ಅಕ್ಕಿ ‘ದೊರೆ’ ನಾಳೆ ನೀರಿಗಾಗಿ ‘ದಾಸ್ಯ’ ಅನುಭವಿಸದಿರಲಿ
ಭಾರತದ ಒಟ್ಟು ಸನ್ನಿವೇಶವನ್ನು ಗಮನದಲ್ಲಿ ಇರಿಸಿಕೊಂಡು ನೀತಿಗಳನ್ನು ರೂಪಿಸಬೇಕಾದವರು ವ್ಯಾಪಾರಿಗಳ, ಲಾಭ ಬಡುಕರ ಮಾತು ಕೇಳಿಕೊಂಡು, ಅವರ ತಾಳಕ್ಕೆ ತಕ್ಕಂತೆ ಕುಣಿದರೆ ತಾತ್ಕಾಲಿಕವಾಗಿ ‘ಅಕ್ಕಿ ದೊರೆ’ ಅನ್ನಿಸಿಕೊಳ್ಳುವ ಮೂಲಕ ಜುಟ್ಟಿಗೆ ಮಲ್ಲಿಗೆ ಪೇರಿಸಿಕೊಳ್ಳಬಹುದು. ಆದರೆ ನಾಳೆ ಅಂತರ್ಜಲ ಕುಸಿತ, ನೀರಿಗಾಗಿ ಹಾಹಾಕಾರದ ಕಾರಣಕ್ಕೆ ದೇಶದಲ್ಲಿ ಆತಂಕದ ಸ್ಥಿತಿ ಎದುರಾದರೆ ಅದರ ಹೊಣೆ ಹೊರಬೇಕಾದವರು ಯಾರು? ಭಾರತ ನೀರಿಗಾಗಿ ದಾಸ್ಯ ಅನುಭವಿಸುವ ಸ್ಥಿತಿ ಎದುರಾದರೆ, ಆ ಪರಿಸ್ಥಿತಿ ನಿಭಾಯಿಸುವುದು ಹೇಗೆ?
ಇಂದಿಗೆ ಐದು ದಿನಗಳ ಬಳಿಕ (ಅಕ್ಟೋಬರ್ 30, 31) ದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಡಪಂನಲ್ಲಿ ಭಾರತ ಸರಕಾರದ ವತಿಯಿಂದ, ಅಕ್ಕಿ ರಫ್ತುಗಾರರ ಫೆಡರೇಶನ್ (IREF) ಆತಿಥ್ಯದಲ್ಲಿ BRICS ದೇಶಗಳ ಭಾರತ ಅಂತರ್‌ರಾಷ್ಟ್ರೀಯ ಅಕ್ಕಿ ಸಮ್ಮೇಳನ-2025 ವ್ಯವಸ್ಥೆ ಆಗಿದೆ. ಈ ಸಮ್ಮೇಳನದ ಹಿನ್ನೆಲೆಯಲ್ಲಿ ಭಾರತ ಸರಕಾರದ ಗ್ರಾಹಕ ವ್ಯವಹಾರಗಳ ಮತ್ತು ಪಡಿತರ ಖಾತೆಗಳ ಸಚಿವ ಪ್ರಹ್ಲಾದ ಜೋಷಿ ಅವರು ವೀಡಿಯೊ ಸಂದೇಶವೊಂದನ್ನು ನೀಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆ ಸಂದೇಶದಲ್ಲಿ ಅವರು, ಮುಂದಿನ ಐದು ವರ್ಷಗಳಲ್ಲಿ ಭಾರತದ ಕೃಷಿ ರಫ್ತು ದುಪ್ಪಟ್ಟು ಮಾಡುವುದಲ್ಲದೆ ಅಕ್ಕಿಗೆ ಹೊಸ ಜಾಗತಿಕ ಮಾರುಕಟ್ಟೆಗಳನ್ನು ಹುಡುಕಲಾಗುವುದು ಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಅಕ್ಕಿ ವ್ಯಾಪಾರದಲ್ಲಿ ಜಾಗತಿಕ ನಾಯಕನಾಗಿ ದೇಶದ ಸ್ಥಾನವನ್ನು