ಪವರ್ ಶೇರಿಂಗ್ ಆಗಿಲ್ಲ ಎನ್ನುವ ಡಿಕೆಶಿ ನಡೆ!
ಮೊದಲಿಂದಲೂ ಹೈಕಮಾಂಡ್ ಅನ್ನು ಒಲಿಸಿಕೊಂಡೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ಡಿ.ಕೆ. ಶಿವಕುಮಾರ್ ನಿಲುವಾಗಿತ್ತು. ಅದಕ್ಕೆ ಸಿದ್ದರಾಮಯ್ಯ ಜೊತೆ ಸೆಣಸಿ ಸಿಎಂ ಪಟ್ಟ ದಕ್ಕಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ವಾಸ್ತವ ಕೂಡ ಕಾರಣವಾಗಿತ್ತು. ಅವು ಅವರ ಮಾತಿನಲ್ಲೂ ವ್ಯಕ್ತವಾಗುತ್ತಿದ್ದವು. ಜೊತೆಜೊತೆಗೆ ‘ಅಗತ್ಯ ತಯಾರಿ’ಗಳೂ ನಡೆಯುತ್ತಿದ್ದವು. ನವೆಂಬರ್ ಹತ್ತಿರ ಆಗುತ್ತಿದ್ದಂತೆ ಪ್ರಯತ್ನಗಳು ತೀವ್ರವಾಗತೊಡಗಿದವು. ಆದರೆ ಹೈಕಮಾಂಡ್ ಪೂರಕವಾಗಿ ಸ್ಪಂದಿಸಲಿಲ್ಲ. ರಾಹುಲ್ ಗಾಂಧಿ ಅವರನ್ನು ಬಿಡಿ, ಕೆ.ಸಿ. ವೇಣುಗೋಪಾಲ್ ಭೇಟಿ ಕೂಡ ಸಾಧ್ಯವಾಗಲಿಲ್ಲ. ವಾರಗಟ್ಟಲೆ ವಿನಂತಿಸಿಕೊಂಡರೂ ಪ್ರಯೋಜನವಾಗಲಿಲ್ಲ.
ಇನ್ನೊಂದೆಡೆ ಸಿದ್ದರಾಮಯ್ಯ ದಿಲ್ಲಿ ವಿಮಾನ ಇಳಿಯುತ್ತಿದ್ದಂತೆ ನೇರವಾಗಿ 10 ಜನಪತ್ (ಸೋನಿಯಾ ಗಾಂಧಿ ನಿವಾಸ)ಗೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಅದಾದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿದರು. ಇದರಿಂದ ಡಿ.ಕೆ. ಶಿವಕುಮಾರ್ ವಿಚಲಿತರಾದರು. ವಿಚಲಿತರಾಗಿದ್ದು ಮಾತ್ರವಲ್ಲ, ವರಸೆ ಬದಲಿಸುವುದಕ್ಕೂ ನಿರ್ಧರಿಸಿದರು ಎನ್ನುತ್ತವೆ ಅವರ ಆಪ್ತ ಮೂಲಗಳು.
ಡಿ.ಕೆ. ಶಿವಕುಮಾರ್ ಭೇಟಿಗೆ ಸಿಕ್ಕ ಏಕೈಕ ನಾಯಕ ಮಲ್ಲಿಕಾರ್ಜುನ ಖರ್ಗೆ.
ಡಿ.ಕೆ. ಶಿವಕುಮಾರ್ ವರಸೆ ಬದಲಿಸಿದ್ದು ಕೂಡ ಖರ್ಗೆ ಭೇಟಿ ನಂತರ, ಖರ್ಗೆ ಹೇಳಿದ ‘ಅವರ ಬಳಿ ಸಂಖ್ಯೆಗಳಿವೆ, ನಿಮ್ಮ ಬಳಿ ಏನಿದೆ?’ ಎಂಬ ಮಾತಿನ ನಂತರವಂತೆ. ಇನ್ನಷ್ಟು ಪುರಾವೆಗಳು ಬೇಕೆಂದರೆ ಖರ್ಗೆ ಭೇಟಿ ಮಾಡಿ ಬಂದ ಕೆಲ ಹೊತ್ತಿನಲ್ಲೇ ಡಿ.ಕೆ. ಸುರೇಶ್ ಆಡಿದ ಮಾತುಗಳನ್ನು ಗಮನಿಸಬೇಕು. ಅವರು ಹೇಳಿದ್ದು ‘ಸಿದ್ದರಾಮಯ್ಯ ಆಟ ಶುರು ಮಾಡಿದ್ದಾರೆ, ನಾವು ಅದನ್ನು ಮುಗಿಸುತ್ತೇವೆ’ ಎಂದು.
ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದವರೇ ‘ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆಯುತ್ತಾರೆ’ ಎಂಬ ಹೊಸ ದಾಳ ಉರುಳಿಸಿದರು. ಆ ಮೂಲಕ ‘ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೆ’ ಎಂದು ನಂಬಿಸುವ ಪ್ರಯತ್ನ ಮಾಡಿದರು. ಇವೆಲ್ಲಾ ಆದಮೇಲೆಯೇ ಇಷ್ಟು ದಿನ ಮಾತೆತ್ತಿದರೆ ‘ಹೈಕಮಾಂಡ್ ನೋಡಿ.ಕೆ.ೂಳ್ಳುತ್ತೆ’ ಎಂಬ ಮೈಂಡ್ ಗೇಮ್ ಆಡುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ಅದೇ ಹೈಕಮಾಂಡಿಗೆ ತನ್ನ ತಾಕತ್ತು ತೋರಿಸಿ ಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಳ್ಳುವ ನಂಬರ್ ಗೇಮ್ ಆಡಲು ಶುರು ಮಾಡಿದ್ದು.
ಹೈಕಮಾಂಡ್ ಸಮ್ಮುಖದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದವಾಗಿರುವುದು ನಿಜವೇ ಆಗಿದ್ದರೆ, ರಾಹುಲ್ ಗಾಂಧಿ ಅವರಿಗೆ ಮಾತು ಕೊಟ್ಟಿದ್ದರೆ ಸಿದ್ದರಾಮಯ್ಯ ಈಗ ಕುರ್ಚಿ ಬಿಡುವುದಿಲ್ಲ ಎಂದು ಹೇಳಲು ಸಾಧ್ಯವೆ? ದಿಲ್ಲಿಯಲ್ಲಿ ಕುಳಿತು ಇಂಗ್ಲಿಷ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ‘ನಾನೇ ಐದು ವರ್ಷಕ್ಕೂ ಸಿಎಂ, ನೋ ಪವರ್ ಶೇರಿಂಗ್’ ಎಂದು ಹೇಳಲು ಸಾಧ್ಯವಿತ್ತೆ? ಸಿದ್ದರಾಮಯ್ಯ ಹಾಗೆ ಹೇಳಿದ ಮೇಲೂ ಭೇಟಿಗೆ ಸಮಯಾವಕಾಶ ಕೊಡುತ್ತಿದ್ದರೆ ರಾಹುಲ್ ಗಾಂಧಿ? ಹಾಗೆಯೇ, ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಆಗ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರೆ ಈಗ ಇಲ್ಲ ಎಂದು ಹೇಳಲು ಸಾಧ್ಯವೆ?
ಇವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡಿಗೆ ಹತ್ತಿರ ಇರುವ ದಿಲ್ಲಿಯ ಯಾವುದೇ ನಾಯಕರಿಗೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆಯಾ? ಎಂದು ಕೇಳಿದರೆ ನಮ್ಮ ಕಡೆಗೆ ವಾಪಸ್ ತೂರಿಬರುವ ಪ್ರಶ್ನೆಗಳು. ಅಷ್ಟೇ ಅಲ್ಲ, ಡಿ.ಕೆ. ಶಿವಕುಮಾರ್ ಮನೆಗೆ ಹೋಗಿ ‘ಜೈಕಾರ’ ಹಾಕಿಬಂದಿರುವ ಕೆಲ ಶಾಸಕರು ಕೂಡ ಹೇಳುವ ಮಾತುಗಳು.
