ಹುಚ್ಚಾಟಕ್ಕೂ ‘ಲೆಕ್ಕಾಚಾರ’ ಹಾಕಿಕೊಂಡಿರುವ ಅಧ್ಯಕ್ಷ ಟ್ರಂಪ್
ಐಟಿ ಕಂಪೆನಿಗಳ ಧಣಿಗಳು, ಮಾಜಿ ಧಣಿಗಳೆಲ್ಲ ಇಲ್ಲಿ ದಿನ ಬೆಳಗಾದರೆ ನೈತಿಕತೆಯ ಪ್ರವಚನ ನೀಡುತ್ತಾ, ತಾವು ಪಡೆದ ಸಬ್ಸಿಡಿ ಸವಲತ್ತುಗಳನ್ನೆಲ್ಲ ಮರೆತು, ತಮ್ಮ ಸೇವಾರಫ್ತಿನ ಕಾರಣಕ್ಕೇ ದೇಶ ಉದ್ಧಾರ ಆಗಿದೆ ಎಂಬ ಗಾತ್ರಕ್ಕೆ ದೇಶದ ಸರಕಾರಗಳನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುತ್ತಾ ಇರುವುದಕ್ಕೆ ಹೋಲಿಸಿದರೆ ಅಧ್ಯಕ್ಷ ಟ್ರಂಪ್ ಅವರ ಲೆಕ್ಕಾಚಾರದ ಹುಚ್ಚಾಟವೇ ಹೆಚ್ಚು ಪ್ರಬುದ್ಧ ಅನ್ನಿಸುತ್ತದೆ.
H1-B ವೀಸಾ ದುರ್ಬಳಕೆ ಮಾಡಿಕೊಂಡ ಶಂಕೆ ಎದ್ದಿರುವ 175 ಪ್ರಕರಣಗಳಲ್ಲಿ ಅಮೆರಿಕದ ಕಾರ್ಮಿಕ ಇಲಾಖೆಯು ತನಿಖೆ ನಡೆಸಲು ತೀರ್ಮಾನಿಸಿದೆ. ಅಮೆರಿಕದ ಪ್ರಜೆಗಳಿಗೆ ಅಲ್ಲಿನ ಉದ್ಯೋಗಗಳಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ ಸೆಪ್ಟಂಬರ್ 19ರಂದು ‘ಪ್ರಾಜೆಕ್ಟ್ ಫೈರ್ ವಾಲ್’ ಎಂಬ ಹೆಸರಿನ ಬಲವಾದ ನಿಯಂತ್ರಣ ಕ್ರಮವನ್ನು ಪ್ರಕಟಿಸಿದ್ದಾರೆ. ಅದಕ್ಕೆ ಪೂರಕ ಕ್ರಮವಾಗಿ ಈ ವೀಸಾ ದುರ್ಬಳಕೆಯ ತನಿಖೆಯನ್ನು ಆರಂಭಿಸಲಾಗಿದೆ. ನವೆಂಬರ್ 07ರಂದು ಅಮೆರಿಕದ ಕಾರ್ಮಿಕ ಇಲಾಖೆ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ (@USDOL) ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದೆ. ಅಲ್ಲಿನ ಫೆಡರಲ್ ಸರಕಾರದ ಕಾರ್ಮಿಕ ಇಲಾಖೆಯು ತಮ್ಮ ದೇಶದೊಳಗೆ ವಲಸೆ ಕಾರ್ಮಿಕ ನೀತಿಗಳನ್ನು ಉಲ್ಲಂಘಿಸಿರುವ ಕಂಪನಿಗಳು, ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮಾತ್ರವಲ್ಲದೇ H1-B ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಬರುತ್ತಿರುವ ವಲಸೆ ಕಾರ್ಮಿಕರ ನಿಯಂತ್ರಣಕ್ಕೆ ಬಿಗಿ ತೀರ್ಮಾನಗಳನ್ನು ತೆಗೆದುಕೊಳ್ಳಲಾರಂಭಿಸಿದೆ.
