ಕಾಂಗ್ರೆಸ್ ಹೈಕಮಾಂಡ್ ಜೀವಂತವಾಗಿದೆಯೇ?
ನೂರಮೂವತ್ತೇಳು ಶಾಸಕರ ದೈತ್ಯ ಬಲ ಹೊಂದಿರುವ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಸರಕಾರ ಹೇಗಿರಬೇಕಿತ್ತು? ಆ ಸರಕಾರವನ್ನು ಮುನ್ನಡೆಸುತ್ತಿರುವ ಪಕ್ಷ ಹೇಗಿರಬೇಕಿತ್ತು? ವಿರೋಧ ಪಕ್ಷ ಸತ್ತು ಹೋಗಿರುವುದರಿಂದ ಆಡಳಿತಾರೂಢ ಪಕ್ಷದ ಆಕ್ರಮಣಶೀಲತೆ ಹೇಗಿರಬೇಕಿತ್ತು?
ಆತ್ಮವಿಶ್ವಾಸ ತುಂಬಿ ತುಳುಕುತ್ತಿರಬೇಕಿತ್ತು.
ಆದರೆ ಮುಖ್ಯಮಂತ್ರಿ ಆದಿಯಾಗಿ ಯಾರಲ್ಲೂ ಆ ಆತ್ಮವಿಶ್ವಾಸ ಕಾಣುತ್ತಿಲ್ಲ. ‘ನುಡಿದಂತೆ ನಡೆದವರು’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರಿಗೆ ಈಗ ‘ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿದ್ದೇವೆ’ ಎಂದು ಹೇಳುವ ಧೈರ್ಯ ಇಲ್ಲ. ಯಾರಾದರೂ ‘2028ಕ್ಕೂ ನಮ್ಮ ಸರಕಾರವೇ ಬಂದು ಕ್ರಾಂತಿಯಾಗುತ್ತೆ’ ಎಂದರೆ ಅದು ಅವರ ಬಾಯಿ ಚಪಲ ಮಾತ್ರ.
ಇಂಥ ನಿಷ್ಕ್ರಿಯ ಪರಿಸ್ಥಿತಿ ನಿರ್ಮಾಣವಾಗಲು ಯಾರು ಕಾರಣ?
ಮೊದಲನೆಯದಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರು, ರಾಹುಲ್ ಗಾಂಧಿ ಅವರಿಂದ ಹಿಡಿದು ರಣದೀಪ್ ಸಿಂಗ್ ಸುರ್ಜೆವಾಲವರೆಗೆ. ಎರಡನೆಯದಾಗಿ ರಾಜ್ಯ ನಾಯಕರು; ಅದು ಮುಖ್ಯಮಂತ್ರಿಯಾದಿಯಾಗಿ ಶಾಸಕರವರೆಗೆ, ಅವರ ಪಕ್ಷದ ವಕ್ತಾರರವರೆಗೆ, ಕಾರ್ಯಕರ್ತರವರೆಗೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ವಾರಗಟ್ಟಲೆ ಸಮಯ ತೆಗೆದುಕೊಂಡು ಅಷ್ಟಕ್ಕೇ ನಿತ್ರಾಣರಾಗಿದ್ದರು. ‘ಅಧಿಕಾರ ಹಂಚಿಕೆಯ ಒಪ್ಪಂದ’ದ ಗೊಂದಲ ಹುಟ್ಟುಕೊಳ್ಳುತ್ತದೆ ಎಂಬ ಕನಿಷ್ಠ ಅಂದಾಜನ್ನೂ ಮಾಡದೆ ಮೈಮರೆತಿದ್ದರು. ಅಧಿಕಾರ ಹಂಚಿಕೆಯ ಒಪ್ಪಂದ ಆಗಿದ್ದರೆ ಆಗಿದೆ ಎಂದು, ಆಗಿಲ್ಲದಿದ್ದರೆ ಆಗಿಲ್ಲ ಎಂಬುದಾಗಿ ಹೈಕಮಾಂಡ್ ಸ್ಪಷ್ಟಪಡಿಸಬಹುದಾಗಿತ್ತು.
