×
Ad

ಬಡವರಿಗೆ ದಕ್ಕದ ಆರೋಗ್ಯದ ಹಕ್ಕು

ಆರೋಗ್ಯ ಸ್ವಾತಂತ್ರ್ಯ

Update: 2025-08-15 10:12 IST

ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಲಭ್ಯತೆ ಎಲ್ಲರಿಗೂ ಒಂದೇ ಆಗಿಲ್ಲ ಎನ್ನುವುದು ಕಟುವಾಸ್ತವವಾಗಿದೆ. ತಾಯಿಮರಣ ದರ, ಶಿಶುಮರಣ ದರ, ಸರಾಸರಿ ಜೀವಿತಾವಧಿಯೇ ಮೊದಲಾದ ಪ್ರತಿಯೊಂದು ಸಂಗತಿಯೂ ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ, ಬಡವ ಸಿರಿವಂತರ ನಡುವೆ, ಸ್ತ್ರೀಪುರುಷರ ನಡುವೆ ಭಿನ್ನವಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಭಾರೀ ಅಂತರವಿದೆ. ತುರ್ತು ಚಿಕಿತ್ಸೆ, ಮಾರಕ ರೋಗಗಳ ವಿರುದ್ಧ ಆಧುನಿಕ ಚಿಕಿತ್ಸೆ, ಅಪಘಾತ ಚಿಕಿತ್ಸೆಗಳು ಗ್ರಾಮೀಣ ಪ್ರದೇಶದವರಿಗೆ, ನಗರದ ಬಡವರಿಗೆ ನಿಲುಕದ ಸಂಗತಿಗಳಾಗಿಯೇ ಮುಂದುವರಿದಿವೆ.

ಯಾವುದೇ ವಿಷಯದಲ್ಲಿ ನಮಗಿರುವ ಸ್ವಾತಂತ್ರ್ಯವನ್ನು ಎರಡು ಸಂಗತಿಗಳು ನಿರ್ಧರಿಸುವುವು: ಅದನ್ನು ಪಡೆಯಲು ಇರುವ ಅವಕಾಶ-ಆಯ್ಕೆ ಮತ್ತು ಸಾಧಿಸಿಕೊಳ್ಳಲು ಇರುವ ಹಕ್ಕುಗಳು. ರೋಗಮುಕ್ತಗೊಂಡು ಆರೋಗ್ಯವಂತರಾಗಲು ಸ್ವತಂತ್ರ ಭಾರತದ ಪ್ರಜೆಗಳಿಗಿರುವ ಅವಕಾಶ ಮತ್ತು ಆರೋಗ್ಯವು ಒಂದು ಹಕ್ಕಾಗಿ ಭಾರತದ ಪ್ರಜೆಗಳೆಲ್ಲರಿಗೂ ದೊರೆತಿದೆಯೇ ಎಂದು ನೋಡಹೊರಟರೆ...

