ಸಂರಕ್ಷಣೆಯ ದಣಿವರಿಯದ ಧ್ವನಿ ಮೌನವಾಯಿತು
ಜೇನ್ ಗೂಡಾಲ್ ಅವರ ಪರಂಪರೆಯು ಗೊಂಬೆಯ ಕಾಡುಗಳಲ್ಲಿ, ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್‌ನ ಕಾರ್ಯಕ್ರಮಗಳಲ್ಲಿ, ರೂಟ್ಸ್ ಆಂಡ್ ಶೂಟ್ಸ್ ಉಪಕ್ರಮದಲ್ಲಿ ಪಾಲ್ಗೊಂಡ ಲಕ್ಷಾಂತರ ಯುವಜನರಲ್ಲಿ ಮತ್ತು ಪ್ರಾಣಿಗಳು ಸಹ ಮನಸ್ಸು-ಭಾವನೆ ಹೊಂದಿರುವ ಸಂವೇದನಾಶೀಲ ಜೀವಿಗಳು ಎಂಬ ತಿಳಿವಳಿಕೆಯಲ್ಲಿ ಮುಂದುವರಿಯಲಿದೆ. ಅಷ್ಟೇ ಮುಖ್ಯವಾಗಿ, ‘‘ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯ. ಪ್ರತಿಯೊಬ್ಬರೂ ವಹಿಸಬೇಕಾದ ಪಾತ್ರವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಗೆ ಕಾರಣ ಆಗುತ್ತಾನೆ’’ ಎಂಬ ಅವರ ಮಾತುಗಳು ಸಾವಿಲ್ಲದೆ ಉಳಿಯುತ್ತವೆ.
ಹವಾಮಾನ ಬದಲಾವಣೆ, ಯುದ್ಧ, ಸಂಪನ್ಮೂಲಗಳ ಬರಿದಾಗುವಿಕೆ ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳ ನಡುವೆ ಸಂರಕ್ಷಣೆಗಾಗಿ ದಣಿವರಿಯದೆ ದುಡಿಯುತ್ತಿದ್ದ ಜೇನ್ ಗೂಡಾಲ್(91) ಇತ್ತೀಚೆಗೆ ಮೃತಪಟ್ಟರು. ಅವರ ದೀರ್ಘಕಾಲೀನ ಸಂರಕ್ಷಣೆ ಕಾರ್ಯಗಳು ಪ್ರಾಮುಖಿ(ಪ್ರೈಮೇಟ್) ಸ್ತನಿಗಳ ಅಧ್ಯಯನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದವು. ಚಿಂಪಾಂಜಿಗಳ ಜೀವನವಿವರಗಳನ್ನು ದಾಖಲಿಸಿ, ಬಹಿರಂಗಪಡಿಸಿದ ಅವರು ಆಧುನಿಕ ಜಗತ್ತಿಗೆ ಭರವಸೆಯ ಭಾಷೆಯೊಂದನ್ನು ನೀಡಿದರು.
