×
Ad

ಮಾರಿದ್ರೆ ಎರಡು ಆಣೆ; ಕೊಳ್ಳೋಕೆ ಎರಡು ಆನಿ

Update: 2026-02-28 13:11 IST

ಇಂತಹದೊಂದು ಸನ್ನಿವೇಶಕ್ಕೆ ಸಿದ್ಧಗೊಳ್ಳುವಾಗ ಮೂಲಭೂತ ಅವಶ್ಯಕತೆ ಎಂದರೆ ಶಾಸಕಾಂಗ ತನ್ನ ನೀತಿನಿರೂಪಣೆಯ ಭಾಗವಾಗಿ, ಈ ರೀತಿಯ ಬೆಳವಣಿಗೆಗಳಿಗೆ ಚೆಕ್ಸ್ ಆಂಡ್ ಬ್ಯಾಲೆನ್ಸಸ್ಗಳನ್ನು ನಿಶ್ಚಿತಪಡಿಸಿಕೊಳ್ಳುವುದು. ಆ ಮೂಲಭೂತ ತಯಾರಿ ಇಲ್ಲದೆ, ನೇರವಾಗಿ ಸರಕಾರಿ ಸೊತ್ತುಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಹೊರಡುವುದು ದೇಶದ ಸಾರ್ವಭೌಮತೆಯ ದೃಷ್ಟಿಯಿಂದ ತೀರಾತೀರಾ ಅಪಾಯಕಾರಿ.

ಭಾರತ ಅನುಸರಿಸುತ್ತಿರುವ ಉದಾರೀಕರಣದ ಹಾದಿಯ ಕೊನೆಯ ನಿಲ್ದಾಣ ಎಂದರೆ, ಬೆರಳೆಣಿಕೆಯ ಆನಿಗಳು. ರಸ್ತೆ ಅವರದು, ಟೋಲ್ ಸಂಗ್ರಹ ಅವರದು, ವಿದ್ಯುತ್ ಉತ್ಪಾದನೆ (ಸೋಲಾರ್, ನ್ಯೂಕ್ಲಿಯರ್, ಉಷ್ಣ ವಿದ್ಯುತ್ ಇತ್ಯಾದಿ) ಅವರದು, ವಿದ್ಯುತ್ ದಾಸ್ತಾನು ಅವರದು, ವಿದ್ಯುತ್ ವಿತರಣೆ ಅವರದು, ಬ್ಯಾಟರಿ ಉತ್ಪಾದನೆ ಅವರದು, ವಿದ್ಯುತ್ ಚಾಲಿತ ವಾಹನ ಅವರದು, ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್ ಅವರದು, ಈ ಸಮಗ್ರ ವ್ಯವಸ್ಥೆಗೆ ಬೇಕಾದ ಎಲ್ಲ ಹಂತದ ಕಚ್ಚಾ ಸಾಮಗ್ರಿಗಳು (ಕಲ್ಲಿದ್ದಲು, ರೇರ್ ಅರ್ಥ್ ಮಿನರಲ್ಸ್ ಇತ್ಯಾದಿ) ಅವರದು, ಗಣಿಗಳು ಅವರದು, ಸಾಗಣೆಗೆ ಬಂದರು ಅವರದು, ರೈಲ್ವೆ ಅವರದು, ವಿಮಾನ ನಿಲ್ದಾಣ ಅವರದು.... ಹೀಗೆ ವಿಕಸಿತ ಭಾರತದ ಸಕಲೆಂಟೂ ಕೂಡ ಬೆರಳೆಣಿಕೆಯ ಆನಿಗಳ ಸ್ವಂತದ್ದಾದ ಬಳಿಕ, ಇವುಗಳ/ಇವರ ಮೇಲೆ ಸರಕಾರಕ್ಕೆ ಏನು ನಿಯಂತ್ರಣ?!

ಈ ಪ್ರಶ್ನೆಯನ್ನು ಇಂದು ಕೇಳಿಕೊಳ್ಳದೇ ಹೋದರೆ, ಇನ್ನೆಂದೂ ಕೇಳಲು ಸಾಧ್ಯವಾಗದಿರುವ ಸನ್ನಿವೇಶ ಎದುರಾಗಬಹುದು.

