ದ್ವೇಷ ಭಾಷಣ ಪ್ರಕರಣ | ಹರೀಶ್ ಪೂಂಜಾ ವಿರುದ್ಧದ ಎಸ್.ಬಾಲನ್, ಸರಕಾರದ ತಕರಾರು ಅರ್ಜಿಯಲ್ಲಿ ಏನೇನಿದೆ ?
ಹಿರಿಯ ವಕೀಲ ಎಸ್.ಬಾಲನ್ | ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ | ಶಾಸಕ ಹರೀಶ್ ಪೂಂಜಾ
♦ ಬಾಂಬ್ ಪ್ರಕರಣದ ಆರೋಪಿಯನ್ನು ಬಿಡಿಸಲು ಹರೀಶ್ ಪೂಂಜಾ ಪೊಲೀಸ್ ಠಾಣೆಗೆ ದಾಳಿ ಮಾಡಿದ್ದರು
♦ ಪೊಲೀಸರ ಮೇಲೆ ಹಲ್ಲೆ ಮಾಡುವ ಚಾಳಿ ಹೊಂದಿರುವ ವ್ಯಕ್ತಿಯ ಕೇಸ್ ರದ್ದು ಮಾಡಬಾರದು
♦ ಸಂವಿಧಾನ ಮಾತ್ರವಲ್ಲದೇ, ಹಿಂದೂ ಧರ್ಮದ ಆಶಯಗಳನ್ನೂ ಉಲ್ಲಂಘಿಸಿರುವ ಪೂಂಜಾ
♦ ಸುಪ್ರೀಂ ಕೋರ್ಟ್ ತೀರ್ಪು, ಮಾರ್ಗಸೂಚಿಗಳ ಪ್ರಕಾರ ತಡೆಯಾಜ್ಞೆ ನೀಡುವಂತಿಲ್ಲ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲಿನ ಎಫ್ಐಆರ್ ಮತ್ತು ಚಾರ್ಜ್ ಶೀಟ್ ರದ್ದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇಂದು ನಡೆದಿದ್ದು, ದೂರುದಾರ ತೆಕ್ಕಾರು ಗ್ರಾಮದ ಬಿ.ಎಸ್.ಇಬ್ರಾಹಿಂ ಪರ ಹಿರಿಯ ವಕೀಲ ಎಸ್.ಬಾಲನ್ ತಕರಾರು ಅರ್ಜಿ ಸಲ್ಲಿಸಿದರು.
"ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಹರೀಶ್ ಪೂಂಜಾ ಎರಡು ಧರ್ಮಗಳ ನಡುವಿನ ವೈಷಮ್ಯವನ್ನು ಉದ್ದೀಪಿಸುವ ಉದ್ದೇಶದಿಂದ, ಸಮಾಜದಲ್ಲಿ ದ್ವೇಷವನ್ನೆಬ್ಬಿಸುವ ಮಾತುಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ದೂರುದಾರ ಬಿ.ಎಸ್.ಇಬ್ರಾಹೀಂ ಅವರು ದೇವಸ್ಥಾನದ ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗಾಗಿ ದೂರುದಾರರು ಪ್ರತ್ಯಕ್ಷದರ್ಶಿಯಾಗಿದ್ದರು" ಎಂದು ಎಸ್. ಬಾಲನ್ ಅರ್ಜಿಯಲ್ಲಿ ಹೇಳಿದ್ದಾರೆ.
"ಹರೀಶ್ ಪೂಂಜಾ ಹೈಕೋರ್ಟ್ ಗೆ ಸಲ್ಲಿಸಿದ ತನ್ನ ಅರ್ಜಿಯ ಪ್ಯಾರಾ 9ರಲ್ಲಿ, 03/05/2025ರಂದು ರಾತ್ರಿ 9 ಗಂಟೆಗೆ ತೆಕ್ಕಾರು ಗ್ರಾಮದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ ಎಂದು ಖಚಿತಪಡಿಸಿದ್ದಾರೆ. ಆರೋಪಿ ಹರೀಶ್ ಪೂಂಜಾ ಎಫ್ಐಆರ್ ನಲ್ಲಿರುವ ಘಟನೆಯನ್ನು ನಿರಾಕರಿಸಿಲ್ಲ" ಎಂದು ಬಾಲನ್ ತಕರಾರು ಅರ್ಜಿಯಲ್ಲಿ ಹೇಳಿದ್ದಾರೆ.
