ಆನಿಗಳ ‘PLI’ ಓಕೆ; ಬಡವರಿಗೆ ‘ಸಬ್ಸಿಡಿ’ ಯಾಕೆ?
ಬಡವರ ಅನ್ನ ಅಂಕೆಯಿಲ್ಲದೇ ಹಾಳಾಗುತ್ತಿರುವಾಗ, ಶ್ರೀಮಂತರ ಕಿಸೆ ಭರ್ತಿ ಮಾಡುವಾಗ ಏನೂ ಅನ್ನಿಸದ ಸರಕಾರಗಳಿಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸರಕಾರದ ನೀತಿಗಳಿಂದಾಗಿ ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕ್ಕೆ ತುತ್ತಾಗಿರುವ ಜನರಿಗೆ ಯೂನಿವರ್ಸಲ್ ಬೇಸಿಕ್ ಇನ್‌ಕಂ ಕಲ್ಪನೆಯಡಿ ಕೈಗೆ ಸ್ವಲ್ಪ ನಗದು ಒದಗಿಸಿದರೆ ಹೊಟ್ಟೆಯುರಿ ಯಾಕೆ?
16ನೇ ಹಣಕಾಸು ಆಯೋಗದ ವರದಿ ಮತ್ತು 2026-27ನೇ ಸಾಲಿನ ಆರ್ಥಿಕ ಸಮೀಕ್ಷೆಗಳೆರಡೂ ಕೂಡ ದೇಶದಲ್ಲಿ ಬಡ, ದುರ್ಬಲ ಮತ್ತು ಅವಕಾಶ ವಂಚಿತರಿಗೆ ಸಿಗುವ ಸಬ್ಸಿಡಿಗಳಿಗೆ ‘ರೆಡ್ ಫ್ಲ್ಯಾಗ್’ ತೋರಿಸಿದ್ದು, ‘ಆನಿ’ ಕಂಪೆನಿಗಳಿಗೆ ಕೊಡುತ್ತಿರುವ ಉತ್ಪಾದನೆ ಆಧರಿತ ಪ್ರೋತ್ಸಾಹನ (PLI)ಗಳ ಕುರಿತು ಮೌನ ತಳೆದಿರುವುದು ಅಥವಾ ‘ಗ್ರೀನ್ ಫ್ಲ್ಯಾಗ್’ ತೋರಿಸುತ್ತಿರುವುದು, ಹಾಲಿ ಭಾರತ ಸರಕಾರದ ಚಹರೆಗಳು ಚೆನ್ನಾಗಿ ಗೊತ್ತಿರುವವರಿಗೆ ಅಚ್ಚರಿಯ ಸಂಗತಿಯೇನಲ್ಲ. ಈ ರೆಡ್ ಹಾಗೂ ಗ್ರೀನ್ ಫ್ಲ್ಯಾಗ್‌ಗಳ ಹಿಂದಿನ ತರ್ಕಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಇದು.
ಐದು ಗ್ಯಾರಂಟಿಗಳ ಆಶ್ವಾಸನೆಯ ಬೆನ್ನೇರಿ ಕರ್ನಾಟಕದಲ್ಲಿ, 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಚುನಾವಣಾ ಯಶಸ್ಸು, ಹಲವು ರಾಜ್ಯಗಳಲ್ಲಿ ಇಂತಹದೇ ಸಾರ್ವತ್ರಿಕ ಮೂಲಾದಾಯ (ಯುಬಿಐ) ಭರವಸೆಯ ಮಾದರಿಯನ್ನು ಅನುಸರಿಸಲು ಮತ್ತು ಪೈಪೋಟಿಯ ಮೇಲೆ ‘ಉಚಿತಗಳು’ ಮತ್ತು ‘ಗ್ಯಾರಂಟಿಗಳನ್ನು’ ನೀಡಲು ಹಾದಿ ತೆರೆದಿದೆ. ಈ ರೀತಿಯ ‘ಉಚಿತ ಕೊಡುಗೆ’ಗಳ ಬಗ್ಗೆ ಡಾ. ಅರವಿಂದ ಪನಗಾರಿಯಾ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು ಗಂಭೀರ ಆಕ್ಷೇಪಗಳನ್ನು ಎತ್ತಿದೆ.
