×
Ad

ದೇವೇಗೌಡರಿಗೆ ಅಹಿಂದ ಬಗ್ಗೆ ಅಸೂಯೆ ಏಕೆ?

Update: 2025-12-29 11:09 IST

ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಅಹಿಂದ ಸಮಾವೇಶ ಮಾಡಲು ಮುಂದಾಗಿದ್ದಾರೆ ಎಂದರೆ ತಲೆಕೆಡಿಸಿಕೊಳ್ಳಬೇಕಾದವರು ಕಾಂಗ್ರೆಸ್ ನಾಯಕರು. ಆದರೆ ಅಖಾಡ ಪ್ರವೇಶಿಸಿರುವುದು ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂದು ಹೇಳಲು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಅವರು ಅಹಿಂದ ಎಂಬ ಪರಿಕಲ್ಪನೆಯನ್ನು ಅವಹೇಳನ ಮಾಡಲು ಬಳಸಿಕೊಂಡರು. ಅಹಿಂದ ಎನ್ನಲು ನನ್ನ ಬಾಯಿ ತಡವರಿಸುತ್ತದೆ ಎಂದು ಕನವರಿಸಿದರು. ಇದರಿಂದ ಅಹಿಂದ ಬಗ್ಗೆ ದೇವೇಗೌಡ ಮಾಡಿದ ವ್ಯಂಗ್ಯಕ್ಕೂ ರಾಜ್ಯದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಯುತ್ತಿರುವುದಕ್ಕೂ ನಂಟೇನು? ದೇವೇಗೌಡರು ಅಹಿಂದ ಬಗ್ಗೆ ಅಸೂಯೆ ಪಡುವುದು ಏಕೆ? ಎಂಬ ಪ್ರಶ್ನೆಗಳು ಮೂಡುತ್ತವೆ.

ದೇವೇಗೌಡರು ಸುಮ್ಮನೆ ಮಾತನಾಡುವವರಲ್ಲ, ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ರೀತಿ ಯಾವುದೋ ಪ್ರಚೋದನೆಗೆ ಒಳಗಾಗಿ ಮಾತನಾಡುವವರಲ್ಲ. ಏನೇ ಮಾತನಾಡುವು ದಿದ್ದರೂ ಎಲ್ಲಾ ಆಯಾಮಗಳಿಂದ ಕೂಡಿ-ಕಳೆದು ಮಾತನಾಡುವವರು. ಅವರು ಬೇರೆಲ್ಲರಿಗಿಂತ ರಾಜಕೀಯ ನಡೆಗಳನ್ನು ಮತ್ತು ಅದರ ಪರಿಣಾಮಗಳನ್ನು ಬಹಳ ಬೇಗ ಗ್ರಹಿಸುವವರು. ಈಗ ಕಾಂಗ್ರೆಸ್ ಹೈಕಮಾಂಡ್ ನಡೆಗಳು ಮತ್ತು ಸಿದ್ದರಾಮಯ್ಯ ತುಳಿಯುತ್ತಿರುವ ಹೆಜ್ಜೆ ಗಳನ್ನು ನೋಡಿ ಅವರಿಗೆ ಅಹಿಂದ ಮತಗಳು ಧ್ರುವೀಕರಣವಾಗುತ್ತವೆ ಎನಿಸಿರಬಹುದು. ಅಹಿಂದ ಮತಗಳು ಧ್ರುವೀಕರಣವಾದರೆ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಜೆಡಿಎಸ್ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಅಂದಾಜು ಸಿಕ್ಕಿರಬಹುದು. ಬಿಜೆಪಿ ದಲಿತ ಮತ್ತು ಹಿಂದುಳಿದವರ ಅಲ್ಪಸ್ವಲ್ಪ ಮತಗಳನ್ನಾದರೂ ಪಡೆಯಬಹುದು. ಜೆಡಿಎಸ್ ಒಕ್ಕಲಿಗ ಮತಗಳನ್ನು ಮಾತ್ರ ನಂಬಿ ಕೂರಬೇಕಾಗಬಹುದು. ಅಹಿಂದ ಸಮಾವೇಶ ನಡೆಯುತ್ತಿರುವುದು ಜೆಡಿಎಸ್ ಪ್ರಾಬಲ್ಯ ಇರುವ ಮೈಸೂರಿನಲ್ಲಿ. ಇಲ್ಲಿ ಅಹಿಂದ ಮತಗಳು ಕಾಂಗ್ರೆಸ್ ಕಡೆಗೆ ಹೋದರೆ ಸಮಸ್ಯೆಯಾಗುವುದು ಹಳೆ ಮೈಸೂರು ಭಾಗವನ್ನೇ ನೆಚ್ಚಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ. ಈ ಆತಂಕದಿಂದ ದೇವೇಗೌಡರು ಅಹಿಂದ ಎನ್ನಲು ತಡವರಿಸುತ್ತಿರಬಹುದು. ಅಹಿಂದ ಎನ್ನುವ ಪದಪ್ರಯೋಗವನ್ನು ಮತ್ತು ಪರಿಕಲ್ಪನೆಯನ್ನು ಅವಹೇಳನ ಮಾಡುವಂತೆ ಪ್ರೇರೇಪಿಸಿರಬಹುದು.