ಪ್ರಸಿದ್ಧ ಮಾನವಶಾಸ್ತ್ರಜ್ಞ ಲೂಯಿಸ್ ಸೇಮೋರ್ ಬಝೆಟ್ ಲೀಕಿ ಅವರ ಬಳಿ ಕೆಲಸ ಮಾಡಲು ನಿರ್ಧರಿಸಿ, ಜುಲೈ 1960ರಲ್ಲಿ ತಾಂಝಾನಿಯಾದ ತಾಂಗನಿಕಾ ಸರೋವರದ ತೀರದಲ್ಲಿರುವ ಗೊಂಬೆಯ ಕಾಡಿಗೆ ಆಗಮಿಸಿದಾಗ ಜೇನ್ ಅವರಿಗೆ 26 ವರ್ಷ. ಅವರು ಔಪಚಾರಿಕ ತರಬೇತಿ ಪಡೆದ ವಿಜ್ಞಾನಿಯಲ್ಲ. ಅವರ ಬಳಿ ಇದ್ದುದು ನೋಟ್‌ಬುಕ್, ಬೈನಾಕ್ಯುಲರ್ ಮತ್ತು ದೃಢನಿರ್ಣಯ ಮಾತ್ರ. ಬೆಂಬಲ ನೀಡಲೆಂದು ಅವರೊಟ್ಟಿಗೆ ತಾಯಿ ಕೂಡ ಬಂದಿದ್ದರು. ಲೀಕಿ ಅವರ ಕಾರ್ಯದರ್ಶಿಯಾಗಿ ನೇಮಕಗೊಂಡ ಜೇನ್ ಸಾಮರ್ಥ್ಯ ಶೀಘ್ರವೇ ಬೆಳಕಿಗೆ ಬಂದು, ಅವರನ್ನು ಚಿಂಪಾಂಜಿಗಳ ಅಧ್ಯಯನ ಮಾಡಲು ಪ್ರೋತ್ಸಾಹಿಸಿದರು. ಮುಂದಿನ 60 ವರ್ಷಗಳಲ್ಲಿ ಅವರು ಆಫ್ರಿಕಾದ ಕಾಡುಗಳಿಗೆ ಸಂಬಂಧಿಸಿದಂತೆ ಪ್ರಮುಖ ವಿಜ್ಞಾನಿ ಹಾಗೂ ಸಂರಕ್ಷಣಾ ತಜ್ಞೆ ಎಂದು ಹೆಸರು ಗಳಿಸಿದರು. ಅವರ ನಿರಂತರ ಸಂಶೋಧನೆಗಳು ಪ್ರಾಮುಖಿ(ಮನುಷ್ಯರು, ಕೋತಿ ಹಾಗೂ ಚಿಂಪಾಂಜಿಗಳನ್ನು ಒಳಗೊಂಡ ಅಂಥ್ರೋಪಾಯ್ಡೆ ಮತ್ತು ಲೆಮೂರ್, ಲೋರಿ ಹಾಗೂ ಟಾರ್ಸಿಯರ್‌ಗಳನ್ನು ಒಳಗೊಂಡ ಪ್ರೊಸಿಮೈ ಉಪವರ್ಗಗಳಿರುವ ಸ್ತನಿಗಳ ಒಂದು ವರ್ಗ)ಗಳ ಶಾಸ್ತ್ರದ ದಿಕ್ಕನ್ನೇ ಬದಲಿಸಿತು; ಮನುಷ್ಯರ ಅನನ್ಯತೆ ಕುರಿತ ನಂಬಿಕೆಗಳನ್ನು ಬುಡಮೇಲು ಮಾಡಿತು ಮತ್ತು ಪ್ರಾಣಿಗಳಿಗೂ ಮನಸ್ಸಿದೆ ಎಂಬುದನ್ನು ವಿಜ್ಞಾನ ಪರಿಗಣಿಸುವಂತೆ ಮಾಡಿತು. ಚಿಂಪಾಂಜಿಗಳು ಕೇವಲ ಸಹಜ ಪ್ರವೃತ್ತಿಯ ಜೀವಿಗಳು ಮಾತ್ರವಲ್ಲ; ಪ್ರೀತಿ, ಮಹತ್ವಾಕಾಂಕ್ಷೆ, ದುಃಖ ಮಾತ್ರವಲ್ಲದೆ ಕದನ ಸ್ವಭಾವವಿರುವ ಜೀವಿಗಳ ಸಮುದಾಯ. ಅವು ಮನುಷ್ಯರು ಮಾತ್ರ ಬಳಸುತ್ತಾರೆ ಎಂದುಕೊಂಡಿದ್ದ ಸಾಧನ-ಸಲಕರಣೆಗಳನ್ನೂ ಬಳಸುತ್ತವೆ ಎಂದು ಅವರ ಅವಲೋಕನಗಳು ತೋರಿಸಿಕೊಟ್ಟವು.
