×
Ad

ಜಾತಿಯೆಂಬುದು ಕಣ್ಣಿಗೆ ಇರಿಯುವ ವಾಸ್ತವ, ನಿವಾರಣೆಯಾಗದ ಜಾಡ್ಯ

Update: 2025-10-24 11:34 IST

ಜಾತಿಯಿಂದಾಗಿ ಕೋಟ್ಯಂತರ ಜನರಿಗೆ ನೆಮ್ಮದಿಯ ಬದುಕು ಸಾಧ್ಯವಾಗಿಲ್ಲ. ಪ್ರಾಚೀನ ಗ್ರಂಥಗಳು ಅಸಮಾನತೆಯನ್ನು ಸಾಂಸ್ಥೀಕರಿಸಿದವು; ಅವು ಶ್ರೇಷ್ಠತೆ-ಶುದ್ಧತೆ, ಹೊರಗಿಡುವಿಕೆ ಬಗ್ಗೆ ಮಾತನಾಡಿದವೇ ಹೊರತು ಸಾಮರಸ್ಯದ ಬಗ್ಗೆ ಅಲ್ಲ. ಮಗು ಜನಿಸಿದ ಕ್ಷಣದಿಂದಲೇ ಅದರ ಸಾಮಾಜಿಕ ಸ್ಥಾನ ನಿರ್ಧರಿತವಾಗಿರುತ್ತದೆ. ಜನ ಹೇಗೆ ಬದುಕುತ್ತಾರೆ, ಪ್ರೀತಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬುದನ್ನು ಜಾತಿ ನಿರ್ದೇಶಿಸುತ್ತದೆ. ಹೀಗಿರುವಾಗ, ಜಾತಿಯಿಂದ ಸಾಮರಸ್ಯ ಹೇಗೆ ಸಾಧ್ಯ?

ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಒಂದು ವರ್ಗದ ಜನರು, ಧನಾಡ್ಯರು ಹಾಗೂ ಪ್ರತಿಪಕ್ಷ ಬಿಜೆಪಿ ಸಮೀಕ್ಷೆಯನ್ನು ಹೀನೈಸಿದ್ದಲ್ಲದೆ, ಸಮಾಜವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ನೇಹಿತ ಎಚ್.ಎಚ್. ರೇಣುಕಾರಾಧ್ಯ ಅವರ ಅನುಭವವು ಜಾತಿ ತನ್ನ ಬೇರನ್ನು ಎಷ್ಟು ಆಳವಾಗಿ ಬಿಟ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಇದೇ ಹೊತ್ತಿನಲ್ಲಿ ಅಧ್ಯಯನವೊಂದು ನಗರಗಳಲ್ಲಿ ಪೌರತ್ವವು ಕಾಗದದ ಮೇಲೆ ಮಾತ್ರ ಸಮಾನವಾಗಿದೆ; ಆದರೆ, ಆಚರಣೆಯಲ್ಲಿ ಅಸಮಾನವಾಗಿದೆ ಎಂದು ಹೇಳಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ‘ಜಾತಿ ವ್ಯವಸ್ಥೆಯು ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲೆ ಸ್ಥಾಪಿತವಾಗಿದೆ’ ಎಂದಿದೆ. ಈ ದೇಶದಲ್ಲಿ ಜಾತಿ ಎನ್ನುವುದು ಎಂದಿಗೂ ನಿವಾರಣೆಯಾಗದ ಜಾಡ್ಯ ಎನ್ನುವುದು ವಾಸ್ತವ; ಆದರೆ, ರಾಜ್ಯವು ಜಾತಿಯನ್ನು ‘ಸಾಮರಸ್ಯ’ ಎಂದು ಕರೆಯುವ ಮೂಲಕ ಸ್ಥಿರೀಕರಿಸಿದರೆ, ಜಾತಿ ವಿರುದ್ಧದ ಎಲ್ಲ ಹೋರಾಟಗಳು ಕಾನೂನುಬಾಹಿರವಾಗುತ್ತವೆ. ಇನ್ನೊಂದು ಪ್ರಶ್ನೆಯೆಂದರೆ, ಈ ಸಮೀಕ್ಷೆಯನ್ನು ಹೀಗಳೆದವರು 2026ರಲ್ಲಿ ಕೇಂದ್ರ ಸರಕಾರ ನಡೆಸಲಿರುವ ಜಾತಿ ಗಣತಿ ಒಳಗೊಂಡ ಜನಗಣತಿಯನ್ನೂ ತಿರಸ್ಕರಿಸುವರೇ?

