ನಿರುದ್ಯೋಗಿ ಯುವಕರು, ಸಿಬ್ಬಂದಿಯಿಲ್ಲದ ಸಂಸ್ಥೆಗಳು
ಅಭಿವೃದ್ಧಿ ರಾಷ್ಟ್ರದ ಯಶಸ್ಸು ಕೇವಲ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳಿಂದ ನಿರ್ಧಾರವಾಗುವುದಿಲ್ಲ; ದೇಶದ ಯುವಜನರ ಪ್ರತಿಭೆಯನ್ನು ಸಾರ್ವಜನಿಕ ಸಂಸ್ಥೆಗಳು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳುತ್ತವೆ ಎಂಬುದರ ಮೇಲೆಯೂ ಅವಲಂಬಿತವಾಗಿದೆ. ಲಕ್ಷಾಂತರ ನಿರುದ್ಯೋಗಿಗಳ ನಡುವೆ ಲಕ್ಷಾಂತರ ಮಂಜೂರಾದ ಹುದ್ದೆಗಳು ಖಾಲಿಯಾಗಿ ಉಳಿಯುವ ಪರಿಸ್ಥಿತಿ ಮುಂದುವರಿಯಬಾರದು. ಆ ಹುದ್ದೆಗಳನ್ನು ಭರ್ತಿ ಮಾಡುವುದು ಉದ್ಯೋಗ ನೀತಿಯ ವಿಷಯ ಮಾತ್ರವಲ್ಲ; ಅದು ಉತ್ತಮ ಆಡಳಿತ, ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಕರ್ತವ್ಯವಾಗಿದೆ.
ಭಾರತವು ಜಗತ್ತಿನ ಅತಿ ದೊಡ್ಡ ಯುವಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಜನಸಂಖ್ಯೆ ದೇಶದ ಆರ್ಥಿಕ ಬೆಳವಣಿಗೆಗೆ, ಜ್ಞಾನಸೃಷ್ಟಿಗೆ ಹಾಗೂ ಸಾಮಾಜಿಕ ಪರಿವರ್ತನೆಗೆ ಶಕ್ತಿಯಾಗಬೇಕಿತ್ತು. ಈ ಜನಸಂಖ್ಯಾ ಸಂಪತ್ತನ್ನು ದೇಶದ ಅಭಿವೃದ್ಧಿಯ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ ಉದ್ಯೋಗಾವಕಾಶಗಳ ವಿಸ್ತರಣೆ ಅತ್ಯಗತ್ಯ. ಆದರೆ ಇಂದಿನ ವಾಸ್ತವ ಚಿತ್ರ ಭಿನ್ನ, ನಮ್ಮ ಮುಂದೆ ಕಾಣುತ್ತಿರುವ ಚಿತ್ರವು ಒಂದು ವಿಚಿತ್ರ ವಿರೋಧಾಭಾಸವನ್ನು ಅನಾವರಣಗೊಳಿಸುತ್ತದೆ. ಒಂದು ಕಡೆ ಲಕ್ಷಾಂತರ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದು, ಮತ್ತೊಂದು ಕಡೆ ಸರಕಾರದ ವಿವಿಧ ಇಲಾಖೆಗಳು, ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಲಕ್ಷಾಂತರ ಮಂಜೂರಾದ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಇದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ; ಆಡಳಿತ ಮತ್ತು ಅಭಿವೃದ್ಧಿಯ ಪ್ರಶ್ನೆಯೂ ಹೌದು, ರಾಷ್ಟ್ರದ ಮಾನವ ಸಂಪನ್ಮೂಲ ನಿರ್ವಹಣೆಯ ಗಂಭೀರ ವೈಫಲ್ಯವಾಗಿದೆ.
ಉದ್ಯೋಗದ ಪ್ರಶ್ನೆಯನ್ನು ಸಾಮಾನ್ಯವಾಗಿ ಹೊಸ ಉದ್ಯೋಗಗಳ ಸೃಷ್ಟಿಯ ದೃಷ್ಟಿಯಿಂದ ಮಾತ್ರ ಚರ್ಚಿಸಲಾಗುತ್ತದೆ. ಆದರೆ ಈಗಿನ ವಾಸ್ತವಿಕತೆಯು ಮತ್ತೊಂದು ಸತ್ಯವನ್ನು ನೆನಪಿಸುತ್ತದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವಷ್ಟೇ ಮಹತ್ವವು ಈಗಾಗಲೇ ಮಂಜೂರಾಗಿರುವ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡುವುದಕ್ಕೂ ಇದೆ. ಸರಕಾರವು ತನ್ನದೇ ಸಂಸ್ಥೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡದಿದ್ದರೆ, ಆಡಳಿತದ ಸಾಮರ್ಥ್ಯ ಕುಂದುತ್ತದೆ; ಸಾರ್ವಜನಿಕ ಸೇವೆಗಳ ಗುಣಮಟ್ಟವೂ ಸಹಜವಾಗಿ ಹದಗೆಡುತ್ತದೆ.
ಸಂಸತ್ತಿನಲ್ಲಿ ಮಂಡನೆಯಾದ ಮಾಹಿತಿಯ ಪ್ರಕಾರ ಕೇಂದ್ರ ಸರಕಾರದಲ್ಲಿಯೇ ಸುಮಾರು 9.8 ಲಕ್ಷ ಮಂಜೂರಾದ ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ವಿಶ್ವವಿದ್ಯಾನಿಲಯಗಳು, ಐಐಟಿ, ಎನ್‌ಐಟಿ, ಐಐಎಂ ಹಾಗೂ ಇತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಗಂಭೀರವಾಗಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ವೈದ್ಯರು, ನರ್ಸ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಸಾವಿರಾರು ಹುದ್ದೆಗಳು ಭರ್ತಿಯಾಗಿಲ್ಲ. ಪರಿಣಾಮವಾಗಿ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡಿದೆ. ಪ್ರತಿಯೊಂದು ಖಾಲಿ ಶಿಕ್ಷಕ ಹುದ್ದೆಯ ಹಿಂದೆ ಶಿಕ್ಷಣದ ಗುಣಮಟ್ಟದ ಕುಸಿತವಿದೆ; ಪ್ರತಿಯೊಂದು ಖಾಲಿ ವೈದ್ಯರ ಹುದ್ದೆಯ ಹಿಂದೆ ಚಿಕಿತ್ಸೆಗಾಗಿ ಕಾಯುವ ರೋಗಿಯ ನೋವಿದೆ; ಪ್ರತಿಯೊಂದು ಖಾಲಿ ಆಡಳಿತ ಹುದ್ದೆಯ ಹಿಂದೆ ವಿಳಂಬವಾಗುವ ಸಾರ್ವಜನಿಕ ಸೇವೆಯಿದೆ.
ತಂತ್ರಜ್ಞಾನ ಮತ್ತು ಕೈಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಕರ್ನಾಟಕದ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಸರಕಾರದ ಅಧಿಕೃತ ಮಾಹಿತಿಯಂತೆ ರಾಜ್ಯದಲ್ಲಿ ಸುಮಾರು 2.84 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾನಿಲಯಗಳಲ್ಲಿಯೇ ಸಾವಿರಾರು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಇದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಕುಗ್ಗುತ್ತಿದ್ದು, ಸಂಶೋಧನೆ ಮತ್ತು ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೂ ಹೊಡೆತ ಬೀಳುತ್ತಿದೆ. ಸಂಶೋಧಕರಿಗೆ ಮಾರ್ಗದರ್ಶಕರ ಕೊರತೆಯಿದ್ದು ಶಿಷ್ಯವೇತನವನ್ನು ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗಾವಕಾಶಗಳು ಕೇಂದ್ರೀಕೃತವಾಗಿದ್ದರೆ, ಕಲ್ಯಾಣ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳು ಇನ್ನೂ ಸಿಬ್ಬಂದಿ ಕೊರತೆಯಿಂದ ಮತ್ತು ಅಭಿವೃದ್ಧಿಯ ಅಸಮಾನತೆಯನ್ನು ಎದುರಿಸುತ್ತಿವೆ.
