×
Ad

ಅರುಂಧತಿ ಆತ್ಮಕಥನ: ಮೇರಿ ಅವರ ಕ್ರಾಂತಿ ಇನ್ನೂ ಅಪೂರ್ಣ

Update: 2025-09-19 11:17 IST

ಕೇರಳ ಬಹಳ ಪ್ರಗತಿಪರ ರಾಜ್ಯ. ಹೀಗಿದ್ದರೂ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ನಿರಾಕರಿಸಲಾಗಿತ್ತು. ಮೇರಿ ರಾಯ್ ಮಹಿಳೆಯರಿಗೆ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ, ನ್ಯಾಯಾಲಯದಲ್ಲಿ ಹೋರಾಡಿದರು. 1986ರಲ್ಲಿ ಸುಪ್ರೀಂ ಕೋರ್ಟ್, ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳಿಗೆ ಸಹೋದರರಷ್ಟೇ ಹಕ್ಕುಗಳಿವೆ ಎಂದು ತೀರ್ಪು ನೀಡಿತು. ಇದು ಹೆಣ್ಣುಮಕ್ಕಳನ್ನು ಅವಲಂಬನೆ ಮತ್ತು ಅವಮಾನದಿಂದ ಮುಕ್ತಗೊಳಿಸಿದ ತೀರ್ಪಾಗಿತ್ತು. ಆದರೆ, ತೀರ್ಪು ಬಂದ ನಾಲ್ಕು ದಶಕಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಕುಟುಂಬಗಳಲ್ಲಿ ಪಿತೃಪ್ರಧಾನತೆ ಮುಂದುವರಿದಿದೆ. ಕಾನೂನು ಬದಲಾಯಿತು; ಆದರೆ, ಸಾಮಾಜಿಕ ಹಣೆಬರಹ ಬದಲಾಗಲಿಲ್ಲ.

ನರ್ಮದಾ ಆಂದೋಲನ ಕುರಿತ ಅರುಂಧತಿ ರಾಯ್ ಅವರ ಲೇಖನಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಬ್ರಿಟಿಷ್ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕ ಜಾನ್ ಬರ್ಗರ್, ‘‘ನಿಮ್ಮ ಕಾದಂಬರಿಗಳು ಮತ್ತು ಕಾದಂಬರಿಯೇತರ ಬರಹಗಳು ನಿಮ್ಮೆರಡು ಕಾಲುಗಳಂತೆ ಜಗತ್ತಿನೆಲ್ಲೆಡೆ ಸುತ್ತುತ್ತವೆ’’ ಎಂದು ಹೇಳಿದ್ದರು. ಇದನ್ನು ‘ಮದರ್ ಮೇರಿ ಕಮ್ಸ್ ಟು ಮಿ’ ಹೊತ್ತಗೆಯಲ್ಲಿ ಉಲ್ಲೇಖಿಸಿರುವ ಅರುಂಧತಿ, ತಮ್ಮ ‘‘ಎರಡು ರೀತಿಯ ಬರಹಗಳು ಒಂದರೊಂದಿಗೆ ಇನ್ನೊಂದು ಸಂಘರ್ಷದಲ್ಲಿ ಇಲ್ಲ ಎಂಬುದನ್ನು ಗುರುತಿಸಿದ ಕೆಲವೇ ಕೆಲವು ಜನರಲ್ಲಿ ಬರ್ಗರ್ ಒಬ್ಬರು’’ ಎಂದು ಹೇಳಿಕೊಂಡಿದ್ದಾರೆ.