ಜಾತಿ ಅಸಮಾನತೆ ಮುಂದುವರಿಕೆ

ಭಾರತೀಯ ಸಂಶೋಧಕರು ಮತ್ತು ಬ್ರೌನ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ‘ಪೌರತ್ವ, ಅಸಮಾನತೆ ಮತ್ತು ನಗರ ಆಡಳಿತ’(ಸಿಐಯುಜಿ) ಸಮೀಕ್ಷೆಯಲ್ಲಿ 14 ನಗರಗಳ 31,803 ಮನೆಗಳಿಂದ ವಿವರ ಸಂಗ್ರಹಿಸಲಾಗಿದೆ. ನಗರಗಳಲ್ಲಿ ಜನ ಹೇಗೆ ವಾಸಿಸುತ್ತಾರೆ, ಸಂಘಟಿತರಾಗುತ್ತಾರೆ, ಮತ ಚಲಾಯಿಸುತ್ತಾರೆ ಮತ್ತು ನೀರು-ನೈರ್ಮಲ್ಯದಂತಹ ಅಗತ್ಯ ಸೇವೆಗಳನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ವಿಶ್ಲೇಷಿಸಲಾಗಿದೆ. ವರ್ಗ, ಜಾತಿ ಮತ್ತು ಧರ್ಮ ಹೇಗೆ ಸಾರ್ವಜನಿಕ ಸೇವೆಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತದೆ, ರಾಜಕೀಯ ಭಾಗವಹಿಸುವಿಕೆಯನ್ನು ರೂಪಿಸುತ್ತದೆ ಎಂಬುದನ್ನು ಸಮೀಕ್ಷೆ ವಿವರಿಸಿದೆ. ‘ಪರಿಣಾಮಕಾರಿ ಪೌರತ್ವ’ ಎಂದರೆ, ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವಿಕೆ ಮತ್ತು ರಾಜ್ಯದಿಂದ ಸಾರ್ವಜನಿಕ ಸೌಲಭ್ಯಗಳನ್ನು ಪಡೆಯುವಿಕೆ. ಅಧ್ಯಯನದಲ್ಲಿ ವರ್ಗದ ಬದಲು ವಸತಿಯನ್ನು ಬಳಸಿಕೊಂಡು, ಗುಡಿಸಲು/ಕೊಳೆಗೇರಿಗಳ ಅನೌಪಚಾರಿಕ ವಸತಿ, ಮೇಲ್ವರ್ಗದ ವಸತಿ ಸೇರಿದಂತೆ ಐದು ವಿಭಾಗ ಮಾಡಿಕೊಳ್ಳಲಾಗಿದೆ. ಅಧ್ಯಯನದ ಅನ್ವಯ, ನಗರಗಳು ವಿಸ್ತರಿಸಿದಂತೆ, ವಿಶೇಷವಾಗಿ ದೊಡ್ಡ ನಗರಗಳಲ್ಲಿ ಅನೌಪಚಾರಿಕ ವಸತಿ ಹೆಚ್ಚುತ್ತಿದೆ. ಮುಂಬೈನಲ್ಲಿ ಅನೌಪಚಾರಿಕ ವಸತಿಗಳಲ್ಲಿ ಶೇ.62ರಷ್ಟು ಹಾಗೂ ಕೊಚ್ಚಿಯಲ್ಲಿ ಕೇವಲ ಶೇ.1.4 ಮಂದಿ ವಾಸಿಸುತ್ತಿದ್ದಾರೆ. ಇಂಥ ವಸತಿಯಲ್ಲಿ ಪರಿಶಿಷ್ಟ ಜಾತಿಗಳ ಶೇ. 45, ಪರಿಶಿಷ್ಟ ಪಂಗಡಗಳ ಶೇ.37, ಇತರ ಹಿಂದುಳಿದ ಜಾತಿ (ಒಬಿಸಿ)ಗಳ ಶೇ.16 ಮತ್ತು ಸಾಮಾನ್ಯ ವರ್ಗಗಳ ಶೇ.25 ಮಂದಿ ಇದ್ದಾರೆ. ಮೇಲ್ವರ್ಗದ ವಸತಿಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಭೋಪಾಲ್ ಹೊರತುಪಡಿಸಿ ಬೇರೆಲ್ಲ ನಗರಗಳಲ್ಲಿ ಗುಡಿಸಲು/ಕೊಳೆಗೇರಿಗಳಿಂದ ಒಕ್ಕಲೆಬ್ಬಿಸುವ ಆತಂಕ ಹೆಚ್ಚು ಇದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು, ‘‘ಹಳ್ಳಿಗಳು ದಲಿತರಿಗೆ ಕೊಳಚೆ ಗುಂಡಿಗಳಾಗಿದ್ದವು ಮತ್ತು ನಗರಗಳು ಜಾತಿಯಿಂದ ಬಂಧಿತರಾದವರಿಗೆ ವಿಮೋಚನೆಯ ತಾಣವಾಗಲಿವೆ’’ ಎಂದು ಆಶಿಸಿದ್ದರು. ಆದರೆ, ನಗರಗಳು ದಲಿತರಿಗೆ ಸ್ವರ್ಗವಾಗಿ ಪರಿಣಮಿಸಿಲ್ಲ. ಬದಲಾಗಿ, ಜಾತಿ ಅಸಮಾನತೆ ಮುಂದುವರಿದಿದೆ ಮತ್ತು ಹೊಸ ರೂಪಗಳಲ್ಲಿ ಮರುಸಂಘಟನೆಯಾಗಿದೆ. ಕೆಲವು ನಗರಗಳಲ್ಲಿ ಒಬಿಸಿಗಳು ಕೂಡ ಸಾಮಾನ್ಯ ವರ್ಗದವರಂತೆಯೇ ವರ್ತಿಸುತ್ತಾರೆ. ಮತದಾರರ ನೋಂದಣಿ ಕೂಡ ಅಸಮಾನವಾಗಿದೆ; ಅನೌಪಚಾರಿಕ ವಸತಿಗಳಲ್ಲಿ ಶೇ. 50ಕ್ಕಿಂತ ಕಡಿಮೆ ಮತ್ತು ಮೇಲ್ವರ್ಗದ ವಸತಿಗಳಲ್ಲಿ ಶೇ. 74 ಜನ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ವಲಸಿಗರು; ಅನೌಪಚಾರಿಕ ವಸಾಹತುಗಳು ವಲಸಿಗರನ್ನು, ವಿಶೇಷವಾಗಿ ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಅಸಮಾನವಾಗಿ ಒಳಗೊಳ್ಳುತ್ತವೆ. ವ್ಯತಿರಿಕ್ತವಾಗಿ, ಮೇಲ್ವರ್ಗದ ವಸತಿಗಳಲ್ಲಿ ದೀರ್ಘಕಾಲೀನ ನಿವಾಸಿಗಳು ಮತ್ತು ಸ್ಥಳೀಯರು ಪ್ರಾಬಲ್ಯ ಹೊಂದಿದ್ದಾರೆ.

