ರಾಜ್ಯ: ಮೂರೂ ಪಕ್ಷಗಳಲ್ಲೂ ತಲ್ಲಣ ಜೈಲು, ಬೇಲಿನ ರಾಜಕಾರಣ!
2025ಹಿನ್ನೋಟ - 2026ಮುನ್ನೋಟ
2025ರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಸ್ಥಿತಿ ಹೆಚ್ಚು ಕಮ್ಮಿ ಒಂದೇ ರೀತಿ ಇದೆ. ಕಾಂಗ್ರೆಸ್‌ನಲ್ಲಿ ಆರಂಭದಲ್ಲಿದ್ದ ಕುರ್ಚಿ ಕಿತ್ತಾಟ ಈಗಲೂ ಇದೆ. ಆರಂಭದಲ್ಲಿದ್ದಷ್ಟೇ ಗೊಂದಲಗಳು ಈಗಲೂ ಇವೆ. ಬಿಜೆಪಿಯಲ್ಲಿ ಅಧ್ಯಕ್ಷಗಾದಿಗೆ ಸಂಬಂಧಿಸಿದಂತೆ ಇದ್ದ ತಗಾದೆ ಚೂರೂ ಬದಲಾಗಿಲ್ಲ. ಜೆಡಿಎಸ್ ಆರಕ್ಕೆ ಏರಲಿಲ್ಲ, ಮೂರಕ್ಕಿಳಿಯಲಿಲ್ಲ.
ಆಡಳಿತಾರೂಢ ಪಕ್ಷವಾಗಿರುವ ಕಾರಣಕ್ಕೆ ಕಾಂಗ್ರೆಸ್ ಕಿತ್ತಾಟ ಎದ್ದು ಕಾಣುತ್ತಿದೆ. ಅದಕ್ಕಿಂತ ಜಾಸ್ತಿ ಕಣ್ಣಿಗೆ ರಾಚುತ್ತಿರುವುದು ಕಾಂಗ್ರೆಸ್ ಹೈಕಮಾಂಡ್‌ನ ನಿಷ್ಕ್ರಿಯತೆ. ಎಂದೋ ಬಗೆಹರಿಸಬಹುದಾಗಿದ್ದ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಬೇಜವಾಬ್ದಾರಿಯಿಂದ ಬಿಟ್ಟುಕೊಂಡುಬಂದಿದೆ. ಸರಕಾರ ರಚನೆಯಾಗುವಾಗಲೇ ಹುಟ್ಟಿಕೊಂಡಿದ್ದ ಅಧಿಕಾರ ಹಂಚಿಕೆಯ ಒಪ್ಪಂದದ ಕುರಿತಾದ ಚರ್ಚೆ ಅಥವಾ ಗೊಂದಲ ಸರಕಾರ ಎರಡೂವರೆ ವರ್ಷ ಪೂರೈಸುತ್ತಿದ್ದಂತೆ ತೀವ್ರತೆಯನ್ನು ಪಡೆದುಕೊಂಡಿತು. ಇನ್ನೇನು ನಾಯಕತ್ವ ಬದಲಾಗಿಯೇ ಬಿಡುತ್ತೆ ಎನ್ನುವ ಹಂತಕ್ಕೂ ಚರ್ಚೆ ನಡೆಯಿತು. ಕಡೆಗೆ ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸಿತು. ಹೈಕಮಾಂಡ್ ಸೂಚನೆಯಂತೆಯೇ ಉಪಾಹಾರ ಕೂಟ ಏರ್ಪಟ್ಟು ಕದನವಿರಾಮ ಘೋಷಿಸಲಾಯಿತಾದರೂ ಅದು ಉಲ್ಲಂಘನೆಯಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಬೆಳಗಾವಿ ಅಧಿವೇಶನದ ವೇಳೆ ಶೀತಲಸಮರ ಬಟಾಬಯಲಾಯಿತು.