ಅರುಂಧತಿ ಅವರ ಪುಸ್ತಕದ ನೆಪದಲ್ಲಿ: ಸುಜನ್ನಾ ಅರುಂಧತಿ ರಾಯ್, ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಜನಿಸಿದರು(ನವೆಂಬರ್ 24,1961). ತಾಯಿ ಮೇರಿ ರಾಯ್ ಕೇರಳದ ಸಿರಿಯನ್ ಕ್ರಿಶ್ಚಿಯನ್ ಮತ್ತು ತಂದೆ ರಂಜಿತ್ ರಾಯ್ ಬಂಗಾಲ ಮೂಲದ ಚಹಾ ತೋಟಗಾರ. ಬಾಲ್ಯವನ್ನು ಕೇರಳದ ಐಮನಮ್‌ದಲ್ಲಿ ಕಳೆದ ಅರುಂಧತಿ, ಕೊಟ್ಟಾಯಂನ ಕಾರ್ಪಸ್ ಕ್ರಿಸ್ಟಿ ಶಾಲೆ ಮತ್ತು ಆನಂತರ ತಮಿಳುನಾಡಿನ ನೀಲಗಿರಿಯ ಲವ್‌ಡೇಲ್‌ನ ಲಾರೆನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಹೊಸದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಚರ್‌ನಲ್ಲಿ ಅಧ್ಯಯನ ಮಾಡುತ್ತಿರುವಾಗ, ವಾಸ್ತುಶಿಲ್ಪಿ ಗೆರಾರ್ಡ್ ಡ ಕುನ್ಹಾ ಅವರ ಭೇಟಿ; ಬಳಿಕ ಅವರನ್ನು ವಿವಾಹವಾದರು; ವಿಚ್ಛೇದನ ಪಡೆದರು. ಚಿತ್ರನಿರ್ಮಾಪಕ ಪ್ರದೀಪ್ ಕೃಷ್ಣ ಅವರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ‘ಮಾಸ್ಸೇ ಸಾಹಿಬ್’ನಲ್ಲಿ ಅರುಂಧತಿ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದ್ದರು(1984). ಬಳಿಕ ಪ್ರದೀಪ್ ಕೃಷ್ಣ ಅವರನ್ನು ವಿವಾಹವಾದರು. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಹೊತ್ತಗೆಗೆ ಬೂಕರ್(1997) ಬಂದ ಬಳಿಕ ಅವರಿಗೆ ಆರ್ಥಿಕ ಸ್ಥಿರತೆ ಲಭಿಸಿತು. ನಿರ್ಭೀತ ಹಾಗೂ ಅಧಿಕಾರಸ್ಥರ ನಡೆಗಳನ್ನು ಖಂಡಿಸುವ ಅವರ ಬರಹಗಳು ಬಹಳಷ್ಟು ವಿವಾದಗಳಿಗೆ ಕಾರಣವಾಗಿವೆ; ದೇಶದ್ರೋಹ ಹಾಗೂ ಅಕ್ರಮ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಇದ್ಯಾವುದೂ ಅವರ ಧ್ವನಿಯನ್ನು ಹತ್ತಿಕ್ಕಲು ಆಗಿಲ್ಲ. ಪ್ರಜಾಪ್ರಭುತ್ವ, ಜನರ ಸಂವಿಧಾನದತ್ತ ಹಕ್ಕುಗಳು ಮತ್ತು ಸಂವಿಧಾನ ಶಿಲ್ಪಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಗಳ ವಿರುದ್ಧ ದಿಟ್ಟ ಧ್ವನಿ ಅವರದು. ‘ಲಿಸನಿಂಗ್ ಟು ಗ್ರಾಸ್‌ಹಾಪರ್ಸ್: ಫೀಲ್ಡ್ ನೋಟ್ಸ್ ಆನ್ ಡೆಮಾಕ್ರಸಿ’(2009), ‘ಬ್ರೋಕನ್ ರಿಪಬ್ಲಿಕ್-3 ಎಸ್ಸೇಸ್’(2011), ‘ದ ಎಂಡ್ ಆಫ್ ಇಮ್ಯಾಜಿನೇಷನ್’(1998, 2016), ‘ಕ್ಯಾಪಿಟಲಿಸಂ: ಎ ಗೋಸ್ಟ್ ಸ್ಟೋರಿ’(2014), ‘ಥಿಂಗ್ಸ್ ದಟ್ ಕ್ಯಾನ್ ಆಂಡ್ ಕೆನಾಟ್ ಬಿ ಸೆಡ್’(2016), ‘ದ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’(2017), ‘ಮೈ ಸೆಡೀಷಿಯಸ್ ಹಾರ್ಟ್’(2019), ‘ಆಝಾದಿ: ಫ್ರೀಡಂ ಫೇಸಿಸಂ ಫಿಕ್ಷನ್’(2020) ಅವರ ಪ್ರಮುಖ ಹೊತ್ತಗೆಗಳಲ್ಲಿ ಕೆಲವು.

ಮೇರಿಯೆಂಬ ತಾಯಿ

ಆಗಸ್ಟ್ 2025ರಲ್ಲಿ ಅರುಂಧತಿ ಅವರ ಆತ್ಮಕಥನ ‘ಮದರ್ ಮೇರಿ ಕಮ್ಸ್ ಟು ಮಿ’ ಪ್ರಕಟವಾದಾಗ, ತಾಯಿ ಕುರಿತ ವಿವರಗಳನ್ನು ಓದುಗರು ನಿರೀಕ್ಷಿಸಿದ್ದರು. ಆದರೆ, ಅವರಿಗೆ ಎದುರಾಗುವುದು ಬೇರೆಯದೇ ಪ್ರಪಂಚ. ‘ತಾಯಿ ಮೇರಿ ತಮ್ಮ ಮಕ್ಕಳಿಗೆ ಆಶ್ರಯ ಮತ್ತು ಯಾತನೆ, ಧೈರ್ಯ ಮತ್ತು ಗಾಯ ಎರಡನ್ನೂ ನೀಡಿದ ಮಹಿಳೆ’ ಎಂದು ಅರುಂಧತಿ ಹೇಳುತ್ತಾರೆ. ಈ ಕೃತಿ ಮುಖ್ಯವಾಗುವುದು ತಾಯಿ-ಮಗಳ ಅನ್ಯೋನ್ಯತೆ ಇಲ್ಲವೇ ರಾಗ-ದ್ವೇಷದ ಸಂಬಂಧದಿಂದ ಮಾತ್ರವಷ್ಟೇ ಅಲ್ಲ; ಬದಲಾಗಿ, ತಾಯಿ-ಮಗಳ ಚಲನಶೀಲತೆಯನ್ನೂ ಮೀರಿ, ಕೇರಳದಲ್ಲಿ ಪಿತೃಪ್ರಧಾನತೆ ಕುರಿತ ಸಂವಾದವೊಂದನ್ನು ಮತ್ತೆ ಮುನ್ನೆಲೆಗೆ ತಂದಿರುವುದರಿಂದ ಮುಖ್ಯವಾಗುತ್ತದೆ.