ದೇಶದ ಎಲ್ಲ 21 ರಾಜ್ಯಗಳು ಒಟ್ಟಾಗಿ 2025-26ನೇ ಸಾಲಿಗೆ 9.73 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿವೆ. ಇದು ರಾಜ್ಯಗಳ ಒಟ್ಟು ರೆವೆನ್ಯೂ ವೆಚ್ಚಗಳ ಶೇ. 19.8 ಆಗುತ್ತದೆ. ಅಗತ್ಯ ಇರುವವರನ್ನು ಆಯ್ದು ಇಂತಹ ಸಬ್ಸಿಡಿ ನೀಡುವ ಬದಲು ದೊಡ್ಡ ಗಾತ್ರದ ಜನಸಮುದಾಯಗಳಿಗೆ, ಷರತ್ತು ರಹಿತ ನಗದು ವರ್ಗಾವಣೆ ಮಾಡುವುದು ರಾಜ್ಯಗಳಲ್ಲಿ ಚಟವಾಗಿ ಬೆಳೆಯುತ್ತಿದೆ. 2025-26ನೇ ಸಾಲಿನಲ್ಲಿ ರಾಜ್ಯಗಳು ಇದಕ್ಕೆಂದೇ 1.96 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಿವೆ ಎಂದಿರುವ ಹಣಕಾಸು ಆಯೋಗವು ಕರ್ನಾಟಕದ ಗೃಹಲಕ್ಷ್ಮಿ, ಮಹಾರಾಷ್ಟ್ರದ ಲಾಡ್ಕಿ ಬಹೀಣ ಯೋಜನೆ, ಪ.ಬಂಗಾಳದ ಲಕ್ಷ್ಮೀರ್ ಭಂಡಾರ್ ಯೋಜನೆಗಳತ್ತ ಬೆಟ್ಟು ಮಾಡಿದೆ.
ಹಿಂದೆಲ್ಲ ಸಾಮಾಜಿಕ ಭದ್ರತೆಯ ಹೆಸರಿನಲ್ಲಿ ವಯಸ್ಕರು, ವಿಧವೆಯರು, ದೈಹಿಕ ವೈಕಲ್ಯಗಳಿರುವವರಿಗೆ ನೀಡುತ್ತಿದ್ದ ನಗದು ವರ್ಗಾವಣೆ 2018-19ರಲ್ಲಿ ಕೇವಲ ಶೇ. 3 ಇತ್ತು. ಈಗ ಈ ಗ್ಯಾರಂಟಿಯಂತಹ ಹೊಸ ಯೋಜನೆಗಳ ಕಾರಣದಿಂದಾಗಿ ನಗದು ವರ್ಗಾವಣೆಯ ಪ್ರಮಾಣ ಶೇ. 20.2ಕ್ಕೆ ಏರಿದೆ ಎಂಬುದು ಆಯೋಗದ ಆತಂಕ. 25-26ನೇ ಸಾಲಿಗೆ 1.96 ಲಕ್ಷ ಕೋಟಿ ರೂ. ನಗದು ವರ್ಗಾವಣೆ ಸಬ್ಸಿಡಿ, 1.58 ಲಕ್ಷ ಕೋಟಿ ರೂ. ಸಾಮಾಜಿಕ ಭದ್ರತೆ ಪಿಂಚಣಿಗಳು, 91,389 ಕೋಟಿ ರೂ.ಗಳ ಕೃಷಿ ಸಬ್ಸಿಡಿ, 2.85 ಲಕ್ಷ ಕೋಟಿ ರೂ.ಗಳ ಆಹಾರ ಸಬ್ಸಿಡಿ (ಇದರಲ್ಲಿ ಕೇಂದ್ರದ ಪಾಲು 2.3 ಲಕ್ಷ ಕೋಟಿ ರೂ.), 2.60 ಲಕ್ಷ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿ ಸರಕಾರಗಳಿಂದ ಜನರಿಗೆ ವರ್ಗಾವಣೆ ಆಗುತ್ತಿದೆ. (ಆಧಾರ: 16ನೇ ಹಣಕಾಸು ಆಯೋಗದ ವರದಿ)