ಬಲಪಡಿಸಲು ಭಾರತ ಸರಕಾರದ ದೀರ್ಘಾವಧಿ ಯೋಜನೆಯನ್ನು ವಿವರಿಸಿದ ಸಚಿವ ಜೋಷಿ ಅವರು, ಆಹಾರದ ಗುಣಮಟ್ಟ ಸುರಕ್ಷತೆ ಮತ್ತು ಅಗ್ಗದ ದರವನ್ನು ಖಾತ್ರಿ ಪಡಿಸುವತ್ತ ಸರಕಾರದ ಗಮನ ಎಂದಿನಂತೆಯೇ ಇರಲಿದೆ. ಭಾರತವು ಅಕ್ಕಿಯ ಅತಿದೊಡ್ಡ ಉತ್ಪಾದಕ, ಪ್ರಮುಖ ರಫ್ತುದಾರ. ಮಾತ್ರವಲ್ಲದೆ, ಪ್ರತೀ ಮನೆಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಆಳವಾದ ಬದ್ಧತೆಯನ್ನು ಸರಕಾರ ಹೊಂದಿದೆ ಎಂದು ವಿವರಿಸಿದ್ದಾರೆ. ಅಲ್ಲದೆ ಮಾರುಕಟ್ಟೆ ವಿಸ್ತರಣೆ ನೆಪದಲ್ಲಿ ಪಡಿತರ ವ್ಯವಸ್ಥೆಯನ್ನು ಕಡೆಗಣಿಸುವುದಿಲ್ಲ. ಪಡಿತರ ವಿತರಣಾ ವ್ಯವಸ್ಥೆಯ ಆಧುನೀಕರಣ, ಮೂಲಸೌಕರ್ಯ ಬಲವರ್ಧನೆ, ರೈತರಿಗೆ ಹೊಸ ಅವಕಾಶಗಳ ಒದಗಣೆ ಮಾಡಲು ಸರಕಾರ ಯೋಜಿಸಿದೆ. ನಾವು ಕೈಗೊಳ್ಳುವ ಮಾರ್ಗೋಪಾಯಗಳಲ್ಲಿ ಅನ್ನದಾತರಿಗೆ ಆದ್ಯತೆ ಇರಲಿದೆ ಮತ್ತು ಎಲ್ಲವೂ ಗ್ರಾಹಕ ಕೇಂದ್ರಿತವಾಗಿರಲಿವೆ. ರಫ್ತು ಹೆಚ್ಚಳದಿಂದ ರೈತರ ಸಮೃದ್ಧಿ ಆಗುತ್ತದೆ. ಎಲ್ಲರಿಗೂ ಆಹಾರ ಭದ್ರತೆ ಸಿಗುತ್ತದೆ. ಇವೆರಡೂ ಜೊತೆಜೊತೆಯಾಗಿ ಸಾಗುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸಾಮರ್ಥ್ಯವನ್ನು ಅರಿತುಕೊಳ್ಳಲು ಎಲ್ಲ ಪಾಲುದಾರರು ದೊಡ್ಡ ಕನಸು ಕಾಣಬೇಕು ಮತ್ತು ಧೈರ್ಯದಿಂದ ಯೋಜಿಸಬೇಕು ಎಂದು ಸಚಿವ ಜೋಷಿ ಪ್ರತಿಪಾದಿಸಿದ್ದಾರೆ. ಈ ಅಕ್ಕಿ ಸಮ್ಮೇಳನದಲ್ಲಿ ವಿದೇಶಗಳಿಂದ ಸುಮಾರು 1,000 ಮಂದಿ ವಿದೇಶಿ ಖರೀದಿದಾರರು, 5,000ಕ್ಕೂ ಮಿಕ್ಕಿ ಭಾರತೀಯ ರೈತರು ಮತ್ತು ಬೇರೆ ಸ್ಟೇಕ್ ಹೋಲ್ಡರ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯನ್ನು ಸಮ್ಮೇಳನದ ಸಂಘಟಕರು ವ್ಯಕ್ತಪಡಿಸಿದ್ದಾರೆ.
