×
Ad

ಮಂಗಳೂರಿಗೆ ಹೈಕೋರ್ಟ್ ಪೀಠ ಯಾಕೆ ಅಗತ್ಯ?

Update: 2025-08-25 11:35 IST

ಮಂಗಳೂರು.ರಾಜ್ಯ ಹೈಕೋರ್ಟ್ ಖಾಯಂ ಪೀಠ ಕರಾವಳಿಯಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಹಲವಾರು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿದೆ. ರಾಜ್ಯ ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠವಲ್ಲದೆ ಧಾರವಾಡ ಮತ್ತು ಕಲಬುರಗಿಯಲ್ಲಿ ಖಾಯಂ ಪೀಠಗಳನ್ನು ಹೊಂದಿದೆ. ಪ್ರಧಾನ ಪೀಠವಲ್ಲದೆ ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಬಗ್ಗೆ ಹಲವಾರು ವಾಸ್ತವ ವಿಷಯಗಳು ಹಾಗೂ ಕಾನೂನುಗಳು ಮಹತ್ವದ್ದಾಗಿರುತ್ತದೆ.

ಭಾರತದ ಸಂವಿಧಾನದ ಆರ್ಟಿಕಲ್ 21ರ ಪ್ರಕಾರ ‘ನ್ಯಾಯ ಪಡೆಯುವುದು’ ಪ್ರಜೆಗಳ ಮೂಲಭೂತ ಹಕ್ಕಾಗಿರುತ್ತದೆ. ಆದುದರಿಂದ ನ್ಯಾಯ ದಾನ ವ್ಯವಸ್ಥೆ ರಾಷ್ಟ್ರದಾದ್ಯಂತ ತಲುಪುವಂತೆ ಮಾಡುವುದು ಸರಕಾರ ಮತ್ತು ನ್ಯಾಯಾಂಗದ ಜವಾಬ್ದಾರಿಯಾಗಿರುತ್ತದೆ.

ಕೋರ್ಟ್‌ಗಳ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯ ವೃದ್ಧಿಗೆ ಸರಕಾರವು ಅನುಕೂಲಕರ ವ್ಯವಸ್ಥೆಯನ್ನು ಮಾಡಿ ಶ್ರೀಸಾಮಾನ್ಯನಿಗೆ ನ್ಯಾಯಪಡೆಯಲು ಸುಲಭ ದಾರಿಯನ್ನು ಕಲ್ಪಿಸಿಕೊಡಬೇಕು ಎಂದು ಸುಪ್ರೀಂ ಕೋರ್ಟ್ 2018ರಲ್ಲಿ ಅಖಿಲಭಾರತ ನ್ಯಾಯಾಧೀಶರ ಒಕ್ಕೂಟ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಎಂಬ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್ 2016ರಲ್ಲಿ ‘ಅನಿತಾ ಕುಶ್ವಾಹ ಮತ್ತು ಪುಷಾಪ್ ಸುದಾನ್ ’ಎಂಬ ತೀರ್ಪಿನಲ್ಲಿ ನ್ಯಾಯ ಪಡೆಯುವ ದಾರಿಯ ಬಗ್ಗೆ ಇರಬೇಕಾದ ನಾಲ್ಕು ಮುಖ್ಯ ಅಂಶಗಳನ್ನು ತಿಳಿಸಿದೆ. ಅದೇನೆಂದರೆ (1) ಸರಕಾರವು ನ್ಯಾಯ ವಿಲೇವಾರಿಯ ಪರಿಣಾಮಕಾರಿ ವ್ಯವಸ್ಥೆಯನ್ನು ಕಲ್ಪಿಸಬೇಕು, (2) ಈ ವ್ಯವಸ್ಥೆಯು ಶ್ರೀಸಾಮಾನ್ಯನಿಗೆ ಎಟಕುವಂತಿ ರಬೇಕು, (3) ನ್ಯಾಯ ವಿಲೇವಾರಿ ವ್ಯವಸ್ಥೆಯು ಶೀಘ್ರವಾಗಿ ಕಾರ್ಯ ನಿರ್ವಹಿಸಬೇಕು ಮತ್ತು (4) ನ್ಯಾಯ ವಿಲೇವಾರಿ ವ್ಯವಸ್ಥೆಯ ಉಪಯೋಗ ಪಡೆಯಲು ಈ ವ್ಯವಸ್ಥೆಯು ಸಮಂಜಸವಾದ ಬೆಲೆಯಲ್ಲಿ ಸಿಗುವಂತಾಗಬೇಕು.