ನಿಲುವು ಬದಲಿಸಿದ ಸಿದ್ದರಾಮಯ್ಯ
ವರ್ಷದ ಮೊದಲು ಶಾಸಕರ ಬೆಂಬಲ ಇರುವವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುತ್ತಿದ್ದ ಸಿದ್ದರಾಮಯ್ಯ ವರ್ಷದ ಕಡೆಗೆ ಹೈಕಮಾಂಡ್ ಜಪ ಮಾಡಲಾರಂಭಿಸಿದರು. ಸಿದ್ದರಾಮಯ್ಯ 2013ರಲ್ಲೂ ‘ಶಾಸಕರ ಬೆಂಬಲ’ ಎಂಬ ದಾಳವನ್ನೇ ಉರುಳಿಸಿದ್ದರು. 2023ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಲು ‘ಶಾಸಕರ ಬೆಂಬಲ’ ಎಂಬ ಪೆಟ್ಟನ್ನೇ ಹಾಕಿದ್ದರು. ಆದರೀಗ ‘ಹೈಕಮಾಂಡ್ ತೀರ್ಮಾನಕ್ಕೆ ಬದ್ಧ’ ಎಂದು ನಿಲುವು ಬದಲಿಸಿದ್ದಾರೆ. ಹೇಗೂ ಶಾಸಕರ ಬೆಂಬಲ ಇದೆ, ಹೈಕಮಾಂಡ್ ವಿಶ್ವಾಸವನ್ನು ಗಳಿಸಿಕೊಂಡರೆ ಕುರ್ಚಿಕಾಲು ಗಟ್ಟಿ ಎನ್ನುವ ಲೆಕ್ಕಾಚಾರ ಇರಬಹುದು. ಶಾಸಕರ ಬೆಂಬಲಕ್ಕಿಂತಲೂ ಹೈಕಮಾಂಡ್ ಪ್ರಭಾವ ಜಾಸ್ತಿ ಕೆಲಸ ಮಾಡುತ್ತದೆ ಎನ್ನುವ ಕಾರಣವಿರಬಹುದು. ಹೈಕಮಾಂಡ್ ‘ಈಗಗಾಲೇ ಎರಡು ಬಾರಿ ಅವಕಾಶ ಕೊಟ್ಟಿದ್ದೇವೆ’ ಎಂಬ ಅಸ್ತ್ರ ಪ್ರಯೋಗಿಸಿದರೆ ಸಿಎಂ ಸ್ಥಾನ ಬಿಟ್ಟುಕೊಡುವುದು ಅನಿವಾರ್ಯವಾಗುತ್ತದೆ ಎನ್ನುವ ಮುಂದಾಲೋಚನೆ ಇರಬಹುದು. ಒಟ್ಟಿನಲ್ಲಿ ಅವರಿಗೆ ಈಗ ಹೈಕಮಾಂಡ್ ವಿಶ್ವಾಸ ಗಳಿಸುವುದು ಹೆಚ್ಚು ಸೂಕ್ತ ಎನಿಸಿದೆ.
ಡಿಕೆಶಿ ಗೆದ್ದರೋ, ಸೋತರೋ?
ಇಷ್ಟು ದಿನ ಹೈಕಮಾಂಡ್ ಹೆಸರನ್ನೇ ಉಸಿರಾಡುತ್ತಿದ್ದ ಡಿ.ಕೆ. ಶಿವಕುಮಾರ್ ಈಗ ಶಾಸಕರ ವಿಶ್ವಾಸ ಗಳಿಸುವ ಕಡೆ ಲಕ್ಷ್ಯ ಹರಿಸಿದ್ದಾರೆ. ಸಿದ್ದರಾಮಯ್ಯ ಆಪ್ತರನ್ನು ಸೆಳೆಯಲು ಮುಂದಾಗಿದ್ದಾರೆ. ಇದರಿಂದ ಸಹಜವಾಗಿ ಡಿಕೆಶಿಗೆ ಹೈಕಮಾಂಡ್ ಮೇಲಿನ ವಿಶ್ವಾಸ ಕಮ್ಮಿಯಾಯಿತೆ? ನಿಜಕ್ಕೂ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದ್ದರೆ ಹೈಕಮಾಂಡ್ ನಾಯಕರೇ ಮುಂದೆ ನಿಂತು ಮುಖ್ಯಮಂತ್ರಿ ಸ್ಥಾನ ಕೊಡಿಸುತ್ತಿರಲಿಲ್ಲವೆ? ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲದ ಕಾರಣಕ್ಕಾಗಿಯೇ ಡಿಕೆಶಿ ಇಷ್ಟೆಲ್ಲಾ ಮಾಡುತ್ತಿದ್ದಾರಾ? ಎನ್ನುವ ಅನುಮಾನಗಳು ಮೂಡಿ ಮರೆಯಾಗಿವೆ. ಮೂಡಿ ಮರೆಯಾದವೇಕೆಂದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ‘ಅಧಿಕಾರ ಹಂಚಿಕೆಯ ಒಪ್ಪಂದ ಆಗೇಬಿಟ್ಟಿದೆಯೇನೋ’ ಎಂದು ಬಿಂಬಿಸುವಲ್ಲಿ ಡಿಕೆಶಿ ಭಾಗಶಃ ಯಶಸ್ವಿಯಾಗಿದ್ದರು. ಅವರ ಸಹೋದರ ಡಿ.