ನಾನು ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿಲ್ಲ, ಇದು ನನ್ನ ವಿರುದ್ಧದ ಷಡ್ಯಂತ್ರದ ಭಾಗ : ಸಿ.ಟಿ ರವಿ

Update: 2026-07-27 17:31 IST

ಸಿ.ಟಿ.ರವಿ

ರಾಯಚೂರು (ಲಿಂಗಸುಗೂರು): ನೀಟ್ ಪ್ರಶ್ನೆಪತ್ರಿಕೆ ವಿರೋಧದ ಹೋರಾಟದ ಕುರಿತು ನೀಡಿದ “ಮುಲ್ಲಾನಿಗೆ ಏನ್ ಕೆಲಸ” ಎಂಬ ಹೇಳಿಕೆಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ತಾವು ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿಲ್ಲ, ಪ್ರಧಾನಿಗೆ ಟೀಕೆ ಮಾಡಿದ್ದ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಲಿಂಗಸುಗೂರು ತಾಲೂಕಿನ ಛತ್ತರ ಗ್ರಾಮದಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಿ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿರುವಂತೆ ಪ್ರಚಾರ ಮಾಡಲಾಗುತ್ತಿದೆ. ಇದು ನನ್ನ ವಿರುದ್ಧದ ಷಡ್ಯಂತ್ರದ ಭಾಗ ಎಂದು ಆರೋಪಿಸಿದರು.

“ಮುಲ್ಲಾ ಎಂಬ ಪದವು ಮುಸ್ಲಿಂ ಸಮುದಾಯದ ಸಮಾನಾರ್ಥಕ ಪದವಲ್ಲ. ಸಿನಿಮಾಗಳಲ್ಲಿ ಅರ್ಚಕರು ಹಾಗೂ ಪಂಡಿತರನ್ನು ಅವಹೇಳನಕಾರಿಯಾಗಿ ತೋರಿಸಿದಾಗ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಯಾರಾದರೂ ದೂರು ನೀಡಿದ್ದಾರೆಯೇ? ಪಹಲ್ಗಾಮ್ ಘಟನೆಯಲ್ಲಿ ಧರ್ಮ ಕೇಳಿ ಕೊಲೆ ಮಾಡಿದಾಗ ಮುಸ್ಲಿಂ ಸಮುದಾಯದವರು ಹೊಣೆ ಹೊತ್ತಿದ್ದಾರೆಯೇ? ನಾನು ಯಾವುದೇ ಸಮುದಾಯವನ್ನು ಗುರಿಯಾಗಿಸಿ ಮಾತನಾಡಿಲ್ಲ,” ಎಂದು ಹೇಳಿದರು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ನನ್ನ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು. ಇಂತಹ ಪ್ರಕರಣಗಳಿಗೆ ನಾನು ಹೆದರುವುದಿಲ್ಲ. ಪ್ರಕರಣಗಳು ಹೆಚ್ಚಾದಷ್ಟೂ ಹೋರಾಟದ ತಾಕತ್ತು ಹೆಚ್ಚುತ್ತದೆ. ಅತ್ಯಾಚಾರ, ಕಳ್ಳತನ ಅಥವಾ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಬಾರದು. ಆದರೆ ಜನಪರ ಹೋರಾಟದ ಹಿನ್ನೆಲೆಯಲ್ಲಿ ಜೈಲಿಗೆ ಹೋಗುವುದು ಗೌರವದ ಸಂಗತಿ,” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News