ಅಕ್ಕಿಯ ಸಂಕಟಗಳು
ಒಂದು ಕಿಲೋಗ್ರಾಂ ಅಕ್ಕಿಯು ಗದ್ದೆಯಿಂದ ನಮ್ಮ ಮನೆಯನ್ನು ತಲುಪಲು ಸುಮಾರು 3,000ದಿಂದ 5,000 ಲೀಟರ್ ನೀರು ಖರ್ಚಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಕಂಡುಕೊಂಡಿರುವ ಲೆಕ್ಕಾಚಾರ. ಹಾಗಾಗಿ ಅಕ್ಕಿ, ಜಗತ್ತಿನ ಅತಿಹೆಚ್ಚು ನೀರು ಬಳಕೆ ಮಾಡಿಕೊಳ್ಳುವ ಬೆಳೆಗಳಲ್ಲಿ ಒಂದು. ಹೋಲಿಕೆಗೆ ಬೇಕೆಂದರೆ, ಸಾಮಾನ್ಯವಾಗಿ ಬೇರೆ ಒಂದು ಕಿಲೋಗ್ರಾಂ ಬೇಳೆ-ಕಾಳುಗಳು, ಎಣ್ಣೆ ಕಾಳುಗಳ ಉತ್ಪಾದನೆಗೆ 500-600 ಲೀಟರ್ ನೀರು ಸಾಕಾಗುತ್ತದೆ. ಭಾರತವು ಜಗತ್ತಿನ ಅಕ್ಕಿ ಉತ್ಪಾದಕ ದೇಶಗಳಲ್ಲಿ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನ ಚೀನಾದ್ದು. ಭಾರತದಲ್ಲಿ ಅಂದಾಜು 11.12 ಕೋಟಿ ಎಕರೆ ಭೂಮಿಯಲ್ಲಿ ಅಕ್ಕಿ ಬೆಳೆಯಲಾಗುತ್ತಿದ್ದು, 10 ಕೋಟಿ ಭಾರತೀಯರು ಅಕ್ಕಿ ಕೃಷಿಯನ್ನು ಅವಲಂಬಿಸಿದ್ದಾರೆ. ಪಂಜಾಬ್, ಹರ್ಯಾಣ, ದಿಲ್ಲಿ, ಪ. ಬಂಗಾಲ, ಉತ್ತರ ಪ್ರದೇಶಗಳು ಅಕ್ಕಿ ಬೆಳೆಯುವ ಪ್ರಮುಖ ರಾಜ್ಯಗಳು.
ಅತಿಯಾದ ನೀರಿನ ಬಳಕೆಯ ಕಾರಣಕ್ಕಾಗಿ ಅಂತರ್ಜಲ ಕುಸಿತ ಭಾರತದಲ್ಲಿ ಆತಂಕಕಾರಿ ಮಟ್ಟದಲ್ಲಿದೆ. ಕಳೆದ ಐದು ದಶಕಗಳಲ್ಲಿ, ಜಗತ್ತಿನ ಅಂತರ್ಜಲ ಬಳಕೆಯ ಪ್ರಮಾಣದಲ್ಲಿ ಶೇ. 500 ಹೆಚ್ಚಳ ಆಗಿದ್ದು, ಭಾರತದಲ್ಲಿ 1980ರಿಂದೀಚೆಗೆ ಅಂತರ್ಜಲ ಪ್ರಮಾಣದಲ್ಲಿ ಸರಾಸರಿ 8 ಮೀಟರ್ ಇಳಿಕೆ ಆಗಿದೆ, ಕೆಲವೆಡೆ ಇದು 30 ಮೀಟರಿನಷ್ಟು ಇಳಿಕೆ ಆದದ್ದೂ ಇದೆ ಎಂದು ಪರಿಣಿತರು ಗುರುತಿಸಿದ್ದಾರೆ. ಜಾಗತಿಕವಾಗಿ ಅಂತರ್ಜಲದ ಸೆಲೆ ಬತ್ತುವಲ್ಲಿ ಭಾರತದ ಕೊಡುಗೆ, ಶೇ. 12 ಆಗಿದ್ದು, ಇದೇ ವೇಗದಲ್ಲಿ ಮುಂದುವರಿದರೆ ಇನ್ನು 1,000 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಅಂತರ್ಜಲ ಸಂಪೂರ್ಣ ಬರಿದಾಗಲಿದೆಯಂತೆ. ಅಕ್ಕಿಯ ಬಗ್ಗೆ ಇರುವ ಆತಂಕ ಎಂದರೆ, ಜಗತ್ತಿನ ನೀರಿನ ಬಳಕೆಯಲ್ಲಿ ಶೇ. 34-43 ಪಾಲು ಅಕ್ಕಿಯದು.