ಅಮೆರಿಕವು ಸದ್ಯ ಪ್ರತೀ ವರ್ಷ 85,000 H1-B ವೀಸಾಗಳನ್ನು ನೀಡುತ್ತಿದೆ. ಅದರಲ್ಲಿ 65,000 ಸಾಮಾನ್ಯ ವೀಸಾಗಳಾದರೆ, 20,000 ವೀಸಾಗಳು ಅಮೆರಿಕದಲ್ಲಿ ಸ್ನಾತಕೋತ್ತರ ಅಥವಾ ಅದಕ್ಕಿಂತ ಉನ್ನತ ದರ್ಜೆಯ ಶಿಕ್ಷಣ ಹೊಂದಿರುವವರಿಗೆ ಮೀಸಲು. ಅಮೆರಿಕದ H1-B ವೀಸಾ ಪಡೆಯುವವರಲ್ಲಿ ಸಿಂಹಪಾಲು (ಶೇ. 71) ಭಾರತೀಯರದು. 2024ರ ವೇಳೆಗೆ, ಒಟ್ಟು 2,83,397 ಭಾರತೀಯರಿಗೆ H1-B ವೀಸಾ ದೊರೆತಿದೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ಟೆಕ್ ಕಂಪೆನಿಗಳಾದ ಅಮೆಝಾನ್, ಗೂಗಲ್, ಮೈಕ್ರೊಸಾಫ್ಟ್, ಆ್ಯಪಲ್ ಅಲ್ಲದೆ ಭಾರತೀಯ ಐಟಿ ಸೇವಾ ಕಂಪೆನಿಗಳಾದ ಇನ್ಫೋಸಿಸ್, TCH, HCL, ವಿಪ್ರೊ ಇತ್ಯಾದಿಗಳೂ ಈ ವೀಸಾ ಬಳಸುತ್ತವೆ. ತಾತ್ವಿಕವಾಗಿ, H1-B ವೀಸಾಗಳೆಂದರೆ, ಅಮೆರಿಕದಲ್ಲಿ ಸುಲಭ ಲಭ್ಯವಿಲ್ಲದ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (STEM) ಕ್ಷೇತ್ರಗಳ ಪರಿಣತ ಕೆಲಸಗಾರರಿಗೆ, ಅಮೆರಿಕದಲ್ಲಿ ಅಮೆರಿಕನ್ನರ ಏಳಿಗೆಗಾಗಿ ಕೆಲಸ ಮಾಡಲು ಒದಗಿಸಲಾಗುವ ವೀಸಾಗಳು.
90ರ ದಶಕದಲ್ಲಿ ಅಮೆರಿಕದ ಚೇಂಬರ್ ಆಫ್ ಕಾಮರ್ಸ್, NFTC ಮತ್ತಿತರ ಸಂಸ್ಥೆಗಳ ಒತ್ತಾಯದ ಮೇರೆಗೆ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರು ಜಾರಿಗೆ ತಂದ ಈ ವಿಧದ ವೀಸಾಗಳನ್ನು ಭಾರತೀಯ ಐಟಿ ಸೇವಾ ಕಂಪೆನಿಗಳು Y2K, ಡಾಟ್‌ಕಾಂ ಅಬ್ಬರದ ಕಾಲದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದವು. ಕ್ರಮೇಣ, ಐಟಿ ಸೇವೆಯ ಬದಲು ಕೇವಲ ಐಟಿ ಕೂಲಿಗಳ ಸರಬರಾಜು ಮಾಡುವುದು ಕಾಸುಗೋರುವ ದಂಧೆ ಎಂದು ಖಚಿತವಾದ ಬಳಿಕ, ಈ ವೀಸಾ ವ್ಯಾಪಕವಾಗಿ ದುರ್ಬಳಕೆ ಆಗತೊಡಗಿತು. ಇದು ಯಾವ ಹಂತ ತಲುಪಿತೆಂದರೆ, ಅಮೆರಿಕದ ಪ್ರಜೆಗಳ ಉದ್ಯೋಗಾವಕಾಶಗಳನ್ನು ವಲಸೆ ಕಾರ್ಮಿಕರು, ಅದರಲ್ಲೂ ಭಾರತೀಯ ಐಟಿ ಉದ್ಯಮಸ್ಥರು ಕಸಿದುಕೊಳ್ಳುತ್ತಿದ್ದಾರೆ ಎಂಬ ನರೇಟಿವ್ ಅಲ್ಲಿ ಬಲಗೊಳ್ಳತೊಡಗಿತು. ಅಪಾರ ಬೇಡಿಕೆ ಇರುವುದರಿಂದ ಲಾಟರಿ ಆಧರಿಸಿ ನಡೆಯುವ H1-B ವೀಸಾ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯರಿಗೆ ಈ ವೀಸಾ ನಿರಾಕರಿಸುವ ಪ್ರಮಾಣವು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧ್ಯಕ್ಷಾವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿತ್ತು. ಮೊದಲೆಲ್ಲ ಸರಾಸರಿ ಶೇ. 7-8 ಇದ್ದ ನಿರಾಕರಣೆ 2017-2020ರ ನಡುವೆ ಶೇ. 20-24ಕ್ಕೆ ಏರಿತ್ತು. ಮುಂದೆ ಬೈಡನ್ ಅಧ್ಯಕ್ಷತೆಯ ಕಾಲದಲ್ಲಿ ಇದು ಶೇ. 2-4ಕ್ಕೆ ಇಳಿದಿತ್ತು. (ಆಧಾರ: USCIS, NFAP)
ಅಮೆರಿಕ ಪ್ರಜೆಗಳ ಹತಾಶೆಗೆ ಕಾರಣ ಆಗಿದ್ದ ಈ ಉದ್ಯೋಗಾವಕಾಶ ನುಂಗುವಿಕೆಯು ಈ ಬಾರಿ ಟ್ರಂಪ್ ತನ್ನ Make America Great Again-MAGA ಘೋಷಣೆಯೊಂದಿಗೆ ಮರು ಆಯ್ಕೆ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಬಾರಿಯಂತೂ, ಉದ್ಯೋಗಗಳಲ್ಲಿ ಅಮೆರಿಕನ್ನರಿಗೆ ಪ್ರಥಮ ಆದ್ಯತೆಯನ್ನು ಖಚಿತಪಡಿಸಿಕೊಳ್ಳಲು H1-B ವೀಸಾ ಬಯಸುವವರಿಗೆ ಟ್ರಂಪ್ ಒಂದು ಲಕ್ಷ ಡಾಲರ್ (88 ಲಕ್ಷ ರೂ.) ಶುಲ್ಕ ವಿಧಿಸಿದ್ದಾರೆ. ವಿದೇಶೀ ವಲಸೆ ಕಾರ್ಮಿಕರನ್ನು ನಿರುತ್ಸಾಹಗೊಳಿಸುವ ಈ ಅಸಹಜ ಮೊತ್ತದ ಕಾರಣಕ್ಕಾಗಿ, ಈಗ H1-B ವೀಸಾ ಬಯಸುವವರು ಅಲ್ಲಿನ ಕಂಪೆನಿಗಳಿಗೆ ನಿಜಕ್ಕೂ ಅಗತ್ಯ ಇರುವ ಉನ್ನತ ಹುದ್ದೆಗಳಿಗೆಂದು ಮಾತ್ರ ಅಮೆರಿಕಕ್ಕೆ ತೆರಳಲು ಸಾಧ್ಯ ಆಗುತ್ತಿದೆ.
