×
Ad

ಹೈಕಮಾಂಡಿಗೆ ಸಿದ್ದು ಬಗ್ಗೆ ಭಯವೇಕೆ?

Update: 2025-10-06 09:44 IST

ಮುಖ್ಯಮಂತ್ರಿ ಬದಲಾವಣೆ ವಿಷಯ ಮತ್ತೆ ಚರ್ಚೆಯಾಗುತ್ತಿದೆ. ಡಿ.ಕೆ. ಶಿವಕುಮಾರ್ ಆಪ್ತರಿಗೆ, ಆರಾಧಕರಿಗೆ, ಕುಲಬಾಂಧವರಿಗೆ ‘ತಮ್ಮ ನಾಯಕ ಮುಖ್ಯಮಂತ್ರಿ ಆಗಬೇಕು’ ಎಂಬ ಮಹದಾಸೆ ಮೊಳಕೆಯೊಡೆದಿದೆ. ಕೆಲವರ ಮನದಿಂಗಿತ ಬಹಿರಂಗವಾಗಿದೆ. ಕೆಲವರ ಕಲರವ ಕ್ಷೀಣ ದನಿಯಲ್ಲಿ ಕೇಳಿಸುತ್ತಿದೆ. ಇನ್ನೂ ಕೆಲವರು ಆಸೆಯನ್ನು ಅದುಮಿಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಹೈಕಮಾಂಡಿಗೆ ಇಕ್ಕಟ್ಟು.

2023ರಲ್ಲಿ ಸರಕಾರ ಬಂದಾಗಲೇ ಹೈಕಮಾಂಡ್ ಇಂಥ ಬಿಕ್ಕಟ್ಟಿಗೆ ಸಿಲುಕಿತ್ತು. ಜನನಾಯಕನಾದ ಸಿದ್ದರಾಮಯ್ಯ ಅಥವಾ ಸಂಘಟಕ ಡಿ.ಕೆ. ಶಿವಕುಮಾರ್ ಎಂಬ ಜಿಜ್ಞಾಸೆಗೆ ಬಿದ್ದಿತ್ತು. ಕೆಲವೊಮ್ಮೆ ಏನೇ ಗುಣಾಕಾರ, ಭಾಗಾಕಾರ ಹಾಕಿದರೂ ಬಿಡಿಸಲು ಸಾಧ್ಯವಾಗದಿದ್ದ ಸಂಕೀರ್ಣ ಸಮಸ್ಯೆಗಳು ಸಣ್ಣದೊಂದು ಸಾಮಾನ್ಯ ಪ್ರಜ್ಞೆಯಿಂದ ಬಗೆಹರಿದುಬಿಡುತ್ತವೆ. ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಎಂಬ ಹಲವು ಆಯಾಮದ ಗೊಂದಲ ಬಗೆಹರಿದದ್ದು ಕೂಡ ಇಂಥ ಕಾಮನ್‌ಸೆನ್ಸ್ಸ್‌ನಿಂದ ಇರಬಹುದೇನೋ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದರು.