ನಮ್ಮ ಸಂವಿಧಾನದ ಆರ್ಟಿಕಲ್ 214ರ ಪ್ರಕಾರ ಎಲ್ಲಾ ರಾಜ್ಯಗಳಿಗೆ ಒಂದು ಹೈಕೋರ್ಟ್ ಇರಬೇಕು ಮತ್ತು ಆರ್ಟಿಕಲ್ 216ರ ಪ್ರಕಾರ ಮುಖ್ಯ ನ್ಯಾಯಾಧೀಶ ಮತ್ತು ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ರಾಜ್ಯಗಳ ಮರುವಿಂಗಡಣಾ ಕಾಯ್ದೆ 1956ರ 51ನೇ ಸೆಕ್ಷನ್ ಪ್ರಕಾರ ರಾಜ್ಯಗಳಲ್ಲಿ ಹೈಕೋರ್ಟಿನ ಪ್ರಧಾನ ಪೀಠ ಮತ್ತು ಇತರ ಪೀಠಗಳನ್ನು ಸ್ಥಾಪನೆ ಮಾಡುವ ಬಗ್ಗೆ ವಿವರಗಳು ಸಿಗುತ್ತವೆ. ರಾಷ್ಟ್ರಪತಿಯವರು ಆಯಾ ರಾಜ್ಯಗಳ ಗವರ್ನರ್ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಡನೆ ಸಮಾಲೋಚಿಸಿ, ಪ್ರಧಾನ ಪೀಠವಲ್ಲದೆ, ರಾಜ್ಯದೊಳಗೆ ಒಂದು ಅಥವಾ ಹೆಚ್ಚು ಸ್ಥಳಗಳಲ್ಲಿ ಖಾಯಂ ಪೀಠಗಳನ್ನು ಸ್ಥಾಪಿಸುವ ಬಗ್ಗೆ ನೋಟಿಫಿಕೇಶನ್ ಮಾಡಬಹುದು. ಈ ಕಾನೂನುಗಳನ್ನು ಪರಿಶೀಲಿಸಿದಾಗ ಕಂಡುಬರುವ ಮುಖ್ಯ ಅಂಶವೇನೆಂದರೆ ಶಾಸಕಾಂಗವು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಬಗ್ಗೆ ನಿಸ್ಸಂದಿಗ್ಧವಾಗಿ ಕಾನೂನುಗಳನ್ನು ರಚಿಸಿರುವಾಗ, ಅಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಜನಸಾಮಾನ್ಯರಿಗೆ ಕಡಿಮೆ ಖರ್ಚಿನಲ್ಲಿ ಕೈಗೆಟಕುವ ನ್ಯಾಯದಾನ ವ್ಯವಸ್ಥೆಯನ್ನು ಕಲ್ಪಿಸುವುದು ಅನಿವಾರ್ಯವಾಗಿದೆ. ಶಾಸಕಾಂಗದ ಉದ್ದೇಶವನ್ನು ಯಾವುದೇ ಕಾರಣಕ್ಕೆ ಭಗ್ನಗೊಳಿಸುವುದು ಸರಿಯಲ್ಲ.