ಆರೋಪಿ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆ, ಬಜ್ಪೆ, ಧರ್ಮಸ್ಥಳ ಪೊಲೀಸ್ ಠಾಣೆಗಳಲ್ಲಿ ಹಲವಾರು ಎಫ್ಐಆರ್ ಗಳು ದಾಖಲಾಗಿವೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 39/2023 ರಲ್ಲಿ ಐಪಿಸಿ ಸೆಕ್ಷನ್ 153, 153-A, 505(1)(3), 505(1)(c), 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ತನಿಖೆ ನಡೆಸದಂತೆ ಬೆದರಿಕೆ ಒಡ್ಡಿದ ಆರೋಪ ಹರೀಶ್ ಪೂಂಜಾ ಮೇಲೆ ಇದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 57/2024 ರಲ್ಲಿ ಐಪಿಸಿ ಸೆಕ್ಷನ್ 504, 353ರಲ್ಲಿ ಬಾಂಬ್ ಪ್ರಕರಣದ ಆರೋಪಿಯನ್ನು ಬಿಡುಗಡೆ ಮಾಡಲು ಪೊಲೀಸ್ ಠಾಣೆಗೆ ನುಗ್ಗಿದ ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 58/2024 ರಲ್ಲಿ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಬಾಯಿಗೆ ಬಂದಂತೆ ನಿಂದಿಸಿದ ಆರೋಪ ಇದೆ. ಬಜ್ಪೆ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 239/2016ರಲ್ಲಿ ಮಾಜಿ ಸಂಸದೆ, ಚಿತ್ರ ನಟಿ ರಮ್ಯಾ ಅವರ ಮೇಲೆ ದಾಳಿ ಮಾಡಿದ ಆರೋಪ ಇದೆ. ಬಂಟ್ವಾಳ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 117/2017ರಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಸರಕಾರಿ ಅಧಿಕಾರಿಯ ಮೇಲೆ ದಾಳಿ ಮಾಡಿದ ಎಫ್ಐಆರ್ ಇದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 77/2023 ರಲ್ಲಿ ಅರಣ್ಯ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಕ್ರೈಂ ಸಂಖ್ಯೆ 105/2023ರಲ್ಲಿ ಸಮುದಾಯಗಳ ಮದ್ಯೆ ದ್ವೇಷ ಹುಟ್ಟಿಸಿದ ಆರೋಪ ಎದುರಿಸುತ್ತಿದ್ದಾರೆ. ಪೊಲೀಸ್ ಠಾಣೆಗೇ ನುಗ್ಗಿದ, ಪೊಲೀಸರ ಮೇಲೆ ನಿರಂತರ ದಾಳಿ ಮಾಡಿ ತನಿಖೆಗೆ ತೊಂದರೆ ಮಾಡುವ ಹರೀಶ್ ಪೂಂಜಾ ಪ್ರಕರಣಕ್ಕೆ ತಡೆ ಕೊಡುವುದಾಗಲೀ, ರದ್ದು ಮಾಡುವುದಾಗಲೀ ಮಾಡಬಾರದು" ಎಂದು ಬಾಲನ್ ತಕರಾರು ಅರ್ಜಿಯಲ್ಲಿ ವಿವರಿಸಿದ್ದಾರೆ.