ಇನ್ನೊಂದು ಆತಂಕಕಾರಿ ಅಂಶವೆಂದರೆ ಮೀಸಲಾತಿಯ ಬ್ಯಾಕ್‌ಲಾಗ್ ಹುದ್ದೆಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ದುರ್ಬಲ ವರ್ಗಗಳು ಹಾಗೂ ಅಂಗವಿಕಲರಿಗಾಗಿ ಮೀಸಲಾದ ಅನೇಕ ಹುದ್ದೆಗಳು ವರ್ಷಗಳಿಂದ ಖಾಲಿಯಾಗಿವೆ. ಇದು ಕೇವಲ ನೇಮಕಾತಿಯ ವಿಳಂಬವಲ್ಲ; ಸಂವಿಧಾನ ಪ್ರತಿಪಾದಿಸಿರುವ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಅನುಷ್ಠಾನದಲ್ಲಿ ಉಂಟಾಗಿರುವ ಕೊರತೆಯಾಗಿದೆ. ಇದು ಸಂವಿಧಾನದ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ. ಮೀಸಲಾತಿ ಕೇವಲ ಕಲ್ಯಾಣ ಯೋಜನೆಯಲ್ಲ; ಅದು ಪ್ರತಿನಿಧಿತ್ವದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂವಿಧಾನಾತ್ಮಕ ವ್ಯವಸ್ಥೆಯಾಗಿದೆ.
ಅಮರ್ತ್ಯ ಸೇನ್ ಅವರು ಅಭಿವೃದ್ಧಿಯನ್ನು ಆದಾಯದ ಹೆಚ್ಚಳವಾಗಿ ಅಲ್ಲ, ಅವಕಾಶಗಳ ವಿಸ್ತರಣೆಯಾಗಿ ವ್ಯಾಖ್ಯಾನಿಸುತ್ತಾರೆ. ಈ ದೃಷ್ಟಿಯಿಂದ ನೋಡಿದರೆ ಖಾಲಿ ಹುದ್ದೆಗಳು ಕೇವಲ ಉದ್ಯೋಗ ಕಳೆದುಕೊಂಡ ಯುವಕರ ಸಮಸ್ಯೆಯಲ್ಲ; ಅದು ರಾಷ್ಟ್ರದ ಅಭಿವೃದ್ಧಿಯ ಅವಕಾಶಗಳೇ ವ್ಯರ್ಥವಾಗುತ್ತಿರುವ ಸಂಕೇತವಾಗಿದೆ. ಸರಕಾರಗಳು ಕಟ್ಟಡಗಳನ್ನು ನಿರ್ಮಿಸಬಹುದು, ಹೊಸ ಸಂಸ್ಥೆಗಳನ್ನು ಸ್ಥಾಪಿಸಬಹುದು; ಆದರೆ ಅವುಗಳಲ್ಲಿ ಅಗತ್ಯ ಸಿಬ್ಬಂದಿಯೇ ಇಲ್ಲದಿದ್ದರೆ ಆ ಮೂಲಸೌಕರ್ಯವು ತನ್ನ ಉದ್ದೇಶವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಖಾಲಿ ಹುದ್ದೆಗಳ ಪರಿಣಾಮ ಕೇವಲ ಉದ್ಯೋಗಾಕಾಂಕ್ಷಿಗಳ ಮೇಲೆ ಮಾತ್ರ ಬೀಳುವುದಿಲ್ಲ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆ ಕುಗ್ಗುತ್ತದೆ; ವೈದ್ಯರ ಕೊರತೆಯಿಂದ ರೋಗಿಗಳಿಗೆ ಚಿಕಿತ್ಸೆ ವಿಳಂಬವಾಗುತ್ತದೆ; ಆಡಳಿತ ಸಿಬ್ಬಂದಿಯ ಕೊರತೆಯಿಂದ ಸಾರ್ವಜನಿಕ ಸೇವೆಗಳು ನಿಧಾನಗೊಳ್ಳುತ್ತವೆ; ಸಂಶೋಧಕರ ಕೊರತೆಯಿಂದ ಹೊಸ ಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹಿನ್ನಡೆಯುತ್ತದೆ. ಅಂದರೆ, ಖಾಲಿ ಹುದ್ದೆಗಳು ರಾಷ್ಟ್ರದ ಮಾನವ ಸಂಪನ್ಮೂಲದ ಅಪವ್ಯಯಕ್ಕೆ ಕಾರಣವಾಗುತ್ತವೆ.
ಭಾರತ ಇಂದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೂರದ ಗುರಿ ಹೊಂದಿದೆ. ಆದರೆ ಅಭಿವೃದ್ಧಿಯ ಮಾನದಂಡ ಕೇವಲ ಜಿಡಿಪಿ ಬೆಳವಣಿಗೆಯಿಂದ ಸಾಧ್ಯವಿಲ್ಲ. ಸಾರ್ವಜನಿಕ ಸಂಸ್ಥೆಗಳು ತಮ್ಮ ಮಂಜೂರಾದ ಸಿಬ್ಬಂದಿ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದೂ ಸಮಾನವಾಗಿ ಮುಖ್ಯ. ನಿರುದ್ಯೋಗ ಮತ್ತು ಖಾಲಿ ಹುದ್ದೆಗಳ ಈ ವಿರೋಧಾಭಾಸವನ್ನು ನಿವಾರಿಸುವುದು ರಾಷ್ಟ್ರೀಯ ಆದ್ಯತೆಯಾಗಬೇಕು.