ನೀರು, ನೈರ್ಮಲ್ಯ ಸೇರಿದಂತೆ ಮೂಲಭೂತ ಸೇವೆಗಳ ವಿತರಣೆಯೂ ಸಮವಾಗಿಲ್ಲ. ಕೊಚ್ಚಿ ಹೊರತುಪಡಿಸಿ ಬೇರೆಲ್ಲ ನಗರಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮನೆಗಳಿಗೆ ದಿನಕ್ಕೆ ಎರಡು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನೀರು ಪೂರೈಸಲಾಗುತ್ತಿದೆ; ಶೇ.23ರಷ್ಟು ಮನೆಗಳಿಗೆ ದಿನಕ್ಕೆ 23 ಗಂಟೆಗಿಂತ ಹೆಚ್ಚು ಕಾಲ ನೀರು ಪೂರೈಕೆಯಾಗುತ್ತಿದೆ. ನೈರ್ಮಲ್ಯ ವ್ಯವಸ್ಥೆಯಲ್ಲಿ ಕೊಚ್ಚಿ, ವಡೋದರಾ, ಅಹ್ಮದಾಬಾದ್ ಮತ್ತು ದಿಲ್ಲಿ ಉತ್ತಮ ಹಾಗೂ ಮುಂಬೈ ಕಳಪೆ ಸ್ಥಾನದಲ್ಲಿದೆ. ಆದರೆ, ಎಲ್ಲ ನಗರಗಳಲ್ಲೂ ಅನೌಪಚಾರಿಕ ವಸತಿಗಳಲ್ಲಿ ವಾಸಿಸುವವರು ಅತ್ಯಂತ ಕಳಪೆ ನೈರ್ಮಲ್ಯ ಪರಿಸರ ಹೊಂದಿದ್ದಾರೆ. ಕೆಲವು ನಗರಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅನೌಪಚಾರಿಕ ವಸತಿಗಳಿಗೆ ನೈರ್ಮಲ್ಯ ವ್ಯವಸ್ಥೆಯೇ ಇಲ್ಲ ಎಂದು ಅಧ್ಯಯನ ಹೇಳಿದೆ.