ಇಂತಹದೊಂದು ಪ್ರಶ್ನೆ ಈಗ ಯಾಕೆ ಎದ್ದಿದೆ ಎಂದರೆ, ಈ ವಾರದ ಆರಂಭದಲ್ಲಿ (ಫೆ. 23) ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘National Monetisation Pipeline 2.0 (NMP 2.0)’ ಅನ್ನು ಅನಾವರಣಗೊಳಿಸಿದ್ದಾರೆ. NITI ಆಯೋಗವು ಸಿದ್ಧಪಡಿಸಿರುವ, FY 2025-2030 ಅವಧಿಯಲ್ಲಿ ಭಾರತ ಸರಕಾರದ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಪಾಲಿಸಬೇಕಾಗಿರುವ ಮಾರಾಟ ಯೋಜನೆ ಇದು. ರಾಷ್ಟ್ರೀಯ ಸೊತ್ತುಗಳನ್ನು ಖಾಸಗಿಪಾಲು ಮಾಡುವ ಈ ಮಾನೆಟೈಜೇಷನ್ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ, 16.72 ಲಕ್ಷ ಕೋಟಿ ರೂ.ಗಳನ್ನು ಸರಕಾರದ ಬೊಕ್ಕಸಕ್ಕೆ ಗಳಿಸಿಕೊಡಲಿದ್ದು, ಅದರ ಪೈಕಿ, ೫.೮ ಲಕ್ಷ ಕೋಟಿ ರೂ.ಗಳ ಖಾಸಗಿ ವಲಯದ ಹೂಡಿಕೆ ಕೂಡ ಇರಲಿದೆ ಎಂದು ಸಚಿವೆ ಹೇಳಿಕೊಂಡಿದ್ದಾರೆ.

ಈ ಖಾಸಗಿಪಾಲು ಮಾಡುವ ಯೋಜನೆಯಲ್ಲಿ ಹೆದ್ದಾರಿಗಳು, ಬಹುರೂಪಿ ಸರಕು ಸಾಗಣೆ ಕೇಂದ್ರಗಳು(ಒಒಐP), ರೋಪ್ವೇಗಳ ಪಾಲು 4.42 ಲಕ್ಷ ಕೋಟಿ ರೂ. (ಶೇ. 26); ರೈಲ್ವೇ ಪಾಲು 2.62 ಲಕ್ಷ ಕೋಟಿ ರೂ. (ಶೇ. 16); ವಿದ್ಯುತ್ ಕ್ಷೇತ್ರದ ಪಾಲು 2.76 ಲಕ್ಷ ಕೋಟಿ ರೂ. (ಶೇ. 17); ಬಂದರುಗಳ ಪಾಲು 2.63 ಲಕ್ಷ ಕೋಟಿ ರೂ. (ಶೇ. 16); ಕಲ್ಲಿದ್ದಲಿನ ಪಾಲು 2.16 ಲಕ್ಷ ಕೋಟಿ ರೂ. (ಶೇ. 13); ಗಣಿಗಳ ಪಾಲು 1 ಲಕ್ಷ ಕೋಟಿ ರೂ. (ಶೇ. 6). ಉಳಿದಂತೆ ತೈಲ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ದಾಸ್ತಾನು ವ್ಯವಸ್ಥೆ, ಟೆಲಿಕಾಂ, ಪ್ರವಾಸೋದ್ಯಮ ಕ್ಷೇತ್ರಗಳಿವೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ), ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (InvIT) ಮತ್ತಿತರ ವಿಧಾನಗಳನ್ನು ಬಳಸಿಕೊಂಡು ಈ ಪರಭಾರೆ ನಡೆಯಲಿದೆ. ಅಂದು ಮಾತನಾಡಿದ ಹಣಕಾಸು ಸಚಿವೆ ‘‘ಉತ್ಪಾದಕ ಸಾಮರ್ಥ್ಯ ಇರುವ ಸಾರ್ವಜನಿಕ ಸೊತ್ತುಗಳನ್ನು ರೀಸೈಕಲ್ ಮಾಡುವುದರಿಂದ, ಹೊಸ ಯೋಜನೆಗಳಿಗೆ ಹಾಗೂ ಬಂಡವಾಳ ವೆಚ್ಚಗಳಿಗೆಂದು ಮರುಹೂಡಿಕೆ ಮಾಡಲು ಹಣಕಾಸಿನ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಸುಲಭವಾಗಲಿದೆ; ಸರಕಾರಕ್ಕೆ ಬಜೆಟರಿ ಹೊರೆ ಕಡಿಮೆಯಾಗಲಿದೆ’’ ಎಂದು ಹೇಳಿದ್ದರಲ್ಲದೆ, ಹಿಂದಿನ NMP 1.0ದಲ್ಲಿ ಕಲಿತಿರುವ ಪಾಠಗಳ ಆಧಾರದಲ್ಲಿ, ಹಾಲಿ ಯೋಜನೆಯನ್ನು ಸುಧಾರಿಸಲಾಗಿದೆ ಎಂದಿದ್ದಾರೆ. (ಆಧಾರ: PIB Release ID: 2231900)

