ರಾಜ್ಯಕ್ಕೆ ಜೆಡಿಎಸ್ ಏಕೆ ಬೇಕು?
ಜನತಾಪಕ್ಷ ಮತ್ತು ಜನತಾದಳ ರಾಷ್ಟ್ರೀಯ ಪಕ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ನೆಲೆ ಕಂಡುಕೊಂಡದ್ದು ‘ನಮ್ಮ ಆಡಳಿತ ದಿಲ್ಲಿಯಿಂದಲ್ಲ’ ಎಂದು ಹೇಳುವ ಮೂಲಕ. ಅವುಗಳ ಅಸ್ತಿತ್ವ ಉಳಿದಿದ್ದೇ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡುವ ಗುಣ ಅಂತರ್ಗತವಾಗಿದ್ದ ಕಾರಣಕ್ಕಾಗಿ. ಇದೇ ರೀತಿ 1999ರಲ್ಲಿ ಜನತಾದಳ ವಿಭಜನೆಯಾಗಿ ಜನ್ಮತಾಳಿದ ಜನತಾದಳ (ಜಾತ್ಯತೀತ) ಕೂಡ ಪೂರ್ಣ ಪ್ರಮಾಣದ ಪ್ರಾದೇಶಿಕ ಪಕ್ಷವಾಗುವ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ 26 ವರ್ಷಗಳ ಬಳಿಕವೂ ನಿರೀಕ್ಷೆ ನಿಜವಾಗಿಲ್ಲ.
25 ವರ್ಷದಲ್ಲಿ ಆಚರಿಸಿಕೊಳ್ಳಬೇಕಾಗಿದ್ದ ಬೆಳ್ಳಿಹಬ್ಬವನ್ನು ಜೆಡಿಎಸ್ 26 ವರ್ಷಕ್ಕೆ ಆಚರಿಸಿಕೊಂಡಿದೆ. ಇದು ಆ ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯ ಅನುಕೂಲ ಸಿಂಧು ರಾಜಕಾರಣವಲ್ಲದೆ ಬೇರೇನೂ ಅಲ್ಲ. 25 ವರ್ಷ ತುಂಬಿದಾಗ ಅವರಿಗೆ ಬೆಳ್ಳಿಹಬ್ಬ ನೆನಪಾಗಿರಲಿಲ್ಲ ಎಂದಲ್ಲ, ಅವರಿಗೆ ಬೇಕಾಗಿರಲಿಲ್ಲ. ಆಗ ರಾಜ್ಯ ರಾಜಕಾರಣದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯುವ ಬಗ್ಗೆ ಬಲವಾದ ವಿಶ್ವಾಸವಿರಲಿಲ್ಲ. ಈಗ 26 ವರ್ಷ ತುಂಬುವ ಹೊತ್ತಿಗೆ ಬಿಹಾರದ ಫಲಿತಾಂಶ ಭರವಸೆ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮೈತ್ರಿ ಅನಿವಾರ್ಯವೆನಿಸಿದೆ. ದಿಲ್ಲಿ ನಾಯಕತ್ವ ಇನ್ನಷ್ಟು ಹತ್ತಿರವಾಗಿದೆ. ರಾಜ್ಯ ಬಿಜೆಪಿ ನಾಯಕತ್ವ ಹಳ್ಳ ಹಿಡಿದಿದೆ. ಕುಮಾರಸ್ವಾಮಿಗೆ ಕರ್ನಾಟಕದ ಕನಸುಗಳು ಬೀಳಲಾರಂಭಿಸಿವೆ. ಜೆಡಿಎಸ್ ಪಕ್ಷದ ಬೆಳ್ಳಿಹಬ್ಬಕ್ಕೂ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುವುದಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಾಧ್ಯವೇ?