ಮುಸ್ಲಿಮ್ ಸಮುದಾಯವೂ ಸೇವೆಗಳ ಕೊರತೆ ಎದುರಿಸುತ್ತಿದೆ. ಸಮೀಕ್ಷೆ ನಡೆದ 14 ನಗರಗಳಲ್ಲಿ 10ರಲ್ಲಿ ಸಮುದಾಯದವರು ಅನೌಪಚಾರಿಕ ವಸಾಹತುಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಎಲ್ಲೆಡೆ ಮೇಲ್ವರ್ಗದ ವಸತಿ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೆ, ಕೊಚ್ಚಿ, ಚೆನ್ನೈ, ಭೋಪಾಲ್ ಮತ್ತು ದಿಲ್ಲಿಯಲ್ಲಿ ಕೆಲವೇ ಪ್ರದೇಶದಲ್ಲಿ ‘ಗೆಟ್ಟೋಕರಣ’ಗೊಂಡಿದ್ದಾರೆ. ಉದಾಹರಣೆಗೆ, ದಿಲ್ಲಿಯ ಶಹೀನ್ ಬಾಗ್. ಮುಸ್ಲಿಮರು ಸಮಾಜಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ ಎಂದು ಬಿಂಬಿಸುವ ಕೋಮುವಾದಿ ಪ್ರಚಾರ ಮತ್ತು ಪಡಿಯಚ್ಚುಗಳಿಗೆ ತದ್ವಿರುದ್ಧವಾಗಿ, ಅವರು ಹಿಂದೂಗಳಿಗಿಂತ ಹೆಚ್ಚು ರಾಜಕೀಯ ಮತ್ತು ನಾಗರಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ತೀವ್ರ ನಗರೀಕರಣದ ಹೊರತಾಗಿಯೂ, ನಗರಗಳು ಸಾಮಾಜಿಕವಾಗಿ ಪ್ರತ್ಯೇಕವಾಗಿವೆ; ಜನರು ತಮ್ಮದೇ ಜಾತಿ ಮತ್ತು ಧಾರ್ಮಿಕ ಗುಂಪುಗಳಲ್ಲಿ ಸ್ನೇಹ ಬೆಳೆಸಿಕೊಂಡಿದ್ದಾರೆ. ಚೆನ್ನೈ ಮತ್ತು ಕೊಚ್ಚಿ ಇದಕ್ಕೆ ಅಪವಾದ; ದಿಲ್ಲಿಯಲ್ಲಿ ಗುಂಪುಗಳ ನಡುವೆ ಕಡಿಮೆ ಸಾಮಾಜಿಕ ಸಂಬಂಧವಿದೆ. ಕೆಲವು ಸಣ್ಣ ನಗರಗಳು ಮಾತ್ರ ಅಂತರ್‌ಧರ್ಮೀಯ ಸಂಬಂಧ ಹೊಂದಿವೆ. ದೇಶದಲ್ಲಿ ಸಮಾನತೆ ಕಾಗದದ ಮೇಲೆ ಮಾತ್ರ ಇದೆ. ಪರಿಪೂರ್ಣ ಜೀವನದ ಸಾಧ್ಯತೆಯನ್ನು ವರ್ಗ, ಜಾತಿ ಮತ್ತು ಧರ್ಮ ನಿರ್ಬಂಧಿಸಿವೆ. ನಮ್ಮ ಸಂವಿಧಾನ ಸಮಾನ ಪೌರತ್ವವನ್ನು ಖಾತ್ರಿಪಡಿಸುತ್ತದೆ; ಆದರೆ, ನಗರಗಳು ವಿಭಿನ್ನ ಪೌರತ್ವವನ್ನು ನೀಡುತ್ತವೆ ಎಂದು ವರದಿ ಹೇಳುತ್ತದೆ.

ಜಾತಿಯಿಂದ ಸಾಮಾಜಿಕ ಸಾಮರಸ್ಯ!

‘ಜಾತಿ ಎನ್ನುವುದು ಸಾಮಾಜಿಕ ಸಾಮರಸ್ಯದ ಮೇಲೆ ಸ್ಥಾಪಿತವಾಗಿದೆ’ ಎಂದು ಮಧ್ಯಪ್ರದೇಶ ಸರಕಾರವು ಸುಪ್ರೀಂ ಕೋರ್ಟ್‌ಗೆ ಸೆಪ್ಟಂಬರ್ 23ರಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ; ಇದೊಂದು ಅಪಾಯಕಾರಿ ನಿಲುವು. ಇತರ ಹಿಂದುಳಿದ ವರ್ಗ(ಒಬಿಸಿ)ಗಳ ಮೀಸಲನ್ನು ಶೇ.14ರಿಂದ ಶೇ.27ಕ್ಕೆ ಹೆಚ್ಚಿಸಬೇಕೆಂಬ ರಾಜ್ಯದ ಮನವಿಗೆ ಪೂರಕವಾಗಿ ಸಲ್ಲಿಕೆಯಾದ ಈ ಪ್ರಮಾಣಪತ್ರದಲ್ಲಿ ‘ದೇಶದ ಜಾತಿ ವ್ಯವಸ್ಥೆಯು ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಭ್ರಾತೃತ್ವದ ಮೇಲೆ ಸ್ಥಾಪಿತವಾಗಿದೆ’ ಎಂದು ಹೇಳಲಾಗಿದೆ.

