ಬಿಜೆಪಿ ಖೆಡ್ಡಾಕ್ಕೆ ಬಿದ್ದ ಕಾಂಗ್ರೆಸ್!
ಕೇಂದ್ರ ಸರಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ- 2005 (ಮನರೇಗಾ) ಹೆಸರನ್ನು ‘ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ-2025’ ಎಂದು ಬದಲಿಸಿದೆ. ಇದು ಹೆಸರಿನ ಬದಲಾವಣೆ ಮಾತ್ರವಲ್ಲ, ಯೋಜನೆಯನ್ನು ಆಮೂಲಾಗ್ರವಾಗಿ ಬದಲಿಸುವ, ಕಡೆಗೆ ಯೋಜನೆಯನ್ನೇ ಸ್ಥಗಿತಗೊಳಿಸುವ ವ್ಯವಸ್ಥಿತ ಷಡ್ಯಂತ್ರ.
ವರ್ಷದಿಂದ ವರ್ಷಕ್ಕೆ ಅಲ್ಲ, ದಿನದಿಂದ ದಿನಕ್ಕೆ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮನುಷ್ಯತ್ವ ಇರುವ ಯಾವುದೇ ಸರಕಾರಕ್ಕೆ ಮೊದಲ ಆದ್ಯತೆಯಾಗಬೇಕಾದುದು ಉದ್ಯೋಗದ ನಿರ್ಮಾಣ. ಅಂದರೆ ಅನ್ನ ನೀಡುವ ಕೆಲಸ. ಆದರೆ ಕೇಂದ್ರ ಸರಕಾರ ಮಾಡುತ್ತಿರುವುದು ನೇರವಾಗಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ, ಅದರಲ್ಲೂ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ, ಭೂಹೀನರ ಅನ್ನ ಕಸಿಯುವ ಕುತಂತ್ರ.
ಅನ್ನ ಇದ್ದರೆ ತಾನೇ ಜೀವ-ಜೀವನ. ಮನರೇಗಾ ಯೋಜನೆ ಜನರಿಗೆ ಜೀವನ ಕೊಟ್ಟಿದ್ದು ಹೇಗೆ ಎಂಬುದನ್ನು ತಿಳಿಯಲು ಅದು ಜನ್ಮತಳೆದ ಹಿನ್ನೆಲೆಯನ್ನು ನೋಡಬೇಕು. 2004ರಲ್ಲಿ ಬಿಜೆಪಿ ಭಾರತ ಪ್ರಕಾಶಿಸುತ್ತಿದೆ ಎಂದು ಚುನಾವಣೆಗೆ ಹೋಗಿದ್ದರೂ ಜನರ ಜೀವನ ಕತ್ತಲೆಯಲ್ಲಿತ್ತು. ದೇಶಾದ್ಯಂತ ನೆರೆ-ಬರದಿಂದ ರೈತರು ಲಕ್ಷಾಂತರ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ರೈತರು ಮತ್ತು ಬಡವರು ಬಿಜೆಪಿಯ ಕೈ ಹಿಡಿಯಲಿಲ್ಲ. ಇದೇ ಕಾರಣಕ್ಕೆ 2005ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮನರೇಗಾ ಯೋಜನೆಯನ್ನು ಜಾರಿಗೆ ತರುವುದು ಅನಿವಾರ್ಯವಾಗಿತ್ತು. ಜೊತೆಗೆ ಸಂಸತ್ತ್‌ನಲ್ಲಿ ಮೊದಲ ಬಾರಿಗೆ 57 ಸ್ಥಾನಗಳನ್ನು ಹೊಂದಿದ್ದ ಎಡಪಕ್ಷಗಳ ಒತ್ತಡವೂ ಕೆಲಸ ಮಾಡಿತ್ತು.
