ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಅವ್ಯವಹಾರ ಆರೋಪ; ರಾಯಚೂರಿನಲ್ಲಿ ರಸ್ತೆ ತಡೆ ಪ್ರತಿಭಟನೆ
ನೇಮಕಾತಿ ನಿಯಮ ಉಲ್ಲಂಘನೆ ಖಂಡಿಸಿ ಕೃಷಿ ವಿದ್ಯಾರ್ಥಿಗಳು, ಪದವೀಧರರಿಂದ ಆಕ್ರೋಶ
ರಾಯಚೂರು: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಅವೈಜ್ಞಾನಿಕ ನೇಮಕಾತಿ ಕ್ರಮಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕೃಷಿ ವಿದ್ಯಾರ್ಥಿಗಳು ಹಾಗೂ ಪದವೀಧರರು ಸೋಮವಾರ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸಂಚಾರವನ್ನು ನಿಯಂತ್ರಿಸಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಇಎ ಪರೀಕ್ಷೆಗೆ ಕೊನೆಯ ಕ್ಷಣದಲ್ಲಿ ಐಸಿಎಆರ್ ಮಾನ್ಯತೆ ಇಲ್ಲದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಈ ಅವಕಾಶವನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿದರು.
ಖಾಸಗಿ ಕೃಷಿ ಕಾಲೇಜುಗಳಿಗೆ ನೀಡುತ್ತಿರುವ ಅಫಿಲಿಯೇಷನ್ ನಿಲ್ಲಿಸಬೇಕು, ಬಿ.ಇ. ಬಯೋಟೆಕ್ ಪದವೀಧರರನ್ನು ಕೃಷಿ ಅಧಿಕಾರಿ ನೇಮಕಾತಿಯಿಂದ ಹೊರಗಿಡಬೇಕು ಹಾಗೂ ಡಿಎಇಎಸ್‌ಐ (DAESI) ಕೋರ್ಸ್ ರದ್ದುಗೊಳಿಸಿ ಕೃಷಿ ಶಿಕ್ಷಣದ ಗುಣಮಟ್ಟ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಾಗರತ್ನ ವಿ. ಪಾಟೀಲ್, ಹರವಿ ಶಂಕರಗೌಡ, ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್, ಸೂಗುರಯ್ಯ ಹಿರೇಮಠ ಹಾಗೂ ವಿದ್ಯಾರ್ಥಿಗಳಾದ ಶಿವಪ್ಪ, ಅಂಕೇಶ್, ನರ್ಮದಾ, ಜ್ಯೋತಿ ಸೇರಿದಂತೆ ನೂರಾರು ರೈತರು ಮತ್ತು ಕೃಷಿ ವಿದ್ಯಾರ್ಥಿಗಳು ಭಾಗವಹಿಸಿದರು.