ಗಿಡ, ಮರ ಬೆಳೆಸಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುತ್ತಿರುವ ರಮೇಶ್
ಮಂಡ್ಯ: ಜಿಲ್ಲೆಯ ಐತಿಹಾಸಿಕ ಪ್ರವಾಸಿ ಕೇಂದ್ರ ಶ್ರೀರಂಗಪಟ್ಟಣ. ಪಕ್ಕದ ಚಂದಗಾಲು ಗ್ರಾಮದ ವೈ.ರಮೇಶ್ ತನ್ನ ಪತ್ನಿಯೊಂದಿಗೆ ಈ ಪಟ್ಟಣದಲ್ಲಿದ್ದಾರೆ. ತನ್ನ ಪರಿಸರ ಕಾಳಜಿಯಿಂದ ರಮೇಶ್ ಮನೆಮಾತಾಗಿದ್ದಾರೆ. ಇವರನ್ನು ಪರಿಸರ ರಮೇಶ್ ಎಂದೇ ಕರೆಯಲಾಗುತ್ತದೆ. ಮರಗಳನ್ನು ನೆಟ್ಟು ಬೆಳೆಸುವುದು, ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ನೀಡುವ ಕಾಯಕವನ್ನು ಹತ್ತು ವರ್ಷಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಇವರು ಈವರೆಗೆ ಸುಮಾರು 10 ಸಾವಿರ ಗಿಡಗಳನ್ನು ನೆಟ್ಟು, ನೀರು, ಗೊಬ್ಬರ ಹಾಕಿ ಬೆಳೆಸಿದ್ದಾರೆ.
ಶ್ರೀರಂಗಪಟ್ಟಣ ಸಮೀಪದ ಕರಿಘಟ್ಟ ಬೆಟ್ಟದ ಅರಣ್ಯ ಪ್ರದೇಶದಲ್ಲಿ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಆವರಣ, ಸಂತೆ ಮೈದಾನ, ಕ್ರೀಡಾಂಗಣ, ಶಾಲಾ-ಕಾಲೇಜು ಆವರಣದಲ್ಲಿ ಇವರು ಬೆಳೆಸಿರುವ ಮರಗಳು ಪ್ರವಾಸಿ ಕೇಂದ್ರ ಶ್ರೀರಂಗಪಟ್ಟಣವನ್ನು ಮತ್ತಷ್ಟು ಅಂದಗೊಳಿಸಿವೆ. ಇದಲ್ಲದೆ, ಶ್ರೀರಂಗಪಟ್ಟಣ ತಾಲೂಕಿನ ಶಾಲಾ-ಕಾಲೇಜು ಮತ್ತು ಸಾರ್ವಜನಿಕರ ಸ್ಥಳಗಳಲ್ಲೂ ನೂರಾರು ಮರಗಳನ್ನು ಬೆಳೆಸಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿದ್ದಾರೆ. ಯಾವುದೇ ಸಂಘ ಸಂಸ್ಥೆ, ಸರಕಾರದ ನೆರವಿಲ್ಲದೆ ತನ್ನ ದುಡಿಮೆಯಿಂದ ರಮೇಶ್ ಈ ಕಾಯಕ ಮಾಡುತ್ತಿರುವುದು ವಿಶೇಷ.
ಕರಿಘಟ್ಟ ಬೆಟ್ಟದ ಮೀಸಲು ಅರಣ್ಯ ಪ್ರದೇಶದಲ್ಲಿ ಹಲವು ಬಗೆಯ ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಅವರು ಕಾವೇರಿ ನದಿಯಿಂದ ನೀರನ್ನು ತೆಗೆದುಕೊಂಡು ಬೆಟ್ಟಕ್ಕೆ ಹೊತ್ತು ಗಿಡಗಳನ್ನು ಬೆಳೆಸಿದ್ದಾರೆ. ಪತಿಯ ಪರಿಸರ ಕಾಳಜಿಗೆ ಅವರ ಪತ್ನಿ ಅನುಪಮಾ ಹೆಗಲಾಗಿದ್ದಾರೆ.
