ಅಡ್ವಾಣಿ ಮೌನ ಮುರಿಯಬೇಕಿತ್ತು
ಕಳೆದ 13ವರ್ಷಗಳಿಂದ ಬಿಜೆಪಿಯಲ್ಲಿ ಅಡ್ವಾಣಿ ಮೂಲೆಗುಂಪಾಗಿದ್ದಾರೆ. 80-90ರ ದಶಕದಲ್ಲಿ ಅವರೊಬ್ಬ ಪ್ರಭಾವಿ ನಾಯಕ. ಅಟಲ್ ಬಿಹಾರಿ ವಾಜಪೇಯಿ ಬಳಿಕ ಎರಡನೇ ಸ್ಥಾನದಲ್ಲಿದ್ದವರು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿಷಯ ಮುಂದಿಟ್ಟುಕೊಂಡು ‘ರಥ ಯಾತ್ರೆ’ ನಡೆಸಿದವರು. ರಥಯಾತ್ರೆ ಪರಿಣಾಮವಾಗಿ ಬಿಜೆಪಿ ಪ್ರಬಲವಾಗಿ ಬೆಳೆಯಿತು. ಜನ ಇಟ್ಟಿಗೆ ಕೊಟ್ಟರು, ದೇಣಿಗೆ ಕೊಟ್ಟರು. ಆಭರಣ ಕೊಟ್ಟರು. ಮಸೀದಿ ನೆಲಸಮ ಮಾಡಿದ್ದ ಜಾಗದಲ್ಲಿ ಮಂದಿರವೂ ನಿರ್ಮಾಣವಾಯಿತು. ಅದರ ನಿರ್ವಹಣೆಗೆ ಟ್ರಸ್ಟೂ ರಚನೆಯಾಯಿತು. ‘ಬೇಲಿಯೇ ಎದ್ದು ಹೊಲ ಮೇದಂತೆ’ ಚಂದಾ ಚೋರಿ ಆರೋಪ ಈಗ ಟ್ರಸ್ಟ್ ಕೊರಳಿಗೆ ಸುತ್ತಿಕೊಂಡಿದೆ. ಭಾರೀ ಸದ್ದು ಮಾಡುತ್ತಿರುವ ಹಗರಣ ಕುರಿತು ಅಡ್ವಾಣಿ ಮೌನ ತಾಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಮೌನ ಮುರಿಯಬೇಕಿತ್ತು. ಅಯೋಧ್ಯೆ ರಾಮಮಂದಿರದಲ್ಲಿ ಚಂದಾ ಹಣ, ಆಭರಣ ದೋಚಿರುವ ಆರೋಪ ಕುರಿತು ಮಾತಾಡಬೇಕಿತ್ತು. ಸಂಘ ಪರಿವಾರದ ಉಳಿದ ನಾಯಕರಿಗಿಂತ, ಈ ಹಗರಣ ಕುರಿತು ಅಡ್ವಾಣಿ ಏನು ಹೇಳುತ್ತಾರೆಂದು ಕೇಳಲು ಜನ ಅದರಲ್ಲೂ ರಾಮ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಅವರು ಈಗಲೂ ಬಾಯಿ ಬಿಡದಿದ್ದರೆ ಹೇಗೆ? ಎಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದರೆ ‘ನಂಬಿಕೆ ದ್ರೋಹ’ ಮಾಡಿದಂತಲ್ಲವೇ?