ಅಹಿಂದ ಬಗ್ಗೆ ದೇವೇಗೌಡ ಇದ್ದದ್ದೇ ಹೀಗೆ?

ಅಹಿಂದ ವರ್ಗದ ಬಗ್ಗೆ ಅವರ ದೃಷ್ಟಿಕೋನ ಏನು ಎನ್ನುವುದನ್ನು ಒರೆಗೆ ಹಚ್ಚಲು ಸ್ವತಃ ದೇವೇಗೌಡರು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ವಿಷಯ ತೆಗೆದುಕೊಂಡರೆ ರಾಜಕೀಯವಾಗಿ ಅನಿವಾರ್ಯ ಇದ್ದಾಗ ‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ’ ಎಂದು ‘ಮುತ್ಸದ್ದಿ’ತನ ತೋರಿದರು. ನಂತರ ಪುತ್ರ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿದಾಗ ಜಾಣಮೌನಿಯಾದರು. ಕಡೆಗೆ ತಾವೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಈಗ ಬಿಜೆಪಿಯವರನ್ನು ಮೀರಿಸುವಂತೆ ಮೋದಿ ಮಂತ್ರ ಪಠಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಮತ ಹಾಕದಿದ್ದರೆ ಚನ್ನಪಟ್ಟಣ ಮತ್ತು ಹಾಸನದಲ್ಲಿ ಜೆಡಿಎಸ್ ಗೆಲ್ಲುತ್ತಿರಲಿಲ್ಲ. ಕುಮಾರಸ್ವಾಮಿ ಒಂದೊಮ್ಮೆ ಸೋತಿದ್ದರೆ ರಾಜಕೀಯ ವಾಗಿ ಬಹಳ ಹಿನ್ನಡೆಯಾಗುತ್ತಿತ್ತು. ಆದರೂ ನಿಖಿಲ್ ಕುಮಾರಸ್ವಾಮಿಗೆ ರಾಮನಗರದ ಮುಸ್ಲಿಮರು ಮತಹಾಕಲಿಲ್ಲ ಎನ್ನುವ ಕಾರಣಕ್ಕೆ ಅಭಿನಂದನೆ ಹೇಳಲು ಬಂದಿದ್ದ ಚನ್ನಪಟ್ಟಣದ ಮುಸ್ಲಿಮರಿಗೆ ಗದರಿಸಿ ಕಳುಹಿಸಿದ್ದರಂತೆ ಕುಮಾರಸ್ವಾಮಿ. ಆಗ ದೇವೇಗೌಡರು ತಮ್ಮ ಸುಪುತ್ರನಿಗೆ ಬುದ್ಧಿ ಹೇಳಿರಲಿಲ್ಲ.

ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ಯಾರು?

