ಕತ್ತಲಲ್ಲಿ ಕರಿಬೆಕ್ಕು ಅರಸಹೊರಟಿರುವ NITI ಆಯೋಗ
ನಮ್ಮ ಮೂಲಸೌಕರ್ಯ ಕಾಮಗಾರಿ ಗುಣಮಟ್ಟಗಳು, ಭ್ರಷ್ಟ ವ್ಯವಸ್ಥೆ, ಖಚಿತ ಯೋಜನೆಯಾಗಲೀ ಸ್ವಂತ ಯೋಚನೆಯಾಗಲೀ ಇಲ್ಲದ ಆಡಳಿತ-ಇದನ್ನೆಲ್ಲ ಸಮಗ್ರವಾಗಿಟ್ಟು ನೋಡಿದಾಗ, ದೇಶ ಗೊತ್ತುಗುರಿ ಇಲ್ಲದೇ ‘ಡೇಬಲಾಪ್‌ಮೇಂಟ್’ ಸುಂಟರಗಾಳಿಗೆ ಸಿಕ್ಕಿ, ಗಾಳಿಬಂದತ್ತ ತೂರಿಕೊಳ್ಳುತ್ತಿದೆ ಎಂದೇ ಅನ್ನಿಸುತ್ತಿದೆ. ಇದೇ ಹಾದಿಯಲ್ಲಿ ಹೋದರೆ 2070ಕ್ಕೆ ತಲುಪುವಾಗ ನಾವು ನೆಟ್ ಝೀರೊ ಸಾಧಿಸಿರುವುದೂ ಇಲ್ಲ, ಆರ್ಥಿಕವಾಗಿ ಬಲಿಷ್ಠ ಆಗಿರುವುದೂ ಇಲ್ಲ.
‘ಹನಿಗೂಡಿದರೆ ಹಳ್ಳ’ ಎಂಬುದು ಸಮಯದ ಪರೀಕ್ಷೆಯಲ್ಲಿ ಗೆದ್ದಿರುವ ಸಾಂಪ್ರದಾಯಿಕ ನಂಬಿಕೆ. 2070ರ ಹೊತ್ತಿಗೆ ದೇಶದಲ್ಲಿ ಕಾರ್ಬನ್ ಮಾಲಿನ್ಯವನ್ನು ಶೂನ್ಯಕ್ಕಿಳಿಸಿಕೊಳ್ಳುವ (Net Zero) ಭರಾಟೆಯಲ್ಲಿರುವ ಭಾರತ ಸರಕಾರದ ಯೋಜನಾಂಗವಾದ NITI ಆಯೋಗವು, ಈ ಸಾಂಪ್ರದಾಯಿಕ ನಂಬಿಕೆಗೆ ತದ್ವಿರುದ್ಧವಾದ ‘ಟಾಪ್‌ಡೌನ್’ ಮಾದರಿಯೊಂದನ್ನು ಅವಲಂಬಿಸಿಕೊಂಡು ಕತ್ತಲಲ್ಲಿ ಕರಿಬೆಕ್ಕು ಅರಸುವ ಕೆಲಸಕ್ಕೆ ಹೊರಟಂತಿದೆ. ತಮಾಷೆ ಎಂದರೆ, ಆ ಕತ್ತಲಿನಲ್ಲಿ ಕರಿಬೆಕ್ಕು ಇರುವುದು ಇನ್ನೂ ಖಚಿತವಿಲ್ಲ!