ಕಳೆದ 13ವರ್ಷಗಳಿಂದ ಬಿಜೆಪಿಯಲ್ಲಿ ಅಡ್ವಾಣಿ ಮೂಲೆಗುಂಪಾಗಿದ್ದಾರೆ. 80-90ರ ದಶಕದಲ್ಲಿ ಅವರೊಬ್ಬ ಪ್ರಭಾವಿ ನಾಯಕ. ಅಟಲ್ ಬಿಹಾರಿ ವಾಜಪೇಯಿ ಬಳಿಕ ಎರಡನೇ ಸ್ಥಾನದಲ್ಲಿದ್ದವರು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ವಿಷಯ ಮುಂದಿಟ್ಟುಕೊಂಡು ‘ರಥ ಯಾತ್ರೆ’ ನಡೆಸಿದವರು. ರಥಯಾತ್ರೆ ಪರಿಣಾಮವಾಗಿ ಬಿಜೆಪಿ ಪ್ರಬಲವಾಗಿ ಬೆಳೆಯಿತು. ಜನ ಇಟ್ಟಿಗೆ ಕೊಟ್ಟರು, ದೇಣಿಗೆ ಕೊಟ್ಟರು. ಆಭರಣ ಕೊಟ್ಟರು. ಮಸೀದಿ ನೆಲಸಮ ಮಾಡಿದ್ದ ಜಾಗದಲ್ಲಿ ಮಂದಿರವೂ ನಿರ್ಮಾಣವಾಯಿತು. ಅದರ ನಿರ್ವಹಣೆಗೆ ಟ್ರಸ್ಟೂ ರಚನೆಯಾಯಿತು. ‘ಬೇಲಿಯೇ ಎದ್ದು ಹೊಲ ಮೇದಂತೆ’ ಚಂದಾ ಚೋರಿ ಆರೋಪ ಈಗ ಟ್ರಸ್ಟ್ ಕೊರಳಿಗೆ ಸುತ್ತಿಕೊಂಡಿದೆ. ಭಾರೀ ಸದ್ದು ಮಾಡುತ್ತಿರುವ ಹಗರಣ ಕುರಿತು ಅಡ್ವಾಣಿ ಮೌನ ತಾಳಿದ್ದಾರೆ.
‘‘ಇದಕ್ಕೇನಾ ನಾವು ಇಷ್ಟೆಲ್ಲಾ ಮಾಡಿದ್ದು?’’ ಎಂದು ಅಡ್ವಾಣಿ ಒಂದು ಮಾತು ಹೇಳಿದ್ದರೂ ಸಾಕಿತ್ತು. ಹಗರಣ ಬೇರೆಯದೇ ತಿರುವು ಪಡೆದುಕೊಳ್ಳುತ್ತಿತ್ತು. ಇನ್ನಾದರೂ ಅಡ್ವಾಣಿ ಮಾತನಾಡದಿದ್ದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ. ರಥ ಯಾತ್ರೆ ಇತಿಹಾಸದ ಭಾಗವಾಗಿರುವಂತೆ ‘ಚಂದಾ ಚೋರಿ’ಯೂ ಇತಿಹಾಸ ಸೇರಲಿದೆ. ಈ ಬಗ್ಗೆ ಅಡ್ವಾಣಿ ಅವರು ಏನು ಹೇಳಿದ್ದರು ಎಂದು ಹೊಸ ತಲೆಮಾರಿನವರು ಮುಂದೊಂದು ದಿನ ಕೇಳುವುದು ಖಂಡಿತ. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಎಚ್‌ಪಿ ಮತ್ತಿತರ ಸಂಘ ಪರಿವಾರ ನಾಯಕರ ಜತೆ ಸಮಾಲೋಚಿಸಿಯೇ ಅಡ್ವಾಣಿ ರಥಯಾತ್ರೆ ಆರಂಭಿಸಿದ್ದು. ಆದರೆ, ಈಗ ಯಾವ ನಾಯಕರೂ ತುಟಿ ಬಿಚ್ಚುತ್ತಿಲ್ಲ. ಅವರಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಬಾಯಿಗಳು ಬಂದ್ ಆಗಿವೆ. ಗಂಭೀರ ಪ್ರಕರಣವನ್ನು ಲಘುವಾಗಿ ಪರಿಗಣಿಸಲಾಗಿದೆ.
