×
Ad

ಸಿಜೆಪಿ ಪ್ರಯತ್ನಕ್ಕೆ ಯಶಸ್ಸು ದಕ್ಕೀತೇ?

Update: 2026-07-09 12:12 IST

ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಪರಿಣಾಮ ಬೀರುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲ. ಆದರೆ ಅದನ್ನು ಸರಕಾರ ಎಷ್ಟು ದಿನ ನಿರ್ಲಕ್ಷಿಸಲು ಸಾಧ್ಯ ಎಂಬ ಪ್ರಶ್ನೆ ಖಂಡಿತ ಇದೆ.

ಸಿಜೆಪಿ ಪ್ರತಿಭಟನೆಯಿಂದ ಏನೂ ಆಗುವುದಿಲ್ಲ ಎಂದುಕೊಂಡರೂ, ಅದು ಯುವಜನರನ್ನು ಚಳವಳಿಗೆ ಮುಂದಾಗಲು ಪ್ರೇರೇಪಿಸಿತು ಎಂಬುದು ನಿಜ. ಈ ಪ್ರತಿಭಟನೆಯ ಮೂಲಕ, ಯುವಜನತೆ ಮತ್ತು ವಿಪಕ್ಷಗಳು ಒಟ್ಟಿಗೆ ಬಂದ ವಿದ್ಯಮಾನವನ್ನೂ ಕಂಡಿದ್ದೇವೆ. ಇದಕ್ಕಾಗಿಯಂತೂ ಈ ಚಳವಳಿಯನ್ನು ಮಹತ್ವದ್ದಾಗಿ ಪರಿಗಣಿಸಬೇಕು.

ಭಾರತೀಯ ರಾಜಕೀಯದಲ್ಲಿ ಇದ್ದಕ್ಕಿದ್ದಂತೆ ಹೊರಹೊಮ್ಮಿದ ಸಿಜೆಪಿ ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣವಾಯಿತು. ರಾತ್ರೋರಾತ್ರಿ, ಅದು ಬಿಜೆಪಿಯನ್ನೂ ಮೀರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ 2 ಕೋಟಿಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಗಳಿಸಿತು. ಮೀಮ್‌ಗಳ ಮೂಲಕ ಒಂದು ಪಕ್ಷವನ್ನು ರಚಿಸಲಾಯಿತು. ಆದರೆ ಅದರ ಪ್ರತಿಭಟನೆ ಶುರುವಾದಾಗ ಜನಬೆಂಬಲ ಹೇಗಿರುತ್ತದೆ ಎಂಬ ಕುತೂಹಲವೂ ಇತ್ತು.

ಮೊದಲ ದಿನ ಬಂದ ಜನರ ಸಂಖ್ಯೆ ಸಣ್ಣದಾಗಿರಲಿಲ್ಲ. ಮತ್ತದು ಜನರ ಮೇಲೆ ಪ್ರಭಾವ ಬೀರಿತು. ಜನರು ಇನ್ನೂ ಬೀದಿಗಿಳಿಯಲು ಸಿದ್ಧರಿದ್ದಾರೆ ಎಂಬ ಭರವಸೆ ಮೂಡಿತು.

ಸಿಜೆಪಿ ವಿಷಯವಾಗಿ ಈಗಲೂ ಜನರಲ್ಲಿ ಉತ್ಸಾಹವಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇಲ್ಲಿಗೆ ಬರುವ ಹೆಚ್ಚಿನವರು ಮೊದಲ ಸಲ ಪ್ರತಿಭಟನೆಗೆ ಬಂದವರು ಎನ್ನಲಾಗಿದೆ.

ಜನರು ಬಂದು ಪ್ರತಿಭಟಿಸಲು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು, ರಾಜಕೀಯ ಮತ್ತು ಸಮಾಜದ ಬಗ್ಗೆ ಚರ್ಚಿಸಲು ಸಿಜೆಪಿ ಒಂದು ವೇದಿಕೆ ನಿರ್ಮಿಸಿದೆ ಎಂಬುದು ನಿಜ.