ಭಾರತವು ವಿಕಸಿತ ಭಾರತ ಆಗುವ ಹೊತ್ತಿಗೆ (2047) ನಿಗದಿತ ನೆಟ್ ಝೀರೊ ಗುರಿ ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ತಾನು ರೂಪಿಸಿದ್ದ 10 ಅಂತರ್-ಸಚಿವಾಲಯ ಸಮಿತಿಗಳು ಸಿದ್ಧಪಡಿಸಿದ 11 ವರದಿಗಳನ್ನು ಕಳೆದ ವಾರ (ಫೆಬ್ರವರಿ 09) ನೀತಿ ಆಯೋಗವು ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. (PIB Release ID: 2225617). ಸದ್ರಿ ವರದಿಗಳು ವಕೀಲಿಕೆ ಮಾಡುತ್ತಿರುವ ‘ಟಾಪ್‌ಡೌನ್’ ಮಾದರಿ ಮತ್ತದರ ಸಾಧ್ಯಾಸಾಧ್ಯತೆಗಳನ್ನು ಗಮನಿಸುವುದು ಈ ಬರೆಹದ ಉದ್ದೇಶ.
‘‘2005ರಲ್ಲಿ ಇದ್ದ ಸ್ಥಿತಿಗೆ ಹೋಲಿಸಿದರೆ, ಈಗ ಭಾರತದಲ್ಲಿ ಕಾರ್ಬನ್ ಮಾಲಿನ್ಯ ಶೇ. 36 ತಗ್ಗಿದೆ’’ ಎಂದು ಈ ವರದಿಗಳು ಹೇಳುತ್ತಿವೆ! ಈ ವರದಿ ಎಷ್ಟು ಪೊಳ್ಳುತನದ್ದಾಗಿರಬಹುದೆಂಬುದಕ್ಕೆ, ಇದೊಂದೇ ವಾಕ್ಯ ಸಾಕು. ಸ್ವತಃ ದಿಲ್ಲಿಯಲ್ಲಿ, ಮಾಲಿನ್ಯದ ಪರ ಮಾವಧಿಯನ್ನು ಆಸ್ವಾದಿಸುತ್ತಲೇ ಈ ವರದಿ ಸಿದ್ಧಗೊಂಡಿದೆ ಎಂಬುದು, ಈ ಕಾಲದ ಕ್ರೂರ ವ್ಯಂಗ್ಯಗಳಲ್ಲಿ ಒಂದು.
2070ರ ಹೊತ್ತಿಗೆ ಭಾರತವು ನೆಟ್ ಝೀರೊ ಸಾಧಿಸಿಕೊಳ್ಳ ಬೇಕಾಗಿರುವುದು ಅದರ ಅಂತರ್‌ರಾಷ್ಟ್ರೀಯ ಬಾಧ್ಯತೆ. ಅದನ್ನು ಸಾಧಿಸಬೇಕೆಂದರೆ, ಭಾರತವು ಹಲವು ತಲಸ್ಪರ್ಶಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ನೆಟ್ ಝೀರೊ ಸಾಧಿಸಲು ದೇಶ ಹಲವಾರು ಬೇಲಿಗಳನ್ನು ದಾಟಬೇಕಿದೆ. ಕಾರ್ಬನ್ ಮಾಲಿನ್ಯ ಆಗದಂತಹ ಪರ್ಯಾಯ ತಂತ್ರಜ್ಞಾನ ಯಾವುದೆಂಬುದು ಇನ್ನೂ ಖಚಿತವಿಲ್ಲ. ಜೊತೆಗೆ ಅಪಾರ ಹೂಡಿಕೆ, ನೆಲ-ಜಲ-ಕ್ರಿಟಿಕಲ್ ಮಿನರಲ್‌ಗಳ ವ್ಯಾಪಕ ಬಳಕೆ ಇದಕ್ಕೆ ಅಗತ್ಯವಿದೆ. ಕಾಗದಪತ್ರಗಳಲ್ಲಿ ಗಮನಿಸಿದರೆ, ಭಾರತದಲ್ಲಿ ಇರುವ ಕಾರ್ಬನ್ ಮಾಲಿನ್ಯ ಒಟ್ಟು ಜಗತ್ತಿನ ಮಾಲಿನ್ಯದ ಶೇ. 4 ಮಾತ್ರ. ತಲಾ ಮಾಲಿನ್ಯ ಕೂಡ ಜಾಗತಿಕ ಮಟ್ಟಕ್ಕಿಂತ ಕಡಿಮೆ ಇದೆ. ಇಷ್ಟು ಹೇಳಿದ ಬಳಿಕ, ಜಗತ್ತಿನ ಅತ್ಯಂತ ಮಲಿನ 100 ನಗರಗಳಲ್ಲಿ 83 ಭಾರತದಲ್ಲೇ ಇವೆ! (ಆಧಾರ: IQAir, 2023) ಎಂಬುದನ್ನೂ ಮರೆಯುವಂತಿಲ್ಲ.