2023ರಲ್ಲಿ ರಾಜ್ಯದ ಮೋಹ್‌ನ ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ವಿಜ್ಞಾನ ವಿಶ್ವವಿದ್ಯಾನಿಲಯ ನಡೆಸಿದ ‘ಮಧ್ಯಪ್ರದೇಶದ ಇತರ ಹಿಂದುಳಿದ ವರ್ಗಗಳ ಸಾಮಾಜಿಕೋಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಸಮೀಕ್ಷೆ ಮತ್ತು ಸಾಮಾಜಿಕೋವೈಜ್ಞಾನಿಕ ಅಧ್ಯಯನ ಹಾಗೂ ಅವರ ಹಿಂದುಳಿದಿರುವಿಕೆಗೆ ಕಾರಣಗಳು’ ಅಧ್ಯಯನದ ಅಂಶಗಳನ್ನು ಪ್ರಮಾಣಪತ್ರದಲ್ಲಿ ಬಳಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗ ಅನುಮೋದಿಸಿರುವ ಈ ವರದಿಯಲ್ಲಿ, ‘ವೇದ ಕಾಲದಲ್ಲಿ ವರ್ಣ ವ್ಯವಸ್ಥೆಯು ಹುಟ್ಟಿನ ಬದಲು ವೃತ್ತಿ ಮತ್ತು ಅರ್ಹತೆಯನ್ನು ಆಧರಿಸಿತ್ತು. ಅದು ಸಾಮಾಜಿಕ ಸಮತೋಲನ ಹಾಗೂ ಸಮಾನ ಅವಕಾಶವನ್ನು ಖಚಿತಪಡಿಸಿತು. ಸಾಮಾಜಿಕ ಸ್ಥಾನಮಾನ ಹುಟ್ಟಿನಿಂದಲೇ ಪೂರ್ವನಿರ್ಧರಿತವಾಗಿರಲಿಲ್ಲ. ಅವಿಭಜಿತ ಭಾರತದಲ್ಲಿ ಜಾತಿ ಎಂದಿಗೂ ಅಸ್ತಿತ್ವದಲ್ಲಿರಲಿಲ್ಲ. ವಿದೇಶಿ ಆಕ್ರಮಣ ಮತ್ತು ಸಾಂಸ್ಕೃತಿಕ ಪ್ರಭಾವದಿಂದ ಜಾತಿ ಹೊರಹೊಮ್ಮಿತು’ ಎಂದು ಹೇಳಲಾಗಿದೆ.

ವರದಿ ಪ್ರಕಾರ, ವೃತ್ತಿ ಆಧರಿತ ಮತ್ತು ಸಮಾನತೆಯಿಂದ ಕೂಡಿದ್ದ ಮೂಲ ಸಾಮಾಜಿಕ ವ್ಯವಸ್ಥೆಯು ಹೊರಗಿನವರಿಂದ ‘ಭ್ರಷ್ಟ’ವಾಯಿತು. ವಿದೇಶಿ ಶಕ್ತಿಗಳೊಂದಿಗಿನ ಸಂಪರ್ಕದಿಂದ ‘ಅಧಿಕಾರದ ಕೇಂದ್ರೀಕರಣ’ ಮತ್ತು ‘ಅರ್ಹತೆ ವ್ಯವಸ್ಥೆಯ ಕುಸಿತ’ ನಡೆಯಿತು. ದೇಶದ ವಿಘಟನೆ, ಜಾತಿ, ಧರ್ಮ ಮತ್ತು ಭಾಷೆ ಮೂಲಕ ಆಧರಿತ ವಿಭಜನೆಯ ಹೆಚ್ಚಳವಲ್ಲದೆ, ಉಪಖಂಡದ ಅಂತಿಮ ಪರಾಧೀನಕ್ಕೂ ಇದು ಕಾರಣವಾಯಿತು. ‘ಅವೈಜ್ಞಾನಿಕ ಮತ್ತು ಧಾರ್ಮಿಕ ವರ್ಗೀಕರಣವನ್ನು ಪರಿಚಯಿಸಿದ ವಿದೇಶಿಯರಿಂದ ರಾಜಕೀಯವಾಗಿ ಮತ್ತು ಮಾನಸಿಕವಾಗಿ ಗುಲಾಮಗಿರಿಗೆ ಒಳಗಾಗುವವರೆಗೆ ಪ್ರಾಚೀನ ಭಾರತವು ಪ್ರಜಾಸತ್ತಾತ್ಮಕವಾಗಿತ್ತು ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತ ನಾಗರಿಕತೆಯಾಗಿತ್ತು’.