ಜನರಲ್ಲಿ ಬಹಳಷ್ಟು ಹತಾಶೆ ಇದೆ.

ಅಧಿಕಾರದಲ್ಲಿರುವ ಯಾರೊಂದಿಗೂ ತಮ್ಮ ನೋವು ಮತ್ತು ಸಂಕಟಗಳನ್ನು ಹಂಚಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮತ್ತು ಜನರಿಗೆ ತುಂಬಾ ದುಃಖಕರ ಸಂಗತಿ.

ಹೇಳಲಾಗುವ ಪ್ರಕಾರ, ಸಿಜೆಪಿ ಪ್ರತಿಭಟನೆಯನ್ನೂ ಹಲವು ರೀತಿಯಲ್ಲಿ ಪ್ರತಿಬಂಧಿಸಲಾಗುತ್ತಿದೆ.

ಬ್ಯಾರಿಕೇಡ್‌ಗಳನ್ನು ಹಾಕಿ ಜಂತರ್ ಮಂತರ್ ಪ್ರತಿಭಟನಾ ಸ್ಥಳದ ಉದ್ದವನ್ನು ಕಡಿಮೆ ಮಾಡಲಾಗಿದೆ. ಬೆಳಗಿನಿಂದ ಸಂಜೆಯವರೆಗಷ್ಟೇ ಪ್ರತಿಭಟಿಸಿ ನಂತರ ಹೊರಡಲು ಹೇಳಲಾಗುತ್ತಿದೆ. ಅಂಥ ನಿರ್ಬಂಧಗಳು ಹೆಚ್ಚಾದಾಗಲೆಲ್ಲ, ಅದು ಪ್ರಜಾಪ್ರಭುತ್ವದ ಸ್ಥಿತಿ ಹದಗೆಡುತ್ತಿರುವುದನ್ನೇ ಸೂಚಿಸುತ್ತದೆ.

ಚಳವಳಿ ವಿಫಲವಾಗಬಹುದು. ಆದರೆ, ಈ ದೇಶದಲ್ಲಿ ಪ್ರಶ್ನೆಪತ್ರಿಕೆಗಳನ್ನು ಲಕ್ಷಾಂತರ ಕೊಟ್ಟು ಕೊಂಡುಕೊಳ್ಳುವ ಮೂಲಕ ವೈದ್ಯರಾಗುತ್ತಿರುವುದು ಏಕೆ? ಲಂಚ ನೀಡುವ ಮೂಲಕ ಅಧಿಕಾರಿಗಳಾಗುತ್ತಿರುವುದು ಹೇಗೆ ಎಂಬ ಪ್ರಶ್ನೆಗಳನ್ನು ಕೇಳುವುದು ಕೂಡ ವ್ಯರ್ಥವೆ? ಈ ಪ್ರಶ್ನೆ ತಪ್ಪಲ್ಲ ಎಂದಾದರೆ, ಈ ಪ್ರಶ್ನೆಯನ್ನು ಎತ್ತಿರುವ ಹೋರಾಟ ಹೇಗೆ ತಪ್ಪಾಗುತ್ತದೆ?

ಈ ಚಳವಳಿ ಹೊತ್ತಲ್ಲೇ ಮಹಾರಾಷ್ಟ್ರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಅಂದರೆ ಈ ಪ್ರಶ್ನೆ ಇನ್ನೂ ದೇಶದ ಎದುರು ಇದೆ.

ಶಿಕ್ಷಣ ಸಚಿವರು ರಾಜೀನಾಮೆ ನೀಡಿಲ್ಲ. ಬದಲಾಗಿ, ಅವರು ಮೀಡಿಯಾಗಳಿಗೆ ಸಂದರ್ಶನ ನೀಡುತ್ತಿದ್ದಾರೆ.