ಆದರೆ ಸ್ಪಷ್ಟಪಡಿಸಲಿಲ್ಲ. ಅದರಲ್ಲೂ ಈಗ ಎಐಸಿಸಿ ಅಧ್ಯಕ್ಷರು ಕರ್ನಾಟಕದವರೇ ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಲ್ಲದೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಕರ್ನಾಟಕದ ಬಗ್ಗೆ ವಿಶೇಷ ನಿಗಾ ಇಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅಧಿಕಾರದಲ್ಲಿರುವುದೇ ಮೂರು ರಾಜ್ಯಗಳಲ್ಲಿ. ಎಂಥದೇ ಸಮಸ್ಯೆ ಎದುರಾದರೂ ದಿನ ಬೆಳಗಾಗುವುದರೊಳಗೆ ಬಗೆಹರಿಸ ಬಹುದಾದಷ್ಟು ಪುರುಸೊತ್ತಿದೆ. ಆದರೂ ಕರ್ನಾಟಕದ ಅಧಿಕಾರ ಹಂಚಿಕೆಯ ಕುರಿತಾದ ಗೊಂದಲ ಹೈಕಮಾಂಡ್ ನಾಯಕರನ್ನು ಬಾಧಿಸುತ್ತಿಲ್ಲ.
ಕರ್ನಾಟಕದ ಮೂಲಕ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರಮಟ್ಟಕ್ಕೆ ಹಲವು ಸಂದೇಶ ಕಳುಹಿಸುವ ಅವಕಾಶವನ್ನು ಹೊಂದಿತ್ತು. ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸನ್ನು ವೃದ್ಧಿಸಿಕೊಳ್ಳಬಹುದಾಗಿತ್ತು. ತಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಕಲು ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಇಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ. ಆದರೆ ಈ ವಿಷಯವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದ್ದದ್ದು ಕರ್ನಾಟಕದ ಆಚೆಗೆ. ಹರ್ಯಾಣ, ಮಹಾರಾಷ್ಟ್ರ, ದಿಲ್ಲಿ ಮತ್ತು ಬಿಹಾರಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂಥ ಪ್ರಯತ್ನವನ್ನು ಮಾಡಲಿಲ್ಲ. ಬಿಹಾರಕ್ಕೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕಳುಹಿಸಿ ಅಲ್ಲಿನ ‘ಮುಖ್ಯಮಂತ್ರಿ ಅಭ್ಯರ್ಥಿ’ ಘೋಷಣೆ ಮಾಡಿ ಎಂದು ಹೇಳುತ್ತದೆ ಹೈಕಮಾಂಡ್. ಆದರೆ ಹಿಂದುಳಿದ ಜಾತಿಗಳು ನಿರ್ಣಾಯಕವಾಗಿರುವ ಅದೇ ಬಿಹಾರಕ್ಕೆ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಕಳುಹಿಸಿ ಅಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡಿಸುವುದಿಲ್ಲ.
ರಾಹುಲ್ ಗಾಂಧಿ ದೇಶಾದ್ಯಂತ ಜಾತಿ ಸಮೀಕ್ಷೆ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದುಳಿದವರನ್ನು ಕಡೆಗಣಿಸಿದೆ ಎಂದು ತಪ್ಪೊಪ್ಪಿಕೊಳ್ಳುತ್ತಾರೆ. ಆದರೆ ಕರ್ನಾಟಕದ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯ ವರದಿ ಕಸದ ಬುಟ್ಟಿಗೆ ಸೇರಲು ಕಾರಣಕರ್ತರಾಗುತ್ತಾರೆ. ಸೇನೆಯಿಂದ ಹಿಡಿದು ನ್ಯಾಯಾಂಗದವರೆಗೆ ಆಯಕಟ್ಟಿನ ಜಾಗಕ್ಕೆ ಅಹಿಂದ ವರ್ಗದ ಜನ ಬರಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಅವರದೇ ಪಕ್ಷದ ನಾಯಕರು ರಾಜ್ಯದಲ್ಲಿ ದಲಿತರ ಸಮಾವೇಶ ನಡೆಸಲು ಅನುಮತಿ ನೀಡುವುದಿಲ್ಲ. ಅಲೆಮಾರಿಗಳಿಗೆ ಅನ್ಯಾಯವಾದಾಗಲೂ ಮಾತನಾಡುವುದಿಲ್ಲ.
