ಗ್ರೇಟ್ ನಿಕೊಬಾರ್ ದ್ವೀಪ ಯೋಜನೆ: ಬಂದರೋ ಬಂದರು ‘ಆನಿ’ಬಂದರು...
‘ಅಭಿವೃದ್ಧಿ’ ಆಗಲಿರುವ ಜಾಗದಲ್ಲಿ ಒಟ್ಟು 18.65 ಲಕ್ಷ ಪಾರಂಪರಿಕ ಮರಗಳಿದ್ದು, ಅವುಗಳಲ್ಲಿ 7.11 ಲಕ್ಷ ಮರಗಳನ್ನು ಕಡಿಯಲಿದ್ದಾರೆ. ಬಂದರು ನಿರ್ಮಾಣ ಆಗಲಿರುವ ಗಲಾಥಿಯಾ ಕೊಲ್ಲಿ ಭಾಗವನ್ನು ಈಗಾಗಲೇ ಡಿನೋಟಿಫೈ ಮಾಡಲಾಗಿದ್ದು, 2022ರಲ್ಲಿ ಮೊದಲ ಹಂತದ ಅರಣ್ಯ ನಾಶವೂ ಆಗಿಬಿಟ್ಟಿದೆ.
ಪಾರಂಪರಿಕ ತಾಣ ಎಂದು UNESCO ಗುರುತಿಸಿರುವ ನಿಕೊಬಾರ್ ದ್ವೀಪದಲ್ಲಿ 79,000 ಕೋಟಿ ರೂ. ವೆಚ್ಚ ಮಾಡಿ, ಅಲ್ಲಿನ ಜನರಿನ್ನೂ ತಲುಪಿರದ ಕಾಡುಗಳ 7.11 ಲಕ್ಷ ಅಮೂಲ್ಯ ಮರಗಳನ್ನು ಕಡಿದು, ಅಲ್ಲಿ ಬಂದರು-ವಿಮಾನ ನಿಲ್ದಾಣ ಮತ್ತಿತರ ಮೂಲಸೌಕರ್ಯಗಳನ್ನು ರೂಪಿಸುವ ಮತ್ತು ಹಾಗೆ ಸರಕಾರಿ ವೆಚ್ಚದಲ್ಲಿ ರೂಪಿಸಿದ ಮೂಲ ಸೌಕರ್ಯಗಳನ್ನು ‘ಆನಿಪಾಲು’ ಮಾಡುವ ಬೃಹತ್ ಯೋಜನೆ ಸಿದ್ಧಗೊಂಡಿದೆ. ಎಲ್ಲ ಕಾನೂನು ಅಡ್ಡಿ-ತಡೆಗಳನ್ನು ನಿರ್ಲಕ್ಷಿಸಿ, ಯೋಜನೆ ಅನುಷ್ಠಾನಕ್ಕೆ ಭಾರತ ಸರಕಾರ ತುರ್ತು ತೋರಿಸುತ್ತಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಅಳಿವಿನ ಅಂಚಿನಲ್ಲಿರುವ ಸಂರಕ್ಷಿತ ಜೀವಿಗಳಾದ ಅಪರೂಪದ ಲೆದರ್ ಬ್ಯಾಕ್ ಆಮೆಗಳು (Luths), ನಿಕೊಬಾರ್ ಮೆಗಾಪೋಡ್ ಹಕ್ಕಿಗಳ ನೆಲೆ ಆಗಿರುವ ನಿಕೊಬಾರ್ ದ್ವೀಪಗಳಲ್ಲಿ 20,608 ಹವಳದ ಗುಡ್ಡೆಗಳು ಇವೆ. 200ಕ್ಕೂ ಮಿಕ್ಕಿ ಬಗೆಯ ಹಕ್ಕಿಗಳು, ವಿಶಿಷ್ಟ ಮೀನುಗಳು ಅಲ್ಲಿ ವಾಸವಿವೆ. ಎಲ್ಲಕ್ಕಿಂತ ಮುಖ್ಯವಾಗಿ ‘ನಿರ್ದಿಷ್ಟವಾಗಿ ಅಳಿವಿನಂಚಿನಲ್ಲಿರುವ ಬುಡಕಟ್ಟು ನಿವಾಸಿಗಳು’ (PVTG) ಎಂದು ಗುರುತಿಸಲಾಗಿರುವ ಶೋಂಪೆನ್‌ಗಳು ಅಲ್ಲಿನ ದಟ್ಟ ಅರಣ್ಯದಲ್ಲಿ ನಾಗರಿಕ ಸಮಾಜದಿಂದ ದೂರದಲ್ಲಿ ವಾಸವಿದ್ದಾರೆ. ಅವರ ಸಂಖ್ಯೆ 300-400ಕ್ಕಿಂತ ಹೆಚ್ಚಿಲ್ಲ. ಇಂತಹ ವಿಶಿಷ್ಟ ದ್ವೀಪದ ಶೇ. 