ಬೆಳ್ಳಿಹಬ್ಬದ ಸಂದರ್ಭದಲ್ಲಾದರೂ ಜೆಡಿಎಸ್ ನಾಯಕರು ತಮ್ಮ ಪಕ್ಷಕ್ಕೆ ಇರುವ ಪ್ರಾಮುಖ್ಯತೆ ಏನು ಎನ್ನುವ ಬಗ್ಗೆ ಪರಾಮರ್ಶೆ ನಡೆಸಬೇಕಾಗಿತ್ತು. ಜೆಡಿಎಸ್ ಅನ್ನು ನಿಜವಾದ ಅರ್ಥದಲ್ಲಿ ಪ್ರಾದೇಶಿಕ ಪಕ್ಷವನ್ನಾಗಿ ರೂಪಿಸುವುದು ಹೇಗೆ ಎಂಬ ಚಿಂತನೆ ನಡೆಸಬೇಕಾಗಿತ್ತು. ಆದರೆ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ತಮ್ಮದು ಪ್ರಾದೇಶಿಕ ಪಕ್ಷ ಎಂಬುದೇ ಮರೆತುಹೋಗಿದೆ. ನೆನಪಿದ್ದರೆ ಬೆಳ್ಳಿಹಬ್ಬ ಉದ್ದೇಶಿಸಿ ಮಾತನಾಡಿದ ದೇವೇಗೌಡರು ಪ್ರಾದೇಶಿಕ ಪಕ್ಷದ ಅತ್ಯಗತ್ಯದ ಬಗ್ಗೆ ಹೇಳುವುದನ್ನು ಮರೆಯುತ್ತಿದ್ದರೆ?
ದೇವೇಗೌಡರು ಮಾತನಾಡಿದ್ದು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ. ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸದೆ ಪರೋಕ್ಷವಾಗಿ ಆತ ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಎಚ್.ಡಿ. ರೇವಣ್ಣಗೆ ಕಿರುಕುಳ ನೀಡಲಾಯಿತು ಎನ್ನುವ ಬಗ್ಗೆ ಹಾಗೂ ಇನ್ನೊಬ್ಬ ಮಗ ಕುಮಾರಸ್ವಾಮಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಬಗ್ಗೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇ ತಪ್ಪು, ತನಿಖೆ ಮಾಡಿದ್ದೇ ತಪ್ಪು, ಪರೋಕ್ಷವಾಗಿ ನೆರವಾಗಿದ್ದ ಪುತ್ರನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ದೇವೇಗೌಡರು ಅದಕ್ಕೋಸ್ಕರನಾ ಜೆಡಿಎಸ್ ಪಕ್ಷದ ಬೆಳ್ಳಿಹಬ್ಬವನ್ನು ಆಯೋಜನೆ ಮಾಡಿದ್ದು?
ಒಬ್ಬ ಮಗನ ಬಗ್ಗೆ ಮರುಗಿ ಮತ್ತೊಬ್ಬ ಮಗನನ್ನು ಮುಖ್ಯಮಂತ್ರಿ ಮಾಡುವ ಪಣತೊಡಲೆಂದೇ ಆಯೋಜಿಸಿದ್ದ ಬೆಳ್ಳಿಹಬ್ಬದಲ್ಲಿ ಬಂಗಾರದಂಥ ಆಲೋಚನೆ ನಿರೀಕ್ಷಿಸುವುದು ದುಬಾರಿಯಾದೀತು. ಆದರೆ ಪ್ರಾದೇಶಿಕ ಪಕ್ಷ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಬೇಡವಾಗಿದ್ದರೂ ರಾಜ್ಯಕ್ಕೆ ಬೇಕಾಗಿದೆ. ಪ್ರಾದೇಶಿಕ ಪಕ್ಷ ಏಕೆ ಬೇಕು ಎನ್ನುವುದಕ್ಕೆ ಅಕ್ಕಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಡೆ ನೋಡಬೇಕು. ದೂರದ ಪಶ್ಚಿಮ ಬಂಗಾಳ ಮತ್ತು ಗುಜರಾತ್ ಕಡೆಗೂ ನೋಡಬೇಕು.
ತಮಿಳುನಾಡಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರದ ಮುಖಕ್ಕೆ ಹೊಡೆದಂತೆ ಹೇಳುವ ತಾಕತ್ತು ಇದೆ. ದಿಲ್ಲಿವಾಲಾಗಳು ಹಿಂದಿಯಲ್ಲಿ ಪತ್ರಬರೆದರೆ ತಮಿಳಿನಲ್ಲಿ ಉತ್ತರಿಸುವ ತಂತ್ರಗಾರಿಕೆ ಇದೆ. ರಾಜ್ಯಪಾಲ ಹುದ್ದೆಯೇ ಬೇಡ, ರಾಜ್ಯಪಾಲರೇ ಬೇಡ ಎನ್ನುವ ಎದೆಗಾರಿಕೆ ಇದೆ. ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿದರೆ ಸುಪ್ರೀಂ ಕೋರ್ಟ್ ಕದ ತಟ್ಟುವ ಬದ್ಧತೆ ಇದೆ. ಕೇಂದ್ರ ಸರಕಾರ ಹೇಳಿದ್ದೆಲ್ಲವನ್ನೂ ಪರಾಮರ್ಶೆ ಮಾಡದೆ ಕೇಳಲು ಸಾಧ್ಯವಿಲ್ಲ ಎಂದು ಸೆಟೆದು ನಿಲ್ಲುವ ಧೈರ್ಯವೂ ಇದೆ. ಏಕೆಂದರೆ ಅಲ್ಲಿ ಆಳುತ್ತಿರುವುದು ಪ್ರಾದೇಶಿಕ ಪಕ್ಷಗಳು.