ಕೇರಳ ಬಹಳ ಪ್ರಗತಿಪರ ರಾಜ್ಯ. ಹೀಗಿದ್ದರೂ, ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯ ಹಕ್ಕು ನಿರಾಕರಿಸಲಾಗಿತ್ತು. ಮೇರಿ ರಾಯ್ ಮಹಿಳೆಯರಿಗೆ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ, ನ್ಯಾಯಾಲಯದಲ್ಲಿ ಹೋರಾಡಿದರು. 1986ರಲ್ಲಿ ಸುಪ್ರೀಂ ಕೋರ್ಟ್, ಕ್ರಿಶ್ಚಿಯನ್ ಸಮುದಾಯದ ಹೆಣ್ಣುಮಕ್ಕಳಿಗೆ ಸಹೋದರರಷ್ಟೇ ಹಕ್ಕುಗಳಿವೆ ಎಂದು ತೀರ್ಪು ನೀಡಿತು. ಇದು ಹೆಣ್ಣುಮಕ್ಕಳನ್ನು ಅವಲಂಬನೆ ಮತ್ತು ಅವಮಾನದಿಂದ ಮುಕ್ತಗೊಳಿಸಿದ ತೀರ್ಪಾಗಿತ್ತು. ಆದರೆ, ತೀರ್ಪು ಬಂದ ನಾಲ್ಕು ದಶಕಗಳ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಕುಟುಂಬಗಳಲ್ಲಿ ಪಿತೃಪ್ರಧಾನತೆ ಮುಂದುವರಿದಿದೆ. ಕಾನೂನು ಬದಲಾಯಿತು; ಆದರೆ, ಸಾಮಾಜಿಕ ಹಣೆಬರಹ ಬದಲಾಗಲಿಲ್ಲ.

ತಲೆಬಾಗಲು ನಿರಾಕರಿಸಿದರು

ಮೇರಿ 1933ರಲ್ಲಿ ಕೊಟ್ಟಾಯಂ ಜಿಲ್ಲೆಯ ಮೀನಾಚಿಲ್ ನದಿಯ ದಡದಲ್ಲಿರುವ ಐಮನಮ್ ಎಂಬ ಹಳ್ಳಿಯಲ್ಲಿ ಜನಿಸಿದರು. ಆ ಹಳ್ಳಿಯ ಸೌಂದರ್ಯವನ್ನು ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ನಲ್ಲಿ ಅವರ ಮಗಳು ಅರುಂಧತಿ ಚಿರಸ್ಥಾಯಿಯಾಗಿಸಿದರು. ಶ್ರೀಮಂತ ಸಿರಿಯನ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಆಕೆಯ ಬದುಕು ಅತ್ಯಂತ ಆರಾಮದಾಯಕವಾಗಿತ್ತು. ಆದರೆ, ಪ್ರತಿಭಟನೆ-ದಂಗೆಯಿಂದ ಗುರುತಿಸಲ್ಪಟ್ಟರು. ಮೊದಲ ಪ್ರತಿಭಟನೆ ಮದುವೆ ಮೂಲಕ ಬಂದಿತು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ, ಬಂಗಾಳಿ ಹಿಂದೂ ರಂಜಿತ್ ರಾಯ್ ಅವರನ್ನು ವಿವಾಹವಾದರು. ಆದರೆ, ವಿವಾಹ ನೇರ್ಪಾಗದೆ ಮುರಿದುಬಿತ್ತು; ವಿಚ್ಛೇದನವನ್ನು ಅಪಮಾನ ಮತ್ತು ಅದಕ್ಕೆ ಮಹಿಳೆಯರೇ ಕಾರಣ ಎಂದು ಪರಿಗಣಿಸುವ ಸಂಪ್ರದಾಯವಾದಿ ಸಮಾಜದಲ್ಲಿ ಮಗಳು ಅರುಂಧತಿ ಮತ್ತು ಮಗ ಲಲಿತ್ ಜವಾಬ್ದಾರಿ ಹೊತ್ತು ಒಂಟಿ ತಾಯಿಯಾಗಿ ಉಳಿದು ಕೊಂಡರು.