ಇವೆಲ್ಲವನ್ನೂ ದಾಟಿ, ಈಗ ರಾಜ್ಯಗಳು (ಕರ್ನಾಟಕದ ಗ್ಯಾರಂಟಿ ಮಾದರಿಯಲ್ಲಿ) 4.14 ಲಕ್ಷ ಕೋಟಿ ರೂ.ಗಳನ್ನು ಜನರಿಗೆ ವರ್ಗಾಯಿಸುತ್ತಿವೆ. ಕೆಲವು ರಾಜ್ಯಗಳು ಈ ಸಬ್ಸಿಡಿಗಳಿಗೆ ಹಣ ಪೂರೈಸಲು ಬಜೆಟ್ ಚೌಕಟ್ಟಿನ ಹೊರಗಿನಿಂದ (ಆಫ್-ಬಜೆಟ್) ಸಾಲ ತರುತ್ತಿವೆ. ಒಕ್ಕೂಟ ಸರಕಾರ ಕೂಡ 6.33 ಲಕ್ಷ ಕೋಟಿ ರೂ.ಗಳ ಸಬ್ಸಿಡಿಯನ್ನು (ಆಹಾರ, ವಸತಿ, ರಸಗೊಬ್ಬರ, ಇಂಧನ ವಲಯಗಳಿಗೆ) ನೀಡುತ್ತಿದೆ. ಕರ್ನಾಟಕದಂತಹ ರಾಜ್ಯಗಳು ಗೃಹಲಕ್ಷ್ಮಿ ಯೋಜನೆಯನ್ನು ತನ್ನ ಅಕೌಂಟಿಂಗ್‌ನಲ್ಲಿ ಸಬ್ಸಿಡಿ ಎಂದು ತೋರಿಸುತ್ತಿಲ್ಲ ಎಂದೆಲ್ಲ ಆಕ್ಷೇಪಗಳನ್ನು ಹಣಕಾಸು ಆಯೋಗ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಸಾಲ ತಂದು ಸಬ್ಸಿಡಿ ನೀಡುವ ಮೂಲಕ ರಾಜ್ಯಗಳ ಆರ್ಥಿಕ ಆರೋಗ್ಯ ಕೆಡಿಸುವ ಬದಲು, ತಮ್ಮ ಸಬ್ಸಿಡಿ ಯೋಜನೆಗಳನ್ನು ಮರುಪರಿಶೀಲಿಸಬೇಕು. ಷರತ್ತು ರಹಿತ ಸಬ್ಸಿಡಿ ವರ್ಗಾವಣೆಗಳು ಅಗತ್ಯ ಇಲ್ಲದವರಿಗೂ ತಲುಪುತ್ತಿವೆ. ಅದನ್ನು ಸರಿಪಡಿಸಿ, ರೆವೆನ್ಯೂ ಕೊರತೆ ಕಡಿಮೆಗೊಳಿಸಿಕೊಳ್ಳಬೇಕು, ಇಂತಹ ಸಬ್ಸಿಡಿಗಳು ಯಾವಾಗ ಮುಕ್ತಾಯ ಎಂಬುದನ್ನು (ಸನ್‌ಸೆಟ್ ಷರತ್ತು) ನಿಗದಿಪಡಿಸಬೇಕು ಹಾಗೂ ಈ ಸಬ್ಸಿಡಿಗಳ ಲೆಕ್ಕಾಚಾರವನ್ನು ದೇಶದಾದ್ಯಂತ ಏಕಪ್ರಕಾರ ಇರಿಸುವ ನಿಟ್ಟಿನಲ್ಲಿ ಅಂಉ ಇದನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು 16ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ.