H1-B ವೀಸಾಗೆ ಸಂಬಂಧಿಸಿದ ನಿಯಮಗಳೆಲ್ಲ ಮೊದಲಿನಿಂದಲೂ ಇದ್ದರೂ, ಅವುಗಳ ಅನುಷ್ಠಾನದಲ್ಲಿ ಇಲ್ಲಿಯ ತನಕ ಸಡಿಲು ಇತ್ತು. ಈಗ ಟ್ರಂಪ್ ಆದೇಶದ ಕಾರಣಕ್ಕೆ ಅವನ್ನೆಲ್ಲ ಇನ್ನಿಲ್ಲ ಎಂಬಷ್ಟು ಬಿಗಿಗೊಳಿಸಲಾಗಿದೆ. ಸ್ವತಃ ಅಮೆರಿಕದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ (ಭಾರತ ಸರಕಾರದ ಕಾರ್ಮಿಕ ಸಚಿವರಿಗೆ ಸಮನಾದ ಹುದ್ದೆ) ಆಗಿರುವ ಲೊರಿ ಚಾವೆಜ್ ಡ್ರೀಮರ್ ಅವರು ಸಂಶಯಾಸ್ಪದ ಅನ್ನಿಸಿರುವ ಪ್ರಕರಣಗಳನ್ನು ನೇರವಾಗಿ ತನಿಖೆಗೆ ಆದೇಶಿಸಬಹುದಾಗಿದ್ದು, ಆಕೆಯ ಸೂಚನೆಯ ಮೇರೆಗೇ ಮೇಲೆ ಹೇಳಲಾಗಿರುವ 175 ಪ್ರಕರಣಗಳು ತನಿಖೆ ಆಗಲಿವೆ. ಇದರಲ್ಲಿ ಭಾರತ ಮೂಲದ ಪ್ರಕರಣಗಳೇ ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲ. ಡಿಜಿಟಲಿ ಸಕ್ಷಮವಾಗಿರುವ ಅಮೆರಿಕ ಆಡಳಿತವು ತಮ್ಮ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಡೇಟಾ ವಿವರಗಳನ್ನು ತನ್ನ ದೇಶದ ಕಾರ್ಮಿಕ ಇಲಾಖೆ, ನ್ಯಾಯಾಂಗ ಇಲಾಖೆ, ಸಮಾನ ಉದ್ಯೋಗಾವಕಾಶ ಕಮಿಷನ್ (EEOC), ಪೌರತ್ವ ಮತ್ತು ವಲಸೆ ಸೇವೆ (USCIS), ಆಂತರಿಕ ಭದ್ರತೆ ಇಲಾಖೆ, ಗೃಹ ಇಲಾಖೆಗಳ ಜೊತೆ ಹಂಚಿಕೊಳ್ಳಲಿದೆ. ಹಾಗಾಗಿ ಅವರಿಗೆ ಸಣ್ಣ ಉಲ್ಲಂಘನೆಗಳನ್ನೂ ಗುರುತಿಸುವುದು ಸುಲಭ ಆಗಲಿದೆ.
H1-B ವೀಸಾ ಪಡೆದಿರುವ ಉದ್ಯೋಗಿಗಳನ್ನು ಅಮೆರಿಕನ್ ಕಂಪೆನಿಗಳಲ್ಲಿ ನಿಯೋಜಿಸದೇ ಆಫ್‌ಸೈಟ್ ದುಡಿಸುವುದು; H1-B ವೀಸಾದಾರರಿಗೆ ನಿಗದಿ ಆಗಿರುವ ಮೊತ್ತಕ್ಕಿಂತ ಕಡಿಮೆ ಸಂಬಳ ನೀಡುವುದು (ಸಾಮಾನ್ಯವಾಗಿ H1-B ವೀಸಾದಾರರಿಗೆ ವಾರ್ಷಿಕ ಸರಾಸರಿ 60 ಸಾವಿರ ಡಾಲರ್ = ಹಾಲಿ ದರದಲ್ಲಿ ತಿಂಗಳಿಗೆ 4-5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚು ಸಂಬಳ ನೀಡುವುದು ಕಡ್ಡಾಯ.); ಗುತ್ತಿಗೆ-ಉಪಗುತ್ತಿಗೆಗಳ ಮೂಲಕ ವ್ಯವಹರಿಸಿ, ಅನಧಿಕೃತವಾಗಿ ಉದ್ಯೋಗಿಗಳ ಸಂಬಳದಲ್ಲಿ ಕಮಿಷನ್ ಮುರಿದುಕೊಳ್ಳುವುದು; ಕಳಪೆ ವಾತಾವರಣದಲ್ಲಿ ಮೂಲಭೂತ ಸೌಕರ್ಯಗಳಿರದೆ, ಸವಲತ್ತುಗಳನ್ನು ಕೊಡದೆ ಕೆಲಸ ಮಾಡಿಸುವುದು; ಅಮೆರಿಕದ ಪ್ರಜೆಗಳಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ನೀತಿ... ಹೀಗೆ ಹತ್ತಾರು ಬಗೆಯ ದೂರುಗಳು ಅಮೆರಿಕ ಆಡಳಿತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ‘ಪ್ರಾಜೆಕ್ಟ್ ಫೈರ್‌ವಾಲ್’ ಆರಂಭಗೊಂಡಿದೆ.