85 ಭಾಗವನ್ನು 1989ರಲ್ಲಿ ಬಯೋ ಸ್ಪಿಯರ್ ರಿಸರ್ವ್ ಎಂದು ಘೋಷಿಸಲಾಗಿತ್ತು. 2013ರಲ್ಲಿ UNESCO ತನ್ನ ಮ್ಯಾನ್ ಆಂಡ್ ಬಯೊಸ್ಪಿಯರ್ ಪ್ರೋಗ್ರಾಂನ ಭಾಗ ಅದು ಎಂದು ಪ್ರಕಟಿಸಿತ್ತು. ಅಲ್ಲಿ ನಿಕೊಬಾರೀ ಬುಡಕಟ್ಟಿಗೆ ಸೇರಿದ ಸುಮಾರು 27,000 ಜನ ಕೂಡ ಪರಿಸರದ ಜೊತೆ ಸಮನ್ವಯದಿಂದ ಬದುಕುತ್ತಿದ್ದಾರೆ.
ಜಗತ್ತಿನ ಅತ್ಯಂತ ಅಪರೂಪದ ಇಂತಹದೊಂದು ಶ್ರೀಮಂತ ಜೀವವೈವಿಧ್ಯ ತಾಣದ ಸುಮಾರು 160 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈಗ ಭಾರತ ಸರಕಾರಕ್ಕೆ ವ್ಯಾಪಾರದ ಅವಕಾಶ ಕಾಣಿಸಿದೆ. ಹಾಗಾಗಿ, 79,000 ಕೋಟಿ ರೂ. ವೆಚ್ಚದಲ್ಲಿ ಸರಕು ಕಂಟೇನರುಗಳನ್ನು ಹಡಗಿನಿಂದ ಹಡಗಿಗೆ ವರ್ಗಾಯಿಸಬಲ್ಲ ಅನುಕೂಲ ಇರುವ 14.2 ಮಿಲಿಯ TEU ಸಾಮರ್ಥ್ಯದ (ಒಂದು TEU = 20 ಅಡಿ ಗಾತ್ರಕ್ಕೆ ಸಮನಾದ ಒಂದು ಹಡಗು ಘಟಕ) ಒಂದು ಟ್ರಾನ್ಸ್‌ಶಿಪ್‌ಮೆಂಟ್ ಬಂದರು, ಒಂದು ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ, 450 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ/ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಹಾಗೂ 40,000 ಎಕರೆ ಭೂಭಾಗದಲ್ಲಿ ಜನವಾಸಕ್ಕೆ ಟೌನ್‌ಶಿಪ್ ರಚಿಸಲು ಭಾರತ ಸರಕಾರ ಉದ್ದೇಶಿಸಿದೆ. ಅಲ್ಲಿ ಬಂದರು 2028ರ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಿದರೆ, 2040ರ ಹೊತ್ತಿಗೆ ಅಲ್ಲಿಂದ ವಾರ್ಷಿಕ 30,000 ಕೋಟಿ ರೂ. ವರಮಾನ ಹುಟ್ಟಲಿದೆ ಮತ್ತು 50,000 ಮಂದಿಗೆ ಉದ್ಯೋಗ ದೊರೆಯಲಿದೆ ಎಂಬುದು ಸರಕಾರದ ಯೋಚನೆ. 1,045 ಚದರ ಕಿ.ಮೀ. ಗಾತ್ರದ ಗ್ರೇಟ್ ನಿಕೊಬಾರ್ ದ್ವೀಪದ ವ್ಯಾಪ್ತಿಯಲ್ಲಿ ಈಗ 166.10 ಚ.ಕಿ.ಮೀ. ಜಾಗ ‘ಡೆವಲಪ್‌ಮೇಂಟ್’ ಕಾಣಲಿದೆ. ಅದರ ಪೈಕಿ, ಬುಡಕಟ್ಟು ಮೀಸಲು ಪ್ರದೇಶ ಎಂದು ಗುರುತಾಗಿರುವ 84.10 ಚದರ ಕಿ.ಮೀ. ಕೂಡ ಸೇರಿದೆ.