ರೋಗಿಗಳು ಗ್ರಾಹಕರೆಂದು ಪರಿಗಣಿಸಲ್ಪಟ್ಟ ಭಾರತದಲ್ಲಿ ನಮ್ಮ ಆರೋಗ್ಯ ಕುರಿತ ನಿರ್ಧಾರ ನಾವೇ ತೆಗೆದುಕೊಳ್ಳಲು ಭಾಗಶಃ ಸ್ವಾತಂತ್ರ್ಯವಿದೆ. ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಪಾರಂಪರಿಕ ವೈದ್ಯ ಪದ್ಧತಿ, ಜಾಹೀರಾತುಗಳ ಔಷಧಿ, ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ಯಾವುದೋ ನೆಲದ ಬೇರು, ಎಲ್ಲಿಯದೋ ಮಣ್ಣು, ಮತ್ತೆಲ್ಲಿಯದೋ ನಾರು, ದೇವಮಾನವರ(?) ಆಶೀರ್ವಾದ, ಬೂದಿ-ಯಂತ್ರ-ತಾಯಿತಗಳಲ್ಲಿ ಯಾವುದನ್ನು ಬೇಕಾದರೂ ಪ್ರಯೋಗ ಮಾಡಬಹುದು. ವೈಜ್ಞಾನಿಕ ಆಧಾರ ಇದೆಯೋ ಇಲ್ಲವೋ, ಈ ಕಾಲಕ್ಕೆ ಹೊಂದುವುದೋ ಇಲ್ಲವೋ, ಸರಕಾರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲೂ ಮಿಶ್ರ ಪದ್ಧತಿಯ ಔಷಧ ಪ್ರಯೋಗ ಮಾಡಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ ಈ ಸ್ವಾತಂತ್ರ್ಯ ಅಪಾಯಕರವಾಗಿ ಪರಿಣಮಿಸಿ ಜನರ ಆರೋಗ್ಯ ಕಾಪಾಡುವ ಬದಲು ವ್ಯಾಪಾರಿಗಳ ಬಲೆಗೆ ರೋಗಿ ಬೀಳುವುದನ್ನು ಸುರಳೀತಗೊಳಿಸಿದೆ. ಸುಳ್ಳು ಭರವಸೆಗಳೊಂದಿಗೆ ಮಾರುಕಟ್ಟೆಗೆ ಬಂದಿರುವ ವಿವಿಧ ತರಹದ ಮೇಲು ಆಹಾರ/ಔಷಧಿಗಳ ಜಾಹೀರಾತು ಗಮನಿಸಿದರೆ ಇದು ತಿಳಿದುಬರುತ್ತದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದುವುದು ಪ್ರತೀ ಪ್ರಜೆಯ ಹಕ್ಕು. ಆರೋಗ್ಯದ ಹಕ್ಕು ಪಡೆದೆನೆನ್ನಲು ಇರಬೇಕಾದ ಅಂಶಗಳು ಮೂರು: ನಿರೋಗ, ಸ್ವ ಆರೋಗ್ಯ ರಕ್ಷಣೆ, ವೈದ್ಯಕೀಯ ಸೇವೆಯ ಲಭ್ಯತೆ. ಭಾರತ ದೇಶ ಸ್ವಾತಂತ್ರ್ಯ ಪಡೆದ ಕಾಲಕ್ಕೂ, ಇವತ್ತಿಗೂ ಹೋಲಿಸಿದರೆ ಜನಾರೋಗ್ಯದಲ್ಲಿ, ಆರೋಗ್ಯ ವ್ಯವಸ್ಥೆಯಲ್ಲಿ ಕೆಲವು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಕಾಲರಾ, ಪ್ಲೇಗ್, ಪೋಲಿಯೊ, ಮೈಲಿಬೇನೆಯಂತಹ ಹಲವು ಸಾಂಕ್ರಾಮಿಕಗಳನ್ನು ಲಸಿಕೆ, ಚುಚ್ಚುಮದ್ದು, ಔಷಧಿಗಳ ಮೂಲಕ ನಿಯಂತ್ರಿಸಲಾಗಿದೆ. ಸ್ವಾತಂತ್ರ್ಯದ ವೇಳೆಗೆ ಒಂದು ಲಕ್ಷ ಮಕ್ಕಳು ಹುಟ್ಟಿದರೆ 2,000 ತಾಯಂದಿರು ಮರಣ ಹೊಂದುತ್ತಿದ್ದರು. 1959ರ ವೇಳೆಗೆ ಈ ಸಂಖ್ಯೆ 1,000 ಆಯಿತು. ಕ್ರಿ.ಶ. 2000ದ ಹೊತ್ತಿಗೆ 384 ಇದ್ದದ್ದು ಈಗ 2023ರ ವೇಳೆಗೆ 97ಕ್ಕೆ ಇಳಿದಿದೆ. 1951ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 35.21 ವರ್ಷ ಇದ್ದದ್ದು ಈಗ ಹೆಚ್ಚುಕಡಿಮೆ ಅದರ ಎರಡರಷ್ಟು 70.82ರಷ್ಟಾಗಿದೆ. ಸ್ವಾತಂತ್ರ್ಯ ಸಿಗುವ ವೇಳೆಗೆ ಪ್ರತೀ ಸಾವಿರ ಮಕ್ಕಳು ಹುಟ್ಟಿದರೆ ಅವರಲ್ಲಿ 145 ಮಕ್ಕಳು ತೀರಿಕೊಳ್ಳುತ್ತಿದ್ದವು. ಈಗ ಆ ಸಂಖ್ಯೆ 24 ಆಗಿದೆ. ಇದು ನಮ್ಮ ದೇಶವಷ್ಟೇ ಅಲ್ಲ, ವಿಶ್ವಾದ್ಯಂತ ಎಲ್ಲೆಡೆ ಕಂಡುಬಂದಿರುವ ಸುಧಾರಣೆಯ ವಿದ್ಯಮಾನ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಸಂಶೋಧನೆಗಳು, ಸಂಪರ್ಕ ಮಾಧ್ಯಮ, ಶಿಕ್ಷಣ, ನಾನಾ ಯೋಜನೆಗಳು ಆರೋಗ್ಯ ಕ್ಷೇತ್ರದಲ್ಲಾದ ಸುಧಾರಣೆಗಳಿಗೆ ಕಾರಣವಾಗಿವೆ. ಇನ್ನು ಸ್ವತಂತ್ರ ಭಾರತದ ಮಹಿಳೆಯರು ಕೆಲವು ಅವಕಾಶ, ಹಕ್ಕುಗಳನ್ನು ಪಡೆದಿದ್ದಾರೆ. ಕುಟುಂಬ ಯೋಜನೆಯನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಘೋಷಿಸಿ ಉಚಿತ ಸಾಂಸ್ಥಿಕ ಹೆರಿಗೆ ಸೌಲಭ್ಯವನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಆರೋಗ್ಯ ವ್ಯವಸ್ಥೆ ಶ್ರಮಿಸಿದೆ. ತನಗೆಷ್ಟು ಮಕ್ಕಳು ಬೇಕು, ಬೇಕೋಬೇಡವೋ ಎಂದು ನಿರ್ಧರಿಸುವ ಪ್ರಜನನ ಅಧಿಕಾರ ಮಹಿಳೆಗೆ ದೊರಕಿದೆ. ಧರ್ಮದ ಹೆಸರಿನಲ್ಲಿ ಮುಂದುವರಿದ ಸಿರಿವಂತ ದೇಶಗಳಲ್ಲೂ ಸಿಗದ ಕುಟುಂಬ ಯೋಜನೆಯ ಅವಕಾಶ ಭಾರತದ ಮಹಿಳೆಗೆ ದೊರೆತಿದೆ.