ಕೆ. ಸುರೇಶ್ ಬಿಟ್ಟ ‘ಕೊಟ್ಟ ಮಾತಿನ ಬಾಣ’ ಕೂಡ ‘ಅನ್ಯಾಯವಾಗಿದೆ’ ಎಂದು ಬಿಂಬಿಸಲು ಸಹಕಾರಿಯಾಗಿತ್ತು. ಇದರಿಂದಾಗಿ ಡಿಕೆಶಿ ಅನುಕಂಪ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿಬಿಟ್ಟಿದ್ದರು.
ಆದರೆ ಡಿಕೆಶಿ ತಿಂಗಳುಗಟ್ಟಲೆ ಕಾದರೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆ ‘ಇದು ಸ್ಥಳೀಯ ನಾಯಕರೇ ಸೃಷ್ಟಿಸಿಕೊಂಡಿರುವ ಸಮಸ್ಯೆ ಅವರೇ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿರುವುದು ಡಿಕೆಶಿಗೆ ಶುಭ ಸೂಚನೆಯಂತೂ ಅಲ್ಲ. ಏಕೆಂದರೆ ಖರ್ಗೆ ಅವರ ಮಾತು ‘ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ಅಥವಾ ಒಪ್ಪಂದ ಆಗಿಲ್ಲ’ ಎನ್ನುವ ಅರ್ಥವನ್ನೂ ಧ್ವನಿಸುತ್ತದೆ. ಇದರಿಂದಾಗಿ ಡಿಕೆಶಿ ಸೋತುಬಿಟ್ಟರಾ ಎನ್ನುವ ಅನುಮಾನ ಕೂಡ ಬರುತ್ತದೆ.
ಮುನ್ನೆಲೆಗೆ ಬಂದ ಸತೀಶ್
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಶೀತಲಸಮರದ ನಡುವೆ ಸತೀಶ್ ಜಾರಕಿಹೊಳಿ ಮುಂದಿನ ನಾಯಕ ಎನ್ನುವಂತೆ ಬಿಂಬಿತರಾಗುತ್ತಿದ್ದಾರೆ. ಸಿದ್ದು-ಡಿಕೆಶಿ ಜಗಳದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗಬಹುದೆಂಬ ಚರ್ಚೆಯೂ ನಡೆದಿತ್ತು. ಆದರೆ 2025 ಮುಗಿಯುವ ವೇಳೆಗೆ ಆ ಸಾಧ್ಯತೆ ಗೌಣವಾಗುತ್ತಿದೆ. ಜೊತೆಜೊತೆಗೆ ಸತೀಶ್ ಜಾರಕಿಹೊಳಿ ಹೆಸರು ಕೆಪಿಸಿಸಿ ಅಧ್ಯಕ್ಷಗಾದಿಗೆ ಮುಂಚೂಣಿಯಲ್ಲಿದೆ. ಇದಲ್ಲದೆ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಅವರನ್ನು ಭವಿಷ್ಯದ ಅಹಿಂದ ನಾಯಕ’, ‘ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ’ ಎಂದಿರುವುದು ಕೂಡ ಪ್ರಮುಖ ಘಟ್ಟವೇ. ಏಕೆಂದರೆ ದಿನಕಳೆದಂತೆ ಡಾ. ಯತೀಂದ್ರ ಮಾತಿಗೆ ಇನ್ನೊಬ್ಬ ಹಿಂದುಳಿದ ವರ್ಗದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ದನಿಗೂಡಿಸಿದ್ದಾರೆ.
