ಬಡ ವಿಧವೆಗೆ ಮನೆ ಕಟ್ಟಿಸಿದ ಕೂಲಿ ಕಾರ್ಮಿಕರು : ಮಾನವೀಯತೆಗೆ ಮಾದರಿಯಾದ ಮುಸ್ಲಿಮ್ ಯುವಕರ ತಂಡ
ವಿಜಯಪುರ: ಸರಕಾರ ಮಾಡಬೇಕಾದ ಕೆಲಸವನ್ನು ಸಾಮಾನ್ಯ ಕೂಲಿಕಾರ್ಮಿಕರು ಮಾಡಿ ಮಾನವೀಯತೆಯ ಮಾದರಿಯಾಗಿ ಹೊರಹೊಮ್ಮಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಆಟೋ ಚಾಲಕರು, ಪೇಂಟಿಂಗ್ ಕಾರ್ಮಿಕರು ಹಾಗೂ ಸೆಂಟ್ರಿಂಗ್‌ಕೆಲಸಗಾರರನ್ನು ಒಳಗೊಂಡ ಮುಸ್ಲಿಮ್ ಯುವಕರ ತಂಡವು ಬಡ ಹಿಂದೂ ವಿಧವೆಗೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ವಿಜಯಪುರದ ಶಹಾಪೇಟೆ ಪ್ರದೇಶದಲ್ಲಿ ವಾಸವಾಗಿದ್ದ ಕಸ್ತೂರಿ ರೂಡಗಿ ಎಂಬ ವಿಧವೆ ಮಹಿಳೆ ಪತಿಯ ಅಗಲಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಎರಡು ಮಕ್ಕಳೊಂದಿಗೆ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಳೆ, ಬಿಸಿಲಿನಿಂದ ರಕ್ಷಣೆ ಇಲ್ಲದ ಮುರುಕಾದ ಮನೆಯಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು.
ಈ ಮಹಿಳೆಯ ಪರಿಸ್ಥಿತಿಯನ್ನು ಕಂಡು ಮನಗುಂದಿದ ಶಹಾಪೇಟೆಯ ‘ಬಿಜಾಪುರ ಯೂತ್ ಕವರೇಜ್’ ತಂಡದ ಸದಸ್ಯರು ಸಹಾಯಕ್ಕೆ ಮುಂದಾದರು. ತಮ್ಮ ಅಲ್ಪ ಆದಾಯದಲ್ಲಿಯೇ ಹಣ ಸಂಗ್ರಹಿಸಿ, ಜೊತೆಗೆ ದಾನಿಗಳ ಸಹಕಾರ ಪಡೆದು ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಚ್ಚಾ ಮನೆಯನ್ನು ನಿರ್ಮಿಸಿ ವಿಧವೆಗೆ ಹಸ್ತಾಂತರಿಸಿದರು.
ಈ ಸೇವಾಕಾರ್ಯದಲ್ಲಿ ಫಯಾಜ್ ಹೊನ್ನುಟಗಿ, ಮೈಬುಬ್ ಬಾಗವಾನ್, ಬಾಬುಲಾಲ್ ಚೌದರಿ, ಮತ್ತಿನ್ ಮೀರದೆ, ಬಾಬಾ ಜಾನ್ ಉಕ್ಕಲಿ, ಕಮ್ಮು ಉಕ್ಕಲಿ, ಸಾದಿಕ್ ಚೌದರಿ, ಜೂಬೇರ್ ಮೊಗರೆ ಸೇರಿದಂತೆ ನೂರಕ್ಕೂ ಹೆಚ್ಚು ಸದಸ್ಯರು ಶ್ರಮಿಸಿದ್ದಾರೆ. ತಂಡದ ಕೆಲವರು ಸೆಂಟ್ರಿಂಗ್ ಕೆಲಸವನ್ನು ಉಚಿತವಾಗಿ ಮಾಡಿದ್ದರೆ, ಕೆಲವರು ಗೋಡೆ ಕಟ್ಟುವ ಕೆಲಸವನ್ನು ಉಚಿತವಾಗಿ ನೆರವೇರಿಸಿದ್ದಾರೆ.
ಪ್ರತಿ ತಿಂಗಳು ಬಡವರಿಗೆ ರೇಷನ್: ಈ ತಂಡವು ಮನೆ ನಿರ್ಮಾಣದಂತಹ ಕಾರ್ಯಗಳಷ್ಟೇ ಅಲ್ಲದೆ, ಪ್ರತಿ ತಿಂಗಳು ಸದಸ್ಯರಿಂದ 100 ರೂ. ಸಂಗ್ರಹಿಸಿ ಐದು ಬಡ ಕುಟುಂಬಗಳಿಗೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ವಿತರಿಸುವ ಸಾಮಾಜಿಕ ಸೇವೆಯನ್ನು ಕೂಡ ನಿರಂತರವಾಗಿ ಮಾಡುತ್ತಿದೆ. ಬಡವರ ಸಂಕಷ್ಟದಲ್ಲಿ ಕೈಜೋಡಿಸಿರುವ ಈ ಯುವಕರ ತಂಡದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘‘ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ಮಾನವೀಯ ಧರ್ಮ. ಜಾತಿ-ಧರ್ಮ ನಮಗೆ ಮುಖ್ಯವಲ್ಲ. ಸಮಾಜಕ್ಕೆ ಒಳಿತಾಗಬೇಕು ಎಂಬ ಉದ್ದೇಶದಿಂದ ನಾವು ಈ ಕೆಲಸಗಳನ್ನು ಮಾಡುತ್ತೇವೆ. ಇದು ಯಾವುದೇ ಪ್ರಚಾರಕ್ಕಾಗಿ ಮಾಡುವ ಕಾರ್ಯವಲ್ಲ,’’ ಎಂದು ತಂಡದ ಸದಸ್ಯರಾದ ಫಯಾಜ್ ಹಾಗೂ ಮೈಬುಬ್ ತಿಳಿಸಿದ್ದಾರೆ.