×
Ad

ರಾಹುಲ್‌ಗೆ ಆಪ್ತರಾದರೇ ಪ್ರಿಯಾಂಕ್ ಖರ್ಗೆ?

Update: 2025-12-02 09:43 IST

ಇತ್ತೀಚೆಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಹೇಳಿದ್ದರು. ಇದಾದ ಮೇಲೆ ಮುಂದಿನ ಅಹಿಂದ ನಾಯಕ ಯಾರು? ಮುಂದಿನ ನಾಯಕತ್ವ ಯಾರದು? ಎಂಬಿತ್ಯಾದಿ ಚರ್ಚೆಗಳು ನಡೆದವು. ಈಗ, ಬಹುಶಃ ರಾಜ್ಯದ ನಾಯಕರೆಲ್ಲರೂ ಈ ವಿಷಯವನ್ನು ಮರೆತಿದ್ದಾರೆ. ಆದರೆ ಹೈಕಮಾಂಡ್ ಮರೆತಿಲ್ಲ ಎನ್ನುತ್ತವೆ ಮೂಲಗಳು.

ಮುಂದಿನ ಅಹಿಂದ ನಾಯಕತ್ವದ ವಿಷಯ ಚರ್ಚೆಯಾಗುವ ಹೊತ್ತಿನಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಚರ್ಚೆ ಕೂಡ ನಡೆದಿತ್ತು. ಈ ಚರ್ಚೆಯನ್ನು ಹುಟ್ಟುಹಾಕಿದ್ದವರು ಪ್ರಿಯಾಂಕ್ ಖರ್ಗೆ. ಅಷ್ಟೇಯಲ್ಲ, ಸ್ವಪಕ್ಷೀಯರಿಂದ ಹೇಳಿಕೊಳ್ಳುವಂಥ ಬೆಂಬಲ ಸಿಗದಿದ್ದರೂ ಆರೆಸ್ಸೆಸ್ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರಿಸಿದವರು ಕೂಡ ಪ್ರಿಯಾಂಕ್ ಖರ್ಗೆ.

ಈ ವಿಷಯ ಕಡೆಗೆ ಆರೆಸ್ಸೆಸ್ v/s ದಲಿತ ಎನ್ನುವ ರೀತಿಯಲ್ಲಿ ಬದಲಾಗತೊಡಗಿತು. ಆಗ ಎಚ್ಚೆತ್ತುಕೊಂಡ ಸಂಘ ಪರಿವಾರ ‘ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು, ಇದರ ಬಗ್ಗೆ ಹೆಚ್ಚೆಚ್ಚು ಚರ್ಚೆಯಾದಷ್ಟು ನಮಗೇ ನಷ್ಟ’ ಎಂದು ತನ್ನ ಹಾಗೂ ಬಿಜೆಪಿ ನಾಯಕರಿಗೆ ನಿರ್ದೇಶನ ಕೂಡ ನೀಡಿತ್ತು. ಆದರೂ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಹುಟ್ಟು, ನೋಂದಣಿ ಮತ್ತು ಹಣದ ವ್ಯವಹಾರಗಳ ಬಗ್ಗೆ ಎತ್ತುತ್ತಿದ್ದ ಪ್ರಶ್ನೆಗಳು ಪ್ರಖರವೂ ನಿಖರವೂ ಆಗಿದ್ದುದರಿಂದ ನಿರಾಕರಿಸಲು ಸಾಧ್ಯವಾಗಲಿಲ್ಲ. ಕಡೆಗೆ ಮೋಹನ್ ಭಾಗವತ್ ಅವರೇ ‘‘ಹಿಂದೂ ಧರ್ಮವೇ ನೋಂದಣಿಯಾಗಿಲ್ಲ, ಆದುದರಿಂದ ಆರೆಸ್ಸೆಸ್ ಕೂಡ ನೋಂದಾಯಿಸಿಕೊಳ್ಳುವ ಅಗತ್ಯ ಇಲ್ಲ, ಹಾಗೆಯೇ ಸ್ವಯಂ ಸೇವಕರಿಂದ ದೇಣಿಗೆ ಸಂಗ್ರಹಿಸುವ ಆರೆಸ್ಸೆಸ್ ಯಾರಿಗೂ ಲೆಕ್ಕ ಕೊಡುವ ಅಗತ್ಯ ಇಲ್ಲ’’ ಎಂದು ಪ್ರತಿಕ್ರಿಯಿಸಿದ್ದರು.