ಬಾಲ್ಯದಿಂದಲೇ ಪ್ರಾಣಿಗಳ ಕನಸು
ವೆಲೆರಿ ಜೇನ್ ಮೋರಿಸ್ ಗೂಡಾಲ್ (ಜನನ ಎಪ್ರಿಲ್ 3, 1934), ಲಂಡನ್‌ನ ಉದ್ಯಮಿ ಮಾರ್ಟಿಮರ್ ಹರ್ಬರ್ಟ್ ಮಾರಿಸ್ ಗೂಡಾಲ್ ಮತ್ತು ಮಾರ್ಗರೆಟ್ ಮೈಫಾನ್ವೆ ಜೋಸೆಫ್ ದಂಪತಿಯ ಪುತ್ರಿ. ತಾಯಿ ವಾನ್ ಮಾರಿಸ್ ಗೂಡಾಲ್ ಎಂಬ ಉಪನಾಮದಲ್ಲಿ ಬರೆಯುತ್ತಿದ್ದ ಕಾದಂಬರಿಗಾರ್ತಿ. ಬಾಲ್ಯದಿಂದಲೂ ಪ್ರಾಣಿಗಳಿಂದ ಆಕರ್ಷಿತರಾಗಿದ್ದ ಜೇನ್ ಬೆನ್ನ ಹಿಂದೆ ನಿಂತವರು, ‘ಎಂದಿಗೂ ಬಿಟ್ಟುಕೊಡಬಾರದು’ ಎಂದು ಹೇಳುತ್ತಿದ್ದ ತಾಯಿ. ಎರಡನೇ ಮಹಾಯುದ್ಧದ ಸಮಯದ ಆರ್ಥಿಕ ಸಂಕಷ್ಟದ ನಡುವೆಯೂ ಪುಸ್ತಕಗಳು ಮತ್ತು ಪ್ರೋತ್ಸಾಹ ಹೇರಳವಾಗಿದ್ದ ಮನೆಯಲ್ಲಿ ಜೇನ್ ಬೆಳೆದರು. ತಂದೆ ಟೆಡ್ಡಿ ಬೇರ್ ಬದಲಿಗೆ ತಂದುಕೊಟ್ಟ ಜ್ಯೂಬಿಲಿ ಎಂಬ ಚಿಂಪಾಂಜಿಯ ಗೊಂಬೆಯು ಜೇನ್‌ಳ ರಕ್ಷಾಯಂತ್ರ ಆಯಿತು. ಹಣದ ಕೊರತೆಯಿಂದ ವಿಶ್ವವಿದ್ಯಾನಿಲಯ ಸೇರಲು ಸಾಧ್ಯವಾಗದೆ, ಕಾರ್ಯದರ್ಶಿ ತರಬೇತಿ ಪಡೆದು, ಹಲವು ಉದ್ಯೋಗ ಮಾಡಿದರು. ಬಳಿಕ ತಾಂಜಾನಿಯಕ್ಕೆ ತೆರಳಿದರು. ಜೇನ್ ಅವರ ತಾಳ್ಮೆ, ಧೈರ್ಯ ಮತ್ತು ವೈಜ್ಞಾನಿಕ ಪೂರ್ವಗ್ರಹವಿಲ್ಲದ ಮನಸ್ಸನ್ನು ಗುರುತಿಸಿದ ಲೀಕಿ, ತಮ್ಮ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. 1960ರಲ್ಲಿ ಗೊಂಬೆ ಸ್ಟ್ರೀಮ್ ಚಿಂಪಾಂಜಿ ರಿಸರ್ವ್‌ಗೆ ಕಳುಹಿಸಿದರು. ಆರಂಭದಲ್ಲಿ ಚಿಂಪಾಂಜಿಗಳು ಅವರ ಬಳಿ ಸುಳಿಯಲಿಲ್ಲ. ಆದರೆ, ನಿರಂತರ ಪ್ರಯತ್ನ ಮತ್ತು ತಾಳ್ಮೆಯಿಂದ ಅವುಗಳ ನಂಬಿಕೆ ಗಳಿಸಿದರು; ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಡೇವಿಡ್ ಗ್ರೇ ಬಿಯರ್ಡ್ ಎಂಬ ಹೆಸರಿನ ಚಿಂಪಾಂಜಿ. ಚಿಂಪಾಂಜಿಗಳ ಅಸ್ಮಿತೆಗೆ ಧಕ್ಕೆ ಬಾರದಂತೆ ಅವುಗಳಿಗೆ ಸಂಖ್ಯೆಗಳ ಬದಲು ನಾಮಕರಣ ಮಾಡಿದರು- ಫ್ಲೋ, ಫಿಫಿ, ಗೋಲಿಯಾತ್ ಇತ್ಯಾದಿ. ಇದಕ್ಕಾಗಿ ಅವರನ್ನು ‘ಭಾವಜೀವಿ’ ಎಂದು ಟೀಕಿಸಲಾಯಿತು. ಆದರೆ, ಅವರ ವಿಸ್ತೃತ ಅವಲೋಕನಗಳು ಪ್ರಾಣಿವರ್ತನೆ ವಿಜ್ಞಾನ(ಎತಾಲಜಿ) ಕ್ಷೇತ್ರದಲ್ಲಿ ತರಂಗಗಳನ್ನು ಎಬ್ಬಿಸಿದವು.