ಆ ಅನುಭವಿ ರಾಜಕಾರಣಿ ಸಾಕ್ಷಿ ಸಮೇತ ವಿವರಿಸಿರಲಿಲ್ಲ, ಒಂದು ಅಂದಾಜಿನ ಮೇಲೆ ಹೇಳಿದ್ದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ, ಕೇಳಿದ ಇಲಾಖೆ ಅಥವಾ ಇಲಾಖೆಗಳು, ಪಕ್ಷದ ಸಾರಥ್ಯ ಎಲ್ಲವನ್ನೂ ನೀಡಬಹುದು. ಆದರೆ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಸಿದ್ದರಾಮಯ್ಯ ಅವರಿಗೆ ಏನನ್ನು ನೀಡಬೇಕು? ರಾಷ್ಟ್ರೀಯ ಮಟ್ಟದಲ್ಲಿ ಕುರ್ಚಿ ಕೊಡಲು ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ. ಮಂತ್ರಿ ಸ್ಥಾನ ಒಪ್ಪಿಕೊಳ್ಳಲು ಸಿದ್ದರಾಮಯ್ಯ ಅವರು ಜಗದೀಶ್ ಶೆಟ್ಟರ್ ಅಲ್ಲ. ಅದರಿಂದಾಗಿ ಹೈಕಮಾಂಡಿಗೆ ಹೆಚ್ಚು ಆಯ್ಕೆಗಳಿರಲಿಲ್ಲ. ಇದ್ದದ್ದು ಎರಡೇ ಆಯ್ಕೆಗಳು. ಒಂದು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು. ಎರಡನೆಯದು ಸಿದ್ದರಾಮಯ್ಯ ಅವರಿಗೆ ರಾಜಕೀಯ ಸನ್ಯಾಸ ದೀಕ್ಷೆ ಕೊಡುವುದು.

ಅಂದಾಜು ಶೇಕಡಾ 7ರಷ್ಟಿರುವ ಕುರುಬರು ಮತ್ತು ಶೇಕಡಾ 12ರಷ್ಟಿರುವ ಮುಸ್ಲಿಮರು ಸಿದ್ದರಾಮಯ್ಯ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಉಳಿದೆಲ್ಲಾ ಅಹಿಂದ ಜಾತಿಗಳಿಂದ ಕನಿಷ್ಠ ಶೇಕಡಾ 5-6 ರಷ್ಟು ಜನ ಬೆಂಬಲಿಸುತ್ತಾರೆ ಎಂದುಕೊಂಡರೂ ಸಿದ್ದರಾಮಯ್ಯ ಅವರಿಗೆ ಸಿಗುವ ಬೆಂಬಲ ಶೇಕಡಾ 24-25ರಷ್ಟು. ಈ ಪರಿ ಜನ ಬೆಂಬಲ ಇರುವ ನಾಯಕ ರಾಜ್ಯದಲ್ಲಿ ಇನ್ನೊಬ್ಬನಿಲ್ಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಇಂಥ ನಾಯಕನನ್ನು ಮುಖ್ಯಮಂತ್ರಿ ಮಾಡದೆ ಕಾಂಗ್ರೆಸ್ ಹೈಕಮಾಂಡಿಗೆ ಬೇರೆ ದಾರಿ ಇರಲಿಲ್ಲ. ‘ನೀವು ಸುಮ್ಮನೆ ಮನೆಯಲ್ಲಿ ಕೂತುಬಿಡಿ’ ಎಂದು ಹೇಳುವ ಧೈರ್ಯವೂ ಇರಲಿಲ್ಲ.

ಧೈರ್ಯ ಏಕಿರಲಿಲ್ಲ ಎಂದರೆ, ಸಿದ್ದರಾಮಯ್ಯ ಕಾರಣಕ್ಕಲ್ಲ. ವೀರೇಂದ್ರ ಪಾಟೀಲರ ಕಾರಣಕ್ಕೆ. ವೀರೇಂದ್ರ ಪಾಟೀಲ್ ಮತ್ತು ಸಿದ್ದರಾಮಯ್ಯ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಎರಡೆರಡು ಬಾರಿ ಮುಖ್ಯಮಂತ್ರಿಯಾದವರು. ರಾಜ್ಯಾದ್ಯಂತ ಪಕ್ಷವನ್ನು ಅಧಿಕಾರಕ್ಕೆ ತರುವ ನಾಯಕತ್ವ ಹೊಂದಿದ್ದರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಏದುಸಿರು ಬಿಟ್ಟವರು. 1989ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಶೇಕಡಾ 43.77ರಷ್ಟು ಮತ ಪ್ರಮಾಣದೊಂದಿಗೆ 179 ಸ್ಥಾನಗಳನ್ನು ಗೆದ್ದಿತ್ತು. ಆದರೆ ಆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ಗೆದ್ದ ಅಂತರ ಮೂರು ಸಾವಿರ ಮತಗಳಿಗೂ ಕಮ್ಮಿ.

ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಲಿಯವರೆಗೆ ಇದ್ದ ಎಲ್ಲಾ ದಾಖಲೆಗಳನ್ನು ಮುರಿದು ಅಭೂತಪೂರ್ವ ವಿಜಯ ಸಾಧಿಸಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾಮಾರಿತ್ತು. ಒಂದೇ ವರ್ಷದ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಬದಲಿಸಿತ್ತು. ಬದಲಿಸಲು ಸಕಾರಣವಿತ್ತು. ವೀರೇಂದ್ರ ಪಾಟೀಲ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ಅವರಿಂದ ಸಾಧ್ಯವೇ ಇರಲಿಲ್ಲ. ಆದರೆ ಬದಲಾಯಿಸಲು ಮಾಡಿಕೊಂಡ ಆಯ್ಕೆಯ ಮಾದರಿ ಸರಿಯಾಗಿರಲಿಲ್ಲ. ಒಂದೊಮ್ಮೆ ವೀರೇಂದ್ರ ಪಾಟೀಲ್ ಅವರಿಗೆ ಗೌರವಯುತ ಬೀಳ್ಕೊಡುಗೆ ಕೊಟ್ಟಿದ್ದರೆ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಅಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ.

ಆಗ ಉಂಟಾದ ರಾಜಕೀಯ ಬಿಕ್ಕಟ್ಟಿನ ಪರಿಣಾಮ ವೀರೇಂದ್ರ ಪಾಟೀಲ್ ನಂತರ ಬಂದ ಜನನಾಯಕ ಎಸ್. ಬಂಗಾರಪ್ಪ ಅವರಿಂದಲೂ ಅವಧಿ ಪೂರೈಸಲು ಸಾಧ್ಯವಾಗಲಿಲ್ಲ. ಅದಾದ ಮೇಲೆ ಬಂದ ಎಂ. ವೀರಪ್ಪ ಮೊಯ್ಲಿ ಸಿಇಟಿ ಜಾರಿ, ಮೀಸಲಾತಿ ಮಿತಿ ಹೆಚ್ಚಳ ಸೇರಿದಂತೆ ಹಲವು ಒಳ್ಳೆಯ ಕೆಲಸಗಳಿಗೆ ಕೈ ಹಾಕಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಲ ತಂದುಕೊಡಬೇಕೆಂದು ಪ್ರಬಲ ಒಕ್ಕಲಿಗ ಸಮುದಾಯವನ್ನು ಹಿಂದುಳಿದ ಜಾತಿ ಎಂದು ತೀರ್ಮಾನಿಸಿದ್ದರು. ಆದರೂ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಕೇವಲ 34 ಸ್ಥಾನಗಳನ್ನು. ಏಕೆಂದರೆ ನಾಲ್ಕು ವರ್ಷ ಕಳೆದಿದ್ದರೂ ಕಾಂಗ್ರೆಸ್ ಮೇಲೆ ಲಿಂಗಾಯತರ ಸಿಟ್ಟು ಕಮ್ಮಿಯಾಗಿರಲಿಲ್ಲ. ಅಂದು ಕಾಂಗ್ರೆಸ್ ಪಕ್ಷದಿಂದ ಇಡಿಯಾಗಿ ಹಿಂದೆ ಸರಿದ ಲಿಂಗಾಯತ ಮತಗಳು ಮೂರು ದಶಕದ ಬಳಿಕವೂ ಮತ್ತದೇ ಪ್ರಮಾಣದಲ್ಲಿ ವಾಪಸ್ ಆಗುವ ಸುಳಿವುಗಳಿಲ್ಲ.

