ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಪ್ರಜಾಪ್ರಭುತ್ವದ ಮೇಲಿನ ದಾಳಿ; ಕೇಂದ್ರ ಸರ್ಕಾರದ ನಡೆ ಖಂಡನೀಯ: ರವಿ ಪಾಟೀಲ್

Update: 2026-07-22 15:06 IST

ರಾಯಚೂರು: ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಠಿಚಾರ್ಜ್‌ನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಪೊಲೀಸ್ ಬಲಪ್ರಯೋಗಕ್ಕೆ ಯತ್ನಿಸಿರುವುದು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡರಾದ ರವಿ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿಭಟಿಸುವುದು ಮತ್ತು ತಮ್ಮ ಧ್ವನಿಯನ್ನು ಎತ್ತುವುದು ಭಾರತದ ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದೆ. ಲಾಠಿ, ಬಂಧನ ಹಾಗೂ ದಮನಕಾರಿ ಕ್ರಮಗಳ ಮೂಲಕ ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಯಾವುದೇ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು, ಯುವಕರು ಹಾಗೂ ಸಾಮಾನ್ಯ ಜನರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವನ್ನು ಲಾಠಿಚಾರ್ಜ್, ಅಶ್ರುವಾಯು ಹಾಗೂ ಬಲಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಇಂತಹ ಕ್ರಮಗಳು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಧಕ್ಕೆ ತರುತ್ತವೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ವಿರೋಧಿಸಿ ಧ್ವನಿ ಎತ್ತಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಅತ್ಯಂತ ಖಂಡನೀಯ. ಜನರ ಪರವಾಗಿ ಮಾತನಾಡುವ ನಾಯಕರನ್ನು ಬಂಧಿಸುವುದು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದಮನಕಾರಿ ಪ್ರವೃತ್ತಿಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು, ಪರಿಸ್ಥಿತಿಯನ್ನು ಸಂವೇದನಾಶೀಲವಾಗಿ ನಿರ್ವಹಿಸಬೇಕು. ಇಲ್ಲವಾದರೆ ದೇಶಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

 ಈ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News