ಇದು ಇಂಥ ಇತಿಹಾಸ ಇರುವ, ವರ್ತಮಾನಕ್ಕೂ ಬೇಕಾಗಿರುವ, ಕೋಟಿ ಕೋಟಿ ಜನರ ಭವಿಷ್ಯದ ಪ್ರಶ್ನೆಯಾಗಿರುವ ಮನರೇಗಾ ಯೋಜನೆಯ ಒಂದು ಮುಖ ಅಷ್ಟೇ. ಇನ್ನೊಂದು ಮಹತ್ವದ ಆಯಾಮವೆಂದರೆ ಇದು ಯೋಜನೆ ಮಾತ್ರವಲ್ಲ, ಮೊದಲಿಗೆ ಯೋಜನೆಯಾಗಿಯೇ ಬಂದರೂ ಕ್ರಮೇಣ ಹಕ್ಕಾಗಿ ಮಾರ್ಪಾಡಾಯಿತು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ- 2005 ಪ್ರಕಾರ ಜನ ‘ಕೆಲಸ ಕೊಡಿ’ ಎಂದು ಕೇಳುವ ಹಕ್ಕನ್ನು ಪಡೆದುಕೊಂಡಿದ್ದರು. ಇದೀಗ ಈ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಆ ಮೂಲಕ ಬದುಕುವ ಹಕ್ಕು ನೀಡಿರುವ ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಕೂಡ ಆಗಿದೆ. ಸಂವಿಧಾನವನ್ನು ಬದಲಿಸಲು ಹೊರಟವರಿಂದ ಇದಕ್ಕಿಂತ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?
ಮೂರನೆಯದಾಗಿ ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ ಮೇಲೆ ರಾಜ್ಯಗಳಿಗೆ ಸಂಪನ್ಮೂಲ ಕ್ರೋಡೀಕರಿಸಿ ಕೊಳ್ಳುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಭಾರತದ ಆರ್ಥಿಕ ವ್ಯವಸ್ಥೆ ಅಥವಾ ತೆರಿಗೆ ನೀತಿಗಳು ‘ತೆರಿಗೆ ಕೇಂದ್ರದ ತಿಜೋರಿಗೆ, ಕೆಲಸ-ಖರ್ಚು ರಾಜ್ಯದ ಹೆಗಲಿಗೆ’ ಎನ್ನುವಂತಾಗಿದೆ. ಕೇಂದ್ರ ಸರಕಾರ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಎಸಗುತ್ತಿರುವುದರ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮಬಂಗಾಳದಂಥ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿವೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧದ ಮೇಲೆ ತೀವ್ರತೆರನಾದ ದುಷ್ಪರಿಣಾಮ ಬೀರುತ್ತಿದೆ. ಇದೇ ಸಂದರ್ಭದಲ್ಲಿ ಸುಮಾರು 60ರಿಂದ 70 ಸಾವಿರ ಕೋಟಿ ರೂಪಾಯಿ ಖರ್ಚಾಗುವ ಮನರೇಗಾ ಯೋಜನೆಗೆ ರಾಜ್ಯ ಸರಕಾರ ಶೇಕಡಾ 40ರಷ್ಟು ಹಣವನ್ನು ಭರಿಸಲಿ ಎಂಬ ಬದಲಾವಣೆ ತಂದಿರುವುದು ರಾಜ್ಯ ಸರಕಾರಗಳ ವಿರುದ್ಧದ ಚಿತಾವಣೆಯಲ್ಲದೆ ಬೇರೇನೂ ಅಲ್ಲ. ಇದು ಮುಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಇನ್ನೊಂದು ಬಗೆಯ ತಿಕ್ಕಾಟದ ಸೃಷ್ಟಿಗೆ ಕಾರಣವಾಗಬಹುದು.
ಮೂರಲ್ಲ, ಮನರೇಗಾ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಿಸಿರುವುದರ ಹಿಂದೆ ಇಂಥ ನೂರು ಗಂಭೀರ ಸಮಸ್ಯೆಗಳಿವೆ. ಪ್ರಖ್ಯಾತ ಕವಿ ಶೇಕ್ಸ್‌ಪಿಯರ್ ‘ಹೆಸರಿನಲ್ಲಿ ಏನಿದೆ?’ ಎಂದು ಕೇಳಿದಂತೆ ನಾವೀಗ ‘ಹೆಸರು ಬದಲಾವಣೆಯಲ್ಲೇನಿದೆ ವಿಶೇಷ?’ ಎನ್ನುವಂತಿಲ್ಲ. ಅದರಲ್ಲಿ ಹಿಂದಿ ಹೇರಿಕೆ ಇದೆ. ಸಂಸ್ಕೃತದ ಹೇರಿಕೆ ಇದೆ. ಸಾಂಸ್ಕೃತಿಕ ರಾಜಕಾರಣ ಇದೆ. ಆರ್ಥಿಕ ರಾಜಕಾರಣವೂ ಅಡಗಿದೆ. ಜೊತೆಗೆ ಬಿಜೆಪಿ ಮತ್ತು ಆರೆಸ್ಸೆಸ್ ಕಣಕಣದಲ್ಲೂ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ತುಂಬಿಕೊಂಡಿರುವ ದ್ವೇಷದ ಪ್ರತಿಬಿಂಬವೂ ಇದೆ.