ಆಂಧ್ರದ ವಿಷಯ ನೋಡುವುದಾದರೆ ಇದೇ ಜನವರಿ 19ರಂದು ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಯ (ಎನ್‌ಐಡಿಎಂ) ದಕ್ಷಿಣ ವಲಯದ ಕ್ಯಾಂಪಸ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ ‘‘ಕೇಂದ್ರ ಸರಕಾರ ಕಳೆದ 6 ತಿಂಗಳ ಅವಧಿಯಲ್ಲಿ ಆಂಧ್ರದ ಬೆಳವಣಿಗೆಯ ದೃಷ್ಟಿಯಿಂದ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಿದೆ’’ ಎಂದು ಹೇಳಿದ್ದಾರೆ. 3 ಲಕ್ಷ ಕೋಟಿ ರೂ. ಎಂದರೆ ಕರ್ನಾಟಕದ ಬಜೆಟ್‌ನ ಮುಕ್ಕಾಲು ಭಾಗ. ಈ ಸಲದ ಕೇಂದ್ರ ಬಜೆಟ್ ನಲ್ಲೂ ಕರ್ನಾಟಕಕ್ಕಿಂತ ಜಾಸ್ತಿ ಆಂಧ್ರಕ್ಕೆ ತೆರಿಗೆ ಮತ್ತು ಸುಂಕದ ಪಾಲಿನ ಹಣ ಹಂಚಿಕೆಯಾಗಿದೆ. ಅದು ಏಕೆ ಸಾಧ್ಯವಾಯಿತು ಎಂದರೆ ಅಲ್ಲಿರುವುದು ಟಿಡಿಪಿ ಎಂಬ ಪ್ರಾದೇಶಿಕ ಪಕ್ಷದ ಸರಕಾರ. ಆ ಸರಕಾರದಲ್ಲಿ ಬಿಜೆಪಿಯ ಪಾಲುದಾರಿಕೆಯೂ ಇದೆ, ಆದರೆ ಪ್ರಾಮುಖ್ಯತೆ ಕಮ್ಮಿ.
ಇದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಾದೇಶಿಕ ಅಸ್ಮಿತೆಯ ರಾಜಕೀಯ ಮಾಡುತ್ತಿದ್ದಾರೆ. ಭಾರತ ಎಂಬುದು ಹಲವು ರಾಜ್ಯಗಳ ಒಕ್ಕೂಟ ಎನ್ನುವುದನ್ನೇ ಮರೆತು ದಿಲ್ಲಿ ಆದೇಶಗಳನ್ನು ಪಾಲಿಸಬೇಕೆಂಬ ಕೇಂದ್ರ ಸರಕಾರದ ಸರ್ವಾಧಿಕಾರಿ ನಡೆಯನ್ನು ಅಡಿಗಡಿಗೂ ಖಂಡಿಸುತ್ತಿದ್ದಾರೆ. ಆಪರೇಷನ್ ಕಮಲ, ತೆರಿಗೆ ಹಂಚಿಕೆಗೆ ಕತ್ತರಿ, ಅನುದಾನಗಳ ಕಡಿತ, ರಾಜ್ಯಪಾಲರ ಮೂಲಕ ಕಿರುಕುಳ ಮತ್ತು ಐಟಿ-ಈ.ಡಿ.-ಸಿಬಿಐ ದಾಳಿಗಳೆಲ್ಲವನ್ನೂ ದಿಟ್ಟವಾಗಿ ಎದುರಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಅವರೇ ಹೈಕಮಾಂಡ್. ಮಮತಾ ಬ್ಯಾನರ್ಜಿ ‘ಜಿದ್ದಿ’ಯಾಗಿರುವ ಕಾರಣಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಪಾಲು ಮತ್ತು ಅನುದಾನಗಳ ವಿಷಯದಲ್ಲಿ ಪಶ್ಚಿಮ ಬಂಗಾಳ ನಾಲ್ಕನೇ ಸ್ಥಾನದಲ್ಲಿದೆ (ಉತ್ತರ ಪ್ರದೇಶ ಒಂದು, ಬಿಹಾರ ಎರಡು ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿವೆ).