ಕೇಂದ್ರ ಸರಕಾರವು 1981ರಲ್ಲಿ ಜಸ್ಟೀಸ್ ಜಸ್ವಂತ್ ಸಿಂಗ್ ನೇತೃತ್ವದ ತ್ರೀಸದಸ್ಯ ಆಯೋಗವನ್ನು ರಚಿಸಿ ಹೆಚ್ಚುವರಿ ಹೈಕೋರ್ಟ್ ಪೀಠಗಳ ಸ್ಥಾಪನೆ ಬಗ್ಗೆ ಬೇಡಿಕೆಗಳು ಬಂದಾಗ ಪರಿಶೀಲಿಸಬೇಕಾದ ಪ್ರಾಮುಖ್ಯ ಅಂಶಗಳ ಬಗ್ಗೆ ವರದಿ ಸಲ್ಲಿಸುವಂತೆ ಕೇಳಿಕೊಂಡಿತು. ಆಯೋಗವು ಸಲ್ಲಿಸಿದ ವರದಿಯ ಪ್ರಕಾರ ಹೆಚ್ಚುವರಿ ಪೀಠಗಳಿಗೆ ಬೇಡಿಕೆಗಳು ಬಂದಾಗ ಪರಿಶೀಲಿಸಬೇಕಾದ ಅಂಶಗಳೇನೆಂದರೆ (1) ಪೀಠವನ್ನು ಆಪೇಕ್ಷಿಸುತ್ತಿರುವ ಪ್ರದೇಶವು ಸಾಕಷ್ಟು ಜನಸಂಖ್ಯೆಯನ್ನು ಮತ್ತು ವಿಸ್ತೀರ್ಣವನ್ನು ಹೊಂದಿರಬೇಕು, (2) ಪ್ರಧಾನ ಪೀಠಕ್ಕೆ ಸದ್ರಿ ಪ್ರದೇಶದಿಂದ ಕಕ್ಷಿಗಾರರು ಪ್ರಯಾಣಿಸಲು ಇರುವ ಸೌಕಯ್ಯಗಳು, ದೂರ (3) ಪೀಠ ಸ್ಥಾಪನೆಯ ಸ್ಥಳದಲ್ಲಿ ಸಿಗುವ ಮೂಲಭೂತ ಸೌಕರ್ಯಗಳು (4) ಪೀಠ ಪ್ರಸ್ತಾಪಿಸಿರುವ ಪ್ರದೇಶದಲ್ಲಿ ಇರುವ ವಕೀಲರುಗಳ ಸಂಖ್ಯೆ ಮತ್ತು ಪ್ರಬುದ್ಧತೆ.

2000ನೇ ಇಸವಿಯಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಫೆಡರೇಶನ್ ಆಫ್ ಬಾರ್ ಅಸೋಸಿಯೇಶನ್ಸ್ ಇನ್ ಕರ್ನಾಟಕ ಎಂಬ ವ್ಯಾಜ್ಯದಲ್ಲಿ ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಬಗ್ಗೆ ಬೇಡಿಕೆಗಳನ್ನು ಪರಿಶೀಲಿಸಿ, ಅಂತಹ ಬೇಡಿಕೆಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ನಿರ್ಣಯಿಸಿದಂತೆ ಮಾಡಬೇಕು ಎಂದು ತೀರ್ಮಾನಿಸಿದೆ. ಅಂತಹ ವಿಷಯಗಳಲ್ಲಿ ಮುಖ್ಯ ನ್ಯಾಯಾಧೀಶರ ನಿರ್ಣಯವೇ ಹೈಕೋರ್ಟ್ ನಿರ್ಣಯವಾಗಿರುತ್ತದೆ ಎಂದು ಸದ್ರಿ ತೀರ್ಪಿನಲ್ಲಿ ತಿಳಿಸಲಾಗಿದೆ. ಹೆಚ್ಚುವರಿ ಪೀಠದ ಪ್ರಸ್ತಾವನೆಯು ಕೇಂದ್ರಸರಕಾರದ ಪರಿಶೀಲನೆಗೆ ಬರಲು ರಾಜ್ಯಸರಕಾರದಿಂದ ಪ್ರಸ್ತಾವವು ಮುಖ್ಯ ನ್ಯಾಯಾಧೀಶರ ಸಮ್ಮತಿಯೊಂದಿಗೆ ಸಲ್ಲಿಸಬೇಕಾಗುತ್ತದೆ ಎಂದು ಸಹ ಮಾನ್ಯ ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ತೀರ್ಪಿನಂತೆ ರಾಜ್ಯ ಸರಕಾರವು ಹೆಚ್ಚುವರಿ ಪೀಠಗಳ ಸ್ಥಾಪನೆಗೆ ಬರುವ ಖರ್ಚು ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಬೇಕಾಗುತ್ತದೆ. ಮುಖ್ಯ ನ್ಯಾಯಾಧೀಶರು ರಾಜ್ಯದಲ್ಲಿ ನ್ಯಾಯದಾನದ ಬಗ್ಗೆ ಉಸ್ತುವಾರಿ ಹೊಂದಿರುವುದರಿಂದ ರಾಜ್ಯ ಸರಕಾರವು ಮತ್ತು ಹೈಕೋರ್ಟ್, ಎಲ್ಲಾ ದೃಷ್ಟಿಕೋನಗಳಿಂದ ಪರಿಶೀಲಿಸಿ ಪ್ರಸ್ತಾವನೆ ಬಗ್ಗೆ ಸಹಮತಕ್ಕೆ ಬರಬೇಕಾಗುತ್ತದೆ.

