Raichur | ಪಿಎಂಜೆವಿಕೆ ಯೋಜನೆಗೆ ಫಲಿತಾಂಶ ಆಧಾರಿತ ಮೇಲ್ವಿಚಾರಣೆ ಜಾರಿಗೆ ತರಲು ಸಂಸದ ಜಿ.ಕುಮಾರ್ ನಾಯಕ್ ಆಗ್ರಹ

Update: 2026-07-26 12:13 IST

ಜಿ.ಕುಮಾರ್ ನಾಯಕ್

ರಾಯಚೂರು : ಪ್ರಧಾನಮಂತ್ರಿ ಜನ ವಿಕಾಸ್ ಕಾರ್ಯಕ್ರಮ (ಪಿಎಂಜೆವಿಕೆ) ಯೋಜನೆಯಡಿ ಫಲಿತಾಂಶ ಆಧಾರಿತ ಮೇಲ್ವಿಚಾರಣೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರ್ ನಾಯಕ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿದ ಉತ್ತರವನ್ನು ಉಲ್ಲೇಖಿಸಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಜಿಲ್ಲಾವಾರು ಮೂಲಸೌಕರ್ಯ ಕೊರತೆ, ಸಾಮಾಜಿಕ-ಆರ್ಥಿಕ ಸೂಚ್ಯಂಕಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ಕೇಂದ್ರೀಕೃತ ಮಾಹಿತಿ ಸಂಗ್ರಹಿಸುತ್ತಿಲ್ಲ ಎಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.

ಯೋಜನೆಯ ಫಲಾನುಭವಿಗಳ ಪ್ರದೇಶಗಳನ್ನು ಹೇಗೆ ಗುರುತಿಸಲಾಗಿದೆ ಮತ್ತು ಸ್ಥಳೀಯ ಅಗತ್ಯಗಳನ್ನು ಯಾವ ಮಾನದಂಡದ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬುದರ ಕುರಿತು ಕೇಂದ್ರ ಮಟ್ಟದಲ್ಲಿ ಸಮಗ್ರ ಮಾಹಿತಿ ಇಲ್ಲದಿರುವುದು ಯೋಜನೆಯ ಪರಿಣಾಮಕಾರಿತ್ವದ ಮೌಲ್ಯಮಾಪನಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪಿಎಂಜೆವಿಕೆ ಯೋಜನೆಯ ಉದ್ದೇಶ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಯಾಗಿದ್ದರೂ, ಫಲಿತಾಂಶವನ್ನು ಅಳೆಯುವ ಮಾನದಂಡಗಳ ಕೊರತೆಯಿಂದ ಯೋಜನೆಯ ಲಾಭ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

2021-22ರಿಂದ 2025-26ರವರೆಗೆ ಕರ್ನಾಟಕದಲ್ಲಿ ಪಿಎಂಜೆವಿಕೆ ಯೋಜನೆಯಡಿ 699 ಯೋಜನೆಗಳು ಅಥವಾ ಫಲಾನುಭವಿಗಳನ್ನು ದಾಖಲಿಸಲಾಗಿದ್ದು, 7 ಕೋಟಿ ರೂ. ಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಯೋಜನೆಯ ಪರಿಣಾಮವನ್ನು ಅರ್ಥಪೂರ್ಣವಾಗಿ ಮೌಲ್ಯಮಾಪನ ಮಾಡಲು ಅಗತ್ಯ ವ್ಯವಸ್ಥೆ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಯಚೂರಿನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿದ ಅವರು, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.37.03 ಮಾತ್ರವಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಇಂತಹ ಅಸಮಾನತೆಗಳನ್ನು ನಿವಾರಿಸಲು ಜಿಲ್ಲಾವಾರು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಗುರಿ ಹೊಂದಿದ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ಆವಾಸ್ ಯೋಜನೆ–ಗ್ರಾಮೀಣ (ಪಿಎಂಎವೈ-ಜಿ) ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಸೇರಿದಂತೆ ಹಲವು ಕೇಂದ್ರ ಯೋಜನೆಗಳಲ್ಲಿ ಜಿಲ್ಲಾವಾರು ಫಲಿತಾಂಶ ಆಧಾರಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದೇ ಮಾದರಿಯನ್ನು ಪಿಎಂಜೆವಿಕೆ ಯೋಜನೆಯಲ್ಲೂ ಅಳವಡಿಸಿ, ವಿಶೇಷವಾಗಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಹಂತದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಜಿ. ಕುಮಾರ ನಾಯಕ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News