ನೀತಿ ಆಯೋಗದಲ್ಲಿ ಹುಟ್ಟಿಕೊಂಡ ಈ ಯೋಚನೆಗೆ 2021ರಲ್ಲೇ ನರೇಂದ್ರ ಮೋದಿ ಸರಕಾರದ ಸಚಿವ ಸಂಪುಟ ಅನುಮತಿ ನೀಡಿಯಾಗಿದೆ. 2023ರಲ್ಲಿ ಈ ಯೋಜನೆಗೆ ಆಸಕ್ತಿ ವ್ಯಕ್ತಪಡಿಸುವಂತೆ ಸಾರ್ವಜನಿಕವಾಗಿ ಕೋರಿಕೊಂಡ ಹಿನ್ನೆಲೆಯಲ್ಲಿ ಅದಾನಿ ಬಳಗ, ಎSW ಇನ್‌ಫ್ರಾ, ಎಸ್ಸಾರ್ ಪೋರ್ಟ್ಸ್ ಸೇರಿ ದಂತೆ 10 ಕಂಪೆನಿಗಳು ಆಸಕ್ತಿ ವ್ಯಕ್ತಪಡಿಸಿವೆ. ಇದೇ ಸೆಪ್ಟಂಬರ್ 12ರಂದು ಸ್ವತಃ ಅರಣ್ಯ ಮತ್ತು ಪರಿಸರ ಸಚಿವ ಭುಪೀಂದರ್ ಯಾದವ್ ಅವರು ಈ ಬಗ್ಗೆ ಬರೆದಿದ್ದ ಪತ್ರಿಕಾ ಲೇಖನವನ್ನು ಸ್ವತಃ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಈ ಯೋಜನೆಯಲ್ಲಿ ಆರ್ಥಿಕತೆ-ಪರಿಸರ (Economy-Ecology) ಪರಸ್ಪರ ಪೂರಕವಾಗಿ ವರ್ತಿಸಲಿವೆ ಎಂದು ಹೇಳಿ ಯೋಜನೆಯನ್ನು ಪ್ರಾಸಬದ್ಧವಾಗಿ ಸಮರ್ಥಿಸಿಕೊಂಡಿದ್ದರು. ‘ಅಭಿವೃದ್ಧಿ’ ಆಗಲಿರುವ ಜಾಗದಲ್ಲಿ ಒಟ್ಟು 18.65 ಲಕ್ಷ ಪಾರಂಪರಿಕ ಮರಗಳಿದ್ದು, ಅವುಗಳಲ್ಲಿ 7.11 ಲಕ್ಷ ಮರಗಳನ್ನು ಕಡಿಯಲಿದ್ದಾರೆ. ಬಂದರು ನಿರ್ಮಾಣ ಆಗಲಿರುವ ಗಲಾಥಿಯಾ ಕೊಲ್ಲಿ ಭಾಗವನ್ನು ಈಗಾಗಲೇ ಡಿನೋಟಿಫೈ ಮಾಡಲಾಗಿದ್ದು, 2022ರಲ್ಲಿ ಮೊದಲ ಹಂತದ ಅರಣ್ಯ ನಾಶವೂ ಆಗಿಬಿಟ್ಟಿದೆ.