ಲಾ ಕಮಿಷನ್ ಆಫ್ ಇಂಡಿಯಾ 2009ರಲ್ಲಿ ನ್ಯಾಯಾಂಗ ಸುಧಾರಣೆಯ ಬಗ್ಗೆ ಕೆಲ ಸಲಹೆಗಳನ್ನು ಕೇಂದ್ರ ಸರಕಾರಕ್ಕೆ ತನ್ನ ವರದಿಯಲ್ಲಿ ತಿಳಿಸಿದೆ. ಸದ್ರಿ ಸಲಹೆಗಳ ಮುಖ್ಯ ಅಂಶಗಳೇನೆಂದರೆ (1) ದೇಶದ ಜನರು ಶೀಘ್ರ ನ್ಯಾಯೋಚಿತ ಪರಿಹಾರ ಸಿಗುವಂತಾಗಲು ಹೈಕೋರ್ಟ್‌ಗಳ ಸ್ಥಾಪನೆ ಮತ್ತು ಕಾರ್ಯವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಿದೆ (2) ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವುದು ಮತ್ತು ಹೊಸ ಪೀಠಗಳ ಸ್ಥಾಪನೆ ಅಗತ್ಯವೇಕೆಂದರೆ ಹೆಚ್ಚಿನ ಎಲ್ಲಾ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿಯಿರುವ ವ್ಯಾಜ್ಯಗಳ ಸಂಖ್ಯೆ ಬಹಳಷ್ಟಿದ್ದು ಈಗ ಇರುವ ನ್ಯಾಯಾಧೀಶರ ಸಂಖ್ಯೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಾಗುವುದಿಲ್ಲ. ಅಲ್ಲದೆ ಹೊಸದಾಗಿ ಸಲ್ಲಿಕೆಯಾಗುವ ವ್ಯಾಜ್ಯಗಳ ಸಂಖ್ಯೆಯು ವಿಲೇವಾರಿಯಾಗುವ ಕೇಸುಗಳಿಂದ ಹೆಚ್ಚಾಗಿದ್ದು, ಕೋರ್ಟ್‌ನಲ್ಲಿ ಬಾಕಿಯಿರುವ ವ್ಯಾಜ್ಯಗಳ ಸಂಖ್ಯೆ ಏರುತ್ತಿದೆ. ಕಕ್ಷಿಗಾರರು ಶೀಘ್ರ ನ್ಯಾಯ ವಿಲೇವಾರಿಯಿಂದಾಗಿ ಆತಂಕರಹಿತ ಬದುಕಿನ ಮೂಲಭೂತ ಹಕ್ಕುಳ್ಳವರಾಗಿರುತ್ತಾರೆ. (3)

ಹೈಕೋರ್ಟ್‌ಗಳ ಕೆಲಸವು ವಿಕೇಂದ್ರೀಕರಣಗೊಳ್ಳಬೇಕಿದ್ದು ರಾಜ್ಯಗಳಲ್ಲಿ ಹೆಚ್ಚಿನ ಪೀಠ ಸ್ಥಾಪನೆ ಅಗತ್ಯವಿದೆ. ಹೆಚ್ಚುವರಿ ನ್ಯಾಯಾಧೀಶರ ಮತ್ತು ಸಿಬ್ಬಂದಿಯನ್ನು ಒಂದೇ ಆವರಣದಲ್ಲಿ ಸ್ಥಾಪಿಸುವುದು ಅಸಾಧ್ಯ. ಆದುದರಿಂದ ಹೊಸ ಪೀಠಗಳ ಸ್ಥಾಪನೆ ಅಗತ್ಯ. (4) ಹೊಸ ಪೀಠಗಳು ಸ್ಥಾಪನೆಯಾಗುವುದರಿಂದ ಕಕ್ಷಿಗಾರನಿಗೆ ಹೈಕೋರ್ಟ್ ಮೊರೆಹೋಗಲು ದೂರಪ್ರಯಾಣದ ಅಗತ್ಯ ಬರುವುದಿಲ್ಲ. (5) ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಪೀಠಗಳ ಹಣಕಾಸು ಅಗತ್ಯಗಳು ಅಡ್ಡಿಯಾಗಬಾರದು. ಕಕ್ಷಿಗಾರರ ಅಗತ್ಯಗಳನ್ನು ಪರಿಶೀಲಿಸಿ ಅವರ ಹಿತಾಸಕ್ತಿಯನ್ನು ರಕ್ಷಿಸಬೇಕು. ಗಮನವಿಡಬೇಕಾದ ಅಂಶವೇನೆಂದರೆ ನ್ಯಾಯಾಧೀಶರು ಮತ್ತು ವಕೀಲರುಗಳ ಅಸ್ತಿತ್ವವು ಕಕ್ಷಿಗಾರರಿಂದಾಗಿದ್ದು ಅವರ ಹಿತಾಸಕ್ತಿಯನ್ನು ಕಾಪಾಡಬೇಕು. (6) ಹೊಸ ಪೀಠಗಳ ಸ್ಥಾಪನೆಯು ಖಂಡಿತವಾಗಿಯೂ ಕಕ್ಷಿಗಾರರಿಗೆ ಮತ್ತು ವಕೀಲರಿಗೆ ಸಹಕಾರಿಯಾಗಲಿದ್ದು, ಹೊಸ ಆರಂಭವನ್ನು ಈ ದಿಶೆಯಲ್ಲಿ ಮಾಡಬೇಕಾಗಿದೆ.