ರಾಜಣ್ಣ ವಿಷಯದಲ್ಲಿ ಅವಸರದ ನಡೆ
ಕಾಂಗ್ರೆಸ್ ಪಕ್ಷ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ನಿರ್ಧಾರ ಕೈಗೊಂಡಿದ್ದು ಅತ್ಯಂತ ಅವಸರದ ನಡೆ. ಸಾಮಾನ್ಯವಾಗಿ ಕಾಂಗ್ರೆಸ್ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ತಡಮಾಡುತ್ತದೆ. ಹೀಗೆ ತಡಮಾಡಿ ಸಮಸ್ಯೆ ಬೆಟ್ಟದಷ್ಟಾಗಲು ಕಾರಣವಾಗಿದೆ. ಆದರೆ ರಾಜಣ್ಣ ವಿಷಯದಲ್ಲಿ ತರಾತುರಿಯ ತೀರ್ಮಾನವನ್ನು ಕೈಗೊಂಡಿದೆ. ಇದೀಗ ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದಿರುವ ಪತ್ರಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದರಿಂದ ರಾಜಣ್ಣ ಸುಲಭಕ್ಕೆ ಸೋಲೊಪ್ಪುವವರಲ್ಲ ಎಂದು ಸಾಬೀತಾಗಿದೆ.
ನಿಲ್ಲದ ಬಿಜೆಪಿಯ ಬೀದಿ ಜಗಳ
ಕಾಂಗ್ರೆಸಿಗರ ಕಿತ್ತಾಟಕ್ಕೆ ಒಂದು ಅರ್ಥವಾದರೂ ಇದೆ. ಏಕೆಂದರೆ ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಆದರೆ ಹೀನಾಯವಾಗಿ ಸೋತು ಅಧಿಕಾರ ಕಳೆದುಕೊಂಡರೂ ಬಿಜೆಪಿ ನಾಯಕರು ಬುದ್ದಿ ಕಲಿತಿಲ್ಲ. ಇಡೀ ವರ್ಷ ಬಿಜೆಪಿ ನಾಯಕರು ಏನು ಮಾಡಿದರು ಎಂದರೆ ‘ಕಿತ್ತಾಡಿದರು’ ಎನ್ನುವುದನ್ನು ಬಿಟ್ಟರೆ ಬೇರೆ ಉತ್ತರವೇ ಸಿಗುವುದಿಲ್ಲ. ಸಮರ್ಥ ಪ್ರತಿಪಕ್ಷವಾಗಿ ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸಲು ಅಥವಾ ಪಕ್ಷ ಸಂಘಟನೆ ಮಾಡಲು ಲಕ್ಷ್ಯವನ್ನೇ ಕೊಡದೆ ಇರುವ ಶಕ್ತಿಯನ್ನೆಲ್ಲಾ ಪಕ್ಷದೊಳಗಿನವರನ್ನು ಸೆದೆಬಡಿಯಲು ವ್ಯಯಮಾಡಲಾಗುತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಆರ್. ಅಶೋಕ್ V/s ಬಿ.ವೈ. ವಿಜಯೇಂದ್ರ, ಬಿ.ವೈ. ವಿಜಯೇಂದ್ರ V/s ಭಿನ್ನಮತೀಯರು, ಬಿ.ಎಸ್. ಯಡಿಯೂರಪ್ಪ V/s ಬಿ.ಎಲ್. ಸಂತೋಷ್, ಆರ್. ಅಶೋಕ್ V/s ಅಶ್ವಥನಾರಾಯಣ್, ಆರ್. ಅಶೋಕ್ V/s ಸಿ.ಟಿ. ರವಿ, ಬಿ.ವೈ. ವಿಜಯೇಂದ್ರ V/s ವಿ. ಸೋಮಣ್ಣ, ವಿಜಯೇಂದ್ರ V/s ತಟಸ್ಥರು ಎಂಬಿತ್ಯಾದಿ ಗುಂಪುಗಳಿವೆ. ಬಿ.ಎಲ್. ಸಂತೋಷ್, ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ ಮತ್ತಿತರರು ದಿಲ್ಲಿ ಮಟ್ಟದಲ್ಲಿ ವಿಜಯೇಂದ್ರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್, ಬಿ.