ಲೀಕಿ ನೆರವಿನಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಪಡೆದ ಜೇನ್, ಪದವಿ ಇಲ್ಲದಿದ್ದರೂ ಎತಾಲಜಿಯಲ್ಲಿ ಡಾಕ್ಟರೇಟ್ ಪಡೆದರು(1965). ‘ನೀವು ಮಾಡುತ್ತಿರುವುದು ತಪ್ಪು’ ಎಂಬ ಪ್ರಾಧ್ಯಾಪಕರ ಖಂಡನೆಗಳ ನಡುವೆಯೂ ಆಕೆಯ ಒಳನೋಟಗಳು ಸರಿ ಎಂಬುದು ಕಾಲಕ್ರಮೇಣ ಸಾಬೀತಾಯಿತು; ಕ್ಷೇತ್ರಕಾರ್ಯದೊಟ್ಟಿಗೆ ಕಾರುಣ್ಯವನ್ನು ಒಳಗೊಂಡ ಅವರ ವಿಧಾನವು ವಿಜ್ಞಾನಿಗಳು ಪ್ರಾಣಿಗಳ ಮನಸ್ಸುಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಮನವರಿಕೆ ಮಾಡಿಕೊಟ್ಟವು. ಅವರು ಚಿಂಪಾಂಜಿಗಳ ಇನ್ನೊಂದು ಮುಖವನ್ನೂ ದಾಖಲಿಸಿದರು: ಮಾರಕ ಆಕ್ರಮಣಶೀಲತೆ, ನರಭಕ್ಷಕತೆ. ಹೀಗಿದ್ದರೂ, ಚಿಂಪಾಂಜಿಗಳು ಮಾತೃ ಭಕ್ತಿಯುಳ್ಳ, ಸಹೋದರರೊಡನೆ ಪೈಪೋಟಿ ನಡೆಸುವ ಮತ್ತು ದಶಕಗಳ ಕಾಲ ನೆನಪು ಉಳಿಸಿಕೊಳ್ಳುವ ಸ್ನೇಹಪರ ಜೀವಿಗಳು ಎಂದು ವಿವರಿಸಿದರು.
ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್ ಸ್ಥಾಪನೆ
ಗೊಂಬೆ ಕಾಡಿನಲ್ಲಿ ಮಾಡಿದ ಕೆಲಸವನ್ನು ಇನ್ನಷ್ಟು ವಿಸ್ತೃತಗೊಳಿಸಲು 1977ರಲ್ಲಿ ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಿದರು. ಅದು ಜಾಗತಿಕ ಸಂಸ್ಥೆಯಾಗಿ ಬೆಳೆದು, ಆಫ್ರಿಕಾದಾದ್ಯಂತ ಅಭಯಾರಣ್ಯಗಳು ಮತ್ತು ಸಂರಕ್ಷಣಾ ಕಾರ್ಯಕ್ರಮಗಳನ್ನು ಬೆಂಬಲಿಸಿತು; 65ಕ್ಕೂ ಅಧಿಕ ದೇಶಗಳಲ್ಲಿ ಸಕ್ರಿಯ ವಾಗಿದೆ. 1980ರ ದಶಕದ ಆರಂಭದಲ್ಲಿ ತಾಂಝಾನಿಯಾದಲ್ಲಿ ಸಮಗ್ರ ಉಪಕ್ರಮ, ಟೇಕ್ ಕೇರ್ ಆರಂಭಿಸಿದರು. ಇದು ಪರಿಸರ ಸಂರಕ್ಷಣೆಯನ್ನು ಆರೋಗ್ಯ, ಶಿಕ್ಷಣ ಮತ್ತು ಸೂಕ್ಷ್ಮಸಾಲದೊಂದಿಗೆ ಜೋಡಿಸಿತು; ಮನುಷ್ಯರ ಅಗತ್ಯಗಳನ್ನು ಪೂರೈಸದ ಸಂರಕ್ಷಣೆ ಯತ್ನಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟಿತು. ಮಹಾರಾಷ್ಟ್ರದ ಅರಣ್ಯೀಕರಣ ಪ್ರಯತ್ನಗಳು ಹಾಗೂ ಮೇಘಾಲಯದಲ್ಲಿ ದೇವರ ಕಾಡುಗಳ ಸಾಮುದಾಯಿಕ ರಕ್ಷಣೆ ಪ್ರಯತ್ನದಲ್ಲಿ ಗೂಡಾಲ್ ಅವರ ಹೆಜ್ಜೆಗುರುತುಗಳನ್ನು ಕಾಣಬಹುದು.
1986ರಲ್ಲಿ ಅವರ ಜೀವನ ಮತ್ತೊಂದು ತಿರುವು ಪಡೆಯಿತು. ಶಿಕಾಗೋದಲ್ಲಿ ನಡೆದ ಪ್ರೈಮಟಾಲಜಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರಿಗೆ ಅರಣ್ಯನಾಶ, ಚಿಂಪಾಂಜಿಗಳ ಸಂಖ್ಯೆ ಕುಸಿತ ಮತ್ತು ಪ್ರಯೋಗಾಲಯಗಳಲ್ಲಿನ ಕ್ರೌರ್ಯದ ಮಾಹಿತಿ ಲಭ್ಯವಾಯಿತು. ‘ವಿಜ್ಞಾನಿಯಾಗಿ ಸಮ್ಮೇಳನಕ್ಕೆ ಹೋಗಿದ್ದ ನಾನು ಕಾರ್ಯಕರ್ತೆಯಾಗಿ ಹೊರಬಂದೆ’ ಎಂದು ಆನಂತರ ಅವರು ಹೇಳಿದರು. 1991ರಲ್ಲಿ ತಾಂಝಾನಿಯಾದ ಡಾರೆಸ್ ಸಲಾಮ್‌ನ ತಮ್ಮ ಮನೆಯ ಹಜಾರದಲ್ಲಿ ಕೆಲವು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ‘ರೂಟ್ಸ್ ಆಂಡ್ ಶೂಟ್ಸ್’ ಸ್ಥಾಪಿಸಿದರು. ಕಾಲಕ್ರಮೇಣ ಅದು ದೊಡ್ಡ ಯುವ ಆಂದೋಲನವಾಗಿ ಮಾರ್ಪಟ್ಟು, 100ಕ್ಕೂ ಹೆಚ್ಚು ದೇಶಗಳಲ್ಲಿ 1,50,000ಕ್ಕೂ ಹೆಚ್ಚು ಗುಂಪುಗಳು ರಚನೆಯಾದವು. ಜನರು, ವನ್ಯಜೀವಿಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಪ್ರಾಯೋಗಿಕ ಯೋಜನೆಗಳಿಗೆ ಬದ್ಧವಾದ ಈ ಉಪಕ್ರಮವು ತಮ್ಮ ‘ಹೆಮ್ಮೆಯ ಸಾಧನೆ’ ಎಂದು ಜೇನ್ ಹೇಳುತ್ತಿದ್ದರು. ‘‘ರೂಟ್ಸ್ ಆಂಡ್ ಶೂಟ್ಸ್ ಮೂಲಕ ಜನರು, ವಿಶೇಷವಾಗಿ, ಯುವಜನರಲ್ಲಿ ಭರವಸೆ ಮೂಡಿಸುವುದು ಮತ್ತು ಅವರನ್ನು ನೈಸರ್ಗಿಕ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದರಿಂದ ನನ್ನನ್ನು ನೆನಪಿಸಿಕೊಳ್ಳಬೇಕೆಂದು ಆಶಿಸುತ್ತೇನೆ’’ ಎಂದು ಹೇಳಿದ್ದರು.