ಈ ವಾಸ್ತವ ಡಿ.ಕೆ. ಶಿವಕುಮಾರ್ ಅವರಿಗೆ ಇತರರಿಗಿಂತ ತುಸು ಚೆನ್ನಾಗಿಯೇ ಗೊತ್ತು. ಅದಕ್ಕಿಂತ ಜಾಸ್ತಿ ಹೈಕಮಾಂಡ್ ಲೆಕ್ಕಾಚಾರ, ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹತೆ ಮತ್ತು ಸಿದ್ದರಾಮಯ್ಯ ಅವರ ಶಕ್ತಿ ಬಗ್ಗೆ ಗೊತ್ತು. ಒಂದು ರೀತಿಯಲ್ಲಿ ಅವರೀಗ ಗೋಡೆಗೆ ತಳ್ಳಲ್ಪಟ್ಟವರು. ‘ತಿರುಗಿ ಬೀಳದೆ’ ಅವರಿಗೆ ಅನ್ಯ ಮಾರ್ಗವಿಲ್ಲ. ಅದರಿಂದಾಗಿಯೋ ಏನೋ ಇಷ್ಟು ದಿನ ಹೈಕಮಾಂಡ್ ನೋಡಿ.ಕೆ.ೂಳ್ಳುತ್ತದೆ ಎನ್ನುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ‘ಹೈಕಮಾಂಡ್ ನನ್ನ ಪರ ತೀರ್ಮಾನ ಕೈಗೊಳ್ಳುವಂತೆ ಮಾಡುತ್ತೇನೆ’ ಎಂದು ನಿರ್ಧರಿಸಿ ಮುಂದಡಿ ಇಟ್ಟಿದ್ದಾರೆ. ಇದರಿಂದ ಡಿ.ಕೆ. ಶಿವಕುಮಾರ್ ಅವರ ನಡೆಗಳಲ್ಲಿಯೇ ಅಧಿಕಾರ ಹಂಚಿಕೆಯ ಒಪ್ಪಂದವಾಗಿಲ್ಲ ಎನ್ನುವ ಸುಳಿವುಗಳು ಸ್ಪಷ್ಟವಾಗಿ ಸಿಗುತ್ತಿವೆ.
ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಎರಡು ಬೆಳವಣಿಗೆಗಳಾಗುತ್ತಿವೆ. ಮನವೊಲಿಕೆ ಮೂಲಕ ಸಾಧಿಸಿಕೊಳ್ಳಲು ಸಾಧ್ಯವಿಲ್ಲ ಎನಿಸಿರುವುದರಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುವುದು. ಸಮಯ ಕೇಳಿದಾಗ ಕೊಡದೆ ಸತಾಯಿಸಿದರು ಎನ್ನುವ ಕಾರಣಕ್ಕೆ ಅವರಾಗಿಯೇ ಕರೆಯುವವರೆಗೆ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಿಸದೆ ಇರುವುದು. ಆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು. ಅದರ ಭಾಗವಾಗಿ ಈಗ ಶಾಸಕರ ವಿಶ್ವಾಸ ಗಳಿಸುವ ಕೆಲಸ ಭರದಿಂದ ಸಾಗುತ್ತಿದೆ.
ಡಿಕೆಶಿ ಜೈಲಿಗೆ ಹೋಗಿದ್ದೇಕೆ?
ಹೈಕಮಾಂಡ್ ಅನ್ನು ಬಲಪ್ರದರ್ಶನದ ಮೂಲಕವೇ ಮಣಿಸಬೇಕು ಎಂದರೆ ಕನಿಷ್ಠ 50 ಶಾಸಕರು ಬೇಕು ಎನ್ನುವ ಲೆಕ್ಕಾಚಾರದೊಂದಿಗೆ ತಂತ್ರಗಾರಿಕೆಗಳು ನಡೆಯುತ್ತಿವೆ.
ಡಿ.ಕೆ. ಶಿವಕುಮಾರ್ ಬಳಿ ಈಗಾಗಲೇ ಅಷ್ಟು ಮಂದಿ ಶಾಸಕರಿದ್ದಾರಾ ಅಥವಾ ಶಾಸಕರನ್ನು ಇನ್ನಷ್ಟೇ ಹೊಂದಿಸಬೇಕಾ? ಅಷ್ಟು ದೊಡ್ಡ ಮಟ್ಟದ ಬಲ ಇದ್ದರೆ ಜೈಲಿಗೆ ಹೋಗಿ ಶಾಸಕರ ಬೆಂಬಲ ಕೇಳುವ ಅನಿವಾರ್ಯತೆ ಏನಿತ್ತು? ಅದರಲ್ಲೂ ಜೈಲಿನಲ್ಲಿರುವ ಶಾಸಕರನ್ನು ತಮ್ಮ ಬಣದವರು ಎಂದೇ ಹೇಳಲಾಗುತ್ತಿದ್ದರೂ ಭೇಟಿ ಮಾಡಿದ್ದೇಕೆ? ‘ನಾನು ಎಂಥದೇ ಪರಿಸ್ಥಿತಿಯಲ್ಲೂ ಶಾಸಕರ ಜೊತೆಗಿರುವೆ’ ಎಂಬ ಸಂದೇಶ ಕೊಡುವುದಕ್ಕಾಗಿಯೆ?