ಪಕ್ಷದ ವಿದ್ಯಮಾನಗಳನ್ನು ನೋಡಿಕೊಳ್ಳಲೆಂದು ಪ್ರತೀ ರಾಜ್ಯಕ್ಕೆ ಉಸ್ತುವಾರಿಗಳನ್ನು ನೇಮಿಸುವುದು ವಾಡಿಕೆ. ಆದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕರ್ನಾಟಕದಲ್ಲಿ ಪಕ್ಷದ ವಿಚಾರಕ್ಕಿಂತ ಸರಕಾರದ ವಿಷಯದಲ್ಲಿ ಮೂಗು ತೂರಿಸುವುದೇ ಹೆಚ್ಚು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಪಕ್ಷ ಸಂಘಟನೆ ಹಳ್ಳ ಹಿಡಿದಿದೆ. ಆದರೆ ಸುರ್ಜೆವಾಲಾ ಮಂತ್ರಿಗಳ ಸಭೆ ಮಾಡುತ್ತಾ ಕೂರುತ್ತಾರೆ. ಹಿಂದೆ ಗುಲಾಂ ನಬಿ ಆಝಾದ್, ಮದುಸೂಧನ್ ಮಿಸ್ತ್ರಿ ಮತ್ತಿತರರು ಜಿಲ್ಲೆ ಜಿಲ್ಲೆಗಳಿಗೂ ಭೇಟಿ ಕೊಡುತ್ತಿದ್ದರು. ಆದರೆ ಸುರ್ಜೆವಾಲಾ ಬೆಂಗಳೂರಿಗೆ ಬಂದರೂ ಕೆಪಿಸಿಸಿ ಕಚೇರಿಗೆ ಬರುವುದು ಅಪರೂಪ. ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದು ಅಲ್ಲೇ ವ್ಯವಹಾರ ಮುಗಿಸುತ್ತಾರೆ.
ಹೀಗೆ ಕಾಂಗ್ರೆಸ್ ಹೈಕಮಾಂಡ್ ಮಾಡಬೇಕಾದ ಕೆಲಸವನ್ನು ಮಾಡುತ್ತಿಲ್ಲ. ಆದರೂ ಕೆಲವರು ‘ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ’ ಎನ್ನುತ್ತಾರೆ. ಅದೊಂದು ಹಾಸ್ಯಾಸ್ಪದ ಸಂಗತಿ. ಸರಕಾರ ಬಂದಾಗ ಹುಟ್ಟಿಕೊಂಡ ಗೊಂದಲ ಇಂದು ಸರಕಾರದ ವರ್ಚಸ್ಸನ್ನು ಪಾತಾಳಕ್ಕೆ ತಳ್ಳುತ್ತಿದ್ದರೂ ಕಾಂಗ್ರೆಸ್ ಹೈಕಮಾಂಡ್ ಕಣ್ಣುಕಿವಿ ಮುಚ್ಚಿಕೊಂಡು ಕುಳಿತಿದೆ. ಯಾವ ಕಾರಣಕ್ಕೆ ತೆಪ್ಪಗಿದೆ? ಸಿದ್ದರಾಮಯ್ಯ ಅವರಿಗೆ ಕುರ್ಚಿ ಬಿಡಿ ಎಂದು ಹೇಳುವ ಧೈರ್ಯವಿಲ್ಲವೆ? ಅಥವಾ ಡಿ.ಕೆ. ಶಿವಕುಮಾರ್ ಅವರಿಗೆ ನಿಮಗೆ ಕುರ್ಚಿ ಕೊಡಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯವಿಲ್ಲವೆ?
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೃಷ್ಟಿಯಿಂದ ಮಾತ್ರ ನೋಡಿದರೆ ಸಾಲದು. ಕರ್ನಾಟಕದ ಜನರ ಬಗ್ಗೆಯೂ ಯೋಚನೆ ಮಾಡಬೇಕು. ಕಳೆದ ವಿಧಾನಸಭೆಯ ವೇಳೆ ಬಿಜೆಪಿಯ ರಾಜಕೀಯ ಅನಿಶ್ಚಿತತೆಯನ್ನು ಕಂಡು ಬೇಸತ್ತಿದ್ದ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದರು. ಬಿಜೆಪಿ ಹೈಕಮಾಂಡ್ ಆಪರೇಷನ್ ಕಮಲ ಮಾಡಿ ಪ್ರಜಾಪ್ರಭುತ್ವವನ್ನು ನೇಣುಗಂಬಕ್ಕೆ ಏರಿಸುತ್ತದೆ ಎಂದು ಬಹಳ ಎಚ್ಚರಿಕೆಯಿಂದ ಬರೋಬ್ಬರಿ ನೂರಾಮೂವತ್ತೈದು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದರು. ಜನ ಕಾಂಗ್ರೆಸ್ ಸರಕಾರಕ್ಕೆ ಎಂಥ ಭದ್ರತೆಯನ್ನು ತೊಂದುಕೊಟ್ಟಿದ್ದಾರೆ ಎಂದರೆ ಬಿಜೆಪಿಯವರಿರಲಿ ಸ್ವತಃ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಕೂಡ ಸರಕಾರವನ್ನು ಕೆಡವಲು ಸಾಧ್ಯವಿಲ್ಲ. ಅಷ್ಟೇ ಏಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ಸೇರಿಕೊಂಡರೂ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಏಕೆಂದರೆ ನೂರಾಮುವತ್ತೈದು ಶಾಸಕರ ಪೈಕಿ ಪಕ್ಷವನ್ನು ಒಡೆದು ಗುಂಪಾಗಿ ಹೊರಗೆ ಹೋಗಲು ಮೂರನೇ ಎರಡರಷ್ಟು ಶಾಸಕರ ಅಗತ್ಯವಿದೆ. ಅಂದರೆ ತೊಂಭತ್ತು ಮಂದಿ. ಈಗ ಹೇಳಿ ತೊಂಭತ್ತು ಮಂದಿ ಕಾಂಗ್ರೆಸ್ ಬಿಟ್ಟು ಹೋಗಲು ಸಿದ್ಧರಿದ್ದಾರಾ?