ಗಾಂಧೀಜಿ ಹೆಸರನ್ನು ಕೈ ಬಿಟ್ಟಿರುವುದು ಒಂದು ಸಮಸ್ಯೆ ಮಾತ್ರ. ಅದಕ್ಕಿಂತಲೂ ಮಿಗಿಲಾಗಿ ಯೋಜನೆಯ ಸ್ವರೂಪವನ್ನೇ ಕುರೂಪಗೊಳಿಸಿರುವುದು ಹೆಚ್ಚು ಅಪಾಯಕಾರಿ. ಕಾಂಗ್ರೆಸ್ ನಾಯಕರು ಮನರೇಗಾದಿಂದ ಗಾಂಧೀಜಿ ಹೆಸರನ್ನು ತೆಗೆಯುತ್ತಿರುವುದನ್ನೇ ಪ್ರಮುಖ ಚರ್ಚಾ ವಿಷಯವನ್ನಾಗಿ ಮಾಡಿಕೊಂಡಂತೆ ಕಾಣುತ್ತಿದೆ. ಇತರ ಪ್ರಮುಖ ಸಂಗತಿಗಳು ಅವರಿಗೆ ಗೌಣವಾಗಿವೆ. ಒಂದೊಮ್ಮೆ ಗಾಂಧೀಜಿ ಹೆಸರು ಬದಲಿಸದೆ ಉಳಿದ ಮಾರಕ ಮಾರ್ಪಾಡು ಮಾಡಿದರೆ ಆಗ ಕಾಂಗ್ರೆಸ್ ನಾಯಕರಿಗೆ ಸಮಸ್ಯೆ ಇರುವುದಿಲ್ಲವೇ? ಕಾಂಗ್ರೆಸ್ ನಾಯಕರು ಹೀಗೆ ಗಾಂಧೀಜಿ ಸುತ್ತಾ ಗಿರಕಿ ಹೊಡೆಯುತ್ತಿರಲಿ ಎನ್ನುವ ಕಾರಣಕ್ಕಾಗಿಯೇ ಬಿಜೆಪಿ ಬಹಳ ವ್ಯವಸ್ಥಿತವಾಗಿ ಗಾಂಧಿ ಹೆಸರನ್ನು ತೆಗೆದುಹಾಕಿರಬಹುದು. ಈ ಮೂಲಕ ಬಿಜೆಪಿ ತೋಡಿದ ಖೆಡ್ಡಾಕ್ಕೆ ಕಾಂಗ್ರೆಸ್ ಬಿದ್ದಿದೆ.
ಖೆಡ್ಡಾಕ್ಕೆ ಬಿದ್ದಿಲ್ಲ ಎನ್ನುವುದಾದರೆ?