ಇದು ಜಾತಿ ಕುರಿತ ದಾರಿ ತಪ್ಪಿಸುವ ಮತ್ತು ರಾಜಕೀಯಪ್ರೇರಿತ ಮರು ವ್ಯಾಖ್ಯಾನ ಎಂದು ಇತಿಹಾಸಜ್ಞರು ಖಂಡಿಸಿದ್ದಾರೆ. ದೇಶದಲ್ಲಿ ಜಾತಿ ವ್ಯವಸ್ಥೆಯು ಆರ್ಯರ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮಗುವೊಂದರ ಸಾಮಾಜಿಕ ಮತ್ತು ಆರ್ಥಿಕ ಚಲನಶೀಲತೆಯನ್ನು ಹುಟ್ಟು ನಿಗದಿಪಡಿಸುತ್ತದೆ; ಜಾತಿಗೆ ವಿದೇಶಿ ಪ್ರಭಾವ ಕಾರಣವಲ್ಲ; ಅದು ಸ್ವದೇಶಿ ಶ್ರೇಣಿ ವ್ಯವಸ್ಥೆ. ಜಾತಿಯಿಂದ ಸಾಮಾಜಿಕ ಸಾಮರಸ್ಯ ಉಂಟಾಗಿದೆ ಎನ್ನುವುದು ಅಪ್ರಮಾಣಿಕ. ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆ ಆಚರಣೆ ವಸಾಹತುಶಾಹಿ ಆಳ್ವಿಕೆಗಿಂತ ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ ಎಂದು ಸೂರಜ್ ಯೆಂಗ್ಡೆ, ಕಾಂಚ ಐಲಯ್ಯ ಶೆಫರ್ಡ್ ಮತ್ತು ಅನುಪಮಾ ರಾವ್ ಮತ್ತಿತರರು ವಾದಿಸಿದ್ದಾರೆ. ಮನುಸ್ಮತಿ ಸೇರಿದಂತೆ ಹಿಂದೂ ಗ್ರಂಥಗಳು ಸಾಮಾಜಿಕ ಶ್ರೇಣೀಕರಣವನ್ನು ಪ್ರತಿಪಾದಿಸಿವೆ; ಮದುವೆ, ವೃತ್ತಿ, ಶಿಕ್ಷಣ ಇತ್ಯಾದಿ ಕುರಿತು ಕಠಿಣ ನಿಯಮ ರೂಪಿಸಿವೆ. ‘ಆಂತರಿಕ ಶ್ರೇಣಿ ವ್ಯವಸ್ಥೆಗಳು, ವೃತ್ತಿಗಳ ನಿಯಂತ್ರಣ ಮತ್ತು ಧಾರ್ಮಿಕ ಸಮರ್ಥನೆ ಮೂಲಕ ಜಾತಿ ವಿಕಸನಗೊಂಡಿತು. ಹೊರಗಿನವರು ಅದನ್ನು ಆವಿಷ್ಕರಿಸಲಿಲ್ಲ, ಹೇರಲಿಲ್ಲ ಅಥವಾ ಕಾರ್ಯಗತಗೊಳಿಸಲಿಲ್ಲ. ನಾವೇ ಅದಕ್ಕೆ ಕಾರಣ’ ಎಂದು ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸುರಿಂದರ್ ಜೋಧ್ಕಾ ಹೇಳುತ್ತಾರೆ.