ಮೋಹನ್ ಭಾಗವತ್ ಏನೇ ಹೇಳಲಿ, ಸಂಘದ ಕಾಲಾಳುಗಳಿಗೆ ಕೇಳಿದ ಪ್ರಶ್ನೆಗಳಿಗೆ ಆರೆಸ್ಸೆಸ್ ಮುಖ್ಯಸ್ಥರೇ ಬಂದು ಉತ್ತರ ಕೊಡುವಂತೆ ಮಾಡಿದ ಯಶಸ್ಸು ಪ್ರಿಯಾಂಕ್ ಖರ್ಗೆ ಅವರದು. ಇದು ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದಿದೆ. ಇದಲ್ಲದೆ ರಾಹುಲ್ ಗಾಂಧಿ ಅವರ ಕಚೇರಿಯಿಂದ ಬಿಜೆಪಿಯ ಮತಗಳ್ಳತನದ ವಿರುದ್ಧ ಮಾಡಿರುವ ಟ್ವೀಟ್‌ಗಳ ಅಧ್ಯಯನವಾಗಿದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಮತ್ತು ಹರಿತವಾದ ಟ್ವೀಟ್‌ಗಳನ್ನು ಮಾಡಿರುವುದು ಕೂಡ ಪ್ರಿಯಾಂಕ್ ಖರ್ಗೆ ಎಂದು ಗೊತ್ತಾಗಿದೆ. ಇದು ಪ್ರಿಯಾಂಕ್ ಖರ್ಗೆ ಅವರನ್ನು ರಾಹುಲ್ ಗಾಂಧಿ ಮೆಚ್ಚಿಕೊಳ್ಳಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಬಿಹಾರ ಚುನಾವಣೆ ಬಳಿಕ ರಾಹುಲ್ ಗಾಂಧಿ ಬಿಜೆಪಿಯ ಮತಗಳ್ಳತನದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸಬೇಕಾಗಿದೆ. ಜೊತೆಜೊತೆಗೆ ಕರ್ನಾಟಕದ ನಾಯಕತ್ವ ಬದಲಾವಣೆ ಕುರಿತಾದ ಸಮಸ್ಯೆಯನ್ನೂ ಬಗೆಹರಿಸಬೇಕಾಗಿದೆ. ಏಕಕಾಲಕ್ಕೆ ಎರಡರ ಬಗ್ಗೆಯೂ ಚರ್ಚೆ ಮಾಡಲೆಂದು ಒಂದಲ್ಲ, ಎರಡು ಬಾರಿ ಪ್ರಿಯಾಂಕ್ ಖರ್ಗೆಗೆ ರಾಹುಲ್ ಗಾಂಧಿ ಕಚೇರಿಯಿಂದ ಕರೆ ಬಂದಿದೆ. ಎಐಸಿಸಿಯಲ್ಲಿ ಕರ್ನಾಟಕ ಕಾಂಗ್ರೆಸ್ ಬಗ್ಗೆ, ಕರ್ನಾಟಕದ ಸಾಮಾಜಿಕ ಸಂರಚನೆ ಬಗ್ಗೆ, ಕರ್ನಾಟಕದ ಸ್ಥಳೀಯ ನಾಯಕತ್ವದ ಬಗ್ಗೆ ಬಹಳ ಚೆನ್ನಾಗಿ ಬಲ್ಲ ಕೆಲ ನಾಯಕರಿದ್ದಾರೆ. ಹಾಗೆಯೇ ಕರ್ನಾಟಕದಲ್ಲೂ ಹಲವರು ಹಿರಿಯರಿದ್ದಾರೆ. ಯಾರ ಪಕ್ಷಪಾತಿಯೂ ಅಲ್ಲದ ಕಾಂಗ್ರೆಸ್ ಹಿತವೇ ಮುಖ್ಯ ಎನ್ನುವ ನಾಯಕರಿದ್ದಾರೆ. ಅವರೆಲ್ಲರನ್ನೂ ಬಿಟ್ಟು ರಾಹುಲ್ ಗಾಂಧಿ ಕರ್ನಾಟಕದ ಕುರಿತು ಚರ್ಚೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕರೆಸಿಕೊಂಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರಾಹುಲ್ ಗಾಂಧಿ ಅವರಿಗೆ ಆಪ್ತರಾದರೇ ಪ್ರಿಯಾಂಕ್ ಖರ್ಗೆ? ಪ್ರಿಯಾಂಕ್ ಖರ್ಗೆ ಅವರಲ್ಲಿ ಕರ್ನಾಟಕದ ಭವಿಷ್ಯದ ನಾಯಕನನ್ನು, ಅಹಿಂದ ನಾಯಕನನ್ನು ಕಂಡರೇ ರಾಹುಲ್ ಗಾಂಧಿ? ಮಲ್ಲಿಕಾರ್ಜುನ ಖರ್ಗೆ ಅವರೇ ಇದ್ದರೂ ಪ್ರಿಯಾಂಕ್ ಖರ್ಗೆ ಅವರಿಂದ ಮಾಹಿತಿ ಮತ್ತು ಅಭಿಪ್ರಾಯ ಕೇಳಿದ್ದೇಕೆ? ಎಂಬ ಪ್ರಶ್ನೆಗಳು ರಾಜ್ಯ ಕಾಂಗ್ರೆಸ್ ನಾಯಕರ ತಲೆಯನ್ನು ಕೊರೆಯತೊಡಗಿವೆ.