ತಾನು ಬಿಜೆಪಿ ಖೆಡ್ಡಾಕ್ಕೆ ಬಿದ್ದಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ಮತ್ತು ಮನರೇಗಾ ಬದಲಾಗಲು ಬಿಡಲ್ಲ ಎನ್ನುವುದನ್ನು ದೇಶವಾಸಿಗಳಿಗೆ ಗಟ್ಟಿಯಾಗಿ ಹೇಳಲು ಹಲವು ಅವಕಾಶಗಳು ಕಾಂಗ್ರೆಸ್ ಮುಂದಿದ್ದವು. ಸಮಸ್ಯೆಯ ಗಂಭೀರತೆಯನ್ನು ಅರಿತು ಅದನ್ನು ಜನರಿಗೂ ತಿಳಿಸಲು ಸಂಸತ್ ಅಧಿವೇಶನ ನಡೆಯಲು ಬಿಡಬಾರದಿತ್ತು. ಭಾರತ್ ಜೋಡೋ ಯಾತ್ರೆ ಮಾಡುವ ರಾಹುಲ್ ಗಾಂಧಿ ಅವರು ‘ಮನರೇಗಾ ಬದಲ್‌ನೇಕಾ ಪ್ರಸ್ತಾವ್ ಚೋಡೋ’ ಎಂಬ ಪ್ರತಿಭಟನೆಯನ್ನು ಅಥವಾ ಪಾದಯಾತ್ರೆಯನ್ನು ಸಂಸತ್ತಿನಿಂದಲೇ ಶುರುಮಾಡಬೇಕಿತ್ತು. ಗ್ರಾಮೀಣರ, ಬಡವರ ಬದುಕಿನ ಪ್ರಶ್ನೆಯಾಗಿರುವ ಮನರೇಗಾ ಹೋರಾಟವನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ಯುವ ಜಾಥಾಕ್ಕೆ ಚಾಲನೆ ನೀಡಬೇಕಿತ್ತು. ಇದು ಕಾಲದ ಅನಿವಾರ್ಯವಾಗಿತ್ತು. ಬಡವರ ಮತ್ತು ಗ್ರಾಮೀಣರ ಉಳಿವಿಗಾಗಿ ಮಾತ್ರವಲ್ಲ, ಕಾಂಗ್ರೆಸ್ ಅಸ್ತಿತ್ವದ ದೃಷ್ಟಿಯಿಂದಲೂ ಮಾಡಬೇಕಾದ ಕೆಲಸವಾಗಿತ್ತು.
ಅಷ್ಟೇಯಲ್ಲ, ಕಾಂಗ್ರೆಸ್ ಆಳ್ವಿಕೆ ಇರುವ ಕರ್ನಾಟಕದಲ್ಲಿ ಹೇಗೂ ವಿಧಾನಮಂಡಲದ ಅಧಿವೇಶನ ನಡೆಯುತ್ತಿತ್ತು. ಶಾಸನಸಭೆಯಲ್ಲಿ ಬಡವರ ವಿರೋಧಿ ವಿಬಿ-ಜಿ ರಾಮ್ ಜಿಯನ್ನು ವಿರೋಧಿಸಿ ನಿರ್ಣಯ ಅಂಗೀಕಾರ ಮಾಡಬಹುದಿತ್ತು. ಇಡೀ ದೇಶಕ್ಕೆ ಭಿನ್ನವಾದ ಸಂದೇಶ ಕಳುಹಿಸಬಹುದಾಗಿತ್ತು. ಆದರೆ ತಮ್ಮದೇ ಸರಕಾರದ (ಯುಪಿಎ) ಮಹತ್ವಾಕಾಂಕ್ಷಿ ಯೋಜನೆಯನ್ನು ಬಿಜೆಪಿ ನಿರ್ದಯಿಯಾಗಿ ಕೊಲ್ಲುತ್ತಿದ್ದರೂ ಕಾಂಗ್ರೆಸ್ ನಾಯಕರು ನಿದ್ದೆಯಿಂದ ಎದ್ದಿಲ್ಲ.
ಕೆಪಿಸಿಸಿ ಕತೆ ಭಿನ್ನವಾಗಿಲ್ಲ!