ಈ ಇತಿಹಾಸ ಕಾಂಗ್ರೆಸ್ ಹೈಕಮಾಂಡ್ ಅನ್ನು ಆಗಾಗ ದುಃಸ್ವಪ್ನದಂತೆ ಕಾಡುತ್ತಿದೆ. ಹಿಂದೆ 2023ರಲ್ಲಿ ಕಾಡಿತ್ತು. ಈಗ 2025ರಲ್ಲೂ ಕಾಡುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಮರೆತರೂ ಅಧಿಕಾರ ರಾಜಕೀಯದ ಆಟದಲ್ಲಿ ನೆನಪಿಸುವವರು ಇದ್ದೇ ಇರುತ್ತಾರೆ. ಇದನ್ನೇ ಸಿದ್ದರಾಮಯ್ಯ ಅವರ ಆಪ್ತ ಸಚಿವರು ಆಗಾಗ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾಗೆ ಹೇಳುತ್ತಿರುವುದು. ಮೊನ್ನೆ ಮೊನ್ನೆಯೂ ಯಾರೋ ಒಬ್ಬರು ನೆನಪಿಸಿದ್ದಾರೆ ಎನ್ನುವ ಸುದ್ದಿ. ಅದರಿಂದಾಗಿ ಅವರು ಎಷ್ಟೇ ವೇಗದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಬಗ್ಗೆ ಹೆಜ್ಜೆ ಇಟ್ಟರೂ ಇತಿಹಾಸ ನೆನಪಾಗಿ ಅದಕ್ಕಿಂತಲೂ ವೇಗವಾಗಿ ಹಿಂದೆ ಸರಿಯುತ್ತಿದ್ದಾರೆ.

ಈಗಲೂ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇರುವುದು ಅವೇ ಹಳೆಯ ಎರಡು ಆಯ್ಕೆಗಳು. ಒಂದು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನವೊಂದನ್ನು ಬಿಟ್ಟು ಕೇಳಿದ ಉಳಿದೆಲ್ಲದನ್ನೂ ದಯಪಾಲಿಸುವುದು. ಎರಡು, ಸಿದ್ದರಾಮಯ್ಯ ಅವರನ್ನು ‘ಸುಮ್ಮನಿದ್ದು ಬಿಡಿ’ ಎಂದು ಹೇಳುವುದು. ಹಾಗೆ ಹೇಳುವ ಧೈರ್ಯ ಹೈಕಮಾಂಡಿಗೆ ಈಗಲೂ ಇದ್ದಂತಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರನ್ನು ಮನೆಯಲ್ಲಿ ಕೂರಿಸಿ 2028ರ ಚುನಾವಣೆಗೆ ಹೋಗುವ ಧೈರ್ಯವಿರಬೇಕಲ್ಲ?

ಸಿದ್ದರಾಮಯ್ಯ ನಂತರ ಕುರುಬರು ಇಡಿಯಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರಾ? ಸಿದ್ದರಾಮಯ್ಯ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನ್ನು ಬೆಂಬಲಿಸದೆ ಬೇರೆ ದಾರಿ ಏನಿದೆ? ಎನ್ನುವ ಪ್ರಶ್ನೆಗಳಿವೆ. ಸಿದ್ದರಾಮಯ್ಯ ನಂತರ ಕುರುಬರ ಮತಗಳು ಚದುರುವುದಿಲ್ಲ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಸಿದ್ದರಾಮಯ್ಯ ಅವರಿಂದ ಅಧಿಕಾರವನ್ನು ‘ಕಿತ್ತುಕೊಂಡರೂ’ ಅವುಗಳು ಕಾಂಗ್ರೆಸ್ ಪಕ್ಷವನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತವೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಅಲ್ಪಸಂಖ್ಯಾತರು ಹಿಂದೆಯೂ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಮುಂದೆಯೂ ಬೆಂಬಲಿಸುತ್ತಾರೆ. ಆದರೆ ಜೆಡಿಎಸ್ ಕೂಡ ಇಲ್ಲದಿರುವ ಈ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಲ್ಲೇ ತಮ್ಮ ನಾಯಕತ್ವ ಕಂಡುಕೊಂಡು ದಂಡಿದಂಡಿಯಾಗಿ ಮತಮಳೆ ಸುರಿಸುತ್ತಿದ್ದವು. ಸಿದ್ದರಾಮಯ್ಯ ನಂತರ ಆ ತೀವ್ರತೆ ಕಮ್ಮಿಯಾಗುವ ಸಾಧ್ಯತೆ ಇರುತ್ತದೆ.