ಪ್ರಧಾನಿ ಮೋದಿ ಮೌನಕ್ಕೆ ಜಾರಿರುವುದು ಇದೇ ಮೊದಲಲ್ಲ. ಹಿಂದೆಯೂ ಅನೇಕ ಸಂದರ್ಭಗಳಲ್ಲಿ ತುಟಿ ಬಿಚ್ಚಿಲ್ಲ. ಪ್ರಮುಖ ಘಟನಾವಳಿಗಳು ನಡೆದಾಗಲೆಲ್ಲಾ ಅವರು ಮೌನವಾಗುತ್ತಾರೆ. ಎಷ್ಟೋ ದಿನ ಆದ ಮೇಲೆ ಮಾತನಾಡುತ್ತಾರೆ. ಘಟನೆಗಳನ್ನು ಮರೆಮಾಚಲು ಪರ್ಯಾಯ ದಾರಿ-ತಂತ್ರಗಳನ್ನು ಹುಡುಕುತ್ತಾರೆ. ರಾಮ ಮಂದಿರ ದೇಣಿಗೆ ಹಾಗೂ ಆಭರಣ ದರೋಡೆ ಆರೋಪಗಳ ಕುರಿತು ದೇಶ, ವಿದೇಶಗಳ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ. ತಮಗೇನು ಸಂಬಂಧವಿಲ್ಲದಂತೆ ಪ್ರಧಾನಿ ನಿರ್ಲಿಪ್ತರಾಗಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳು ‘ಸಣ್ಣ ಮೀನು’ಗಳಿಗೆ ಗಾಳ ಹಾಕಿದ್ದಾರೆ. ‘ದೊಡ್ಡ ತಿಮಿಂಗಿಲ’ಗಳು ಎಸ್‌ಐಟಿ ಬಲೆಗೆ ಬಿದ್ದಿಲ್ಲ. ಈ ತಿಮಿಂಗಿಲಗಳನ್ನು ಹಿಡಿಯುವ ಶಕ್ತಿ ಎಸ್‌ಐಟಿ ಅಧಿಕಾರಿಗಳಿಗಿದೆಯೇ? ಯಾವುದೇ ಒತ್ತಡ-ಪ್ರಭಾವಕ್ಕೆ ಒಳಗಾಗದೆ ಎಸ್‌ಐಟಿ ತನಿಖೆ ನಡೆಸುವುದೇ?
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಮ ಮಂದಿರದಲ್ಲಿ ನಡೆದಿರುವ ‘ವ್ಯವಸ್ಥಿತ ಲೂಟಿ’ಯ ಹಿಂದಿರುವ ಜಾಲ ಭೇದಿಸುವ ಕಾಳಜಿ ಇದ್ದಿದ್ದರೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ಮೇಲುಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕಿತ್ತು. ಏಕೆಂದರೆ, ಕೇಂದ್ರ ತನಿಖಾ ದಳದ (ಸಿಬಿಐ) ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಹಿಂದೆ ಬಿಜೆಪಿ ಮುಖಂಡರು ಸಿಬಿಐ ಅನ್ನು ‘ಕಾಂಗ್ರೆಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್’ ಎಂದು ಲೇವಡಿ ಮಾಡುತ್ತಿದ್ದರು. ಈಗದು ಏನಾಗಿದೆ ಎಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಯೋಗಿ ಇನ್ನು ಒಂದು ಕೆಲಸ ಮಾಡಬಹುದಿತ್ತು. ಬಿಜೆಪಿಯೇತರ ರಾಜ್ಯದ ಪೊಲೀಸರಿಗೆ ತನಿಖೆ ಒಪ್ಪಿಸಬಹುದಿತ್ತು. ರಾಜ್ಯ ಸರಕಾರದ ಒಪ್ಪಿಗೆಯಿಲ್ಲದೆ ಒಂದು ರಾಜ್ಯದ ಪೊಲೀಸರು ಇನ್ನೊಂದು ರಾಜ್ಯಕ್ಕೆ ಹೋಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿದ್ದರೆ ಹೊಸದೊಂದು ಸಂಪ್ರದಾಯ ಹುಟ್ಟುಹಾಕಿದಂತಾಗುತ್ತಿತ್ತು. ಅವರ ಬಗೆಗಿರುವ ಅಭಿಪ್ರಾಯವೂ ಬದಲಾಗುತ್ತಿತ್ತು.