ಈ ದೂರುಗಳ ಮೇಲೆಲ್ಲ ತನಿಖೆ ನಡೆದು, ಉಲ್ಲಂಘನೆ ಸಾಬೀತಾದರೆ, ಉದ್ಯೋಗಿಗಳಿಗೆ ಕೊಡದೆ ಉಳಿಸಿದ ಹಳೆ ಬಾಕಿ ನೀಡುವಂತೆ ಆದೇಶ ಮಾಡುವುದು, ಪ್ರತೀ ಪ್ರಕರಣಕ್ಕೆ 51,500 ಡಾಲರ್ (ಅಂದಾಜು 45 ಲಕ್ಷ ರೂ.) ಜುಲ್ಮಾನೆ, ತಪ್ಪಿತಸ್ಥ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಮತ್ತು ಅವರಿಗೆ ಹಲವು ವರ್ಷಗಳ ನಿಷೇಧ ವಿಧಿಸುವುದು, ಜೈಲುವಾಸ ಸೇರಿದಂತೆ ಹಲವು ದಂಡನೆಗಳನ್ನು ವಿಧಿಸಲು ಅಲ್ಲಿನ ವಲಸೆ ಕಾನೂನು ಅವಕಾಶ ಮಾಡಿಕೊಡುತ್ತದೆ.
ಇದಿಷ್ಟು ಅಮೆರಿಕದ ದೃಷ್ಟಿಕೋನದಿಂದ ಕಾಣಿಸುವ ಸಂಗತಿಗಳಾಗಿದ್ದರೆ, ಭಾರತದ ಐಟಿ ಸೇವಾ ಕಂಪೆನಿಗಳು ಈ ಕುರಿತು ಬೇರೆಯೇ ದಿಕ್ಕಿನಲ್ಲಿ ಯೋಚಿಸುತ್ತಿವೆ. ಅಮೆರಿಕವು ಜಾಗತಿಕವಾಗಿ ತನ್ನ ಉತ್ಪಾದನೆ-ಸೇವೆಗಳಿಗೆ ಸಂಬಂಧಿಸಿದಂತೆ ಈಗಿರುವ ಹಿಡಿತವನ್ನು ಉಳಿಸಿಕೊಳ್ಳಬೇಕಾದರೆ, ಅದು ಭಾರತದಂತಹ ಕೆಲವು ದೇಶಗಳಿಗೆ ಅಮೆರಿಕದಲ್ಲಿ H1-B ವೀಸಾದಡಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಅನಿವಾರ್ಯ. ಹಾಗೆ ಮಾಡದಿದ್ದರೆ, ಅಮೆರಿಕದ ಕಂಪೆನಿಗಳೇ ಭಾರತದಲ್ಲಿ ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್ (GCC)ಗಳಿಗೆ ತಮ್ಮ ಕೆಲಸಗಳನ್ನು ವರ್ಗಾಯಿಸಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಮ್ಮ ಅನೈತಿಕ ಸೇರುಗಾರಿಕೆ ವ್ಯವಹಾರಗಳ ಕಾರಣದಿಂದಾಗಿ ಅಮೆರಿಕದ ಪಿಸುರುಗಣ್ಣಿಗೆ ತುತ್ತಾಗಿರುವ ಭಾರತದ ಸಣ್ಣ-ದೊಡ್ಡ ಐಟಿ ಸೇವಾ ಕಂಪೆನಿಗಳು ದೇಶದಿಂದ ಹೊರಗೆ ದೇಶದ ಗೌರವವನ್ನು ಎತ್ತಿ ಹಿಡಿಯುವ ಬದಲು ದುಡ್ಡೇ ದೊಡ್ಡಪ್ಪ, ಅದು ಯಾವ ಹಾದಿಯಿಂದ ಬಂದರೂ ತೊಂದರೆ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಅಸಹ್ಯದ ಪರಮಾವಧಿ. ಅಮೆರಿಕಕ್ಕೆ ಭಾರತೀಯ ಪ್ರತಿಭೆಗಳು ಅಗತ್ಯವಿದ್ದರೆ ಭಾರತೀಯ ಟೆಕ್ ಕಂಪೆನಿಗಳ ದಲ್ಲಾಳಿಗಿರಿ ಇಲ್ಲದೆಯೂ ಇಲ್ಲಿನ ಯುವಕರನ್ನು ಅವರು ಉದ್ಯೋಗಕ್ಕೆ ಕರೆಯಬಹುದು ಮತ್ತು ಹಾಗಾದಾಗ ಅದು ದೇಶದ ಒಟ್ಟು ಆರ್ಥಿಕತೆಗೆ, ವೈಯಕ್ತಿಕವಾಗಿ ಟೆಕ್ಕಿಗಳಿಗೆ ಹೆಚ್ಚು ಲಾಭದಾಯಕ, ಆರ್ಥಿಕ ಅಸಮಾನತೆ ತೊಡೆದುಹಾಕಲು ಪೂರಕ ಎಂಬ ಸರಳ ಸತ್ಯ ದೇಶದೊಳಗೆ ಅರ್ಥ ಆದ ದಿನ, H1-B ವೀಸಾ ಸಮಸ್ಯೆ ಆಗಿ ಉಳಿದಿರುವುದಿಲ್ಲ. ಇನ್ನು, ಈ ರೀತಿಯ ಐಟಿ ಕಂಪೆನಿಗಳ ಧಣಿಗಳು, ಮಾಜಿ ಧಣಿಗಳೆಲ್ಲ ಇಲ್ಲಿ ದಿನ ಬೆಳಗಾದರೆ ನೈತಿಕತೆಯ ಪ್ರವಚನ ನೀಡುತ್ತಾ, ತಾವು ಪಡೆದ ಸಬ್ಸಿಡಿ ಸವಲತ್ತುಗಳನ್ನೆಲ್ಲ ಮರೆತು, ತಮ್ಮ ಸೇವಾರಫ್ತಿನ ಕಾರಣಕ್ಕೇ ದೇಶ ಉದ್ಧಾರ ಆಗಿದೆ ಎಂಬ ಗಾತ್ರಕ್ಕೆ ದೇಶದ ಸರಕಾರಗಳನ್ನು ತಮ್ಮ ಮೂಗಿನ ನೇರಕ್ಕೆ ಕುಣಿಸುತ್ತಾ ಇರುವುದಕ್ಕೆ ಹೋಲಿಸಿದರೆ ಅಧ್ಯಕ್ಷ ಟ್ರಂಪ್ ಅವರ ಲೆಕ್ಕಾಚಾರದ ಹುಚ್ಚಾಟವೇ ಹೆಚ್ಚು ಪ್ರಬುದ್ಧ ಅನ್ನಿಸುತ್ತದೆ.