ದೇವೇಗೌಡರು ಆಗಾಗ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ತಾನು ಎಂದು ಹೇಳುತ್ತಾರೆ. ಆದರೆ ವೀರಪ್ಪ ಮೊಯ್ಲಿ 1994ರ ಎಪ್ರಿಲ್ ತಿಂಗಳಲ್ಲಿ ಮೀಸಲಾತಿ ಪ್ರಮಾಣವನ್ನು ಶೇ. 73ಕ್ಕೆ ಏರಿಸಿದಾಗಲೇ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದರು. ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿ ಶೇ. 50ರ ಮಿತಿ ಮೀರಬಾರದು ಎಂಬ ತೀರ್ಮಾನ ಬಂದಿತ್ತು. ಶೇ. 50ರ ಮಿತಿಗೆ ಅನುಸಾರವಾಗಿ 1994ರ ಸೆಪ್ಟಂಬರ್ ತಿಂಗಳಲ್ಲಿ ಮೀಸಲಾತಿಯ ಮರುವರ್ಗೀ ಕರಣ ಮಾಡಿ ಮುಸ್ಲಿಮರಿಗೆ ಮೀಸಲಾತಿ ನಿಗದಿ ಮಾಡಲಾಯಿತು. ಇರಲಿ, ಅವರೇ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದರೆ, ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಮುಸ್ಲಿಮ್ ಮೀಸಲಾತಿಯನ್ನು ತೆಗೆಯಲು ಹೊರಟಿದ್ದ ಬಿಜೆಪಿ ಜೊತೆ ಕೈಜೋಡಿಸಿದ್ದೇಕೆ?

ಖರ್ಗೆಗೆ ಅನ್ಯಾಯ

ದಲಿತರ ವಿಷಯಕ್ಕೆ ಬರುವುದಾದರೆ, 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಮುಖ್ಯಮಂತ್ರಿ ಆಗಬೇಕಿದ್ದವರು ಎಲ್ಲಾ ರೀತಿಯಲ್ಲೂ ಅರ್ಹವಾಗಿದ್ದ ಮಲ್ಲಿಕಾರ್ಜುನ ಖರ್ಗೆ. ಅವರನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ಸುತಾರಾಂ ಒಪ್ಪಲಿಲ್ಲ. ದಲಿತ ನಾಯಕ ಎನ್ನುವ ಕಾರಣಕ್ಕಾಗಿಯೇ ಒಪ್ಪಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಒಬ್ಬನೇ ಒಬ್ಬ ದಲಿತ ನಾಯಕನನ್ನು ಬೆಳೆಸಲಿಲ್ಲ. ಶ್ರೀನಿವಾಸ್ ಪ್ರಸಾದ್ ಅವರಂಥ ನಾಯಕರಿಗೇ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದರು. ದೇವೇಗೌಡರ ಕಾರಣಕ್ಕೆ ಜನತಾದಳ ಮತ್ತು ಜೆಡಿಎಸ್ ತೊರೆದ ಹಲವು ದಲಿತ ನಾಯಕರಿದ್ದಾರೆ. ಡಿ. ಮಂಜುನಾಥ್ ಮತ್ತು ಎಚ್.ಕೆ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತಾದರೂ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು.

ಅವಕಾಶ ಕಳೆದುಕೊಂಡ ಹಿಂದುಳಿದವರು

ಹಿಂದುಳಿದವರ ವಿಷಯವನ್ನು ನೋಡುವು ದಾದರೆ? ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳೆರಡೂ ಹಿಂದುಳಿದ ಜಾತಿಗಳ ಪಟ್ಟಿಗೆ ಒಕ್ಕಲಿಗ ಸಮುದಾಯವನ್ನು ಸೇರಿಸಿರಲಿಲ್ಲ. ಆದರೆ ಎರಡೂ ಆಯೋಗಗಳ ವರದಿ ಬಂದಾಗ ಸಮುದಾಯದ ಸ್ವಾಮೀಜಿಯನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದು ಹಾಗೂ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿಗೆ ವಿರುದ್ಧವಾಗಿ ಒಕ್ಕಲಿಗ ಜಾತಿಯನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸುವಂತೆ ಮಾಡಿದ್ದು ದೇವೇಗೌಡ. ಒಕ್ಕಲಿಗ ಸಮುದಾಯ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿದ ಪರಿಣಾಮ ನೂರಾರು ಹಿಂದುಳಿದ ಜಾತಿಗಳು ದಶಕಗಳಿಂದ ಹಲವು ಅವಕಾಶ ಗಳನ್ನು ಕಳೆದುಕೊಳ್ಳುವಂತಾಗಿದೆ. ಇದು ಹಿಂದುಳಿದವರಿಗೆ ದೇವೇಗೌಡರು ಮಾಡಿದ ಅನ್ಯಾಯವಲ್ಲದೆ ಮತ್ತೇನಲ್ಲ..