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಸಂಯೋಜಿತ ಅಭಿವೃದ್ಧಿ ನಿಗಮ (ANIIDCO) ಈ ಯೋಜನೆಯ ಪೌರೋಹಿತ್ಯ ವಹಿಸಿದ್ದು, ದ್ವೀಪದ ಆಡಳಿತವು ಬುಡಕಟ್ಟು ಮೀಸಲು ಸ್ಥಳವನ್ನು ಡೀನೋಟಿಫೈ ಮಾಡಿ, ಕಂದಾಯ ಭೂಮಿ ಎಂದು ರೀನೋಟಿಫೈ ಮಾಡುವುದಕ್ಕೆ ಸಿದ್ಧತೆಗಳಲ್ಲಿದೆ. ಅರಣ್ಯ ಹಕ್ಕುಗಳ ಕಾಯ್ದೆ-2006ರ ಪ್ರಕಾರ ಬುಡಕಟ್ಟುಗಳವರ ಹಕ್ಕುಗಳ ಸೂಕ್ತ ಸಂರಕ್ಷಣೆ ಆಗದೇ ಡೀನೋಟಿಫೈ ಮಾಡುವಂತಿಲ್ಲ. ಸರಕಾರ ಈಗಾಗಲೇ ಆ ಕೆಲಸ ಆಗಿದೆ ಎಂದು, ಈ ವಿಚಾರದಲ್ಲಿ ಕೋಲ್ಕತಾ ಹೈಕೋರ್ಟ್‌ನಲ್ಲಿ ದಾಖಲಾಗಿರುವ ದಾವೆಯೊಂದರ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಿಳಿಸಿದೆ. ಆದಿವಾಸಿ ಕಲ್ಯಾಣಕ್ಕಾಗಿ ಸಮಗ್ರ ಯೋಜನೆ ಮುಂದಿನ ತಿಂಗಳ ಹೊತ್ತಿಗೆ ಸಿದ್ಧಗೊಳ್ಳಲಿದೆ ಎಂದು ಅಲ್ಲಿನ ಆಡಳಿತ ಹೇಳಿಕೊಳ್ಳುತ್ತಿದೆ. ಮೊದಲ ಹಂತಕ್ಕೆ ಈಗಾಗಲೇ ಪರಿಸರ ಪರಿಣಾಮ ವಿಶ್ಲೇಷಣೆ (EIA) ಪೂರ್ಣಗೊಂಡಿದ್ದು, ಪರಿಸರ ನಿರ್ವಹಣಾ ಯೋಜನೆ (EMP) ಸಿದ್ಧವಾಗಿದೆ, ಅದರ ಅನುಷ್ಠಾನಕ್ಕೆ 81.55ಕೋಟಿ ರೂ. ಬಿಡುಗಡೆ ಆಗಿದೆ ಎನ್ನುತ್ತಿದೆ ಸರಕಾರ.
