Raichur | ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕ್ರಮಕ್ಕೆ ಹರಿಕ ಮಂಜುನಾಥ್ ಗೆ ಆಹ್ವಾನ : ರಾಘವೇಂದ್ರ ಕುಷ್ಠಗಿ ಖಂಡನೆ

Update: 2026-07-26 14:13 IST

ರಾಯಚೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಹಾಗೂ ರಾಯಚೂರು ಮತ್ತು ಬಳ್ಳಾರಿ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಭಾನುವಾರ ಬಳ್ಳಾರಿಯಲ್ಲಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಹಾರಿಕ ಮಂಜುನಾಥ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ಹಿರಿಯ ಹೋರಾಟಗಾರ ಹಾಗೂ ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಠಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣ ಮಾಡುವವರಿಗೆ ವೇದಿಕೆ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕವು ಸೂಫಿ ಸಂತರ ನಾಡಾಗಿದ್ದು, ಇಲ್ಲಿ ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಸೃಷ್ಟಿಸುವ ಹೇಳಿಕೆಗಳಿಗೆ ಅವಕಾಶ ಇರಬಾರದು ಎಂದು ಹೇಳಿದ್ದಾರೆ.

ಒಂದು ಸಮುದಾಯ ಅಥವಾ ವರ್ಗದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಿರುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಷಣಗಳ ಮೇಲೆ ನಿಗಾ ವಹಿಸಬೇಕು. ದ್ವೇಷ ಭಾಷಣ ಮಾಡುವವರ ವಿರುದ್ಧ ಜಾರಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ಕುಷ್ಠಗಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News