ಮಕ್ಕಳೊಂದಿಗೆ ಊಟಿಯಲ್ಲಿರುವ ಕುಟುಂಬದ ಮನೆಗೆ ಮತ್ತು ಆನಂತರ ಕೇರಳಕ್ಕೆ ಮರಳಿದರು. ಅಲ್ಲಿ ಅವರಿಗೆ ಸಹಾನುಭೂತಿಯ ಬದಲು ದ್ವೇಷ ಎದುರಾಯಿತು. ಸಂಬಂಧಿಕರು ಅವರ ನಿಲುವನ್ನು ಹಾಗೂ ಸಮಾಜ ಅವರ ಆಯ್ಕೆಯನ್ನು ಪ್ರಶ್ನಿಸಿತು. ಬದುಕುಳಿಯುವಿಕೆಯೇ ಹೋರಾಟವಾಗಿ, ಜೀವನ ನಿರ್ವಹಣೆಗೆ ಬೋಧನೆಯನ್ನು ಆಯ್ದುಕೊಂಡರು. ಮರುಮದುವೆಯಾಗಲು ಅಥವಾ ಬೇರೆಯವರನ್ನು ಅವಲಂಬಿಸಲು ನಿರಾಕರಿಸಿದರು. ಸಂಕಷ್ಟಗಳು ಅವರನ್ನು ದೃಢಗೊಳಿಸಿದವು. ಸಮಾಜ ಮಾತ್ರವಲ್ಲದೆ ಕಾನೂನು ಕೂಡ ಮಹಿಳೆಯರ ವಿರುದ್ಧ ಇದ್ದುದು ಅವರ ಅರಿವಿಗೆ ಬಂದಿತು; 1916ರ ತಿರುವಾಂಕೂರು ಕ್ರಿಶ್ಚಿಯನ್ ಉತ್ತರಾಧಿಕಾರ ಕಾಯ್ದೆಯಡಿ ಹೆಣ್ಣುಮಕ್ಕಳು ಆಸ್ತಿಯಲ್ಲಿ ಕೇವಲ ಸಾಂಕೇತಿಕ ಮೊತ್ತಕ್ಕೆ ಮಾತ್ರ ಅರ್ಹರಾಗಿದ್ದರು- ಕೆಲವೊಮ್ಮೆ 5 ರೂ.ನಷ್ಟು ಕಡಿಮೆ; ಆನಂತರ 5,000 ರೂ.ಗೆ ಹೆಚ್ಚಿಸಲಾಯಿತು. ಪ್ರತಿಯಾಗಿ, ಗಂಡು ಮಕ್ಕಳಿಗೆ ಆನುವಂಶಿಕವಾಗಿ ಸಂಪೂರ್ಣ ಆಸ್ತಿ ದತ್ತವಾಗುತ್ತಿತ್ತು.

ವೈವಾಹಿಕ ವೈಫಲ್ಯದಿಂದ ಬಳಲುತ್ತಿದ್ದ ಮೇರಿಯಂತಹ ಮಹಿಳೆಯರಿಗೆ, ಇದು ಕೇವಲ ಅನ್ಯಾಯ ಮಾತ್ರವಾಗಿರಲಿಲ್ಲ; ಘನತೆಯ ನಿರಾಕರಣೆಯಾಗಿತ್ತು. ಹೆಣ್ಣುಮಕ್ಕಳು ಎಂಥದ್ದೇ ಸಾಧನೆಗೈದಿದ್ದರೂ ಅಥವಾ ನಿರ್ಗತಿಕಳಾಗಿದ್ದರೂ, ವಿವಾಹದ ನಂತರ ಆಕೆಯನ್ನು ಪರಕೀಯಳಂತೆ ಕಾಣಲಾಗುತ್ತಿತ್ತು; ಪಿತ್ರಾರ್ಜಿತ ಆಸ್ತಿಯ ಜನ್ಮಸಿದ್ಧ ಹಕ್ಕನ್ನು ಮದುವೆ ವೇಳೆ ನೀಡಿದ್ದ ಆಭರಣದ ಮೊತ್ತಕ್ಕೆ ಇಳಿಸಲಾಗಿತ್ತು. ಮೇರಿ ಇದನ್ನು ಪ್ರಶ್ನಿಸಲು ನಿರ್ಧರಿಸಿದರು. 1976ರಲ್ಲಿ ತಂದೆಯ ಆಸ್ತಿಯಲ್ಲಿ ತನ್ನ ಪಾಲು ಕೋರಿ, ಕೇರಳ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು(ಮೇರಿ ರಾಯ್ v/s ಕೇರಳ ರಾಜ್ಯ). ಅವರಿಗೆ ಇದು ಆಸ್ತಿಗಿಂತ ಸಹಜ ನ್ಯಾಯದ ಪ್ರಶ್ನೆಯಾಗಿತ್ತು. ಆದರೆ, ಸಮುದಾಯವು ಅವರನ್ನು ದ್ರೋಹಿ ಎಂಬಂತೆ ನೋಡಿತು. ಕೊಟ್ಟಾಯಂನ ಕಾಫಿ ಹೌಸ್‌ಗಳು ಮತ್ತು ಚರ್ಚ್ ಕಾಂಪೌಂಡ್‌ಗಳಲ್ಲಿ ‘ಆ ಮಹಿಳೆ, ಕುಟುಂಬವನ್ನೇ ನ್ಯಾಯಾಲಯಕ್ಕೆ ಎಳೆದವಳು’ ಎಂದು ಟೀಕೆಗೆ ಗುರಿಯಾದರು. ‘ವೈಯಕ್ತಿಕ ವಿಷಯವನ್ನು ಸಾರ್ವಜನಿಕಗೊಳಿಸಿದ್ದಾಳೆ’ ಎಂದು ಸಂಬಂಧಿಕರು ಖಂಡಿಸಿದರು.

