ಸಿಜೆಐ ಮೇಲೆ ಶೂ ಎಸೆದ ರಾಕೇಶ ಕಿಶೋರ್ ಗಡಿಪಾರಿಗೆ ಆಗ್ರಹ: ದಲಿತ,ಪ್ರಗತಿಪರ ಹೋರಾಟಗಾರರಿಂದ ರಾಯಚೂರಿನಲ್ಲಿ ಪ್ರತಿಭಟನೆ
ರಾಯಚೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಕೇಶ್ ಕಿಶೋರ್ ಪೋಟೊ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೃತ್ಯ ಎಸಗಿದ ಬಳಿಕ ಪಶ್ಚತಾಪವಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದನ್ನು ಖಂಡಿಸಿ ಗೃಹ ಸಚಿವ ಅಮಿತ್ ಷಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ರಾಜಕೀಯ ನಾಯಕರು ಖಂಡನೆ ಮಾಡದಿದ್ದಕ್ಕೆ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತಪರ ಹೋರಾಟಗಾರ ಎಂ.ವಿರುಪಾಕ್ಷಿ ಮಾತನಾಡಿ, ಗೂಡ್ಸೆ ಮಹಾತ್ಮಗಾಂಧಿ ಯನ್ನು ಪಾಕಿಸ್ತಾನ ರಚನೆ ಮಾಡಿದ್ದಾರೆ ಎಂದು ಕೊಂದಿಲ್ಲ, ಬದಲಾಗಿ ಗಾಂಧೀಜಿಯವರು ದಲಿತರ ಸಮಸ್ಯೆಗಳನ್ನು ಅಲಿಸಿ, ಅಸ್ಪೃಶ್ಯತೆ ನಿವಾರಣೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು ಇದನ್ನು ಸಹಿಸದೇ ಗುಂಡು ಹೊಡೆದಿದ್ದಾನೆ. ಈಗ ಗೂಡ್ಸೆ,ಮನುವಾದಿಯ ಸಂತತಿಯ ರಾಕೇಶ್ ಕಿಶೋರ್ ದಲಿತ ಸಿಜೆಐ ಮೇಲೆ ಶೂ ಎಸೆದಿದ್ದಾನೆ ಇದನ್ನು ದೇಶದಾದ್ಯಂತ ಖಂಡಿಸಬೇಕಿದೆ ಎಂದರು.
ಪ್ರಧಾನಿ ಮೋದಿ ಅವರು ಘಟನೆಯಾದ 9 ಗಂಟೆಗಳ ನಂತರ ಖಂಡಿಸಿದ್ದಾರೆ. ಗೃಹಮಂತ್ರಿ ಅಮಿತ್ ಷಾ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕ ಖಂಡಿಸಿಲ್ಲ ಅವರ ಮನಸ್ಥಿತಿ ಏನೆಂಬುವುದು ತಿಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರವಿಂದ್ರನಾಥ ಪಟ್ಟಿ ಮಾತನಾಡಿ,ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದು ಇದೇ ಎರಡನೇ ಬಾರಿ, ಮೊದಲು ಅಲ್ಪಸಂಖ್ಯಾತರ ಸಮುದಾಯದ ಸಿಜೆಐ ಹಿದಾಯತುಲ್ಲಾ ಅವರ ಮೇಲೆ ಶೂ ಎಸೆದಿದ್ದರು ಈಗ ದಲಿತ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಇದರಿಂದ ಸ್ಪಷ್ಟವಾಗುತ್ತದೆ ಮನುವಾದಿಗಳು ದಲಿತರನ್ನು,ಅಲ್ಪಸಂಖ್ಯಾತರನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ದೂರಿದರು.
ಹೋರಾಟಗಾರ್ತಿ ವಿಜಯರಾಣಿ ಮಾತನಾಡಿ, ರಾಕೇಶ ಕಿಶೋರ ಶೂ ಎಸೆದಿದ್ದು ದೇಶದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು, ಕೇಂದ್ರ ಸರ್ಕಾರದ ಕ್ರಮ ಕೈಗೊಳ್ಳದಿದ್ದರೆ ದೇಶದಾದ್ಯಂತ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಎಂ.ಆರ್ ಬೇರಿ, ಜಾನ್ ವೆಸ್ಲಿ, ಮಾರೆಪ್ಪ ಹರವಿ, ಶ್ರೀನಿವಾಸ ಕೊಪ್ಪರ, ಯುವ ವಕೀಲರಾದ ಶಿವಕುಮಾರ ಮ್ಯಾಗಳಮನಿ, ಸಂತಾನ್, ಪಾಲರಾಜ ಕುರ್ಡಿ, ರಾಕೇಶ್ ಮತ್ತಿತರರು ಇದ್ದರು.