ಅಯೋಧ್ಯೆ ರಾಮಮಂದಿರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದು ಬಯಸುವವರಿಗೆ ಇನ್ನೊಂದು ದಾರಿ ಇದೆ. ‘ಉತ್ತರ ಪ್ರದೇಶ ಸರಕಾರ ರಚಿಸಿರುವ ಎಸ್‌ಐಟಿ ತನಿಖೆ ಮೇಲೆ ನಂಬಿಕೆ ಇಲ್ಲದ್ದರಿಂದ ತನಿಖೆಯನ್ನು ಬಿಜೆಪಿಯೇತರ ರಾಜ್ಯಕ್ಕೆ ವರ್ಗಾಯಿಸುವಂತೆ ನಿರ್ದೇಶಿಸಬೇಕು’ ಎಂದು ಕೇಳಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ಈ ಧೈರ್ಯ ಯಾರಿಗಿದೆ? ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವುದು ಹೋಗಲಿ, ಚಂದಾ ಚೋರಿ ಬಗ್ಗೆ ಮಾತಾಡುವುದನ್ನೇ ಬಿಜೆಪಿ, ಸಂಘ ಪರಿವಾರದ ನಾಯಕರು ಸಹಿಸುತ್ತಿಲ್ಲ. ಈ ಬಗ್ಗೆ ಮಾತಾಡುವ ವಿರೋಧ ಪಕ್ಷಗಳ ನಾಯಕರ ಮೇಲೆ ಮುಗಿಬೀಳುತ್ತಿದ್ದಾರೆ. ‘‘ಹಿಂದೂ ಸಮಾಜ ಒಡೆಯುವ ಕುತಂತ್ರದ ಬಗ್ಗೆ ಜಾಗೃತರಾಗಿರಿ’’ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.
‘‘ರಾಮ ಮಂದಿರದ ದೇಣಿಗೆ ಬಗೆಗಿರುವ ಕಾಳಜಿ ವಕ್ಫ್ ಆಸ್ತಿ ಅಕ್ರಮಗಳ ಬಗೆಗೆ ಏಕಿಲ್ಲ’’ ಎಂದು ಮುಖ್ಯಮಂತ್ರಿ ಯೋಗಿ ಕೇಳಿದ್ದಾರೆ. ಅಕ್ರಮ ಎಲ್ಲೇ ನಡೆದರೂ ತನಿಖೆ ನಡೆಯಬೇಕು. ಅದಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬಾರದು. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ‘‘ಹಿಂದೂಗಳು ತಾಳ್ಮೆ ವಹಿಸಬೇಕು. ಈ ಘಟನೆ ಬಳಸಿಕೊಂಡು ಹಿಂದೂ ಸಮಾಜ ಒಡೆಯಲು ಪ್ರಯತ್ನಿಸುತ್ತಿರುವವರ ಕುತಂತ್ರಕ್ಕೆ ಬಲಿಯಾಗಬೇಡಿ’’ ಎಂದಿದ್ದಾರೆ. ಇದರ ಬದಲಿಗೆ ‘‘ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ. ತಪ್ಪಿತಸ್ಥರು ಎಷ್ಟೇ ದೊಡ್ಡವರಾದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’’ ಎಂದು ಹೇಳಿದ್ದರೆ ಅವರ ಗೌರವ ಹೆಚ್ಚುತ್ತಿತ್ತು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ ಸರಕಾರವಿದ್ದು ಈ ಘಟನೆ ನಡೆದಿದ್ದರೆ ಬಿಜೆಪಿ ನಾಯಕರು ಎಷ್ಟು ದೊಡ್ಡದು ಮಾಡುತ್ತಿದ್ದರೋ. ಇಲ್ಲಸಲ್ಲದ ಟೀಕೆ ಮಾಡುತ್ತಾ, ದೇಶಾದ್ಯಂತ ಪ್ರಚಾರ ಮಾಡುತ್ತಿದ್ದರು. ಅದೇಕೋ ಈ ಘಟನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿರೋಧ ಪಕ್ಷಗಳು ವಿಫಲವಾಗಿವೆ. ಬಿಜೆಪಿ, ಆರೆಸ್ಸೆಸ್ ಹಾಗೂ ವಿಎಚ್‌ಪಿ ಸೇರಿದಂತೆ ಸಂಘ- ಪರಿವಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸೋತಿವೆ. ಲಕ್ನೋದಲ್ಲಿ ಅಖಿಲೇಶ್ ಯಾದವ್, ದಿಲ್ಲಿಯಲ್ಲಿ ಕೇಜ್ರಿವಾಲ್, ಮುಂಬೈಯಲ್ಲಿ ಉದ್ಧವ್ ಠಾಕ್ರೆ, ಚೆನ್ನೈನಲ್ಲಿ ಎಂ.ಕೆ. ಸ್ಟಾಲಿನ್ ಒಳಗೊಂಡಂತೆ ಅಲ್ಲೊಬ್ಬರು, ಇಲ್ಲೊಬ್ಬರು ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳು ಒಟ್ಟಾಗಿ ಕಾರ್ಯಕ್ರಮ ರೂಪಿಸುತ್ತಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಚಕಾರ ಎತ್ತಿಲ್ಲ. ದೇಶದಲ್ಲಿ ಇದ್ದಾರೊ ಅಥವಾ ವಿದೇಶ ಪರ್ಯಟನೆಗೆ ಹೋಗಿದ್ದಾರೊ ಬಲ್ಲವರಾರು.