ಗುಜರಾತ್ ಉದಾಹಣೆಯನ್ನು ಭಿನ್ನ ಆಯಾಮದಲ್ಲಿ ನೋಡಬೇಕು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯಗಳನ್ನು ಗೆಲ್ಲಲು ‘ಡಬಲ್ ಇಂಜಿನ್’ ಎಂಬ ಅಭಿವೃದ್ಧಿಯ ಹುಸಿ ಕಲ್ಪನೆಯನ್ನು ಹೇಳುತ್ತದೆ. ಆದರೆ ಇದೇ ಬಿಜೆಪಿ ತನ್ನ ಪ್ಲಾನ್ ಬಿ (ಪ್ಲಾನ್ ಎ- ಕೋಮುವಾದ) ‘ಅಭಿವೃದ್ಧಿ’ ಬಗ್ಗೆ ಹೇಳಲು ಹೊರಟಿದ್ದು ‘ಗುಜರಾತ್ ಮಾಡೆಲ್’ ಮೂಲಕ. ಗುಜರಾತ್ ಅಭಿವೃದ್ಧಿ ಸಾಧಿಸಿರುವುದು ನಿಜವೇ ಆಗಿದ್ದರೆ ಬಿಜೆಪಿ ಆ ರಾಜ್ಯವನ್ನು ಆಳಿದ ಅವಧಿಯ ಪೈಕಿ ಕೇಂದ್ರದಲ್ಲಿ ಬಹುತೇಕ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಡಬಲ್ ಇಂಜನ್ ಸರಕಾರ ಇದ್ದರೆ ಮಾತ್ರ ಅಭಿವೃದ್ಧಿ ಎನ್ನುವುದು ನಿಜವಾಗಿದ್ದರೆ ‘ಬಿಮಾರು’ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಈಗಲೂ ಇಷ್ಟು ದೈನೇಸಿ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಹಾಗೆಯೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳ ರಾಜ್ಯಗಳು ಇಷ್ಟು ಮುಂದುವರಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ.
ಈ ಉದಾಹರಣೆಗಳು ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷವೊಂದು ಅತ್ಯಗತ್ಯ ಎನ್ನುವುದನ್ನು ಒತ್ತಿ ಒತ್ತಿ ಹೇಳುತ್ತವೆ. ಅದು ಜೆಡಿಎಸ್ ಮೂಲಕ ಸಾಧ್ಯವಾಗಬೇಕು ಅಥವಾ ಹೊಸ ಪಕ್ಷವೊಂದು ಹುಟ್ಟಿ ಬೆಳೆಯಬೇಕು. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಯೋಗ ಹಿಂದಿನಿಂದಲೂ ಯಶಸ್ವಿಯಾಗಿಲ್ಲ. ಡಿ. ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಅವರಂಥ ಜನನಾಯಕರಿಂದಲೇ ಸಾಧ್ಯವಾಗಲಿಲ್ಲ. ಅಖಿಲ ಭಾರತ ಪ್ರಗತಿಪರ ಜನತಾದಳ ಹುಟ್ಟುಹಾಕಿದ್ದ ಸಿದ್ದರಾಮಯ್ಯ ಅದನ್ನು ಬೆಳೆಸುವ ಧೈರ್ಯ ತೋರದೆ ಕಾಂಗ್ರೆಸ್ ಪಾಲಾಗಿಬಿಟ್ಟರು. ಆತುರಗಾರ ಬಿ.ಎಸ್. ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟುವ ಮತ್ತು ಕೆಡವುವ ಎರಡೂ ವಿಷಯದಲ್ಲೂ ಅವಸರವನ್ನೇ ಮಾಡಿದರು. ಇದರಿಂದಾಗಿ ಇರುವ ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು.