ಈ ಯುವ ಹೋರಾಟಗಾರರನ್ನು ಭಯೋತ್ಪಾದಕರ ಬಿ ಟೀಂ ಎಂದು ಕರೆಯುತ್ತಿದ್ದಾರೆ.

ಸಿಜೆಪಿ ಚಳವಳಿ ಎಷ್ಟು ಕಾಲ ಮುಂದುವರಿಯುತ್ತದೆ, ಅದು ಯಾವಾಗ ಕೊನೆಗೊಳ್ಳುತ್ತದೆ ಗೊತ್ತಿಲ್ಲ. ಸಂಸತ್ತಿನ ಅಧಿವೇಶನ ಹತ್ತಿರ ಬರುತ್ತಿದೆ ಮತ್ತು ಆಗ ಬಹುಶಃ ಈ ಚಳವಳಿಗೆ ಹೆಚ್ಚು ಬಲ ಬರಬಹುದು. ಆದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದೇ ಉಳಿದ ನಂತರವೂ, ಈ ಯುವಕರು ತಮ್ಮ ಬೇಡಿಕೆ ಬಗ್ಗೆ ದೃಢವಾಗಿದ್ದಾರೆ ಮತ್ತು ಪ್ರತಿಭಟನೆ ಮುಂದುವರಿದಿದೆ ಎಂಬುದು ದೊಡ್ಡ ವಿಷಯ.

‘‘ಸರಕಾರ ನಮ್ಮ ಜೀವವನ್ನು ಬಯಸುತ್ತಿದೆ ಎಂದು ನಮಗೆ ಅನಿಸಿದ್ದರಿಂದ ನಾವು ಈಗ ಈ ಪ್ರತಿಭಟನೆಯಲ್ಲಿ ಕುಳಿತಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದಾಗ ಮಾತ್ರ ನಾವು ಎದ್ದೇಳುತ್ತೇವೆ’’ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

ಈ ಉದ್ದೇಶ ಮತ್ತು ಈ ಪ್ರಶ್ನೆಯನ್ನು ಗಮನಿಸದೆ, ಸಿಜೆಪಿ ಇಂದು ಎದುರಿಸುತ್ತಿರುವ ರಾಜಕೀಯ ವಾಸ್ತವಗಳನ್ನು ಅರ್ಥಮಾಡಿಕೊಳ್ಳದೆ ಅದರ ಬಗೆಗಿನ ವಿಶ್ಲೇಷಣೆ ಪೂರ್ಣಗೊಳ್ಳಲಾರದು.

ಅದರ ಯಶಸ್ಸು ಅಥವಾ ವೈಫಲ್ಯ ಅಥವಾ ಅದರ ಪರಿಣಾಮ ಯಾವುದೇ ವಿಪಕ್ಷಗಳ ಪ್ರತಿಭಟನೆಯ ಯಶಸ್ಸು ಅಥವಾ ವೈಫಲ್ಯದಷ್ಟೇ ಮುಖ್ಯವಾಗಿದೆ. ವಿರೋಧ ಪಕ್ಷ ಪ್ರತಿದಿನ ಸರಕಾರವನ್ನು ಪ್ರಶ್ನಿಸುತ್ತದೆ. ಅಷ್ಟಾದರೂ, ಮಡಿಲ ಮಿಡಿಯಾಗಳು ವಿಪಕ್ಷಗಳ ಉದ್ದೇಶ ಜನರನ್ನು ಮುಟ್ಟದಂತೆ ತಡೆಯುತ್ತವೆ.

ಬಂಗಾಳದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ, ಏಳು ಬಾರಿ ಸಂಸದೆಯಾಗಿದ್ದ ಮತ್ತು ಕೇಂದ್ರದಲ್ಲಿ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿಯವರನ್ನು ಅತ್ಯಾಚಾರ ಸಂತ್ರಸ್ತೆಯ ಮನೆಗೆ ಹೋಗದಂತೆ ತಡೆಯಲಾಗುತ್ತದೆ. ಅವರು ತಮ್ಮ ಮನೆಯಿಂದ ಹೊರಗೆ ಹೋಗದಂತೆ ತಡೆಯಲು ಹಲವು ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕಡೆಗೆ ಮಮತಾ ಬ್ಯಾನರ್ಜಿ ತಮ್ಮ ಮನೆಯ ಬಳಿ ಮೇಣದಬತ್ತಿ ಮೆರವಣಿಗೆ ನಡೆಸಿ, ವಿಪಕ್ಷದ ಕರ್ತವ್ಯವನ್ನು ಪೂರೈಸಿದರು.

ಇದು ಇವತ್ತಿನ ಸ್ಥಿತಿ. ವಿಪಕ್ಷಗಳ ಸ್ಥಿತಿಯೇ ಹೀಗಿರುವಾಗ, ಸಿಜೆಪಿಯ ಮೌಲ್ಯಮಾಪನ ಮಾಡಲು ಈಗಲೇ ಸಾಧ್ಯವಿಲ್ಲ.

ಜಂತರ್ ಮಂತರ್‌ನಲ್ಲಿ 18 ದಿನಗಳಲ್ಲ, 18 ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ ನಂತರವೂ, ಸಚಿವರು ರಾಜೀನಾಮೆ ನೀಡುತ್ತಾರೆಯೇ ಇಲ್ಲವೇ ಗೊತ್ತಿಲ್ಲ.

ಈ ದೇಶದ ರೈತರು ಎರಡು ವರ್ಷಗಳ ಕಾಲ ಪ್ರತಿಭಟಿಸಬೇಕಾಯಿತು. ಪ್ರತಿಭಟನೆಯ ಸಮಯದಲ್ಲಿ ಅಸಂಖ್ಯಾತ ರೈತರು ತಮ್ಮ ಪ್ರಾಣ ಕಳೆದುಕೊಂಡರು.

ಮೊದಲು ಪ್ರತಿಭಟನೆಗೆ ನಿರಾಯಾಸವಾಗಿ ಅನುಮತಿ ಸಿಗುವುದರೊಂದಿಗೆ ಸಿಜೆಪಿ ಬಗ್ಗೆ ಶಂಕೆಗಳು ಮೂಡಿದ್ದವು ಮತ್ತು ವಿಪಕ್ಷಗಳು ದೂರವೇ ಉಳಿದಿದ್ದವು. ಆದರೆ ಕ್ರಮೇಣ, ಹಲವಾರು ವಿಪಕ್ಷಗಳ ಸಂಸದರು ಮತ್ತು ಸಾಮಾಜಿಕ ಕಾರ್ಯಕರ್ತರು ಇಲ್ಲಿಗೆ ಬಂದರು.

ಇಲ್ಲಿಗೆ ಟಿಎಂಸಿಯ ಮಹುವಾ ಮೊಯಿತ್ರಾ ಬಂದಿದ್ದಾರೆ, ಎಎಪಿಯ ಸಂಜಯ್ ಸಿಂಗ್ ಬಂದಿದ್ದಾರೆ. ಆ ನಾಯಕರು ಆಡಿದ ಮಾತುಗಳ ಬಳಿಕ, ತಮ್ಮ ಹೋರಾಟ ದೀರ್ಘ ಕಾಲದ್ದಾಗಬಹುದು ಎಂಬುದು ಯುವಕರಿಗೆ ಹೊಳೆದಿರಬೇಕು.

ಇಲ್ಲಿಗೆ ಬಂದ ಯೋಗೇಂದ್ರ ಯಾದವ್, ಜಂತರ್ ಮಂತರ್ ಹದಿನೈದು ವರ್ಷಗಳ ಹಿಂದೆ ಇದ್ದುದಕ್ಕಿಂತ ಎಷ್ಟು ಬದಲಾಗಿದೆ ಎಂದು ವಿವರಿಸಿದ್ದಾರೆ.