ಆದರೆ ಇದರಲ್ಲಿ ಎಷ್ಟು ಕಾಗದದ ಮೇಲೆ ಮತ್ತು ಎಷ್ಟು ನಿಜವಾಗಿ ಸಂಭವಿಸುತ್ತಿದೆ ಎನ್ನುವುದೂ ಮುಖ್ಯವೇ. ಇವತ್ತಿಗೂ ಹೆಚ್ಚು ಕುಟುಂಬ ಯೋಜನೆಯ ವಿಧಾನಗಳು ಮಹಿಳೆಯರು ಬಳಸಲೆಂದೇ ಇವೆ. ಪುರುಷರಲ್ಲಿ ವ್ಯಾಪಕವಾಗಿದ್ದ ಅತಿ ಸರಳ ವ್ಯಾಸೆಕ್ಟಮಿ ಸಂತಾನಹರಣ ಶಸ್ತ್ರಚಿಕಿತ್ಸೆ ಹೆಚ್ಚುಕಡಿಮೆ ನಿಂತೇ ಹೋಗಿದೆ. ಹೊಸಹೊಸ ತಂತ್ರಜ್ಞಾನ, ವಿಧಾನಗಳು ಲಭ್ಯವಿದ್ದರೂ ಎಲ್ಲೆಲ್ಲಿ ಶ್ರಮ, ನೋವು, ಅನನುಕೂಲ ಎದುರಿಸಬೇಕೋ ಅದೆಲ್ಲ ಹೆಣ್ಣಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಭ್ರೂಣಾವಸ್ಥೆಯ ಹೆಣ್ಣು ಶಿಶುವನ್ನು ಹುಡುಕಿ ಕೊಲ್ಲಲು, ‘ಬಂಜೆತನ’ ಎಂಬ ನೈಸರ್ಗಿಕ ಸ್ಥಿತಿಯನ್ನು ಕಾಯಿಲೆಯಾಗಿಸಿ ಅದಕ್ಕೆ ಉಪಾಯ ಕಂಡುಹಿಡಿಯಲು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಎಲ್ಲ ಅಂಕಿಅಂಶ, ಅಭಿವೃದ್ಧಿ ಸೂಚ್ಯಂಕಗಳೂ ಸ್ತ್ರೀಪುರುಷರ ನಡುವೆ ಭಿನ್ನವಾಗಿವೆ.

