ರಿಮ್ಸ್ ಆಸ್ಪತ್ರೆಯಲ್ಲಿ ಖಾಸಗಿ ಆಂಬುಲೆನ್ಸ್ ಗಳ ತಿರುಗಾಟ ಆರೋಪ; ಸೂಕ್ತ ಕ್ರಮಕ್ಕೆ ಭೀಮ್ ಆರ್ಮಿ ಆಗ್ರಹ
ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಈ ದಂಧೆಯಲ್ಲಿ ಶಾಮೀಲಾಗಿರುವ ರಿಮ್ಸ್ ಸಿಬ್ಬಂದಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ರಿಮ್ಸ್‌ಗೆ ಪ್ರತಿನಿತ್ಯ ರಾಯಚೂರು ಜಿಲ್ಲೆಯ ಐದಾರು ತಾಲೂಕುಗಳಿಂದ, ಗ್ರಾಮಾಂತರ ಪ್ರದೇಶಗಳಿಂದ ಮಾತ್ರವಲ್ಲದೆ ಯಾದಗಿರಿ ಜಿಲ್ಲೆ ಹಾಗೂ ಗಡಿ ಪ್ರದೇಶಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ನೂರಾರು ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಖಾಸಗಿ ಆಂಬುಲೆನ್ಸ್ ಮಾಲಿಕರು ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಾ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ನಿಯಮಾನುಸಾರ ಯಾವುದೇ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳಿಗೆ ನಿಲುಗಡೆಗೆ ಅವಕಾಶವಿಲ್ಲ. ಅವುಗಳು ಆಸ್ಪತ್ರೆ ಹೊರಭಾಗದಲ್ಲಿ ನಿಗದಿತ ಸ್ಥಳದಲ್ಲಿ ಇರಬೇಕು ಮತ್ತು ಅಗತ್ಯವಿದ್ದಾಗ ಮಾತ್ರ ಕರೆ ಬಂದ ಮೇಲೆ ಸೇವೆ ಸಲ್ಲಿಸಬೇಕು. ಆದರೆ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ರಾಯಚೂರು ರಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ ಖಾಸಗಿ ಆಂಬುಲೆನ್ಸ್‌ಗಳು ಸದಾ ಬೀಡು ಬಿಟ್ಟಿರುವುದು ಗಂಭೀರ ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದರು.
ಸದ್ಯ ರಿಮ್ಸ್ ಆಸ್ಪತ್ರೆಯಲ್ಲಿ 6 ಸರ್ಕಾರಿ ಆಂಬುಲೆನ್ಸ್‌ಗಳಿದ್ದರೂ, 9 ಖಾಸಗಿ ಆಂಬುಲೆನ್ಸ್‌ಗಳು ನಿರಂತರವಾಗಿ ಆಸ್ಪತ್ರೆಯ ಆವರಣದಲ್ಲೇ ಕಾಣಿಸಿಕೊಳ್ಳುತ್ತಿವೆ. ಇದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ರಿಮ್ಸ್ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದು, ಸರ್ಕಾರಿ ಆಂಬುಲೆನ್ಸ್‌ಗಳಿಗೆ ವಿವಿಧ ಸಮಸ್ಯೆಗಳಿವೆ ಎಂದು ರೋಗಿಗಳ ಸಂಬಂಧಿಕರಿಗೆ ಹೇಳಿ ಖಾಸಗಿ ಆಂಬುಲೆನ್ಸ್‌ಗಳನ್ನು ಸಂಪರ್ಕಿಸುವಂತೆ ಸೂಚಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಆಡಳಿತಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಅಕ್ರಮ ದಂಧೆಯಲ್ಲಿ ಆಡಳಿತದವರಿಗೂ ಕಮಿಷನ್ ಹೋಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಖಾಸಗಿ ಆಂಬುಲೆನ್ಸ್ ದಂಧೆಗೆ ಕಡಿವಾಣ ಹಾಕಬೇಕು. ಜೊತೆಗೆ ಶಾಮಿಲಾದ ಸಿಬ್ಬಂದಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಸಿ ದೀಪಕ್ ಭಂಡಾರಿ, ವಿಶ್ವನಾಥ ಬಲ್ಲಿದೇವ್, ಖಲೀಲ್ ಹೈಮದ, ಅಬ್ದುಲ್ ಖೈಯ್ಯೂಮ್ ಇನ್ನಿತರರು ಹಾಜರಿದ್ದರು