ಗಮನಿಸಬೇಕಾದ ಸಂಗತಿ ಎಂದರೆ, 2014 ಮಾರ್ಚ್ ಅಂತ್ಯಕ್ಕೆ 55.87 ಲಕ್ಷ ಕೋಟಿ. ರೂ.ಗಳಿದ್ದ ಭಾರತದ ಒಟ್ಟು ಸಾಲದ ಪ್ರಮಾಣವು ಇಷ್ಟೆಲ್ಲ ಸರಕಾರಿ ಸೊತ್ತುಗಳನ್ನು ಮಾರಿ ಸಂಪನ್ಮೂಲ ಕ್ರೋಡೀಕರಿಸಿಕೊಂಡ ಬಳಿಕವೂ, ಈಗ 2025-26ನೇ ಹಣಕಾಸು ವರ್ಷದ ಅಂತ್ಯಕ್ಕೆ 197.18 ಲಕ್ಷ ಕೋಟಿ ರೂ.ಗಳ ಅಗಾಧ ಮೊತ್ತವನ್ನು ತಲುಪಿದ್ದು ಹೇಗೆ? ... ಈ ಪ್ರಶ್ನೆಗೆ ಉತ್ತರ ಇಲ್ಲ.

NMP ೧.೦ ಯೋಜನೆಯನ್ನು NITI ಆಯೋಗವು 2021ರಲ್ಲಿ ಬಿಡುಗಡೆ ಮಾಡಿದ್ದು, ಅದರ ಅನ್ವಯ ಸರಕಾರ 5 ವರ್ಷಗಳಲ್ಲಿ 6 ಲಕ್ಷ ಕೋಟಿ. ರೂ.ಗಳ ಸೊತ್ತುಗಳನ್ನು 2024-25ರ ಹೊತ್ತಿಗೆ ಪರಭಾರೆ ಮಾಡಬೇಕಿತ್ತು. ಆ ಗುರಿಯಲ್ಲಿ, ಮೊದಲ ಮೂರು ವರ್ಷಗಳಲ್ಲಿ 3.87 ಲಕ್ಷ ಕೋಟಿ ಮತ್ತು ಕೊನೆಯ ವರ್ಷ 1.43 ಲಕ್ಷ ಕೋಟಿ ರೂ.- ಹೀಗೆ ಒಟ್ಟು 5.3ಲಕ್ಷ ಕೋಟಿ ರೂ.ಗಳ ಸೊತ್ತು ಪರಭಾರೆ ಆಗಿದೆಯಂತೆ. ರಸ್ತೆಗಳು 1.1 ಲಕ್ಷ ಕೋಟಿ ರೂ.; ರೈಲ್ವೆ 0.3 ಲಕ್ಷ ಕೋಟಿ ರೂ.; ವಿದ್ಯುತ್ 0.5 ಲಕ್ಷ ಕೋಟಿ ರೂ.; ತೈಲ ಮತ್ತು ಅನಿಲ 0.4 ಲಕ್ಷ ಕೋಟಿ ರೂ.; ಕಲ್ಲಿದ್ದಲು 2 ಲಕ್ಷ ಕೋಟಿ ರೂ.; ಶಿಪ್ಪಿಂಗ್ 0.2 ಲಕ್ಷ ಕೋಟಿ ರೂ.; ಗಣಿಗಳು 0.4 ಲಕ್ಷ ಕೋಟಿ ರೂ.; ಮತ್ತು ನಗರ ಭೂಮಿ 0.1 ಲಕ್ಷ ಕೋಟಿ ರೂ. ಪರಭಾರೆ ಆಗಿವೆ. (ಆಧಾರ: ರಾಜ್ಯಸಭೆ ಚುಕ್ಕೆರಹಿತ ಪ್ರಶ್ನೆ- 1742; ದಿನಾಂಕ: 15-12-2025)