ಪ್ರಕರಣ ಒಂದು ದಶಕ ಕಾಲ ಮುಂದುವರಿದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಒಂಟಿತನ ಮತ್ತು ಹಿಂಸೆಯಿಂದ ಬಳಲಿದರೂ, ಅವರು ದಣಿಯಲಿಲ್ಲ. ಹೆಣ್ಣುಮಕ್ಕಳ ವೈಯಕ್ತಿಕ ಆನುವಂಶಿಕ ಹಕ್ಕು ಮಾತ್ರವಲ್ಲದೆ ಸಂಪ್ರದಾಯದಿಂದ ಮೌನಗೊಳಿಸಲ್ಪಟ್ಟ ಪ್ರತಿಯೊಬ್ಬ ಕ್ರಿಶ್ಚಿಯನ್ ಹೆಣ್ಣುಮಕ್ಕಳ ಘನತೆಗಾಗಿ ಸೆಣೆಸಿದರು. 1986ರಲ್ಲಿ ಅವರ ಹೋರಾಟಕ್ಕೆ ಪ್ರತಿಫಲ ಸಿಕ್ಕಿತು. ತಿರುವಾಂಕೂರು ಕಾನೂನನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಕೇರಳದ ಕ್ರಿಶ್ಚಿಯನ್ ಮಹಿಳೆಯರು ಭಾರತೀಯ ಉತ್ತರಾಧಿಕಾರ ಕಾಯ್ದೆಯಡಿ ಆನುವಂಶಿಕ ಆಸ್ತಿಯಲ್ಲಿ ಸಮಾನ ಹಕ್ಕು ಹೊಂದಿದ್ದಾರೆ ಎಂದು ಆದೇಶ ನೀಡಿತು. ಇದೊಂದು ಪಥದರ್ಶಕ ತೀರ್ಪು. ಪತ್ರಿಕೆಗಳು ಅವರನ್ನು ಮಾರ್ಗದರ್ಶಕಿ ಎಂದು ಬಣ್ಣಿಸಿದರೆ, ಮಹಿಳೆಯರಿಂದ ಧನ್ಯವಾದಗಳ ಮಳೆ ಸುರಿಯಿತು.