ಹೌದು, ರಾಜಕಾರಣವನ್ನು ‘ಹೀಗೇ’ ಎಂದು ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಂಥ ಜನನಾಯಕ ಮತ್ತು ಡಿ.ಕೆ. ಶಿವಕುಮಾರ್ ಅವರಂಥ ಸಂಘಟಕನ ವಿಚಾರದಲ್ಲಿ ‘ಸಂಖ್ಯೆಗಳಾಚೆಗೂ’ ಯೋಚನೆ ಮಾಡಬೇಕಾಗುತ್ತದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಹಾಗೆ ಯೋಚನೆ ಮಾಡುತ್ತಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಹಾಗೆ ಯೋಚನೆ ಮಾಡಿದ್ದರೆ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೀವಂತವಾಗಿದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಮನ್ವಯ ಮೂಡುವಂತೆ ಮಾಡಲು ಎರಡೂವರೆ ವರ್ಷ ಬೇಕಾಗಿರಲಿಲ್ಲ.
ರಾಜ್ಯ ನಾಯಕರ ವಿಷಯಕ್ಕೆ ಬರುವುದಾದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಕಮ್ಮಿ ಸಾಧನೆಯೇನಲ್ಲ. ಆದರೆ ಅದನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವುದರಲ್ಲಿ, ಗ್ಯಾರಂಟಿಗಳು ಜನರ ಬದುಕಿನಲ್ಲಿ ತಂದ ಬದಲಾವಣೆಯನ್ನು ಬಿಡಿಸಿ ಹೇಳುವುದರಲ್ಲಿ ಸಿಎಂ ಆದಿಯಾಗಿ ಸಚಿವರು ಸಮರ್ಪಕವಾಗಿ ಕೆಲಸ ಮಾಡಲೇ ಇಲ್ಲ. ನೂರಮೂವತ್ತೈದು ಶಾಸಕರ ಪೈಕಿ ಹಲವರ ಗೆಲುವಿಗೆ ಗ್ಯಾರಂಟಿ ಯೋಜನೆಗಳ ಘೋಷಣೆ ಕಾರಣ. ಆದರೆ ಗೆದ್ದ ಮೇಲೆ ಅತ್ಯಂತ ಕೃತಘ್ನರಾಗಿ ಗ್ಯಾರಂಟಿ ಯೋಜನೆಗಳನ್ನು ಮೂದಲಿಸಿದರು. ತಮ್ಮ ಮುಂದಿನ ಹಲವು ತಲೆಮಾರುಗಳಿಗೆ ಆಸ್ತಿ ಖಾತ್ರಿ ಮಾಡಿಟ್ಟಿರುವ ಹಿರಿಯ ಶಾಸಕರೊಬ್ಬರು ನಾನಾಗಿದ್ದರೆ ‘ಇಂಥ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರಲಿಲ್ಲ’ ಎಂದು ಕುಹಕವಾಡಿದರು.