ಈ ಮಾನೆಟೈಜೇಷನ್ ಪೈಪ್ಲೈನ್ ಯೋಜನೆಗಳನ್ನು ಒಂದೊಂದಾಗಿ ನೋಡದೆ ಸಮಗ್ರವಾಗಿ ನೋಡಿದಾಗ ಮಾತ್ರ ಆ ಯೋಜನೆಯಲ್ಲಿನ ಒಳಸುಳಿಗಳು ಪತ್ತೆ ಆಗತೊಡಗುತ್ತವೆ. ದೇಶದಲ್ಲಿಂದು ಆಯಕಟ್ಟಿನ ಸೊತ್ತುಗಳಾದ ರಸ್ತೆ, ವಿದ್ಯುತ್, ರೈಲು, ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು, ಗಣಿ ಇತ್ಯಾದಿ ವಲಯಗಳಲ್ಲಿ ಈಗಾಗಲೇ ಹೂಡಿಕೆ ಮಾಡಿ, ಸರಕಾರದ ನೀತಿಗಳನ್ನು ತಮ್ಮ ಮೂಗಿನ ನೇರಕ್ಕೆ ಬಗ್ಗಿಸಿಕೊಂಡು ಕಾರ್ಯಾಚರಿಸುತ್ತಿರುವ ಬೆರಳೆಣಿಕೆಯ ಕಾರ್ಪೊರೇಟ್ಗಳು ಯಾರೆಂಬುದು ದೇಶಕ್ಕೀಗ ಚಿರಪರಿಚಿತ. ಈ NMP 2.0ದ ಬಹುತೇಕ ಸೊತ್ತುಗಳು ಸ್ಟ್ರಾಟಜಿಕ್ ಆಗಿ ಇಂತಹ ಕಾರ್ಪೊರೇಟ್ಗಳಿಗೇ ಅಗತ್ಯ ಇರುವಂತಹವು ಮತ್ತು ಅಂತಹವನ್ನೇ ಮಾರಾಟಕ್ಕೆ ಇರಿಸಲಾಗುತ್ತಿದೆ. ಜೊತೆಗೇ, ಇಂಚಿಂಚಾಗಿ ಆ ವಲಯಗಳ ನಿಯಂತ್ರಣವನ್ನು ಸಂಪೂರ್ಣವಾಗಿ ಅವರ ಸುಪರ್ದಿಗೆ ಬಿಟ್ಟುಕೊಡುವುದಕ್ಕೆ ಅನುಕೂಲ ಆಗುವಂತೆ ಸರಕಾರದ ನೀತಿಗಳನ್ನು ಬಗ್ಗಿಸಲಾಗುತ್ತಿದೆ.

ಒಂದು ಉದಾಹರಣೆ ನೀಡಬೇಕೆಂದರೆ: ವಿದ್ಯುತ್ ಖಾಸಗೀಕರಣದ ಕಡೆ ವೇಗವಾಗಿ ಹೆಜ್ಜೆ ಹಾಕುತ್ತಿರುವಾಗಲೇ, ಈಗ NMP 2.0ದಲ್ಲಿ, NHPC ಹಾಗೂ SJVN ಅಧೀನದಲ್ಲಿರುವ ಒಟ್ಟು ನಾಲ್ಕು ಜಲ ವಿದ್ಯುತ್ ಉತ್ಪಾದನಾ ಘಟಕಗಳು (4,881 MW ಸಾಮರ್ಥ್ಯ), ಪವರ್ ಗ್ರಿಡ್ ನಿಗಮದ (PGCIL) 15,295ckm ಟ್ರಾನ್ಸ್ ಮಿಷನ್ ಸೊತ್ತುಗಳು, ೨೨,೦೦೦ckm ಅಂತರ್ರಾಜ್ಯ ಟ್ರಾನ್ಸ್ಮಿಷನ್ ಸೊತ್ತುಗಳು ಇತ್ಯಾದಿ ಪರಭಾರೆಗೆ ಸಿದ್ಧವಾಗಿವೆ. ಇನ್ನೊಂದೆಡೆ, ಸರಕಾರ ತನ್ನ ಕೈಯಿಂದ ಸಾರ್ವಜನಿಕರ ತೆರಿಗೆ ಹಣ ಸುರಿದು, ನಷ್ಟದಲ್ಲಿರುವ DISCOMಗಳ ನಷ್ಟದ ಪ್ರಮಾಣವನ್ನು ತಗ್ಗಿಸಿ, ಮಾರಾಟಕ್ಕೆ ಅಣಿ ಮಾಡುತ್ತಿದೆ. ಕೋವಿಡ್ ಜಗನ್ಮಾರಿ ಕಾಡುವ ಮಧ್ಯದಲ್ಲೂ (ಮೇ 2020) 90,000 ಕೋಟಿ ರೂಗಳನ್ನು ಸರಕಾರ ವಿಶೇಷ ಪ್ಯಾಕೇಜ್ ಆಗಿ DISCOMಗಳಿಗೆ ಒದಗಿಸಿ, ಬಳಿಕ ಆ ಪ್ರಮಾಣವನ್ನು 1.25 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿತ್ತು.

ಈಗ ವಿದ್ಯುತ್ ಉತ್ಪಾದನೆ, ಕಚ್ಚಾಮಾಲು, ವಿತರಣೆ, ದಾಸ್ತಾನು, ಬ್ಯಾಟರಿ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್... ಹೀಗೆ ವಿದ್ಯುತ್ ಕ್ಷೇತ್ರದ ಸಮಗ್ರ ಸಂಗತಿಗಳೆಲ್ಲವೂ ಒಂದು ಅಥವಾ ಎರಡು ಕಾರ್ಪೊರೇಟ್ ಕಂಪೆನಿಗಳ ಹಿಡಿತಕ್ಕೆ ಸಿಕ್ಕಾಗ, ಮಾರುಕಟ್ಟೆಯ ಮೇಲೆ ಅವರ ನಿಯಂತ್ರಣಕ್ಕೆ, ಏಕಸ್ವಾಮ್ಯಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸರಕಾರವೂ ಆ ಕಾರ್ಪೊರೇಟ್ಗಳ ಪರ ನಿಂತರಂತೂ ಕೇಳುವುದೇ ಬೇಡ. ದುರದೃಷ್ಟವಶಾತ್, ಅಂತಹದೊಂದು ಸನ್ನಿವೇಶಕ್ಕೆ ದೇಶ ಸನ್ನದ್ಧಗೊಳ್ಳುತ್ತಿದೆ.