ಬಿಜೆಪಿ ‘ರಾಜಕೀಯ ಚದುರಂಗದಾಟ’ಕ್ಕೆ ರಾಮ ‘ಪಗಡೆ’ಯಾದ. 90ರ ದಶಕದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಿ.ಪಿ. ಸಿಂಗ್ ಸರಕಾರ ಮಂಡಲ್ ವರದಿ ಜಾರಿಗೊಳಿಸಿ, ಇತರ ಹಿಂದುಳಿದ ವರ್ಗಗಳಿಗೆ ಶೇ. 27 ಮೀಸಲಾತಿ ಕೊಡುವ ನಿರ್ಧಾರ ಕೈಗೊಂಡಿತು. ಇದೊಂದು ರೀತಿ ಹಿಂದುಳಿದ ಜಾತಿಗಳಲ್ಲಿ ಸಾಮಾಜಿಕ-ರಾಜಕೀಯ ಜಾಗೃತಿಗೆ ಕಾರಣವಾಯಿತು. 1989ರ ಲೋಕಸಭಾ ಚುನಾವಣೆಯಲ್ಲೇ ಮಂಡಲ್ ವರದಿ, ರಾಮಮಂದಿರ ವಿವಾದ ಪ್ರಮುಖ ವಿಷಯವಾಗಿತ್ತು. ಇಂದಿರಾ ಗಾಂಧಿ ಹತ್ಯೆ ಅನುಕಂಪದ ಅಲೆಯಲ್ಲಿ 1984ರ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಐದೇ ವರ್ಷದಲ್ಲಿ ಬಹುಮತ ಕಳೆದುಕೊಂಡು 197 ಸ್ಥಾನಗಳಿಗೆ ಕುಸಿದಿತ್ತು. ಜನತಾ ದಳ 143 ಸ್ಥಾನ ಪಡೆದಿತ್ತು. ಬಿಜೆಪಿ 85 ಸ್ಥಾನ ಗೆದ್ದಿತ್ತು. ಸಿಂಗ್ ನೇತೃತ್ವದ ‘ನ್ಯಾಷನಲ್ ಫ್ರಂಟ್’ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಜನತಾ ದಳ ಮಂಡಲ್ ವರದಿ, ಒಬಿಸಿ ವರ್ಗಗಳನ್ನು ಹಿಡಿದುಕೊಂಡರೆ, ಬಿಜೆಪಿ ಕಮಂಡಲಕ್ಕೆ ಮೊರೆ ಹೋಯಿತು. ರಾಮ ಮಂದಿರ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು ಅಲ್ಲಿಂದಲೇ.
