ಸಂಗೀತ ಪರಿಕರಗಳ ಇತಿಹಾಸಕ್ಕೆ ಜೀವ ತುಂಬಿದ ಗೀತಂ ಗಿರೀಶ್!
ಹಳೆಯ ತಂತ್ರಜ್ಞಾನ, ಸಂಗೀತ ಲೋಕದ ನೆನಪುಗಳ ಅಪರೂಪದ ಸಂಗ್ರಹ
ಉಡುಪಿ: ಇಂದು ನಮಗೆ ಮೊಬೈಲ್ ಫೋನ್‌ನಲ್ಲಿ ಒಂದು ಟಚ್‌ಗೆ ಇಷ್ಟದ ಹಾಡುಗಳನ್ನು ಕೇಳಿ ಆಸ್ವಾದಿ ಸಬಹುದು. ಆದರೆ ಒಂದು ಕಾಲವಿತ್ತು. ನಮ್ಮ ನೆಚ್ಚಿನ ಹಾಡು ಕೇಳಲು ಗ್ರಾಮಫೋನ್‌ನ ರೆಕಾರ್ಡ್ ತಟ್ಟೆಯನ್ನು ಜೋಪಾನವಾ
ಗಿಟ್ಟು, ಸೂಜಿಯನ್ನು ಅದರ ಮೇಲೆ ಇರಿಸಬೇಕಿತ್ತು. ಕ್ಯಾಸೆಟ್‌ಗಳ ಕಾಲದಲ್ಲಿ ಪೆನ್ಸಿಲ್‌ನಿಂದ ಟೇಪ್ ಸುತ್ತುತ್ತಿದ್ದ ನೆನಪುಗಳೂ ಇವೆ. ಕಾಲಚಕ್ರ ಉರುಳಿದಂತೆ ಇವೆಲ್ಲವೂ ಇತಿಹಾಸದ ಪುಟಗಳನ್ನು ಸೇರಿದವು. ಆದರೆ ಆ ಹಳೆಯ ಸಂಗೀತ ಲೋಕದ ನೆನಪುಗಳನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿರುವವರು ಉಡುಪಿಯ ಸಂಗೀತ ಸಂಯೋಜಕ ‘ಗೀತಂ ಗಿರೀಶ್’ ಎಂದೇ ಖ್ಯಾತರಾಗಿರುವ ಗಿರೀಶ್ ತಂತ್ರಿ.
ಕಾಲ ಬದಲಾಗಿದೆ, ತಂತ್ರಜ್ಞಾನವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಸಂಗೀತಪ್ರಿಯರ ಮನೆಗಳಲ್ಲಿ ಹೆಮ್ಮೆಯ ಸ್ಥಾನ ಪಡೆದಿದ್ದ ಸಂಗೀತ ಪರಿಕರಗಳು ಇಂದು ಅಪರೂಪದ ವಸ್ತುಗಳಾಗಿವೆ. ಆದರೆ ‘ಗೀತಂ ಗಿರೀಶ್’ರಲ್ಲಿ ಗ್ರಾಮ್‌ಫೋನ್, ಟೇಪ್ ರೆಕಾರ್ಡರ್, ಮಿಕ್ಸರ್, ವಿಸಿಡಿ, ವಿಸಿಆರ್ ಸೇರಿದಂತೆ ಹಿಂದಿನ ತಲೆಮಾರಿನ ಹಲವು ಸಂಗೀತ ಮತ್ತು ಇಲೆಕ್ಟ್ರಾನಿಕ್ಸ್ ಉಪಕರಣಗಳ ಸಂಗ್ರಹವೇ ಇದೆ. ಅವುಗಳನ್ನು ಗೀತಂ ಗಿರೀಶ್ ತಮ್ಮ ಸಂಗ್ರಹದಲ್ಲಿ ಜೋಪಾನ ವಾಗಿರಿಸಿಕೊಂಡು ತಂತ್ರಜ್ಞಾನದ ಬದಲಾವಣೆಯ ಇತಿಹಾಸವನ್ನು ಜೀವಂತವಾಗಿರಿಸಿಕೊಂಡಿದ್ದಾರೆ.