ವಿರೋಧಾಭಾಸ

ಆದರೆ, ಮನೆಗಳ ನಾಲ್ಕು ಗೋಡೆಗಳ ನಡುವೆ ಬೇರೆಯದೇ ಹುನ್ನಾರಗಳು ನಡೆದವು. ಪೋಷಕರು ಆಸ್ತಿಯನ್ನು ಸದ್ದಿಲ್ಲದೆ ಪುತ್ರರಿಗೆ ಹಂಚಿದರು; ಸಹೋದರರು ಅಕ್ಕ-ತಂಗಿಯರ ಮನವೊಲಿಸಿ, ಆಸ್ತಿ ಪತ್ರಗಳಿಗೆ ಸಹಿ ಮಾಡಿಸಿಕೊಂಡರು. ಮದುವೆಯಲ್ಲಿ ನೀಡುವ ವರದಕ್ಷಿಣೆ ಮತ್ತು ಚಿನ್ನದ ಆಭರಣ ಹೆಣ್ಣುಮಕ್ಕಳ ಪಾಲು ಎಂದು ಕುಟುಂಬಗಳು ವಾದಿಸಿದವು. ಚರ್ಚ್ ಈ ಬಗ್ಗೆ ಮೌನ ತಳೆಯಿತು. ಕಾನೂನು ಏನೇ ಹೇಳಿದರೂ, ಪಿತೃಪ್ರಧಾನತೆ ತನ್ನ ಹಿಡಿತ ಸಡಿಲಗೊಳಿಸಲಿಲ್ಲ. ಈಗಲೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುವ ಹೆಣ್ಣುಮಕ್ಕಳಿಗೆ ಸ್ವಾರ್ಥಿ ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ; ಪಾಲು ಕೇಳಿ ನ್ಯಾಯಾಲಯಕ್ಕೆ ಹೋದರೆ, ದ್ರೋಹಿಗಳು ಎಂದು ದೂರಲಾಗುತ್ತದೆ. ಪೋಷಕರು ಮರಣಕ್ಕೆ ಮುನ್ನವೇ ಆಸ್ತಿ ಪತ್ರ ಗಳನ್ನು ಪುತ್ರರ ಹೆಸರಿಗೆ ಮಾಡಿಟ್ಟಿರುತ್ತಾರೆ ಮತ್ತು ‘ಆಸ್ತಿ ಹಕ್ಕು ಬೇಡ’ ಎಂಬ ಪತ್ರವೂ ಹೆಣ್ಣುಮಕ್ಕಳ ಸಹಿಗೆ ಸಿದ್ಧವಾಗಿರುತ್ತದೆ. ಮದುವೆಯಿಂದ ತವರಿನ ಆಸ್ತಿ ಮೇಲಿನ ಹಕ್ಕುಗಳು ಇಲ್ಲವಾಗಲಿವೆ ಎಂದು ಹೆಣ್ಣುಮಕ್ಕಳನ್ನು ನಂಬಿಸಲಾಗಿದೆ. ಅವರು ಕಾನೂನುಬದ್ಧ ಪಾಲಿಗೆ ಬೇಡಿಕೆ ಇರಿಸಲು ಈಗಲೂ ಹಿಂಜರಿಯುತ್ತಿದ್ದಾರೆ. ಮೇರಿ ರಾಯ್ ಪ್ರಕರಣದಲ್ಲಿ ಗೆದ್ದರೂ, ಸಮುದಾಯ ಬಳಸು ಮಾರ್ಗ ಹಿಡಿಯಿತು. ಆದರೆ, ಕಾನೂನನ್ನು ಅಕ್ಷರಶಃ ಪಾಲಿಸಿದ ಪ್ರಗತಿಪರ ಪೋಷಕರೂ ಇದ್ದರು; ಈಗಲೂ ಇದ್ದಾರೆ.

ಪಲ್ಲಿಕೂಡಂ ಎಂಬ ಶಾಲೆ

ಮೇರಿ ರಾಯ್ ಅವರ ಪ್ರತಿಭಟನೆ ನ್ಯಾಯಾಲಯಕ್ಕೆ ಸೀಮಿತವಾಗಲಿಲ್ಲ. 1979ರಲ್ಲಿ ಅವರು ಕೊಟ್ಟಾಯಂನಲ್ಲಿ ಕಾರ್ಪಸ್ ಕ್ರಿಸ್ಟಿ ಪ್ರೌಢಶಾಲೆಯನ್ನು ಸ್ಥಾಪಿಸಿದರು; ಆನಂತರ ಅದಕ್ಕೆ ಪಲ್ಲಿಕೂಡಂ ಎಂದು ಮರುನಾಮಕರಣ ಮಾಡಲಾಯಿತು. ಮಾಮೂಲಿ ಶಾಲೆಗಳಲ್ಲಿದ್ದ ವಾಚ್ಯ ಕಲಿಕೆ ಸಂಸ್ಕೃತಿಯನ್ನು ಕೆಡವಲು ಪ್ರಯತ್ನಿಸಿದರು. ಪಲ್ಲಿಕೂಡಂ ಮುಕ್ತ ಚಿಂತನೆಯ ಪ್ರಯೋಗಶಾಲೆಯಾಯಿತು: ವಿದ್ಯಾರ್ಥಿಗಳು ಭಿತ್ತಿಚಿತ್ರಗಳನ್ನು ರಚಿಸಿದರು, ನಾಟಕ ಪ್ರದರ್ಶಿಸಿದರು, ರಾಜಕೀಯವನ್ನು ಚರ್ಚಿಸಿದರು ಮತ್ತು ಅವರಿಗೆ ಅಧಿಕಾರವನ್ನು ಪ್ರಶ್ನಿಸಲು ಕಲಿಸಲಾಯಿತು. ಮೇರಿ ಅವರ ವಿಧಾನಗಳು ರಾಜಿಯಾಗದಂಥವು; ಕಠಿಣ ಮತ್ತು ಸ್ಥಿತ್ಯಂತರಗೊಳಿಸುವಂಥವು ಎಂದು ಹಳೆಯ ವಿದ್ಯಾರ್ಥಿಗಳು ಸ್ಮರಿಸುತ್ತಾರೆ. ಶ್ರೇಷ್ಠತೆಯ ಆಗ್ರಹ, ಆಲಸ್ಯಕ್ಕೆ ಶಿಕ್ಷೆ ಮತ್ತು ಸ್ವಂತಿಕೆಯನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಅವರ ಪ್ರಕಾರ, ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಯಲ್ಲ; ನಿರ್ಭೀತ ನಾಗರಿಕರನ್ನು ರೂಪಿಸುವ ಪ್ರಕ್ರಿಯೆ. ಪಲ್ಲಿಕೂಡಂ ಮೂಲಕ ಅವರು ಕೇರಳದ ಮಕ್ಕಳಿಗೆ ತಲೆಬಾಗಲು ನಿರಾಕರಿಸುವ ಮತ್ತು ಭಿನ್ನಾಭಿಪ್ರಾಯವನ್ನು ಹೊಂದುವ ಧೈರ್ಯವನ್ನು ಕಲಿಸಿದರು.