ವಿಕಸಿತ ಭಾರತ ಆಗುವುದು 2047ರ ಒಳಗೆ ಸಾಧ್ಯ ಆಗಬೇಕಿದ್ದರೆ, ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬೇಕಿದ್ದರೆ, ದೇಶವು ಸರಕಾರದ ಪರಿಕಲ್ಪನೆಯ ‘ಡೇಬಾಲಾಪ್‌ಮೇಂಟ್’ ಜೊತೆಜೊತೆಗೇ ಇಂಧನ ಮಿತ ಬಳಕೆಯಲ್ಲಿ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಸುಸ್ಥಿರ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಬೇಕಾದದ್ದು ಅನಿವಾರ್ಯ. ಸಾವಯುವ ಮೂಲದ ಇಂಧನಗಳ ಬಳಕೆ ನಿಲುಗಡೆ ಆಗಬೇಕೆಂದರೆ, ಸಾರಿಗೆ, ಕಟ್ಟಡ ನಿರ್ಮಾಣ, ಕೈಗಾರಿಕೆ-ಉದ್ಯಮ, ಮನೆವಾರ್ತೆಯ ಬಳಕೆಗಳಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಮರುಬಳಕೆ ಮಾಡಬಲ್ಲ ಇಂಧನ, ವಿದ್ಯುತ್ ಶೇಖರಣೆಗೆ ವ್ಯವಸ್ಥೆ, ನ್ಯೂಕ್ಲಿಯರ್ ವಿದ್ಯುತ್ ಅವಲಂಬನೆ, ಬಳಕೆಯಲ್ಲಿ ಶಿಸ್ತು ಮತ್ತಿತರ ಮೂಲಭೂತ ಸ್ವರೂಪದ ಬದಲಾವಣೆಗಳು ಅಗತ್ಯ. ಆ ಹಾದಿಯೂ ಸರಳವಲ್ಲ. ಒಂದೆಡೆ, ವಾತಾವರಣಕ್ಕೆ ಬಿಡುಗಡೆಗೊಳ್ಳದಂತೆ ಕಾರ್ಬನ್ ಶೇಖರಣೆ-ಮರುಬಳಕೆ (CCUS) ತಂತ್ರಜ್ಞಾನ, ವಿದ್ಯುತ್ ಅನ್ನು ದೀರ್ಘಕಾಲ ಶೇಖರಿಸಿಡುವ ತಂತ್ರಜ್ಞಾನ, ಸಣ್ಣಗಾತ್ರದ ಮಾಡ್ಯುಲರ್ ನ್ಯೂಕ್ಲಿಯರ್ ರಿಯಾಕ್ಟರುಗಳು... ಇವು ಯಾವುವೂ ಕೂಡ ಇಂದು ಖಚಿತವಾಗಿ ಲಭ್ಯ ಇಲ್ಲ. ಎಲ್ಲವೂ ಸಂಶೋಧನೆ-ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಇನ್ನೊಂದೆಡೆ ಈ ಎಲ್ಲ ಮೂಲಭೂತ ಬದಲಾವಣೆಗಳು ಆಗಬೇಕೆಂದರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ನೆಲ, ಜಲ, ಕ್ರಿಟಿಕಲ್ ಮಿನರಲ್‌ಗಳು (ತಾಮ್ರ, ಗ್ರಾಫೈಟ್, ಸಿಲಿಕಾನ್, ನಿಯೊಡೈಮಿಯಂ, ಡಿಸ್ಪೋಸಿಯಂ, ಲೀಥಿಯಂ, ನಿಕ್ಕಲ್, ಕೋಬಾಲ್ಟ್ ಇತ್ಯಾದಿ) ಅಗತ್ಯ ಇವೆ. ಜೊತೆಗೆ ಇವೆಲ್ಲಕ್ಕೂ ಅಪಾರ ಪ್ರಮಾಣದ ಹೂಡಿಕೆ ಕೂಡ ಅಗತ್ಯವಿದೆ.