ಶ್ರೀರಂಗಪಟ್ಟಣದ ಮೈದಾನದಲ್ಲಿ ಪ್ರತಿವಾರ ಸಂತೆ ನಡೆಯುತ್ತದೆ. ಈ ಮೈದಾನದಲ್ಲಿ ಯಾವುದೇ ಮರಗಳಿಲ್ಲ. ಬಿಸಿಲಿನಲ್ಲೇ ವ್ಯಾಪಾರ ನಡೆಯುತ್ತಿತ್ತು. ಕೆಲವರು ಟೆಂಟ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ಮೈದಾನದಲ್ಲಿ ಹೊಂಗೆಯ ಮರಗಳನ್ನು ಬೆಳೆಸಿದರೆ ಅನುಕೂಲವಾಗುತ್ತದೆಂದು ಮನಗಂಡ ರಮೇಶ್, ಸಸಿಗಳನ್ನು ನೆಡಲು ಮುಂದಾದರು. ಇದಕ್ಕೆ ವ್ಯಾಪಾರಸ್ಥರಿಂದ ವಿರೋಧ ಬಂತಂತೆ. ಹೇಗೋ ಅವರ ಮನವೊಲಿಸಿ ಮರಗಳನ್ನು ನೆಟ್ಟು ಬೆಳೆಸಿದರು. ಈಗ ಆ ಮರಗಳೇ ವ್ಯಾಪಾರಸ್ಥರಿಗೆ ನೆರಳಾಗಿವೆ. ಮರ ಬೆಳೆಸಲು ವಿರೋಧಿಸಿದ್ದ ಅದೇ ವ್ಯಾಪಾರಸ್ಥರು ಈಗ ರಮೇಶ್ ಅವರ ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.
ಗೂಡ್ಸ್ ಆಟೊವೊಂದೇ ರಮೇಶ್ ಅವರ ಜೀವನ ನಿರ್ವಹಣೆಗೆ ಇರುವ ಏಕೈಕ ಆಸ್ತಿ. ಆಟೊದಲ್ಲಿ ಶುದ್ಧ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ತುಂಬಿಕೊಂಡು ಪಟ್ಟಣದ ಮನೆಗಳು, ಅಂಗಡಿ, ಹೊಟೇಲ್‌ಗಳಿಗೆ ನಿತ್ಯ ಹಾಕುತ್ತಾರೆ.
ಪ್ರಶಸ್ತಿಗಳು: ರಮೇಶ್ ಅವರ ಪರಿಸರ ಕಾಳಜಿಗೆ ನೂರಾರು ಪ್ರಶಸ್ತಿಗಳು ಅರಸಿ ಬಂದಿವೆ. ರಾಜ್ಯ ಸರಕಾರ ಕೊಡಮಾಡುವ ರಾಜ್ಯ ಪರಿಸರ ಪ್ರಶಸ್ತಿ(2024), ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಎಚ್.ಹೊನ್ನಯ್ಯ ದತ್ತಿ ಪ್ರಶಸ್ತಿ, ಕೊಪ್ಪಳದ ಗವಿಮಠದ ಗವಿಶ್ರೀ ಪ್ರಶಸ್ತಿ, ಕೊಳ್ಳೇಗಾಲದ ಕಾನ್ಸಿ ಫೌಂಡೇಷನ್‌ನ ವಿಜಯ ಪ್ರಶಸ್ತಿ, ಕ್ಯಾತನಹಳ್ಳಿಯ ಹಸಿರು ನಕ್ಷತ್ತ ಕೆ.ಎಸ್.ಪುಟ್ಟಣ್ಣಯ್ಯ ಪ್ರಶಸ್ತಿ ಸಹಿತ ಸಂಘ ಸಂಸ್ಥೆಗಳ ಪ್ರಶಸ್ತಿ, ಸನ್ಮಾನಕ್ಕೆ ರಮೇಶ್ ಭಾಜನರಾಗಿದ್ದಾರೆ.