ಆದರೆ, ಮಗಳಿಗೆ ಮನೆಯಲ್ಲಿ ತಾಯಿಯ ಉಪಸ್ಥಿತಿಯು ಹೊರೆಯಾಗಿತ್ತು; ಇಬ್ಬರ ಸಂಬಂಧ ಪ್ರಕ್ಷುಬ್ಧತೆಯಿಂದ ಕೂಡಿತ್ತು. ನ್ಯಾಯಾಲಯದಲ್ಲಿ ಮೇರಿ ಸಾಧಿಸಿದ ಗೆಲುವಿನಿಂದ ಮನೆಯಲ್ಲಿ ಆಕೆಯನ್ನು ತಡೆಯುವುದು ಅಸಾಧ್ಯವಾಗಿತ್ತು. ‘ಅಮ್ಮ ನನಗೆ ಆಯುಧಗಳನ್ನು ಕೊಟ್ಟಳು; ಕೆಲವೊಮ್ಮೆ ಅವನ್ನು ನನ್ನ ಮೇಲೆಯೂ ಬಳಸುತ್ತಿದ್ದಳು. ಅವಳು ನೆರಳು ಮತ್ತು ಬಿರುಗಾಳಿ ಎರಡೂ ಹೌದು’ ಎಂದು ಅರುಂಧತಿ ಬರೆಯುತ್ತಾರೆ. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ನಲ್ಲಿ ತಾಯಿಯ ವ್ಯಕ್ತಿತ್ವದ ಕೆಲವು ತುಣುಕುಗಳನ್ನು ಕಾಲ್ಪನಿಕವಾಗಿ ರೂಪಿಸಿದ್ದ ಅರುಂಧತಿ, ಆತ್ಮಚರಿತ್ರೆಯಲ್ಲಿ ಅವರ ಬಹುಮುಖಿ ವ್ಯಕ್ತಿತ್ವ, ವಿರೋಧಾಭಾಸಗಳನ್ನು ಸಂಪೂರ್ಣ ಅನಾವರಣಗೊಳಿಸಿದ್ದಾರೆ.

ಅಪೂರ್ಣ ಪರಂಪರೆ

ಮೇರಿ ರಾಯ್ ಒಂದು ಶಾಲೆ, ಒಂದು ಅಭೂತಪೂರ್ವ ತೀರ್ಪು ಮತ್ತು ಅಸಾಧಾರಣ ವ್ಯಕ್ತಿತ್ವವುಳ್ಳ ಇಬ್ಬರು ಮಕ್ಕಳನ್ನು ನೆನಪಾಗಿ ಉಳಿಸಿ, ಸೆಪ್ಟಂಬರ್ 2022ರಲ್ಲಿ ನಿಧನರಾದರು(89 ವರ್ಷ). ಆದರೆ, ಅವರ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಅವರ ಕಾನೂನು ಹೋರಾಟದಿಂದಾಗಿ ಆಸ್ತಿಯ ಹಕ್ಕು ಪಡೆದುಕೊಂಡ ಪ್ರತಿಯೊಬ್ಬ ಮಹಿಳೆಗೆ ಪ್ರತಿಯಾಗಿ ಅಸಂಖ್ಯಾತ ಹೆಣ್ಣುಮಕ್ಕಳು ಮೌನವಾಗಿದ್ದಾರೆ; ಮನೆಗಳಲ್ಲಿ ‘ಹೆಣ್ಣುಮಕ್ಕಳು ಕುಟುಂಬದ ಏಕತೆಯನ್ನು ಭಂಗಿಸಬಾರದು’ ಎಂಬ ಪಿಸುಮಾತು ಈಗಲೂ ಮಾರ್ದನಿಸುತ್ತಿದೆ.