ಈಗ ಡಿ.ಕೆ. ಶಿವಕುಮಾರ್ ಬಾಯಿ ಮಾತಿಗೆ ನನಗೆ ಬಣ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎನ್ನುತ್ತಿದ್ದಾರೆ. ಆದರೆ ಬಣ ರಾಜಕಾರಣ ಅವರಿಗೆ ಹೊಸದಲ್ಲ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೇ ಸಾಬೀತು ಮಾಡಿದ್ದಾರೆ. ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಎಸ್.ಎಂ. ಕೃಷ್ಣ ‘ನಮ್ಮ ಸರಕಾರದ ಬಗ್ಗೆ ಜನಾಭಿಪ್ರಾಯ ಹೇಗಿದೆ? ನಾವು ಮತ್ತೆ ಸರಕಾರ ರಚಿಸಲು ಸಾಧ್ಯವೆ? ಎಷ್ಟು ಶಾಸಕರು ಮತ್ತೆ ಗೆದ್ದು ಬರುಬಹುದು?’ ಎಂಬಿತ್ಯಾದಿ ಕೇಳಿದ್ದಾರೆ. ಮಂತ್ರಿಗಳು ಎಲ್ಲವೂ ಚೆನ್ನಾಗಿದೆ ಎಂಬ ಸುಳ್ಳನ್ನು ನವಿರಾಗಿ ಹೇಳಿದ್ದಾರೆ. ನಡುವೆ ಡಿ.ಕೆ. ಶಿವಕುಮಾರ್ ‘ಸಾರ್, ನಾವು 80ರಿಂದ 90 ಮಂದಿ ಗೆದ್ದರೂ ಸಾಕು, ಉಳಿದಿದ್ದನ್ನು ಮ್ಯಾನೇಜ್ ಮಾಡಬಹುದು’ ಎಂದಿದ್ದಾರೆ. ಸಹಜವಾಗಿ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೆ ಡಿ.ಕೆ. ಶಿವಕುಮಾರ್ ‘ನಾನು ಮ್ಯಾನೇಜ್ ಮಾಡುವೆ’ ಎಂದು ಉತ್ತರಿಸಿದ್ದಾರೆ. ಆಗ ಹಿರಿಯ ಸಚಿವರೊಬ್ಬರು ‘ಶಾಸಕರನ್ನು ಮ್ಯಾನೇಜ್ ಮಾಡುವ ಸಾಮರ್ಥ್ಯ ಇರುವ ನೀವು ಈಗಲೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದಕ್ಕಾಗಿ ಪ್ರಯತ್ನ ಮಾಡಬಹುದಲ್ಲಾ?’ ಎಂದು ಸವಾಲು ಹಾಕಿದ್ದಾರೆ. ಇವರ ಮಾತುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶುರುವಾದಾಗ ಎಸ್.ಎಂ. ಕೃಷ್ಣ ಮಧ್ಯ ಪ್ರವೇಶಿಸಿ ಕದನ ವಿರಾಮ ಘೋಷಿಸಿದರು ಎನ್ನುತ್ತದೆ ಇತಿಹಾಸ.