‘ಕ್ರಿ.ಶ. 2000ದ ಹೊತ್ತಿಗೆ ಎಲ್ಲರಿಗೂ ಆರೋಗ್ಯ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿ ಕಾಲು ಶತಮಾನ ಕಳೆಯಿತು. ದೇಶದ ಪ್ರತೀ ಪ್ರಜೆಗೂ ಗುಣಮಟ್ಟದ ಆರೋಗ್ಯ ಸೌಲಭ್ಯಕ್ಕೆ ಸಮಾನ ಅವಕಾಶ ಸಿಗುವಂತಾಗಬೇಕು ಎನ್ನುವುದು ಅದರ ಆಶಯವಾಗಿತ್ತು. ಅದಕ್ಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದೃಢವಾಗಬೇಕು. ಆದರೆ ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಲಭ್ಯತೆ ಎಲ್ಲರಿಗೂ ಒಂದೇ ಆಗಿಲ್ಲ ಎನ್ನುವುದು ಕಟುವಾಸ್ತವವಾಗಿದೆ. ತಾಯಿಮರಣ ದರ, ಶಿಶುಮರಣ ದರ, ಸರಾಸರಿ ಜೀವಿತಾವಧಿಯೇ ಮೊದಲಾದ ಪ್ರತಿಯೊಂದು ಸಂಗತಿಯೂ ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ, ಬಡವ ಸಿರಿವಂತರ ನಡುವೆ, ಸ್ತ್ರೀಪುರುಷರ ನಡುವೆ ಭಿನ್ನವಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಭಾರೀ ಅಂತರವಿದೆ. ತುರ್ತು ಚಿಕಿತ್ಸೆ, ಮಾರಕ ರೋಗಗಳ ವಿರುದ್ಧ ಆಧುನಿಕ ಚಿಕಿತ್ಸೆ, ಅಪಘಾತ ಚಿಕಿತ್ಸೆಗಳು ಗ್ರಾಮೀಣ ಪ್ರದೇಶದವರಿಗೆ, ನಗರದ ಬಡವರಿಗೆ ನಿಲುಕದ ಸಂಗತಿಗಳಾಗಿಯೇ ಮುಂದುವರಿದಿವೆ. ಏಕೆಂದರೆ ದಿನದಿಂದ ದಿನಕ್ಕೆ ಆರೋಗ್ಯವೂ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ತೊಡಗಿಸುವ ಹೂಡಿಕೆಯು ‘ಆರ್ಥಿಕ ಹೊರೆ’, ‘ಅನಗತ್ಯ ವೆಚ್ಚ’ವೆಂಬಂತೆ ಸರಕಾರಗಳಿಗೆ ಕಾಣತೊಡಗಿದೆ. ವೈದ್ಯಕೀಯ ಶಿಕ್ಷಣ, ಔಷಧ ತಯಾರಿ-ಮಾರಾಟ, ಆರೋಗ್ಯ ಸೇವೆ - ಈ ಮೂರರಲ್ಲೂ ಖಾಸಗಿ ಬಂಡವಾಳದ ಪ್ರಾಬಲ್ಯ ಮೆರೆಯುತ್ತಿದೆ. ಹೀಗಿರುವಾಗ ಹಣವಿದ್ದವರಿಗಷ್ಟೇ ವೈದ್ಯಕೀಯ ಶಿಕ್ಷಣ; ಹಣವಿದ್ದವರಿಗಷ್ಟೇ ಉತ್ತಮ ಗುಣಮಟ್ಟದ ಔಷಧ; ಹಣವಿದ್ದವರಿಗಷ್ಟೇ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಎನ್ನುವುದು ಅಲಿಖಿತ ನಿಯಮವಾಗಿದೆ. ಲಸಿಕೆ, ಚುಚ್ಚುಮದ್ದು, ಉಪಕರಣ, ಔಷಧಿ, ಸಂಶೋಧನೆ, ಮೂಲಸೌಕರ್ಯವೇ ಮೊದಲಾದ ಆರೋಗ್ಯ ವ್ಯವಸ್ಥೆಯ ಸಕಲವೂ ಖಾಸಗಿ ಬಂಡವಾಳದಿಂದಲೇ ನಡೆಯುತ್ತಿರುವಾಗ ಬಡವರಿಗೆ ಆರೋಗ್ಯವು ಹಕ್ಕಾಗಿ ದಕ್ಕುವುದು ಹೇಗೆ? ಎಂದೇ ಸಮಾಜವಾದಿ ಪ್ರಜಾಪ್ರಭುತ್ವ, ಕಲ್ಯಾಣ ರಾಜ್ಯ ಭಾರತದಲ್ಲಿ ಆರೋಗ್ಯಕ್ಕಾಗಿ ಸರ್ವರಿಗೂ ಸಮಾನ ಅವಕಾಶ ಇಲ್ಲ ಎನ್ನುವುದೇ ಕಟು ವಾಸ್ತವವಾಗಿದೆ.