ಜಂತರ್ ಮಂತರ್ ಆಗ ದೊಡ್ಡದಾಗಿತ್ತು. ಇಂದು, ಜಂತರ್ ಮಂತರ್ ಚಿಕ್ಕದಾಗಿದೆ. ಜಂತರ್ ಮಂತರ್ ಕುಗ್ಗುವುದು ಎಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಕುಗ್ಗುತ್ತಿದೆ. ಈ ದೇಶದಲ್ಲಿ ಧ್ವನಿ ಎತ್ತುವ ಸ್ಥಳಗಳು ಕುಗ್ಗುತ್ತಿವೆ ಎಂದರ್ಥ ಎಂದಿದ್ದಾರೆ.

ಜಂತರ್ ಮಂತರ್ ಅನ್ನು ಮತ್ತೆ ವಿಸ್ತರಿಸಲು ಈ ಅಭಿಯಾನ ಪ್ರಾರಂಭಿಸಿದ್ದೀರಿ ಎಂದು ಅವರು ಸಿಜೆಪಿ ಕೆಲಸವನ್ನು ಮೆಚ್ಚಿದ್ದಾರೆ.

ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ 10 ದಿನಗಳನ್ನು ದಾಟಿದೆ. ಅವರ ಜೊತೆಗೆ ಐವರು ಯುವಕರು ಸಹ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳು, ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಸಹ ಇಲ್ಲಿವೆ. ಕೆಲವು ವೃದ್ಧ ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿದಿನ ಬರುತ್ತಾರೆ. ಮಾಜಿ ಸೈನಿಕರು ಸಹ ಬರುತ್ತಾರೆ. ಕೆಲ ಶಿಕ್ಷಕರು ಎಲ್ಲಿಂದಲೋ ತಮ್ಮ ವಿದ್ಯಾರ್ಥಿಗಳೊಂದಿಗೆ ಬರುತ್ತಾರೆ. ಕೆಲವರು ತಮ್ಮ ಕೆಲಸ ಬಿಟ್ಟ ನಂತರವೂ ಬರುತ್ತಿದ್ದಾರೆ.

ಒಬ್ಬ ವಿದ್ಯಾರ್ಥಿ ಇಲ್ಲಿ ಬರುವವರಿಗೆ ಉಚಿತ ಗ್ರಂಥಾಲಯ ರಚಿಸಿದ್ದಾನೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಇದನ್ನು ಆರಂಭಿಸಲಾಗಿದೆ. ಪ್ರತಿಭಟನೆಯನ್ನು ಪ್ರೋತ್ಸಾಹಿಸಲು ಮತ್ತು ಬಲಪಡಿಸಲು ಈ ಗ್ರಂಥಾಲಯ ಅಭಿಯಾನ ಪ್ರಾರಂಭಿಸಲಾಗಿದೆ.

ಭಾರತೀಯ ರಾಜಕೀಯದಲ್ಲಿ ನೈತಿಕತೆ ತನ್ನ ಬಣ್ಣವನ್ನು ಬದಲಾಯಿಸಿದೆ. ಈಗ ಭಾರತೀಯ ಸಮಾಜ, ರಾಜಕೀಯ ವ್ಯವಸ್ಥೆ ಮತ್ತು ಅದರ ಸಂಸ್ಥೆಗಳು ಭ್ರಷ್ಟಾಚಾರವನ್ನು ತೊಡೆದುಹಾಕಲಿಕ್ಕಲ್ಲ, ಅದನ್ನು ರಕ್ಷಿಸಲು ವಿನ್ಯಾಸಗೊಂಡಿವೆ. ಅದು ಪ್ರಾಮಾಣಿಕತೆ ಮತ್ತು ನೈತಿಕತೆಗೆ ಹೊಂದಿಕೆಯಾಗುವುದಿಲ್ಲ. ಬಹುಶಃ ಸಿಜೆಪಿ ಈ ಸತ್ಯವನ್ನು ಬಹಳ ಬೇಗ ಮನಗಾಣಲಿದೆ.

