ಸರಕಾರಿ ಶಾಲೆಗಳಲ್ಲಿ ಪಾಠವೇ ಬಂದ್: ಹಳಿ ತಪ್ಪಿದ ಶಿಕ್ಷಣ ವ್ಯವಸ್ಥೆ
SIR ಪ್ರಕ್ರಿಯೆ: ಶಿಕ್ಷಕರಿಗೆ ಬಿಎಲ್‌ಒ ಹೊರೆ
ದಾವಣಗೆರೆ : ‘ಒಂದೆಡೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎನ್ನುವ ಸರಕಾರ, ಇನ್ನೊಂದೆಡೆ ಅದೇ ಶಾಲೆಗಳ ಶಿಕ್ಷಕರನ್ನು ತಿಂಗಳುಗಟ್ಟಲೆ ಬೋಧಕೇತರ ಕೆಲಸಗಳಿಗೆ ದೂಡುತ್ತಿದೆ. ಇದರ ಪರಿಣಾಮ ರಾಜ್ಯದ ನೂರಾರು ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವವರೇ ಇಲ್ಲದಂತಾಗಿದ್ದು, ಇದು ನೇರವಾಗಿ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿ ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟು ಹೋಗಿದೆ.
ಇದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಳಮಟ್ಟದ ಅಧಿಕಾರಿಗಳ (ಬಿಎಲ್‌ಒ) ಅಳಲು. ಪ್ರಸಕ್ತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಅಸಹಕಾರ, ತಾಂತ್ರಿಕ ದೋಷಗಳು ಹಾಗೂ ಅತಿಯಾದ ಕೆಲಸದ ಒತ್ತಡದಿಂದಾಗಿ ಬಿಎಲ್‌ಒಗಳು ಹೈರಾಣಾಗಿದ್ದಾರೆ. ಇದರಲ್ಲಿ ಶೇ.80ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರೇ ಇರುವುದರಿಂದ ನಗರ ಮತ್ತು ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಮೇಲೆ ನೇರ ಹೊಡೆತ ಬಿದ್ದಿದೆ.
ತಿಂಗಳುಗಟ್ಟಲೆ ಶಾಲೆಯಿಂದ ಹೊರಗುಳಿದ ಶಿಕ್ಷಕರು: ಬಹುತೇಕ ಬಿಎಲ್‌ಒಗಳು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಕಳೆದ 3-4 ತಿಂಗಳಿಂದ ಎಸ್‌ಐಆರ್ ಕಾರ್ಯಗಳಾದ ಮ್ಯಾಪಿಂಗ್ ನಲ್ಲಿ ತೊಡಗಿಸಿಕೊಂಡು ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿ ಮಕ್ಕಳ ಕಲಿಕಾ ಅಂತರ ಹೆಚ್ಚಾಗಲು ಕಾರಣವಾಗಿದೆ. ಶೈಕ್ಷಣಿಕ ಮೇಲುಸ್ತುವಾರಿ ವಹಿಸಿಕೊಂಡಿರುವ ತಳಮಟ್ಟದ ಅಧಿಕಾರಿಗಳನ್ನೂ ಈ ಪ್ರಕ್ರಿಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು, ಇದು ಕೂಡ ಶಾಲಾ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಶಿಕ್ಷಕರು ಬೋಧನಾ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದು, ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಮಧ್ಯಾಹ್ನದ ವೇಳೆಗೆ ಮಕ್ಕಳು ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ.
‘ದ್ವಿಮುಖ ಜವಾಬ್ದಾರಿಯಿಂದಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಒತ್ತಡ ಉಂಟಾಗುತ್ತಿದ್ದು, ಶಾಲೆಯಲ್ಲಿ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂಬ ಅಪರಾಧ ಪ್ರಜ್ಞೆ ಶಿಕ್ಷಕರಲ್ಲಿ ಕಾಡುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.
ಸರ್ವರ್ ಕಾಟ; ಆ್ಯಪ್‌ಗಳದ್ದೇ ತಲೆನೋವು: ಚುನಾವಣಾ ಆಯೋಗವು ಡಿಜಿಟಲೀಕರಣಕ್ಕೆ ಒತ್ತು ನೀಡಿದೆಯಾದರೂ, ಬಿಎಲ್‌ಒಗಳು ಬಳಸುವ ಮೊಬೈಲ್ ಆ್ಯಪ್‌ಗಳು ಪದೇ ಪದೇ ಕೈ ಕೊಡುತ್ತಿವೆ. ಗ್ರಾಮೀಣ ಹಾಗೂ ಒಳಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಡೇಟಾ ಅಪ್ಲೋಡ್ ಮಾಡುವುದು ಕಷ್ಟದ ಕೆಲಸವಾಗಿದೆ. ದಿನದ ಅರ್ಧದಷ್ಟು ಸಮಯ ಸರ್ವರ್ ಸಮಸ್ಯೆಯಲ್ಲೇ ವ್ಯಯವಾಗುತ್ತಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ.
