ಭೂ ಹಕ್ಕಿಗಾಗಿ ಹಟ್ಟಿ ರೈತರ ಉಪವಾಸ ಸತ್ಯಾಗ್ರಹ; ಪೊಲೀಸರೊಂದಿಗೆ ವಾಗ್ವಾದ
ಗಣಿ ಮುಖ್ಯ ದ್ವಾರದ ಬಳಿ ಪ್ರತಿಭಟನೆಗೆ ತಡೆ; ಭೂಸ್ವಾಧೀನ ಪೂರ್ಣಗೊಳಿಸಿ ಪರಿಹಾರ, ಉದ್ಯೋಗ ನೀಡುವಂತೆ ಆಗ್ರಹ
ಹಟ್ಟಿ: ಲಿಂಗಸುಗೂರು ತಾಲೂಕಿನ ಹಟ್ಟಿ–ಕೋಠಾ ಸೀಮಾಂತರ ಪ್ರದೇಶದ ಭೂ ವಿವಾದಕ್ಕೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಹಟ್ಟಿ ಭೂ ಹಕ್ಕು ವಂಚಿತ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಹಟ್ಟಿ ಚಿನ್ನದ ಗಣಿ ಕಂಪನಿಯ ಮುಖ್ಯ ದ್ವಾರದ ಎದುರು ಪ್ರತಿಭಟನೆ ನಡೆಯಿತು.
ಗಣಿ ಮುಖ್ಯ ದ್ವಾರದ ಎದುರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಲು ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದಿದ್ದು, ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ ನಡೆಯಿತು.
ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪೂರ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು, ಗಣಿ ಮುಖ್ಯ ದ್ವಾರದತ್ತ ತೆರಳುತ್ತಿದ್ದಾಗ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದ ಸಮೀಪ ಪೊಲೀಸರು ತಡೆದರು. ಹೈಕೋರ್ಟ್ ಆದೇಶದಂತೆ ಗಣಿ ಮುಖ್ಯ ಪ್ರವೇಶ ದ್ವಾರದ ಎದುರು ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದರು.
ಇದರಿಂದ ಆಕ್ರೋಶಗೊಂಡ ರೈತರು ರಸ್ತೆ ಬದಿಯಲ್ಲೇ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಉದ್ಯೋಗ, ಸೂಕ್ತ ಪರಿಹಾರ ಹಾಗೂ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರೈತರ ಪ್ರಕಾರ, ಹಟ್ಟಿ–ಕೋಠಾ ಸೀಮಾಂತರದ 1,305 ಎಕರೆ ಗಣಿ ಗುತ್ತಿಗೆ ಭೂಮಿಯಲ್ಲಿ 915 ಎಕರೆ ಮಾತ್ರ ಭೂಸ್ವಾಧೀನ ಮಾಡಿಕೊಂಡು ಪರಿಹಾರ ಮತ್ತು ಉದ್ಯೋಗ ನೀಡಲಾಗಿದೆ. ಉಳಿದ ಸುಮಾರು 390–400 ಎಕರೆ ಪಟ್ಟಾ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೆ ಕಂಪನಿಯ ಹೆಸರನ್ನು ಇಸಿಯಲ್ಲಿ ದಾಖಲಿಸಿರುವುದರಿಂದ ರೈತರು ತಮ್ಮ ಜಮೀನಿನ ಹಕ್ಕು ಚಲಾಯಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಶಿವಾನಂದ, ಬಾಬು ನಾಯಿಕೋಡಿ, ಎನ್. ಸ್ವಾಮಿ, ಶಿವಪುತ್ರಪ್ಪ, ಅಮರಪ್ಪ ಅರಳಳ್ಳಿ, ಸುರೇಶ್ ಗೌಡ (ಪೊಲೀಸ್ ಪಾಟೀಲ್), ಅಮರೇಶ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.