಲವಾಗಿವೆ. ಗ್ರೀನ್ ಪೀಸ್ ಸಂಸ್ಥೆಯ ಪ್ರಕಾರ 2040ರ ಹೊತ್ತಿಗೆ ಪ್ಲಾಸ್ಟಿಕ್ ಉತ್ಪಾದನೆ ಈಗಿಗಿಂತ ಇಮ್ಮಡಿಯಾಗುತ್ತದೆ !! ವಿಶ್ವ ಬ್ಯಾಂಕಿನ ಖ್ಯಾತ ಪರಿಸರ ನೀತಿ ತಜ್ಞ ಶಿಲ್ಪ ಕಾಝರವರ ಪ್ರಕಾರ ವರ್ಷಕ್ಕೆ ಸುಮಾರು 15 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತದೆ. ಇದರ ಪ್ರಮಾಣ 2040ರ ಹೊತ್ತಿಗೆ 30 ಮಿಲಿಯನ್ ಟನ್ ಆಗಬಹುದೆಂದು ಊಹಿಸಲಾಗಿದೆ. 2040ರ ಹೊತ್ತಿಗೆ ಸುಮಾರು 650 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರದಲ್ಲಿ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಭೂಮಿ ‘ಪ್ಲಾಸ್ಟಿಕ್ ಪ್ಲಾನೆಟ್’ ಆಗುತ್ತಿದೆ ಎಂದರೆ ತಪ್ಪಾಗಲಾರದು.

ಶಿಲ್ಪ ಕಾಝರವರ ಪ್ರಕಾರ, 2050ರ ಹೊತ್ತಿಗೆ ಕಸದ ಉತ್ಪಾದನೆ ಇಂದಿಗಿಂತ ಶೇ. 200 ಹೆಚ್ಚುತ್ತದೆ! ಪ್ರಪಂಚವೇ ಕಸದ ರಾಶಿಯಲ್ಲಿ ಮುಳುಗಿದರೆ ಅಚ್ಚರಿ ಇಲ್ಲ. ಅವರ ಪ್ರಕಾರ ಜಗತ್ತಿನ ಶೇ.25 ಕಸವನ್ನು ಕಡಿಮೆ ಆದಾಯವುಳ್ಳ ಜನರು, ದೇಶಗಳು ಉತ್ಪಾದಿಸಿದರೆ, ಶೇ.75ರಷ್ಟು ಕಸವನ್ನು ಶ್ರೀಮಂತರು ಉತ್ಪಾದಿಸುತ್ತಾರೆ. ಆದರೆ ಕಡಿಮೆ ಆದಾಯವುಳ್ಳ, ಅಭಿವೃದ್ಧಿ ಶೀಲ ದೇಶಗಳಲ್ಲಿ ಕಸ ನಿರ್ವಹಣೆಯ ಮಟ್ಟ ಅತ್ಯಂತ ಕಳಪೆ ಸ್ಥಿತಿಯಲ್ಲಿದೆ; ಇದು ಅಲ್ಲೇ ಮಾರಕವಾಗುತ್ತಿರುವುದು. ಅವರೇ ಹೇಳುವ ಹಾಗೆ, ಅಭಿವೃದ್ಧಿ ಹೊಂದುತ್ತಿರುವ, ಕಡಿಮೆ ಆದಾಯವುಳ್ಳ ದೇಶಗಳಲ್ಲಿ (ಉದಾಹರಣೆ, ದಕ್ಷಿಣ ಏಶ್ಯ) ಶೇ.93 ಉತ್ಪಾದಿತ ಕಸವನ್ನು ಸುಡಲಾಗುತ್ತದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ (ಬಡ ಹಾಗೂ ದುರ್ಬಲ ವರ್ಗದವರು ವಾಸಿಸುವ ಸ್ಥಳದ ಸುತ್ತಮುತ್ತ) ಬಿಸಾಡಲಾಗುತ್ತದೆ. ಪರಿಸರ ಮಾಲಿನ್ಯಕ್ಕೆ ಹೆಚ್ಚು ಕಾರಣಕರ್ತರು ಶ್ರೀಮಂತರು. ಆದರೆ ಅದರ ಮಾರಕವಾಗುವುದು ಕಡಿಮೆ ಆದಾಯ ವುಳ್ಳ, ಬಡವರ ಮತ್ತು ದುರ್ಬಲ ವರ್ಗದವರ ಮೇಲೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಸಿ. ಶಂಕರ್, ಚಿಕ್ಕಮಗಳೂರು

contributor