ರಾಜ್ಯ ಕಾಂಗ್ರೆಸ್ ಘಟಕವಂತೂ ಗುಟುಕು ಜೀವದಲ್ಲಿ ಬದುಕುತ್ತಿದೆ. ಹೇಳುವವರು ಕೇಳುವರಿಲ್ಲದೆ ಅನಾಥ ಪ್ರಜ್ಞೆ ಅನುಭವಿಸುತ್ತಿದೆ. ಇದೇ ಕಾರಣಕ್ಕೋ ಏನೋ ಮೊನ್ನೆ ಮೊನ್ನೆ ಆ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ‘ಕಾರ್ಯಕರ್ತರ ಕಡೆ ನೋಡಿ’ ಎಂದು ಕರೆ ಕೊಟ್ಟಿದ್ದು. ಮನರೇಗಾ ವಿಷಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ ಬಳಿಕವೇ ಕೆಪಿಸಿಸಿ ಕಣ್ಣು ಬಿಟ್ಟಿದ್ದು. ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಬರುತ್ತಿರುವ ಹೊತ್ತಿನಲ್ಲಿಯೇ ಕೇಂದ್ರದ ಬಿಜೆಪಿ ಸರಕಾರ ಸ್ಥಳೀಯ ಸಂಸ್ಥೆಗಳ ಪ್ರಮುಖ ಸಂಪನ್ಮೂಲಕ್ಕೆ ಸಂಚಕಾರ ತಂದಿದೆ. ಊರೂರಿನಲ್ಲಿ ಜನರನ್ನು ಬಡಿದೆಚ್ಚರಿಸಲು ಇದ್ಕಕ್ಕಿಂತ ಬೇರೆ ಕಾರಣ ಬೇಕಾಗಿಲ್ಲ. ಆದರೆ ಅಂಥ ಯಾವ ಸುಳಿವೂ ಕಾಂಗ್ರೆಸ್ ಪಕ್ಷದ ಪಾಳೆಯದಲ್ಲಿ ಕಾಣುತ್ತಿಲ್ಲ. ಇತರರನ್ನು ಬಿಡಿ. ಗ್ರಾಮೀಣಾಭಿವೃದ್ಧಿ ಇಲಾಖೆಯ ಬಹಳ ಮಹತ್ವದ ಯೋಜನೆ ಮನರೇಗಾ. ಆ ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತುಗಳು, ಟ್ವೀಟುಗಳನ್ನು ನೋಡಿದರೂ ಅವು ಅಷ್ಟೇನೂ ಮೋನಚಾಗಿಲ್ಲ. ಆರೆಸ್ಸೆಸ್ ಬಗ್ಗೆ ಇದ್ದ ತೀವ್ರತೆ ಮನರೇಗಾ ಬಗ್ಗೆ ಕಾಣುವುದಿಲ್ಲ.
ಭಟ್ಟಂಗಿ ಕಾಂಗ್ರೆಸಿಗರು!
ತಮ್ಮದು ವ್ಯಕ್ತಿ ಪೂಜೆಯಲ್ಲ, ಪಕ್ಷ ಪೂಜೆ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಒಲಿಸಿಕೊಳ್ಳಲು ಮತಗಳ್ಳತನದ ವಿರುದ್ಧ ಧರಣಿ ಕೂರುತ್ತಾರೆ. ಸೋನಿಯಾ ಗಾಂಧಿ ಅವರ ಆಶೀರ್ವಾದಕ್ಕಾಗಿ ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುತ್ತಾರೆ. ಆದರೆ ಬಡವರ ಬದುಕಿಗಾಗಿ, ಕಾಂಗ್ರೆಸಿಗಾಗಿ (ಕಾಂಗ್ರೆಸ್ ನೇತೃತ್ವದ ಯುಪಿಎ ತಂದಿದ್ದ ಯೋಜನೆ) ಮನರೇಗಾ ಬಗ್ಗೆ ಹೋರಾಟ ಮಾಡುವುದಿಲ್ಲ. ಎಐಸಿಸಿಯ ಘಟಾನುಘಟಿ ನಾಯಕರಿಂದ ಹಿಡಿದು ಅವರ ಬಾಲಗಳು ಮತ್ತು ಚೇಲಾಗಳವರೆಗೆ ಮನರೇಗಾ ಯೋಜನೆಗೆ ಗೋರಿ ಕಟ್ಟಿದ ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಮಾತನಾಡಿರುವ, ಬರೆದಿರುವ ಎಕ್ಸ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಖಾತೆಗಳನ್ನು ಹುಡುಕಾಡಿದರೆ ಸಾವಿರ ಪೋಸ್ಟ್ ಕೂಡ ಸಿಗುವುದಿಲ್ಲ.