ಇನ್ನು ಆ ಪಕ್ಷದ ವಕ್ತಾರರು ಮತ್ತು ಕಾರ್ಯಕರ್ತರೂ ಅಷ್ಟೇ. ಅವರಿಗೆ ವಿಷಯ ಸ್ಪಷ್ಟತೆಯ ಕೊರತೆ. ತಮ್ಮ ತಮ್ಮ ನಾಯಕರ ವ್ಯಕ್ತಿಪೂಜೆಯ ಎದುರು ಅವರಿಗೆ ಪಕ್ಷದ ಸಿದ್ಧಾಂತ ಗೌಣವಾಗುತ್ತದೆ. ಈಗ ದೇಶಾದ್ಯಂತ ಮತಗಳ್ಳತನದ ಬಗ್ಗೆ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ರಾಜ್ಯಗಳಲ್ಲಿ ಇದರ ಬಗ್ಗೆ ದೊಡ್ಡ ಅಭಿಯಾನ ನಡೆಸಬೇಕು ಎಂದು ಸೂಚನೆ ನೀಡಿದೆ. ಇದರ ಭಾಗವಾಗಿ ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷೆ ಝೀನತ್ ಶಬ್ರೀನ್ ತಮ್ಮ ಪದಾಧಿಕಾರಿಗಳ ಜೊತೆ ಮೆಟ್ರೋ ರೈಲಿನಲ್ಲಿ ಮತಗಳ್ಳತನದ ಬಗ್ಗೆ ಸಾರ್ವಜನಿಕರಿಗೆ ಕರಪತ್ರ ಹಂಚಿದ್ದಾರೆ. ಅವರ ಮೇಲೆ ದೂರು ದಾಖಲಾಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸಿನ ಶಾಸಕರು, ನಾಯಕರು, ಎರಡನೇ ಹಂತದ ನಾಯಕರು, ವಕ್ತಾರರು ಮತ್ತು ಕಾರ್ಯಕರ್ತರು ಮತಗಳ್ಳತನದ ಬಗ್ಗೆ ‘ಮೌನಕ್ರಾಂತಿ’ ನಡೆಸಿದ್ದಾರೆ. ಮತಗಳ್ಳತನದ ವಿರುದ್ಧ 1,12,40,000 ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಅವೆಲ್ಲ ಯಾರ ಸಹಿ ಎನ್ನುವುದು ಮಾತ್ರ ಯಾರಿಗೂ ಗೊತ್ತಾಗಿಲ್ಲ. ಇದು ಆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪಕ್ಷದ ಕಾರ್ಯಕ್ರಮವೊಂದನ್ನು ಜಾರಿಗೊಳಿಸುವ ಪರಿ.
ಆಫ್ ದಿ ರೆಕಾರ್ಡ್!
ಈ ನಡುವೆ ನಾಯಕತ್ವ ಬದಲಾವಣೆಯ ಚರ್ಚೆ ವೇಳೆ ನೂರು ಕಾಂಗ್ರೆಸ್ ಭವನಗಳಿಗೆ ಶಂಕು ಸ್ಥಾಪನೆ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ಹೈಕಮಾಂಡಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಇದಕ್ಕಿಂತಲೂ Interesting ಆದ ಇನ್ನೊಂದು ವಾದ ಕೇಳಿಬರುತ್ತಿದೆ. ಅದೇನೆಂದರೆ ಕಟ್ಟಬೇಕಾಗಿರುವುದು ಪಕ್ಷದ ಕಾರ್ಯಕರ್ತರ ಪಡೆಯನ್ನು, ಕಟ್ಟಡವನ್ನಲ್ಲ ಎನ್ನುವ ವಾದ.
ಶಂಕು ಸ್ಥಾಪನೆ ನೆರವೇರಿಸಲು ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಅವರಿಂದ ಈ ಕ್ಷಣದವರೆಗೆ ಬರುತ್ತೇನೆ ಎಂದಾಗಲಿ, ಬರುವುದಿಲ್ಲ ಎಂದಾಗಲಿ ಉತ್ತರ ಬಂದಿಲ್ಲ. ದಿಲ್ಲಿ ಮೂಲಗಳು ‘ರಾಹುಲ್ ಗಾಂಧಿ ಬರುವುದಿಲ್ಲ’ ಎನ್ನುವ ಸುದ್ದಿ ನೀಡುತ್ತಿವೆ. ಆದರೆ ನಾಯಕತ್ವ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವುದರಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕಿದ್ದಾರಾ ಅಥವಾ ಕೇಡರ್ ಕಟ್ಟಬೇಕೆಂಬ ತಮ್ಮ ಮಾತಿಗೆ ಕಿಮ್ಮತ್ತು ನೀಡದೆ ಕಟ್ಟಡ ಕಟ್ಟುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿರಾಸಕ್ತಿ ತೋರುತ್ತಿದ್ದಾರಾ? ಎನ್ನುವುದು ಮಾತ್ರ ಇನ್ನೂ ಗೊತ್ತಾಗಿಲ್ಲ.