ಆಗಲೇ ಮ್ಯಾನೇಜ್ ಮಾಡುತ್ತೇನೆ ಎಂದಿದ್ದ ಡಿ.ಕೆ. ಶಿವಕುಮಾರ್ ಈಗ ‘ಗಾಳ ಹಾಕಿ ಮೀನು ಹಿಡಿಯುವ ಕಲೆ ನನಗೆ ಕರಗತ’ ಎಂದಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಆದರೆ ಆಗ ಅವರಿಂದ ಮ್ಯಾನೇಜ್ ಮಾಡಲು ಸಾಧ್ಯವಾಗಿರಲಿಲ್ಲ. 2004ರ ಫಲಿತಾಂಶ ಅತಂತ್ರವಾಗಿದ್ದಾಗ ಎಲ್ಲರಿಗಿಂತಲೂ ಮೊದಲು ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿದ್ದವರು ಎಸ್.ಎಂ. ಕೃಷ್ಣ. ಅವರ ಪರವಾಗಿ ಲಾಬಿ ಮಾಡಿದ್ದವರು ಇದೇ ಡಿ.ಕೆ. ಶಿವಕುಮಾರ್ ಮತ್ತು ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ. ದಿಲ್ಲಿಯ ಸಫ್ಧರ್ ಜಂಗ್ ಲೇನ್ ನಲ್ಲಿರುವ ದೇವೇಗೌಡರ ಮನೆಯ ಹೊರಗೆ ಡಿ.ಕೆ. ಶಿವಕುಮಾರ್ ಮತ್ತು ಒಳಗೆ ಸಿದ್ಧಾರ್ಥ ದಿನಗಟ್ಟಲೆ ಕಾದು ಕುಳಿತಿದ್ದರು. ಇಷ್ಟೆಲ್ಲಾ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು ಎಸ್.ಎಂ. ಕೃಷ್ಣ ಅವರನ್ನು ಮುಖ್ಯಮಂತ್ರಿ ಮಾಡುವುದಿರಲಿ, ಕಡೆಗೆ ತಾವು ಮಂತ್ರಿ ಆಗುವುದಕ್ಕೂ ಸಾಧ್ಯವಾಗಿರಲಿಲ್ಲ. ಮ್ಯಾನೇಜ್ ಮಾಡುವುದು ಎಷ್ಟು ಕಷ್ಟ ಎಂದು ಅವರಿಗೆ ಆಗಲೇ ಗೊತ್ತಾಗಿರಬೇಕು. ಗೊತ್ತಿದ್ದೂ ಗುದ್ದಾಟಕ್ಕೆ ಇಳಿದಿದ್ದಾರೆ ಎಂದರೆ ಬೇರೆ ದಾರಿ ಇಲ್ಲದಿರಬಹುದು ಅಥವಾ ಬೇರೆ ಏನೋ ತಂತ್ರಗಾರಿಕೆ ಇರಬಹುದು.
ಡಿಕೆಶಿ ಒಂಥರಾ, ಡಿಕೆಸು ಇನ್ನೊಂಥರಾ?
ಡಿ.ಕೆ. ಶಿವಕುಮಾರ್ ಮಾತುಗಳು ಮಾರ್ಮಿಕವಾಗಿವೆ. ಮಾರಕವಾಗದಂತೆ ಹೆಜ್ಜೆ ಹೆಜ್ಜೆಗೂ ಜಾಗ್ರತೆ ವಹಿಸುತ್ತಿದ್ದಾರೆ. ಅಧ್ಯಕ್ಷನಾಗಿ ಪಕ್ಷದ ಪರಿಧಿ ದಾಟ ಬಾರದೆಂಬ ಎಚ್ಚರಿಕೆಯಲ್ಲಿದ್ದಾರೆ. ತನ್ನ ತಾಳ್ಮೆ ದೌರ್ಬಲ್ಯ ಎಂದು ಬಿಂಬಿತವಾಗಬಾರದು, ಹೈಕಮಾಂಡ್ ನನ್ನನ್ನು ಹಗುರವಾಗಿ ಪರಿಗಣಿಸಬಾರದು ಎನ್ನುವ ಕಾರಣಕ್ಕಾಗಿ ಸಿಡಿಯುವ ಸುಳಿವುಗಳನ್ನೂ ನೀಡುತ್ತಿದ್ದಾರೆ. ಇನ್ನೊಂದು ಕಡೆ ಅಣ್ಣ ಅಧ್ಯಕ್ಷನಾಗಿ ಮಾಡಲಾಗದ ಕೆಲ ಕೆಲಸಗಳನ್ನು ತಮ್ಮ ಡಿ.ಕೆ. ಸುರೇಶ್ ತನ್ನ ಹೆಗಲಿಗೆ ಎಳೆದುಕೊಂಡಿದ್ದಾರೆ. ತಾವೇ ಖುದ್ದಾಗಿ ಸಿದ್ದರಾಮಯ್ಯ ಬಳಿ ಹೋಗಿ ‘ಕೇಳಿ’ದ್ದಾರೆ. ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಸದ್ಯ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆಗಳೆಲ್ಲವೂ ಗೊತ್ತಿರುವುದು ಡಿ.ಕೆ. ಸುರೇಶ್ ಅವರಿಗೆ ಮಾತ್ರ. ಅವರು ಖಾಸಗಿಯಾಗಿ ಮಾತನಾಡುತ್ತಾ ‘ನಾವು ಅಂದುಕೊಂಡಂತೆ ಆಗದಿದ್ದರೆ, ಮೂರ್ನಾಲ್ಕು ದಿನದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಕರ್ನಾಟಕದ ಕಡೆ ನೋಡುವಂತೆ ಮಾಡುತ್ತೇವೆ’ ಎಂದು ಹೇಳಿದ್ದಾರಂತೆ.