ಇದು ಅನಾರೋಗ್ಯದ ಹೊತ್ತಿನಲ್ಲಿ ಪಡೆಯುವ ಆರೋಗ್ಯ ಸೇವೆಗಳ ಕುರಿತ ಮಾತಾಯಿತು. ಇಷ್ಟಲ್ಲದೆ ಆರೋಗ್ಯದ ಹಕ್ಕು ಸಾಧಿಸಲು ಅಪಾಯಕಾರಿ ಸಂಗತಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅವಕಾಶ, ಸ್ವಾತಂತ್ರ್ಯವೂ ಅಗತ್ಯವಿದೆಯಲ್ಲವೇ? ಉದಾಹರಣೆಗೆ ಅನಿಯಮಿತ, ಅಗಣಿತ ಅತಿ ಲಾಭದಾಯಕ ವ್ಯಾಪಾರಕ್ಕೆ ಅನುಕೂಲ ಎಂಬ ಒಂದೇ ಕಾರಣಕ್ಕೆ ಅತಿ ಅಪಾಯಕರ ಪ್ಲಾಸ್ಟಿಕ್ ಅನ್ನು ಕಣ್ಮುಚ್ಚಿ ಬಳಸಲಾಗುತ್ತಿದೆ. ಅಪಾಯ ತಿಳಿದಿದ್ದರೂ ಮನ ಬಂದಂತೆ ಸುಟ್ಟು, ಕರಗಿಸಿ, ಬೂದಿಯಾಗಿಸಿ, ವಿಷಾನಿಲವಾಗಿಸಿ ವಿಲೇವಾರಿ ಮಾಡುತ್ತಿದ್ದೇವೆ. ನೂರಾರು ಮಾರಣಾಂತಿಕ ಹೊಸಹೊಸ ರೋಗಗಳಿಗೆ ಕಾರಣವಾದ; ಮನುಷ್ಯರಷ್ಟೇ ಅಲ್ಲ, ಸಕಲ ಜೀವಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣವೇ ಇಲ್ಲವಾಗಿದೆ. ನಿಷೇಧ ಕಾನೂನುಗಳು ಕಾಗದದ ಮೇಲಷ್ಟೇ ಇವೆ. ಕೈಗಾರಿಕೆ, ವಾಹನಗಳು, ಪರಮಾಣು ಶಸ್ತ್ರಾಸ್ತ್ರಗಳ ಬಳಕೆ, ‘ಅಭಿವೃದ್ಧಿ’ಯ ನೆಪದಿಂದ ಆಗುವ ಪರಿಸರ ನಾಶ, ಭೂ ತಾಪಮಾನ ಏರಿಕೆ ಇವೆಲ್ಲ ಆರೋಗ್ಯಕ್ಕೆ ಮಾರಕವಾದ ಸಂಗತಿಗಳು. ಅಭಿವೃದ್ಧಿಯ ನೆಪದಲ್ಲಿ ಆಗುತ್ತಿರುವ ಪರಿಸರದ ಮೇಲಿನ ದೌರ್ಜನ್ಯ ಮತ್ತದು ಉಂಟುಮಾಡುತ್ತಿರುವ ದುಷ್ಪರಿಣಾಮಗಳ ಬಗೆಗೆ ಜನಜಾಗೃತಿ ಮೂಡಿಸಿ, ಆಳುವ ವರ್ಗದ ಮೇಲೆ ಒತ್ತಡ ಹೇರಲು ನಮಗೆ ಸಾಧ್ಯವಾಗುತ್ತಿಲ್ಲ. ಬೃಹತ್ ಯೋಜನೆಗಳನ್ನು ವಿರೋಧಿಸಿ ಜನಸಂಘಟನೆ ಮಾಡಿದ ಮೇಧಾ ಪಾಟ್ಕರ್ ತರಹದವರಿಗೆ ಜೈಲೇ ಗತಿ. ನದಿ, ನೆಲ ಶುದ್ಧೀಕರಣವಾಗಲೆಂದು ಆಗ್ರಹಿಸಿ ಉಪವಾಸ ಕುಳಿತರೆ ಸಾವೇ ಗತಿ ಎನ್ನುವಂತಹ ಅದೃಶ್ಯ ಕ್ರೌರ್ಯ ಆಳುವ ವರ್ಗಗಳಿಗೆ ಬಂದುಬಿಟ್ಟಿದೆ. ಅರ್ಧಕ್ಕರ್ಧ ಜನರ ಆರೋಗ್ಯ, ನೆಮ್ಮದಿ ಹಾಳು ಮಾಡುತ್ತಿರುವ ಮದ್ಯ ಮಾರಾಟದಿಂದಲೇ ದೇಶ ನಡೆಯುತ್ತಿದೆ ಎನ್ನುವ ಸರಕಾರಗಳು ಬಜೆಟಿನ ಎಷ್ಟು ಪ್ರತಿಶತ ಆರೋಗ್ಯಕ್ಷೇತ್ರಕ್ಕೆ ಮೀಸಲಿಟ್ಟಿವೆ? ಆರೋಗ್ಯ ಕ್ಷೇತ್ರದಲ್ಲಿ ಏನು ಸಂಶೋಧನೆ ನಡೆಯುತ್ತಿದೆ? ಉಪಯೋಗವನ್ನು ಪಡೆಯುತ್ತಿರುವವರು ಯಾರು? ಪ್ರಯೋಗಗಳಿಗೆ ಬಲಿಯಾಗುವವರು ಯಾರು? ವಿಪರ್ಯಾಸವೆಂದರೆ ಈ ಎಲ್ಲ ಪ್ರಶ್ನೆಗಳಿಗೂ ಕಾಗದದ ಮೇಲಿನ ಯೋಜನೆ, ನೀತಿಗಳಲ್ಲಿ ಉತ್ತರವಿದೆ. ಆದರೆ ಅವೆಲ್ಲ ಕಾರ್ಯರೂಪಕ್ಕಿಳಿದಿವೆಯೇ ಎಂದು ಪ್ರಶ್ನಿಸುವ ಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಜನಾರೋಗ್ಯದ ನೆಪದ ಭ್ರಷ್ಟತೆ, ಅವಿವೇಕಿ ಯೋಜನೆಗಳ ಬಗೆಗೆ ಸೊಲ್ಲೆತ್ತೆವುದು ದೇಶದ್ರೋಹವೆನಿಸಿಕೊಳ್ಳುತ್ತದೆ.