‘‘ಸಹಸ್ರಾರು ವರ್ಷಗಳಿಂದ ವ್ಯವಸ್ಥಿತ ತಾರತಮ್ಯ ಅನುಭವಿಸುತ್ತಿರುವ ದಲಿತರು ಮತ್ತು ಬಹುಜನರ ಜೀವಂತ ಅನುಭವಗಳನ್ನು ಇಂಥ ನಿರೂಪಣೆಗಳು ಅಳಿಸಿಹಾಕುತ್ತವೆ. ಸಾಮರಸ್ಯಕ್ಕೆ ಜಾತಿ ವ್ಯವಸ್ಥೆ ಕಾರಣ ಎನ್ನುವುದು ದಬ್ಬಾಳಿಕೆಯನ್ನು ವೈಭವೀಕರಿಸುತ್ತದೆ ಮತ್ತು ರಾಚನಿಕ ಹಿಂಸೆಯನ್ನು ಶಾಸನಬದ್ಧಗೊಳಿಸುತ್ತದೆ. ಇದು ರಾಜಕೀಯ ಉದ್ದೇಶಕ್ಕೆ ಸರಿಹೊಂದುವಂತೆ ಇತಿಹಾಸವನ್ನು ಮರುಸೃಷ್ಟಿಸುವ ಪ್ರಯತ್ನ. ಮಧ್ಯಪ್ರದೇಶ ಸರಕಾರದ ವಾದ ಆಕ್ಷೇಪಾರ್ಹ ಮಾತ್ರವಲ್ಲ; ಹಾನಿಕರ’’ ಎಂದು ಸ್ತ್ರೀವಾದಿ ಅರ್ಥಶಾಸ್ತ್ರಜ್ಞೆ ವಂದನಾ ಸೋನಾಲ್ಕರ್ ಹೇಳುತ್ತಾರೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ 2028ರಲ್ಲಿ ನಡೆಯಲಿದ್ದು, ಸರಕಾರ ಅದಕ್ಕೆ ಮುನ್ನ ಒಬಿಸಿ ಮೀಸಲು ಹೆಚ್ಚಿಸಲು ಮುಂದಾಗಿದೆ. ‘ಜಾತಿಯಿಂದ ಸಾಮರಸ್ಯ’ ಎಂದು ಹೇಳುವ ಮೂಲಕ ಅಹಿತಕರ ಪ್ರಶ್ನೆಗಳನ್ನು ಮರೆಮಾಚಲು ಮುಂದಾಗಿದೆ.

ಇನ್ನು ರೇಣುಕಾರಾಧ್ಯ ಅವರ ಅನುಭವಕ್ಕೆ ಬರೋಣ: ಅವರು ಬೆಂಗಳೂರಿನ ಕೆಳಮಧ್ಯಮ ವರ್ಗದವರೇ ಹೆಚ್ಚಿರುವ ಅಗ್ರಹಾರ ದಾಸರಹಳ್ಳಿ ವಾರ್ಡಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಹೆಣ್ಣುಮಗಳೊಬ್ಬಳು, ‘‘ಸರ್, ನಿನ್ನೆ ನೀವು ನಮ್ಮ ಜಾತಿ ಬಗ್ಗೆ ಕೇಳಿದಾಗ ಗೌಡ್ರು ಅಂದುಬಿಟ್ವಿ. ನಾವು ಗೌಡರಲ್ಲ; ಎಸ್‌ಸಿ. ಮನೆ ಓನರ್ ಮುಂದೆ ಎಸ್‌ಸಿ ಅಂತ ಹೇಳಿದರೆ ಮನೆ ಖಾಲಿ ಮಾಡಿಸ್ತಾರೆ. ನಿನ್ನೆ ಬರ್ಕೊಂಡಿದ್ದನ್ನು ಚೇಂಚ್ ಮಾಡಿ’’ ಅಂತ ಹೇಳುತ್ತಾರೆ. ಮತ್ತೊಂದು ಮನೆಯಲ್ಲಿ ಓನರ್ ಮತ್ತವರ ಮಡದಿ ಜಾತಿ ವಿಚಾರ ಕೇಳಿದಾಗ, ‘‘ಸರ್, ನಿಧಾನವಾಗಿ ಕೇಳಿ ಸರ್. ನಾವು ಎಸ್‌ಸಿ. ಜೋರಾಗಿ ಹೇಳಿದರೆ ಬಾಡಿಗೆ ಇರುವವರಿಗೆ ನಮ್ಮ ಜಾತಿ ಗೊತ್ತಾಗಿ ಬಿಡುತ್ತೆ. ಇಲ್ಲಿ ಇರುವವರಿಗೆ ನಾವು ಗೌಡರು ಅಂತಾನೆ ಹೇಳಿರೋದು. ನಮ್ಮ ಜಾತಿ ಗೊತ್ತಾದರೆ ಬಾಡಿಗೆಗೆ ಬೇರೆ ಜಾತಿಯವರು ಬರೋದಿಲ್ಲ ಸರ್’’ ಎನ್ನುತ್ತಾರೆ.