ಲಾ ಕಮಿಷನ್ ತನ್ನ ವರದಿಯಲ್ಲಿ ತಿಳಿಸಿದಂತೆ ಒಬ್ಬ ಶ್ರೀ ಸಾಮಾನ್ಯನಿಗೆ ನ್ಯಾಯ ಸಿಗುವ ಸ್ಥಳ ಕೋರ್ಟ್ ಆಗಿರುತ್ತದೆ. ಒಬ್ಬ ನ್ಯಾಯವಾದಿಯು ಕಾನೂನು ಪರಿಣತನಲ್ಲದೆ, ಮುಗ್ಧ ಮತ್ತು ಸವಲತ್ತುಗಳಿಲ್ಲದ ಜನರಿಗೆ ಸಹಾಯ ಮಾಡುವ ಸಾಮಾಜಿಕ ಜವಾಬ್ದಾರಿಯುಳ್ಳವನಾಗಿರುತ್ತಾನೆ. ಸಂವಿಧಾನದ ಆರ್ಟಿಕಲ್ 39ಎ ಪ್ರಕಾರ ಸಮಾನ ಮತ್ತು ಉಚಿತ ನ್ಯಾಯ ದೊರಕಬೇಕಿದೆ. ಅದರ ಪ್ರಕಾರ ಸರಕಾರವು ಸಮಾನ ಅವಕಾಶವನ್ನು ಪ್ರೋತ್ಸಾಹಿಸಿ ಯೋಗ್ಯ ಶಾಸನ ಮತ್ತು ಕಾರ್ಯಕ್ರಮಗಳ ಮೂಲಕ ನ್ಯಾಯ ಪಡೆಯುವ ಸಮಾನ ಅವಕಾಶದಿಂದ ಬಡವರು ಮತ್ತು ಇತರ ಅಶಕ್ತರು ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ. ಸದ್ರಿ ವರದಿಯಲ್ಲಿ ಹೇಳಿದಂತೆ ಸಾಂವಿಧಾನಿಕ ಆಶೋತ್ತರಗಳು ದೊರಕಬೇಕಾಗಿದ್ದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಜೊತೆಯಾಗಿ ಸೇರಿ ಭಾರತದ ಬಡಜನರಿಗೆ ನ್ಯಾಯಾಂಗದ ಮೊರೆಹೋಗಲು ಸಮಾನ ಅವಕಾಶವನ್ನು ಕಲ್ಪಿಸಬೇಕಾಗಿದೆ. ಸದ್ರಿ ವರದಿಯಲ್ಲಿ (1) ಶೀಘ್ರ ನ್ಯಾಯ (2) ವ್ಯಾಜ್ಯದ ಖರ್ಚು ಕಡಿತ (3) ಶಿಸ್ತುಬದ್ಧ ನ್ಯಾಯಾಂಗ ಕಲಾಪಗಳು ನಡೆಯುವಂತೆ ವಿಶೇಷ ಒತ್ತು ನೀಡಲಾಗಿದೆ. ಲಾ ಕಮಿಷನ್ 2009ರ ವರದಿ ಇತ್ತೀಚೆಗಿನದ್ದಾಗಿದ್ದು ಇಂದಿನ ಪರಿಸ್ಥಿತಿಯಲ್ಲಿ ಪ್ರಸ್ತುತವಾಗಿದೆ.