‘ನಮ್ಮಲ್ಲಿ ಗ್ರಾಮ್‌ಫೋನ್ ಮತ್ತು ಪ್ಲೈಟ್, ನಂತರ ಬಂದ ಸ್ಟೂಲ್ ಮ್ಯಾಗ್ನೆಟಿಕ್ ರೆಕಾರ್ಡಿಂಗ್, ನಂತರ ಆಡಿಯೋ ಕ್ಯಾಸೆಟ್, ವಿಡಿಯೋ ಕ್ಯಾಸೆಟ್, ಪ್ಲಾಪಿಗಳು, ಸಿಡಿ, ಎಸ್‌ಡಿ ಕಾರ್ಡ್, ಪೆನ್‌ಡ್ರೈವ್ ಹೀಗೆ ಕಾಲಕ್ಕೆ ತಕ್ಕಂತೆ ಬದಲಾದ ಸಂಗೀತ ಲೋಕದ ತಂತ್ರಜ್ಞಾನಗಳನ್ನು ಸಂಗ್ರಹಿಸಿಡಲಾ
ಗಿದೆ’’ ಎನ್ನುತ್ತಾರೆ ಪ್ರೀತಂ ಗಿರೀಶ್
ಗ್ರಾಮ್‌ಪೋನ್ ಕಂಪೆನಿಯವರು ಪ್ರಸಿದ್ಧಿಗೆ ತಂದ ರೆಕಾರ್ಡ್ ಪ್ಲೇಯರ್‌ನ್ನು ಎಲ್ಲರೂ ಗ್ರಾಮ್‌ಫೋನ್ ಎಂದೇ ಕರೆಯುತ್ತಾರೆ. 30ರ ದಶಕಗಳಲ್ಲಿ ಶ್ರೀಮಂತರ ಮನೆಗಳಲ್ಲಿ ಕಾಣಸಿಗುತ್ತಿದ್ದ ಈ ಸಂಗೀತ ಪರಿಕರಗಳು ಈಗಲೂ ಪ್ರೀತಂ ಗಿರೀಶ್ ಸಂಗ್ರಹದಲ್ಲಿವೆ. ಅದೇ ರೀತಿ ಅವರಲ್ಲಿ ಹಳೆಯ ಕಾಲದ ಮರದ ಟೆಲಿಫೋನ್, ವಿವಿಧ ಮಾದರಿಯ ರೆಡಿಯೋಗಳು ಕೂಡ ಇವೆ.
60-70ರ ದಶಕದಲ್ಲಿ ಬಳಕೆಯಲ್ಲಿದ್ದ ಸ್ಲೀಪಿಂಗ್ ಮಾದರಿಯ ಕ್ಯಾಸೆಟ್ ರೆಕಾರ್ಡರ್ ಅಂತೂ ವಿಶೇಷ ಆಕರ್ಷಣೆಯಾಗಿದೆ. ಇದಕ್ಕೆ ಸ್ಪೀಕರ್ ಇಲ್ಲ. ಮಿನಿ ಟೇಪ್ ರೆಕಾರ್ಡರ್ ಆಗಿದ್ದ ವಾಕ್‌ಮೆನ್, ಸ್ವಾತಂತ್ರ್ಯ ಪೂರ್ವದಲ್ಲಿ ಬಳಕೆ ಮಾಡುತ್ತಿದ್ದ ವಾಲ್ ಆಂಪ್ಲಿಫ್ಲೈರ್, ಚಿಕಾಗೋ ರೆಡಿಯೋ ಕಂಪೆನಿ ತಯಾರಿಸಿದ ಗಾಂಧಿ ಮೈಕ್, ಅಹುಜಾದ ಆರಂಭದ ಅಂದರೆ 80 ವರ್ಷಗಳ ಹಿಂದಿನ ವಿವಿಧ ಮಾದರಿಯ ಮೈಕ್, 80ರ ದಶಕದಲ್ಲಿ ಬಳಕೆ ಮಾಡುತ್ತಿದ್ದ ಸ್ಟೇಜ್ ಮೈಕ್‌ಗಳನ್ನು ನೋಡುವಾಗ ಹಳೆಯ ನೆನಪುಗಳು ಕಾಡುತ್ತವೆ.