ಇದನ್ನೆಲ್ಲ ಸಾಧಿಸಲು ನೀತಿ ಆಯೋಗ ಹಾಕಿಕೊಂಡಿರುವ ರೋಡ್ ಮ್ಯಾಪ್‌ನಲ್ಲಿ, 2025ರ ಹೊತ್ತಿಗೆ 688 Mtoe (Mtoe = ದಶಲಕ್ಷ ಟನ್ ತೈಲಕ್ಕೆ ಸಮಾನ) ಇಂಧನ ಅಗತ್ಯ ಇದ್ದರೆ, 2050ರ ಹೊತ್ತಿಗೆ ಅದು 1381-1617 Mtoe ಮಟ್ಟಕ್ಕೆ ತಲುಪಲಿದೆ. ಆಯೋಗವು 2050ರ ತನಕದ ಅವಧಿಯನ್ನು ಮೂಲಸೌಕರ್ಯ ಒದಗಿಸುವ ಅವಧಿ ಎಂದೂ 2050-70ರ ಅವಧಿಯನ್ನು ಸ್ಥಿರತೆ ಸಾಧಿಸುವ ಅವಧಿ ಎಂದೂ ಯೋಜಿಸಿಕೊಂಡಿದ್ದು, ನಮ್ಮ ಸರಾಸರಿ ಮಾಲಿನ್ಯದ ಪ್ರಮಾಣ ಜಾಗತಿಕ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಇರುವುದರಿಂದ, ಸಾವಯುವ ಇಂಧನ ಮೂಲದ ವಿದ್ಯುತ್ ಉತ್ಪಾದನೆ 2025ರಲ್ಲಿ ಶೇ. 87 ಇರುವುದನ್ನು 2070ರ ಹೊತ್ತಿಗೆ ಬಹುತೇಕ ಶೂನ್ಯಕ್ಕೆ ಇಳಿಸಿಕೊಳ್ಳಬೇಕೆಂದು ಆಯೋಗ ಯೋಜಿಸಿದೆ. ಆ ಜಾಗವನ್ನು ಮರುಬಳಕೆ ಮಾಡಬಲ್ಲ ಇಂಧನ ಮತ್ತು ನ್ಯೂಕ್ಲಿಯರ್ ವಿದ್ಯುತ್ ಮೂಲಕ ಭರ್ತಿ ಮಾಡಬೇಕೆಂಬುದು ಆಯೋಗದ ಯೋಚನೆ.
