ಸಿಂಧನೂರು : ‘ಹೆಲ್ಮೆಟ್ ಕಡ್ಡಾಯ’ ಜಾಗೃತಿ ಅಭಿಯಾನಕ್ಕೆ ಡಿವೈಎಸ್ಪಿ ಚಂದ್ರಶೇಖರ ಚಾಲನೆ
ಪತ್ರಕರ್ತರಿಗೆ, ಸಾರ್ವಜನಿಕರಿಗೆ ಹೆಲ್ಮೆಟ್ ವಿತರಣೆ, ಬೈಕ್ ಮೂಲಕ ಸಂಚರಿಸಿ ಜಾಗೃತಿ
ಸಿಂಧನೂರು: ರಸ್ತೆ ಅಪಘಾತಗಳಿಂದ ಉಂಟಾಗುತ್ತಿರುವ ಪ್ರಾಣಹಾನಿ ತಡೆಗಟ್ಟುವ ಹಾಗೂ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಿಂಧನೂರು ಪೊಲೀಸ್ ಠಾಣೆಯ ವತಿಯಿಂದ ಬುಧವಾರ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಜಾಗೃತಿ ಅಭಿಯಾನಕ್ಕೆ ಡಿವೈಎಸ್ಪಿ ಚಂದ್ರಶೇಖರ ಜಿ. ನಾಯಕ ಚಾಲನೆ ನೀಡಿದರು. ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.
ಅಭಿಯಾನದ ವೇಳೆ ಎಲ್ಲಾ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್‌ಗಳಲ್ಲಿ ಸಂಚರಿಸುವ ಮೂಲಕ “ಮೊದಲು ನಾವು ಪಾಲಿಸೋಣ, ನಂತರ ಸಾರ್ವಜನಿಕರಿಗೆ ತಿಳಿಸೋಣ” ಎಂಬ ಸಂದೇಶ ಸಾರಿದರು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಐ ವೀರಾರೆಡ್ಡಿ, ಪಿಎಸ್ಐ ಎರಿಯಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.