ಪಿ. ಹರೀಶ್ ಮತ್ತಿತರರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ. ಆರ್. ಅಶೋಕ್ ಕರೆದ ಸಭೆಗೆ ವಿಜಯೇಂದ್ರ ಬರುವುದಿಲ್ಲ. ವಿಜಯೇಂದ್ರ ಆಯೋಜನೆ ಮಾಡಿದ ಪ್ರತಿಭಟನೆಯಲ್ಲಿ ಅಶೋಕ್ ಪಾಲ್ಗೊಳ್ಳುವುದಿಲ್ಲ. ಸದನದಲ್ಲೂ ವಿಜಯೇಂದ್ರ ಪ್ರತ್ಯೇಕವಾಗಿ ಮನವಿ ಮಾಡಿ ಮಾತನಾಡಲು ಅವಕಾಶ ಕೇಳುತ್ತಾರೆ. ಸದನದಲ್ಲಿ ಯಾವ ವಿಷಯವನ್ನು ಯಾವ ಸ್ವರೂಪದಲ್ಲಿ ಚರ್ಚೆ ಮಾಡಬೇಕು ಎಂಬ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸುವುದಿಲ್ಲ. ಒಟ್ಟಿನಲ್ಲಿ ಬಿಜೆಪಿ ಮನೆಯೊಂದು ಹಲವು ಬಾಗಿಲು ಎನ್ನುವಂತಾಗಿದೆ. 2025 ಶುರುವಾದಾಗಲೂ ಪರಿಸ್ಥಿತಿ ಹೀಗೇ ಇತ್ತು, ಮುಗಿಯುವಾಗಲೂ ಹೀಗೆ ಇದೆ.
ಉಚ್ಚಾಟನಾ ಪರ್ವ
ಬಿಜೆಪಿಯ ಬಂಡಾಯ ಮತ್ತು ಭಿನ್ನಮತ ತಾರಕಕ್ಕೆ ಏರಿ ಬಸನಗೌಡ ಪಾಟೀಲ ಯತ್ನಾಳ್, ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ನೇರವಾಗಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ವಿಜಯೇಂದ್ರರ ಹೊಂದಾಣಿಕೆ ರಾಜಕಾರಣದ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡದಂತೆ ಬುದ್ಧಿ ಕಲಿಸಲೆಂದೇ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಯಿತು ಎಂದು ಹೇಳಲಾಗುತ್ತಿತ್ತು. ಆದರೆ ಯತ್ನಾಳ್ ನಾಲಿಗೆ ಸ್ವಲ್ಪವೂ ವಿರಮಿಸಿಲ್ಲ. ಅವರು ಇನ್ನು ಹೆಚ್ಚು ಬೈಯಲು ಪರವಾನಿಗೆ ಪಡೆದವರಂತೆ ದಾಳಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಕರತರಬೇಕೆಂಬ ಪ್ರಯತ್ನವೂ ನಡೆಯುತ್ತಿದೆ.
ಆರಕ್ಕೇರದ, ಮೂರಕ್ಕಿಳಿಯದ ಜೆಡಿಎಸ್!
ಪಕ್ಷ ಸಣ್ಣದಾದರೂ ಜೆಡಿಎಸ್‌ನ ಬಂಡಾಯ ದೊಡ್ಡದು. ದೇವೇಗೌಡರನ್ನು ಹೊಗಳುತ್ತಲೇ ಎಚ್.ಡಿ. ಕುಮಾರಸ್ವಾಮಿಗೆ ಕಿರಿಕಿರಿ ಉಂಟು ಮಾಡುವ ವಿದ್ಯೆ ಜಿ.ಟಿ. ದೇವೇಗೌಡರಿಗೆ ಚೆನ್ನಾಗಿ ಸಿದ್ಧಿಸಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಸಭಾನಾಯಕ ಆಗುವ ಎಲ್ಲಾ ಅರ್ಹತೆ ತನಗಿದೆ ಎನ್ನುವುದು ಜಿಟಿಡಿ ನಂಬಿಕೆ. ಜಿಟಿಡಿ ನಮ್ಮ ಮಾತು ಕೇಳುವುದಿಲ್ಲ ಎನ್ನುವುದು ಕುಮಾರಸ್ವಾಮಿ ಅವರ ಅಪನಂಬಿಕೆ. ಈ ತಿಕ್ಕಾಟದ ಕಾರಣಕ್ಕೆ ಕಡೆಗೆ ಪಕ್ಷದ ಕೋರ್ ಕಮಿತಿಯಿಂದಲೂ ಜಿಟಿಡಿಯನ್ನು ಕಿತ್ತುಹಾಕಲಾಯಿತು.