ದುರಾಸೆ, ಬಡತನ ಮತ್ತು ದೂರದೃಷ್ಟಿಯಿಲ್ಲದ ರಾಜಕೀಯದ ಬಗ್ಗೆ ನೇರವಾಗಿ ಮಾತನಾಡಿದರು. ಯುವಜನರ ಸಾಮರ್ಥ್ಯ, ಪ್ರಕೃತಿಯ ಸ್ಥಿತಿಸ್ಥಾಪಕತ್ವ, ಮನುಷ್ಯರ ಅದಮ್ಯ ಚೈತನ್ಯ ಮತ್ತು ಸಂರಕ್ಷಣೆಗೆ ನೆರವಾಗುವ ತಂತ್ರಜ್ಞಾನದ ಬಗ್ಗೆ ಭರವಸೆ ಹೊಂದಿದ್ದರು. ‘‘ನೀವು ಬದುಕುವ ಪ್ರತಿದಿನವೂ ಒಂದು ರೀತಿಯ ಪರಿಣಾಮ ಬೀರುತ್ತೀರಿ. ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಮಾಡಿಕೊಳ್ಳಬೇಕು. ಸಹಾನುಭೂತಿ ಮತ್ತು ವಸ್ತುನಿಷ್ಠತೆಗಳು ಸಹಬಾಳ್ವೆ ನಡೆಸಬಹುದು. ನಾವು ಮನುಷ್ಯರೊಟ್ಟಿಗೆ ಬದುಕನ್ನು ಹಂಚಿಕೊಳ್ಳಬಹುದೇ ಹೊರತು ನಾಯಿ, ಬೆಕ್ಕು ಅಥವಾ ಪಕ್ಷಿಗಳೊಂದಿಗೆ ಅಲ್ಲ; ಮತ್ತು ಮನುಷ್ಯರು ಮಾತ್ರವೇ ಈ ಭೂಗ್ರಹದ ಮೇಲಿನ ಏಕೈಕ ಪ್ರಜ್ಞೆಯುಳ್ಳ, ಬುದ್ಧಿವಂತ ಜೀವಿಗಳಲ್ಲ ಎಂಬುದು ನಮಗೆ ಗೊತ್ತಿರಬೇಕು. ಜನರು ತಮಗೆ ತಿಳಿಯದೆ ಇರುವುದನ್ನು ರಕ್ಷಿಸಲು ಒಟ್ಟುಗೂಡುವುದಿಲ್ಲ. ಅದಕ್ಕಾಗಿಯೇ ಮಕ್ಕಳನ್ನು ಆದಷ್ಟು ಬೇಗ ಪ್ರಕೃತಿಯೊಂದಿಗೆ ತೊಡಗಿಸುವುದು ನಿರ್ಣಾಯಕವಾಗಲಿದೆ’’ ಎಂದು ಹೇಳಿದ್ದರು.