ಈ ಬಗ್ಗೆ ಹಸಿರು ನ್ಯಾಯಪೀಠದಲ್ಲಿ (NGT) ದೂರು ಸಲ್ಲಿಸಿರುವ ಪರಿಸರ ಕಾಳಜಿ ಇರುವವರು, ಯೋಜನೆಯಲ್ಲಿ CRZ 2019 ನಿಯಮಗಳ ಉಲ್ಲಂಘನೆ ಆಗಿದೆ, EIA ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸರಕಾರದ ಪರವಾಗಿ ವಾದ ಮಂಡಿಸಿರುವ ಅಡಿಷನಲ್ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ಅವರು, ಈ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ದಶಕಗಳ ಅಧ್ಯಯನ ಮಾಡಿದ್ದೇವೆ. ZSI, BSI, SACON, WII ಮೊದಲಾದ ಪರಿಣತ ಸಂಸ್ಥೆಗಳ ಅಭಿಪ್ರಾಯ ಪಡೆದಿದ್ದೇವೆ. ಬಂದರಿನಿಂದಾಗಿ ಹಾನಿಗೀಡಾಗುವ ಹವಳದ ಗುಡ್ಡೆಗಳಲ್ಲಿ 16,000 ಗುಡ್ಡೆಗಳನ್ನು ಸ್ಥಳಾಂತರಿಸುತ್ತೇವೆ. ಉಳಿದ 4,500ರ ಮೇಲೆ ಆಡಳಿತ ನಿಗಾ ಇರಿಸಲಿದೆ. ಮೆಗಾಪೋಡ್ ಹಕ್ಕಿಗಳ 51 ಸಕ್ರಿಯ ಗೂಡುಗಳಲ್ಲಿ 40 ನಾಶ ಆಗಲಿವೆ. ಉಳಿದದ್ದನ್ನು ಸಂರಕ್ಷಿಸುತ್ತೇವೆ. ಯಾವುದೇ ಬುಡಕಟ್ಟು ನಿವಾಸಿಗಳನ್ನು ಸ್ಥಳಾಂತರಿಸಲಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಮುಂದಿನ ವಿಚಾರಣೆ ನ. 07ಕ್ಕೆ (ನಿನ್ನೆ) ಮುಂದೂಡಿಕೆ ಆಗಿದೆ. ಹಾನಿ ಆಗಿರುವ ಅರಣ್ಯ ಭೂಮಿಗೆ ಪರಿಹಾರವಾಗಿ ದೂರದ ಹರ್ಯಾಣದಲ್ಲಿ 97.30 ಚ.ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಲಾಗುವುದು. ಇದು ನಾಶವಾಗಿರುವ ಅರಣ್ಯಕ್ಕೆ 1:10 ಅನುಪಾತ ಗಾತ್ರದ್ದು ಎಂದೂ ಸರಕಾರ ಹೇಳಿಕೊಂಡಿದೆ!
ಸರಕಾರ ಇಷ್ಟೊಂದು ಆಸಕ್ತಿ ವಹಿಸಿ ಮುಂದಡಿ ಇಟ್ಟಿರುವ ಈ ಯೋಜನೆ ನಿಜಕ್ಕೂ ದೇಶಹಿತದ್ದೇ?
ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ, ಆನಿಗಳನ್ನು ಹೊರತುಪಡಿಸಿ ಇತರರಿಗೆ ಆಶಾದಾಯಕವಾದದ್ದು ಏನೂ ಕಾಣಿಸುತ್ತಿಲ್ಲ. ಸರಕಾರವು ತನ್ನ ಈ ಯೋಜನೆ ಶ್ರೀಲಂಕಾ, ಸಿಂಗಾಪುರದ ಟ್ರಾನ್ಸ್‌ಶಿಪ್‌ಮೆಂಟ್ ಬಂದರುಗಳಿಗೆ ಪರ್ಯಾಯ ಆಗಲಿದೆ, ದೇಶ ರಕ್ಷಣೆಯ ದೃಷ್ಟಿಯಿಂದಲೂ ಅನುಕೂಲಕರ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅವು ದೇಶದ ಭೂಭಾಗಕ್ಕೆ ಅಂಟಿಕೊಂಡಿರುವ ಬಂದರುಗಳು. ನಿಕೊಬಾರ್ ದ್ವೀಪವು ಭಾರತ ತಟದಿಂದ 1,000 ಕಿ.ಮೀ.ಗೂ ಮಿಕ್ಕಿ ದೂರದಲ್ಲಿದೆ. ಅಲ್ಲಿ ಬಂದರು ನಿರ್ಮಾಣಕ್ಕೂ ಭಾರತದಿಂದ ನಿರ್ಮಾಣ ಸರಕುಗಳನ್ನು ಸಾಗಿಸಬೇಕೆಂದರೆ, 3-4 ಪಟ್ಟು ಹೆಚ್ಚು ಖರ್ಚು ಬೀಳಲಿದೆ. ಅದಾನಿ ಬಳಗದ ಕೈಯಲ್ಲೇ ಇರುವ ಕೇರಳ ಸರಕಾರದ ವಿಳಿಂಗಂ ಟ್ರಾನ್ಸ್‌ಶಿಪ್‌ಮೆಂಟ್ ಬಂದರು ಕೈಬಿಟ್ಟು ಯಾಕೆ ನಿಕೊಬಾರಿನತ್ತ ಮನಸ್ಸು ಹೊರಳಿದೆ ಎಂಬುದಕ್ಕೂ ಸ್ಪಷ್ಟ ಉತ್ತರ ಇಲ್ಲ. ನಿಕೊಬಾರ್ ದ್ವೀಪ ಜಗತ್ತಿನ ಶೇ. 35 ಸಾಗರ ಸರಕುಗಳು ಸಾಗಿಹೋಗುವ ಮಲಾಕಾ ಸ್ಟ್ರೇಟ್ ಶಿಪ್ಪಿಂಗ್ ಚಾನೆಲ್‌ನಿಂದ ಕೇವಲ 40 ನಾಟಿಕಲ್ ಮೈಲಿ ದೂರದಲ್ಲಿದೆ ಎಂಬ ಉತ್ತರ ಸಿಗುತ್ತಿದೆ.