ಆರಂಭದಲ್ಲಿ ಎರಡು ಲೋಕಸಭೆ ಸ್ಥಾನ ಪಡೆದಿದ್ದ ಬಿಜೆಪಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಚುನಾವಣೆಯಲ್ಲಿ 288 ಸ್ಥಾನಗಳನ್ನು ಗೆದ್ದಿತ್ತು. 2019ರಲ್ಲಿ 303 ಸ್ಥಾನಗಳನ್ನು ಪಡೆದು ಸುಸ್ಥಿತಿಯಲ್ಲಿತ್ತು. 2024ರಲ್ಲಿ 240 ಸ್ಥಾನಗಳಿಗೆ ಕುಸಿಯಿತು. ಈ ಚುನಾವಣೆ ಮೋದಿ ಜನಪ್ರಿಯತೆ ಕಡಿಮೆ ಆಗಿರುವುದನ್ನು ಸಾಬೀತುಪಡಿಸಿತು. ಬಿಜೆಪಿಗೆ ಈಗ ಮೋದಿ ನಾಯಕತ್ವ ಸಿಕ್ಕಿರಬಹುದು. ಆದರೆ, ಈ ಪಕ್ಷವನ್ನು ಶೂನ್ಯದಿಂದ ಕಟ್ಟಿದ್ದು ಎಲ್.ಕೆ. ಅಡ್ವಾಣಿ ಮತ್ತು ಸಂಗಡಿಗರು. ಅಡ್ವಾಣಿ ರಥ ಯಾತ್ರೆ ಕೈಗೊಳ್ಳದಿದ್ದರೆ, ಸಮಷ್ಟಿಪುರದಲ್ಲಿ ಬಂಧನವಾಗದಿದ್ದರೆ, ರಥ ಯಾತ್ರೆ ಮುಂದುವರಿಸದಿದ್ದರೆ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿರಲಿಲ್ಲ. ರಥಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭವಾಗಬಹುದೆಂಬ ಲೆಕ್ಕಾಚಾರ ಅಡ್ವಾಣಿ ಅವರಿಗಿತ್ತು. ಅವರ ಲೆಕ್ಕಾಚಾರ ನಿಜವಾಗಿದೆ. ಆದರೆ, ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿಗೆ ಅಡ್ವಾಣಿ ಅವರನ್ನು ಮೂಲೆಗೆ ತಳ್ಳಲಾಗಿದೆ.
ರಥ ಯಾತ್ರೆ- ಮಂದಿರ ನಿರ್ಮಾಣ ದೇಶದ ರಾಜಕೀಯ ಸ್ವರೂಪವನ್ನೇ ಬದಲಿಸಿದೆ. ಮಂದಿರ ನಿರ್ಮಾಣ ಭರವಸೆಯನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿತ್ತು. 2024ರ ಜನವರಿಯಲ್ಲಿ ಮೋದಿ ಮಂದಿರದ ಉದ್ಘಾಟನೆ ನೆರವೇರಿಸಿದ್ದರು. ನಾಲ್ಕು ತಿಂಗಳ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಯಿತು. ಆ ಸಮಯದಲ್ಲಿ ಮುಂದೆ ನಿಂತು ಮಂದಿರ ಉದ್ಘಾಟಿಸಿದ್ದ ಮೋದಿ ಈಗ ಸಂಘ ಪರಿವಾರದ ನಾಯಕರು ಆರೋಪಿಗಳಾಗಿರುವ ದೇಣಿಗೆ ಲೂಟಿ ಹಗರಣ ಕುರಿತು ಮೌನ ಮುರಿಯಬೇಕು. ತನಿಖೆ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ನಡೆಯುವಂತೆ ಮಾಡುವ ಹೊಣೆ ಅವರ ಮೇಲಿದೆ. ಏಕೆಂದರೆ, ಈ ಹಗರಣ ರಾಮ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದೆ. ನಂಬಿಕೆಯನ್ನು ಛಿದ್ರಗೊಳಿಸಿದೆ. ಅಲ್ಲದೆ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿರುವುದರಿಂದ ದೇಶದ ಮರ್ಯಾದೆ ಮಣ್ಣು ಪಾಲಾಗಿದೆ.
ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ. ಮಂದಿರದ ದೇಣಿಗೆ-ಆಭರಣ ಲೂಟಿ ಹಗರಣ ಮತದಾರರ ಮೇಲೆ ಪರಿಣಾಮ ಬೀರಬಹುದು. ಅಷ್ಟು ಹೊತ್ತಿಗೆ ಬಿಜೆಪಿ ತನ್ನ ಬತ್ತಳಿಕೆಯಿಂದ ಇನ್ಯಾವ ಬಾಣ ತೆಗೆದು ಪ್ರಯೋಗಿಸಿ ಜನರನ್ನು ಯಾಮಾರಿಸುವುದೋ?