ನ್ಯಾಷನಲ್ ಜಿಯಾಗ್ರಫಿಕ್ ಅವರನ್ನು ‘ಕಾಡಿನ ನಿಗೂಢ ಜೀವಿಗಳೊಂದಿಗೆ ಇರುವ ಸುಂದರ ಕೂದಲಿನ ಯುವತಿ’ ಎಂಬಂತೆ ಬಿಂಬಿಸಿತು; ಇದರಿಂದ ಅವರು ಮಾಧ್ಯಮ ಐಕಾನ್ ಆದರು. ಈ ದ್ವಂದ್ವ ವ್ಯಕ್ತಿತ್ವವನ್ನು ನಗೆಯಾಡುತ್ತಲೇ ಒಪ್ಪಿಕೊಂಡು, ‘‘ಇಬ್ಬರು ಜೇನ್ ಇದ್ದಾರೆ. ನಿಮ್ಮೊಂದಿಗೆ ಮಾತನಾಡುತ್ತಿರುವ ನಾನು ಮತ್ತು ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ ಸೇರಿದಂತೆ ಮಾಧ್ಯಮಗಳು ರೂಪಿಸಿದ ಐಕಾನ್ ಜೇನ್ ಇನ್ನೊಬ್ಬರು. ಈ ಜೇನ್, ಐಕಾನ್ ಜೇನ್‌ಳ ಇಮೇಜ್ ಕಾಪಾಡಿಕೊಳ್ಳಬೇಕು; ಸಂರಕ್ಷಣೆ ಉದ್ದೇಶಕ್ಕೆ ಐಕಾನ್ ಜೇನ್‌ಳ ಇಮೇಜ್ ಬಳಸಿಕೊಳ್ಳುತ್ತೇನೆ’’ ಎಂದು ಹೇಳಿದ್ದರು.
ವೈಯಕ್ತಿಕ ಜೀವನ
1964ರಲ್ಲಿ ಡಚ್ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಹ್ಯೂಗೋ ವಾನ್ ಲಾವಿಕ್ ಅವರನ್ನು ವಿವಾಹವಾದರು; ದಂಪತಿಯ ಪುತ್ರ ಹ್ಯೂಗೋ ಎರಿಕ್ ಲೂಯಿಸ್(ಗ್ರಬ್). ಆನಂತರ ವಿಚ್ಛೇದನ ಪಡೆದು, 1975ರಲ್ಲಿ ತಾಂಝಾನಿಯಾದ ಸಂಸದ-ರಾಷ್ಟ್ರೀಯ ಉದ್ಯಾನಗಳ ಮುಖ್ಯಸ್ಥ ಡೆರೆಕ್ ಬ್ರೈಸೆಸನ್ ಅವರನ್ನು ವಿವಾಹವಾದರು; ಡೆರೆಕ್ 1980ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ‘ದಿ ಚಿಂಪಾಂಜೀಸ್ ಆಫ್ ಗೊಂಬೆ’, ‘ರೀಸನ್ ಫಾರ್ ಹೋಪ್’, ‘ದಿ ಬುಕ್ ಆಫ್ ಹೋಪ್’ ಸೇರಿದಂತೆ 25ಕ್ಕೂ ಹೆಚ್ಚು ಪುಸ್ತಕಗಳ ಲೇಖಕಿ. 2019ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಜೇನ್ ಅವರ ಕೆಲಸ ಕುರಿತು ಸಂಚಾರ ಪ್ರದರ್ಶನ ‘ಬಿಕಮಿಂಗ್ ಜೇನ್’ ಆರಂಭಿಸಿತು. ಅವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ: ಕ್ಯೋಟೋ ಪ್ರಶಸ್ತಿ, ಟೆಂಪಲ್ಟನ್ ಪ್ರಶಸ್ತಿ, ಫ್ರೆಂಚ್ ಲೆಜಿಯನ್ ಡಿ’ಆನರ್, ಬೆಂಜಮಿನ್ ಫ್ರಾಂಕ್ಲಿನ್ ಪದಕ, ಅಮೆರಿಕದ ಪ್ರೆಸಿಡೆನ್ಶಿಯಲ್ ಫ್ರೀಡಂ ಮೆಡಲ್(2025) ಮತ್ತು ಬ್ರಿಟಿಷ್ ಸರಕಾರದ ಬಿರುದು. ಲಾಸ್ ಏಂಜಲೀಸ್ ಎಪ್ರಿಲ್ 3 ಅನ್ನು ‘ಡಾ. ಜೇನ್ ಗೂಡಾಲ್ ದಿನ’ ಎಂದು ಘೋಷಿಸಿದೆ. ಬದುಕಿನ ಕೊನೆಯವರೆಗೂ ದಣಿವರಿಯದೆ ದುಡಿಯುತ್ತಿದ್ದ ಅವರು, ಮರಣ ಹೊಂದಿದ ದಿನ(ಅಕ್ಟೋಬರ್ 1)ದಂದು ಬೆಳಗ್ಗೆ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಬೆಟ್ಟಗಳಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.