ಈ ವರ್ಷದ ಬಜೆಟ್‌ಗೆ ಮುನ್ನ ದೇಶದ ಆರ್ಥಿಕ ಮುಖ್ಯ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಸಿದ್ಧಪಡಿಸಿ, ಸಂಸತ್ತಿನಲ್ಲಿ ಮಂಡಿತವಾದ ದೇಶದ ಆರ್ಥಿಕ ಸರ್ವೇ 2025-26ರಲ್ಲಿ, ಸಬ್ಸಿಡಿ ನೀಡಿಕೆಯನ್ನು ತಾರ್ಕಿಕಗೊಳಿಸುವ ಮೂಲಕ ಕಳೆದ 10 ವರ್ಷಗಳಲ್ಲಿ ಸಂಭವಿಸಿರುವ 3.48 ಲಕ್ಷ ಕೋಟಿ ರೂ.ಗಳ ಸೋರಿಕೆಯನ್ನು ಈಗ ಸಂಪೂರ್ಣವಾಗಿ ತಡೆಯಲಾಗಿದೆ. ಸಬ್ಸಿಡಿ ಫಲಾನುಭವಿಗಳ ಸಂಖ್ಯೆ ಕೂಡ 10 ವರ್ಷಗಳ ಹಿಂದೆ 11 ಕೋಟಿ ಇದ್ದುದು, ಈಗ ಪಡಿತರ, ನರೇಗಾ, ಪಿಎಂಕಿಸಾನ್, ರಸಗೊಬ್ಬರ ಸಬ್ಸಿಡಿ ಯೋಜನೆಗಳ ಕಾರಣದಿಂದಾಗಿ 177 ಕೋಟಿಗೆ ಏರಿದೆ. ಇನ್ನು ರೈಲ್ವೆ, ವಿದ್ಯುತ್ ಕ್ಷೇತ್ರಗಳಲ್ಲಿ ಕ್ರಾಸ್ ಸಬ್ಸಿಡಿ ವ್ಯವಸ್ಥೆ ಸುಧಾರಿಸಬೇಕಿದೆ. ಕಳೆದ 10 ವರ್ಷಗಳಲ್ಲಿ ಸಬ್ಸಿಡಿ ಪ್ರಮಾಣವನ್ನು ಗರಿಷ್ಠ ಪ್ರಮಾಣದಲ್ಲಿ ತಗ್ಗಿಸಲಾಗಿದೆ ಎಂದಿದ್ದಾರೆ. (ಆಧಾರ: ಆರ್ಥಿಕ ಸರ್ವೇ 2025-26)
‘ಆನಿ’ ಸಬ್ಸಿಡಿ ಸುದ್ದಿ ಇಲ್ಲ
ದೇಶದ ಶೇ. 70 ಇರುವ ಬಡ, ಮಧ್ಯಮ ವರ್ಗದ ಜನರಿಗೆ ನೀಡಲಾಗುವ ಸಬ್ಸಿಡಿಗಳ ಮೇಲೆ ಹದ್ದಿನ ಕಣ್ಣಿಟ್ಟುಕೊಂಡಿರುವ ಆಳುವವರು ಮತ್ತವರ ಯೋಜನಾ ಪರಿಣತರುಗಳಿಗೆ, ವಾಣಿಜ್ಯ ವ್ಯವಹಾರಗಳು, ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿರುವ ಭರಪೂರ ರಿಯಾಯಿತಿ, ತೆರಿಗೆ ರಜೆ, ನೆಲ, ಜಲ, PLI/ELIನಂತಹ ಪ್ರೋತ್ಸಾಹನ ಮತ್ತಿತರ ಅಸಂಖ್ಯ ಸಬ್ಸಿಡಿಗಳ ಕಡೆ ಕಣ್ಣು ಹೊರಳುವುದೇ ಇಲ್ಲ. ಎಲ್ಲ ಸಬ್ಸಿಡಿಗಳ ಬಗ್ಗೆ ತಗಾದೆ ತೆಗೆದಿರುವ 16ನೇ ಹಣಕಾಸು ಆಯೋಗವು ಈ ‘ಆನಿ’ ಸಬ್ಸಿಡಿಗಳ ಕುರಿತು ಚಕಾರ ಎತ್ತಿಲ್ಲ.