ಇದನ್ನೆಲ್ಲ ಸಾಧಿಸಬೇಕಾದರೆ, ಸರಕಾರಕ್ಕೆ ಹಣ ಬೇಕು. ಎಷ್ಟು ಹಣ ಬೇಕೆಂದರೆ, 2070ರ ಹೊತ್ತಿಗೆ ದೇಶಕ್ಕೆ ವರ್ಷಕ್ಕೆ ಅಂದಾಜು 500 ಬಿಲಿಯ ಡಾಲರ್ (45ಲಕ್ಷ ಕೋಟಿ ರೂ.) ಲೆಕ್ಕದಲ್ಲಿ 2070ರ ಹೊತ್ತಿಗೆ 22.7 ಟ್ರಿಲಿಯನ್ ಡಾಲರ್ (2,060.50 ಲಕ್ಷ ಕೋಟಿ ರೂ.) ಅಗತ್ಯ ಬೀಳಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ದೇಶದ ಒಟ್ಟು ಆರ್ಥಿಕತೆಯ ಗಾತ್ರವೇ ಇನ್ನೂ 4 ಟ್ರಿಲಿಯನ್ ಡಾಲರ್ ಆಸುಪಾಸಿನಲ್ಲಿದ್ದು, 2070ಕ್ಕೆ ಅದು 30 ಟ್ರಿಲಿಯನ್ ಡಾಲರ್ ಆಗಬೇಕೆಂಬ ಗುರಿ ಹೊಂದಿರುವ ದೇಶ, ಅದರ ಪೈಕಿ 22.7 ಟ್ರಿಲಿಯನ್ ಡಾಲರ್ ಹಣವನ್ನು ನೆಟ್ ಝೀರೊ ಸಾಧಿಸಲು ತೆಗೆದಿಡುವುದು ಬಹುತೇಕ ಕನಸಿನ ಮಾತು. ಇದು ಸರಕಾರಕ್ಕೆ ಅರಿವಿಲ್ಲದ ಸಂಗತಿ ಏನಲ್ಲ. ಹಾಗಾಗಿಯೇ ನೆಟ್ ಝೀರೊ ಕುರಿತ ಅಂತರ್‌ರಾಷ್ಟ್ರೀಯ ಸಮಾವೇಶಗಳಲ್ಲೆಲ್ಲ (COP-30, ಕ್ಲೈಮೇಟ್ ಸಮಿಟ್) ಶ್ರೀಮಂತ ದೇಶಗಳು ಪರಿಸರ ನ್ಯಾಯ ಒದಗಿಸಲು, ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕ ಸಹಾಯ, ತಂತ್ರಜ್ಞಾನ ವರ್ಗಾವಣೆಯಂತಹ ಹೊಣೆಗಾರಿಕೆಗಳನ್ನು ಹೊರ ಬೇಕೆಂದು ಭಾರತವು ವಕೀಲಿಕೆ ಮಾಡುತ್ತಾ ಬಂದಿದೆ.
ಸದ್ಯಕ್ಕೆ ನೀತಿ ಆಯೋಗದ ಲೆಕ್ಕಾಚಾರಗಳ ಅನ್ವಯ, ಭಾರತಕ್ಕೆ 2070ರ ಹೊತ್ತಿಗೆ ಒಟ್ಟು ಸುಮಾರು 6.53 ಟ್ರಿಲಿಯನ್ ಡಾಲರ್ (593 ಲಕ್ಷ ಕೋಟಿ ರೂ.)ಗಳಷ್ಟು ಅಗಾಧ ಪ್ರಮಾಣದ ಮೊತ್ತ ನೆಟ್ ಝೀರೊ ಸಾಧಿಸುವಲ್ಲಿ ಕೊರತೆ ಬೀಳಲಿದೆ. ಈ ಮೊತ್ತವನ್ನು ವಿದೇಶಿ ನೆರವು, ಸಾಲ, ದೇಶೀ ಸಾಲಗಳ ಮೂಲಕ ಎತ್ತಲು ಉದ್ದೇಶಿಸಲಾಗಿದೆಯಂತೆ. ಸದ್ಯದ ಅರ್ಥಿಕ ಸ್ಥಿತಿಯಲ್ಲಿ ದೇಶ ಪ್ರತೀವರ್ಷ ಅಂದಾಜು 150 ಬಿಲಿಯ ಡಾಲರ್ (13.60 ಲಕ್ಷ ಕೋಟಿ ರೂ.)ಗಳನ್ನು ಮಾತ್ರ ಈ ಬಾಬ್ತಿಗೆ ಖರ್ಚು ಮಾಡುತ್ತಿದೆ. 2014ರ ಹೊತ್ತಿಗೆ ಕೇವಲ 50-55 ಲಕ್ಷ ಕೋಟಿ ರೂ.ಗಳಷ್ಟಿದ್ದ ದೇಶದ ಸಾಲ ಈಗಾಗಲೇ 200 ಲಕ್ಷ ಕೋಟಿ ರೂ.ಗಳ ಆಸುಪಾಸಿಗೆ ತಲುಪಿದೆ. ಇದರ ಮೇಲೆ ಇನ್ನಷ್ಟು ಸಾಲ ತಂದು ನೆಟ್ ಝೀರೊ ಸಾಧಿಸುವುದಕ್ಕೆ ಹೊರಟರೆ ಪರಿಸ್ಥಿತಿ ಎಲ್ಲಿಗೆ ತಲುಪಲಿದೆ ಎಂದು ಊಹಿಸುವುದೂ ಕಷ್ಟ ಇದೆ.