ಸಚಿವ ಕೃಷ್ಟಭೈರೇಗೌಡ ಅವರನ್ನು ರಾಹುಲ್ ಗಾಂಧಿ ಆಪ್ತ ಎನ್ನಲಾಗುತ್ತಿತ್ತು. ಸಚಿವ ದಿನೇಶ್ ಗುಂಡೂರಾವ್ ಕೂಡ ತಕ್ಕಮಟ್ಟಿಗೆ ಹೈಕಮಾಂಡ್ ನಾಯಕರಿಗೆ ಹತ್ತಿರ ಇದ್ದಾರೆ. ಇವರಿಬ್ಬರೂ ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ, ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೂ ಪ್ರಿಯಾಂಕ್ ಖರ್ಗೆ ಅವರನ್ನು ಕರೆಸಿ ಚರ್ಚೆ ಮಾಡಿರುವುದು ವಿಶೇಷ ಕುತೂಹಲವನ್ನು ಹುಟ್ಟುಹಾಕಿದೆ.

ಸುರ್ಜೆವಾಲಾ ನಾಪತ್ತೆ!

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕರ್ನಾಟಕ ಕಾಂಗ್ರೆಸ್ ಪಾಳೆಯದಲ್ಲಿ ಸಣ್ಣ ಕಂಪನವಾದರೂ ಸರ‌್ರನೆ ಓಡೋಡಿ ಬರುತ್ತಿದ್ದರು. ಇಲ್ಲಿ ಸಮಸ್ಯೆ ಆಗುವುದನ್ನೇ ಕಾಯುತ್ತಿದ್ದರೇನೋ ಎನ್ನುವ ಹಾಗೆ ಹಾಜರಾಗುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಬೆಂಗಳೂರಿನತ್ತ ತಲೆ ಹಾಕಲಿಲ್ಲ. ಇವರು ಕರ್ನಾಟಕಕ್ಕೇ ಬರುವುದಿಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಶಾಸಕರೇ ದಿಲ್ಲಿಗೆ ಹೋಗಿ ಭೇಟಿ ಮಾಡಲು ಪ್ರಯತ್ನಿಸಿದರು. ಆಗಲೂ ಮುಖ ತೋರಲಿಲ್ಲ.