ಪ್ರಮುಖ ಆಹಾರ ಬೆಳೆ ಆಗಿರುವ ಅಕ್ಕಿಯ ಇಳುವರಿ ಈಗ ತಗ್ಗಿದ್ದು, ಪ್ರತೀ ಎಕರೆಗೆ ಇಳುವರಿ ಒಂದು ಟನ್‌ಗಿಂತ ಕಡಿಮೆ ಇದೆ. ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗುತ್ತಿದೆ. ಅವುಗಳಲ್ಲಿ ಅಂತರ್ಜಲ ಕೊರತೆ ಮಾತ್ರವಲ್ಲದೆ, ಹವಾಮಾನ ಬದಲಾವಣೆಯ ಕಾರಣಕ್ಕೆ ಅಂಕೆ ತಪ್ಪಿರುವ ಮಳೆ, ಏರುತ್ತಿರುವ ವಾತಾವರಣ ಉಷ್ಣತೆ, ಅಂತರ್ಜಲ ಮಟ್ಟ ತಗ್ಗಿರುವ ಕಾರಣದಿಂದ ಮಣ್ಣಿನ ಗುಣಮಟ್ಟದಲ್ಲಿ ಆಗಿರುವ ಬದಲಾವಣೆ, ನಗರೀಕರಣ-ಕೈಗಾರಿಕೀಕರಣಗಳ ಕಾರಣದಿಂದಾಗಿ ಉಂಟಾಗಿರುವ ನೀರಿನ ಬೇಡಿಕೆ ಒತ್ತಡಗಳು ಕಾರಣ ಎಂದು ಪರಿಣಿತರು ಗುರುತಿಸಿದ್ದಾರೆ.
ಭಾರತದ್ದು ಹಿಮ್ಮುಖ ಚಲನೆಯೆ?
ಜಗತ್ತಿನ ಅಕ್ಕಿ ಉತ್ಪಾದಕ-ಬಳಕೆಯ ಬುದ್ಧಿವಂತ ರಾಷ್ಟ್ರಗಳು ಇಂದು ತಮ್ಮಲ್ಲಿ ಅಕ್ಕಿ ಬೆಳೆಯುವ ಬದಲು ವಿದೇಶಗಳಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದು ಹೆಚ್ಚು ಲಾಭಕರ ಎಂದು ಕಂಡುಕೊಂಡಿವೆ. ಹೀಗೆ ವರ್ಚುವಲ್ ನೀರಿನ ಆಮದು (ಅರ್ಥಾತ್ ಅಕ್ಕಿ ಉತ್ಪಾದನೆಗೆ ಸ್ವತಃ ನೀರು ಬಳಸಿ ಬೆಳೆಯುವ ಬದಲು ವಿದೇಶಗಳವರು ತಮ್ಮ ನೀರು ಬಳಸಿ ಬೆಳೆದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದು ಮತ್ತು ಆ ಮೂಲಕ ತಮ್ಮ ದೇಶದ ಅಂತರ್ಜಲ ಪ್ರಮಾಣವನ್ನು ಕಾಪಾಡಿಕೊಳ್ಳುವುದು) ತಂತ್ರಗಾರಿಕೆ ವೇಗ ಪಡೆಯುತ್ತಿದೆ. ಈಗ ಅಂದಾಜು 2,500 ಕೋಟಿ ಘನಮೀಟರ್‌ನಷ್ಟು ವರ್ಚುವಲ್ ನೀರು ರಫ್ತು ವಹಿವಾಟು ಜಗತ್ತಿನಾದ್ಯಂತ ಅಕ್ಕಿಯ ಕಾರಣಕ್ಕೆ ನಡೆಯುತ್ತಿದೆಯಂತೆ.