ಮುಂದೊಂದು ದಿನ ದೊಡ್ಡ ನಾಯಕನಾಗಿ ಬೆಳೆಯಬಹುದೆಂದು ಸಿದ್ದರಾಮಯ್ಯರಿಗೆ ಅಹಿಂದ ಸಮಾವೇಶ ಮಾಡದಂತೆ ಸೂಚನೆ ನೀಡಿದರು. ದೇವೇಗೌಡರು ಮಾತನ್ನು ಸಿದ್ದರಾಮಯ್ಯ

ಕೇಳಲಿಲ್ಲ. ಕೇಳಿದ್ದರೆ ಬಹುಶಃ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಸಿದ್ದರಾಮಯ್ಯ ತನ್ನ ಮಾತು ಕೇಳದೆ 2005ರ ಜುಲೈ 24ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಅಹಿಂದ ಸಮಾವೇಶ ಮಾಡಿದರು ಮತ್ತು ಯಶಸ್ವಿಯಾದರು ಎನ್ನುವ ಕಾರಣಕ್ಕಾಗಿಯೇ ಅವರನ್ನು ಜೆಡಿಎಸ್ ಪಕ್ಷದಿಂದ ಹೊರಹಾಕಲಾಯಿತು.

ನಂತರ ಮರಾಠಾ ಸಮುದಾಯದ ಪಿ.ಜಿ.ಆರ್. ಸಿಂಧ್ಯಾ, ಗೊಲ್ಲ ಸಮುದಾಯದ ಮಾಜಿ ಸಚಿವ ಎ. ಕೃಷ್ಣಪ್ಪ, ಕುರುಬ ಸಮುದಾಯದ ಎಚ್ ವಿಶ್ವನಾಥ್ ಮತ್ತಿತರರು ಜೆಡಿಎಸ್ ಬಿಟ್ಟಿದ್ದಲ್ಲ, ಬಿಡುವಂತೆ ಮಾಡಿದ್ದು. ಇದಕ್ಕೂ ಹಿಂದೆ ಡಿ. ದೇವರಾಜ ಅರಸು ಅವರಿಗೂ ದೇವೇಗೌಡರು ಕಾಡಿದ್ದರು. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಹಾಸನಕ್ಕೆ ಭೇಟಿಕೊಟ್ಟಾಗ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿದ್ದರಂತೆ. ಅದು ಗುಂಡೂರಾವ್ ಮೇಲಿನ ಪ್ರೀತಿಯಿಂದಲ್ಲ, ದೇವರಾಜ ಅರಸು ಮೇಲಿನ ದ್ವೇಷದಿಂದ ಎನ್ನುತ್ತಾರೆ ಆಗಿನ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದ ಹಿರಿಯ ನಾಯಕರು. ಈಗ ಸಿದ್ದರಾಮಯ್ಯ ಅವರನ್ನು ಟೀಕಿಸಲು ಹೋಗಿ ಅಹಿಂದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಅಹಿಂದ ಪ್ರಶ್ನಾತೀತವಲ್ಲ!

ಅಹಿಂದ ಖಂಡಿತಾ ಪ್ರಶ್ನಾತೀತವಲ್ಲ. ಯಾರು, ಏನೇ ಹೇಳಿದರೂ ಈಗ ನಡೆಸಲುದ್ದೇಶಿಸಿರುವ ಅಹಿಂದ ಸಮಾವೇಶದ ಏಕೈಕ ಅಜೆಂಡಾ ಸಿದ್ದರಾಮಯ್ಯ ಅವರ ಕುರ್ಚಿ ಕಾಲುಗಳಿಗೆ ಶಕ್ತಿ ನೀಡುವುದು. ಹುಬ್ಬಳ್ಳಿಯ ಸಮಾವೇಶಕ್ಕೆ 20 ವರ್ಷ. ಅದಕ್ಕಾಗಿ ಮಾಡುತ್ತಿದ್ದೇವೆ ಎನ್ನುವುದು ನೆಪ ಮಾತ್ರ. ಅದಕ್ಕೂ ಹಿಂದೆಯೇ ಹುಟ್ಟಿದ್ದ ಅಹಿಂದದ ಅಸಲಿ ಉದ್ದೇಶ ಇದಲ್ಲ. ಬೆಳೆಯ