ಬೆತ್ತಲಾದ ಬಿಜೆಪಿ
ಹೆಸರು ಬದಲಾಗಿರುವುದು ಗಾಂಧಿಯದ್ದೇಯಾದರೂ ಬೆತ್ತಲಾದದ್ದು ಬಿಜೆಪಿ. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದೇ ಸ್ವಚ್ಛ ಭಾರತ ಅಭಿಯಾನ ಶುರುಮಾಡಿ ಗಾಂಧಿ ತತ್ವಗಳಾದ ಸತ್ಯ, ಅಹಿಂಸೆಗಳ ಬದಲು ಸ್ವಚ್ಛತೆ ಬಗ್ಗೆ ಚರ್ಚೆಯಾಗುವಂತೆ ಮಾಡುವ ಪ್ರಯತ್ನ ನಡೆಸಿದರು. ಯಶಸ್ವಿಯಾಗಲಿಲ್ಲ. ಈಗ ಮನರೇಗಾ ಬದಲು ವಿಬಿ-ಜಿ ರಾಮ್ ಜಿ ಕಾಯ್ದೆ ತಂದು ಗಾಂಧೀಜಿ ಅವರ ಗ್ರಾಮಭಾರತದ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. 2014ರ ಅಕ್ಟೋಬರ್ 2ರಿಂದ 2025ರ ಡಿಸೆಂಬರ್ 18ರವರೆಗೆ (ಲೋಕಸಭೆಯಲ್ಲಿ ಮಸೂದೆ ಪಾಸಾದ ದಿನ) ಇಂಥ ಹಲವು ಪ್ರಯತ್ನಗಳಾಗಿವೆ. ಆಗ ಗಾಂಧಿಯನ್ನು ದೈಹಿಕವಾಗಿ ಕೊಂದಿದ್ದ ಸಂಘಪರಿವಾರ ಈಗ ಅವರ ವಿಚಾರಧಾರೆಗಳನ್ನು ಮರೆಸಲು ಮಸಲತ್ತು ಮಾಡುತ್ತಿದೆೆ. ಆದರೆ ಗಾಂಧಿಗೆ ಸಾವಿಲ್ಲ. ಅದನ್ನು ಸಹಿಸಿಕೊಳ್ಳಲು ಸಂಘಪರಿವಾರದಿಂದ ಸಾಧ್ಯವಾಗುತ್ತಿಲ್ಲ.
ಆಫ್ ದಿ ರೆಕಾರ್ಡ್!
ಇಷ್ಟಕ್ಕೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಖ್ಯವಾಗಿರುವುದು ಮುಖ್ಯಮಂತ್ರಿ ಬದಲಾಗುತ್ತಾರೋ ಇಲ್ಲವೋ ಎನ್ನುವ ವಿಷಯ, ಮನರೇಗಾ ಅಲ್ಲವೇ ಅಲ್ಲ, ಮೊದಲು ಡಾ. ಯತೀಂದ್ರ ‘ಸಿದ್ದರಾಮಯ್ಯ ಅವರೇ ಐದು ವರ್ಷಕ್ಕೂ ಮುಖ್ಯಮಂತ್ರಿ’ ಎಂದರು. ನಂತರ ಔತಣಕೂಟಗಳು, ಮಾತಿನ ಯುದ್ಧಗಳಾದವು. ಕಡೆಗೆ ಅಧಿವೇಶನದ ಅಂತಿಮದಿನ ಸ್ವತಃ ಸಿದ್ದರಾಮಯ್ಯ ಅವರು ‘ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ’ ಎಂದರು.
ಮಗ ಆರಂಭಿಸಿದ ಕದನಕ್ಕೆ ಅಪ್ಪ ಅಲ್ಪವಿರಾಮ ಹಾಕಿದರು. ಪ್ರಶ್ನೆ ಏನೆಂದರೆ
ಸಿದ್ದರಾಮಯ್ಯ ಕಡ್ಡಿ ಮುರಿದಂಗೆ ಮಾತನಾಡಿದ್ದಾರೆಂದರೆ ಅವರಿಗೆ ಹೈಕಮಾಂಡ್ ಕಡೆಯಿಂದ ಭರವಸೆ ಸಿಕ್ಕಿದೆಯಾ? ಅಂತಾ. ಹಾಗೆ ಭರವಸೆ ಸಿಕ್ಕಿದ್ದರೆ, ಮಾತನಾಡುವ ಅಗತ್ಯ ಏನಿತ್ತು? ಅಂತಾ.