ಅಹಿಂದ ಪೈಕಿ ಉಳಿದ ಸಮುದಾಯಗಳ ವಿಷಯದಲ್ಲೂ ಅವು ಸಿದ್ದರಾಮಯ್ಯ ಬರುವ ಮುನ್ನವೂ ಕಾಂಗ್ರೆಸ್ ಪರ ಇದ್ದವು. ಆದರೆ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತು ಕಾಂಗ್ರೆಸ್ ಎಂಬ ಸಂಘಟನೆ ಸೇರಿ ದೊಡ್ಡ ಶಕ್ತಿಯಾಗಿದ್ದವು. ಸಿದ್ದರಾಮಯ್ಯ ನಂತರ ಒಟ್ಟಾರೆ ಅಹಿಂದ ವರ್ಗದಲ್ಲೂ ನಿರ್ವಾತ ಸೃಷ್ಟಿಯಾಗುತ್ತದೆ. ಅದು ನಿವಾರಣೆಯಾಗಬೇಕಾದರೆ ಹೊಸ ನಾಯಕತ್ವ ಹೊರಹೊಮ್ಮಬೇಕು. ಸಿದ್ದರಾಮಯ್ಯ ಕೂಡ ತನ್ನ ನಂತರ ತನ್ನನ್ನು ನಂಬಿದವರ ಕತೆ ಏನು? ಮತ್ತು ಎರಡೆರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಕೊಟ್ಟ ಕಾಂಗ್ರೆಸಿಗೆ ಏನು ಕೊಡುಗೆ ನೀಡಬೇಕು? ಎಂಬ ಬಗ್ಗೆ ಯೋಚನೆ ಮಾಡಬೇಕು. ಅಂಥ ಕುರುಹುಗಳು ಕಾಣಿಸುತ್ತಿಲ್ಲ.

ಇದಕ್ಕೂ ಮಿಗಿಲಾಗಿ ಸದ್ಯ ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೂ ಕಷ್ಟ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸಿಗೆ ಇನ್ನೂ ಕಷ್ಟ. ಸಿದ್ದರಾಮಯ್ಯ ಅವರು ಮನೆ ಸೇರಿಬಿಟ್ಟರೆ ಯಡಿಯೂರಪ್ಪ ಇಲ್ಲದ ಬಿಜೆಪಿಯ ಪರಿಸ್ಥಿತಿ ಕಾಂಗ್ರೆಸಿಗೂ ಬಂದೊದಗಬಹುದು. ಅದರಿಂದಾಗಿಯೇ ಹೈಕಮಾಂಡ್ ಧೈರ್ಯ ಮಾಡುತ್ತಿಲ್ಲ. ಧೈರ್ಯ ಮಾಡದೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