ಜೆಡಿಎಸ್ ಪಕ್ಷವೇ ಸುಧಾರಣೆಯಾಗಬೇಕು ಎಂದರೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಸುಧಾರಿಸಬೇಕು. ದೇವೇಗೌಡರಿಗೆ ಈಗಲೂ ಮಗನನ್ನು ಸಿಎಂ ಮಾಡುವುದೇ ಮುಖ್ಯವಾಗುವುದಾದರೆ, ಕುಮಾರಸ್ವಾಮಿಗೆ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡುವುದೇ ಪ್ರಾಮುಖ್ಯವಾದರೆ ಜೆಡಿಎಸ್ ಕುಟುಂಬದ ಪಕ್ಷ ಎಂಬುದರಾಚೆಗೆ ಎಂದೂ ಬೆಳೆಯದು. ಇದಕ್ಕೂ ಮಿಗಿಲಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ತಮ್ಮದು ಪ್ರಾದೇಶಿಕ ಪಕ್ಷ ಎನ್ನುವುದನ್ನೇ ಮರೆತಿರುವುದು ಇನ್ನೂ ಹೆಚ್ಚು ಅಪಾಯಕಾರಿ.
ಜೆಡಿಎಸ್ ಬಿಜೆಪಿಯ ಪಾಲುದಾರ ಪಕ್ಷ ಮಾತ್ರ, ಪಾಲುದಾರನಾದ ಮಾತ್ರಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ತಮ್ಮ ಅಸ್ತಿತ್ವವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಗಳೂ ಇರುವುದಿಲ್ಲ. ಕಾಲಾಳುವಿನಂತೆ ವರ್ತಿಸುವ ದರ್ದು ಖಂಡಿತಕ್ಕೂ ಇರುವುದಿಲ್ಲ. ಆದರೂ ಜೆಡಿಎಸ್ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಘೋರ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡುತ್ತಿಲ್ಲ.
ಕೇಂದ್ರ ಸರಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಸಿದ್ದರಾಮಯ್ಯ ತಮ್ಮ ‘ಘಿ’ ಖಾತೆಯಲ್ಲಿ ನೀಡಿರುವ ವಿವರಗಳ ಪ್ರಕಾರ 14ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ. 4.71ರಷ್ಟು ತೆರಿಗೆ ಪಾಲು ನೀಡುವಂತೆ ಶಿಫಾರಸು ಮಾಡಿತ್ತು. 15ನೇ ಹಣಕಾಸು ಆಯೋಗ ಇದನ್ನು ಶೇ. 3.64ರಷ್ಟಕ್ಕೆ ಇಳಿಸಿತು. ಇದರಿಂದ ಕರ್ನಾಟಕಕ್ಕೆ ಸುಮಾರು 80 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. 80 ಸಾವಿರ ಕೋಟಿ ರೂ. ಅಂದರೆ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಬಹುತೇಕ ಎರಡು ವರ್ಷಕ್ಕೆ ಬೇಕಾಗುವ ಹಣ. ಈಗ 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ನಿಗದಿಯಾಗಿರುವ ತೆರಿಗೆ ಪಾಲು ಶೇ. 4.1ರಷ್ಟು. ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ಪಾಲನ್ನು ಶೇ. 5ಕ್ಕೆ ಏರಿಸುವಂತೆ ಆಗ್ರಹಿಸಿದ್ದರು. ಕರ್ನಾಟಕದ ವಾದ ಕೂಡ ಅದೇ ಆಗಿತ್ತು. ಆದರೀಗ ಕರ್ನಾಟಕ ಶೇ. 4.1ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಏಕೆಂದರೆ ಇಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಇದ್ದೂ ಸತ್ತಂತಿದೆ.