ಹೈಕೋರ್ಟ್ ಪೀಠಗಳನ್ನು ಸ್ಥಾಪಿಸುವ ಬಗ್ಗೆ 10-08-2023ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅಂದಿನ ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್‌ರವರು - ಸದ್ರಿ ವಿಷಯದಲ್ಲಿ ರಾಜ್ಯಸರಕಾರ ಮತ್ತು ಸಂಬಂಧಿತ ಹೈಕೋರ್ಟ್ ಎಲ್ಲಾ ವಿಷಯಗಳನ್ನು ಪರಿಶೀಲಿಸಿ ಸಹಮತ ತೀರ್ಮಾನಕ್ಕೆ ಬಂದಲ್ಲಿ ಆ ತೀರ್ಮಾನದ ಬಗ್ಗೆ ಕೇಂದ್ರ ಸರಕಾರವು ಕ್ರಮಕೈಗೊಳ್ಳುವುದೆಂದು ಹೇಳಿರುತ್ತಾರೆ. ಆದುದರಿಂದ ಹೆಚ್ಚುವರಿ ಪೀಠ ಸ್ಥಾಪನೆಯ ಬಗ್ಗೆ ರಾಜ್ಯ ಸರಕಾರ ಮತ್ತು ಹೈಕೋರ್ಟ್‌ನ ಸಹಮತವು ಪ್ರಾಥಮಿಕವಾಗಿರುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಹೈಕೋರ್ಟ್ ಪೀಠಗಳನ್ನು ಪ್ರಧಾನ ಪೀಠವಿರುವ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ಸ್ಥಾಪಿಸಿರುವುದು ಹಲವು ರಾಜ್ಯಗಳಲ್ಲಿ ಕಂಡುಬರುತ್ತವೆೆ. ಕರ್ನಾಟಕದ ಗುಲ್ಬರ್ಗಾ ಮತ್ತು ಧಾರವಾಡದಲ್ಲಿ ಖಾಯಂ ಪೀಠಗಳನ್ನು 2013ರಲ್ಲಿ ಸ್ಥಾಪಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮುಂಬೈಯಲ್ಲಿರುವ ಪ್ರಧಾನ ಪೀಠವನ್ನು ಹೊರತುಪಡಿಸಿ ಪಣಜಿ, ನಾಗಪುರ, ಔರಂಗಾಬಾದ್ ಮತ್ತು ಕೊಲ್ಲಾಪುರ ಎಂಬ ನಾಲ್ಕು ಸ್ಥಳಗಳಲ್ಲಿ ಹೈಕೋರ್ಟ್ ಪೀಠಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರಕವಾಗಿರುವ ಹಲವಾರು ಅಂಶಗಳು

► ಕರ್ನಾಟಕದಲ್ಲಿ ಎರಡು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸಿದ ಬಳಿಕವೂ ಬೆಂಗಳೂರಿನಲ್ಲಿರುವ ಪ್ರಧಾನ ಪೀಠದಲ್ಲಿ ತನಿಖೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಬಹಳಷ್ಟಿದೆ.

ಹೈಕೋರ್ಟ್‌ನ ಅಂತರ್‌ಜಾಲ ತಾಣದಲ್ಲಿ ಈ ಬಗ್ಗೆ ಮಾಹಿತಿಯಿದೆ. ವಿಲೇವಾರಿ ಆಗುತ್ತಿರುವ ಪ್ರಕರಣಗಳಿಗಿಂತ ಹೊಸ ಪ್ರಕರಣಗಳ ದಾಖಲಾತಿ ಸಂಖ್ಯೆಯು ಜಾಸ್ತಿಯಾಗಿದ್ದು, ಹೈಕೋರ್ಟ್‌ನ ಬೆಂಗಳೂರು ಪೀಠದ ಮೇಲೆ ಹೊರೆ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಕಕ್ಷಿಗಾರರು ಪ್ರಕರಣ ವಿಲೇವಾರಿಗೆ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.

► ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠಕ್ಕೆ ಕರಾವಳಿ ಜಿಲ್ಲೆಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಸಲ್ಲಿಸಲಾಗುತ್ತಿರುವ ವ್ಯಾಜ್ಯಗಳ ಸಂಖ್ಯೆ ಅಗಾಧವಾಗಿದ್ದು, ಸ್ಥಳೀಯವಾಗಿ ಹೈಕೋರ್ಟ್

ಪೀಠ ಸ್ಥಾಪನೆಯಾದಲ್ಲಿ ಕಕ್ಷಿಗಾರರಿಗೆ ಬಹಳಷ್ಟು ಅನುಕೂಲವಾಗುವುದು.

ಬೆಂಗಳೂರು ಪ್ರಧಾನ ಪೀಠವು ಕರಾವಳಿ ಭಾಗದಿಂದ 350 ಕಿ.ಮೀ. ಗಿಂತ ದೂರದಲ್ಲಿದ್ದು ಕಕ್ಷಿಗಾರರು ಬೆಂಗಳೂರಿಗೆ ಪ್ರಯಾಣಿಸಬೇಕಾದ ಕಷ್ಟವನ್ನು ಎದುರಿಸುತ್ತಿದ್ದಾರೆ. ಬೆಂಗಳೂರು ನಗರ ಹೊರವಲಯವನ್ನು ತಲುಪಿದ ನಂತರ ಸಂಬಂಧಪಟ್ಟ ವಕೀಲರ ಕಚೇರಿಗಳಿಗೆ ಭೇಟಿ ಮಾಡಲು ಸಾರಿಗೆ ಸಾಂದ್ರತೆಯಿಂದ ಹಲವಾರು ತಾಸುಗಳ ಪ್ರಯಾಣ ಬೇಕಾಗುತ್ತದೆ. ಮಳೆಗಾಲದ 3-4 ತಿಂಗಳುಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ರಸ್ತೆ ಹಾಗೂ ರೈಲು ಸಂಪರ್ಕ ಬಹಳ ಅನಿಶ್ಚಿತ ಮತ್ತು ದುಬಾರಿಯಾಗಿರುತ್ತವೆ. ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಲೇಬೇಕಾಗಿದ್ದು ಆಹಾರ ಮತ್ತು ವಸತಿ ವೆಚ್ಚಗಳು ಬಡ ಕಕ್ಷಿಗಾರನಿಗೆ ಗಗನ ಕುಸುಮ ವಾಗಿರುತ್ತವೆ.

► ಕರ್ನಾಟಕ ಕರಾವಳಿ ಹಾಗೂ ನೆರೆಯ ಮಲೆನಾಡು ಪ್ರದೇಶದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿದ ವಕೀಲರುಗಳು ವೃತ್ತಿನಿರತರಾಗಿದ್ದು, ಅವರ ವೃತ್ತಿಪರತೆ ಹಾಗೂ ನ್ಯಾಯಶಾಸ್ತ್ರದಲ್ಲಿ ಪ್ರಬುದ್ಧತೆಯ ಬಗ್ಗೆ ದಶಕಗಳಿಂದ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.

► ಕರ್ನಾಟಕ ಕರಾವಳಿ ಹಾಗೂ ನೆರೆಯ ಮಲೆನಾಡು ಪ್ರದೇಶಗಳಲ್ಲಿ ಹತ್ತಕ್ಕಿಂತಲೂ ಹೆಚ್ಚಿನ ಕಾನೂನು ವಿದ್ಯಾಲಯಗಳಿದ್ದು ಸಹಸ್ರಾರು ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ.

► ಹೈಕೋರ್ಟ್ ಪೀಠ ಸ್ಥಾಪನೆಗೆ ಮಂಗಳೂರು ನಗರದ ಜೈಲು ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ ಕಚೇರಿಗಳ ಸ್ಥಳಾಂತರದಿಂದ ಸ್ಥಳಾವಕಾಶ ಸಿಗುತ್ತಿದೆ. ಹೆಚ್ಚಿನ ವಿಸ್ತಾರವಾದ ಜಾಗದ ಅವಶ್ಯಕತೆ ಕಂಡುಬಂದಲ್ಲಿ ಮುಲ್ಕಿ ಪ್ರದೇಶದಲ್ಲಿ ನೂರಾರು ಎಕರೆ ಸ್ಥಳ ಲಭ್ಯವಿದೆ ಎಂದು ತಿಳಿದು ಬಂದಿದೆ.