ವಾಸ್ತವದಲ್ಲಿ, ನಿಕೊಬಾರ್ ದ್ವೀಪವು ಭೂಕಂಪ, ಸುನಾಮಿ, ಪದೇಪದೇ ಚಂಡಮಾರುತಗಳಿಗೆ ತುತ್ತಾಗುವ ಸ್ಥಳ. ಇಲ್ಲಿ ಸೇನಾನೆಲೆ ಸ್ಥಾಪನೆ ಆದರೆ, ಅದು ಚೀನಾ, QUAD, ASEAN ದೇಶಗಳ ಜೊತೆ ಹೊಸ ಜಿಯೊಪೊಲಿಟಿಕಲ್ ಸಮೀಕರಣಗಳಿಗೆ ಹಾದಿ ಮಾಡಿಕೊಡಬಹುದು. ನೆಟ್ ಝೀರೊ ಸಾಧಿಸುವಲ್ಲೂ ಈ ಯೋಜನೆ ಪರಿಸರ ನಾಶದ ಮೂಲಕ ವ್ಯಾಪಕ ಹಿನ್ನೆಡೆ ಉಂಟು ಮಾಡಲಿದೆ. ಇಷ್ಟೆಲ್ಲ ರಗಳೆಗಳಿದ್ದರೂ ಸರಕಾರಕ್ಕೆ ಈ ಯೋಜನೆ ತುರ್ತಿನದಾಗಿರುವುದು ಕುತೂಹಲಕರ.
ಕಾಮರಾಜರ್ ಪೋರ್ಟ್ (KPL) ಈಗಾಗಲೇ ಬಂದರು ಯೋಜನೆಯ ಸವಿವರ ಯೋಜನಾ ವರದಿ (DPR) ಸಿದ್ಧಪಡಿಸಿದ್ದು, ಶಿಪ್ಪಿಂಗ್ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ. ಅದನ್ನು ಸಚಿವಾಲಯ ಅನುಮೋದಿಸಿದ ತಕ್ಷಣ, PPP ಮಾದರಿಯಲ್ಲಿ ಯೋಜನೆ ಆರಂಭಕ್ಕೆ ಟೆಂಡರ್ ಕರೆಯಲಾಗುತ್ತಿದೆ ಎಂದು KPL ಮುಖ್ಯಸ್ಥರು ಹೇಳಿದ್ದು ಪತ್ರಿಕೆಗಳಲ್ಲಿ ವರದಿ ಆಗಿದೆ. ಒಟ್ಟಿನಲ್ಲಿ, ಇದು ನಿರ್ದಿಷ್ಟ ಆನಿಗಳ ಅನುಕೂಲಕ್ಕಾಗಿ ದೇಶದ ಪರಿಸರವನ್ನು ಬಲಿಕೊಡುವ ಯೋಜನೆ ಎಂದು ಮೇಲುನೋಟಕ್ಕೇ ಅನ್ನಿಸುತ್ತಿದೆ.