ಈ ಕಾಲದಲ್ಲಿ ಯಾವುದೇ ಚಳವಳಿ ಯಶಸ್ವಿಯಾಗುವುದು ಕಷ್ಟ. ಆದರೆ, ಎಲ್ಲಾ ಹಿನ್ನಡೆಗಳ ಹೊರತಾಗಿಯೂ ಚಳವಳಿಗಳು ಮುಗಿಯುತ್ತಿಲ್ಲ. ಈ ದೇಶದ ಯುವಕರು ಅನೇಕ ರಾಜ್ಯಗಳಲ್ಲಿ ಪರೀಕ್ಷಾ ರಿಗ್ಗಿಂಗ್ ವಿರುದ್ಧ ಹಲವಾರು ಬಾರಿ ಪ್ರತಿಭಟಿಸಿದ್ದಾರೆ. ಅವರು ಪೊಲೀಸ್ ಲಾಠಿಚಾರ್ಜ್ ಎದುರಿಸಿದ್ದಾರೆ.

ಆದರೆ ಈ ವೈಫಲ್ಯ ಅವರ ಚಳವಳಿಯ ವೈಫಲ್ಯವಲ್ಲ. ಮೋಸ ಮಾಡುವ ಮೂಲಕ ವೈದ್ಯರಾಗುವ ವ್ಯವಸ್ಥೆ ಉಳಿದರೆ, ರಿಗ್ಗಿಂಗ್ ಮೂಲಕ ಅಧಿಕಾರಿಗಳಾಗಲು ಸಾಧ್ಯವಾದರೆ ಅದು ಇಡೀ ದೇಶದ ವೈಫಲ್ಯ.

ಸಿಜೆಪಿಯ ಸಂಘಟನಾ ಸಾಮರ್ಥ್ಯ ಮತ್ತು ಅನುಭವದ ಕೊರತೆ ಸರಿದೂಗಿಸಲು ಜೆಎನ್‌ಯು ವಿದ್ಯಾರ್ಥಿಗಳು ಇಲ್ಲಿ ಪಾತ್ರ ವಹಿಸುತ್ತಿದ್ದಾರೆ. ಅವರ ಉಪಸ್ಥಿತಿಯಿಂದ ಚಳವಳಿಗೆ ಹೊಸ ಸ್ವರೂಪ ಸಿಕ್ಕಿದೆ ಮತ್ತು ನಿರಂತರತೆ ಸಾಧ್ಯವಾಗಿದೆ.

ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಆಂದೋಲನ ಮಾಡುತ್ತೇವೆ ಎಂದು ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.

ಸಂಜಯ್ ಸಿಂಗ್ ಜೊತೆಗೆ, ನಾವು ಜಂತರ್ ಮಂತರ್‌ಗೆ ಮೆರವಣಿಗೆ ಮಾಡುತ್ತೇವೆ. ಎಲ್ಲಾ ಸಂಸದರು ಮತ್ತು ನಾವು ಜಂಟಿಯಾಗಿ ಸಂಸತ್ತಿಗೆ ಮೆರವಣಿಗೆ ಮಾಡುತ್ತೇವೆ. ರಾಷ್ಟ್ರ ನಿಮ್ಮೊಂದಿಗಿದೆ. ಈ ಫ್ಯಾಶಿಸ್ಟ್ ಸರಕಾರದಿಂದ ಈ ದೇಶವನ್ನು ಬಿಡಿಸಲು ಯುವಕರು ಬೀದಿಗಿಳಿಯಬೇಕು ಎಂಬುದು ನಮ್ಮ ಆಶಯ ಎಂದಿದ್ದಾರೆ.

ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಜಿತ್ ಕೆ.ಸಿ.

contributor

Similar News