ಅದೇ ರೀತಿ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧಿಯಲ್ಲಿದ್ದ ಸ್ಟಿರಿಯೋ ಟೇಪ್ ರೆಕಾರ್ಡರ್ ಕೂಡ ಇವರಲ್ಲಿದೆ. ಇದು ಆಗ ಭಾರತದಲ್ಲಿ ಸಿಗುತ್ತಿರಲಿಲ್ಲ. ಅದಕ್ಕೆ ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದರು. ಯಾಕೆಂದರೆ ಇದರಲ್ಲಿನ ಹಾಡು, ರೆರ್ಕಾಂಡಿಗ್ ಸಾಕಷ್ಟು ಗುಣಮಟ್ಟದ್ದಾಗಿತ್ತು. ಹಿಂದಿನ ಕಾಲದ ಮಿಕ್ಸರ್ ‘ಪ್ರೀ ಆ್ಯಂಪ್ಲಿಫೈರ್’, ಕ್ಯಾಸೆಟ್ ಕಾಪಿಯರ್, ವಿಡಿಯೋ ಕ್ಯಾಸೆಟ್ ರೆಕಾರ್ಡರ್, 50-60 ದಶಕದಲ್ಲಿ ಚಾಲ್ತಿಯಲ್ಲಿದ್ದ ಸ್ಪೂಲ್ ರೆಕಾರ್ಡರ್ ಪ್ಲೈಯರ್‌ಗಳು ಗಮನೆ ಸೆಳೆಯುತ್ತದೆ.
ಪ್ರೀತಂ ಗಿರೀಶ್ ಕೈಚಳಕ: ಸಂಗೀತ ಸಂಯೋಜನೆಯ ಜೊತೆಗೆ ಇಲೆಕ್ಟ್ರಾನಿಕ್ಸ್ ಸಂಗೀತ ಉಪಕರಣಗಳ ದುರಸ್ತಿಯಲ್ಲೂ ಪ್ರೀತಂ ಗಿರೀಶ್ ನಿಪುಣರು. ಇವರ ಶಾಪ್‌ನ ಹೆಸರು ಪ್ರೀತಂ ಇಲೆಕ್ಟ್ರಾನಿಕ್ಸ್ ಎಂಬುದಾಗಿದ್ದು, ಆ ಹಿನ್ನೆಲೆಯಲ್ಲಿ ಇವರನ್ನು ಜನ ‘ಪ್ರೀತಂ ಗಿರೀಶ್’ ಎಂದೇ ಗುರುತಿಸುತ್ತಾರೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕಾಸರಗೋಡು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕಲಾವಿದರು ತಮ್ಮ ಸಂಗೀತ ಉಪಕರಣಗಳು ಕೈಕೊಟ್ಟಾಗ ಇವರನ್ನು ಹುಡುಕಿಕೊಂಡು ಬರುತ್ತಾರೆ. ತಾಂತ್ರಿಕ ದೋಷದಿಂದ ಬಳಕೆಗೆ ಬಾರದ ಉಪಕರಣವನ್ನು ಪರಿಶೀಲಿಸಿ, ದೋಷವನ್ನು ಪತ್ತೆಹಚ್ಚಿ ದುರಸ್ತಿಪಡಿಸುವ ಇವರ ಕೈಚಳಕ ಕಲಾವಿದರಲ್ಲಿ ವಿಶ್ವಾಸ ಮೂಡಿಸಿದೆ. ಸಂಗೀತ ಉಪಕರಣಗಳ ಒಳಗಿನ ತಾಂತ್ರಿಕ ಸಮಸ್ಯೆಗಳನ್ನು ಅರಿತು ಪರಿಹರಿಸುವ ಕೌಶಲ ಇವರ ವಿಶೇಷತೆಯಾಗಿದೆ.