ಅವರೇ ಹೇಳಿಕೊಂಡಂತೆ, ಜೇನ್ ಎಂದರೆ ‘ಕರುಣೆ ಮತ್ತು ಕ್ರಿಯೆ ಬೇರ್ಪಡಿಸಲಾಗದಂಥವು ಮತ್ತು ಕಠೋರ ವಾಸ್ತವಗಳ ನಡುವೆಯೂ ಹತಾಶೆ ಒಂದು ಆಯ್ಕೆಯಲ್ಲ ಎಂದು ನಂಬಿದ್ದ ಮಹಿಳೆ’. ‘ಮಾನವೀಯತೆ ಎನ್ನುವುದು ದೀರ್ಘವಾದ, ಕತ್ತಲೆ ತುಂಬಿದ ಸುರಂಗದ ಕೊನೆಯಲ್ಲಿ ಹೊಳೆಯುತ್ತಿರುವ ಭರವಸೆಯೆಂಬ ನಕ್ಷತ್ರ; ಅದು ಬರುತ್ತದೆ ಎಂದು ಕಾಯುತ್ತ ಕುಳಿತುಕೊಳ್ಳುವುದು ವ್ಯರ್ಥ. ನಾವು ಸವಾಲು ಎದುರಿಸಲು, ಹೋರಾಟಕ್ಕೆ ಇಲ್ಲವೇ ಕೆಲಸಕ್ಕೆ ಸಿದ್ಧರಾಗಬೇಕು; ನಮ್ಮ ಹಾಗೂ ನಕ್ಷತ್ರದ ನಡುವೆ ಇರುವ ಅಡೆತಡೆಗಳನ್ನು ನಿವಾರಿಸಬೇಕು’. ಅವರ ಪರಂಪರೆಯು ಗೊಂಬೆಯ ಕಾಡುಗಳಲ್ಲಿ, ಜೇನ್ ಗೂಡಾಲ್ ಇನ್‌ಸ್ಟಿಟ್ಯೂಟ್‌ನ ಕಾರ್ಯಕ್ರಮಗಳಲ್ಲಿ, ರೂಟ್ಸ್ ಆಂಡ್ ಶೂಟ್ಸ್ ಉಪಕ್ರಮದಲ್ಲಿ ಪಾಲ್ಗೊಂಡ ಲಕ್ಷಾಂತರ ಯುವಜನರಲ್ಲಿ ಮತ್ತು ಪ್ರಾಣಿಗಳು ಸಹ ಮನಸ್ಸು-ಭಾವನೆ ಹೊಂದಿರುವ ಸಂವೇದನಾಶೀಲ ಜೀವಿಗಳು ಎಂಬ ತಿಳಿವಳಿಕೆಯಲ್ಲಿ ಮುಂದುವರಿಯಲಿದೆ. ಅಷ್ಟೇ ಮುಖ್ಯವಾಗಿ, ‘‘ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯ. ಪ್ರತಿಯೊಬ್ಬರೂ ವಹಿಸಬೇಕಾದ ಪಾತ್ರವಿದೆ. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಗೆ ಕಾರಣ ಆಗುತ್ತಾನೆ’’ ಎಂಬ ಅವರ ಮಾತುಗಳು ಸಾವಿಲ್ಲದೆ ಉಳಿಯುತ್ತವೆ.