ಅದೇ ವೇಳೆಗೆ, ಆರ್ಥಿಕ ಸರ್ವೇಯಲ್ಲಿ 2020ರ ಎಪ್ರಿಲ್‌ನಿಂದೀಚೆಗೆ ನೀಡಲಾಗುತ್ತಿರುವ 14 ಕ್ಷೇತ್ರಗಳ ಉತ್ಪಾದನೆ ಆಧರಿತ ಪ್ರೋತ್ಸಾಹನ (PLI)ಗಳ ಬಗ್ಗೆ ಭರ್ಜರಿ ಹೊಗಳಿಕೆ ಇದೆ, ಅದು ದೇಶದ ರಫ್ತು ಸಾಮರ್ಥ್ಯ ಹೆಚ್ಚಿಸಿದೆ ಎಂಬ ಶಹಬ್ಬಾಸ್‌ಗಿರಿ ಇದೆ. ಕೇವಲ ಅದೊಂದೇ ಬಾಬ್ತಿಗೆ ಸರಕಾರ 1.97ಲಕ್ಷ ಕೋಟಿ ರೂ.ಗಳನ್ನು ತೆಗೆದಿರಿಸಿದೆ. ಇದು ಕೇವಲ ಒಂದಂಶ. ಇದಲ್ಲದೆ ಒಕ್ಕೂಟ ಸರಕಾರದ ಕಡೆಯಿಂದ, ರಾಜ್ಯಗಳ ಕಡೆಯಿಂದ ಕಾರ್ಪೊರೇಟ್‌ಗಳಿಗೆ ಸಿಗುವ ಸಮಗ್ರ ‘ಕೊಡುಗೆ’ಗಳ ಲೆಕ್ಕಾಚಾರ ಎಲ್ಲೂ ಒಂದೆಡೆ ಏಕತ್ರವಾಗಿ ಸಿಗುವುದಿಲ್ಲ. ಅದು ಸಿಕ್ಕಿದರೆ, ಬಡವರ ಸಬ್ಸಿಡಿಗಳ ಬಗ್ಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅದೇ ‘ಆನಿ’ ಆಟದ ಮೂಲ ನಿಯಮ.
ಹಾದಿ ತಪ್ಪಿಸುವ ಅಂಕಿ-ಸಂಖ್ಯೆ
ಅಶಕ್ತರ ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ಸರಕಾರದ ಅಂಕಿಸಂಖ್ಯೆಗಳು ಎಷ್ಟೊಂದು ಅತಾರ್ಕಿಕ ಎಂದು ಗಮನಿಸಿ. ದೇಶದಲ್ಲಿ ಸಾಂಪ್ರದಾಯಿಕವಾಗಿ ಶೇ. 70 ಮಂದಿ ಬಡವರು ಎಂಬುದು ಒಪ್ಪಿತ ಲೆಕ್ಕಾಚಾರ. ಅವರ ಪೈಕಿ ಬಡವರ ಸಂಖ್ಯೆ ಕಳೆದ 10 ವರ್ಷಗಳಲ್ಲಿ 25 ಕೋಟಿಯಷ್ಟು ಕಡಿಮೆ ಆಗಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಅವರ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಅಂದಾಜು ಕೇವಲ 7.52 ಕೋಟಿ. 2011-12ರಲ್ಲಿ ಆ ಪ್ರಮಾಣ 34.45 ಕೋಟಿ ಇತ್ತು. (PIB release ID 149221). ವಾಸ್ತವ ಹೀಗಿದ್ದರೂ, Pಒಉಏಙ ಯೋಜನೆಯ ಅಡಿಯಲ್ಲಿ ದೇಶವು ಓಈSಂ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ, ದೇಶದ 81ಕೋಟಿ ಜನರಿಗೆ ಪ್ರತೀ ತಿಂಗಳು ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ವಾರ್ಷಿಕ 36-38ಒಖಿ ಅಕ್ಕಿ, 18-20ಒಖಿ ಗೋಧಿಗಳನ್ನು ಆಹಾರ ನಿಗಮದ ದಾಸ್ತಾನುಗಳಿಂದ ವ್ಯಯಿಸಲಾಗುತ್ತಿದೆ.