ವಾಸ್ತವ ಹೀಗಿರುವಾಗ, ಭಾರತವು ಏಕಾಏಕಿ ಅಕ್ಕಿ ರಫ್ತಿನ ರೇಸಿಗೆ ಉಮೇದಿನಿಂದ ಇಳಿಯುತ್ತಿರುವುದು ಬಹಳ ಅತಾರ್ಕಿಕ ಅನ್ನಿಸಿದರೆ ಅಚ್ಚರಿ ಇಲ್ಲ. 2024-25ನೇ ಸಾಲಿಗೆ ಭಾರತವು 1.99 ಕೋಟಿ ಟನ್ ಅಕ್ಕಿ ರಫ್ತು ಮಾಡಿದೆ (ಬಾಸ್ಮತಿ-59.44ಲ. ಟನ್; ಪಾರಾಬಾಯಿಲ್ಡ್ ಅಕ್ಕಿ-90.44 ಲ. ಟನ್; ಬಾಸ್ಮತಿಯೇತರ ಅಕ್ಕಿ- 33.24 ಲ. ಟನ್; ಕಡಿ ಅಕ್ಕಿ-7.95 ಲ. ಟನ್; ಇತರ ಅಕ್ಕಿ ವೆರೈಟಿಗಳು-7.59 ಲ. ಟನ್). ಅಂದರೆ, ಭಾರತವು ಪರೋಕ್ಷವಾಗಿ ರಫ್ತು ಮಾಡಿರುವ ನೀರಿನ ಪ್ರಮಾಣ ಎಷ್ಟು ಅಗಾಧವಾದುದು ಎಂಬುದನ್ನು ಊಹಿಸಿ. ಸರಕಾರ ಈ ಪ್ರಮಾಣವನ್ನು ಈಗ ದುಪ್ಪಟ್ಟು ಮಾಡುವ ಮಾತು ಆಡುತ್ತಿದೆ.
ಭಾರತದಲ್ಲಿ ಉತ್ಪಾದನೆ ಆಗುವ ಅಕ್ಕಿಯ ಪ್ರಮಾಣದಲ್ಲಿ, ಇಲ್ಲಿ ದಾಸ್ತಾನು ಮತ್ತು ಸಂಸ್ಕರಣೆಗೆ ಪೂರಕವಾದ ಮೂಲಸೌಕರ್ಯಗಳು ಇಲ್ಲದಿರುವ ಕಾರಣಕ್ಕೆ ಪ್ರತೀವರ್ಷ ಹಾಳಾಗುವ ಅಕ್ಕಿಯ ಪ್ರಮಾಣವನ್ನೂ (ಇದು ಉತ್ಪಾದನೆಯ ಅಂದಾಜು ಶೇ. 6.37 ಭಾಗ), ವ್ಯರ್ಥ ಬಳಕೆಯಾಗುತ್ತಿರುವ ನೀರಿನ ಪ್ರಮಾಣಕ್ಕೆ ಸೇರಿಸಿ ಲೆಕ್ಕ ಹಾಕಿದರೆ, ನಾವು ನಿಜಕ್ಕೂ ಆತಂಕ ಪಡಬೇಕಾದ ಸ್ಥಿತಿ ಇದೆ.
ಇದೆಲ್ಲವೂ ಸಾಲದೆಂಬಂತೆ, ಭಾರತ ಸರಕಾರ ತನ್ನ ಆಹಾರ ನಿಗಮದ ದಾಸ್ತಾನು ಕೋಠಿಗಳಲ್ಲಿರುವ ಅಕ್ಕಿಯನ್ನು ಎಥನಾಲ್ ಉತ್ಪಾದನೆಗೆಂದು ಒದಗಿಸುತ್ತಿದೆ. ಎಥನಾಲ್ ಮಿಶ್ರಿತ ಪೆಟ್ರೋಲ್ (ಇ20) ಉತ್ಪಾದನೆಗೆ 2024-25ರಿಂದ 2025-26ರ ನಡುವೆ ಪ್ರತೀ ವರ್ಷ 52 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಕೋಠಿಗಳಿಂದ ಎಥನಾಲ್ ಉತ್ಪಾದನೆಗೆ ಒದಗಿಸಲಾಗುವುದು ಎಂದು ಸರಕಾರ ಸಂಸತ್ತಿಗೆ ತಿಳಿಸಿದೆ (ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2848, ದಿನಾಂಕ 18-08-2025). ಇದು ಅಕ್ಷಮ್ಯ.