"ಹರೀಶ್ ಪೂಂಜಾ ಇಸ್ಲಾಮೋಫೋಬಿಯಾ ಹುಟ್ಟಿಸುವ ಕೆಟ್ಟ ಚಾಳಿ ಹೊಂದಿದ್ದಾರೆ. ಭಾರತದ ಪ್ರಜೆಗಳಾದ ನಾವು ಸಂವಿಧಾನದ ಅನುಚ್ಛೇದ 51-A (e) ರಂತೆ ಸಾಮರಸ್ಯ ಕಾಪಾಡುವುದು ಕರ್ತವ್ಯ. ಸ್ವಾಮಿ ವಿವೇಕಾನಂದರು 11/09/1893 ರಂದು ನೀಡಿದ ಭಾಷಣದಲ್ಲಿ ಧರ್ಮಗಳ ಬಗೆಗಿನ ಏಕತೆಯ ವಿಷಯವನ್ನು ಪ್ರಸ್ತಾಪಿಸಿದ್ದರು. "ಎಲ್ಲಾ ಧರ್ಮಗಳೂ ಒಂದೇ ಸಮುದ್ರ ಸೇರುವ ವಿಭಿನ್ನ ನದಿಗಳಂತೆ" ಎಂದಿದ್ದರು. ವಿವೇಕಾನಂದರ ಈ ಮಾತುಗಳನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಹಲವು ದ್ವೇಷ ಭಾಷಣ ಪ್ರಕರಣಗಳ ತೀರ್ಪಿನಲ್ಲಿ ಉಲ್ಲೇಖ ಮಾಡಿದೆ. ಕಾನೂನು, ಸಂವಿಧಾನ ಮಾತ್ರವಲ್ಲದೇ ಹಿಂದೂ ಧರ್ಮದ ನಿಜವಾದ ಆಶಯವನ್ನು ಹರೀಶ್ ಪೂಂಜಾ ಉಲ್ಲಂಘಿಸಿದ್ದಾರೆ. ಸಂವಿಧಾನ ಮತ್ತು ವಿವೇಕಾನಂದರ ಹಿಂದೂ ಧರ್ಮದ ಪ್ರಕಾರ ಭಾರತದ ನೆಲದಲ್ಲಿ ಧರ್ಮದ ಆಧಾರದಲ್ಲಿ ಅಸಹಿಷ್ಣುತೆ, ಜಾತೀಯ ಭಾವನೆಗಳಿಗೆ ಅವಕಾಶವಿಲ್ಲ" ಎಂದು ಬಾಲನ್ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಹೇಳಲಾಗಿದೆ.
ತಕರಾರು ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ ಎಸ್.ಬಾಲನ್ ಅವರು, ದ್ವೇಷ ಭಾಷಣ ಸಂಬಂಧ ಸುಪ್ರಿಂ ಕೋರ್ಟ್ ನೀಡಿರುವ ಏಳು ಪ್ರಮುಖ ತೀರ್ಪುಗಳ ಪ್ರತಿ ಮತ್ತು ಕರ್ನಾಟಕ ಹೈಕೋರ್ಟ್ ನೀಡಿರುವ ಒಂದು ತೀರ್ಪಿನ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು. ಹರೀಶ್ ಪೂಂಜಾ ಮೇಲೆ ದಾಖಲಾದ ಸೆಕ್ಷನ್ ಗಳಡಿಯಲ್ಲೇ ದಾಖಲಾದ ಹಲವು ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ಎತ್ತಿ ಹಿಡಿದು ತೀರ್ಪು ನೀಡಿದೆ. ಸುಮಾರು 179 ಪುಟಗಳ ತೀರ್ಪುಗಳಲ್ಲಿ ‘ದ್ವೇಷ ಭಾಷಣ ಎನ್ನುವುದು ಕೇವಲ ಒಬ್ಬ ವ್ಯಕ್ತಿ, ಗ್ರಾಮ, ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ದ್ವೇಷ ಭಾಷಣಗಳು ದೇಶದ ಸಮಗ್ರತೆಗೆ ಧಕ್ಕೆ ತರುತ್ತದೆ. ಹಾಗಾಗಿ ದ್ವೇಷ ಭಾಷಣದ ಪ್ರಕರಣಗಳಿಗೆ ತಡೆಯಾಜ್ಞೆ ನೀಡುವುದಾಗಲೀ, ರದ್ದುಗೊಳಿಸುವುದಾಗಲೀ ಮಾಡಕೂಡದು ಎಂದು ಸುಪ್ರಿಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ’ಎಂದು ಅಂತಹ ತೀರ್ಪುಗಳನ್ನು ಹೈಕೋರ್ಟ್ ಗೆ ಓದಿ ಹೇಳಿದರು.