► ಹೈಕೋರ್ಟ್ ಪೀಠ ಸ್ಥಾಪನೆಗೆ ಉದ್ದೇಶಿತ ಸ್ಥಳದಲ್ಲಿ ಸಂಪರ್ಕ ಸವಲತ್ತುಗಳು ಇರಬೇಕು ಎನ್ನುವ ಅಂಶ ಪ್ರಮುಖವಾದದು. ಕರಾವಳಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬೃಹತ್ ಬಂದರು ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ಸೌಕರ್ಯಗಳಿರುವ ಪ್ರದೇಶವು ಹೈಕೋರ್ಟ್ ಪೀಠ ಸ್ಥಾಪನೆಗೆ ಬಹಳ ಸೂಕ್ತ ಸ್ಥಳವಾಗಿರುತ್ತದೆ.

► ಕರಾವಳಿಯ ಮೂರು ಜಿಲ್ಲೆಗಳು ಮತ್ತು ನೆರೆಯ ಮಲೆನಾಡು ಜಿಲ್ಲೆಗಳಲ್ಲಿ ಸಾಕಷ್ಟು ಜನಸಂಖ್ಯೆಯಿದ್ದು ಬಹಳ ವಿಸ್ತಾರವಾದ ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ.

► ಕರಾವಳಿ ಪ್ರದೇಶವು ವೈದ್ಯಕೀಯ, ಬ್ಯಾಂಕಿಂಗ್, ಶಿಕ್ಷಣ ಹಾಗೂ ಕೈಗಾರಿಕಾ ಕೇಂದ್ರವಾಗಿದ್ದು ಈ ಪ್ರದೇಶದಲ್ಲಿ ಬರುವ ಸಂದರ್ಶಕರಿಗೆ ಉತ್ತಮ ವಾಸ್ತವ್ಯದ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಸಿಗುತ್ತದೆ.

► ವೃತ್ತಿಪರ ಕಾನೂನು ಸೇವೆಗಳಿಗೆ ಮಹಾನಗರಗಳಲ್ಲಿ ನೀಡಬೇಕಾದ ದುಬಾರಿ ಶುಲ್ಕದ ಬದಲು ಬಡಜನರಿಗೆ ಕಡಿಮೆ ವೆಚ್ಚದಲ್ಲಿ ಕಾನೂನು ಸೇವೆ ದೊರಕುತ್ತದೆ.

ಈ ಎಲ್ಲಾ ದೃಷ್ಟಿಯಿಂದ ಕೂಲಂಕಷವಾಗಿ ಪರಿಶೀಲನೆ ಮಾಡಿದಾಗ ಮಂಗಳೂರಿನಲ್ಲಿ ಅಥವಾ ಪರಿಸರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರಕವಾದ ಅಂಶಗಳು ಎದ್ದುಕಾಣುತ್ತವೆ.

ಸರಕಾರವಾಗಲಿ ನ್ಯಾಯಾಂಗವಾಗಲಿ ಈ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕಾದಲ್ಲಿ ಜನರ ಬೇಡಿಕೆ ಹಾಗೂ ಒತ್ತಾಯ ಅತಿ ಅಗತ್ಯ. ಮಂಗಳೂರು ವಕೀಲರ ಸಂಘ, ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಈ ಬಗ್ಗೆ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು ಜನರು ಜಾಗೃತಗೊಂಡು ಒಮ್ಮತದಿಂದ ಈ ಬಗ್ಗೆ ಸರಕಾರಕ್ಕೆ ಬೇಡಿಕೆಯನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಜನರು ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ಪ್ರಾತಿನಿಧಿಕವಾಗಿ ಈ ಬಗ್ಗೆ ಮನವಿ, ಬೇಡಿಕೆಗಳನ್ನು ಸಲ್ಲಿಸಿ ಹೈಕೋರ್ಟ್ ಪೀಠದ ಸ್ಥಾಪನೆಗೆ ಸರಕಾರ ಹಾಗೂ ನ್ಯಾಯಾಂಗದ ಮನವೊಲಿಸಿದಲ್ಲಿ ಬಹುದಿನಗಳ ಕನಸು ಶೀಘ್ರ ನನಸಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಕೆ.ಪೃಥ್ವಿರಾಜ್ ರೈ

contributor

Similar News