ಜಗತ್ತಿನ 127 ಪ್ರಮುಖ ದೇಶಗಳಲ್ಲಿ ಆಹಾರ ಭದ್ರತೆಗೆ ಸಂಬಂಧಿಸಿದಂತೆ 105ನೇ ಸ್ಥಾನದಲ್ಲಿರುವ (ಗ್ಲೋಬಲ್ ಹಂಗರ್ ಇಂಡೆಕ್ಸ್ 2024) ಭಾರತದಲ್ಲಿ ಪ್ರಸ್ತುತ 33 ಕೋಟಿ ಜನರಿಗೆ ಆಹಾರ ಭದ್ರತೆ ಇಲ್ಲ. ಅವರಿಗೆ ಉಚಿತ ಪಡಿತರ ವಿತರಣೆಗೆ ಸರಕಾರವು ಕೋವಿಡ್ ಕಾಲದಲ್ಲಿ ಆರಂಭಿಸಿದ ಯೋಜನೆ (PM-GKAY) ಇನ್ನೂ ಮುಂದುವರಿಯುತ್ತಿದೆ. ವಾಸ್ತವ ಹೀಗಿರುವಾಗ, ನಮ್ಮ ಜನರ ಊಟದ ಬಟ್ಟಲಿನಿಂದ ಅನ್ನವನ್ನು ಕಿತ್ತು ಬೇರೆ ದೇಶಗಳಿಗೆ ರಫ್ತು ಮಾಡುವ, ಸಿರಿವಂತರ ಬಳಕೆಯ ಇಂಧನ ಉತ್ಪಾದನೆಗೆ ಒದಗಿಸುವ ಮೂಲಕ ‘ಅಕ್ಕಿ ದೊರೆ’ ಎನ್ನಿಸಿಕೊಳ್ಳಲು ಹೊರಡುವ ಭಾರತ ಸರಕಾರದ ಯೋಚನೆಯೇ ಕ್ರೌರ್ಯದ್ದು ಅನ್ನಿಸದೆ?
ಭಾರತದ ಒಟ್ಟು ಸನ್ನಿವೇಶವನ್ನು ಗಮನದಲ್ಲಿ ಇರಿಸಿಕೊಂಡು ನೀತಿಗಳನ್ನು ರೂಪಿಸಬೇಕಾದವರು ವ್ಯಾಪಾರಿಗಳ, ಲಾಭ ಬಡುಕರ ಮಾತು ಕೇಳಿಕೊಂಡು, ಅವರ ತಾಳಕ್ಕೆ ತಕ್ಕಂತೆ ಕುಣಿದರೆ ತಾತ್ಕಾಲಿಕವಾಗಿ ‘ಅಕ್ಕಿ ದೊರೆ’ ಅನ್ನಿಸಿಕೊಳ್ಳುವ ಮೂಲಕ ಜುಟ್ಟಿಗೆ ಮಲ್ಲಿಗೆ ಪೇರಿಸಿಕೊಳ್ಳಬಹುದು. ಆದರೆ ನಾಳೆ ಅಂತರ್ಜಲ ಕುಸಿತ, ನೀರಿಗಾಗಿ ಹಾಹಾಕಾರದ ಕಾರಣಕ್ಕೆ ದೇಶದಲ್ಲಿ ಆತಂಕದ ಸ್ಥಿತಿ ಎದುರಾದರೆ ಅದರ ಹೊಣೆ ಹೊರಬೇಕಾದವರು ಯಾರು? ಭಾರತ ನೀರಿಗಾಗಿ ದಾಸ್ಯ ಅನುಭವಿಸುವ ಸ್ಥಿತಿ ಎದುರಾದರೆ, ಆ ಪರಿಸ್ಥಿತಿ ನಿಭಾಯಿಸುವುದು ಹೇಗೆ?