×
Ad

ಪಾಕಿಸ್ತಾನ: ಬಲೋಚಿಸ್ತಾನ ಜೈಲಿನ ಮೇಲೆ ಉಗ್ರರ ದಾಳಿ

Update: 2024-01-30 21:41 IST

Photo: @talhaahmad967

ಇಸ್ಲಮಾಬಾದ್ : ಬಲೋಚಿಸ್ತಾನ ಪ್ರಾಂತದಲ್ಲಿನ ಭಾರೀ ಭದ್ರತೆಯ ಸೆಂಟ್ರಲ್ ಮ್ಯಾಕ್ ಜೈಲಿನ ಮೇಲೆ ನಡೆದ ಮೂರು ಸಂಘಟಿತ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಲಾಗಿದ್ದು ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.

ರಾಕೆಟ್ ದಾಳಿಯಲ್ಲಿ ಜೈಲಿನ ಮುಖ್ಯದ್ವಾರ ಹಾಗೂ ಕಂಪೌಂಡ್ ಗೋಡೆಗೆ ಹಾನಿಯಾಗಿದೆ. ಬಳಿಕ ಜೈಲಿನತ್ತ ಉಗ್ರರು ಗುಂಡಿನ ದಾಳಿ ನಡೆಸಿದ್ದು ಭದ್ರತಾ ಪಡೆ ಪ್ರತಿದಾಳಿ ನಡೆಸಿದೆ. ಹಲವು ಗಂಟೆಗಳ ವರೆಗೆ ಗುಂಡಿನ ಚಕಮಕಿ ಮುಂದುವರಿದಿದ್ದು ಐವರು ಉಗ್ರರು,   ಇಬ್ಬರು ಪೊಲೀಸರು ಮೃತಪಟ್ಟಿದ್ದರೆ ಟ್ರಕ್ ಚಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.ಅತ್ಯಾಧುನಿಕ ಆಯುಧಗಳಿಂದ ಉಗ್ರರು ದಾಳಿ ನಡೆಸಿದ್ದು ನಮ್ಮ ಭದ್ರತಾ ಪಡೆಗಳ ಪ್ರತಿದಾಳಿಯ ಬಳಿಕ ಉಗ್ರರು ಪಲಾಯನ ಮಾಡಿದ್ದಾರೆ. ಈಗ ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಕಾಬಂದಿ ನಡೆಸಿದ್ದು ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಲೋಚಿಸ್ತಾನದ ಮಾಹಿತಿ ಸಚಿವರು ಹೇಳಿದ್ದಾರೆ.

ಸಮೀಪದ ಪರ್ವತ ಪ್ರದೇಶಗಳಿಂದ ಕನಿಷ್ಟ 15 ರಾಕೆಟ್ಗಳನ್ನು ಜೈಲಿನತ್ತ ಹಾರಿಸಲಾಗಿದ್ದು ಜೈಲಿನ ಬಳಿಮ್ಯಾಕ್ ನಗರದ ಹಲವೆಡೆ ರಾಕೆಟ್ಗಳು ಅಪ್ಪಳಿಸಿವೆ. ಉಗ್ರರು ಭದ್ರತಾ ಪಡೆಯ ಶಿಬಿರದ ಮೇಲೆ ದಾಳಿ ನಡೆಸಿದ್ದು ಮ್ಯಾಕ್ ರೈಲ್ವೇ ನಿಲ್ದಾಣವನ್ನೂ ಪ್ರವೇಶಿಸಿದ್ದರು.

 800ಕ್ಕೂ ಅಧಿಕ ಕೈದಿಗಳಿರುವ ಸೆಂಟ್ರಲ್ ಮ್ಯಾಕ್ ಜೈಲಿನ ಮೇಲೆ ರಾಕೆಟ್ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ ದಾಳಿಯನ್ನು ನಿಷೇಧಿತ ಬಲೋಚಿಸ್ತಾನ ಲಿಬರೇಷನ್ ಆರ್ಮಿ(ಬಿಎಲ್)ಯೊಂದಿಗೆ ಸಂಪರ್ಕವಿರುವ ಉಗ್ರರು ನಡೆಸಿದ್ದಾರೆಂದು ಶಂಕಿಸಲಾಗಿದ್ದು, ಜೈಲಿನಲ್ಲಿರುವ ಕೈದಿಗಳನ್ನು ಬಿಡಿಸಿಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಲೋಚಿಸ್ತಾನ ಪ್ರಾಂತ ಹಾಗೂ ಇರಾನ್ ಸಿಸ್ತಾನ್-ಬಲೋಚಿಸ್ತಾನ ಪ್ರಾಂತದಲ್ಲಿ ಬಲೋಚ್ ರಾಷ್ಟ್ರೀಯವಾದಿಗಳಿಂದ ದೀರ್ಘಾವಧಿಯಿಂದ ಬಂಡಾಯ ಚಟುವಟಿಕೆ ನಡೆಯುತ್ತಿದೆ. ಬಂಡಾಯವನ್ನು ಹತ್ತಿಕ್ಕಲಾಗಿದೆ ಎಂದು ಸರಕಾರ ಹೇಳಿದ್ದರೂ ಪ್ರಾಂತದಲ್ಲಿ ನಿರಂತರ ಹಿಂಸಾಚಾರ, ಸಂಘರ್ಷ ವರದಿಯಾಗುತ್ತಿದೆ

 ಅರೆಸೇನಾ ಪಡೆ ಕಚೇರಿಯ ಮೇಲೆಯೂ ದಾಳಿ

ಪಾಕಿಸ್ತಾನದ ಕ್ವೆಟಾ ಕಣಿವೆಯ ನೈಋತ್ಯಕ್ಕೆ 60 ಕಿ.ಮೀ ದೂರದಲ್ಲಿರುವ ಮ್ಯಾಕ್ ಜೈಲಿಗೆ ರಾಕೆಟ್ ದಾಳಿ ನಡೆಸುವ ಜತೆಗೆ ಉಗ್ರರು `ಫ್ರಾಂಟಿಯರ್ ಕಾಪ್ರ್ಸ್' ಕೇಂದ್ರ ಕಚೇರಿಯ ಮೇಲೆಯೂ ದಾಳಿ ನಡೆಸಿದ್ದಾರೆ. ರಾಕೆಟ್ ದಾಳಿಯಲ್ಲಿ ಜೈಲಿನ ಒಂದು ಬದಿಯ ಗೋಡೆಗೆ ಆಂಶಿಕ ಹಾನಿಯಾಗಿದೆ.

ಬಲೋಚ್ ಲಿಬರೇಷನ್ ಆರ್ಮಿ(ಬಿಎಲ್) ಮಜೀದ್ ಬ್ರಿಗೇಡ್  ದಾಳಿಯ ಹೊಣೆ ವಹಿಸಿಕೊಂಡಿದೆ ಮತ್ತು ಮತ್ತೊಂದು ಬಣವೂ ದಾಳಿಗೆ ನೆರವಾಗಿದೆ ಎಂದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News