ಕೇಂದ್ರ ಸರಕಾರ ಕರ್ನಾಟಕದಿಂದ ತೆರಿಗೆ, ಸೆಸ್ ಮತ್ತಿತರ ರೂಪದಲ್ಲಿ ವರ್ಷಕ್ಕೆ ಸುಮಾರು 4.5 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ರೂ.ವರೆಗೆ ಸಂಗ್ರಹ ಮಾಡುತ್ತಿದೆ. ಇಷ್ಟು ಹಣ ಪಡೆದೂ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಇದರ ಬಗ್ಗೆ ರಾಜ್ಯ ಸರಕಾರ ಮಾತ್ರ ಹೋರಾಟ ನಡೆಸಬೇಕೇ? ರಾಜ್ಯದ ಸಂಸದರಿಗೆ ಜವಾಬ್ದಾರಿ ಇಲ್ಲವೇ? ಅವರಿಗಿಂತಲೂ ಜಾಸ್ತಿ ಹೊಣೆಗಾರಿಕೆ ಇರುವುದು ತಮ್ಮದು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ನಾಯಕರಿಗೆ. ಒಂದೋ ಅವರು ಕರ್ನಾಟಕದ ಇಂಥ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕು. ಇಲ್ಲದಿದ್ದರೆ ತಮ್ಮದು ಕುಟುಂಬದ ಪಕ್ಷ ಎಂದು ಅಧಿಕೃತವಾಗಿ ಘೋಷಿಸಿಬಿಡಬೇಕು.
2028ಕ್ಕೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ನಿರ್ಣಾಯಕ ಆಗಲೂಬಹುದು. ಆಗದೆಯೂ ಇರಬಹುದು. ಆದರೆ 2004ರಲ್ಲಿ 58, 2008ರಲ್ಲಿ 28, 2013ರಲ್ಲಿ 40 ಮತ್ತು 2018ರಲ್ಲಿ 37 ಸ್ಥಾನ ಗೆದ್ದಿದ್ದ ಜೆಡಿಎಸ್ 2023ರಲ್ಲಿ 19 ಸ್ಥಾನಕ್ಕೆ ಕುಸಿದಿತ್ತು. 19 ಸ್ಥಾನಕ್ಕೆ ಕುಸಿದ ಪಕ್ಷ ಸಿಂಗಲ್ ಡಿಜಿಟ್‌ಗೆ ಕುಸಿಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? 2004ರಲ್ಲಿ 58 ಸ್ಥಾನ ಗೆಲ್ಲಲು ದೇವೇಗೌಡ ಮತ್ತು ಸಿದ್ದರಾಮಯ್ಯ ಎಂಬ ಪ್ರಬಲ ಜೋಡಿ ಜೆಡಿಎಸ್ ಬಂಡಿ ಎಳೆದಿತ್ತು. ಮುಂದೆ ಕುಮಾರಸ್ವಾಮಿ ಜೊತೆ ಅಥವಾ ನಿಖಿಲ್ ಜೊತೆ ಜೆಡಿಎಸ್ ರಥ ಎಳೆಯುವವರು ಯಾರು? ಸಿಂಗಲ್ ಡಿಜಿಟ್‌ಗೆ ಕುಸಿದರೆ ಪಕ್ಷ ಮತ್ತೆ ಪುಟಿದೇಳುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗಾದರೆ, ಅದು ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಆಗುವ ನಷ್ಟ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ. ಇದರ ಬಗ್ಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಯೋಚಿಸಬೇಕು. ಇಲ್ಲದಿದ್ದರೆ ಕಾಲವೇ ಪ್ರಾದೇಶಿಕ ಪಕ್ಷದ ಹುಟ್ಟಿಗೆ ಕಾರಣವಾಗಬೇಕು.
ಆಫ್ ದಿ ರೆಕಾರ್ಡ್!
ಸಚಿವ ಸಂಪುಟ ಪುನರ್ ರಚನೆ ಯಾವಾಗ ಆಗುತ್ತದೆ ಎನ್ನುವ ಸುಳಿವೇ ಇಲ್ಲ. ಆದರೆ ಪುನರ್ ರಚನೆ ಆದಾಗ ಕೆ.ಎನ್. ರಾಜಣ್ಣಗೆ ಜಾಗ ಸಿಗದಿದ್ದರೆ ಅವರು ಕಾಂಗ್ರೆಸ್ ಪಕ್ಷದಿಂದಲೇ ಜಾಗ ಖಾಲಿ ಮಾಡುತ್ತಾರೆ ಎನ್ನುವ ಪುಕಾರು ಎದ್ದಿದೆ. ಈಗಾಗಲೇ ಕೆ.ಎನ್. ರಾಜಣ್ಣಗೆ ದೇವೇಗೌಡ ಫೋನ್ ಮಾಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಬೇರೆ ಪಕ್ಷಗಳಲ್ಲಿ ಮುನಿದವರನ್ನು ದೇವೇಗೌಡ ಮಾತನಾಡಿಸುವುದು ಹೊಸದಲ್ಲ.