ಇದು ನಮ್ಮ ಸ್ವತಂತ್ರ ಭಾರತದ ಆರೋಗ್ಯ ವ್ಯವಸ್ಥೆಯ ಒಂದು ಮೇಲುಮೇಲಿನ ನೋಟ. ವೈದ್ಯಕೀಯ ಶಿಕ್ಷಣದ ವೆಚ್ಚ, ಆರೋಗ್ಯ ಸೇವೆಯ ಗುಣಮಟ್ಟ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ, ಮಾರ್ಕೆಟ್ ಯುಗದ ವ್ಯಾಪಾರಿ ವೈದ್ಯರು, ನಕಲಿ ವೈದ್ಯ ಪದ್ಧತಿಗಳು, ಆರೋಗ್ಯ ಇಲಾಖೆಯೇ ಪೋಷಿಸುತ್ತಿರುವ ಅವೈಜ್ಞಾನಿಕ ಮಿಕ್ಸೋಪತಿ, ಬಂಡವಾಳ ಹೂಡಿ ಲಾಭ ತೆಗೆವ ಕ್ರೂರ ಹುಮ್ಮಸ್ಸಿನ ಕಾರ್ಪೊರೇಟ್ ಆಸ್ಪತ್ರೆಗಳು, ಔಷಧ ತಯಾರಿ ಮತ್ತು ಮಾರಾಟ ಜಾಲವೇ ಮುಂತಾಗಿ ನಮ್ಮ ಆರೋಗ್ಯ ವ್ಯವಸ್ಥೆಯ ಆಳಕ್ಕಿಳಿದು ವಿಶ್ಲೇಷಿಸಹೊರಟರೆ ಇಲ್ಲಿರುವ ಭ್ರಷ್ಟ, ಉಸಿರುಗಟ್ಟಿಸುವ ವಾತಾವರಣ ದಿಕ್ಕೆಡಿಸುತ್ತದೆ. ಅಷ್ಟೊಂದು ಅಪಭ್ರಂಶಗಳು, ವೈರುಧ್ಯಗಳು, ಅದಕ್ಷ ನಿರ್ವಹಣೆಗಳು ಕಣ್ಣಿಗೆ ರಾಚುವಂತಿವೆ.