ತಳಮಟ್ಟದಲ್ಲಿ ಬಳಕೆ ನಿಯಂತ್ರಣದ ಮೂಲಕ ಪರಿಸರ ಸಂರಕ್ಷಣೆ ಮಾಡುವ ಬದಲು ಟಾಪ್‌ಡೌನ್ ಮಾದರಿ ಮುಂದಿಟ್ಟುಕೊಂಡಿರುವ ಸರಕಾರವು 2047ರ ತನಕವೂ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಿ ಕೊಳ್ಳುವ ಇರಾದೆ ಹೊಂದಿಲ್ಲ. ಮಾಡ್ಯುಲರ್ ರಿಯಾಕ್ಟರ್ ಬಳಸಿ ನ್ಯೂಕ್ಲಿಯರ್ ವಿದ್ಯುತ್ ಉತ್ಪಾದನೆ ಇನ್ನೂ ಪ್ರಾಯೋಗಿಕ ಹಂತದಲ್ಲೇ ಇದೆ. ಉಳಿದಂತೆ ಸೋಲಾರ್ ಬಳಕೆಯನ್ನು 2070ರ ಹೊತ್ತಿಗೆ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ. 65-70ಕ್ಕೆ ಏರಿಸಿಕೊಳ್ಳುವುದು ಬಾಣಲೆಯಿಂದ ಬೆಂಕಿಗೆ ಹಾರಿದಂತಾಗಲಿದೆ. ಯಾಕೆಂದರೆ, ಸೋಲಾರ್ ಪ್ಯಾನಲ್‌ಗಳ ಮಾಲಿನ್ಯ, ನೀರಿನ ಕೊರತೆ ಇತ್ಯಾದಿ ಸಂಗತಿಗಳು ಈಗಾಗಲೇ ಸದ್ದು ಮಾಡುತ್ತಿವೆ. ನಮ್ಮ ಮೂಲ ಸೌಕರ್ಯ ಕಾಮಗಾರಿ ಗುಣಮಟ್ಟಗಳು, ಭ್ರಷ್ಟ ವ್ಯವಸ್ಥೆ, ಖಚಿತ ಯೋಜನೆಯಾಗಲೀ ಸ್ವಂತ ಯೋಚನೆಯಾಗಲೀ ಇಲ್ಲದ ಆಡಳಿತ-ಇದನ್ನೆಲ್ಲ ಸಮಗ್ರವಾಗಿಟ್ಟು ನೋಡಿದಾಗ, ದೇಶ ಗೊತ್ತುಗುರಿ ಇಲ್ಲದೇ ‘ಡೇಬಲಾಪ್‌ಮೇಂಟ್’ ಸುಂಟರಗಾಳಿಗೆ ಸಿಕ್ಕಿ, ಗಾಳಿಬಂದತ್ತ ತೂರಿಕೊಳ್ಳುತ್ತಿದೆ ಎಂದೇ ಅನ್ನಿಸುತ್ತಿದೆ. ಇದೇ ಹಾದಿಯಲ್ಲಿ ಹೋದರೆ 2070ಕ್ಕೆ ತಲುಪುವಾಗ ನಾವು ನೆಟ್ ಝೀರೊ ಸಾಧಿಸಿರುವುದೂ ಇಲ್ಲ, ಆರ್ಥಿಕವಾಗಿ ಬಲಿಷ್ಠ ಆಗಿರುವುದೂ ಇಲ್ಲ. ಬರೆದಿಟ್ಟುಕೊಳ್ಳಿ ಬೇಕಿದ್ದರೆ.