ಆದ್ದರಿಂದ ಈಗ ಅಗತ್ಯವಿರುವುದು ಸಾಂದರ್ಭಿಕ ನೇಮಕಾತಿ ಅಭಿಯಾನಗಳಲ್ಲ, ಮೂಲಭೂತ ವ್ಯವಸ್ಥಾತ್ಮಕ ಸುಧಾರಣೆ. ಇದಕ್ಕಾಗಿ ಎಲ್ಲ ಸರಕಾರಿ ಇಲಾಖೆಗಳ ಖಾಲಿ ಹುದ್ದೆಗಳ ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕಗೊಳಿಸಬೇಕು. ನೇಮಕಾತಿಗೆ ಕಾಲಮಿತಿಯನ್ನು ನಿಗದಿಪಡಿಸಿ, ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಜಾರಿಗೆ ತರಬೇಕು. ಮೀಸಲಾತಿಯ ಬ್ಯಾಕ್‌ಲಾಗ್ ಹುದ್ದೆಗಳನ್ನು ವಿಶೇಷ ನೇಮಕಾತಿ ಅಭಿಯಾನದ ಮೂಲಕ ಭರ್ತಿ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಡಿಜಿಟಲ್ ಖಾಲಿ ಹುದ್ದೆಗಳ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಿ ಪಾರದರ್ಶಕತೆಯನ್ನು ಹೆಚ್ಚಿಸಬೇಕು.
ಉದ್ಯೋಗವು ಕೇವಲ ಜೀವನೋಪಾಯವಲ್ಲ; ಅದು ಗೌರವ, ಸಮಾನ ಅವಕಾಶ ಮತ್ತು ಸಾಮಾಜಿಕ ಪಾಲ್ಗೊಳ್ಳುವಿಕೆಯ ಸಾಧನವಾಗಿದೆ. ಲಕ್ಷಾಂತರ ಯುವಕರು ಉದ್ಯೋಗಕ್ಕಾಗಿ ಕಾಯುತ್ತಿರುವಾಗ ಮಂಜೂರಾದ ಹುದ್ದೆಗಳು ಖಾಲಿ ಉಳಿಯುವುದು ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಶೋಭೆಯಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಉದ್ಯೋಗ ಸೃಷ್ಟಿಯಷ್ಟೇ ಅಲ್ಲ, ಆಡಳಿತ ದಕ್ಷತೆ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ನ್ಯಾಯವನ್ನು ಬಲಪಡಿಸುವ ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ.
ಅಭಿವೃದ್ಧಿ ರಾಷ್ಟ್ರದ ಯಶಸ್ಸು ಕೇವಲ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳಿಂದ ನಿರ್ಧಾರವಾಗುವುದಿಲ್ಲ; ದೇಶದ ಯುವಜನರ ಪ್ರತಿಭೆಯನ್ನು ಸಾರ್ವಜನಿಕ ಸಂಸ್ಥೆಗಳು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳುತ್ತವೆ ಎಂಬುದರ ಮೇಲೆಯೂ ಅವಲಂಬಿತವಾಗಿದೆ. ಲಕ್ಷಾಂತರ ನಿರುದ್ಯೋಗಿಗಳ ನಡುವೆ ಲಕ್ಷಾಂತರ ಮಂಜೂರಾದ ಹುದ್ದೆಗಳು ಖಾಲಿಯಾಗಿ ಉಳಿಯುವ ಪರಿಸ್ಥಿತಿ ಮುಂದುವರಿಯಬಾರದು. ಆ ಹುದ್ದೆಗಳನ್ನು ಭರ್ತಿ ಮಾಡುವುದು ಉದ್ಯೋಗ ನೀತಿಯ ವಿಷಯ ಮಾತ್ರವಲ್ಲ; ಅದು ಉತ್ತಮ ಆಡಳಿತ, ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರ ನಿರ್ಮಾಣದ ಅವಿಭಾಜ್ಯ ಕರ್ತವ್ಯವಾಗಿದೆ.