ಈ ರೀತಿಯ ನೀತಿಗಳನ್ನು ಸಿದ್ಧಪಡಿಸುತ್ತಿರುವ ಭಾರತದ NITI ಆಯೋಗ, ಶುದ್ಧ ಖಾಸಗಿ ಸಂಸ್ಥೆಯಂತೆ ವರ್ತಿಸುತ್ತಿದ್ದು, ಅದರ ಯಾವುದೇ ಚಟುವಟಿಕೆಗಳಿಗೆ ಪಾರದರ್ಶಕತೆ ಇಲ್ಲ. ಅದರ ತೀರ್ಮಾನಗಳಿಗೆ ಉತ್ತರದಾಯಿತ್ವವೂ ಇಲ್ಲ. ಸಂಸತ್ತಿಗೂ ಅದು ಉತ್ತರದಾಯಿ ಅಲ್ಲ ಎಂಬ ಸ್ಥಿತಿ ಇದೆ. ಸ್ವತಃ ಕಾರ್ಪೊರೇಟ್ ಆನಿಗಳ ಪರ ಇರುವ ಮಂದಿ ಸೇರಿ ಈ ವರದಿಗಳನ್ನು NITI ಆಯೋಗದ ಮೂಲಕ ಸಿದ್ಧಪಡಿಸಿದ್ದರೂ ಇರಬಹುದು ಎಂಬಂತಹ ಆತಂಕದ ಸ್ಥಿತಿ ಇದೆ.

ಇಂತಹದೊಂದು ಸನ್ನಿವೇಶಕ್ಕೆ ಸಿದ್ಧಗೊಳ್ಳುವಾಗ ಮೂಲಭೂತ ಅವಶ್ಯಕತೆ ಎಂದರೆ ಶಾಸಕಾಂಗ ತನ್ನ ನೀತಿನಿರೂಪಣೆಯ ಭಾಗವಾಗಿ, ಈ ರೀತಿಯ ಬೆಳವಣಿಗೆಗಳಿಗೆ ಚೆಕ್ಸ್ ಆಂಡ್ ಬ್ಯಾಲೆನ್ಸಸ್ಗಳನ್ನು ನಿಶ್ಚಿತಪಡಿಸಿಕೊಳ್ಳುವುದು. ಆ ಮೂಲಭೂತ ತಯಾರಿ ಇಲ್ಲದೆ, ನೇರವಾಗಿ ಸರಕಾರಿ ಸೊತ್ತುಗಳನ್ನು ಖಾಸಗಿಯವರಿಗೆ ಪರಭಾರೆ ಮಾಡಹೊರಡುವುದು ದೇಶದ ಸಾರ್ವಭೌಮತೆಯ ದೃಷ್ಟಿಯಿಂದ ತೀರಾತೀರಾ ಅಪಾಯಕಾರಿ.

ಅಕಸ್ಮಾತ್ ಆನಿಗಳಲ್ಲೊಂದಕ್ಕೆ ದೇಶದ ಆಡಳಿತ ಚುಕ್ಕಾಣಿ ಹೊಂದಿರುವ ಸರಕಾರದ ಮೇಲೆ, ಅಥವಾ ಒಂದು ರಾಜ್ಯ ಸರಕಾರದ ಮೇಲೆ ಕೋಪ ಬಂತೆಂದಿಟ್ಟುಕೊಳ್ಳಿ. ಅಕಸ್ಮಾತ್ ಎರಡು ದಿನ ವಿದ್ಯುತ್ ಸರಬರಾಜು ಕಡಿತಗೊಳಿಸಿದರೆ, ಡಿಜಿಟಲ್ ಇಂಡಿಯಾದ ಸಕಲೆಂಟು ವ್ಯವಹಾರಗಳೂ ಸಂಪೂರ್ಣ ಸ್ತಬ್ಧಗೊಳ್ಳಲಿವೆ. ಈಗ ಈ ಮಾತು ಕೇಳಲು ತೀರಾ ಕ್ಲೀಷೆ/ಬಾಲಿಷ ಅನ್ನಿಸಬಹುದು. ಆದರೆ ವಸ್ತುಶಃ ನಾವು ಅಂತಹದೊಂದು ಸನ್ನಿವೇಶದತ್ತ ಸಾಗುತ್ತಿದ್ದೇವೆ. ಅದಕ್ಕೆ ಅನುಮಾನವೇ ಬೇಡ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ರಾಜಾರಾಂ ತಲ್ಲೂರು

contributor

Similar News