ಸುರ್ಜೆವಾಲಾ ಬಗ್ಗೆ ಈಗಾಗಲೇ ಹೈಕಮಾಂಡಿಗೆ ದೂರು ಹೋಗಿವೆ. ಇಷ್ಟೊತ್ತಿಗೆ ‘ಸುರ್ಜೆವಾಲಾ ಸಾಕು, ಹೊಸ ಉಸ್ತುವಾರಿ ಬೇಕು’ ಎನ್ನುವ ಅಭಿಯಾನ ಶುರುವಾಗಿರುತ್ತಿತ್ತು. ಆದರೆ ಕೆ.ಎನ್. ರಾಜಣ್ಣ ವಜಾ ಪ್ರಕರಣದಿಂದಾಗಿ ಯಾರೂ ಉಸ್ತುವಾರಿ ಬಗ್ಗೆ ಮಾತನಾಡುತ್ತಿಲ್ಲ, ಸುರ್ಜೆವಾಲಾ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಯಾವಾಗ ಬೇಕಾದರೂ ಅವರ ಎತ್ತಂಗಡಿಯಾಗುವ ಸಾಧ್ಯತೆಗಳಿವೆ ಎಂಬ ವರ್ತಮಾನ ದಿಲ್ಲಿಯಲ್ಲಿದೆ.

ಅಂತರ ಕಾಯ್ದುಕೊಂಡಿದ್ದಾರಾ ರಾಹುಲ್?

ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆ ರಾಹುಲ್ ಗಾಂಧಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಇದಲ್ಲದೆ ರಾಹುಲ್ ಗಾಂಧಿ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಮತ್ತು ಶರತ್ ಬಚ್ಚೇಗೌಡ ಜೊತೆ ಚರ್ಚಿಸಿದ್ದಾರೆ. ಶಾಸ್ತ್ರಕ್ಕೂ ಕೂಡ ಉಸ್ತುವಾರಿ ಸುರ್ಜೆವಾಲಾ ಅವರ ಅಭಿಪ್ರಾಯ ಕೇಳಿಲ್ಲವಂತೆ.

ಆಫ್ ದಿ ರೆಕಾರ್ಡ್!

ಇಷ್ಟು ದಿನ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಸಿದ್ದರಾಮಯ್ಯ ವೈಯಕ್ತಿಕವಾಗಿ ಮೊಬೈಲ್ ಬಳಸದೇ ಇರುವುದರಿಂದ ಗೋವಿಂದರಾಜ್ ಮೂಲಕ ಹೈಕಮಾಂಡ್ ಸಂದೇಶಗಳು ಬರುತ್ತಿದ್ದವು. ಇದು ಒಂದು ರೀತಿಯಲ್ಲಿ ಗೋವಿಂದರಾಜ್ ಅವರಿಗೆ ವರವಾಗಿತ್ತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಗೋವಿಂದರಾಜ್‌ಗೆ ಗೇಟ್ ಪಾಸ್ ನೀಡಿದ ಬಳಿಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಈಗ ಸಿದ್ದರಾಮಯ್ಯ ಪರವಾಗಿ ಹೈಕಮಾಂಡ್ ಜೊತೆ ವ್ಯವಹರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಾಳೆಯದಲ್ಲಿ ಕೆಲವರಿಗೆ ಆಶ್ಚರ್ಯವನ್ನು ಕೆಲವರಿಗೆ ಅಸೂಯೆಯನ್ನೂ ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News