► ಸಿದ್ದರಾಮಯ್ಯಗೆ ಬಿಹಾರ ವರ

ಸಿದ್ದರಾಮಯ್ಯ ಅದೃಷ್ಟ ನಂಬದ ಅದೃಷ್ಟವಂತ ರಾಜಕಾರಣಿ. ಸರಕಾರ ಎರಡೂವರೆ ವರ್ಷ ತುಂಬುವ ವೇಳೆಯಲ್ಲೇ ಬಿಹಾರ ವಿಧಾನಸಭಾ ಚುನಾವಣೆಯ ಘೋಷಣೆಯಾಗುತ್ತಿದೆ. ಬಿಹಾರದ ಚುನಾವಣೆಯನ್ನು ಪ್ರಬಲರು ಮತ್ತು ಹಿಂದುಳಿದವರ ನಡುವಿನ ಚುನಾವಣೆ ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ರಾಹುಲ್ ಗಾಂಧಿ ಕೂಡ ಅಲ್ಲಿ ಹಿಂದುಳಿದವರ ಬಗ್ಗೆ, ಅವರ ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಹಾರ ಚುನಾವಣೆಯ ಹಿನ್ನೆಲೆಯಲ್ಲೇ ಕೆಲವೇ ದಿನಗಳ ಹಿಂದೆ ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಿಂದುಳಿದವರ ಬೃಹತ್ ಸಮಾವೇಶ ಮಾಡಿತ್ತು. ಎಐಸಿಸಿಯ ಹಿಂದುಳಿದವರ ಸಲಹಾ ಸಮಿತಿಯ ಮೊದಲ ಸಭೆಯನ್ನು ಕರ್ನಾಟಕದಲ್ಲಿ ಮಾಡಲಾಗಿತ್ತು. ಅದು ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆದಿತ್ತು. ಇದರಿಂದಾಗಿ ಬಿಹಾರ ಚುನಾವಣೆಯ ಹೊತ್ತಿನಲ್ಲಿ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ಧೈರ್ಯವನ್ನಲ್ಲ, ಭಂಡಧೈರ್ಯವನ್ನು ಮಾಡಬೇಕಾಗುತ್ತದೆ. ಮಾಡುತ್ತದಾ ಎನ್ನುವುದು ಪ್ರಶ್ನೆ.

► ಅನವಶ್ಯಕ ಅಮಿತ್ ಶಾ ಗೊಂದಲ

ಡಿ.ಕೆ. ಶಿವಕುಮಾರ್ ಕೆಲಸದ ಬಗ್ಗೆ ಕಾಂಗ್ರೆಸ್ ಹೈಕಮಾಂಡಿಗೆ ತೃಪ್ತಿ ಇದೆ. ಅದೇ ಕಾರಣಕ್ಕೆ ಅವರು ಎಸಗುವ ತಪ್ಪುಗಳನ್ನು ಕ್ಷಮಿಸುತ್ತಾ ಬಂದಿದೆ. ಆದರೆ ಒಂದು ಹಂತ ಮುಂದಕ್ಕೆ ಹೋಗಿ ಕುರ್ಚಿಕೊಡುವ ವಿಷಯ ಪ್ರಸ್ತಾವವಾಗಬೇಕು ಎನ್ನುವಷ್ಟರಲ್ಲಿ ಡಿ.ಕೆ. ಶಿವಕುಮಾರ್ ಕಡೆಯಿಂದ ಹೊಸ ಹೊಸ ಪ್ರಮಾದಗಳು ಜನ್ಮ ತೆಳೆಯುತ್ತಿವೆ. ಇವರ ಮಾತನ್ನು ಕೇಳಿಯೇ ಕೆ.ಎನ್. ರಾಜಣ್ಣಗೆ ಗೇಟ್ ಪಾಸ್ ಕೊಡಲಾಗಿತ್ತು. ಇವರಿಗೆ ‘ಗೆಟ್ ಇನ್’ ಎನ್ನಬೇಕು ಎನ್ನುವಷ್ಟರಲ್ಲಿ ಸದನದಲ್ಲಿ ಸದಾವತ್ಸಲೆ ಎಂದು ಹಾಡಿ ಕ್ಷಮೆ ಕೇಳುವ ಪರಿಸ್ಥಿತಿ ತಂದುಕೊಂಡರು. ಇದೀಗ ಮೊದಲೇ ಕಷ್ಟ, ಮುನಿಸಿಕೊಂಡರೆ ಇನ್ನೂ ಕಷ್ಟ ಎನ್ನುವಂತಾಗಿದೆ ಡಿ.ಕೆ. ಶಿವಕುಮಾರ್ ಪರಿಸ್ಥಿತಿ. ಯಾರು ಸೋರಿಕೆ ಮಾಡಿದ್ದಾರೋ? ಅಥವಾ ಯಾರು ಇಂಥ ಸುದ್ದಿಯನ್ನು ಸೃಷ್ಟಿ ಮಾಡಿದ್ದಾರೋ? ಒಟ್ಟಿನಲ್ಲಿ ಅಮಿತ್ ಶಾ ಭೇಟಿಯಾಗಿದ್ದರು ಎನ್ನುವ ಸುದ್ದಿ ಸದ್ಯಕ್ಕಂತೂ ಡಿ.ಕೆ. ಶಿವಕುಮಾರ್ ಅವರಿಗೆ ಡ್ಯಾಮೇಜ್ ಮಾಡಿದೆ ಎನ್ನುತ್ತವೆ ದಿಲ್ಲಿ ಮೂಲಗಳು.

► ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆಯಾ?

ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಬಯಸುವವರು, ಈಗ ಆಗುವುದಿಲ್ಲ ಎಂದು ಗೊತ್ತಿರುವವರು ಇಡೀ ಪ್ರಕ್ರಿಯೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ ಎಂಬ ಕತೆ ಕಟ್ಟುತ್ತಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ದಿನ ಸಿ.ಎಂ. ಆಗಿದ್ದ ದಿವಂಗತ ದೇವರಾಜ ಅರಸು ಹೆಸರಿನಲ್ಲಿರುವ ದಾಖಲೆಯನ್ನು ಮುರಿಯಲು ಸಿದ್ದರಾಮಯ್ಯ ಅವರಿಗೆ ಸಮಯಾವಕಾಶ ಕೊಡಲಾಗುತ್ತದೆ. ಆನಂತರ ಅವರು ಬೇರೆ ಸಬೂಬು ಹೇಳದೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು ಎನ್ನುವ ಕಾರಣ ನೀಡುತ್ತಿದ್ದಾರೆ. ರಾಜಕೀಯದಲ್ಲಿ ಇಷ್ಟು ಮಸಾಲ ಇರುವುದು ಮಾಮೂಲಿ.

► ಕೆಪಿಸಿಸಿಯಲ್ಲಿ ಜಿಸಿ ಹವಾ!

ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಎರಡೆರಡು ಪ್ರಮುಖ ಖಾತೆಗಳು. ಉಸ್ತುವಾರಿಯಾಗಿರುವ ಬೆಂಗಳೂರಿನ ನಾನಾ ನಮೂನೆಯ ಖ್ಯಾತೆಗಳು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಗಳು. ಹಲವು ರೀತಿಯ ಉದ್ಯಮದ ಹೊರೆಗಳು. ಹಾಗಾಗಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್‌ಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರಂತೆ. ಈಗ ಕೆಪಿಸಿಸಿಯಲ್ಲಿ ಜಿಸಿಯದ್ದೇ ಹವಾ. ಅದರಲ್ಲೂ ಇತ್ತೀಚೆಗೆ ಆದ ನಿಗಮ-ಮಂಡಳಿಗಳ ನೇಮಕ ವಿಷಯದಲ್ಲೂ ಜಿಸಿ ಹೇಳಿದ್ದೇ ಅಂತಿಮ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಯಲ್ಲಿ ಎಲ್ಲದಕ್ಕೂ ಜೀ ಜೀ ಎನ್ನುವ ಹಾಗೆ ಕಾಂಗ್ರೆಸಿನಲ್ಲಿ ಎಲ್ಲದಕ್ಕೂ ಜಿಸಿ ಜಿಸಿ ಎನ್ನುವಂತಾಗಿದೆಯಂತೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News