ಕನಿಷ್ಠ ಬೆಂಬಲ ಬೆಲೆ ನೀಡಿ ಸರಕಾರ ಖರೀದಿಸುವ ಈ ಧಾನ್ಯಗಳು ಆಹಾರ ನಿಗಮದ ಉಗ್ರಾಣ (FCI)ಗಳಲ್ಲಿ ಕೊಳೆಯುತ್ತಿದ್ದು, ಅದನ್ನು ತೆರೆದ ಮಾರುಕಟ್ಟೆಯಲ್ಲಿ ಸಬ್ಸಿಡಿ ದರಕ್ಕೆ ಮಾರಾಟ ಮಾಡಿ, ರಾಜ್ಯಗಳಿಗೆ ಪಡಿತರಕ್ಕಾಗಿ ಹಂಚಿ, ಎಥೆನಾಲ್ ಉತ್ಪಾದನೆಗೆ ಒದಗಿಸಿದ ಬಳಿಕವೂ ದಾಸ್ತಾನು-ಸಾಗಾಟ ಕಷ್ಟ ಆಗುವಷ್ಟು ಉಳಿಯುತ್ತಿದ್ದು, ಅದರ ಸಾಗಣೆ-ದಾಸ್ತಾನು-ನಿರ್ವಹಣೆಗಳಿಗೆ ಈ ಬಾರಿ ಬಜೆಟ್‌ನಲ್ಲಿ ತೆಗೆದಿರಿಸಿರುವ 2.27ಲಕ್ಷ ಕೋಟಿ ರೂ.ಗಳಿಗೆ ಇನ್ನೂ 25,000 ಕೋಟಿ ರೂ. ಸೇರಿಸಿಕೊಡಿ ಎಂದು ಆಹಾರ ನಿಗಮ ಸರಕಾರಕ್ಕೆ ಬಜೆಟೋತ್ತರ ಮನವಿ ಸಲ್ಲಿಸಿದೆಯಂತೆ!
ಬಡವರ ಅನ್ನ ಅಂಕೆಯಿಲ್ಲದೇ ಹಾಳಾಗುತ್ತಿರುವಾಗ, ಶ್ರೀಮಂತರ ಕಿಸೆ ಭರ್ತಿ ಮಾಡುವಾಗ ಏನೂ ಅನ್ನಿಸದ ಸರಕಾರಗಳಿಗೆ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸರಕಾರದ ನೀತಿಗಳಿಂದಾಗಿ ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕ್ಕೆ ತುತ್ತಾಗಿರುವ ಜನರಿಗೆ ಯೂನಿವರ್ಸಲ್ ಬೇಸಿಕ್ ಇನ್‌ಕಂ ಕಲ್ಪನೆಯಡಿ ಕೈಗೆ ಸ್ವಲ್ಪ ನಗದು ಒದಗಿಸಿದರೆ ಹೊಟ್ಟೆಯುರಿ ಯಾಕೆ?