ಎಚ್‌ಡಿಕೆ ಅನಾರೋಗ್ಯ,
ನಿಖಿಲ್‌ಗೆ ನಾಯಕತ್ವದ ಚರ್ಚೆ!
2025ರಲ್ಲಿ ಜೆಡಿಎಸ್ ಪಕ್ಷವನ್ನು ಕಾಡಿದ ಮತ್ತೊಂದು ಸಮಸ್ಯೆ ಎಂದರೆ ಅದು ಎಚ್.ಡಿ. ಕುಮಾರಸ್ವಾಮಿ ಅವರ ಅನಾರೋಗ್ಯ. ಒಂದು ಹಂತದಲ್ಲಿ ಜೆಡಿಎಸ್ ಕಾರ್ಯಕರ್ತರು ತೀವ್ರ ಆತಂಕಕ್ಕೊಳಗಾಗಿದ್ದರು. ಕುಮಾರಸ್ವಾಮಿ ಅವರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ನೊಗ ಹೊರಿಸಲಾಗುತ್ತದೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಆ ಧೈರ್ಯವನ್ನು ದೇವೇಗೌಡ ಅಥವಾ ಕುಮಾರಸ್ವಾಮಿ ಮಾಡಲಿಲ್ಲ.
ಸಿದ್ದರಾಮಯ್ಯ ನಿರಾಳ,
ಯಡಿಯೂರಪ್ಪ ಭವಿಷ್ಯ ಕರಾಳ!
ರಾಜಕಾರಣಿಗಳಿಗೆ ಸಂಬಂಧಿಸಿದ ಕಾನೂನು ಹೋರಾಟಗಳನ್ನು ನೋಡುವುದಾದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ನ್ಯಾಯಾಲಯ ಹೇಳಿದ್ದರಿಂದ ಅವರು ನಿರಾಳರಾಗಿದ್ದಾರೆ. ಆದರೆ ಇನ್ನೊಂದೆಡೆ ಪೊಕ್ಸೊ ಪ್ರಕರಣದಲ್ಲಿ ಬಿ.ಎಸ್. ಯಡಿಯೂರಪ್ಪ ಭವಿಷ್ಯ ಕರಾಳವಾಗವುದೇ ಎನ್ನುವ ಅನುಮಾನ ಇದೆ.
ಜೈಲು ಮತ್ತು ಜಾಮೀನಿನಲ್ಲಿರುವ ಶಾಸಕರು!
2025ಕ್ಕೂ ಮೊದಲು ಜೈಲಿನಲ್ಲಿದ್ದ ಏಕೈಕ ಶಾಸಕ ವಿನಯ್ ಕುಲಕರ್ಣಿ ಮಾತ್ರ. ಈ ಪಟ್ಟಿಗೆ ಸತೀಶ್ ಸೈಲ್ ಮತ್ತು ವೀರೇಂದ್ರ (ಪಪ್ಪಿ) ಕೂಡ ಸೇರ್ಪಡೆಗೊಂಡಿದ್ದಾರೆ. ಈ ಮೂವರು ಕಾಂಗ್ರೆಸ್ ಶಾಸಕರು. ಇದಲ್ಲದೆ ಸಚಿವರಾಗಿದ್ದ ನಾಗೇಂದ್ರ ಕೂಡ ಜೈಲಿಗೆ ಹೋಗಿದ್ದರು. ಈಗ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಕೂಡ ಜೈಲಿಗೆ ಹೋಗಿಬಂದಿದ್ದಾರೆ. ಅವರು ಕೂಡ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಮೊನ್ನೆ ಮೊನ್ನೆ ಭೈರತಿ ಬಸವರಾಜ್ ಅವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಲ್ಪದರಲ್ಲೇ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡು ಜಾಮೀನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.