ವಿಕಾಟಸಾಗರ್ ಸಿಮೆಂಟ್ ಕಾರ್ಖಾನೆಯಿಂದ ಸರಕಾರಿ ಜಮೀನು ಒತ್ತುವರಿ: ಆರೋಪ
ಕಲಬುರಗಿ: ಚಿಂಚೋಳಿ ತಾಲೂಕಿನ ಛತ್ರಸಲ-ಕರ್ಚಖೇಡ ಗಡಿಯಲ್ಲಿರುವ ವಿಕಾಟಸಾಗರ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಸುಮಾರು 3.20 ಎಕರೆ ಸರಕಾರಿ ಜಮೀನನ್ನು ಹಲವು ವರ್ಷಗಳಿಂದ ಅನಧಿಕೃತವಾಗಿ ಬಳಸಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.
ಲಭ್ಯ ದಾಖಲೆಗಳ ಪ್ರಕಾರ, ಛತ್ರಸಲ ಗ್ರಾಮದ ಸರ್ವೆ ನಂ. 31/4ರಲ್ಲಿರುವ ಒಟ್ಟು 5 ಎಕರೆ ಸರಕಾರಿ ಜಮೀನಿನಲ್ಲಿ 3.20 ಎಕರೆ ಪ್ರದೇಶವನ್ನು ಕಾರ್ಖಾನೆಯ ಮುಖ್ಯ ಪ್ರವೇಶ ದ್ವಾರ, ಖಾಸಗಿ ಶಾಲೆಯ ಕಾಂಪೌಂಡ್, ವಾಹನ ನಿಲುಗಡೆ ಸ್ಥಳ ಹಾಗೂ ಇತರೆ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಲಾಗಿದೆ ಎನ್ನಲಾಗಿದೆ. ಈ ಕುರಿತು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಭೂ ಮಾಪಕರ ವರದಿಯಲ್ಲಿಯೂ ಅಕ್ರಮ ಬಳಕೆಯ ಕುರಿತು ಉಲ್ಲೇಖವಿದೆ ಎಂದು ತಿಳಿದುಬಂದಿದೆ.
ಲೀಸ್ ಇಲ್ಲದೆ ಬಳಕೆ ಆರೋಪ: 2008ರ ನಂತರ ಕಾರ್ಯಾರಂಭ ಮಾಡಿದ ಈ ಕಾರ್ಖಾನೆ, ಮೂರು ಎಕರೆಗೂ ಅಧಿಕ ಸರಕಾರಿ ಜಮೀನನ್ನು ಸರಕಾರದಿಂದ ಯಾವುದೇ ಲೀಸ್ ಅಥವಾ ಬಾಡಿಗೆ ಪಡೆಯದೇ ಹಲವು ವರ್ಷಗಳಿಂದ ಬಳಸಿಕೊಂಡಿದೆ. ಈ ಕುರಿತು ಜಿಲ್ಲಾಧಿಕಾರಿ, ಸೇಡಂ ಸಹಾಯಕ ಆಯುಕ್ತ ಹಾಗೂ ಚಿಂಚೋಳಿ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಚಿನ್ ಚವಾಣ್ ತಿಳಿಸಿದ್ದಾರೆ.
ಬದಲಿ ಜಮೀನಿನ ಭರವಸೆ, ಕ್ರಮ ಇನ್ನೂ ಬಾಕಿ: ಕಾರ್ಖಾನೆ ಆಡಳಿತವು ಬದಲಿ ಜಮೀನು ನೀಡುವುದಾಗಿ ಹೇಳುತ್ತಿದೆಯಾದರೂ, ಇದುವರೆಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ದೂರಲಾಗಿದೆ. ಸುಮಾರು ಹತ್ತು ವರ್ಷಗಳಿಂದ ಸರಕಾರಿ ಜಮೀನನ್ನು ಅನಧಿಕೃತವಾಗಿ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ದಂಡ ವಿಧಿಸಿ, ಸರಕಾರಕ್ಕೆ ಉಂಟಾದ ನಷ್ಟವನ್ನು ವಸೂಲಿ ಮಾಡಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರಿಗೆ ಸಂಪರ್ಕಿಸಿದ್ದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚಿಂಚೋಳಿ ತಹಶೀಲ್ದಾರರು ಕೂಡಾ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.