ಮನೆ ಬೀಗ, ದಾಖಲೆ ನೀಡದ ಜನ: ಕ್ಷೇತ್ರ ಕಾರ್ಯಕ್ಕೆ ತೆರಳುವ ಅಧಿಕಾರಿಗಳಿಗೆ ಸಾರ್ವಜನಿಕರ ಅಸಹಕಾರ ಮತ್ತೊಂದು ದೊಡ್ಡ ಸವಾಲಾಗಿದೆ. ಉದ್ಯೋಗ ನಿಮಿತ್ತ ಜನರು ಹಗಲಿನಲ್ಲಿ ಮನೆಯಲ್ಲಿಯೇ ಇರುವುದಿಲ್ಲ. ಇದರಿಂದ ಒಂದೇ ಮನೆಗೆ 3ರಿಂದ 4 ಬಾರಿ ಅಲೆಯಬೇಕಾದ ಸ್ಥಿತಿಯೂ ಇದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ.
ದಾಖಲೆ ನಿರಾಕರಣೆ: ಮತದಾರರ ಪಟ್ಟಿಗೆ ಆಧಾರ್ ಅಥವಾ ಇತರ ವೈಯಕ್ತಿಕ ವಿವರಗಳನ್ನು ಲಿಂಕ್ ಮಾಡಲು ಸಾರ್ವಜನಿಕರು ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬಾಡಿಗೆದಾರರು ವಲಸೆ ಹೋದಾಗ ಅವರ ಹೆಸರು ತೆಗೆಯಲು (ಫಾರಂ-7) ಸೂಕ್ತ ಮಾಹಿತಿ ಸಿಗುತ್ತಿಲ್ಲ. ಮೃತರ ಕುಟುಂಬಸ್ಥರು ಡೆತ್ ಸರ್ಟಿಫಿಕೇಟ್ ನೀಡದ ಕಾರಣ ಪಟ್ಟಿ ನವೀಕರಣವೂ ವಿಳಂಬವಾಗುತ್ತಿದೆ ಎಂಬುವುದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನದ ಏರುಪೇರು, ಸಾರಿಗೆ ಕೊರತೆ: ಗ್ರಾಮೀಣ ಪ್ರದೇಶಗಳಲ್ಲಿ ಮತಗಟ್ಟೆ ವ್ಯಾಪ್ತಿ ದೊಡ್ಡದಾಗಿದ್ದು, ಮನೆಗಳ ನಡುವೆ ಕಿಲೋ ಮೀಟರ್‌ಗಟ್ಟಲೆ ದೂರವಿರುತ್ತದೆ. ಸರಿಯಾದ ಸಾರಿಗೆ ಸೌಲಭ್ಯವಿಲ್ಲದೆ, ಕಡು ಬಿಸಿಲು ಅಥವಾ ಮಳೆಯ ನಡುವೆಯೂ ನಡೆದುಕೊಂಡೇ ಹೋಗಿ ಸಮೀಕ್ಷೆ ನಡೆಸಬೇಕಾದ ಅನಿವಾರ್ಯ ಉಂಟಾಗಿದೆ ಎಂದು ಬಿಎಲ್‌ಒಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪರಿಹಾರವೇನು?
ಆ್ಯಪ್‌ಗಳಲ್ಲಿ ಇಂಟರ್ನೆಟ್ ಇಲ್ಲದೆಯೂ ಕೆಲಸ ಮಾಡುವ ’ಆಫ್‌ಲೈನ್ ಮೋಡ್’ ತರಬೇಕು.
ಜನನ-ಮರಣ ಇಲಾಖೆಯ (ಇ-ಜನ್ಮ) ಡೇಟಾವನ್ನು ನೇರವಾಗಿ ಆಯೋಗದ ತಂತ್ರಾಂಶಕ್ಕೆ ಲಿಂಕ್ ಮಾಡುವುದರಿಂದ ಮೃತರ ಹೆಸರು ಪತ್ತೆ ಸುಲಭವಾಗುತ್ತದೆ.
ಶಿಕ್ಷಕರ ಬದಲಿಗೆ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ನಿರುದ್ಯೋಗಿ ಯುವಕರು ಅಥವಾ ಡಿಜಿಟಲ್ ಸೇವಾ ಕೇಂದ್ರದ ಪ್ರತಿನಿಧಿಗಳನ್ನು ಗೌರವಧನದ ಆಧಾರದ ಮೇಲೆ ಬಳಸಿಕೊಂಡರೆ ಶಾಲಾ ಮಕ್ಕಳಿಗೆ ಆಗುವ ಅನ್ಯಾಯ ತಪ್ಪಿಸಬಹುದು ಎಂಬುವುದು ಕರ್ತವ್ಯ ನಿರತ ಶಿಕ್ಷಕರ ಅಭಿಪ್ರಾಯವಾಗಿದೆ.