‘ಸಿದ್ದರಾಮಯ್ಯ ಅವರ ಆಟವನ್ನು ನಾವು ನಿಲ್ಲಿಸುತ್ತೇವೆ’ ಎಂಬ ಮಾತಿನಿಂದ ಹಿಡಿದು ಡಿ.ಕೆ. ಸುರೇಶ್ ನಾಲ್ಕು ಗೋಡೆಗಳ ಒಳಗೆ ಆಡುತ್ತಿರುವ ಮಾತುಗಳು ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಆಡುವ ಮಾತುಗಳಿಗಿಂತ ಜಾಸ್ತಿ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ‘ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಕರ್ನಾಟಕದ ಕಡೆ ನೋಡುವಂತೆ ಮಾಡುತ್ತೇವೆ’ ಎಂಬ ಮಾತು ಆಪರೇಷನ್ ಕಮಲದ ಅಸ್ತ್ರ ಇರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಕೆಲವು ವದಂತಿಯ ಸ್ವರೂಪದಲ್ಲಿವೆ. ಕೆಲವು ಅತಿಯಾದ ಲೆಕ್ಕಾಚಾರ, ಅತಿಯಾದ ವೇಗ ಎಂದು ಭಾಸವಾಗುತ್ತಿವೆ. ಅತಿಯಾದರೆ ಅಮೃತವೂ ವಿಷ ಎನ್ನುವುದು ರಾಜಕಾರಣದಲ್ಲಿ ಕೆಲವೊಮ್ಮೆ ಅನ್ವಯವಾಗುತ್ತದೆ, ಇನ್ನು ಕೆಲವೊಮ್ಮೆ ಅಂದುಕೊಂಡದ್ದನ್ನು ಸಾಧಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗಿ ಅತಿ ಎನಿಸುವಂಥ ಸಂಗತಿಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ ರಾಜಕಾರಣದಲ್ಲಿ ಸರಿತಪ್ಪುಗಳ ನಡುವಿನ ಗೆರೆ ತುಂಬಾ ಸಣ್ಣದು.
ಆಫ್ ದಿ ರೆಕಾರ್ಡ್!
ಇಷ್ಟು ದಿನ ಹೈಕಮಾಂಡ್ ಜಪ ಮಾಡುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ಶಕ್ತಿ ಪ್ರದರ್ಶನ ಎನ್ನುತ್ತಿದ್ದಾರೆ. ಈವರೆಗೆ ‘ಮುಖ್ಯಮಂತ್ರಿ ಯಾರಾಗಬೇಕು
ಎನ್ನುವುದು ಶಾಸಕಾಂಗ ಪಕ್ಷದಲ್ಲಿ ನಿರ್ಧಾರವಾಗಲಿ’ ಎಂದು ಪಟ್ಟು ಹಾಕುತ್ತಿದ್ದ ಸಿದ್ದರಾಮಯ್ಯ ಈಗ ಹೈಕಮಾಂಡ್ ಮಾತಿಗೆ ಬದ್ಧ ಎನ್ನುತ್ತಿದ್ದಾರೆ. ಇಬ್ಬರೂ ಪಥ-ಶಪಥಗಳನ್ನು ಬದಲಿಸಿದ್ದಾರೆ. ಅಧಿಕಾರದ ರಥ ಯಾರಿಗೆ ಒಲಿಯುತ್ತದೆ ಎನ್ನುವುದನ್ನು ಕಾದುನೋಡಬೇಕು.