ಇದರಿಂದಾಗಿ ಅರುಂಧತಿಯವರ ಆತ್ಮಚರಿತ್ರೆ ವೈಯಕ್ತಿಕಕ್ಕಿಂತ ಹೆಚ್ಚಿನ ಮಹತ್ವಗಳಿಸುತ್ತದೆ; ತಾಯಿಯ ಮೂಲಕ ಅವರು ಕಾನೂನಿನ ಮಿತಿಗಳು ಮತ್ತು ಪಿತೃಪ್ರಧಾನತೆ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಮತ್ತೆ ಆರಂಭಿಸಿದ್ದಾರೆ. ಒಬ್ಬ ಮಹಿಳೆಯು ಚರ್ಚ್, ಕುಟುಂಬ ಮತ್ತು ವ್ಯವಸ್ಥೆ ವಿರುದ್ಧ ಗೆಲ್ಲಬಹುದು ಎಂದು ಮೇರಿ ಸಾಧಿಸಿದರು. ಅಸಮಾನತೆಯನ್ನು ಸಂಪೂರ್ಣವಾಗಿ ತೊಡೆಯಲು ಆಗದಿದ್ದರೂ, ಕ್ರಿಶ್ಚಿಯನ್ ಮಹಿಳೆಯರಿಗೆ ಸ್ವಾಭಿಮಾನದ ಪಾಠ ಕಲಿಸಿದರು. ಆದರೆ, ತೀರ್ಪು ಬಂದು ಸುಮಾರು 40 ವರ್ಷ ಬಳಿಕವೂ ಪಿತೃಪ್ರಧಾನತೆ ಇನ್ನೂ ಆಳುತ್ತಿದೆ; ಮನೆಗಳಲ್ಲಿ ಪ್ರತಿದಿನ ಚಕಮಕಿಗಳು ಮುಂದುವರಿದಿವೆ. ಹೀಗಾಗಿ, ಸಮದಾಯಗಳು ಪಿತೃಪ್ರಧಾನತೆಯನ್ನು ತ್ಯಜಿಸುವವರೆಗೆ ಕ್ರಾಂತಿ ಅಪೂರ್ಣವಾಗಿಯೇ ಇರುತ್ತದೆ. ಮೇರಿ ತಲೆಬಾಗಲು ನಿರಾಕರಿಸಿದರು; ಕಾನೂನುಗಳು ನ್ಯಾಯದೆಡೆಗಿನ ಮೊದಲ ಹೆಜ್ಜೆ ಮಾತ್ರ ಎಂದು ಸಾಬೀತುಪಡಿಸಿದರು. ಒಂದು ತೀರ್ಪಿನಿಂದ ನ್ಯಾಯ ದಕ್ಕುವುದಿಲ್ಲ; ಅದಕ್ಕೆ ಧೈರ್ಯ, ಪರಿಶ್ರಮ, ಸಮುದಾಯ ಪ್ರಜ್ಞೆ, ನಿರಂತರ ಹೋರಾಟ ಮತ್ತು ಹಕ್ಕುಗಳ ಅರಿವು ಇರಬೇಕಾಗುತ್ತದೆ ಎಂದು ಇತಿಹಾಸ ನಿರೂಪಿಸಿದೆ. ಮೇರಿ ರಾಯ್ ಪಿತೃಪ್ರಧಾನತೆಯ ಕಟ್ಟಡದ ಧ್ವಂಸವನ್ನು ಆರಂಭಿಸಿದರು; ನಾವೆಲ್ಲ ಸೇರಿಕೊಂಡು ಅದನ್ನು ನೆಲಸಮಗೊಳಿಸಬೇಕಿದೆ.

ಮೇರಿ ತನ್ನ ವಿದ್ಯಾರ್ಥಿಗಳಿಗೆ ನೀಡಿದ ಬೆಳಕು ಅರುಂಧತಿ ಮತ್ತು ಮಗ ಎಲ್‌ಕೆಸಿ (ಲಲಿತ್ ಕುಮಾರ್ ಕ್ರಿಸ್ಟೋಫರ್ ರಾಯ್, ಕ್ಯಾನ್ಸರ್ ತಜ್ಞ. ಕಡಿಮೆ ವೆಚ್ಚದ ವೈದ್ಯಕೀಯ ಸಾಧನಗಳ ಅಭಿವೃದ್ಧಿ ಕ್ಷೇತ್ರದಲ್ಲಿ ನೀಡಿದ ಕೊಡುಗೆಗೆ ಪದ್ಮಶ್ರೀ ಪುರಸ್ಕೃತ)ಗೆ ಇಲ್ಲವಾಯಿತು ಎನ್ನಬಹುದೇನೋ? ಆದರೆ, ಅರುಂಧತಿ ರಾಯ್ ಹೇಳಿದಂತೆ ‘ಆ ಕತ್ತಲಿಗೆ ನಾನು ಚಿರಋಣಿ. ಏಕೆಂದರೆ, ಅದು ನಮಗೆ ಸ್ವಾತಂತ್ರ್ಯದ ಮಾರ್ಗವಾಗಿ ಪರಿಣಮಿಸಿತು’.

ಪ್ರಜಾಪ್ರಭುತ್ವ, ವಾಕ್-ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನ ಕುರಿತು ಕಾಳಜಿ ಇರುವವರು ಅರುಂಧತಿ ಅವರ ಹೊತ್ತಗೆಗಳನ್ನು ಓದಲೇಬೇಕು; ಅವು ಸಂವಾದಕ್ಕೆ, ಪ್ರಶ್ನೆ ಕೇಳಲು ಹಾಗೂ ಅಭಿವ್ಯಕ್ತಿಸಲು ಪ್ರೇರೇಪಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News