ಎಸ್.ಬಾಲನ್ ಅವರ ವಾದದ ಬಳಿಕ ಸರಕಾರದ ಪರವಾಗಿ ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಸುದೀರ್ಘ ವಾದ ಮಂಡಿಸಿದರು. ‘ಭಾರತದ ಸುಪ್ರೀಂ ಕೋರ್ಟ್ ದ್ವೇಷ ಭಾಷಣ ತಡೆಗಟ್ಟುವ ಕುರಿತು ರಾಜ್ಯ ಸರಕಾರಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ದ್ವೇಷ ಭಾಷಣದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಅಂದರೆ ಅಧಿಕೃತ ದೂರಿನ ನಿರೀಕ್ಷೆಯಿಲ್ಲದೆ ಕೂಡ ಪೊಲೀಸರು ಕ್ರಮ ವಹಿಸಬೇಕು. ಉಪ್ಪಿನಂಗಡಿ ಪೊಲೀಸರು ದೂರಿನ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ’ ಎಂದು ಬಿ.ಎನ್.ಜಗದೀಶ್ ವಾದಿಸಿದರು.
‘ಸುಪ್ರೀಂ ಕೋರ್ಟ್ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಗಳು ಮತ್ತು ಪೊಲೀಸ್ ಇಲಾಖೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ. ಅವುಗಳಲ್ಲಿ ಮುಖ್ಯವಾಗಿ ಎಫ್ಐಆರ್ ನೊಂದಣಿ, ಸ್ವಯಂಪ್ರೇರಿತ ಕ್ರಮದ ಮೂಲಕ ದ್ವೇಷ ಭಾಷಣದ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಅಧಿಕೃತ ದೂರು ಇಲ್ಲದಿದ್ದರೂ ಸಹ, ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿ ಕಾನೂನುಬಾಹಿರ ಭಾಷಣ ಕಂಡುಬಂದ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ಇದೆ. ಧರ್ಮ, ಜಾತಿ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಗುಂಪುಗಳ ನಡುವೆ ವೈಷಮ್ಯ ಹುಟ್ಟುಹಾಕುವ ನಿಟ್ಟಿನಲ್ಲಿ ನೀಡುವ ಭಾಷಣಕ್ಕೆ ಸೂಕ್ತ ಸೆಕ್ಷನ್ಗಳನ್ನು ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸುಪ್ರಿಂ ಕೋರ್ಟ್ ಸೂಚಿಸಿದೆ. ದ್ವೇಷ ಭಾಷಣದ ಆರೋಪಿ ವ್ಯಕ್ತಿಯು ಯಾವುದೇ ಹುದ್ದೆ, ಸ್ಥಿತಿ ಅಥವಾ ಪ್ರಭಾವ ಹೊಂದಿದ್ದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರಿಂ ಕೋರ್ಟ್ ಮಾರ್ಗಸೂಚಿ ಹೇಳುತ್ತದೆ’ಎಂದು ಸರಕಾರದ ಪರವಾಗಿ ಬಿ.ಎನ್.ಜಗದೀಶ್ ವಾದಿಸಿದರು. ಸರಕಾರದ ಪರವಾಗಿ ಹಲವು ಸುಪ್ರಿಂ ಕೋರ್ಟ್ ತೀರ್ಪುಗಳ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ನ್ಯಾಯವಾದಿಗಳಿಂದ ತುಂಬಿದ್ದ ಹೈಕೋರ್ಟ್ ನಿಶ್ಯಬ್ದವಾಗಿ ದ್ವೇಷ ಭಾಷಣ ಕುರಿತ ವಾದಗಳನ್ನು ಆಲಿಸಿತು. ಸುಮಾರು ಅರ್ಧ ಗಂಟೆಗಳ ಕಾಲ ವಾದ ಆಲಿಸಿದ ನ್ಯಾಯಮೂರ್ತಿ ಆರ್.ರಾಚಯ್ಯ, ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿ ಅಲ್ಲಿಯವರೆಗೆ ತಡೆಯಾಜ್ಞೆ ನೀಡಿದರು.