ಇದು ಆರೋಗ್ಯ ಮತ್ತು ಸ್ವಾತಂತ್ರ್ಯ ಕುರಿತು ಆಯಿತು. ಇನ್ನು, ‘ಆ ಸಮುದಾಯದವರ ರಕ್ತ ತೆಗೆದುಕೊಳ್ಳುವುದಿಲ್ಲ’, ‘ಆ ಸಮುದಾಯದ ಪೇಶೆಂಟ್ ನೋಡುವುದಿಲ್ಲ’, ‘ಅವರೆಲ್ಲ ವಿನಾಶದಂಚಿಗೆ ಸರಿಯಬೇಕಾದವರು’ ಎನ್ನುವಂತಹ ಸಂಕುಚಿತ ಸ್ವಮತ ದುರಭಿಮಾನ-ಅನ್ಯಮತ ದ್ವೇಷದ ಈ ದಿನಗಳಲ್ಲಿ ಹುಟ್ಟು, ಸಾವು, ಕಾಯಿಲೆ, ಆರೋಗ್ಯಗಳೆಂಬ ಮನುಷ್ಯ ಜೀವರೆಲ್ಲರನ್ನೂ ಬಾಧಿಸುವ ಸಾಮಾನ್ಯವಾದ ಸಂಗತಿಯು ಜನರನ್ನು ಒಂದುಗೂಡಿಸಬಲ್ಲುದಾದರೆ ಅದು ನಿಜವಾಗಿ ಸ್ವಾತಂತ್ರ್ಯದ ಆರೋಗ್ಯವನ್ನು ಕಾಪಾಡುತ್ತದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಎಚ್.ಎಸ್. ಅನುಪಮಾ

contributor

Similar News