ರೇಣುಕಾರಾಧ್ಯ ಕೇಳುತ್ತಾರೆ: ‘‘ನಮ್ಮ ಜಾತಿ ಹೆಸರು ಹೇಳಿದರೆ ಮನೆ ಖಾಲಿ ಮಾಡಿಸ್ತಾರೆ’’ ಮತ್ತು ‘‘ನಮ್ಮ ಜಾತಿ ತಿಳಿದರೆ ಮನೆಗೆ ಬಾಡಿಗೆ ಬರೋದಿಲ್ಲ’’ ಎನ್ನುವ ಮಾತುಗಳು ಬೇರೆಬೇರೆಯೇ? ಇಲ್ಲವಲ್ಲ... ಸಿಟಿಯಲ್ಲಿ ಜಾತಿ ಎಲ್ಲಿದೆ ರೀ ಎಂದು ಜಾತಿಯ ಮದದಿಂದ ನುಡಿಯುವ ಮೇಲ್ಜಾತಿಯವರ ಹಾಗೂ ಮೇಲ್ಜಾತಿಗಳನ್ನು ತುಳಿಯಲೆಂದೇ ಜಾತಿ ಸಮೀಕ್ಷೆಯನ್ನು ಈ ಸರಕಾರ ನಡೆಸುತ್ತಿದೆ ಎನ್ನುವ ಎಂಪಿಯೊಬ್ಬರ ಮಾತೂ ಬೇರೆಬೇರೆಯೇ? ಇಲ್ಲವಲ್ಲ... ಅನ್ನಿಸಿತು.

ಪ್ರಶ್ನೆ ಏನೆಂದರೆ, ಜಾತಿ ನಿರ್ಧರಿತ ಶ್ರೇಣೀಕೃತ ಅಸಮಾನತೆಯನ್ನು ರಾಜ್ಯ ಒಪ್ಪಿಕೊಳ್ಳುತ್ತದೆಯೇ? ಜಾತಿಯಿಂದಾಗಿ ಕೋಟ್ಯಂತರ ಜನರಿಗೆ ನೆಮ್ಮದಿಯ ಬದುಕು ಸಾಧ್ಯವಾಗಿಲ್ಲ. ಪ್ರಾಚೀನ ಗ್ರಂಥಗಳು ಅಸಮಾನತೆಯನ್ನು ಸಾಂಸ್ಥೀಕರಿಸಿದವು; ಅವು ಶ್ರೇಷ್ಠತೆ-ಶುದ್ಧತೆ, ಹೊರಗಿಡುವಿಕೆ ಬಗ್ಗೆ ಮಾತನಾಡಿದವೇ ಹೊರತು ಸಾಮರಸ್ಯದ ಬಗ್ಗೆ ಅಲ್ಲ. ಮಗು ಜನಿಸಿದ ಕ್ಷಣದಿಂದಲೇ ಅದರ ಸಾಮಾಜಿಕ ಸ್ಥಾನ ನಿರ್ಧರಿತವಾಗಿರುತ್ತದೆ. ಜನ ಹೇಗೆ ಬದುಕುತ್ತಾರೆ, ಪ್ರೀತಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬುದನ್ನು ಜಾತಿ ನಿರ್ದೇಶಿಸುತ್ತದೆ. ಹೀಗಿರುವಾಗ, ಜಾತಿಯಿಂದ ಸಾಮರಸ್ಯ ಹೇಗೆ ಸಾಧ್ಯ? ನಗರಗಳಲ್ಲಿ ಹಿಂಸಾಚಾರ ಅಗೋಚರವಾಗಿರುತ್ತದೆ; ಆದರೆ, ಅದು ಇದೆ. ಒಳಚರಂಡಿ-ಶೌಚದ ಗುಂಡಿಗಳನ್ನು ಸ್ವಚ್ಛಗೊಳಿಸುವವರು ಉಸಿರು ಕಟ್ಟಿ ಸಾಯುತ್ತಾರೆ; ಹೀಗಿದ್ದರೂ, ಅವರನ್ನು ‘ಅಶುದ್ಧ’ ಎಂದು ಕರೆಯಲಾಗುತ್ತದೆ. ಮಧ್ಯಪ್ರದೇಶ ಸರಕಾರದ ಪ್ರತಿಪಾದನೆಯು ದಬ್ಬಾಳಿಕೆಯನ್ನು ‘ಸಾಂಸ್ಕೃತಿಕ ಪರಂಪರೆ’ ಎಂದು ಮರುಬ್ರಾಂಡ್ ಮಾಡುವ ಪ್ರಯತ್ನ; ಹಿಂದುತ್ವವಾದಿಗಳ ಅಜೆಂಡಾದ ಮುಂದುವರಿಕೆ. ಇಂಥ ಮರುವ್ಯಾಖ್ಯಾನಗಳು ಸಂವಿಧಾನ ಕೊಡಮಾಡಿದ ರಕ್ಷಣೆ ಮತ್ತು ಅಂಬೇಡ್ಕರ್‌ವಾದಿ ಚಳವಳಿಗಳ ಮೂಲಕ ಗಳಿಸಿದ ಮುನ್ನಡೆಯನ್ನು ನಾಶಮಾಡುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News