ಬೇಕಾದ ರೀತಿಯೂ ಇದಲ್ಲ. ಯಾವುದೋ ಒಬ್ಬ ನಾಯಕನ ತುತ್ತೂರಿಯಾಗಬೇಕಾಗಿಲ್ಲ. ಬಹಳ ಮುಖ್ಯವಾಗಿ ಅಹಿಂದದ ವ್ಯಾಪ್ತಿ ರಾಜಕಾರಣ ಮಾತ್ರವಲ್ಲ. ಅದು ಸಂವಿಧಾನದ ಇತರ

ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ಸಮಾಜದ ಮೇಲೆ ಪ್ರಭಾವ ಬೀರಬಲ್ಲ ಧರ್ಮ, ಶಿಕ್ಷಣ, ಉದ್ಯಮ ಮತ್ತಿತರ ಕ್ಷೇತ್ರಗಳಲ್ಲೂ ಇರಬೇಕು. ಆಗ ಮಾತ್ರ ರಾಜಕಾರಣದ ಅಹಿಂದಕ್ಕೆ ಅಸ್ತಿತ್ವ. ಇದರ ಬಗ್ಗೆ ಅರಿವು ಮೂಡಿಸುವ ಒಂದೇ ಒಂದು ಕಾರ್ಯಯೋಜನೆ ಹಾಕಿಕೊಳ್ಳದೆ ನಡೆಸುವ ಅಹಿಂದ ಸಮಾವೇಶ ನಿರರ್ಥಕ.

ಅಲ್ಪಸಂಖ್ಯಾತರು, ದಲಿತರು ಎಲ್ಲಿ?

ಸದ್ಯ ಮೈಸೂರಿನಲ್ಲಿ ನಡೆಸಲುದ್ದೇಶಿಸಿರುವ ಅಹಿಂದ ಸಮಾವೇಶದ ಮುಂಚೂಣಿಯಲ್ಲಿ ಇರುವವರು ಹಿಂದುಳಿದ ವರ್ಗದ ಶಿವರಾಂ. ಈವರೆಗೆ ನಡೆದ ಪೂರ್ವಭಾವಿ ಸಭೆಗಳಲ್ಲಾಗಲಿ ಅಥವಾ ಗುಂಪು ಚರ್ಚೆಗಳಲ್ಲಾಗಲಿ ಅಲ್ಪಸಂಖ್ಯಾತ ಮತ್ತು ದಲಿತ ನಾಯಕರು ಕಂಡಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಝಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್ ಮತ್ತಿತರರ ಜೊತೆ ಸಮಾಲೋಚನೆ ನಡೆಸಬೇಕಿತ್ತು. ಅವರ ಸಲಹೆಯನ್ನು ಪಡೆಯಬೇಕಿತ್ತು. ಅದರ

ಸುಳಿವಿಲ್ಲ.

ಅಹಿಂದ ನಾಯಕನಾಗುವತ್ತ ಸತೀಶ್!

ಡಾ. ಯತೀಂದ್ರ ಸಿದ್ದರಾಮಯ್ಯ ಯಾವ ಕಾರಣಕ್ಕಾಗಿ ‘ಸತೀಶ್ ಜಾರಕಿಹೊಳಿ ಭವಿಷ್ಯದ ಅಹಿಂದ ನಾಯಕ, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ’ ಎಂದು ಹೇಳಿದರೋ? ಆದರೆ ಸತೀಶ್ ಜಾರಕಿಹೊಳಿ ಈ ಬಗ್ಗೆ ಗಂಭೀರ ಚಿಂತನೆ ಮತ್ತು ತಯಾರಿ ನಡೆಸುತ್ತಿದ್ದಾರೆ. ಅಹಿಂದ ವರ್ಗದ ಪೈಕಿ ಸಣ್ಣಪುಟ್ಟ ಸಮುದಾಯಗಳ ಸಂಘಟನೆಗಳ ಜೊತೆ ಸಮಾಲೋಚನೆ ಶುರು ಮಾಡಿದ್ದಾರೆ. ಈಗಾಗಲೇ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಂಘಟನೆಯ ಕೆಲಸ ಮಾಡುತ್ತಿದ್ದರು. ಈಗ ಅಹಿಂದ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಇರುವವರೆಗೆ ತೆರೆಮರೆಯಲ್ಲಿ ತಯಾರಿ, ನಂತರ ಬಹಿರಂಗಪ್ರವೇಶ’ ಎನ್ನುತ್ತವೆ ಮಾಹಿತಿಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News